ಕೀರ್ತನಾ ಪ್ರಸಾದ್ ಅವರ ಹಕ್ಕಿಗಳ ವೈವಿಧ್ಯ ಬದುಕಿನ ಅಮೂರ್ತ ಕಲಾಪ್ರದರ್ಶನ ಕಲೆಗೆ ಭಾಷೆಯ ಮಿತಿಯಿಲ್ಲ, ಭಾವನೆಯ ಅಭಿವ್ಯಕ್ತಿಗೆ ಹಲವು ಮಾರ್ಗಗಳಿವೆ. ಸಂಗೀತ, ಚಿತ್ರಕಲೆ, ನಾಟ್ಯಗಳಿಗೆ ಭಾಷೆಯ, ಪರಿಧಿಯ ಹಂಗಿಲ್ಲ.
ಹೀಗೆ ಕನ್ನಡ ನೆಲದಲ್ಲಿ ಲಲಿತಕಲೆಗೆ ಹೆಚ್ಚಿನ ಪ್ರೋತ್ಸಾಹ ಮನ್ನಣೆಗಳು ಲಭಿಸಲಿವೆ ಎಂದೂ, ಇಲ್ಲಿನವರು ಸಹೃದಯಿಗಳೆಂದೂ ಹೊರ ರಾಜ್ಯದವರೂ ಇಲ್ಲಿಗೆ ಬಂದು ತಮ್ಮ ಕಲಾಕೃತಿಗಳನ್ನು
ಪ್ರದರ್ಶಿಸುತ್ತಿದ್ದಾರೆ. ಮೂಲ ಹೊರರಾಜ್ಯವಾದರೂ ಇಲ್ಲಿಗೆ ಬಂದು ಈ ನೆಲದಲ್ಲಿಯೇ ಬದುಕು ಕಟ್ಟಿಕೊಂಡದ್ದೇ ಅಲ್ಲದೇ ಇಲ್ಲಿಯೇ ತಮ್ಮ ಕಲಾಪ್ರತಿಭೆಯನ್ನು
ಪ್ರದರ್ಶಿಸುತ್ತಿದ್ದಾರೆ.

ಚಿತ್ರಕಲಾ ಪ್ರತಿಭೆ ಕೀರ್ತನಾ ಪ್ರಸಾದ್ ಅವರು ಮೂಲ ತಮಿಳುನಾಡಾದರೂ ತಮ್ಮ ಪತಿಯೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಇಲ್ಲಿನ ಸ್ವಚ್ಛಂದ ಪರಿಸರವು ಇವರಲ್ಲಿನ ಕಲಾವಿದೆಯನ್ನು ಎಚ್ಚರಗೊಳಿಸಿದೆ. ಬಾಲ್ಯದಿಂದಲೂ ರೂಢಿಸಿಕೊಂಡು ಬಂದಿದ್ದ ಚಿತ್ರಕಲೆಯಲ್ಲಿ ಮತ್ತೆ ತೊಡಗಿಕೊಂಡಿದ್ದಾರೆ. ಶಾಸ್ತ್ರೋಕ್ತವಾದ ಪೇಂಟಿಂಗ್ ಅನ್ನು ಅಭ್ಯಾಸಿಸುತ್ತಿದ್ದವರು ಸ್ವಲ್ಪ ಬದಲಾವಣೆಯತ್ತ ಮುಖಮಾಡಿ ಅಮೂರ್ತದತ್ತ ಹೆಜ್ಜೆ ಹಾಕಿದ್ದಾರೆ. ತಮ್ಮ ಅಪಾರ್ಟ್ಮೆಂಟ್ನ ಸುತ್ತಲಿರುವ ಸ್ವಚ್ಛಂದ ಪರಿಸರದಲ್ಲಿ ಸ್ವೇಚ್ಛೆಯಿಂದ ಹಾರಾಡುವ ಪಕ್ಷಿಗಳನ್ನು ಗಮನಿಸಿದ್ದಾರೆ. ಅವುಗಳ ಹಾವ-ಭಾವ-ಚಿಲಿಪಿಲಿಗಳನ್ನಷ್ಟೇ ಅಲ್ಲದೇ ಅವು ಬದುಕುವ ಪರಿಯ ಸೂಕ್ಷ್ಮತೆಯನ್ನು ಗಮನಿಸುತ್ತಾ ಬಂದಿದ್ದಾರೆ. ಕಲಾವಿದೆಯಾದ ಕೀರ್ತನಾ ಅವರು ಅವುಗಳನ್ನು ಯಥಾವತ್ತಾಗಿ ಚಿತ್ರಿಸದೇ ಅವುಗಳಲ್ಲಿನ ಬಣ್ಣಗಳನ್ನು ತಮ್ಮದೇ ಶೈಲಿಯಲ್ಲಿ ಅಭಿವ್ಯಕ್ತಗೊಳಿಸಲು ಅಮೂರ್ತರೂಪದಲ್ಲಿ ಚಿತ್ರರೂಪಕ್ಕೆ ತಂದಿದ್ದಾರೆ.

ಕೀರ್ತನಾ ಅವರ ತಂದೆ ಹಾಗೂ ತಾಯಿ ಇಬ್ಬರೂ ಚಿತ್ರಕಾರರೇ ಆಗಿದ್ದರಿಂದ ಇವರಲ್ಲಿ ಚಿತ್ರ ರಚನೆಯು ಹುಟ್ಟಿದಾರಭ್ಯವೇ ಒಗ್ಗಿ ಹೋಗಿದೆ. ಗುರು ಎಸ್ ಧನಪಾಲ್ ಅವರು ಈಕೆಯಲ್ಲಿದ್ದ ಕಲಾವಿದೆಗೆ ಪೋಷಣೆಯನ್ನಿತ್ತು, ಶಾಸ್ತ್ರೋಕ್ತವಾಗಿ ಅಭ್ಯಾಸಿಸುವಂತೆ ಮಾಡಿ ಸ್ಫೂರ್ತಿಯಾದರು ಎನ್ನುತ್ತಾ ಗುರುವಿಲ್ಲದೇ ಇಂತಹ ಕಲೆಯು ಒಲಿಯದು ಎನ್ನುತ್ತಾರೆ. ಅಷ್ಟೇ ಅಲ್ಲದೇ ಪತಿಯೂ ಚಿತ್ರಕಾರರಾಗಿದ್ದು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅದನ್ನೇ ವೃತ್ತಿನ್ನಾಗಿ ಸ್ವೀಕರಿಸಿದ್ದಾರೆ. ಕೀರ್ತನಾ ಓದಿದ್ದು ಇತಿಹಾಸವದರೂ ಪ್ರಸ್ತುತಕ್ಕೆ ಹೆಚ್ಚು ಪ್ರಧಾನ್ಯತೆ ಕೊಡುತ್ತಾ ತಮ್ಮನ್ನು ತಾವು ಹೊಸ ಹೊಸ ಆಲೋಚನೆಯತ್ತ ತೊಡಗಿಸಿಕೊಂಡಿದ್ದಾರೆ. ಒಟ್ಟು ಕಲಾ ಕುಟುಂಬವೇ ಇಲ್ಲಿ ನಿರ್ಮಾಣವಾಗಿದ್ದು ಕೀರ್ತನಾ ಅವರ ಚಿತ್ರಕಲಾ ಆಸಕ್ತಿಗೆ ರೆಕ್ಕೆ-ಪುಕ್ಕಗಳು ಬಂದಿವೆ. ಅದರ ಫಲವೇ `ಕಲರ್ಸ್ ಆಫ್ ದ ವಿಂಡ್’ ಪಕ್ಷಿಗಳ ಕುರಿತಾದ ಚಿತ್ರಕಲಾ ಪ್ರದರ್ಶನ. ತಮಿಳುನಾಡಲ್ಲಿದ್ದರೂ ಬೆಂಗಳೂರಿನ ಸಿಕೆಪಿಯಲ್ಲಿ ನಡೆಯುತ್ತಿದ್ದ `ಚಿತ್ರಸಂತೆ’ಗೆ ಆಗಾಗ ಬಂದು ಹೋಗುತ್ತಿದ್ದರಂತೆ. ಎಂದಾದರೂ ಒಮ್ಮೆ ಇಲ್ಲಿನ ಕಲಾ ಗ್ಯಾಲರಿಯಲ್ಲಿ ತಮ್ಮದೊಂದು ಕಲಾ ಪ್ರದರ್ಶನ ಏರ್ಪಡಿಸಬೇಕೆಂಬ ಹೆಬ್ಬಯಕೆಯನ್ನು ಇಟ್ಟುಕೊಂಡಿದ್ದರಂತೆ!
ಆದರದು ಇಷ್ಟು ಬೇಗ ಈಡೇರುತ್ತೇ ಅನ್ನುವ ನಂಬಿಕೆ ನನಗೆ ಇರಲಿಲ್ಲ ಎನ್ನುವುದು ಕೀರ್ತನಾ ಅವರ ಮಾತು. ಚನ್ನೈ ನಲ್ಲಿ ಹಲವಾರು ಪ್ರದರ್ಶನಗಳನ್ನು ನಡೆಸಿದ್ದಾರೆ. ಆದರೆ ಈ ಸಿಕೆಪಿಯಲ್ಲಿ ಈಗ
ನಡೆಸುತ್ತಿರುವ ಕಲಾಪ್ರದರ್ಶನದಲ್ಲಿ ಹೆಚ್ಚಿನ ವಿಶೇಷತೆಗಳಿವೆ ಎನ್ನುತ್ತಾರೆ.

ಅದೇನೆಂದರೆ ಹೊಸ ಜಾಗ, ಹೊಸ ಜನ, ಹೊಸ ವಿಚಾರ ಮಾಡುವ ಹಲವು ಬಗೆಯ ಕಲಾರಾಧಕರು, ಉತ್ತಮ ಕಲಾ ಮಾರುಕಟ್ಟೆಗೆ ಹೆಸರಾದ ಊರು! ಹೀಗೆ ಹಲವು ವಿಶೇಷತೆಗಳು ಈ ಪ್ರದರ್ಶನದಲ್ಲಿವೆ. ಕಲೆಯನ್ನಷ್ಟೇ ನೋಡಿ ಮೆಚ್ಚುವ ಅಥವಾ ಮೆಚ್ಚದಿರುವ, ಸರಿಯಾದ ವಿಮರ್ಶೆ ಮಾಡುವ ಕಲಾಸಕ್ತರು ಇಲ್ಲಿ ಸಿಗುತ್ತಾರೆ. ಇಲ್ಲಿಯ ವಿಮರ್ಶೆ ನೇರವಾಗಿರುತ್ತೆ. ಕಾರಣ ನನಗೆ
ತಿಳಿದವರು ಇಲ್ಲಿ ಯಾರೂ ಇಲ್ಲವಲ್ಲಾ? `ನೋ ಸಾಫ್ಟ್ ಕಾರ್ನರ್!’ ಎನ್ನುವುದು ಕಲಾವಿದೆ ಕೀರ್ತನಾ ಅವರ ಅಭಿಪ್ರಾಯ.
ನವಿಲು ಹಾಗೂ ಗಿಳಿಗಳಲ್ಲದೇ ಹಲವಾರು ಸಣ್ಣ ಪುಟ್ಟ ಹಕ್ಕಿಗಳನ್ನೂ ತಮ್ಮದೇ ಶೈಲಿಯ ವರ್ಣ ವಿನ್ಯಾಸದಲ್ಲಿ ಅಮೂರ್ತ ರೂಪದಲ್ಲಿ ಚಿತ್ರಿಸಿದ್ದಾರೆ. ಒಮ್ಮೆ ಕ್ಯಾನ್ವಾಸ್ ಮೇಲಿನ ಅಕ್ರಲಿಕ್ ಬಣ್ಣದಲ್ಲಿನ ನಿಖರ ಸ್ಕ್ರೋಕ್ಗಳ ಹೊಡೆತಗಳನ್ನು ಕ್ಯಾನ್ವಾಸ್ ಮುಂದೆ ನಿಂತು ನೋಡಬೇಕು. ಅದರ ಅನುಭವೇ ಬೇರೆ. ಎಷ್ಟೇ ಇ-ಕಲಾಪ್ರದರ್ಶನಗಳು ನಡೆದರೂ ನೇರಾನೇರ ಚಿತ್ರಕೃತಿಗಳನ್ನು ನೋಡುವ, ಆಸ್ವಾದಿಸುವ ಪರಿಯೇ ಬೇರೆ. ಕಲಾರಾಧಕನಿಗೂ ಹಾಗೂ ಕಲಾಕೃತಿಗೂ ಮಧ್ಯೆ ಏರ್ಪಡುವ ತರಂಗದ ಅನುಭವ ನೇರ ನೋಡುಗನೇ ಬಲ್ಲ. ಗೋಡೆಗೆ ತಗುಲಿಸಿದ ಕ್ಯಾನ್ವಾಸನ್ನು ಹೆಚ್ಚು ನಿಂತು ನೋಡುವ, ಬಣ್ಣಗಳ ತಾದಾನ್ಯತೆಯನ್ನು ಅನುಭವಿಸುವ ರೀತಿ ಇ-ಎಕ್ಸಿಬಿಷನ್ನಲ್ಲಿ ಸಿಗದು. ಅಲ್ಲಿ ತೋರು ಬೆರಳು ಮುಂದಿನ ಕಲಾಕೃತಿಯತ್ತ ಜಾರಲು ತುದಿ ಬೆರಳಲ್ಲಿ ಕಾದಿರುತ್ತೆ! ಸ್ಕಿಪ್ ಆಪ್ಷನ್ಗಳೇ ಹೆಚ್ಚು ಬಳಕೆಯಾಗುವುದಲ್ಲಿ!

ಒಟ್ಟಾರೆ ಹಕ್ಕಿರವದ ಸದ್ದಿಲ್ಲದ ವರ್ಣಮಯವಾದ ಕಲಾಪ್ರದರ್ಶನವು ಮಾರ್ಚ್ ೩೧ ರಂದು (ಇಂದು) ಸಿಕೆಪಿಯ ಅಸಿಸ್ಟೆಂಟ್ ಪ್ರೊಫೆಸರ್ ಆದ ಹಾಗೂ ಖ್ಯಾತ ಕಲಾವಿದರಾದ ಬಾಬು
ಜತ್ಕರ್ ಅವರು ಉದ್ಘಾಟಿಸಲಿದ್ದಾರೆ. ಮತ್ತೊಬ್ಬ ಖ್ಯಾತ ಚಿತ್ರಕಾರರಾದ ಎಸ್ ಎ ವಿಮಲನಾಥನ್ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ. ಸಿಕೆಪಿಯ ಕಲಾಗ್ಯಾಲರಿಯಲ್ಲಿ ಸಂಜೆ ೫ ಕ್ಕೆ ಇದು ಉದ್ಘಾಟನೆಯಾಗಲಿದೆ.

(ಚಿತ್ರ ಕಲಾವಿದೆ ಕೀರ್ತನಾ)
ಈ ಪ್ರದರ್ಶನವು ಏಪ್ರಿಲ್ ೬ ರವರೆಗೆ ಕಲಾಭಿಮಾನಿಗಳಿಗಾಗಿ ತೆರೆದಿರುತ್ತದೆ. ಸಿಕೆಪಿಯ ಉತ್ತಮ ಸ್ವಚ್ಛ ಪರಿಸರದಲ್ಲಿ ಸಾಕಷ್ಟು ಪಕ್ಷಿಗಳಿದ್ದು ಚಿಲಿಪಿಲಿ ಸದ್ದು ಗುನುಗುಡುತ್ತಿರುತ್ತೆ. ಅದರ ಇಂಪ್ಯಾಕ್ಟ್ ಎಂಬಂತೆ ಗ್ಯಾಲರಿಯಲ್ಲಿ ವರ್ಣಮಯವಾದ ಹಾರಾಡುವ ಪಕ್ಷಿಗಳು ಕ್ಯಾನ್ವಾಸ್ ನಲ್ಲಿ ತಮ್ಮನ್ನು ಸೆಳೆಯಲಿದೆ. ಒಮ್ಮೆ ಭೇಟಿಕೊಡಿ, ಗೆಳೆಯರನ್ನೂ, ಆಸಕ್ತರನ್ನೂ ವೀಕ್ಷಿಸುವಂತೆ ಮಾಡಿ, ಕಲಾಚಟುವಟಿಕೆಗಳಲ್ಲಿ ತೊಡಗುವಂತೆ ಹುರಿದುಂಬಿಸಿ, ಕಲೆಯನ್ನು ಪ್ರೋತ್ಸಾಹಿಸಿ.
- ಸಂಕೇತದತ್ತ