ಗಾಳಿಪಟಅಜ್ಜ ಹಾಗು ಮೊಮ್ಮಗಳ ಸುಂದರವಾದ ಬಾಂಧವ್ಯವನ್ನು ಕವನದ ಮೂಲಕ ಕವಿ ರಘುರಾಂ ಅವರು ಕಟ್ಟಿಕೊಟ್ಟಿದ್ದಾರೆ. ಮುಂದೆ ಓದಿ…

ಬಂತು ರಜಾ ತಂತು ಮಜಾ, ಗಾಳಿಪಟ
ಹಾರಿಸಲು  ಪುಟ್ಟಿ ಮೊಮ್ಮಗಳ ಜೊತೆ ||

ಬಿಳಿ  ಬಣ್ಣದ ಕಾಗದದ ಮೇಲೆ
ಬರೆದಿದೆ ಚಿತ್ತಾರ, ಮೇಲೆ  ಬಂಧನ
ಅರ್ಧ ಚಂದ್ರಾಕಾರದ ಕಡ್ಡಿ, ಹಿಡಿದಿದೆ
ಸೂತ್ರ ಬಿಳಿ ದಾರ ನಾಜೂಕಾಗಿ ||

ಮಹಡಿಯ ಮೇಲೆ  ನಿಂತು ಹಿಡಿದಿರುವೆ
ಗಾಳಿಪಟ, ದಾರ ಪುಟ್ಟಿಯ ಕೈಯಲ್ಲಿ,
ನಿಧಾನವಾಗಿ ಏರುತಿದೆ ನೋಡು ಗಾಳಿಪಟ
ಆಕಾಶದಲಿ, ಪುಟ್ಟಿಯ ಮನದ ಜೊತೆಗೆ ||

ಕೆಂಪು  ಬಿಳಿ ಹಸಿರು ಗಾಳಿಪಟಗಳು
ಏರುತಿವೆ  ಹಾರುತಿವೆ ನೀಲಿ ಆಕಾಶದಲಿ
ಏನೀ ಸೊಬಗು  ಬಾಲದ  ನರ್ತನದಲಿ
ನನ್ನ ಗಾಳಿಪಟವೇ ಬಹು ಎತ್ತರದಲಿ ||ಅರೇ ಇದೇನಿದು  ತಿರುಗುತಿದೆ ಗಾಳಿಪಟ
ಇಳಿಯುತಿದೆ ಸರ್ರನೆ ಗಾಳಿಯ ಜೊತೆಗೆ
ಆದರೂ ಬಿಡಲಿಲ್ಲ ಸೂತ್ರದ ದಾರವ
ಎಳೆದು  ಸುತ್ತಿ  ತಂದಳು ಸರಿದಾರಿಗೆ ||

ಗಾಳಿಪಟ ಗಟ್ಟಿ  ಇದೆ ಪುಟ್ಟಿ
ದಾರ, ಕಡ್ಡಿ,  ಕಾಗದದ  ಜೊತೆಗೆ
ಸೂತ್ರ ಸರಿಯಾಗಿ ಕಟ್ಟಿದರೆ ಪುಟ್ಟಿ
ಹಾರುವುದು ಆಕಾಶದಲಿ  ಹಕ್ಕಿಯ ಹಾಗೆ ||

ನಿನಗೆ ಗಾಳಿಪಟ  ಯಾರು ತಂದು
ಕೊಟ್ಟರು  ತಾತ?  ಸೂತ್ರ ಕಟ್ಟಿದವರು
ಯಾರು?  ಹಿಂತಿರುಗಿ ನೋಡಿದೆ ಉತ್ತರ
ಹುಡುಕಲು ಪುಟ್ಟಿಯ ಪುಟ್ಟ ಪ್ರಶ್ನೆಗಳಿಗೆ ||

ಓಡಿತು ಮನ ನಲವತೈದು ವರುಷಗಳ
ಹಿಂದೆ,  ಅಣ್ಣ  ಕೊಡಿಸಿದ ಕಾಗದ
ದಾರ  ಕಡ್ಡಿ  ಹಿಡಿದು ಸುರತ್ಕಲ್
ಕಾಲೇಜ್ ಎದುರು ನಿಂತ ದಿನಕೆ ||

ಬಂದಿದ್ದರು ಕಾಲೇಜಿಗೆ ಹೊಸ ಮನದಲಿ
ಎಲ್ಲ ದಿಕ್ಕುಗಳಿಂದ ಮುಗಿಲ ಎತ್ತರಕೆ
ಹಾರಾಡುವ  ಹೊಸ  ಕನಸುಗಳ ಹೊತ್ತು
ಅಲ್ಲಿತ್ತು  ನೋಡು ಮಿನಿ ಭಾರತ ||ಮೂಡಿತು ಚಿತ್ರ ಕಾಲೇಜಿನ ಆವರಣದಲಿ,
ತುಂಬಿದೆವು ಬಣ್ಣವ ಹಾಸ್ಟೆಲ್ನ ರೂಮುಗಳಲಿ,
ಕಟ್ಟಿದೆವು ಸೂತ್ರವ ಸ್ನೇಹದ  ಬಲೆಯಲಿ,
ತಯಾರಾದೆವು  ನಾವೆಲ್ಲ  ಗಾಳಿಪಟ ಹಾರಿಸಲು ||

ಮೆಲ್ಲನೆ ಏರಿತು ಗಾಳಿಪಟ ಪರೀಕ್ಷೆಗಳ
ಬಿರಗಾಳಿಯ  ಮಧ್ಯೆ  ಏಳುತ್ತಾ  ಬೀಳುತ್ತಾ,
ಗಟ್ಟಿಯಾಯಿತು ಮೈ ಮನ  ಎದುರಿಸಲು
ಹೊಸ ಪ್ರಪಂಚ  ಐದು ವರಷಗಳಲಿ ||

ನೋಡು ಪುಟ್ಟಿ, ಹಾರುತಿವೆ  ಎಂಬತ್ತರ
ದಶಕದ ಗಾಳಿಪಟಗಳು ಇನ್ನೂ  ಮುಗಿಲೆತ್ತೆರದಲಿ
ಸಾಧನೆಯ ಹಾದಿಯಲ್ಲಿ ಕಲ್ಲು ಮುಳ್ಳುಗಳ
ಮೆಟ್ಟಿ,  ತೊಡಗಿವೆ ಸಮಾಜದ ಸೇವೆಯಲಿ ||

ಹೌದು ಪುಟ್ಟಿ,  ಜೀವನ ಕೂಡ ಏರುತ್ತೆ
ಗಿರಕಿ ಹೊಡೆಯುತ್ತೆ ಇಳಿಯುತ್ತೆ ಮತ್ತೆ
ಹಾರುತ್ತೆ  ಗಾಳಿಪಟದ ತರಹ ಮುಗಿಲೆತ್ತರಕೆ
ಬಾಂಧವ್ಯದ ಸೂತ್ರ ಸರಿ ಇದ್ದರೆ ||

ಬಂತು ರಜ ತಂತು ಮಜ, ಗಾಳಿಪಟ
ಹಾರಿಸಲು ಪುಟ್ಟಿ ಮೊಮ್ಮಗಳ ಜೊತೆ ||( ಅಮೇರಿಕಾದಲ್ಲಿರುವ ಮಾವ ಶ್ರೀ ಭಾಸ್ಕರ್ ರಾವ್  ಅವರಿಂದ ಪ್ರೇರಿತವಾದ ಕವನ )


  • ಎನ್.ವಿ.ರಘುರಾಂ (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್)ಕ.ವಿ.ನಿ.ನಿ. )

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW