ಆಂಗ್ಲರ ಆಡಳಿತ ಭಾಷೆಯಾಗಿ ಕನ್ನಡ೧೯೮೫ ರಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ “ಆಂಗ್ಲರ ಆಡಳಿತ ಭಾಷೆಯಾಗಿ ಕನ್ನಡ” ಎಂಬ ಸಾಕ್ಷ್ಯಚಿತ್ರವನ್ನೂಬಿಡುಗಡೆ ಮಾಡಿತ್ತು. ಆಡಳಿತದಲ್ಲಿ ಕನ್ನಡವನ್ನು ಜಾರಿಗೆ ತನ್ನಿ ಎಂದು ಆಂಗ್ಲರನ್ನು ಯಾರೂ ಒತ್ತಾಯಿಸಲಿಲ್ಲ. ಆದರೆ ಆಡಳಿತ ಎಂದರೆ ಏನು ಎಂಬುದು ಆಂಗ್ಲರಿಗೆ ಚೆನ್ನಾಗಿ ತಿಳಿದಿತ್ತು. ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನೂ ಮುಂದೆ ಓದಿ…

ಇಂದು ಕನ್ನಡ ನಮ್ಮ ಆಡಳಿತ ಭಾಷೆಯಾಗಬೇಕು ಎಂದು ಮತ್ತೆ ಮತ್ತೆ ಹೇಳುತ್ತಿರುವಾಗ ಕೇಳಿಬರುವ ಮುಖ್ಯ ಬೇಡಿಕೆಯೆಂದರೆ – ಸರಕಾರಿ ನೌಕರರಿಗೆ ಕನ್ನಡ ಗೊತ್ತಿರಬೇಕು, ಅವರು ಕನ್ನಡ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು, ಪತ್ರ ವ್ಯವಹಾರಗಳೆಲ್ಲ ಕನ್ನಡದಲ್ಲಿ ನಡೆಯಬೇಕು, ನ್ಯಾಯಾಲಯಗಳಲ್ಲಿ ಕನ್ನಡ ಬಳಕೆಗೆ ಬರಬೇಕು, ತೀರ್ಪುಗಳು ಕನ್ನಡದಲ್ಲಿರಬೇಕು, ನಮೂನೆಗಳು, ತಖ್ತೆಗಳು, ನಮ್ಮ ಭಾಷೆಯಲ್ಲೇ ಸಿದ್ಧಗೊಳ್ಳಬೇಕು ಇತ್ಯಾದಿ. ೨೧ನೇ ಶತಮಾನದ ಆರಂಭದಲ್ಲಿರುವಾಗ ನಾವು ಮಂಡಿಸುತ್ತಿರುವ ಬೇಡಿಕೆಗಳು, ೧೯ ನೇ ಶತಮಾನದ ಮಧ್ಯಭಾಗದ ಹೊತ್ತಿಗೇ ಕಾರ್ಯರೂಪಕ್ಕೆ ಬಂದಿದ್ದವು ಎಂದರೆ ನಂಬುವವರು ಯಾರು?!!

ಫೋಟೋ ಕೃಪೆ : TV9

೧೯೮೫ ರಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ದಾಖಲೆಗಳ ಒಂದು ಪ್ರದರ್ಶನವನ್ನೂ, ಅದೇ ಸಂದರ್ಭದಲ್ಲಿ ಬಿಡುಗಡೆಯಾದ “ಆಂಗ್ಲರ ಆಡಳಿತ ಭಾಷೆಯಾಗಿ ಕನ್ನಡ” ಎಂಬ ಸಾಕ್ಷ್ಯಚಿತ್ರವನ್ನೂ ನೋಡಿದವರು ಇದನ್ನು ನಂಬದೇ ಬೇರೆ ಮಾರ್ಗವಿಲ್ಲ. ಇದೆಲ್ಲ ಹೊಸ ವಿಷಯವಲ್ಲ – ಚರಿತ್ರೆಯ ಒಂದು ಭಾಗ. ಆದರೆ ಈಗ ಎಲ್ಲವನ್ನೂ ಕಣ್ಣಾರೆ ಕಂಡು ಖುದ್ದು ಪರಾಂಬರಿಸಲು ಒಳ್ಳೆಯ ಅವಕಾಶ. ಆಡಳಿತದಲ್ಲಿ ಕನ್ನಡವನ್ನು ಜಾರಿಗೆ ತನ್ನಿ ಎಂದು ಆಂಗ್ಲರನ್ನು ಯಾರೂ ಒತ್ತಾಯಿಸಲಿಲ್ಲ. ಆದರೆ ಆಡಳಿತ ಎಂದರೆ ಏನು ಎಂಬುದು ಆಂಗ್ಲರಿಗೆ ಚೆನ್ನಾಗಿ ತಿಳಿದಿತ್ತು. ಜನರಿಗೆ ಮೋಸ ಮಾಡಿ, ಜನರಿಂದ ದೂರವಾಗಿ ಆಡಳಿತ ನಡೆಸುವುದು ಕ್ರಮವಲ್ಲ ಎಂಬುದನ್ನು ಅವರು ಬಲ್ಲವರಾಗಿದ್ದರು. ಪ್ರಜಾಪ್ರಭುತ್ವ ಅವರ ಆಡಳಿತ ಕ್ರಮವಲ್ಲದಿದ್ದರೂ, ಪ್ರಜಾ ಪರವಾದ ನಿಲುವನ್ನು ಕನ್ನಡದ ವಿಷಯದಲ್ಲಿ ಅವರು ತಾಳಿದ್ದರೆಂಬುದನ್ನು ನಾವು ಕೃತಜ್ಞತೆಯಿಂದ ಸ್ಮರಿಸಬೇಕು. ಆಡಳಿತದಲ್ಲಿ ಆಂಗ್ಲರು ಚಾಲ್ತಿಯಲ್ಲಿ ತಂದಷ್ಟೂ ಕನ್ನಡವನ್ನು ನಾವು ಬಳಸುತ್ತಿಲ್ಲ ಎಂಬುದು ಎಂಥಾ ಅಭಾಸ?!ಫೋಟೋ ಕೃಪೆ : prajapragati

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ನಿಯಮ ನಿಬಂಧನೆಗಳು ೧೮೧೪ ರಿಂದಲೂ ಕನ್ನಡದಲ್ಲಿ ಪ್ರಕಟಗೊಂಡಿವೆ. ಕನ್ನಡವನ್ನು ಕಲಿತು ವಿದೇಶಿ ಅಧಿಕಾರಿಗಳೇ ಈ ದಾಖಲೆಗಳನ್ನು ಅನುವಾದಿಸಿದರೆಂಬುದು ಅಭಿಮಾನದ ಮಾತು. ಇದರಿಂದ ಇಂದಿನ ಅಧಿಕಾರಿಗಳು ನಾಚಬೇಕು. ೧೮೩೨ ರಷ್ಟು ಹಿಂದೆಯೇ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆಯಾಗುತ್ತಿದ್ದು, ತೀರ್ಪುಗಳೂ ಕನ್ನಡದಲ್ಲೇ ಇರುತ್ತಿತ್ತು. ಆಡಳಿತದ ದೈನಂದಿನ ವ್ಯವಹಾರಗಳೂ ಕನ್ನಡದಲ್ಲೇ ನಡೆಯುತ್ತಿದ್ದವು. ಸರ್ಕಾರಿ ನೌಕರರಿಗೆ ಕನ್ನಡ ಜ್ಞಾನ ಕಡ್ಡಾಯವಾಗಿತ್ತು. ಆಂಗ್ಲ ಅಧಿಕಾರಿಗಳೂ ಈ ಇಲಾಖಾ ಪರೀಕ್ಷೆ ತೆಗೆದುಕೊಳ್ಳುತ್ತಿದ್ದರು. ವಿನಾಯಿತಿಗಾಗಿ ಅವರೆಂದೂ ಅರ್ಜಿ ಸಲ್ಲಿಸಲಿಲ್ಲ. “ಅರ್ಜಿಗಳು ಕನ್ನಡದಲ್ಲೇ ಇರಬೇಕು. ಬೇರೆ ಭಾಷೆಗಳಲ್ಲಿನ ಅರ್ಜಿಗಳನ್ನು ತಿರಸ್ಕರಿಸಲಾಗುವುದು” ಎಂಬ ಒಂದು ಆದೇಶವನ್ನು ೧೮೬೬ ರಲ್ಲಿ ಟಿ. ಜೆ. ಕ್ಲಾರ್ಕ್ ಎಂಬ ಆಂಗ್ಲ ಅಧಿಕಾರಿ ಹೊರಡಿಸಿದ್ದನೆಂಬುದು ಇಂದಿನವರಿಗೆ ಆಶ್ಚರ್ಯವೆನಿಸಬಹುದು.ಕನ್ನಡ ಬರದ ಅಧಿಕಾರಿಗಳನ್ನು ವರ್ಗಾಯಿಸಲು ಇಲ್ಲವೇ ಬಲಾತ್ಕಾರವಾಗಿ ನಿವೃತ್ತಿಗೊಳಿಸಲು ಆಂಗ್ಲ ಅಧಿಕಾರಿಗಳು ಹಿಂದೆ ಮುಂದೆ ನೋಡಲಿಲ್ಲ. ಅಂಚೆ ಇಲಾಖೆಯ ಎಲ್ಲ ದಾಖಲೆಗಳು, ನಮೂನೆಗಳು ಕನ್ನಡದಲ್ಲೇ ಚಾಲ್ತಿಯಲ್ಲಿದ್ದವು. ರೈಲ್ವೇ ಗೈಡುಗಳ ಕನ್ನಡ ಆವೃತ್ತಿಯೂ ಆಗಲೇ ಪ್ರಕಟವಾಗಿತ್ತು. ಒಟ್ಟಿನಲ್ಲಿ ಕನ್ನಡ ಸಮಗ್ರ ಆಡಳಿತವನ್ನು ತುಂಬಿಕೊಂಡಿತ್ತು. ಆಡಳಿತ ಜನರಿಗಾಗಿ ನಡೆಯುತ್ತಿತ್ತು!

ಫೋಟೋ ಕೃಪೆ : The Hindu

ದಾಖಲೆಗಳ ಪ್ರದರ್ಶನ ಮತ್ತು ಸಾಕ್ಷ್ಯಚಿತ್ರ ಆಂಗ್ಲರ ಆಡಳಿತದ ಕನ್ನಡವನ್ನು ನಮ್ಮ ಕಣ್ಣಿಗೆ ಕಟ್ಟಿಸುತ್ತವೆ. ಸಾಕ್ಷ್ಯಚಿತ್ರ ಆಡಳಿತದ ಕನ್ನಡದ ವಿಹಂಗಮ ನೋಟವನ್ನು ಕೊಟ್ಟು ನಮ್ಮ ರಾಷ್ಟ್ರಕ್ಕೆ ೧೯೪೭ ರಲ್ಲಿ ಸ್ವಾತಂತ್ರ್ಯ ಬಂತೆಂಬುದರ ಘೋಷಣೆಯೊಂದಿಗೆ ಮುಗಿಯುತ್ತದೆ. ಈ ಮುಕ್ತಾಯ ಅತ್ಯಂತ ಧ್ವನಿಪೂರ್ಣವಾಗಿದೆ. ತ್ರಿವರ್ಣ ರಂಜಿತ ರಾಷ್ಟ್ರಧ್ವಜ ರಾರಾಜಿಸುತ್ತದೆ. ನಮ್ಮದೇ ಆಡಳಿತ ತೊಡಗಿತೆಂಬುದು ಹಾಡಾಗುತ್ತದೆ. ಮುಂದೆ ಕನ್ನಡದ ಗತಿ ಏನಾಯಿತೆಂಬುದನ್ನು ಚಿತ್ರ ಹೇಳುವುದಿಲ್ಲ! ಅದನ್ನು ಬಲ್ಲ ವೀಕ್ಷಕರು ವಿಷಾದಗೊಳ್ಳಬೇಕಾಗುತ್ತದೆ. ಅದೇ ಕನ್ನಡದ ಮಾತ್ರವಲ್ಲ ಇತರ ಭಾಷೆಗಳ ದುರ್ದೈವ. ಯಾವುದೋ ದೇಶದಿಂದ ಬಂದ ಜನರು ನಮ್ಮ ದೇಶದ ಭಾಷೆಗಳ ಮಹತ್ವವನ್ನು ಅರಿತಿದ್ದರು. ಆದರೆ ನಮ್ಮವರಿಗೇ ಅದು ತಿಳಿದಿಲ್ಲ. ಆಂಗ್ಲರು ಹೋದರು. ಅವರ ಉನ್ನತ ಪರಂಪರೆಯನ್ನು ನಾವು ಉಳಿಸಿಕೊಳ್ಳಲಿಲ್ಲ. ಅವರ ವಿಶೇಷ ಜಾಣ್ಮೆಗಳನ್ನು ಕಡೆಗಣಿಸಿದೆವು. ಅವರ ಆಡಳಿತದ ತೊಗಟೆಗಳನ್ನೂ, ಚಿಪ್ಪನ್ನೂ, ಸಿಪ್ಪೆಯನ್ನೂ ಉಳಿಸಿಕೊಂಡೆವು! ನಾವು ದಾಸ್ಯವನ್ನು ಕಳೆದುಕೊಂಡೆವೋ? ದಾಸ್ಯವನ್ನು ಹೇರಿಕೊಂಡೆವೋ? ಎಂಬ ಸಂಶಯ ನಮ್ಮನ್ನು ಕಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಇದೇ ಒಂದು ಜೀವನ ವಿಧಾನದ ಅವನತಿಯ ಹಾದಿ.ನಮ್ಮ ಕಣ್ಣು ತೆರೆಸುವ, ನಮ್ಮನ್ನು ಸಂಕಟಪಡಿಸುವ, ಚುಚ್ಚುವ, ನಾಚುವಂತೆ ಮಾಡುವ “ಆಂಗ್ಲರ ಆಡಳಿತ ಭಾಷೆಯಾಗಿ ಕನ್ನಡ” ದಾಖಲೆಗಳ ಪ್ರದರ್ಶನ ಮತ್ತು ಸಾಕ್ಷ್ಯಚಿತ್ರಗಳಿಗೆ ಪ್ರೇರಣೆ ಮತ್ತು ಸ್ಪೂರ್ತಿ ಡಾಕ್ಟರ್ ಮಹಾದೇವ ಬಣಕಾರರದು. ಶತಮಾನದ ಹಿಂದಿನವರ ಕೆಲಸ ನಮಗೆ ಆದರ್ಶವಾಗಬೇಕು.


  • ಶಿವಕುಮಾರ್ ಬಾಣಾವರ್

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW