ಜನುಮ ಜನುಮಕೂ – ಭಾಗ ೯ಸುಮಾ ಹೊಯ್ದಾಟ ಪೂವಯ್ಯ ಮಂಕು ಕವಿದು ಕುಳಿತುಕೊಂಡಿದ್ದ ಸುಮಾಳತ್ತ ನೋಡಿದ. ಆಕೆ ಹಾಗೆ ಕುಳಿತಿದ್ದಳು. ಎತ್ತಲೋ ನೆಟ್ಟ ದೃಷ್ಟಿ. ಮುಖದಲ್ಲಿ ಬತ್ತಿದ ಕಳೆ. ವಿಚಿತ್ರ ಮೌನ. ಮನಸ್ಸಿನಲ್ಲಿ ಏನೋ ತಾಕಲಾಟ. ಅಂತರಂಗದಲ್ಲೇನೋ ಹುಡುಕಾಟ ಶುರುವಾಗಿದೆ. ಮುಂದೆ ಓದಿ ಜನುಮ ಜನುಮದ ಪ್ರೀತಿಯ ಕತೆ…

ಹಾವು ಬಡಿದು ಹದ್ದಿಗೆ ಹಾಕಿದೆ!

ಫೋಟೋ ಕೃಪೆ : The Bottom Line

ಆಕೆ ಇನ್ನೂ ಏನೋ ಹಳಬೇಕೆಂದಳು. ಆದರೆ ಅಷ್ಟರಲ್ಲಿ ಬಾಗಿಲು ದೂಡಿ ಒಳಗೆ ಬಂದ ಮ್ಯಾನೇಜರ್ ಹೊಗೆರಾಮ ಇಲ್ಲಿನ ದೃಶ್ಯ ನೋಡಿ ಅವಕ್ಕಾಗಿ ಹೋದ. ಸುಮಾಳ ಮುಖವನ್ನು ತನ್ನ ಎದೆಯಲ್ಲಿ ಹುದುಗಿಸಿಕೊಂಡ ರಾಣಾ ಮೆಲ್ಲಗೆ ಅವಳ ತಲೆಯನ್ನು ನೇವರಿಸುತ್ತಿದ್ದರು. ಸುಮಾಳ ಕಣ್ಣಲ್ಲಿ ನೀರು ತುಂಬಿ ತುಳುಕುತ್ತಿತ್ತು. ಗಂಟಲು ಕಟ್ಟಿ ಬಿಕ್ಕುತ್ತಿದ್ದಳು ಹೊಗೆರಾಮ ಗಲಿಬಿಲಿಗೊಂಡ.

ಏನಾಶ್ಚರ್ಯ! ಸುಮಾಳನ್ನು ರಾಣಾ ಮೊದಲ ಬಾರಿ ನೊಡಿದ್ದಾರೆ. ಪರಸ್ಪರರ ವಿಷಯದಲ್ಲಿ ಇಬ್ಬರಿಗೂ ಏನೋ ಗೊತ್ತಿಲ್ಲ. ಆದರೂ ದಶಕಗಳ ಪರಿಚಯಸ್ಥರಂತೆ ಇದ್ದಾರೆ ಇಬ್ಬರೂ. ಈ ರಾಣರಿಗೆ ಹುಡುಗಿಯರನ್ನು ಒಲಿಸಿಕೊಳ್ಳುವ ಕಲೆ ಏನಾದರೂ ಗೊತ್ತಿದೆಯೇ…?

ಹೊಗೆರಾಮ ವಿಚಿತ್ರವಾಗಿ ನೋಡಿದ — ಇಬ್ಬರನ್ನೂ. ರಾಣ ಸಾವರಿಸಿಕೊಂಡರು. ಸುಮಾಳನ್ನು ಮೆಲ್ಲನೆ ತಳ್ಳಿ.‘ಛೆ…. ಇಷ್ಟೊತ್ತು ಎಲ್ಲೋಗಿದ್ದೆ ರಘುರಾಮ?’

‘ಇಲ್ಲೇ ಇದ್ದೆ ಸಾರ್ ಹೊರಗೆ. ಆ ಹೀರೋಯಿನ್ ಚಾವ್ಲಾ ಸಂಜೆ ಬೇಗ ರೂಮಿಗೆ ಹೋಗ್ಬೇಕಂತೆ. ಬೇಗ ಅವಳ ಪೋರ್ಷನ್ ಮುಗಿಸಿ ಬಿಡಿ ಅಂದ್ರು ಪ್ರೊಡ್ಯೂಸರು. ಅದನ್ನೇ ಹೇಳೋಣಂತ ಬಂದಿದ್ದೀನಿ. ರಾಣಾರಿಗೆ ಅಸಮಾಧಾನವಾಯಿತು ಈ ಮಾತು ಕೇಳಿ.

ಇವನೂ ಒಬ್ಬ ಪ್ರೊಡ್ಯೂಸರ್. ಈ ಹಿಂದಿ ಹೀರೋಯಿನ್ ಇವರನ್ನ ತುದಿ ಬೆರಳಲ್ಲಿ ಆಟ ಆಡಿಸುತ್ತಿದ್ದಾಳೆ ಅಂದುಕೊಂಡು, ‘ಆಯ್ತು ಬರ್ತೀನಿ. ಶೂಟಿಂಗ್ ಸ್ಟಾರ್ಟ್ ಆಗುತ್ತೆ ಈಗ. ಹಾಂ… ಹಾಗೇ ಸುಮಾ ಅಪ್ಪಚ್ಚುಗೆ ಮೇಕಪ್ ಟೆಸ್ಟ್ ಆಗ್ಬೇಕು. ರೆಡಿ ಮಾಡೋಕೆ ಅಸಿಸ್ಟೆಂಟು ಪುಟ್ಸಾಮಿಗೆ ಹೇಳು.’

ಹೊಗೆರಾಮ ಅಲ್ಲಿ ಹೆಚ್ಚು ಹೊತ್ತು ಇರದ ಹಾಗೆ ನೋಡಿಕೊಂಡರು ರಾಣಾ. ಹೊಗೆರಾಮ ಸುಮಾಳತ್ತ ನೋಡಿದ. ಆಕೆ ಕೊರಳಲ್ಲಿನ ಬೆವರಿನ ಹನಿಗಳನ್ನು ಒರೆಸಿಕೊಳ್ಳುತ್ತಿದ್ದಳು. ಆಗಲೇ ಅನುಮಾನದ ಒಂದು ಎಳೆ ಹೊಗೆರಾಮನ ಮನಸ್ಸನ್ನು ಮೀಟಿತು. ಹಾವು ಬಡಿದು ಹದ್ದಿಗೆ ಹಾಕಿದರೆ ಅಂದುಕೊಂಡ. ಹಾಗೆ ಆತ ಅಲ್ಲಿಂದ ಕದಲಿದ.

‘ಮೇಕಪ್ ಟೆಸ್ಟಿಗೆ ರೆಡಿಯಾಗು ರೋಜಿ. ನಾನು ಇನ್ಮೇಲೆ ನಿನ್ಗೆ ಸುಮಾ ಅಂತ ಕರೆಯೊಲ್ಲ. ನನಗೆ ಅದೇ ಹೆಸರು ಇಷ್ಟ.’

ಸುಮಾ ಸುಮ್ಮನೆ ನೋಡುತ್ತಿದ್ದಳು ಗರಬಡಿದವಳಂತೆ. ತನ್ನಲ್ಲಿ ಏನೋ ಬದಲಾವಣೆ ಆಗುತ್ತಿದೆ. ಮೈಯಲ್ಲಿಯ ಇಡೀ ರಕ್ತ ಕುದಿದು ಆವಿಯಾಗಿ ತನ್ನ ಇಡೀ ಶರೀರ ಸೆಳೆತಕ್ಕೆ ಒಳಗಾಗುತ್ತಿದೆ ಅನ್ನಿಸಿತು. ಇಡೀ ಕೈಕಾಲು ಮರದ ಕೊರಡು ಆಗುತ್ತಿದೆ ಅನ್ನಿಸತೊಡಗಿತು.

ಅಷ್ಟರಾಗಲೇ ಮೇಕಪ್ ಸುರೇಶ ಬಂದು ಬನ್ನಿ ಮೇಡಂ…ಮೇಕಪ್ ಟೇಬಲ್ ಗೆ ಅಂದು ಸುಮಾಳನ್ನು ಕರೆದ. ಆಕೆ ಮೆಲ್ಲಗೆ ಅಲ್ಲಿಂದ ಎದ್ದಳು ನಿರ್ಭಾವದಿಂದ ಅವಳ ಮನಸ್ಸು ಸುಳಿಗಾಳಿಗೆ ಸಿಕ್ಕು ಹೋಗಿತ್ತು.
ರಾಣಾರ ತಲೆಯಲ್ಲಿ ನೂರೆಂಟು ಪ್ರಶ್ನೆಗಳು ಕೊರೆಯ ತೊಡಗುಡವು. ತನ್ನ ಹಾಗು ರೋಜಿಯ ಪ್ರೇಮಕತೆ ನಡೆದು ಹೋದದ್ದು ಈಗ ನಲವತ್ತು ವರ್ಷಗಳ ಹಿಂದೆ. ಈಗ ತನಗೆ ಐವತ್ತೆಂಟು ವರ್ಷ. ರೋಜಿಗೂ ತನ್ನ ಸಮವಯಸ್ಸು ಇತ್ತು ಆಗ. ಒಟ್ಟಿಗೆ ಓದುತ್ತಿದ್ದ ಇಬ್ಬರೂ ಎಂಟನೇ ಕ್ಲಾಸ್ ನಲ್ಲೇ ಪ್ರೇಮಿಸಿದ್ದು, ಜಾತಿ ಕಾರಣದಿಂದ ಮನೆಯವರೆಲ್ಲ ಸೇರಿ ತಮ್ಮಿಬ್ಬರನ್ನು ಬೇರೆ ಮಾಡಿದ್ದು, ತನ್ನ ಜೀವನದ ಅತ್ಯಂತ ಕೆಟ್ಟ ಗಳಿಗೆ.ರೋಜಿಯನ್ನು ತಾನು ಕಟ್ಟಕಡೆಯ ಬಾರಿ ನೋಡಿದ್ದು ಈಗ ಮೂವತ್ತು ವರ್ಷದ ಕೆಳಗೆ ಮಂಗಳೂರಿನಲ್ಲಿ.ಆಗಲೇ ತನಗೆ ಮದುವೆಯೂ ಆಗಿಹೋಗಿತ್ತು. ಧಾರವಾಡದ ಶಾಂತಾಳೊಂದಿಗೆ.ಹಾಗೆ ನೋಡಿದರೆ ರೋಜಿಗೆ ನಾನೇ ಮೋಸ ಮಾಡಿದ್ದೇನೆ. ಕನಸುಗಳು ಅರಳುವ ಎಲೆ ಹರೆಯದಲ್ಲಿ ಆಕೆಯನ್ನು ಪ್ರೀತಿಸಿದ್ದು ಒಂದು ತಪ್ಪಾದರೆ ನಂತರ ಇನ್ನಾರದೋ ಒತ್ತಡ ತಂತ್ರದಿಂದಾಗಿ ಆಕೆಯನ್ನು ತ್ಯಜಿಸಿ, ಇನ್ನೊಬ್ಬಳನ್ನು ಮದುವೆಯಾದದ್ದು ಮತ್ತೊಂದು ತಪ್ಪು.

ರೋಜಿ ಸುಮಾ ಆಗಿ ಹುಟ್ಟಿದಳೇ?

ಆದರೆ ಸುಮಾ ಯಾರು?

ಆಕೆಯನ್ನು ಒಮ್ಮೆ ನೋಡಿದ್ದೇ ಬಂತು. ನಲವತ್ತು ವರ್ಷದ ಹಿಂದೆ ತನಗೆ ಕಚಗುಳಿಯಿಡುತ್ತಿದ್ದ ಆ ರೋಜಿ ಧುತ್ತೆಂದು ಕಣ್ಣಮುಂದೆ ಯಾಕೆ ಬಂದಳು. ಈಗ ಆಕೆ ಬದುಕಿದ್ದೇ ನಿಜವಾದಲ್ಲಿ ಆಕೆಗೂ ಈಗ ಐವತ್ತೆಂಟು ವರ್ಷಗಳು. ಆದರೆ ಈ ಸುಮಾಳಿಗೆ ಬರಿ ಇಪ್ಪತ್ಮೂರು ವರ್ಷಗಳು. ಆದರೂ ರೋಜಿ ಮತ್ತು ಈ ಸುಮಾ ನಡುವೆ ಇರುವ ನಂಟಾದರೂ ಏನು? ತನ್ನನ್ನು ನೋಡಿದಾಕ್ಷಣ ಸುಮಾ ಭೂಮಿ ನಡುಗಿದಂತೆ ಅಲ್ಲಾಡಿ ಹೋದಳು. ಏನಾಯಿತು ಅವಳಿಗೆ? ನನಗ್ಯಾಕೆ ಈಗ ಇಂಥ ಪ್ರಶ್ನೆಗಳು ಕಾಡತೊಡಗಿದವು.ಏನಾಯಿತು?

ರಾಣಾರನ್ನು ಹಿಂಡಿ-ಹಿಂಪೆ ಮಾಡಿದವು ಈ ಪ್ರಶ್ನೆಗಳು. ರೋಜಿಗೆ ಮರುಜನ್ಮವೇನಾದರೂ ಆಗಿದೆಯೇ? ಬೆಳಗಾವಿ ಜಿಲ್ಲೆಯ ರೋಜಿ ಇಲ್ಲಿ ಕೊಡಗಿನಲ್ಲಿ ಸುಮಾ ಅಪ್ಪಚ್ಚುವಾಗಿ ಹುಟ್ಟಿ ಬಂದಿರಬಹುದೇ? ಛೇ…ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ಪ್ರಶ್ನೆಯಿದು. ಬೆಳಗಾವಿ ಎಲ್ಲಿ! ಕೊಡಗು ಎಲ್ಲಿ ರಾಣಾ ಕಲ್ಲಿನಂತೆ ಕೂತುಬಿಟ್ಟರು.

ಫೋಟೋ ಕೃಪೆ : redballon

‘ಸಾರ್… ಸುಮಾ ಅಪ್ಪಚ್ಚು ಅವ್ರಿಗೆ ಮೇಕಪ್ಪು ಹಾಕಿದೀನಿ. ನೋಡ್ತೀರಾ ಸಾರ್.’

ಮೇಕಪ್ ಸುರೇಶ ಹೇಳಿದಾಗ ರಾಣಾ ತಲೆಯೆತ್ತಿ ನೋಡಿದರು. ಸುರೇಶನ ಹಿಂದೆಯೇ ಬಂದು ನಿಂತಿದ್ದ ಸುಮಾಳನ್ನು ನೋಡಿ ಸುತ್ತಲಿದ್ದುದು ಗರಗರ ತಿರುಗಿ ಹೋಯಿತು ರಾಣಾರಿಗೆ.

ಹೌದು. ಅದೇ ಕಣ್ಣು.ಅದೇ ಮೂಗು. ಅದೇ ಬಾಯಿ, ಅದೇ ರೋಜಾಳ ಮುಖ. ಯಾವ ಬಡಾವಣೆಯೂ ಇಲ್ಲ. ರೋಜಿಗೆ ಮರುಜನ್ಮವಾಗಿದೆ.ಹಾಗಿದ್ದರೆ ರೋಜಿ ಯಾವಾಗ ಸತ್ತಳು?

ರಾಣಾರ ಬಾಯಿಂದ ಮಾತುಗಳೇ ಹೊರಡಲಿಲ್ಲ. ಎವೆಯಿಕ್ಕದೆ ಆಕೆಯನ್ನೇ ನೋಡುತ್ತ ನಿಂತುಬಿಟ್ಟರು.ಓಕೆ ಗುಡ್’ ಅಂದರು ಮೆಲ್ಲಗೆ.

ಮೇಕಪ್ ನಲ್ಲಿದ್ದ ಸುಮಾಳನ್ನು ನೋಡಿ ಚಿತ್ರೀಕರಣದ ಇಡೀ ಯುನಿಟ್ಟೆ ತಲೆ ತಿರುಗಿ ಬಿದ್ದಿತ್ತು.

*

ಬಾಳೆಲೆ ಎಸ್ಟೇಟು. ಹೊರಗೆ ಒಣ ಹಾಕಿದ್ದ ಕಾಫಿ ಬೀಜದ ರಾಶಿಯ ನಡುವೆ ನಿಂತ ಕಾವೇರಮ್ಮ ಯೋಚಿಸಿದರು.

ಫೋಟೋ ಕೃಪೆ : redscrab

ಸಂಜೆಆಗುತ್ತ ಬಂತು. ಪಡುವಣದ ದಿಕ್ಕಿನಲ್ಲಿದ್ದ ಸೂರ್ಯ ಕೆಂಪಗಾಗುತ್ತಾ ಬೆಟ್ಟಗಳ ಸೆರಗಿನಲ್ಲಿ ಅಡಗಿಕೊಳ್ಳಲು ಯತ್ನಿಸುತ್ತಿದ್ದ. ಸೋಮವಾರ ಪೇಟೆಯ ಕಡೆಗೆ ಹೋಗುವ ಸಂಜೆ ಬಸ್ಸು ಆಗಲೇ ಬೆಟ್ಟದ ಇಳಕಳಿಯಲ್ಲಿ ಸಾಗಿ ಹೋಗಿತ್ತು. ಕತ್ತಲಾದರೆ ಬತ್ತಗಕ ಕಾಡುದಾರಿಯಲ್ಲಿ ಜೀಪು ಓಡಿಸಿಕೊಂಡು ಬರುವುದು ಕ್ಷೇಮವಲ್ಲ. ಅದ್ಯಾಕೋ…ಈ ಹುಡುಗಿ ಸಿನಿಮಾದಲ್ಲಿ ಪಾರ್ಟು ಕೇಳಲು ಹೋದವಳು ಇನ್ನೂ ಬಾಳೆಲೆ ಮನೆಗೆ ಹಿಂದಿರುಗಿರಲಿಲ್ಲ. ಕಾವೇರಮ್ಮನಿಗೆ ಅದೇ ಚಿಂತೆ. ಈ ಹುಡಗುಗಿ ಹೇಳಿದ ಮಾತು ಕೇಳುವುದಿಲ್ಲ. ಆನೆ ನಡೆದದ್ದೇ ದಾರಿ ಅನ್ನುವಂತೆ ತಾಣಗಣಿಸಿದಂತೆ ಮಾಡುವುದೇ ಅವಳ ನೀತಿ.

ಕಾವೇರಮ್ಮನಿಗೆ ಎಷ್ಟೇ ಆತಂಕವಾಗಿದ್ದರೂ. ಅವರಿಗೆ ಒಂದು ಧೈರ್ಯವಿತ್ತು. ಅಷ್ಟಕ್ಕೂ ಸುಮಾ ಹೋದದ್ದು ಬಗ್ಗನಮನೆ ಮಾಚಯ್ಯನವರ ಬಿಡಾರಕ್ಕೆ. ಮಾಚಯ್ಯನವರು ತಮ್ಮ ಕುಟುಂಬಕ್ಕೆ ಒಳ್ಳೆಯದನ್ನೇ ಬಯಸುವ ಜನ. ಹ್ಯಾಗೂ ಸುಮಾ ಒಬ್ಬಳೇ ಹೋಗಿಲ್ಲ. ಜತೆಗೆ ತಮ್ಮ ಪೂವಯ್ಯನೂ ಹೋಗಿದ್ದಾನೆ. ಅಲ್ಲದೆ ಸುಮಾ ಒಬ್ಬಳೇ ಹೋಗಿಲ್ಲ. ಜತೆಗೆ ತಮ್ಮ ಪೂವಯ್ಯನೂ ಹೋಗಿದ್ದಾನೆ. ಅಲ್ಲದೆ ಸುಮಾ ಜೀಪಿನಲ್ಲಿ ಬಂದೂಕು ಬಚ್ಚಿಟ್ಟುಕೊಂಡು ಹೋಗಿದ್ದಾಳೆ. ಹೆಚ್ಚು ಕಡಿಮೆ ಎತ್ತದೆ ಏನಾದರೂ ಆತಂಕದ ಎದುರಾದರೆ ಸುಮಾ ಬಂದೂಕು ಬಿಡುವ ಹುಡುಗಿಯಲ್ಲ. ಗುರಿ ಹೊಡೆಯುವುದರಲ್ಲಿ ಕೊಡಗಿನ ಎಂತೆಂಥ ಗಂಡಸರೂ ಇವಳ ಮುಂದೆ ಏನೂ ಅಲ್ಲ.ಕಾವೇರಮ್ಮ ತಮಗೆ ತಾವೇ ಸಮಾಧಾನ ಪಟ್ಟುಕೊಂಡರು. ಮನೆಯ ಮುಂದಿನ ದೊಡ್ಡ ತಗ್ಗಿನಲ್ಲಿರುವ ತೋಟದ ಕಾಲು ದಾರಿಯಲ್ಲಿ ಯಾರೋ ನಡೆದು ಬರುತ್ತಿರುವುದು ಕಾಣಿಸಿತು. ಕಾವೇರಮ್ಮ ಎದ್ದು ಮರೆಗೆ ಹೋಗಿ ದಿಟ್ಟಿಸಿ ನೋಡಿದರು. ಒಬ್ಬರಲ್ಲ ನಾಲ್ಕಾರು ಜನ ಸಾಲಾಗಿ ಹೊರಟಿದ್ದಾರೆ. ದಿಟ್ಟಿಸಿ ನೋಡಿದರೆ ಅವರು ಬೇರೆ ಯಾರೂ ಅಲ್ಲ. ಪಕ್ಕದ ಗುಡ್ಡದ ಕಾರ್ಯಪ್ಪನ ತೋಟದ ಆಳುಗಳು. ಅವರೆಲ್ಲಿಗೋ ಹೋಗುವ ಅವಸರದಲ್ಲಿದ್ದರು. ಕಾವೇರಮ್ಮ ಹೊರಗೆ ಬಂದು ಕೂಗಿ–

‘ವೊಯ್…. ಕತ್ಲಲ್ಲಿ ಪೇಟೆಗೆ ಹೋಗೋದುಂಟಾ? ಈಗ್ಹೋಗಿ ಇನ್ಯಾವಾಗ ಬರ್ತೆ ಮಾರಾತೀ?’

ಗುಂಪಿನಲ್ಲಿದ್ದ ಹೆಂಗಸೊಬ್ಬಳನ್ನು ಗುರುತಿಸಿ ಮಾತಾಡಿದರು. ಅದರಲ್ಲಿದ್ದವನೊಬ್ಬ ಅಷ್ಟೇ ಎತ್ತರದ ದನಿಯಲ್ಲಿ ಹೇಳಿದ. ‘ಪೇಟೆಗಲ್ಲ ಅಮ್ಮಾವ್ರೇ… ಈಗ್ ಸಂಜೆ ಇಗ್ಗುತ್ತಪ್ಪ ಗುಡೀಲಿ ಪೂಜಾರಪ್ಪನ ನುಡಿ ಐತಿ. ಕೇಳ್ಕೊಂಡು ಬರೋಣ್ ಅಂತ ಹೊಂಟೀವಿ’ ಅಂದ. ಆಗಲೇ ಕಾವೇರಮ್ಮನಿಗೆ ನೆನಪಾದದ್ದು.

ಇವತ್ತು ಮಂಗಳವಾರ. ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಪೂಜಾರಪ್ಪನ ಮೈನಲ್ಲಿ ದೇವ್ರು ಬಂದು ಹೋಗೋ ದಿನ. ಹರಕೆ ಹೊತ್ತವರು–ಹೊರುವವರು ಅಲ್ಲಿಗೆ ಹೋಗಿ ಬರುವ ದಿನವಿದು. ಆದರೆ ತಾನೆಂದೂ ಹಾಗೆ ಹೋಗಿಲ್ಲ. ಎಲ್ಲ ನಮ್ಮ ಹಣೆಬರಹ ಇಗ್ಗುತ್ತಪ್ಪ ದೇವರು ಏನು ಮಾಡಿಯಾನು?ಹಾಗೆಂದುಕೊಂಡರೂ ಒಮ್ಮೆ ಹೋಗಿಬರಬೇಕು. ಸುಮಾಳಿಗೆ ಲಗ್ನದ ಮುಹೂರ್ತ ಯಾವಾಗ?ಕಂಟಕವಿದ್ದರೆ ಪರಿಹಾರ ಎಲ್ಲವನ್ನು ಹೇಳ್ತಾನೆ ಅವನು. ಸುಮಾಳ ಮದುವೆಯೇ ತನಗಿರುವ ಸದ್ಯದ ಆಸೆ. ಈ ಕಾಡಿಗೆ — ಈ ನಾಡಿಗೆ ಸರ್ವತ್ರ ದೇವನು ಆ ಇಗ್ಗುತ್ತಪ್ಪ. ಆತನೇ ಎಲ್ಲ ಪರಿಹರಿಸುತ್ತಾನೆ ಕಾವೇರಮ್ಮ ಮತ್ತೆ ಹೊರಳಿ ನೋಡಿದಾಗ ಯಾರೂ ಕಾಣಲಿಲ್ಲ. ಅವರೆಲ್ಲ ಬೆಟ್ಟದ ಇಳಿಜಾರಿನಲ್ಲಿ ಇಳಿದು ಮತ್ತೆ ಬೆಟ್ಟ ಹತ್ತಿ ಮೇಲೆ ಹೋಗಿ ಕಾಡಿನ ಹಾದಿಯಲ್ಲಿ ಕಣ್ಮರೆಯಾಗಿದ್ದರು.

ಕಾವೇರಮ್ಮ– ‘ಛೆ ಈ ಹುಡುಗಿ ಇನ್ನೂ ಬರ್ಲಿಲ್ಲ. ಕತ್ಲಗ್ತಾ ಬಂತು’ ಎಂದು ಆತಂಕದಿಂದ ಮಸುಕಾಗುತ್ತಿದ್ದ ಎದುರು ಬೆಟ್ಟ ನೋಡಿದರು. ಕಾಡು ರಸ್ತೆಯಲ್ಲಿ ಯಾವ ಜೀಪು ಕಾಣಿಸಲಿಲ್ಲ. ಆಳು ಜಾನ್ಸನ್ ಹೆಂಡತಿ ಲೂಸಿ, ಆಗಲೇ ದೀಪ ಹಾಕಿ ಮನೆ ಬೆಳಗಿಸಿದ್ದಳು.

*

ಕತ್ತಲಾವರಿಸತೊಡಗಿತ್ತು. ಅಂದಿನ ಚಿತ್ರೀಕರಣ ಮುಗಿಯುತ್ತಿದ್ದಂತೆ ನಿರ್ದೇಶಕ ರಾಣಾ ಪ್ಯಾಕಪ್ ಹೇಳಿದರು. ಉರಿಯುತ್ತಿದ್ದ ಲೈಟ್ಸ್ ಆರಿದವು. ಕಲಾವಿದರು ಮೇಕಪ್ ತೆಗೆಯಲು ಸುರೇಶನ ಟೇಬಲ್‌ಗೆ ದೌಡಾಯಿಸಿದರು.

ಫೋಟೋ ಕೃಪೆ : Gulf news

ಹುಡುಗಿಯರು ಮಾತ್ರ ಇರುವ ಮೇಕಪ್ ನಲ್ಲೇ ವ್ಯಾನು ಹತ್ತಿ ಕುಳಿತರು. ಅವರಿಗೆ ಮೊದಲು ಹೋಟೆಲ್ಲಿಗೆ ಹೋದರೆ ಸಾಕು ಅನ್ನಿಸಿತ್ತು. ಹೀರೋಯಿನ್ ಅನುಷ್ ಚಾವ್ಲಾ ತಡವಾಯಿತೆಂದು ಗೊಣಗಿಕೊಳ್ಳುತ್ತಲೇ ಅಮ್ಮನೊಂದಿಗೆ ಪ್ರೊಡ್ಯೂಸರ್ ಪಾಟೀಲನ ಕಾರಿನ ಬಳಿ ಬಂದಳು. ಅವಳ ಗೊಣಗಾಟಕ್ಕೆ ಕಾರಣವೂ ಇತ್ತು. ಆಕೆಗೆ ಯಾರೋ ಹೇಳಿದ್ದರು. ಸಂಜೆ ಏಳಾದರೆ ಸಾಕು. ಇಡೀ ಮಡಿಕೇರಿಯೇ ಮಲಗಿಬಿಡುತ್ತದೆ. ಅಂಗಡಿಗಳೆಲ್ಲ ಬಾಗಿಲೆಳೆದುಕೊಂಡು ಬಿಡುತ್ತವೆ. ಬಾರ್ ಗಳು ಮಾತ್ರ ಅರ್ಧ ತೆರೆದುಕೊಂಡಿರುತ್ತವೆ ಎಂದು.

ಹಾಗಾಗಿ ಅನುಷ್ ಅವತ್ತು ಪ್ರೊಡ್ಯೂಸರ್ ಜತೆ ಗೋಲ್ಡ್ ಅಂಗಡಿಗೆ ಹೋಗುವುದು ತಪ್ಪಿತು. ಇವತ್ತು ಒಂದು ಜೊತೆ ಬಂಗಾರದ ಓಲೆ ಕೊಡಿಸ್ತೀನಿ ಅಂದಿದ್ದ ಪಾಟೀಲ.
ಎಲ್ಲ ಆದದ್ದು ನಿರ್ದೇಶಕ ರಾಣಾರಿಂದ.ಇವತ್ತು ಮಧ್ಯಾಹ್ನದ ನಂತರ ಅವರು ಹೆಚ್ಚಿನ ಸಮಯವನ್ನು ಆ ಕೂರ್ಗಿ ಹುಡುಗಿ ಸುಮಾ ಅಪ್ಪಚ್ಚು ಜತೆಯೇ ಕಳೆದರು. ಇಲ್ಲದಿದ್ದರೆ ಚಿತ್ರೀಕರಣ ಇನ್ನಷ್ಟು ವೇಗ ಪಡೆದು ಪ್ರೊಡ್ಯೂಸರಿಗೆ ಇನ್ನಷ್ಟು ಫುಟೇಜೂ ಸಿಗುತ್ತಿತ್ತು. ಹಾಗೆಂದು ನಾಯಕಿಯ ತಾಯಿ ರೋಶನಿ ಚಾವ್ಲಾ ನಿರ್ಮಾಪಕನ ಕಿವಿಯೂದಿದಳು.

ಏನಾದರೂ ಮಾಡಿ ಆ ಕೂರ್ಗಿ ಹುಡುಗಿಯನ್ನು ಸಿನಿಮಾಕ್ಕೆ ನಾಟ್ ಓಕೆ ಮಾಡಿಬಿಡಿ. ಇಲ್ಲದಿದ್ರೆ ಈ ತಲೆ ತಿರುಕ ಡೈರೆಕ್ಟ್ರು ಆ ಹುಡುಗಿಗೆ ಹೆಚ್ಚು ಎಕ್ಸ್ ಪೋಜು ಕೊಡ್ತಾ ಹೋದ್ರೆ ನನ್ನ ಮಗಳ ಇಮೇಜ್ ಗತಿಯೇನು? ಎಂದು ರೋಶನಿ ಚಂದೂ ಪಾಟೀಲನ ಹತ್ತಿರ ಖಡಕ್ ಆಗಿ ಹೇಳಿದಾಗ ಆತ ತಲೆ ಕೆಡಿಸಿಕೊಳ್ಳಲೇ ಬೇಕಾಯಿತು.

ಫೋಟೋ ಕೃಪೆ : pinterest

ಕಾರಿನಲ್ಲಿ ಆಗಲೇ ಗಲ್ಲ ಊದಿಸಿಕೊಂಡು ಅನುಷ್ ಚಾವ್ಲಾ ಬಂದು ಕೂತಿದ್ದಳು. ಚಂದೂ ಪಾಟೀಲ ಅವಳನ್ನು ನೋಡಿ ಗಲಿಬಿಲಿಗೊಂಡ. ಎಲ್ಲ ಆದದ್ದು ಈ ಡೈರೆಕ್ಟರ್ ನಿಂದ. ಬೇರೆ ಡೈರೆಕ್ಟರನ್ನು ಹುಡುಕಿಕೊಳ್ಳದೆ ತಾನೇ ತಪ್ಪು ಮಾಡಿದೆ. ಅನುಷ್ ಳ ಮುಂದೆ ಪಾಟೀಲ ಜಂಭ ಕೊಚ್ಚಿಕೊಂಡ.ಚಂದೂ ಪಾಟೀಲನ ಕಾರು ಅನುಷ್ ಮತ್ತು ಆಕೆಯ ಅಮ್ಮ ರೋಶನಿ ಮೇಡಮ್ಮನನ್ನು ಹೊತ್ತುಕೊಂಡು ಮಡಿಕೇರಿ ಕಡೆಗೆ ಹೊರಟಿತು. ಒಮ್ಮೆ ಪ್ಯಾಕಪ್ ಅಂದರೆ ಸಾಕು, ಪ್ರೊಡಕ್ಷನ್ ಮ್ಯಾನೇಜರ್ ಹೊಗೆರಾಮನಿಗೆ ತುಂಬ ಕೆಲಸ. ದಿನದ ಬಾಟಾ ಹಂಚುವುದು.ಊಟ -ತಿಂಡಿ ವ್ಯವಸ್ಥೆ ಮಾಡುತ್ತಿದ್ದ ಹುಡುಗರು ತಟ್ಟೆ, ಲೋಟ, ಟಿಫಿನ್ ಬಾಕ್ಸ್ ಗಳನ್ನೂ ಸರಿಯಾಗಿ ಎತ್ತಿಡುವಂತೆ ನೋಡಿಕೊಳ್ಳುವುದು.ಕೆಮರಾವನ್ನು ಎಚ್ಚರಿಕೆಯಿಂದ ಕಲಿಸಿಕೊಡುವುದು. ರಷಸ್ ಬಾಕ್ಸ್ ಕಡೆ ಗಮನ. ಹೋಗೆ ಅನೇಕ ಕೆಲಸಗಳಲ್ಲಿ ಮಗ್ನನಾದ.

ಎಲ್ಲವನ್ನು ನೋಡುತ್ತ ದೂರದಲ್ಲಿ ಕುಳಿತಿದ್ದ ಸುಮಾ ಹಾಗು ಆಕೆಯ ತಮ್ಮ ಪೂವಯ್ಯ ಮೌನಿಯಾಗಿದ್ದರು. ಅಕ್ಕ ಸುಮಾ ಯಾವತ್ತೂ ಹೀಗಿರಲಿಲ್ಲ. ಕಾಫಿ ತೋಟದ ಮಧ್ಯೆ ಯಾವಾಗಲೂ ಬಂದೂಕು ಹಿಡಿದು ಒಂಟಿಯಾಗಿ ತಿರುಗುತ್ತಿದ್ದ ದಿಟ್ಟೆ ಅವಳು. ಕಾಲೇಜಿನಲ್ಲಿದ್ದಾಗ ತನ್ನನ್ನು ಕೆಣಕಿದ ಹುಡುಗರಿಗೆ ಕೆನ್ನೆ ಊದುವಂತೆ ಹೊಡೆದದ್ದೂ ಉಂಟು. ಹೀಗಾಗಿ ಯಾರೂ ಅವಳ ಸುದ್ದಿಗೆ ಬರುತ್ತಿರಲಿಲ್ಲ.ಆದರೆ ಇವತ್ತು ಮಧ್ಯಾಹ್ನದಿಂದ ಒಂಥರ ಆಗಿದ್ದಾಳೆ. ಸಿನಿಮಾದಲ್ಲಿ ಪಾರ್ಟು ಮಾಡುವ ಆಸಕ್ತಿ ಹೊಂದಿದವಳಿಗೆ ಇಲ್ಲಿ ಸ್ವಾಗತವೇ ಸಿಕ್ಕಿದೆ. ಆ ಸಂತೋಷಕ್ಕೆ ಅಕ್ಕ ಹ್ಯಾಗಿರಬೇಕಿತ್ತೆಂದರೆ ಕೇಕೆ ಹಾಕಿ ಜಿಂಕೆಯಂತೆ ಜಿಗಿಯುವ ಉತ್ಸಾಹದಲ್ಲಿರಬೇಕಾಗಿತ್ತು.ಆದರೆ ಈಗವಳು ಮಧ್ಯಾಹ್ನದಿಂದ ಮಂಕಾಗಿದ್ದಾಳೆ. ಡೈರೆಕ್ಟರ್ ರಾಣಾರ ಜತೆ ಮಾತಾಡಿ ಹೊರ ಬಂದದ್ದಷ್ಟೇ ತಡ, ಆಕೆಯ ಮುಖದಲ್ಲೆನೋ ಮಂಕು ಕವಿದಿದೆ. ಸಿನಿಮಾರಂಗದಲ್ಲಿ ಇನ್ನೂ ಕಾಲಿಟ್ಟಿಲ್ಲ. ಆಗಲೇ ಅಕ್ಕ ಹೀಗಿರುವುದಾದರೆ ಮುಂದೆ ಇನ್ನೇನೋ ಮನೆಗೆ ಹೋಗಿ ಅಮ್ಮನಿಗೆ ಹೇಳಿಬಿಡಬೇಕು. ಸುಮಾ ಅಕ್ಕನಿಗೆ ಸಿನಿಮಾ ಬೇಡ. ಬೇಗ ಮದುವೆ ಮಾಡಿ ಕಳಿಸಿ ಬಿಡೋಣ ಅಂತ.

(ಸೂಚನೆ : ಈ ಕತೆಯೂ ಈಗಾಗಲೇ ಪುಸ್ತಕರೂಪದಲ್ಲಿದ್ದು, ಆಕೃತಿಕನ್ನಡ ಮ್ಯಾಗಝಿನ್ ನಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ. ಇತರೆ ಯಾರು ಕೂಡ ಈ ಕತೆಯನ್ನು ಪ್ರಕಟಿಸುವ ಹಾಗಿಲ್ಲ.ಹಾಗೂ ಕದಿಯುವಂತಿಲ್ಲ.)

ಮತ್ತೆ ಮುಂದಿನ ಶನಿವಾರ ಓದಿರಿ. ಇದೊಂದು ಕುತೂಹಲಕಾರಿ ಕತೆ. ತಪ್ಪದೆ ಓದಿರಿ. ]


  • ಹೂಲಿಶೇಖರ್  (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು) 

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW