ಒಂದು ಮದುವೆ ಮುರಿಯಲು ನೂರಾರು ಕಾರಣಗಳು ಬೇಕಿಲ್ಲ. ಒಂದು ಕಾರಣ ಸಿಕ್ಕರೂ ಸಾಕು ಮದುವೆ ಮುರಿದು ಬೀಳುತ್ತದೆ. ಅದೇ ನೈಜ್ಯಾಧರಿತ ಘಟನೆಯ ಎಳೆಯನ್ನು ಇಟ್ಟುಕೊಂಡು ಬರೆದ ಬರಹವಿದು ಮತ್ತು ಅಂಧಕಾರವನ್ನು ಹೋಗಲಾಡಿಸುವ ಸೂರ್ತಿಯ ಕತೆ . ಮುಂದೆ ಓದಿ…
“ನೀವು ಸೇರಿದ್ದು ಎಂ.ಎನ್ ಎಂಬುವವರ ಅಕಾಲ ಮೃತ್ಯುವಿನಿಂದ ಖಾಲಿಯಾದ ಹುದ್ದೆಗೆ” ಎಂದರು ಅಂದಿನ ವಿಭಾಗದ ಹಿರಿಯ (ಇಂದಿನ ಪ್ರಾಂಶುಪಾಲರು).
“ಅಲ್ಲಿ ಆ ಜಾಗೆಯಲ್ಲಿ ಕುಳಿತುಕೊಳ್ಳಬೇಡಿ. ಸ್ವಲ್ಪ ಸರಿಸಿ ಈ ಕಡೆ ಕುಳಿತುಕೊಳ್ಳಿ, ಎಂ.ಎನ್ ಕೂತಿದ್ದ ಜಾಗೆ ಇದು” ಎಂದರು ಇನ್ನೊಬ್ಬರು.
ನಾನು ಅದೇ ಜಾಗದಲ್ಲಿ ಕದಲದೆ ಕುಳಿತೆ. ಕೆಲವು ವರುಷದ ನಂತರ ವಿಭಾಗದ ಗೋಡೆಯನ್ನು ನವೀಕರಿಸುವವರೆಗೂ ನನ್ನ ಸ್ಥಳ ಅದುವೇ ಆಗಿತ್ತು.
ಈ ಸಂಸ್ಥೆ ಸೇರಿದಾಗಿನಿಂದ, ಅಂದರೆ ೨೦೦೪ ರಲ್ಲಿ ತಂದೆ- ತಾಯಿ ಕುಟುಂಬದವರು ಮದುವೆಯಾಗಲು ಒತ್ತಾಯ ಮಾಡ ತೊಡಗಿದರು. ಕಾರಣ ಊರಲ್ಲಿ “ಅವನು ಅಲ್ಲಿ ಯಾರ್ ಯಾರ್ ಜೊತೆ ಇದ್ದಾನೋ?” ಎಂಬ ಸೂಪರ್ ಹಿಟ್ ಡಯಲೋಗುಗಳು!!!
ಅವರಲ್ಲಿ ಶರಣಾಗತನಾಗಿ ಹೇಳಿದೆ, ‘ನೀವು ನೋಡಿ ತೋರಿದ ಹುಡುಗಿಯನ್ನೇ ಮದುವೆಯಾಗುತ್ತೀನಿ’ ಎಂದು.
ಒಂದು ಹೆಣ್ಣನ್ನು ನೋಡಿದರು, ಅವರಿಗೆಲ್ಲಾ ಇಷ್ಟವಾಯಿತು. “ಸರಿ ನಿಶ್ಚಿತಾರ್ಥ ಇಟ್ಟುಕೊಳ್ಳಿ ಅಲ್ಲಿ ಹುಡುಗೀನ ನೋಡ್ತಿನಿ”
ನಿಶ್ಚಿತಾರ್ಥ ದಿನ ಡಿಸೆಂಬರ್ ೫ ಪ್ರಪ್ರಥಮವಾಗಿ ಹೆಣ್ಣು ನೋಡೋದು ಅವಳನ್ನೇ ವರಿಸಬೇಕು ಎಂದು ನಾನು ಎಂದುಕೊಂಡೆ. ಯಾಕೆ ನೂರಾರು ಹುಡುಗಿ ನೋಡಕ್ಕೆ ಹೋಗೋದು? ಆವಾಗ ಅಪರಿಚಿತನಾಗಿ ಅವರ ಮನೆಯಲ್ಲಿ ಕುಟುಂಬ ಸಹಿತ ತಿನ್ನೋದು … ನನಗಿಷ್ಟವಿರಲಿಲ್ಲ.
ಮರೆಯಲಾಗದ ದಿನ…
ಬೆಳಗ್ಗೆ ನಾನು, ತಂದೆ-ತಾಯಿ, ತಂಗಿ-ಭಾವ ಹಾಗೂ ೮ ತಿಂಗಳ ಅವರ ಮಗು, ನನ್ನ ಅಂಕಲ್ ರವಿಮಾಮ ಹಾಗೂ ಅವರ ಪತ್ನಿ ಎಲ್ಲರೂ- ಅಂಬಾಸೆಡರ್ ಕಾರ್ ನಲ್ಲಿ ನನ್ನ ನಿಶ್ಚಿತಾರ್ಥಕ್ಕೆ ಪುತ್ತೂರಿನಿಂದ, ಕೇರಳಾದ ತಳಿಪ್ಪರಂಬಾ ಗೆ ಮುಂಜಾನೆ ೬.೩೦ ಕ್ಕೆ ಹೊರಟೆವು.
೧೧.೦೦ ಗಂಟೆಗೆ ನಿಶ್ಚಿತಾರ್ಥ.
೧೦.೪೫ ಗೆ ನಾವು ತಳಿಪ್ಪರಂಬಾ ತಲುಪಲಿದ್ದೆವು.
೧೦.೩೫ ಕ್ಕೆ ….
ಕವಲು ದಾರಿಯಿಂದ ಮುಖ್ಯ ರಸ್ತೆಗೆ ಬಂದು ನಮಗೆ ಅಡ್ಡವಾಗಿ, ಮಣ್ಣು ಹೊತ್ತ ಒಂದು ಟಿಪ್ಪರ್ ಲಾರಿ ನಿಂತೇ ಬಿಡ್ತು.
ಫೋಟೋ ಕೃಪೆ : The Tribune india
ಆ ಲಾರಿಯ ಒಂದು ಬದಿ,ಅಂದರೆ ಮುಂದಿನ ಹಾಗೂ ಹಿಂದಿನ ಚಕ್ರ ನಮಗೆ ಅಭಿಮುಖವಾಗಿತ್ತು.
ಬ್ರೇಕ್ ಹಿಡಿಯಲು ನಮ್ಮ ಚಾಲಕ/ಡ್ರೈವರ್ ಯೋಚಿಸುವ ಮೊದಲೇ , ಟಿಪ್ಪರ್ ನ ಹಿಂದಿನ ಚಕ್ರಕ್ಕೆ ನಮ್ಮ ಕಾರು ಹೊಡೆದು ನಜ್ಜು ಗುಜ್ಜಾಗಿ, ಬಾಗಿಲು ಹೊಡೆದು ನಾನು ರಸ್ತೆಗೆ ಬಿದ್ದಿದ್ದೆ.
ಕಾರಿನಲ್ಲಿ ಉಳಿದವರೆಲ್ಲಾ ರಕ್ತದ ಚಿಂಗಾರಿಯನ್ನು ಪುಟಿಯುತ್ತಾ ಸ್ಮೃತಿ ತಪ್ಪಿದ್ದರು.
ಏನು ಮಾಡಬೇಕೆಂದು ತೋಚದೆ ಅಸಹಾಯಕನಾದ
ನಾನು ”ಅಣ್ಣ, ತಮ್ಮ೦ದಿರೆ … ಯಾರಾದರೂ ಬಂದು ನನ್ನ ಕುಟುಂಬವನ್ನ ರಕ್ಷಿಸಿ …” ಎಂದು ಆಕಾಶ ಭೂಮಿ ಒಂದಾಗುವ ಹಾಗೆ ಅಂಗಲಾಚಿ ಕಿರುಚಿದೆ.
ಪಕ್ಕದಲ್ಲಿದ್ದ ಮಸೀದಿಯಿಂದ ಶ್ವೇತ ವಸ್ತೃ ತೊಟ್ಟ ಗಂಧರ್ವರಂತಹಾ ಮನುಷ್ಯರು(ಮುಸಲ್ಮಾನ ಮಿತ್ರರು) ಶರವೇಗದಿಂದ ಬಂದು, ಚಾಲಕ ಹಾಗೂ ನನ್ನ ಕುಟುಂಬದ ಒಬ್ಬೊಬ್ಬರನ್ನು ನಜ್ಜು ಗುಜ್ಜಾದ ವಾಹನದಿಂದ ಸಾವದಾನವಾಗಿ ಬಿಡಿಸಿ ತೆಗೆದು, ನನ್ನನ್ನು ಪಕ್ಕದ ಒಂದು STD booth ನಲ್ಲಿ ಕುಳ್ಳಿರಿಸಿ, ತಮ್ಮ ತಮ್ಮ ಕಾರಿನಲ್ಲಿ ಆ ಊರಿನ ಬೇರೆ ಬೇರೆ ಆಸ್ಪತ್ರೆಗೆ ಸೇರಿಸಿದರು. ನಂತರ ಆ ಆಸ್ಪತ್ರೆಯಿಂದ ನನಗೆ STD Booth ಗೆ ಕರೆ ಮಾಡಿ ತಿಳಿಸಿದರು.
ಆ ಊರಿನ ಜನರ ಮಾನವೀಯತೆಯ ಮು೦ದೆ ನಾನು ಇ೦ದಿಗೂ ಚಿರಋಣಿ…
ಈಗ
ನಿಮ್ಮಲ್ಲಿರುವ ಪ್ರಶ್ನೆ….
ಈ ಅಫಘಾತದಲ್ಲಿ ಎಲ್ಲರೂ ಬದುಕಿ ಉಳಿದರೆ?
ಆ ನಿಶ್ಚಿತಾರ್ಥ ಏನಾಯಿತು?
ಫೋಟೋ ಕೃಪೆ : Dwn
ಅಪ್ಪನ ಸ್ಥಿತಿ ತೀರಾ ಗಂಭೀರವಾಗಿತ್ತು. ದೇಹಮಾಸಕಲ ನೆತ್ತರಿನಿಂದ ಸ್ನಾನವಾಗಿತ್ತು. ವೈದ್ಯರು ನನಗೆ ಧೈರ್ಯವಾಗಿರಲು ಸಮಾಧಾನ ಮಾಡಿದರು. ಅಮ್ಮ,ತಂಗಿ… ಇವರನೆಲ್ಲಾ ಬೇರೆ ಆಸ್ಪತ್ರೆಯಿಂದ , ಅಪ್ಪ ಇರುವ ಆಸ್ಪತ್ರೆಗೆ ತರಲು ಪೋಲಿಸರಲ್ಲಿ ಕೇಳಿಕೊಳ್ಳುತ್ತಿದ್ದಂತೆ ದೊಡ್ಡಪ್ಪ (ತಂದೆಯ ಅಣ್ಣ) ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದರು.
ಅಪ್ಪನ ಬಳಿ ಬಂದು “ತಮ್ಮಾ…ತಮ್ಮಾ…”ಅಂತ ಕಿವಿಯಲ್ಲಿ ಗೊಣುಗುತ್ತಾ, ಸ್ಮೃತಿ ತಪ್ಪಿದ ದೇಹವನ್ನು ಅಲುಗಾಡಿಸಿದಾಗ , ಅಪ್ಪ ಮೆಲ್ಲನೆ ಕಣ್ಣು ತೆರೆದರು. ದೊಡ್ಡಪ್ಪ ಕಣ್ಣೀರಿನಿಂದ ನಗುತ್ತಾ ವೈದ್ಯರ ಕಡೆ ನೋಡಿದರು.
ವೈದ್ಯರು ಬಂದು ಚುಚ್ಚುಮದ್ದು ಹಾಕುತ್ತಿದ್ದಾಗ, ಅಪ್ಪನಿಗೆ ವಿಷಯ ಗೃಹಿಕೆಯಾಯಿತು.
ಅಪ್ಪ ನನ್ನನ್ನು ನೋಡಿ “ಏಯ್ ನೀನು ಇಲ್ಲಿ?…
ಅಲ್ಲಿ ನಿಶ್ಚಿತಾರ್ಥಕ್ಕೆ ಎಲ್ಲರೂ ಕಾಯುತ್ತಿದ್ದಾರಲ್ಲಾ???
ಹೋಗು..,” ರಕ್ತದ ಮುಗದಿಂದ ಅಪ್ಪ ಕೇಳಿದರು.
ನಾನು ” ಅಪಘಾತವಾಗಿ ನೀವು,ಅಮ್ಮ, ತಂಗಿ, ರವಿಮಾಮ, ಆಂಟಿ ಎಲ್ಲರೂ ಚೇತರಿಸದೆ ನನಗೆ ನಿಶ್ಚಿತಾರ್ಥನೂ ಬೇಡ ಕಿಷ್ಚಿತನೂ ಬೇಡ. ಮತ್ತೆ ನಿಶ್ಚಿತಾರ್ಥದ ಮೊದಲೇ ಅಪಘಾತವಾದ್ರಿಂದ ಆ ಹುಡುಗಿ…”ಎನ್ನುತ್ತಿದ್ದಂತೆ “ಎದ್ದೇಳಕ್ಕೆ ಆಗುತ್ತಿಲ್ಲ ನನಗೆ, ಇಲ್ಲಾಂದ್ರೆ ನಿನ್ನ ಹಂಗೇ ಒದೀತ್ತಿದ್ದೆ ಶತಮೂರ್ಖ. ಅವಳೇನು ಮಾಡಿದ್ದಾಳೆಂದು ಹೇಳ್ತಿಯಾ? ಅವಳ ಜೊತೆಯೇ ನಿಶ್ಚಿತಾರ್ಥ ಎಂದು ಅವರ ತಂದೆಗೆ ನಾನು ಕೊಟ್ಟ ಮಾತಿಗೆ ಬೆಲೆ ಇಲ್ಲವೇ? ಅಣ್ಣಾ…”
ನನಗೆ ಉತ್ತರಿಸುತ್ತಾ ದೊಡ್ಡಪ್ಪನ ಕೈ ಹಿಡಿದು “ಅಣ್ಣಾ … ನೀನು ಹೇಗಾದರೂ ಮಾಡಿ ಇವನನ್ನು ಎಳ್ಕೋಂಡು ಹೋಗಿ , ನಿಶ್ಚಿತಾರ್ಥ ಮಾಡಿಸು, ನಿಶ್ಚಿತಾರ್ಥ ನಂತರ ಹುಡುಗಿ ಕಡೆಯವರಿಗೆ ಈ ವಿಷಯ ತಿಳ್ಸು” ಅನ್ನೋದೇ ತಡ…
ದೊಡ್ಡಪ್ಪ ನನ್ನನ್ನು ದರ ದರನೆ ಎಳೆದು ಆಟೋದಲ್ಲಿ ಎತ್ತಾಕಿ, ದೊಡ್ಡಪ್ಪ ನನ್ನ ಒಬ್ಬ ಕ್ರಿಮಿನಲ್ ತರಹ ಹಾಲ್ ಗೆ ೧೧.೫೫ ಕ್ಕೆ (ಮುಹೂರ್ತ ತಪ್ಪಿದ)ಸಮಯಕ್ಕೆ ಕರೆತಂದು “ಇವನ ತಂದೆ ತಾಯಿ ಬರೋ ವಾಹನ ಹಾಳಾಗಿದೆ.ಇನ್ನೇನು ಬರ್ತಾ ಇದ್ದಾರೆ. ನಿಶ್ಚಿತಾರ್ಥ ಅವನಪ್ಪನಿಗಿಂತ ಹಿರಿಯನಾದ ನನ್ನ ಸಾನಿಧ್ಯದಲ್ಲಿ ಮಾಡುತ್ತೇನೆ.” ಎಂದರು.
ಹುಡುಗಿಯ ತಂದೆ ಮಾಜಿ ಸೈನಿಕರಾಗಿದ್ದರಿಂದ ದೊಡ್ಡಪ್ಪ ಅವರ ಕಿವಿಯಲ್ಲಿ ವಿಷಯ ಹೇಳಿದರು.
ಫೋಟೋ ಕೃಪೆ : Pinterest
ನಿಶ್ಚಿತಾರ್ಥ ನಡೆಯುತ್ತಿರುವುದು ನನಗೆ ತಿಳಿಯುತ್ತಲೇ ಇರಲಿಲ್ಲ. ಒಂದು ನಿರ್ಜೀವ ಮರದ ತರಹ ನಾನು ದೊಡ್ಡಪ್ಪ ಹೇಳಿದಂಗೆ ಮಾಡುತ್ತಲೇ ಹೋದೆ. ಸಭೆಗೆ ನಮಸ್ಕರಿಸ ಬೇಕಾದಲ್ಲಿ ನಮಸ್ಕರಿಸಿದೆ,
ಉಂಗುರ ಬದಲಾಯಿಸಿ ನಿಶ್ಚಿತಾರ್ಥ ಮಾಡಿಯೇ ಬಿಟ್ಟರು.
ನಮ್ಮ ನಿಶ್ಚಿತಾರ್ಥ-ಮದುವೆಗಳು ತುಂಬಾ ಸರಳ, ಅಲ್ಲಿ ಹುಡುಗನ ಹುಡುಗಿಯ ತಂದೆ/ಮಾವ ಇವರೇ ಎಲ್ಲಾ ತೀರ್ಮಾನ ತೆಗೆದುಕೊಳ್ಳುವುದು. ವರದಕ್ಷಿಣೆ ಇಲ್ಲ. ಯಾವುದೇ ಪುರೋಹಿತ-ಬ್ರಾಹ್ಮಣರೂ ಇಲ್ಲ. ಬರೇ ಕುಟುಂಬದವರೇ…
ನಾನು ಸಿಡಿಲು ಬಡಿದವನಂತಿದ್ದೆ, ಅವಳು ನಗುತ್ತಾ ಇದ್ದಳು. ಊಟ ಮುಂದೆ ತಂದಿಟ್ಟದ್ದೂ ತಿನ್ನದೇ ಇದ್ದಾಗ ಹುಡುಗಿ ಕೇಳಿದಳು. “ಆವಾಗದಿಂದ ಗಮನಿಸುತ್ತಿದ್ದೇನೆ…. ನಿಮಗೆ ಈ ಮದುವೆ ಇಷ್ಟವಿಲ್ಲವೇ?”
ಫೋಟೋ ಕೃಪೆ : Pinterest
ಅವಳ ಕೈ ಮದರಂಗಿಯಿಂದ ಕೆಂಬಣ್ಣವಾಗಿದ್ದಾಗ ನನ್ನ ಕೈಯೂ ಕಮ್ಮಿ ಇರಲಿಲ್ಲ. ಅಪ್ಪನ ರಕ್ತದ ಕೆಂಬಣ್ಣ ಮಂದ ಮಂದವಾಗಿ ಇತ್ತು. ಅಪ್ಪನ ರಕ್ತದಿಂದ ಕೂಡಿದ ಆ ಕೈಗಳು ನನ್ನ ಕೈಗಳೇ ಆಲ್ಲ ಎನ್ನುತ್ತಿತ್ತು ಮನ, ಅದಕ್ಕೆ ಆಜ್ಞಾಪಿಸುವ ನರಗಳು ಮೆದುಳುಗಳೂ ಕೆಲಸ ಮಾಡುತ್ತಿರಲಿಲ್ಲ.
ನನ್ನ ಕೈ ನೋಡಿದ ಅವಳು ಏನೋ ಕೇಳಲು ನೋಡುತ್ತಿದ್ದಂತೆ…ದೊಡ್ಡಪ್ಪ ಅವಳನ್ನು ಬದಿಗೆ ಕರೆದು ವಿಷಯ ಹೇಳಿದರು. ನಂತರ ಅವಳೂ ಏನೂ ತಿನ್ನಲಿಲ್ಲ.
ಕಲ್ಲು ಬಂಡೆಯ ತರಹ ಇದ್ದ ನನಗೆ ಮತ್ತೆ ಜೀವಬಂದಂಗಾಗಿದ್ದು ಆಸ್ಪತ್ರೆಯಲ್ಲಿ ಅಪ್ಪ ಶಸ್ತ್ರಚಿಕಿತ್ಸೆಯಿಂದ ಹೊರ ಬಂದಾಗ…. ಅಮ್ಮ, ತಂಗಿ, ರವಿಮಾಮ , ಭಾವ ಎಲ್ಲರೂ ಸಂಜೆಯೊಳಗೆ ಒಂದೇ ಆಸ್ಪತ್ರೆಯಲ್ಲಾದರು.
ಅವಳೂ ಅವಳ ತಂದೆಯೂ ಸಂಜೆ ಆಸ್ಪತ್ರೆಗೆ ಬಂದರು. ಅವಳ ಕೈಯಲ್ಲಿ ಒಂದು ಬ್ಯಾಗು ಇತ್ತು.
” ನೀವು ನಾನು ಕೊನೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಿಲ್ಲ” ಎಂದು ನನ್ನ ಕಿವಿಯಲ್ಲಿ ಗೊಣಗಿದಳು. ನಾನು ಉತ್ತರ ಕೊಡುವ ಮೊದಲೇ… ನನ್ನಪ್ಪ ಮಲಿಗಿದಲ್ಲಿಂದ ಅವಳನ್ನು ಹತ್ತಿರ ಕರೆದು”ಮಗಳೇ ….ನನಗೆ ಇವನ ಅಮ್ಮನಿಗೆ ಬರಲಾಗಲಿಲ್ಲ. ಎಲ್ಲವೂ ಒಳ್ಳೆಯದಾಗುತ್ತೆ” ಎಂದರು.
ಅವಳಪ್ಪ ಅಂದರು “ನಿಮಗೆ ಏನಾದರೂ ನನ್ನ ಮಗಳನ್ನು ಸೊಸೆಯಾಗಿ ಮಾಡಲು ಅನಾನುಕೂಲವಿದೆಯೇ. ಯಾಕೆಂದರೆ….”
ಅಪ್ಪ ಅಂದರು “ಹಾಂ ಹೌದು, ಖಂಡಿತವಾಗಿ ಅನಾನುಕೂಲವಿದೆ. ಈ ರೋಗಿಗಳಿರುವ ಆಸ್ಪತ್ರೆಯಲ್ಲಿ ಬೇಡ. ಎಲ್ಲರಿಗೂ ರಜೆ ಇರುವ ದಿನ, ಎಲ್ಲರಿಗೂ ಬಂದು ಹೋಗಲು ಅನುಕೂಲವೂ – ಖುಷಿಯಾಗಲೂ ಇರುವ ಒಂದು ಒಳ್ಳೆಯ ಸ್ಥಳ -ಸಮಯ ನೀವೇ ನೋಡಿ. ಆವತ್ತು ಅವಳನ್ನು ಸಂಪೂರ್ಣ ಸೊಸೆಯಾಗಿ ಕರೆದುಕೊಂಡು ಹೋಗಲು ಮಾತ್ರ ನಮಗೆ ಅನುಕೂಲ ಮಾಡಿ ಕೊಡಿ. ಈ ಸ್ಥಿತಿಯಲ್ಲಿ , ಈ ಸನ್ನಿವೇಶದಲ್ಲಿ ಬೇಡ” ಎಂದು ಉತ್ತರಿಸಿದಾಗ….
ಅವಳ ಹಾಗೂ ಅವಳ ಅಪ್ಪನ ಕಣ್ಣಲ್ಲಿ ನೀರೂರಿದ್ದು ನನಗೆ ಈಗಲೂ ನೆನಪಾಗುತ್ತಿದೆ.
ಕಣ್ಣೀರನ್ನು ಒರೆಸುತ್ತಾ “ನೋಡಿ… ಇವಳು ಇವತ್ತು ಸಂಶೋಧನಾ ಕೆಲಸ (Research work) ಗೆ ರಾತ್ರಿ ಟ್ರೈನಿಗೆ ತಿರುವನಂತಪುರಂ ಹೋಗುತ್ತಿದ್ದಾಳೆ. ಬಿಟ್ಟು ಬರುತ್ತೇನೆ.” ಎನ್ನುತ್ತಾ ಹೊರಟರು.
ರಾತ್ರಿ ಎಲ್ಲರಿಗೂ ಊಟವನ್ನು ತೆಗೆದುಕೊಂಡು ಬರುವಾಗ ಒಂದು ಕರೆ ಬಂತು…
” ನಮಸ್ಕಾರ… ನಾನು ನಿಮಗೆ ನಿಶ್ಚಿತಾರ್ಥವಾದ ಹುಡುಗಿಯ ಸಂಶೋಧನಾ ಮಾರ್ಗದರ್ಶಿ ಗುರುಗಳು. ಅವಳು ನನ್ನಲ್ಲಿ ಇವತ್ತು ನಡೆದ ವಿಷಯ ಹೇಳಿ, ನಿಮಗೆ ಇನ್ನೊಂದು ವಿಷಯ ತಿಳಿಸಬೇಕೆಂದು ಹೇಳಿದರು ಮಾತನಾಡಬಹುದೇ?”
” ಸರಿ…ಮಾತನಾಡಿ ಸಾರ್”
ಫೋಟೋ ಕೃಪೆ : Khmer Times
” ನೋಡಪ್ಪಾ ಅವಳು ಮಾಡುವ ಸಂಶೋಧನೆ Antioxidants ಮೇಲೆ. ಅದು ಗಂಧಕದ ಒಂದು ಉಪ ಉತ್ಪನ್ನವಾದ thiozole ನಲ್ಲಿ. ಅದರಿಂದ ಈಗಿರುವ ಅವಳ ಕೂದಲು ನಾಳೆ ಇಲ್ಲದಾಗುವ ಸಂಭವನೀಯತೆ ಇದೆ. ಇದನ್ನು ನಾನು ಅವಳಿಗೆ ಈ ಸಂಶೋಧನೆಯ ಮೊದಲ ದಿನ ಹೇಳಿದ್ದೆ. ಅವಳು ನನ್ನ ಮಾತು ಕೇಳಲಿಲ್ಲ. ಇಂದು ನನ್ನಲ್ಲಿ, ನಿಮ್ಮತ್ರ ಇದು ತಿಳಿಸಲು ಹೇಳಿದಳು.”
” ಸಾರ್….ಏನೇ ಆದರೂ ಅವಳಿರುತ್ತಾಳಲ್ಲಾ ಸಾರ್… ನನಗದು ಸಾಕು” ಎಂದೆ.
“ಮದುವೆಯ ನಂತರ ಅವಳಿಗೆ ನೀವು ಸಂಶೋಧನೆಗೆ ಅನುವು ಮಾಡಿ ಕೊಡುವಿರೋ ಗೊತ್ತಿಲ್ಲ. ಯಾಕೆಂದರೆ ನನ್ನ ಎಲ್ಲಾ ಮಹಿಳಾ ಸಂಶೋಧನಾ -ವಿದ್ಯಾರ್ಥಿಗಳು ಮದುವೆಯ ನಂತರ ಬಿಟ್ಟು ಹೋದವರೇ ಜಾಸ್ತಿ….”
” ಅದಕ್ಕೆ ಕಾಲವೇ ಉತ್ತರ ಕೊಡಬೇಕು” ಎಂದೆ.
ಅವಳನ್ನೇ ಮದುವೆಯಾದೆ,
ಮದುವೆಯಾದ ಮರುದಿನ ಬೆಂಗಳೂರಿಗೆ ಕರೆದುಕೊಂಡು ಬಂದು, ಮಿತ್ರರಿಗೆ ಔತಣಕೂಟ ಕೊಟ್ಟು. ಅಂದೇ ರಾತ್ರಿ ಅವಳನ್ನು ಸಂಶೋಧನಾ ಕೆಲಸಕ್ಕೆ ತಿರುವನಂತಪುರಂ ಕಳುಹಿಸಿದೆ.
ಸಂಶೋಧನೆ ಮುಗಿಸಿ ಪದವಿ ಪಡೆಯುವ ದಿನ ನಾನೂ ತಿರುವನಂತಪುರಂ ಹೋಗಿದ್ದೆ. ನಾನು ಒಂದು ಬದಿಯಲ್ಲಿ ಕುಳಿತು ಅವಳ ಉಪನ್ಯಾಸ ಕೇಳುತ್ತಾ ಅವಳ ತಂದೆಯೊಂದಿಗೆ ಕೂತಿದ್ದೆ. ಅವಳು ಉಪನ್ಯಾಸ ಮಂಡಿಸಿದ ನಂತರ, ಪ್ರಶ್ನೋತ್ತರ ಕಾರ್ಯಕ್ರಮ ಮುಗಿಯಿತು. ಹಿಂದಿನಿಂದ ನನ್ನ ತಲೆ ಸವರುತ್ತಾ ” ಧನ್ಯವಾದಗಳು… ಕಾಲ ನನಗೆ ಉತ್ತರ ಕೊಟ್ಟಿತು ಮಗು” ಎಂದು ಕೂದಲೆಲ್ಲಾ ಹಣ್ಣಾದ ಅವಳ ಮಾರ್ಗದರ್ಶಿ ಉಪನ್ಯಾಸಕ ಗುರುಗಳು ನನ್ನ ಬಳಿ ಬಂದು ಹೇಳಿದಾಗ…ನಾನು ಗದ್ಗದನಾಗಿದ್ದೆ.
ಹದಿನೈದು ವರುಷದಿಂದ ಈಗಲೂ ಜೊತೆಯಾಗಿ ಇದ್ದೇವೆ…
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು ವಿಜಯಾ ಕಾಲೇಜು ಬೆಂಗಳೂರು)