ಕೌದಿಗಳ ದೊರೆಸಾನಿ ಗಂಗೂಬಾಯಿ ದೇಸಾಯಿ ಅವರ ಶ್ರಮದ ಸುತ್ತ ಒಂದು ಕಿರು ಲೇಖನ ಮೂಲಕ ಅವರಿಗೊಂದು ಸಲಾಂ. ಕೌದಿ ನಮ್ಮ ಕಲೆ. ಉಳಿಸೋಣ, ಬೆಳೆಸೋಣ…
ನಗರದ ಜನರಿಗೆ ಕರ್ಲಾನ್, ಬ್ಯಾಂಕೆಟ್ ಗಳು ಬೆಚ್ಚಗಿನ ಅಪ್ಪುಗೆ ನೀಡಿದರೆ, ಗ್ರಾಮೀಣ ಜನರಿಗೆ ಅದರಲ್ಲೂ ಉತ್ತರಕರ್ನಾಟಕದ ಮಂದಿಗೆ ಸುಖದ ನಿದ್ದೆಗೆ ಕೌದಿಯೇ ಎಲ್ಲಾ.ಅಲ್ಲಿ ಗಾದಿಯ ಬಳಕೆ ಅಪರೂಪ. ಕೆಳಗೆ ಜಮಖಾನ, ಮೇಲೆ ಕೌದಿ ಇದ್ದರೇ ಎಂತಹ ಚಳಿಯು ಓಡಿ ಹೋಗುತ್ತದೆ ಎನ್ನುವುದು ಅಲ್ಲಿನ ಜನರ ಮಾತು.
ಬಟ್ಟೆಗಳ ತುಂಡನ್ನು ಹಚ್ಚಿದ ಮಾತ್ರಕ್ಕೆ ಕೌದಿ ಬಡವರ ಹೊದಿಕೆ ಎನ್ನುವ ಹಾಗಿಲ್ಲ, ಶ್ರೀಮಂತರ ಮನೆಯಲ್ಲೂ ಬಳಸಲಾಗುತ್ತದೆ. ನಾನು ದೊಡ್ಡಮ್ಮನ ಊರಿಗೆ ಹೋದಾಗಲೆಲ್ಲ ದೆವ್ವ, ಭೂತಗಳ ಕತೆ ಕೇಳುವ ಹುಚ್ಚು , ಭಯವಾದಾಗ ಇದೇ ಕೌದಿಯೊಳಗೆ ಮುಖ ತೂರಿಸಿಕೊಂಡು ಮಲಗುತ್ತಿದ್ದೆ. ಕೌದಿಯೊಳಕ್ಕೆ ಮುಖ ಇಟ್ಟರೆ ಹೊರಗಿನ ಪ್ರಪಂಚವನ್ನೇ ಮರೆಸಿ ಬಿಡುತ್ತದೆ. ಅಷ್ಟು ಬೆಚ್ಚಗಿನ ಅಪ್ಪುಗೆ ಕೊಡುವ ಶಕ್ತಿ ಅದಕಿದೆ. ಕೌದಿಯ ವಿನ್ಯಾಸವೇ ಸುಂದರ. ಎಲ್ಲರಿಗೂ ಕೌದಿ ಹೊಲೆಯಲು ಬರುವುದಿಲ್ಲ. ನಾನು ಕೂಡಾ ಹೊಲೆಯಲು ಸಾಕಷ್ಟು ಪ್ರಯತ್ನಿಸಿ, ವಿಫಲಳೂ ಆಗಿದ್ದೇನೆ. ದೊಡ್ಡಮ್ಮನ ಮಾತಿನ ಪ್ರಕಾರ ಕೌದಿ ಹೊಲೆಯುವುದು ಎಲ್ಲರಿಗೂ ಆಗಿಬರುವುದಿಲ್ಲ ಎನ್ನುವ ಅಂತೇ ಕತೆಗಳ ಕತೆಗಳಿವೆ. ಹಾಗಾಗಿ ನನಗೆ ಬೇಕಾದಾಗಲೆಲ್ಲ ದೊಡ್ಡಮ್ಮನೆ ಕೌದಿ ಹೊಲೆದು ಕೊಡುತ್ತಿದ್ದರು.

ಕೌದಿ ನನ್ನ ದೊಡ್ಡಮ್ಮ,ಅಜ್ಜಿಯ ಕಾಲಕ್ಕೆ ಮುಗಿಯಿತು ಎಂದುಕೊಂಡಿದ್ದೆ. ಆದರೆ ಸುಧಾಮೂರ್ತಿ ಅವರು ‘ಕೌನ್ ಬನೇಗಾ ಕರೋಡ್ ಪತಿ’ ಯಲ್ಲಿ ಭಾಗವಹಿಸಿದ್ದಾಗ ಅಮಿತಾಬ್ ಬಚ್ಚನ್ ಅವರಿಗೆ ಕೌದಿಯನ್ನು ಉಡುಗೊರೆಯನ್ನಾಗಿ ನೀಡಿ, ಗ್ರಾಮೀಣ ಪ್ರದೇಶದ ಕಲೆಯನ್ನು ಪಸರಿಸುವಂತೆ ಮಾಡಿದರು. ಕೌದಿ ನಶಿಸಿತು ಎಂದುಕೊಂಡವಳಿಗೆ ಕೌದಿ ಬೆಳವಣಿಗೆ ಕಂಡಿತು.

ಫೋಟೋ ಕೃಪೆ : prajavani
ಕೌದಿ ಕಲೆಯ ಉಳುವಿಗಾಗಿ ಸಾಕಷ್ಟು ಮಹಿಳೆಯರು ಕೈ ಜೋಡಿಸಿದ್ದಾರೆ, ಅವರಲ್ಲಿ ಗಂಗೂಬಾಯಿ ದೇಸಾಯಿ ಕೂಡಾ ಒಬ್ಬರು. ಅಳಿವಿನಚ್ಚಿನಲ್ಲಿದ್ದ ಕೌದಿಯನ್ನು ತಾವು ಕಲಿತದ್ದಷ್ಟೇ ಅಲ್ಲ, ಆಸಕ್ತರಿಗೆ ಹೇಳಿಕೊಟ್ಟು ಗ್ರಾಮೀಣ ದೇಸಿ ಕಲೆಯನ್ನು ಇನ್ನಷ್ಟು ಪ್ರೀತಿಸುವಂತೆ ಮಾಡಿದ್ದಾರೆ. ಅವರ ಅಂಗವೈಕಲ್ಯ ಶಾಲೆಗೆ ಅಡ್ಡಿ ಮಾಡಿತ್ತಾದರೂ ಅವರ ಸೃಜನಶೀಲ ಕಲೆಗಲ್ಲ.ತಮ್ಮ ಹದಿಮೂರನೇಯ ವಯಸ್ಸಿನಲ್ಲಿ ಕೌದಿಯ ನಂಟು ಹತ್ತಿಸಿಕೊಂಡ ಅವರು ಸುಮಾರು ೫೦೦ಕ್ಕೂ ಹೆಚ್ಚು ಕೌದಿಗಳು ಅವರ ಕೈಯಲ್ಲಿ ಅರಳಿವೆ. ದಿನಗಂಟಲೇ ಕೂತು ಬಟ್ಟೆಯ ತುಂಡನ್ನು ಜೋಡಿಸುತ್ತಾ ಸುಂದರವಾದ ಕೌದಿಯನ್ನು ರೂಪಿಸುವುದರಲ್ಲಿ ಅವರಿಗೆ ಎಲ್ಲಿಲ್ಲದ ಸಂತೋಷ. ಅವರ ಸಂತೋಷಕ್ಕೆ ಕುಟುಂಬವು ಸಾತ ನೀಡಿತು. ಅವರ ಹಾಸನದ ಮನೆಯೊಳಗೇ ಕಾಲಿಟ್ಟರೆ ಕೌದಿಮಯ. ಕಾಲು ಒರೆಸುವ ಮ್ಯಾಟ್, ಟಿವಿ ಕವರ್, ಟೇಬಲ್ ಕವರ್, ಕಾರ್ಪೆಟ್ ಗಳನ್ನೆಲ್ಲ ಕೌದಿಯ ಶೈಲಿಯಲ್ಲಿಯೇ ಮಾರ್ಪಡ ಮಾಡಿದ್ದಾರೆ.
ಅವರು ಬೃಹತ್ ಕೌದಿಯನ್ನು ಹೊಲೆದಿದ್ದು, ಅದರ ಉದ್ದ ೬.೧೦ ಅಡಿ ೧೫.೩ ಅಗಲ. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಾಗಿದೆ .
ಕೌದಿಗಳ ದೊರೆಸಾನಿ ಎಂದೇ ಪ್ರಖ್ಯಾತಿಯಾದ ಗಂಗೂಬಾಯಿ ದೇಸಾಯಿ ಅವರು ಇತ್ತೀಚೆಗಷ್ಟೇ ತಮ್ಮ ೭೫ ನೇಯ ವಯಸ್ಸಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ಆದರೆ ಅವರು ಹೇಳಿಕೊಟ್ಟ ಕೌದಿ ಕಲೆ ಇನ್ನಷ್ಟು ಕಲೆಗಾರರನ್ನು ಹುಟ್ಟುಹಾಕಿದೆ. ಅದನ್ನು ಬೆಳೆಸುವಲ್ಲಿ ಅವರ ಶ್ರಮ ಅಪಾರ. ಇದು ಕೇವಲ ಬಟ್ಟೆಗಳ ತುಂಡುಗಳ ಹೊದಿಕೆಯಲ್ಲ ನಮ್ಮ ದೇಸಿ ಕಲೆ.
ತಲಾಂತರದಿಂದ ಬಂದ ಕೌದಿಯನ್ನು ಉಪಯೋಗಿಸೋಣ, ಬೆಳೆಸೋಣ
- ಶಾಲಿನಿ ಹೂಲಿ ಪ್ರದೀಪ್
