ಕಾಳಿನದಿ ಜಲವಿದ್ಯುತ್ ಯೋಜನೆಯ ಲ್ಲಿ ದಟ್ಟ ಕಾಡಿನ ಮಧ್ಯೆ ಕವಳೇಶ್ವರ ಗುಹೆ ಇದೆ.ಪ್ರತಿ ಶಿವರಾತ್ರಿಯಂದು ಇಲ್ಲಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಶಿವನ ದರ್ಶನ ಪಡೆಯಲು ರಾಜ್ಯದಾದ್ಯಂತ ಭಕ್ತಾದಿಗಳು ಬರುತ್ತಾರೆ.ಮುಂದೆ ಓದಿ …
ಕಾಳಿನದಿ ಜಲವಿದ್ಯುತ್ ಯೋಜನೆಯ ನಾಗಝರಿ ವಿದ್ಯುದಾಗಾರಕ್ಕೆ ತೆರಳುವ ಅತೀ ಕಡಿದಾದ ರಸ್ತೆಯ ಬಲಭಾಗಕ್ಕೆ ಹಳ್ಳವನ್ನು ದಾಟಿ ನಂತರ ದುರ್ಗಮವಾದ ಕಾಲುಹಾದಿಯಲ್ಲಿ ಬೆಟ್ಟವನ್ನೇರಿದರೆ, ಅಲ್ಲಿ ನಿಸರ್ಗವೇ ನಿರ್ಮಿಸಿದ ಗುಹೆಗಳಲ್ಲಿ “ಕವಳೇಶ್ವರ” ನ ಅರ್ಥಾತ್ ಶಿವಲಿಂಗ ದರ್ಶನ ಪಡೆಯಬಹುದು. ಮೊದಲೇ ಮೈತುಂಬ ಶಕ್ತಿ ಮತ್ತು ಎದೆ ತುಂಬಾ ಧೈರ್ಯ ತುಂಬಿಕೊಂಡು ಇಳಿಜಾರಾದ ಬೆಟ್ಟ ಹತ್ತಿ ಗುಹೆಯ ಬಾಗಿಲು ತಲುಪುವಷ್ಟರಲ್ಲೇ ಏದುಸಿರು ಬಂದು, ಅಲ್ಲೇ ಸ್ವಲ್ಪ ಹೊತ್ತು ಸುಧಾರಿಸಿ ಕೊಳ್ಳಬೇಕಾಗುತ್ತಿತ್ತು. ನಂತರ ನಡು ಬಗ್ಗಿಸಿ, ತಲೆ ಬಗ್ಗಿಸಿ, ಗುಹೆಯೊಂದರ ಮೂಲಕ ಸುಮಾರು ೬೦ – ೭೦ ಅಡಿ ದೂರ ಒಳಹೊಕ್ಕರೆ ಲಿಂಗಾಕೃತಿಯ ದರ್ಶನ ಭಾಗ್ಯ. ಒಂದಷ್ಟು ನಿಲ್ಲಲು ವಿಶಾಲವಾದ ಜಾಗ ಕೈಮುಗಿದು ಅಡ್ಡಬಿದ್ದು ಮತ್ತೊಂದು ಗುಹೆಯಿಂದ ಹೊರ ಬರಬೇಕು. ಈ ಗುಹೆಗಳನ್ನೂ ಲಿಂಗಾಕೃತಿಯನ್ನೂ ಪ್ರಕೃತಿಯೇ ನಿರ್ಮಿಸಿದೆ. ಒಳಗೆ ಹೋದರೆ ಈಚೆಗೆ ಬರಲು ಮನಸ್ಸೇ ಆಗದು. ಇಂಥಾ ಕವಳೇಶ್ವರನಿಗೆ ಪ್ರತೀ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ಗುಹೆಯ ಮುಂಭಾಗದಲ್ಲಿ ಜಾತ್ರೆಯೂ ನಡೆಯುತ್ತದೆ. ಇಲ್ಲಿಗೆ ದಾಂಡೇಲಿ, ಬೊಮ್ಮನ ಹಳ್ಳಿ, ಸುತ್ತಮುತ್ತಲ ತಾಂಡ್ಯಾಗಳ ಗೌಳಿಗಳೂ, ಬಂದು ಶಿವಲಿಂಗ ದರ್ಶನ ಪಡೆದು ಪುನೀತರಾಗುತ್ತಾರೆ.

ಫೋಟೋ ಕೃಪೆ : namma dandeli
ಈ ಕವಳೇಶ್ವರನ ದರ್ಶನಕ್ಕೆ ಸುಗಮವಾದ ಹಾದಿ ಕಲ್ಪಿಸಿದ ಕತೆಯೊಂದಿದೆ. ಕಾಳಿನದಿ ಜಲವಿದ್ಯುತ್ ಯೋಜನೆಯ ನಾಗಝರಿ ವಿದ್ಯುದಾಗಾರ ನಿರ್ಮಿಸಲು ತುಂಡುಗುತ್ತಿಗೆ ವಹಿಸಿಕೊಂಡಿದ್ದ ಗುತ್ತಿಗೆದಾರನ ಪತ್ನಿಗೆ ಸದಾ ಒಂದಿಲ್ಲೊಂದು ಖಾಯಿಲೆ. ಯಾವ ವೈದ್ಯರಿಗೆ ತೋರಿಸಿದರೂ ವಾಸಿಯಾಗುತ್ತಿರಲಿಲ್ಲ. ಹೀಗಿರುವಾಗೊಮ್ಮೆ ಆ ಗುತ್ತಿಗೆದಾರನ ಕನಸಿನಲ್ಲಿ ಕಾಣಿಸಿಕೊಂಡ ಕವಳೇಶ್ವರ “ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯಲು ಅನುವಾಗುವಂತೆ ನಿನಗೆ ತೋಚಿದ ಕೆಲಸ ಪ್ರಾರಂಭಿಸು. ನಿನ್ನ ಮಡದಿ ಗುಣಮುಖಳಾಗುತ್ತಾಳೆ” ಎಂದು ನುಡಿದಂತೆ ಭಾಸವಾಯಿತಂತೆ. ಆತ ಅದನ್ನೇ ನಂಬಿ ಮಾರನೆಯ ದಿನದಿಂದಲೇ ನಾಗಝರಿ ಹಳ್ಳದ ಕೆಳ ಭಾಗದಿಂದ ಕವಳೇಶ್ವರನ ಗುಹೆಯವರೆಗೆ ಮೆಟ್ಟಿಲುಗಳನ್ನು ನಿರ್ಮಿಸಲು ಆರಂಭಿಸಿದ. ಅವನೊಂದಿಗೆ ಇತರರೂ ಕೈಜೋಡಿಸಿದರು. ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಿಯಾಯಿತು. ಗುತ್ತಿಗೆದಾರನ ಪತ್ನಿಗೂ ಗುಣವಾಯಿತು. ಹಾಗೆಯೇ ಸದರೀ ಗುತ್ತಿಗೆದಾರನ ಹೆಸರು, ಹಣ, ಕೀರ್ತಿಗಳನ್ನು ಗಳಿಸಿ ಐದಾರು ಲಾರಿಗಳ ಮಾಲಿಕನೂ ಆದ. ಇದು ಆತನು ಕವಳೇಶ್ವರನ ಮೇಲಿಟ್ಟ ನಂಬಿಕೆಯೇ ಆಗಿತ್ತೆಂದರೆ ಆಶ್ಚರ್ಯ ಪಡಬೇಕಿಲ್ಲ. ಈ ಗುತ್ತಿಗೆದಾರನ ವಿಷಯ ಅಂಬಿಕಾನಗರದಲ್ಲೆಲ್ಲ ಜನಜನಿತವಾಗಿತ್ತು. ಆದರೆ ಅದೇ ಆತನ ಮಕ್ಕಳಿಗೆ ಕವಳೇಶ್ವರನ ಮೇಲೆ ನಂಬಿಕೆ ಇರಲಿಲ್ಲ. ನಮ್ಮ ಕಣ್ಣೆದುರೇ ಹಾಳಾದರು. ಇದು ಬದುಕಿನ ವಿಪರ್ಯಾಸವೋ? ವ್ಯಂಗ್ಯವೋ? ಇಂದಿಗೂ ನನಗೆ ಅರ್ಥವಾಗಿಲ್ಲ ನನಗೆ.
ಈ ಕವಳೇಶ್ವರನ ದರ್ಶನಕ್ಕೆ ದಾಂಡೇಲಿಯಿಂದಲೂ (೨೬ ಕಿಮೀ.) ಭಕ್ತಾದಿಗಳು ಬಂದು, ಬೆಟ್ಟದ ತುದಿಯಲ್ಲಿ ಇಳಿದುಕೊಂಡು ಅಲ್ಲಿಂದ ಸುಮಾರು ೬ ಕಿಮೀ. ಕಾಲ್ನಡಿಗೆ ಪ್ರಯಾಣಿಸಿ ದರ್ಶನ ಪಡೆಯುತ್ತಾರೆ. ಕೆಲವರು ಇಲ್ಲಿನ ಈಶ್ವರನನ್ನು ಗುಹೇಶ್ವರನೆಂದೂ ಕರೆಯುತ್ತಾರೆ.
ಇಲ್ಲಿನ ಬೆಟ್ಟ ಗುಡ್ಡಗಳಲ್ಲಿ ಸುಣ್ಣದಿಂದ ಸಮೃದ್ಧವಾದ ಶಿಲಾ ರಚೆನೆ ಇದ್ದು, ಬೆಟ್ಟದ ನೆತ್ತಿಯಲ್ಲಿ ಸುರಿಯುವ ಮಳೆ ನೀರು ಅಲ್ಪ ಪ್ರಮಾಣದ ಸುಣ್ಣವನ್ನು ತನ್ನಲ್ಲಿ ಕರಗಿಸಿಕೊಂಡು ಗುಹೆಯ ಮಾಡಿನಿಂದ ತೊಟ್ಟಿಕ್ಕುತ್ತಿರುತ್ತದೆ. ಹೀಗೆ ನೂರಾರು ವರ್ಷಗಳಿಂದ ತೊಟ್ಟಿಕ್ಕುತ್ತಿರುವ ನೀರು ಆವಿಯಾಗಿ, ಸುಣ್ಣದ ಅಂಶ ಮಾತ್ರ ಉಳಿದು ಈ ರೀತಿಯ ಲಿಂಗಾಕಾರವನ್ನು ತಳೆದಿದೆ ಎನ್ನುತ್ತಾರೆ ಭೂವಿಜ್ಞಾನಿಗಳು. ಯಾವುದನ್ನೇ ಆದರೂ ನಂಬುವುದು ಬಿಡುವುದು ಅವರವರ ಜಿಜ್ಞಾಸೆಗೆ ಸೇರಿದ್ದು. ಆದರೆ ಕಳೇಶ್ವರನ ದರ್ಶನವಂತೂ ವಿಶಿಷ್ಟವಾದ, ಅನಿರ್ವಚನೀಯವಾದ ತೃಪ್ತಿಯನ್ನು ತಂದುಕೊಡುತ್ತದೆ. ಮನಸ್ಸಿಗೆ ಮುದ ನೀಡುತ್ತದೆ. ಅಷ್ಟೇ ಅಲ್ಲ ಸುತ್ತಲಿನ ಪ್ರಶಾಂತವಾದ, ಮೌನವಾದ ನಿಸರ್ಗ ನಮ್ಮನ್ನು ತಣಿಸುತ್ತದೆ.
ಈ ಬೆಟ್ಟಕ್ಕೆ ಹೊಂದಿಕೊಂಡಂತೆಯೇ ಕೆಳಭಾಗದಲ್ಲಿ ಕಾಳೀನದಿ ರುದ್ರ ರಮಣೀಯವಾಗಿ ಹರಿಯುತ್ತಿದ್ದಾಳೆ. ಮಳೆಗಾಲವನ್ನು ಹೊರತುಪಡಿಸಿ ಇಲ್ಲಿಗೆ ಭೇಟಿ ನೀಡಿದರೆ ಮನಸ್ಸಿಗೆ ಆಹ್ಲಾದ ಸಿಗುವುದರಲ್ಲಿ ಅನುಮಾನವೇ ಇಲ್ಲ.
೧೯೭೭ ರ ಅಕ್ಟೋಬರ್ ೩ ರಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಆದೇಶದಂತೆ ಇಂಜಿನಿಯರನಾಗಿ ವರದಿ ಮಾಡಿಕೊಳ್ಳಲು ಅಂಬಿಕಾನಗರ ತಲುಪಿದ ನಾನು ಬಸ್ಸಿನಿಂದ ಇಳಿಯುತ್ತಿದ್ದಂತೆಯೇ ಮೊದಲು ನನ್ನಕಣ್ಣಿಗೆ ರಾಚಿದ್ದು “ಪೋಲೀಸ್ ಠಾಣೆ ಅಂಬಿಕಾನಗರ” ಎಂಬ ಕೆಂಪಕ್ಷರದ ಫಲಕ. ಸುತ್ತಮುತ್ತ ನೋಡಿದೆ. ರಸ್ತೆಯ ಪಕ್ಕದಲ್ಲಿ ಬೃಹತ್ ಗೋಡೌನುಗಳು. ಅದರ ಪಕ್ಕದಲ್ಲೊಂದು ಪೆಟ್ರೋಲ್ ಬಂಕ್. ಅದರ ಹಿಂದಕ್ಕೆ ವಸತಿ ಗೃಹಗಳ ಸಮೂಹ. ರಸ್ತೆಯ ಆಚೆ ಬದಿಗೆ ಕಾಡು. ಇದನ್ನು ನೋಡಿಯೇ ಎಷ್ಟೋ ವರದಿಮಾಡಿಕೊಳ್ಳಲು ಬಂದ ಹೊಸ ಇಂಜಿನಿಯರುಗಳು ಹಿಂತಿರುಗಿ ತಮ್ಮ ಊರಿಗೆ ವಾಪಸ್ ಹೋಗಿದ್ದೂ ಇದೆ. ಆಗಾಗ ಬರ್ರನೆ ಓಡಾಡುವ ಜೀಪುಗಳು, ಕಾರುಗಳು. ನಿಧಾನವಾಗಿ ರಟ್ಟೆ ಗಾತ್ರದ ಹೊಗೆ ಉಗುಳುತ್ತಾ ಸಿಮೆಂಟ್, ಜಲ್ಲಿ, ಕಬ್ಬಿಣ, ಮರಳು ಇತ್ಯಾದಿಗಳನ್ನು ತುಂಬಿಕೊಂಡು ಲಾರಿ, ಟ್ರಕ್ಕುಗಳು ಚಲಿಸುತ್ತಿದ್ದವು. ಇವುಗಳನ್ನೆಲ್ಲಾ ನೋಡುತ್ತಿದ್ದ ನನಗೆ ನನ್ನ ವಿರುದ್ಧ ದಿಕ್ಕಿನಲ್ಲಿ ನಡೆದು ಹೋಗುತ್ತಿದ್ದವರೊಬ್ಬರು ಕಂಡರು. ಅವರಿಂದಾಗಿ ನನಗೆ ಅಲ್ಲಿನ ತಾತ್ಕಾಲಿಕ ವಸತಿ ಗೃಹ (ಡಾರ್ಮಿಟರೀ) ವೊಂದರಲ್ಲಿ ವಾಸ್ತವ್ಯದ ವ್ಯವಸ್ಥೆಯಾಯಿತು. ಹೀಗೆ ದಿನಾಂಕ ೩-೧೦-೧೯೭೭ ರಂದು ಬೆಳಿಗ್ಗೆ ತಾತ್ಕಾಲಿಕ ವಸತಿ ಗೃಹ ತೋರಿಸಿ ನನ್ನಿಂದ ಅಣ್ಣಾ ಎಂದು ಕರೆಸಿಕೊಂಡ ವ್ಯಕ್ತಿ ನನಗಿಂತ ಕೆಳ ಹಂತದ ನೌಕರಿಯಲ್ಲಿದ್ದರೂ ಇಂದಿಗೂ ನನ್ನಿಂದ ಅಣ್ಣಾ ಎಂದೇ ಕರೆಸಿಕೊಳ್ಳುತ್ತಾನೆ. ಕರ್ನಾಟಕ ವಿದ್ಯುತ್ ನಿಗಮದವರು ನಿರ್ಮಿಸಿಕೊಂಡ ವಸಾಹತುವಾದ್ದರಿಂದ, ಈ ಹಿಂದೆ ಅಕ್ಕಪಕ್ಕದಲ್ಲೇ ಇದ್ದ ಅಮಗಾ ಜಮಗಾ ಎಂಬ ಸಣ್ಣ ಹಳ್ಳಿಗಳ ಬದಲಾಗಿ ಅಂಬಿಕಾನಗರ ಎಂಬ ಹೊಸ ಹೆಸರು ಇಡಲಾಯಿತೆಂದು ನಂತರ ತಿಳಿಯಿತು. ಪೋಲೀಸ್ ಠಾಣೆಯ ಎಡಕ್ಕೂ ಬಲಕ್ಕೂ ಕಾಲೋನಿಯ ಮನೆಗಳು ಹರಡಿಕೊಂಡಿದ್ದವು. ಯಲ್ಲಾಪುರಕ್ಕೂ ದಾಂಡೇಲಿಗೂ ಹೋಗುವ ರಸ್ತೆ ಇದನ್ನು ವಿಭಜಿಸಿತ್ತು.
ಮರುದಿನ ಬೆಳಿಗ್ಗೆ ಐದು ವರ್ಷಗಳ ಕಾಲ ಕೆಲಸವನ್ನು ಬಿಟ್ಟುಹೋಗುವುದಿಲ್ಲವೆಂದು, ಹಾಗೇನಾದರೂ ಹೋದರೆ ಮೂರು ತಿಂಗಳ ಸಂಬಳವನ್ನು ಮುರಿದುಕೊಳ್ಳುವಂತೆಯೂ ಒಪ್ಪಿಗೆ ಸೂಚಿಸುವ ಕರಾರಿಗೆ ಸಹಿ ಹಾಕಿದ ಮೇಲೆ ಸರ್ಜ್ ಟ್ಯಾಂಕ್ ವಿಭಾಗದಲ್ಲಿ ವರದಿ ಮಾಡಿಕೊಂಡೆ. ಆ ವಿಭಾಗದ ಮುಖ್ಯಸ್ಥರನ್ನು ಕಂಡು ಸಮೂಹ ಇಂಜಿನಿಯರ್ ಬಳಿ ವರದಿ ಮಾಡಿಕೊಳ್ಳುವಷ್ಟರಲ್ಲಿ ಸಂಜೆ ಆಗಿಯೇ ಬಿಟ್ಟಿತು.
ಮರುದಿನ ಕೆಲಸದ ಸ್ಥಳವನ್ನು ತೋರಿಸಲು ನಮ್ಮನ್ನೂ ನಮ್ಮ ಮೇಲಧಿಕಾರಿಯನ್ನು ಹೊತ್ತ ಜೀಪು ತನ್ನ ಗುರಿಯತ್ತ ಓಡತೊಡಗಿತು. ಸಾಕಷ್ಟು ವಿಸ್ತಾರವಾದ ಡಾಂಬರು ರಸ್ತೆ ತುಂಬಾ ಚೆನ್ನಾಗಿತ್ತು. ನಾನಂತೂ ಬಿಟ್ಟ ಕಣ್ಣು ಮುಚ್ಚದಂತೆ ನೋಡುತ್ತಿದ್ದೆ. ರಸ್ತೆಯ ಇಕ್ಕೆಲಗಳಲ್ಲೂ ದಟ್ಟ ಕಾಡು. ೧೫-೨೦ ನಿಮಿಶಗಳ ನಂತರ ಜೀಪು ಒಂದೆಡೆ ನಿಂತಿತು. ಎಲ್ಲರೂ ಅದರಿಂದ ಇಳಿದೆವು.
ಹಾಗೆ ಇಳಿದ ಜಾಗವೇ Sykes Point. ಸೈಕ್ಸ್ ಎಂಬ ಆಂಗ್ಲ ವ್ಯಕ್ತಿ ಈ ಸ್ಥಳವನ್ನು ಪತ್ತೆಹಚ್ಚಿದ್ದರಿಂದ ಅವನ ನೆನಪಿಗಾಗಿ ಈ ಸ್ಥಳವನ್ನು ಸೈಕ್ಸ್ ಪಾಯಿಂಟ್ ಎಂದು ಹೆಸರಿಸಲಾಗಿದೆಯೆಂದೂ, ಸರ್ಜ್ ಟ್ಯಾಂಕ್, ಬ್ಯಾಚಿಂಗ್ ಪ್ಲ್ಯಾಂಟ್ (ಕಾಂಕ್ರೀಟ್ ಮಿಶ್ರಣ ಮಾಡುವ ಜೆಲ್ಲಿ, ಮರಳು, ಸಿಮೆಂಟ್ ಇತ್ಯಾದಿಗಳ ಸಂಗ್ರಹ ವ್ಯವಸ್ಥೆ), ವಿಂಚ್ ಹೌಸ್, ೧೧೯೦ ಆಡಿಟ್ (ಭೂಗರ್ಭದ ಸುರಂಗಕ್ಕೆ ಹೋಗಲು ಸಮತಟ್ಟಾದ ಪ್ರವೇಶದ್ವಾರ), ಆರ್. ಸಿ.ಸಿ. ಸುರಂಗ, ಒತ್ತಡದ ಸುರಂಗ (ಪ್ರೆಶರ್ ಶಾಫ್ಟ್) ಇತ್ಯಾದಿಗಳ ಪರಿಚಯ ಮಾಡಿಕೊಟ್ಟರು.
ಬೊಮ್ಮನಹಳ್ಳಿ ಇಂಟೇಕ್ ನಿಂದ ಸರ್ಜ್ ಟ್ಮಾಂಕ್ ವರೆಗಿನ ೯೪೪೫ ಮೀಟರಿನಷ್ಟು ಉದ್ದದ ಕುದುರೆ ಲಾಳದ ಆಕಾರದ ಒಂದೇ ಸುರಂಗದಿಂದ ಬರುವ ನೀರು, ಸರ್ಜ್ ಟ್ಯಾಂಕಿನಿಂದ ಮುಂದೆ ಮೂರು ಆರ್. ಸಿ. ಸಿ. ಸುರಂಗದ ಮೂಲಕ ಹಾದು, ಒತ್ತಡದ ಇಳಿಜಾರು ಕೊಳವೆಯ ಮೂಲಕ ಪ್ರವೇಶಿಸಿ, ತದನಂತರ ಒಂದೊಂದೂ ಎರಡಾಗಿ ( Y ಆಕಾರದಲ್ಲಿ) ಪ್ರತಿಯೊಂದು ಟರ್ಬೈನಿಗೆ ಪ್ರವೇಶಿಸುತ್ತದೆ. ಈ ಎಲ್ಲಾ ಸುರಂಗಗಳನ್ನು ಈಗಾಗಲೇ ಪೂರ್ತಿ ಕೊರೆದಿದ್ದು ಕಾಂಕ್ರೀಟ್ ಕೆಲಸವು ಪ್ರಗತಿಯಲ್ಲಿತ್ತು. ಇದಕ್ಕಾಗಿ ಹಲವಾರು ಇಂಜಿನಿಯರುಗಳನ್ನು ಪಾಳಿ ಕೆಲಸದಲ್ಲಿ ನಿಯುಕ್ತಿಗೊಳಿಸಲಾಗಿತ್ತು. ಕಾರ್ಖಾನೆಯ ಕೆಲಸಗಾರರಂತೆ ಮೂರು ಪಾಳಿಗಳಲ್ಲಿ ಕಾರ್ಯವೆಸಗಲಾಗುತ್ತಿತ್ತು. ಇವೆಲ್ಲವುಗಳ ಪರಿಚಯವಾದ ಮೇಲೆ, ಕಾರ್ಯ ಸ್ಥಳದಲ್ಲಿದ್ದ ಪುಟ್ಟ ಕಛೇರಿಯಲ್ಲಿ ನಮ್ಮನ್ನು ಕೂರಿಸಿಕೊಂಡು ಚಹಾ ತರಿಸಿಕೊಟ್ಟು ನಾವುಗಳು ಮುಂದೆ ನಿರ್ವಹಿಸಬೇಕಾದ ಕೆಲಸವನ್ನು, ಜಾಗರೂಕತೆಯಿಂದ ಇರಬೇಕಾದ ಹಲವು ಸಂಗತಿಗಳನ್ನು ವಿವರಿಸಿ ವೈಯಕ್ತಿಕವಾಗಿ ವಿಚಾರಿಸಿಕೊಂಡು ಅಂದು ವರದಿ ಮಾಡಿಕೊಂಡವರಿಗೆಲ್ಲಾ ವಿವಿಧ ಪಾಳಿ ಕೆಲಸಕ್ಕೆಂದು ನಿಯೋಜಿಸಿದರು. ಹಾಗಾಗಿ ಮೊದಲ ದಿನವೇ ನನಗೆ ರಾತ್ರಿ ಪಾಳಿ.
ಅಂದೇ ರಾತ್ರಿ ೯-೩೦ ಕ್ಕೆ ನನ್ನನ್ನು ಕರೆದೊಯ್ಯಲು ಜೀಪ್ ಬಂತು. ನನ್ನ ಹಿರಿಯ ಸಹೋದ್ಯೋಗಿಗಳು ಅದರೊಳಗಿದ್ದು ನಾನೂ ಜೀಪನ್ನೇರಿ ಹೊರಟೆ. ಹಲವರು ಮಫ್ಲರು, ಶಾಲು ತಂದಿದ್ದರು. ನನಗೇನೂ ಚಳಿ ಅನಿಸುತ್ತಿರಲಿಲ್ಲ. ಅದೂ ಅಲ್ಲದೆ ಕಾಮಗಾರಿ ಕೆಲಸವನ್ನು ಪಾಳಿಯಲ್ಲಿ ಮಾಡುತ್ತಾರೆಂಬ ಕಲ್ಪನೆಯೇ ಇಲ್ಲದಿದ್ದುದರಿಂದ ನನ್ನ ಬಳಿ ಅಂತಹ ವಸ್ತ್ರಗಳು ಇರಲಿಲ್ಲ. ಕೆಲಸದ ಸ್ಥಳ ತಲುಪಿದಮೇಲೆ ಎರಡನೇ ಪಾಳಿಯಲ್ಲಿದ್ದವರು ನಮಗೆ ಅವರ ಅವಧಿಯಲ್ಲಿ ಜರುಗಿದ ಕೆಲಸಗಳ ಮಾಹಿತಿ ನೀಡಿ ಹೊರಟರು.
ಹಿರಿಯ ಸಹೋದ್ಯೋಗಿ ನನ್ನನ್ನು ಒತ್ತಡದ ಇಳಿಜಾರು ಸುರಂಗದ ಕೆಲಸ ನಡೆಯುವಲ್ಲಿಗೆ ಹೋಗಿರೆಂದು ಸೂಚಿಸಿದರು. ಆಗಬಹುದೆಂದು ಒಪ್ಪಿಕೊಂಡೆ. ಇಲ್ಲಿ ಕಾರ್ಯಸ್ಥಳದ ವಿವರಣೆ ಅಗತ್ಯವೆನಿಸುತ್ತದೆ.

ಆರ್. ಸಿ. ಸಿ. ಸುರಂಗ ಮತ್ತು ಒತ್ತಡದ ಸುರಂಗದ (ಪ್ರೆಶರ್ ಶಾಫ್ಟ್) ಕೊಳವೆಗಳ ಸುತ್ತ ಕಾಂಕ್ರೀಟ್ ಮಾಡಲು ೧೧೯೦ ಆಡಿಟ್ ನ ಮುಂಭಾಗದಲ್ಲಿ ಹೆಚ್ಚು ಸ್ಥಳಾವಕಾಶ ಇಲ್ಲದ್ದರಿಂದ ಸುಮಾರು ೮೦ ಅಡಿ ಎತ್ತರದ ಜಾಗದಲ್ಲಿ ಅಂದರೆ ವಿಂಚ್ ಹೌಸ್ ಪಕ್ಕದಲ್ಲೇ ಕಾಂಕ್ರೀಟ್ ತಯಾರಿಸಿ ಅಜಿಟೇಟರ್ ಕಾರಿಗೆ ತುಂಬಿಸಿ (ಕಾಂಕ್ರೀಟನ್ನು ಬೇಕಾದ ಜಾಗಕ್ಕೆ ಈ ವಾಹನದಲ್ಲಿ ಕೊಂಡೊಯ್ದು ಇದರ ಡ್ರಮ್ ತಿರುಗಿಸಿದರೆ ಒಳಗಿದ್ದುದೆಲ್ಲವೂ ಹೊರಬರುತ್ತದೆ) ಇದನ್ನು ಮೇಲೆ ಕೆಳಗೆ ಸಂಚರಿಸುವ ೧೪೫೦ ಉಕ್ಕಿನ ಪ್ಲ್ಯಾಟ್ ಫಾರಂ ಮೇಲೆ ತಂದು ನಿಲ್ಲಿಸಿ ವಿಂಚ್ ಮೂಲಕ ಅದನ್ನು ನಿಧಾನವಾಗಿ ೧೧೯೦ ಆಡಿಟ್ ಪ್ಲ್ಯಾಟ್ ಫಾರಂ ಗೆ ಇಳಿಸಿ ಅಲ್ಲಿಂದ ಬೇಕಾದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಕಾಂಕ್ರೀಟ್ ಸುರಿದು ಹಿಂದೆ ಬರುತ್ತಿತ್ತು. ಇದು ಕಾಂಕ್ರೀಟ್ ಕೆಲಸ ಮುಗಿಯುವವರೆಗೆ ಪುನರಾವರ್ತನೆ ಆಗುತ್ತಿತ್ತು.
ಆ ದಿನ ಹೀಗೆಯೇ ಕಾಂಕ್ರೀಟ್ ತುಂಬಿಕೊಂಡ ಅಜಿಟೇಟರ್ ಕಾರನ್ನು ಉಕ್ಕಿನ ಚಲಿಸುವ ಪ್ಲ್ಯಾಟ್ಫಾರಂ ಮೇಲೆ ನಿಲ್ಲಿಸಿದ ಚಾಲಕ – ಅದರ ಮುಂದಿನ ಚಕ್ರಗಳಿಗೆ ಕಟ್ಟಿಗೆ ತುಂಡುಗಳನ್ನು ಇಟ್ಟನು. ನಾನು ಅದನ್ನೇರಿ ಕುಳಿತೆ. ವಿಂಚಿನ ವೈರ್ ರೋಪ್ ನಿಧಾನವಾಗಿ ಕೆಳಗಿಳಿಯಲು ಆರಂಭಿಸಿತು. ನಾನು ಇಳಿಯುತ್ತಿರುವ ರೈಲು ಹಳಿಗಳ ಆಚೆ ಬದಿಗೆ ಕಾಂಕ್ರೀಟಿನಿಂದ ನಿರ್ಮಿಸಿದ ಮೆಟ್ಟಿಲುಗಳಿದ್ದವು. ಅದಕ್ಕೆ ಅಂಟಿಕೊಂಡಂತೆಯೇ ವಿದ್ಯುತ್ ಕಂಬಗಳಿದ್ದವು. ಇದರ ಪಕ್ಕದಲ್ಲಿ ಚಿಕ್ಕದಾದ ಮತ್ತೊಂದು ರೈಲು ಹಳಿ. ಇಂಡಿಯನ್ ಹ್ಯೂಮ್ ಪೈಪ್ (ಐ. ಹೆಚ್. ಪಿ.) ಕಂಪನಿಯವರದ್ದು. ಒತ್ತಡದ ಸುರಂಗಕ್ಕೆ ಹಾಕಲು ಬೇಕಾದ ಸ್ಟೀಲ್ ಲೈನರುಗಳನ್ನು ಕೆಳಕ್ಕೆ ಇಳಿಸಲು ತಮ್ಮದೇ ಆದ ವಿಂಚ್ ಇರಿಸಿಕೊಂಡಿದ್ದರು. ಆ ಹಳಿಯ ಆಚೆಗೂ ಕತ್ತಲೆ. ಇತ್ತ ನಾವು ಇಳಿಯುತ್ತಿದ್ದ ಹಳಿಯ ಬದಿಗೂ ಕತ್ತಲೆ. ಎದುಗಡೆಯಂತೂ ಗಾಢಾಂಧಕಾರ. ಕಾಳಿನದಿಯ ಕಣಿವೆ.
ನಾನು ಕುಳಿತಲ್ಲಿಂದಲೇ ಹಾವಿನಂತೆ ಕೆಳಗಿಳಿಯುತ್ತಿದ್ದ ವೈರ್ ರೋಪೊಂದನ್ನು ನೋಡುತ್ತಿದ್ದೆ. ಇದ್ದಕ್ಕಿದ್ದಂತೆ ಹಾವೊಂದು ಎಡ ಬದಿಯಿಂದ ಹರಿಯುತ್ತ ಬಲಬದಿಗೆ ಸರಿದು ಹೋಯಿತು. ನಾನು “ಏನಣ್ಣ ಇಲ್ಲಿ ಹಾವುಗಳು ಜಾಸ್ತಿ ಇದ್ದಾವಾ” ಅಂದೆ ಚಾಲಕನಿಗೆ. “ಅಯ್ಯೋ ಅದ್ಯಾಕ್ ಹೇಳ್ತೀರಾ ಸಾರ್. ತುಂಬಾ ಇದ್ವು. ಈಗೀಗ ಜನರ ಓಡಾಟದಿಂದ ಕಡಿಮೆಯಾಗಿವೆ. ೧೯೭೩-೭೪ ರಲ್ಲಿ ಹೆಜ್ಜೆಗೊಂದು ಹಾವು ಸಿಗ್ತಿದ್ದವು. ನೋಡಿಕೊಂಡು ಓಡಾಡಬೇಕು” ಅಂದ. ನಾನು ಹೂಗುಟ್ಟಿದರೂ ನನ್ನ ದೃಷ್ಠಿ ಆ ವೈರ್ ರೋಪಿನತ್ತಲೇ ಇತ್ತು.
ದಡ್ ಎಂದು ಕುಕ್ಕಿದಂತಾಯಿತು. ನೋಡಿದರೆ ೧೧೯೦ ಆಡಿಟ್ ಪ್ಲ್ಯಾಟ್ ಫಾರಂ ತಲುಪಿದ್ದರ ಸೂಚನೆಯಾಗಿತ್ತು ಆ ಶಬ್ಧ. ಅಜಿಟೇಟರ್ ಕಾರಿನ ಕ್ಲೀನರ್ ಚಕ್ಕನೆ ಕೆಳಗಿಳಿದು ಚಕ್ರಗಳಿಗೆ ಕೊಟ್ಟಿದ್ದ ಕಟ್ಟಿಗೆಗಳನ್ನು ಪಕ್ಕಕ್ಕೆ ಸರಿಸಿ ಪುನಹ ಗಾಡಿಯ ಕಂಬಿಗಳನ್ನು ಹಿಡಿದು ರೈಟ್ ಎಂದ. ಒಳ ಹೋದೆವು. ಈ ಅಜಿಟೇಟರ್ ಕಾರು ೩೫ ಸಿಮೆಂಟ್ ಮೂಟೆಗಳನ್ನು ಬಳಸಿ ತಯಾರಿಸಿದ ಕಾಂಕ್ರೀಟನ್ನು ತುಂಬಿಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಅದರಲ್ಲಿರುವ ಕಾಂಕ್ರೀಟನ್ನು ಅನ್ಲೋಡ್ ಮಾಡಲಾಗುತ್ತಿತ್ತು.
ಮುಂದೊರೆಯುತ್ತದೆ…
- ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )
