ಜುಲೈ ೨೦,೧೯೭೦ ರಲ್ಲಿ ಮೈಸೂರು (ಈಗ ಕರ್ನಾಟಕ) ಪವರ್ ಕಾರ್ಪೊರೇಷನ್ ಸ್ಥಾಪನೆಯಾಯಿತು. ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರದಿಂದ ೧,೪೭೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದು, ಇದು ಸೂಪರ್ ಥರ್ಮಲ್ ಪವರ್ ಸ್ಟೇಷನ್ ಆಗಿದೆ. ಹಾಗೂ ಉತ್ತಮ ಸಾಧನೆಗಾಗಿ ‘ರಾಷ್ಟ್ರ ಪ್ರಶಸ್ತಿ’ಯನ್ನು ಪಡೆದಿರುವುದು ಹೆಮ್ಮೆಯ ಸಂಗತಿಯೂ ಹೌದು.ಕವಿನಿನಿ ಕುರಿತು ಇನ್ನಷ್ಟು ಮಹತ್ವದ ವಿಷಯಗಳನ್ನು ಆಕೃತಿಕನ್ನಡ ಓದುಗರೊಂದಿಗೆ ಲೇಖಕ ಹಾಗು ಕವಿನಿನಿ ನಿವೃತ್ತಿ ಅಧಿಕಾರಿ ಶಿವಕುಮಾರ್ ಬಾಣಾವರ ಅವರ ಹಂಚಿಕೊಂಡಿದ್ದಾರೆ .ಮುಂದೆ ಓದಿ …
ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಗ್ರಾಮದ ಸಮೀಪವಿರುವ ಬಿ.ಆರ್. ಪ್ರಾಜೆಕ್ಟ್ ಇಲ್ಲಿನ ವಸಾಹತು ನಿಗಮದ ಬೇರೆ ಬೇರೆ ವಸಾಹತುಗಳಿಗಿಂತ ಭಿನ್ನ ಎಂದು ನನಗೆ ಅರಿವಾಗಲು ಹೆಚ್ಚು ದಿನ ಬೇಕಾಗಲಿಲ್ಲ. ಈ ಪರಿಸರದ ಮತ್ತು ಊರಿನ ವಿಶಿಷ್ಟತೆಯೆಂದರೆ ನೀರಾವರಿ ಇಲಾಖೆ, ಕರ್ನಾಟಕ ವಿದ್ಯುತ್ ನಿಗಮ, ಮೀನುಗಾರಿಕೆ ಇಲಾಖೆ, ಕುವೆಂಪು ವಿವಿಯ ನೌಕರರು ಹಾಗೂ ಸಿಂಗನಮನೆ ಗ್ರಾಮಸ್ಥರು – ಹೀಗೆ ಹಲವು ಜನರ ವಿಶ್ವವಿದು. ಇತ್ತ ನಗರವೂ ಅಲ್ಲ, ಅತ್ತ ಹಳ್ಳಿಯೂ ಅಲ್ಲ. ಕೆಲವರಂತೂ ತಮ್ಮ ಕಾಯಕ ಮುಗಿಸಿ ಮನೆ ಸೇರಿದರೆ ಮುಗಿಯಿತು. ಉಳಿದ ಕೆಲವರು ಯಾರೇ ಇರಲಿ. ಆತ ಪರಿಚಿತನಿರಲಿ, ಬಿಡಲಿ. ಎಲ್ಲೋ ಕೇಳಿದ ಸುದ್ದಿಗೆ ಬಣ್ಣ ಕಟ್ಟುವುದು ಮತ್ತು ಆತನ ಚಲನವಲನಗಳನ್ನು ಗಮನಿಸುವುದೇ ಕಾಯಕ. ಜೊತೆಗೆ ವಿನಾಕಾರಣ ಆತನನ್ನು ದ್ವೇಷಿಸುವುದು. ಏನನ್ನಾದರೂ ಸಾಧಿಸಲು ಅಥವಾ ಸಂಪಾದಿಸಲು ಅಥವಾ ಮುಯ್ಯ ತೀರಿಸಿಕೊಳ್ಳಲು ಕೆಲವರು ದ್ವೇಷಿಸುತ್ತಾರೆಂದು ಕೇಳಿದ್ದೇನೆ. ಆದರೆ ಇಲ್ಲಿನವರಲ್ಲಿ ಕೆಲವರಿಗೆ ಇದ್ಯಾವುದೂ ಬೇಡ. ಮುಖ ಸಿಂಡರಿಸಿಕೊಂಡು ಒಳಗೊಳಗೇ ಕುದಿಯುತ್ತಾರೆ. ಬಿಪಿ ಜಾಸ್ತಿ ಮಾಡಿಕೊಂಡು ದಿನನಿತ್ಯ ಮಾತ್ರೆ ನುಂಗುತ್ತಾರೆ. ಒಟ್ಟಾಗಿ ಕಲೆತು ನಗುವುದಂತೂ ಬೇಡ. ಹೇಳಿದ್ದನ್ನಾದರೂ ಸರಿಯಾಗಿ ಕೇಳಿಸಿಕೊಂಡು ಅರ್ಥೈಸಿಕೊಳ್ಳದೇ, ಅಪಾರ್ಥವನ್ನೇ ಕಲ್ಪಿಸಿಕೊಂಡು ಮಾತಾಡುವವರೂ ಇದ್ದಾರೆ.

ಫೋಟೋ ಕೃಪೆ : anytymfly
೭೧.೫ ಟಿ. ಎಂ. ಸಿ. ಎಫ್. ಟಿ. ಯಷ್ಟು ನೀರನ್ನು ಸಂಗ್ರಹಿಸಲು ಅನುವಾಗುವಂತೆ ನದೀ ತಟದಿಂದ ೧೮೬ ಅಡಿ ಪೂರ್ಣ ಜಲಾಶಯ ಮಟ್ಟವನ್ನು ಕಾಯ್ದುಕೊಂಡು ೧೮.೩ * ೭.೬ ಮೀಟರ್ ಅಳತೆಯ ನಾಲ್ಕು ಕ್ರೆಸ್ಟ್ ಗೇಟುಗಳನ್ನು ಹೊಂದಿ, ೧೯೫೮ ರಲ್ಲೇ ಪೂರ್ಣಗೊಂಡ ಭದ್ರಾ ಅಣೆಕಟ್ಟು ನೀರಾವರಿಗೆ ಮತ್ತು ವಿದ್ಯುತ್ ಉತ್ಪಾದಿಸುವ ಬಹೂಪಯೋಗಿ ಅಣೆಕಟ್ಟಾಗಿದೆ. ಬಲದಂಡೆ ಮತ್ತು ಎಡದಂಡೆ ನಾಲೆಗಳು ಕ್ರಮವಾಗಿ ೯೭ ಕಿಮೀ. ಮತ್ತು ೭೭ ಕಿಮೀ. ಉದ್ದವಾಗಿದ್ದು ೧,೦೫,೫೭೦ ಹೆಕ್ಟೇರ್ ಮತ್ತು ೮೨೯೨ ಹೆಕ್ಟೇರ್ ಭೂಮಿಗೆ ನೀರುಣಿಸುತ್ತದೆ. ಹಾಗೆಯೇ ೧೨ ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು ಮತ್ತು ೨ ಮೆಗಾವ್ಯಾಟಿನ ಒಂದು ಘಟಕವು ಎಡ ದಂಡೆಯಲ್ಲಿದ್ದರೆ, ಬಲ ದಂಡೆಯಲ್ಲಿ ೭.೨ ಮೆಗಾವ್ಯಾಟ್ ಮತ್ತು ೬.೦ ಮೆಗಾವ್ಯಾಟ್ ಸಾಮರ್ಥ್ಯದ ಒಂದೊಂದು ಘಟಕಗಳಿದ್ದು, ಒಟ್ಟು ಭದ್ರಾ ಜಲವಿದ್ಯುದಾಗಾರದಿಂದ ೩೯.೨ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸ್ಥಾಪಿತ ಸಾಮರ್ಥ್ಯವಿದೆ.

ಫೋಟೋ ಕೃಪೆ : kalpa news
೧೯೬೩ ರಲ್ಲಿ ನಾಲ್ಕು ಘಟಕಗಳನ್ನು ಮತ್ತು ೧೯೯೮ ರಲ್ಲಿ ಒಂದು ಘಟಕವನ್ನು (ಬಲ ದಂಡೆಯ ೬.೦ ಮೆಗಾವ್ಯಾಟ್ ಸಾಮರ್ಥ್ಯದ ಘಟಕ) ಸ್ಥಾಪಿಸಲಾಗಿದ್ದು, ಆಣೆಕಟ್ಟಿನಲ್ಲಿ ಸಂಗ್ರಹವಾಗಬಹುದಾದ ನೀರನ್ನು ಅವಲಂಬಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇಲ್ಲಿನ ತಾಂತ್ರಿಕ ವಿಶೇಷತೆಯೆಂದರೆ ಮೂರು ಭಿನ್ನವಾದ ನೀರಿನ ಮಟ್ಟದಿಂದ ವಿದ್ಯುತ್ ಉತ್ಪಾದಿಸುವುದು. ಅಂದರೆ ಎಡ ದಂಡೆಯ ೧೨ ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳನ್ನು ನದೀ ತಟದಿಂದ ೨೪ ಅಡಿ ಎತ್ತರದಲ್ಲೂ, ೨ ಮೆಗಾವ್ಯಾಟ್ ಸಾಮರ್ಥ್ಯದ ಘಟಕವನ್ನು ೪೨ ಅಡಿ ಎತ್ತರದಲ್ಲೂ ಮತ್ತು ಬಲ ದಂಡೆಯ ಘಟಕಗಳನ್ನು ೧೧೮ ಅಡಿ ಎತ್ತರದಲ್ಲೂ (ಟೈಲ್ ರೇಸ್ ಲೆವೆಲ್) ಸ್ಥಾಪಿಸಲಾಗಿದೆ.
ಭದ್ರಾ ವಿದ್ಯುದಾಗಾರದಿಂದ ಉತ್ಪಾದಿಸಿದ ವಿದ್ಯುತ್ತನ್ನು ೧೧ ಕೆವಿ ಯಿಂದ ೬೬ ಕೆವಿ ಗೆ ಪರಿವರ್ತಿಸಿ, ಮುಖ್ಯ ಜಾಲವಾದ ೬೬ ಕೆವಿ ಮಾರ್ಗಕ್ಕೆ ಪೂರೈಸಲಾಗುತ್ತದೆ.

ಮಾಜಿ ಮುಖ್ಯಮಂತ್ರಿ ಮಾನ್ಯ ಶ್ರೀ ನಿಜಲಿಂಗಪ್ಪ (ಫೋಟೋ ಕೃಪೆ : twitter )
ಈ ಯೋಜನೆಯನ್ನು ಸುಮಾರು ನಲವತ್ತು ವರ್ಷಗಳ ಹಿಂದೆ ರಾಜ್ಯಕ್ಕೆ ಸಮರ್ಪಿಸುವ ಸಂದರ್ಭದಲ್ಲಿ , ಅಂದಿನ ರಾಜ್ಮದ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಶ್ರೀ ನಿಜಲಿಂಗಪ್ಪನವರು “ಇನ್ನು ಇಲ್ಲಿ ಬೇಕಾದಷ್ಟು ವಿದ್ಯುತ್ ಉತ್ಪಾದಿಸುತ್ತೇವೆ. ತಾವುಗಳೆಲ್ಲ ಹೆಚ್ಚು ಹೆಚ್ಚು ವಿದ್ಯುತ್ ಉಪಕರಣಗಳನ್ನು ಬಳಸಿ”. ಎಂದು ಕರೆ ಕೊಟ್ಟಿದ್ದರಂತೆ! ಆದರೆ ಈಗ ವಿದ್ಯುತ್ ಬೇಡಿಕೆಯ ಮತ್ತು ಉತ್ಪಾದನೆಯ ಅನುಪಾತ ಅಧಿಕವಾಗಿದ್ದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಆ ನಲವತ್ತು ವರ್ಷದ ಹಿಂದಿನ ಅಂದರೆ ೨೭-೦೬-೧೯೬೩ ರಂದು ಮಾನ್ಯ ಶ್ರೀ ನಿಜಲಿಂಗಪ್ಫನವರು ಕರೆ ಇತ್ತಂತೆ ನಿಮಗೆ ಬೇಕಾದಷ್ಟು ವಿದ್ಯುತ್ ಬಳಸಿ ಎನ್ನುವ ಕಾಲ ಬರಲಿ ಎಂದು ಆಶಿಸುವೆ.

ಫೋಟೋ ಕೃಪೆ : financialexpress
೨೦-೦೭-೧೯೭೦ ರಲ್ಲಿ ಮೈಸೂರು (ಈಗ ಕರ್ನಾಟಕ) ಪವರ್ ಕಾರ್ಪೊರೇಷನ್ ಸ್ಥಾಪನೆಯಾದಾಗ ಹೆಚ್. ಇ. ಸಿ. ಪಿ. (ಹೈಡ್ರೋ ಎಲೆಕ್ಟ್ರಿಕ್ ಕನ್ಸ್ಟ್ರಕ್ಷನ್ ಆಫ್ ಪ್ರಾಜೆಕ್ಟ್ಸ್) ಯವರು ೭೪೬ ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯವುಳ್ಳ ಶರಾವತಿಯ ೮ ಘಟಕಗಳನ್ನೂ ಮತ್ತು ಭದ್ರಾ ಜಲವಿದ್ಯುತ್ ಯೋಜನೆಯ ೪ ಘಟಕಗಳನ್ನು ಹಸ್ತಾಂತರಿಸಿದ್ದರು. ನಂತರ ೧೯೮೦ ರ ಕೊನೆಗೆ ೧೧೧೪.೨ ಮೆಗಾವ್ಯಾಟಿಗೂ, ೧೯೯೦ ರ ಅಂತ್ಯಕ್ಕೆ ೨೪೩೯.೦ ಮೆಗಾವ್ಯಾಟಿಗೂ , ೨೦೦೦ ಇಸವಿಯ ಕೊನೆಗೆ ೩೮೬೮ ಮೆಗಾವ್ಯಾಟಿಗೂ ಮತ್ತು ೨೦೦೩ ರ ಮಾರ್ಚ್ ಅಂತ್ಯಕ್ಕೆ ೪೩೪೮ ಮೆಗಾವ್ಯಾಟಿಗೂ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಕೆಪಿಸಿಯು ಹೆಚ್ಚಿಸಿದೆ. ಇದರಲ್ಲಿ ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರದಿಂದಲೇ ೧೪೭೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದು, ಇದು ಸೂಪರ್ ಥರ್ಮಲ್ ಪವರ್ ಸ್ಟೇಷನ್ ಆಗಿದೆ. ಹಾಗೂ ಉತ್ತಮ ಸಾಧನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುವುದು ಹೆಮ್ಮೆಯ ಸಂಗತಿಯೂ ಹೌದು.
ಕರ್ನಾಟಕ ವಿದ್ಯುತ್ ನಿಗಮದ ಇಂಥಾ ಸಾಧನೆಯ ಮುಂದೆ, ನನ್ನ ಕಾಣಿಕೆ ಅತ್ಯಲ್ಪ ಎಂಬ ಅರಿವಿದ್ದರೂ, ಇವೆಲ್ಲದರೊಳಗೆ ಅಕ್ಪೋಬರ್ ೧೯೭೭ ರಿಂದ ಏಪ್ರಿಲ್ ೨೦೧೨ ರವರೆಗೆ ಭಾಗಿಯಾದ ತೃಪ್ತಿ ಸಿಕ್ಕಿದೆ. ನನ್ನ ಮೂವತ್ತೈದು ವರ್ಷದ ಸೇವಾ ಅವಧಿಯಲ್ಲಿ ಕರ್ನಾಟಕ ವಿದ್ಯುತ್ ನಿಗಮಕ್ಕಾಗಿ ನನಗೆ ಸಿಕ್ಕಂಥಾ ಅವಕಾಶದಲ್ಲಿ ಪ್ರಾಮಾಣಿಕವಾಗಿ ದುಡಿದ ನಂಬಿಕೆ ನನಗಿದೆ. ಇಂಥಾ ಅಪರೂಪದ ವೃತ್ತಿಜೀವನ ಒದಗಿಸಿ ನನ್ನ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಲು ಸಾಧ್ಯವಾದುದಕ್ಕೆ ಕರ್ನಾಟಕ ವಿದ್ಯುತ್ ನಿಗಮಕ್ಕಿದೋ ನನ್ನ ನಮನಗಳು.
************************************
ಹೀಗೆ ಹಾಗೆ ಬರೀತಾ ಹೋದ್ರೆ
ಮುಗಿಯಾಕಿಲ್ಲ ದಾಳನ ಗಂಟು
ಸುಮ್ಕಿರ್ರಣ್ಣಾ ಬೆಳೀಲಿ ನಮ್ದೂ –
ನಿಮ್ದೂ ನಂಟು.
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೧)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೨)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೩)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೪)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೫)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೬ )- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೭ )- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೮ )- ಶಿವಕುಮಾರ್ ಬಾಣಾವರ
ಮುಕ್ತಾಯವಾಯಿತು….
- ಶಿವಕುಮಾರ್ ಬಾಣಾವರ (ಲೇಖಕರು, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )
