ವಾರಾಹಿ ಜಲವಿದ್ಯುತ್ ಯೋಜನೆಯು ರಾಜ್ಯದ ಮೊಟ್ಟಮೊದಲ ಭೂಗರ್ಭ ವಿದ್ಯುದಾಗಾರ ಎಂಬ ಖ್ಯಾತಿ ಪಡೆದಿದೆ. ಈ ವಿದ್ಯುದಾಗಾರವನ್ನು ವೀಕ್ಷಿಸಿದವರಿಗೆ ಮಾನವನ ಚಾಕಚಕ್ಯತೆ, ಬುದ್ಧಿಮತ್ತೆ, ತಂತ್ರಜ್ಞಾನಗಳ ಅಳವಡಿಕೆ ಮತ್ತು ಕರ್ನಾಟಕ ವಿದ್ಯುತ್ ನಿಗಮದವರ ಕಾರ್ಯಕ್ಷಮತೆಯು ಬೆರಗು ಹುಟ್ಟಿಸುತ್ತದೆ. ವಾರಾಹಿ ಜಲವಿದ್ಯುತ್ ಯೋಜನೆ ಕುರಿತು ಶಿವಕುಮಾರ್ ಬಾಣಾವರ ಅವರ ಅನುಭವದ ಲೇಖನ. ಮುಂದೆ ಓದಿ…
ರಾಜ್ಯದ ಮೊಟ್ಟಮೊದಲ ಭೂಗರ್ಭ ವಿದ್ಯುದಾಗಾರ ಎಂಬ ಖ್ಯಾತಿಗೆ ವಾರಾಹಿ ಜಲವಿದ್ಯುತ್ ಯೋಜನೆ ಭಾಜನವಾಗಿದೆ. ಈ ಯೋಜನೆಯ ಎರಡು ಅಣೆಕಟ್ಟುಗಳು (ಮಾಣಿ ಅಣೆಕಟ್ಟು ಹಾಗೂ ಪಿಕಪ್ ಅಣೆಕಟ್ಟು) ಹಾಗೂ ಒಂದು ಮಾಣಿ ಅಣೆಕಟ್ಟು ವಿದ್ಯುದಾಗಾರವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿದ್ದರೆ ಒತ್ತಡ ಸುರಂಗ (Pressure Shaft) ಮತ್ತು ಭೂಗರ್ಭ ವಿದ್ಯುದಾಗಾರವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿದೆ. ಪಶ್ಚಿಮ ಘಟ್ಟದ ವಾರಾಹಿ ನದಿ ಶಿವಮೊಗ್ಗ ಜಿಲ್ಲೆಯ ಆಗುಂಬೆ ಬಳಿ ಸಮುದ್ರ ಮಟ್ಟದಿಂದ ೭೩೦ ಮೀ. ಎತ್ತರದಲ್ಲಿರುವ ಹೆಬ್ಬಾಗಿಲಿನಲ್ಲಿ ಹುಟ್ಟಿ ಹರಿಯುತ್ತಾ ಸಾಗಿ ಕುಂದಾಪುರದ ಹತ್ತಿರ ಅರಬ್ಬೀ ಸಮುದ್ರ ಸೇರುತ್ತದೆ. ಈ ಮಧ್ಯೆ ಇದರ ನೀರನ್ನು ಉಪಯೋಗಿಸಿಕೊಂಡು ಮಾಣಿ ಅಣೆಕಟ್ಟು ವಿದ್ಯುದಾಗಾರದ ೨ ಘಟಕಗಳಿಂದ ೯ ಮೆಗಾ ವ್ಯಾಟ್ ಹಾಗೂ ವಾರಾಹಿ ಭೂಗರ್ಭ ವಿದ್ಯುದಾಗಾರದ ೪ ಘಟಕಗಳಿಂದ ೪೬೦ ಮೆಗಾ ವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಹೀಗೆ ವಿದ್ಯುತ್ತನ್ನು ಉತ್ಪಾದಿಸಲು ಬೇಕಾದ ಘಟಕಗಳನ್ನು ವಾರಾಹಿ ಭೂಗರ್ಭ ವಿದ್ಯುದಾಗಾರದಲ್ಲಿ ಸ್ಥಾಪಿಸಲು ೧೧೫ ಮೀ. ಉದ್ದ ೨೦ ಮೀ. ಅಗಲ ಮತ್ತು ೫೦ ಮೀ. ಎತ್ತರ ಅಳತೆಯುಳ್ಳ ಭೂಗರ್ಭದಲ್ಲೇ ದೊಡ್ಡ ಗವಿಯನ್ನು ಕೊರೆಯಲಾಗಿದೆ. ಇಲ್ಲಿನ ಮೆಷಿನ್ ಹಾಲ್ ವೈಶಿಷ್ಟ್ಯವೆಂದರೆ, ಪೂರ್ವ ಸೀಳುವಿಕೆ ಹಾಗೂ ನಿಯಂತ್ರಿತ ಸಿಡಿತದಿಂದ ಉಂಟಾದ ಶಿಲಾಚಾಚು ಉದ್ದ ಪಟ್ಟಿಯ ಮೇಲೆ ನೇರವಾಗಿ ಸ್ಥಾಪಿಸಿರುವ ೧೭೫ ಟನ್ನಿನ ಸಾಮರ್ಥ್ಯದ ವಿದ್ಯುತ್ ಚಾಲಿತ ಇಒಟಿ ಕ್ರೇನುಗಳು! ಇಂಥಾ ಮೆಷಿನ್ ಹಾಲಿಗೆ ಹಾದಿ ಕಲ್ಪಿಸಿರುವ ಒಳ ಸುರಂಗವು ೮೦೦ ಮೀ. ಉದ್ದವಿದ್ದು ಗುಡ್ಡದ ಹೊರ ಭಾಗದಿಂದ ಪ್ರವೇಶಿಸಿದರೆ ಅದ್ಭುತ ಲೋಕವೊಂದಕ್ಕೆ ತೆರಳುತ್ತಿರುವ ಅನುಭವವಾಗುತ್ತದೆ. ಈ ವಿದ್ಯುದಾಗಾರವನ್ನು ವೀಕ್ಷಿಸಿ ಹೊರಬಂದರೆ ಮಾನವನ ಚಾಕಚಕ್ಯತೆ, ಬದ್ಧಿಮತ್ತೆ, ತಂತ್ರಜ್ಞಾನಗಳ ಅಳವಡಿಕೆ ಮತ್ತು ಕರ್ನಾಟಕ ವಿದ್ಯುತ್ ನಿಗಮದವರ ಕಾರ್ಯಕ್ಷಮತೆಯು ಬೆರಗು ಹುಟ್ಟಿಸುತ್ತದೆ.

ಫೋಟೋ ಕೃಪೆ : KPCL
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯ ವಾತಾವರಣ ಅನಿರ್ವಚನೀಯ. ಸಮೃದ್ಧವಾಗಿ ಬೆಳೆದು ನಿಂತ ಕಾಡು, ಶುದ್ಧವಾದ ನೀರು, ಗಾಳಿಯಿಂದ ಮಲೆನಾಡಿನ ಎಲ್ಲಾ ವಿಧವಾದ ಅನುಭವಗಳನ್ನೂ ದಟ್ಟವಾಗಿ ನೀಡುತ್ತಿತ್ತು. ಇಲ್ಲಿನ ಮಳೆಗಾಲವನ್ನಂತೂ ಮರೆಯಲಾಗದು. ಯಾವ ತರಹದ ಚತ್ರಿಗಳನ್ನು ಹಿಡಿದುಕೊಂಡು ಹೊರಟರೂ, ತೊಟ್ಟ ಬಟ್ಟೆಗಳಲ್ಲಿ ಮುಕ್ಕಾಲು ಭಾಗ ನೆನೆದು ಒದ್ದೆಯಾಗಿ ಬಿಡುತ್ತಿತ್ತು. ಮಳೆ ಸುರಿಯಲು ಪ್ರಾರಂಭಿಸಿದರೆ ದಿನಗಟ್ಟಲೆ ಸುರಿಯುತ್ತಲೇ ಇರುತ್ತಿತ್ತು. ಮೊದಲೇ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕಲ್ನಾರು ಶೀಟಿನ ಮನೆಗಳಲ್ಲಿ ನಮ್ಮ ವಾಸ. ಮಳೆಗಾಲದಲ್ಲಿ ಸದಾ ರೂಮ್ ಹೀಟರ್ ಗಳನ್ನು ಹಾಕಿಕೊಂಡು ಇರಬೇಕಿತ್ತು. ಇಲ್ಲದಿದ್ದರೆ ಪ್ರತಿಯೊಂದು ವಸ್ತುವೂ ಬೂಸರು ಹಿಡಿದುಹಾಳಾಗಿ ಬಿಡುತ್ತಿದ್ದವು. ಪ್ರಥಮದಲ್ಲಿ ಇದು ಗೊತ್ತಾಗದೇ ಬಟ್ಟೆಗಳು ಹಾಗೂ ನನ್ನ ಕ್ಯಾಮರಾ ಹಾಳಾದವು. ಇಂಥಾ ಮನೆಯೊಳಗೆ ಇದ್ದಾಗ ಗಾಳಿ ಬೀಸಿದಂತೆಲ್ಲಾ ಕಲ್ನಾರು ಶೀಟಿನ ಮೇಲೆ ಲಯಬದ್ಧವಾಗಿ ಮಳೆ ಬೀಳುತ್ತಿದ್ದ ಶಬ್ಧವಂತೂ ನನ್ನನ್ನು ಇಹಲೋಕದಿಂದ ನಾದ ಲೋಕಕ್ಕೆ ಕರೆದೊಯ್ದು ಬಿಡುತ್ತಿತ್ತು. ರಾತ್ರಿ ಕಂಬಳಿ ಹೊದ್ದು ಮಲಗಿದರೆ ಜೋಗುಳ ಹಾಡಿದ ಅನುಭವವಾಗುತ್ತಿತ್ತು. ಮೂರು ತಿಂಗಳಾದರೂ ಸೂರ್ಯನ ದರ್ಶನ ಭಾಗ್ಯವಿಲ್ಲದೆ, ರಸ್ತೆಗಳೆಲ್ಲಾ ಪಾಚಿ ಕಟ್ಟಿಕೊಂಡು, ಎ. ಸಿ. ಶೀಟುಗಳೂ ಕರ್ರಗಾಗಿ ಮನೆಯ ಮುಂದಿನ – ಹಿಂದಿನ ಅಂಗಳಗಳೆಲ್ಲ ಜಾರು ಬಂಡೆಗಳಾಗಿ ತಂತಿಯ ಮೇಲೆ ನಡೆದಂತೆ ಕಸರತ್ತು ಮಾಡುತ್ತಾ ಮನೆಯೊಳಗೆ ಪ್ರವೇಶಿಸುವಂತಹ ಸ್ಥಿತಿ. ನಾನೂರರಿಂದ ಐನೂರು ಸೆಂಟಿಮೀಟರಿಗೂ ಹೆಚ್ಚು ಮಳೆ ಬಿದ್ದು ಅನಂತರದ ದಿನಗಳಲ್ಲಿ ಇಡೀ ವಸಾಹತುವನ್ನು ಆವರಿಸಿಕೊಂಡಂತೆ ಮಂಜು ಮುಸುಕಿ, ಬೆಳಗ್ಗೆ ಹನ್ನೊಂದು ಗಂಟೆಯ ನಂತರ ತನ್ನಿರವನ್ನು ಪ್ರದರ್ಶಿಸಲು ಭಾಸ್ಕರನು ಆರಂಭಿಸಿದ. ವಾರದ ಮೇಲೆ ಎಲ್ಲರ ಮನೆಗಳ ಸುತ್ತಮುತ್ತ ಕಟ್ಟಿಕೊಂಡಿದ್ದ ಪಾಚಿಯು ಚಕ್ಕೆಯಂತೆ ಮೇಲೇಳಲು ಪ್ರಾರಂಭಿಸಿದಾಗಲೇ ನಮ್ಮ ರಜಾ ದಿನಗಳಿಗೆ ಮಹತ್ವ ಬರುತ್ತಿದ್ದದ್ದು.
ಮುಂಜಾನೆಗಳಲ್ಲಿ ಈ ವಸಾಹತುವನ್ನು ತುಂಬಿಕೊಳ್ಳುತ್ತಿದ್ದ ಮಂಜು ಉತ್ತರ ಭಾರತದ ಶಿಮ್ಲಾವನ್ನು ಮೀರಿಸುತ್ತಿತ್ತು. ಮಳೆಗಾಲ ನಿಂತ ಮೇಲೆ ಈ ಪ್ರದೇಶದ ಒಟ್ಟಂದವನ್ನು ವರ್ಣಿಸಲು ಪದಗಳಿಗಾಗಿ ತಡಕಾಡುವಂತೆ ಆಗುತ್ತಿತ್ತು. ಹಾಗಾದರೆ ಓದಿ… ಅಗೋಚರ ಕವಿಯೊಬ್ಬರು ಇಲ್ಲಿನ ವರ್ಣನೆಯನ್ನು ತಮ್ಮ ಶಬ್ಧಗಳಲ್ಲಿ ಕೆಳಗಿನಂತೆ ಚಿತ್ರಿಸಿದ್ದಾರೆ. (ಈ ಕವನವನ್ನು ರಚಿಸಿದವರ ಹೆಸರು ತಿಳಿದಿಲ್ಲ. ಅವರ ಕ್ಷಮೆ ಕೋರಿ ಇಲ್ಲಿ ದಾಖಲಿಸಿದ್ದೇನೆ).
ವಾರಾಹಿಯ ಸಿರಿ ಮಲೆಗಳ ಮೇಲೆ !
ಬಾನಿನ ನೇಸರನ ಕೋಮಲ ಲೀಲೆ
ಹಸುರಿನ ಕೆನ್ನೆಗೆ ಹೊನ್ನಿನ ಮುತ್ತು!
ಕೊಡುತ್ತಿತ್ತು… ಕೊಡುತ್ತಿತ್ತು!
ಬೆಳದಿಂಗಳ ಕಿರು ದಾರಿಯೊಳು ನಾನು!
ಮೆಲ್ಲನೆ ನಡೆದಿರೆ ಪರ್ವತ ತಾನು!
ಅಲೆ ಅಲೆಯಲೇ ಮುಗಿಲಿಗೇರಿತ್ತು
ಏರಿತ್ತೂ… ಏರಿತ್ತೂ…
ಸುತ್ತಲೂ ಕಾಡಿನ ಹೂಗಳು ಕಣ್ಣಿಗೆ
ನಲಿ ನಲಿದವು ಹೂಗಳು ಬಿಸಿಲಲಿ ನುಣ್ಣನೆ
ಹವಾ ಗಾನವು ಮೌನವ ಪಡೆದಿತ್ತು
ಮಿಡಿದಿತ್ತೂ… ಮಿಡಿದಿತ್ತೂ…
ವಾರಾಹಿ ಸಿರಿ ಮಲೆಗಳ ನಾಡು
ಮೇಲಾಕಾಶವು ಕೆಳಗಡೆ ಕಾಡು
ಅಂತೆಯೇ ಇರುವುದು ನನ್ನಾ ಬೀಡು
ಮೆಚ್ಚಿನ ಮಲೆನಾಡು ಮೆಚ್ಚಿನ ಮಲೆನಾಡು
ಮಲೆನಾಡೆನಗೆ ಹತ್ತಿರದಲ್ಲೇ
ಆದರಿಂದ ಎಲ್ಲವ ಮರೆಯಲು ಬಲ್ಲೆ
ಆದರೆ ಮರೆಯೆನು ನಿನ್ನ ನಾನಮ್ಮ
ನಮ್ಮೂರ ಚಂಡಿಕಾಂಬಾ
ತಾಯೇ ನಮ್ಮೂರ ದುರ್ಗಾಂಬಾ!
ಈ ಕವನದಲ್ಲಿನ ಚಂಡಿಕಾಂಬಾ ಮಾಸ್ತಿಕಟ್ಟೆಯಿಂದ ಹೊಸಂಗಡಿಗೆ ಹೋಗುವ ದಾರಿಯಲ್ಲಿ (ಅಂದರೆ ಬಾಳೆಬರೆ ಘಾಟ್ ನ ವನದೇವತೆ ಅರ್ಥಾತ್ ಚಂಡಿಕಾ ವನ) ದೇವಾಲಯ ಸಿಗುತ್ತದೆ. ಮಾಸ್ತಿಕಟ್ಟೆಯ ಗುಡ್ಡ ಬೆಟ್ಟ ಪ್ರಶಾಂತತೆ ಖಾಸಗಿ ಬಸ್ಸುಗಳ ಅಚ್ಚುಕಟ್ಟುತನ, ಸಮಯ ಪ್ರಜ್ಞೆ, ಇತ್ಯಾದಿಗಳು ಇಂದಿಗೂ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ಮುಂಗಾರು ಮಳೆಯ ಮೋಡಗಳು
ಮದ್ದಾನೆ ನಡಿಗೇಲಿ ಗುಡ್ಡದ ಮೇಲೇರಿ ಬರುತಾವೆ
ಹಗಲೋ ಇರುಳೋ ತಿಳಿಯದ ಹಾಗೆ ಅಮರಿಕೊಳುತಾವೆ
ನವಮಾಸ ತುಂಬಿದ ಗರ್ಭಿಣಿಯಂತೆ ತುಂಬಿ ತುಳುಕುತಾವೆ
ಗುಡ್ಡದಿಂದ ಗುಡ್ಡಕ್ಕೂ ಸೇತುವೆ ಕಟ್ಟಲು ಹೆಣಗುತಾವೆ
ಕೊನೆಗೂ ನಿರ್ಮಿಸಿ ಚಪ್ಪರವ ಮದುವೆ ಮನೆಯಾಗಿಸುತಾವೆ
ವಿಮಾನದಿಂದ ಪುಷ್ಪ ಚೆಲ್ಲಿದಹಾಗೆ ಆಲಿಕಲ್ಲ ಉದುರಿಸುತಾವೆ
ಮಂಗಳವಾದ್ಯದೊಂದಿಗೆ ಇಳೆಗೆ ಧಾರೆ ಎರೆದು ಇನ್ನಿಲ್ಲವಾಗುತಾವೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಹೆಮ್ಮೆಯ ವಾರಾಹಿ ಜಲ ವಿದ್ಯುತ್ ಯೋಜನೆಯ ಕಾಲೋನಿಯಾದ ಮಾಸ್ತಿಕಟ್ಟೆಯಿಂದ ೧೨ ಕಿಮೀ. ದೂರದಲ್ಲಿರುವ, ತೀರ್ಥಹಳ್ಳಿಯಿಂದ ಸಾಗರ ಮಾರ್ಗದಲ್ಲಿ ಸುಮಾರು ೧೮ ಕಿ.ಮಿ ದೂರದಲ್ಲಿ ಬೊಬ್ಬಿ ಗ್ರಾಮದ (ಯಡೂರು ರಸ್ತೆ) ರಸ್ತೆಯಲ್ಲಿ ಸಾಗಿದರೆ ಕವಲೇ ದುರ್ಗ ಸಿಗುವುದು.

ಫೋಟೋ ಕೃಪೆ : KPCL
ಕವಲೇ ದುರ್ಗ ಮೂರು ಸುತ್ತಿನ ಕೋಟೆಯಾಗಿದ್ದು ಹಿಂದೆ ಭುವನಗಿರಿ ಎಂದು ಕರೆಯಲ್ಪಡುತ್ತಿತ್ತು.. ನೈಸರ್ಗಿಕ ಗುಡ್ಡದ ರೂಪರೇಶೆಗಳನ್ನು ಅನುಸರಿಸಿ ಕಣಶಿಲೆಯಿಂದ ಇದನ್ನು ಕಟ್ಟಲಾಗಿದೆ.
ಹಿಂದೆ ವಿಜಯ ನಗರ ಸಂಸ್ಥಾನದ ಸಾಮಂತರಾಗಿ ನಂತರ ಸ್ವತಂತ್ರ ರಾಜರಾಗಿ ಆಳಿದ ಕೆಳದಿ ಸಂಸ್ಥಾನದ ವೆಂಕಟಪ್ಪ ನಾಯಕ ೧೫೮೦ ರಲ್ಲಿ ಅತ್ಯಂತ ಶ್ರೇಷ್ಠ ವಾಸ್ತು ಶಿಲ್ಪದಿಂದ ಕಟ್ಟಿದ ಮೂರು ಸುತ್ತಿನ ಕೋಟೆ ಇದಾಗಿದೆ…
ಕೋಟೆಯ ವಾಸ್ತುಶಿಲ್ಪ ನಿಜಕ್ಕೂ ಬೆರಗು ಹುಟ್ಟಿಸುವಂತಹುದು.. ಕೋಟೆಯ ಆವರಣದಲ್ಲಿ ಅರಮನೆ, ಮಹತ್ತಿನ ಮಠ, ಶೃಂಗೇರಿ ಮಠ, ಟಂಕಸಾಲೆ, ಕುದುರೆ ಆನೆಲಾಯಗಳಿದ್ದು ಕೊಳಗಳನ್ನು ನಿರ್ಮಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದ್ದು ಸುಸಜ್ಜಿತ ಅಗ್ರಹಾರವನ್ನಾಗಿ ಮಾಡಲಾಗಿತ್ತು. ಕೋಟೆಯ ಇಕ್ಕೆಲಗಳಲ್ಲಿ ಪ್ರತಿಯೊಂದು ಸುತ್ತಿನ ಪ್ರವೇಶದ್ವಾರದಲ್ಲೂ ಕಾವಲು ಗೋಪುರವನ್ನು ನಿರ್ಮಿಸಲಾಗಿದ್ದು, ಮಧ್ಯದಲ್ಲಿ ದೇವಸ್ಥಾನಗಳನ್ನು ನಿರ್ಮಿಸಲಾಗಿತ್ತು. ಅರಮನೆ ನಿವೇಶನಗಳು, ಕಟ್ಟಡದ ಅವಶೇಷಗಳನ್ನು ಕಾಣಬಹುದಾಗಿದೆ.
ಕೋಟೆಯ ಮಧ್ಯದಲ್ಲಿ ಶಿಖರೇಶ್ವರ ಅಥವಾ ಶ್ರೀಕಂಠೇಶ್ವರ ದೇವಸ್ಥಾನವಿದೆ. ನಂದಿ ಮಂಟಪ, ಮುಖ ಮಂಟಪ, ಧ್ವಜ ಸ್ಥಂಭಗಳೂ ಇವೆ.. ಸೂರ್ಯಾಸ್ತಮಾನವನ್ನು ನೋಡಲು ಅನುಪಮವಾಗಿದೆ. ನೋಡಲು ಗಗನವೇ ಬಾಗಿದಂತೆ ಭಾಸವಾಗುತ್ತದೆ. ಮನಕ್ಕೆ ಮುದ ನೀಡುವ ತೇಲು ಮೋಡಗಳು!!

ಫೋಟೋ ಕೃಪೆ : insider
ಅರಮನೆಯ ಉತ್ಖನನದಲ್ಲಿ ಒಳಾಂಗಣ ವಿನ್ಯಾಸದಲ್ಲಿ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಸಂಪರ್ಕವಿರುವುದು ತಿಳಿದು ಬಂದಿರುತ್ತದೆ.. ಪೂಜಾಗೃಹ, ಸ್ನಾನದ ಕೋಣೆ, ಅದಕ್ಕೆ ಪೂರಕವಾದ ನೀರಿನ ವ್ಯವಸ್ಥೆ ಇತ್ತೆಂದು ಇತಿಹಾಸ ಇಲಾಖೆಯಿಂದ ತಿಳಿದು ಬಂದಿರುತ್ತದೆ. ಪಾಕ ಶಾಲೆಯಲ್ಲಿ ಐದು ಕಡೆಗಳಿಂದ ಜ್ವಲಿಸುವ ಒಲೆ ಇತ್ತೆಂದು ಕಂಡು ಬಂದಿರುತ್ತದೆ.
ಅವಶ್ಯಕವಾಗಿ ನೋಡುವ ಸ್ಥಳ ಇದಾಗಿದೆ. ಸುತ್ತಲು ಹಸಿರು ಪರಿಸರ, ಕೋಟೆಯ ಅವಶೇಷಗಳು, ದೇವಸ್ಥಾನ, ಮಧ್ಯ ಮಧ್ಯೆ ಇರುವ ಕೊಳಗಳು, ಕೆರೆಗಳು ಕಾಣ ಸಿಗುತ್ತದೆ.. ಕೋಟೆಯ ಮೇಲಿನಿಂದ ಲಿಂಗನಮಕ್ಕಿ ಅಣೆಕಟ್ಟಿನ ಶರಾವತಿ ನದಿಯ ಹಿನ್ನೀರನ್ನು ನೋಡಬಹುದಾಗಿದೆ. ಚಾರಣ ಪ್ರಿಯರಿಗೆ ಹೇಳಿಮಾಡಿಸಿದ ಜಾಗ.
ಸಂಪೂರ್ಣ ಕೋಟೆಯನ್ನು ನೋಡಲು ಸುಮಾರು ಮೂರು ಕಿ.ಮಿ ನಡೆಯ ಬೇಕಾಗುವುದು. ನಿಮ್ಮ ವಾಹನಗಳನ್ನು ಕವಲೇ ದುರ್ಗ ಗ್ರಾಮದಲ್ಲಿ ನಿಲ್ಲಿಸಿ ನಡೆದು ಹೋಗಬೇಕಾಗುವುದು.
ಹೋಗುವಾಗ ಹಣ್ಣು ಮತ್ತು ನೀರನ್ನು ಅವಶ್ಯವಾಗಿ ತೆಗೆದು ಕೊಂಡು ಹೋಗಿರಿ. ಪ್ಲಾಸ್ಟಿಕ್ ಗೆ ಅವಕಾಶವಿಲ್ಲ. ಬೆಳಗ್ಗೆ ಏಳರ ಸುಮಾರಿಗೆ ಹೊರಟರೆ ಸೂಕ್ತ. ನಡೆಯಲು ಶಕ್ತ ವಯಸ್ಸಾದವರೂ ಕೂಡ ಹೋಗಬಹುದು. ಪರಿಸರ ಪ್ರೇಮಿಗಳಿಗೆ ಅತ್ಯಂತ ಪ್ರಿಯವಾಗುವ ಸ್ಥಳ ಇದಾಗಿದೆ. ನೆಡೆಯುವ ಹಾದಿಯು ಚೆನ್ನಾಗಿದೆ.. ರಸ್ತೆಯೂ ಕೂಡ.
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೧)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೨)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೩)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೪)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೫)- ಶಿವಕುಮಾರ್ ಬಾಣಾವರ
- ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೬ )- ಶಿವಕುಮಾರ್ ಬಾಣಾವರ
- ಬಾಣಾವರ ಶಿವಕುಮಾರ್ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )
