ಜಾನುವಾರುಗಳಿಗೆ ‘ಕಾಡುರಬ್ಬರ್’ ಗಿಡ ಮಾರಕ



ದನ, ಎಮ್ಮೆ , ಕುರಿ, ಮೇಕೆಗಳು ಈ ಸಸ್ಯದ ಸೊಪ್ಪನ್ನು ತಿಂದೊಡನೆ ಜೀವಕ್ಕೆ ಅಪಾಯ. ಈ ಸಸ್ಯದ ಬಗ್ಗೆ  ಪಶುವೈದ್ಯ ಯುವರಾಜ್ ಅವರು ಓದುಗರಿಗೆ ಉಪಯುಕ್ತ ಮಾಹಿತಿಯೊಂದನ್ನು ನೀಡಿದ್ದಾರೆ.ಮುಂದೆ ಓದಿ…

ಮಲೆನಾಡು , ಕರಾವಳಿ, ನೀರಾವರಿ ಪ್ರದೇಶಗಳು, ನದಿ- ಕೆರೆದಂಡೆಗಳಲ್ಲಿ ಕಂಡುಬರುವ #ಕಾಡು_ರಬ್ಬರ್_ಗಿಡಗಳನ್ನು ಎಲ್ಲರೂ ಸಾಮನ್ಯವಾಗಿ ನೋಡಿರುತ್ತೀರಿ. ಈ ಸಸ್ಯವು Euphorbiacere ಕುಟುಂಬಕ್ಕೆ ಸೇರಿದ್ದು, ಮೂಲತಃ ದಕ್ಷಿಣ ಆಫ್ರಿಕಾ ದೇಶದ ಸಸ್ಯವಾಗಿರುತ್ತದೆ . ಬಹಳ ವೇಗವಾಗಿ ವಂಶಾಭಿವೃದ್ದಿಯನ್ನು ಮಾಡುವ ಈ ಸಸ್ಯವು ಕುರುಚಲು ಗಿಡಗಳ ನಡುವೆ ಯತೇಚ್ಚವಾಗಿ ಬೆಳೆಯುತ್ತದೆ. ಇವುಗಳ ಕಾಂಡವು ಮೃದುವಾಗಿದ್ದು ಗಾಳಿ ಮಳೆಗೆ ಬೇಗನೆ ಮುರಿದುಬೀಳುತ್ತವೆ. ಕಡು ಹಸಿರು ಬಣ್ಣದ ಎಲೆಗಳನ್ನು ಹೊಂದಿರುವ ಇವುಗಳ ಎಲೆಗಳನ್ನು ಜಾನುವಾರುಗಳು ಇಷ್ಟಪಟ್ಟು ಸೇವಿಸುತ್ತವೆ. ಆದರೆ ಈ ಸಸ್ಯಗಳಲ್ಲಿರುವ “ಸೈಯನೈಡ್” ಎಂಬ ವಿಷಕಾರಿ ಅಂಶವು ಜಾನುವಾರುಗಳ ಜೀವಕ್ಕೆ ತರಬಹುದಾದ ಅಪಾಯದ ಕುರಿತು ಹಲವರಿಗೆ ತಿಳಿದಿರುವುದಿಲ್ಲ. ಇದೇ ಕುಟುಂಬಕ್ಕೆ ಸೇರಿದ ಎಲೆಗಳಲ್ಲಿ ಸಾಮ್ಯತೆ ಇರುವ ” ರಬ್ಬರ್ ಗಿಡ” (ತೋಟಗಾರಿಕಾ ಬೆಳೆ) ಮತ್ತು ಮರಗೆಣಸಿನ ಗಿಡದಲ್ಲಿಯೂ ಸಹ ಇದೇ ಸಯನೈಡ್ ಅಂಶವಿರುತ್ತದೆ ಎಂಬುದು ಈಗಾಗಲೇ ಸಂಶೋಧನೆಯಲ್ಲಿ ಸಾಬೀತಾಗಿರುತ್ತದೆ.

ಮೆಲುಕು ಹಾಕುವ ಪ್ರಾಣಿಗಳಾದ ದನ, ಎಮ್ಮೆ , ಕುರಿ, ಮೇಕೆಗಳು ಈ ಸಸ್ಯದ ಸೊಪ್ಪನ್ನು ತಿಂದೊಡನೆ ಅವುಗಳ ಮೇವಿನ ಚೀಲ “#ರುಮೆನ್” ನಲ್ಲಿ ಕಿಣ್ವಗಳ ಸಂಪರ್ಕಕ್ಕೆ ಬಂದು ‘ ಹೈಡ್ರೋ ಸಯಾನಿಕ್ ಆಮ್ಲ'(HCN) ಎಂಬ ವಿಷಕಾರಿ ರಾಸಾಯನಿಕವಾಗಿ ಪರಿವರ್ತನೆ ಹೊಂದುತ್ತದೆ. ನಂತರ ಜೀರ್ಣಾಂಗದ ಮುಖಾಂತರ ರಕ್ತಕ್ಕೆ ಸೇರಿದ ವಿಷಕಾರಿ HCN , ಕೆಂಪುರಕ್ತ ಕಣಗಳು ಆಮ್ಲಜನಕವನ್ನು ಜೀವಕೋಶಗಳಿಗೆ ಸರಭರಾಜು ಮಾಡದಂತೆ ತಡೆಯುತ್ತವೆ ಮತ್ತು ಜೀವಕೋಶಗಳು ಆಮ್ಲಜನಕವನ್ನು ಉಪಯೋಗಿಸಿಕೊಳ್ಳುವ ಸಾಮರ್ಥ್ಯವನ್ನು ಸಹ ಕಡಿಮೆ ಮಾಡುತ್ತವೆ . ಇದರಿಂದ ಶರೀರದ ವಿವಿಧ ಸೂಕ್ಷ್ಮ ಅಂಗಗಳಿಗೆ ಆಮ್ಲಜನಕದ ಕೊರತೆ ಉಂಟಾಗುತ್ತದೆ, ಅದರಲ್ಲೂ ಮುಖ್ಯವಾಗಿ ಮೆದುಳಿನ ಜೀವಕೋಶಗಳಿಗೆ ಆಮ್ಲಜನಕದ ಅತೀ ಅವಶ್ಯಕತೆ ಇದ್ದು ನರಮಂಡಲದ ಜೀವಕೋಶಗಳು ನಿತ್ರಾಣಗೊಂಡು ರಾಸುಗಳು ಅಸ್ವಸ್ಥಗೊಳ್ಳುತ್ತವೆ ಮತ್ತು ಮೆದುಳಿನಲ್ಲಿರುವ ಉಸಿರಾಟದ ಕೇಂದ್ರಕ್ಕೆ (Respiratory Centre) ಹಾನಿಯಾಗಿ ತೀವ್ರತರನಾದ ಉಸಿರಾಟದ ಸಮಸ್ಯೆಗೆ ಸಿಲುಕುತ್ತವೆ ಹಾಗೂ ಸಮಸ್ಯೆಗೆ ಸಿಲುಕಿದ ಜಾನುವಾರುಗಳು ಚಿಕಿತ್ಸೆ ದೊರಕದಿದ್ದರೆ ಕಡಿಮೆ ಸಮಯದಲ್ಲಿ (15ನಿಮಿಷದಿಂದ -2 ತಾಸುಗಳ ಒಳಗೆ ) ಮರಣ ಹೊಂದುತ್ತವೆ.

ವಿಷಬಾಧೆಯ ಲಕ್ಷಣಗಳು :

ಸಮಸ್ಯೆಗೆ ಸಿಲುಕಿದ ಜಾನುವಾರುಗಳಲ್ಲಿ ಈ ಕೆಳಕಂಡ ಲಕ್ಷಣಗಳನ್ನು ನೋಡಬಹುದು.

* ಈ ಗಿಡದ ಸೊಪ್ಪನ್ನು ಹೆಚ್ಚಾಗಿ ತಿಂದ ಜಾನುವಾರುಗಳು ಕೆಲವೇ ನಿಮಿಷಗಳಲ್ಲಿ ತಿಂದ ಜಾಗದಲ್ಲಿಯೇ ಮೃತಪಟ್ಟಿರುತ್ತವೆ.

* ಉಸಿರಾಟದ ಸಮಸ್ಯೆ

* ಹೊಟ್ಟೆಯುಬ್ಬರ

* ಯತೇಚ್ಚ ಜೊಲ್ಲು ಇಳಿದು ಹೋಗುವುದು

* ಮಾಂಸಖಂಡಗಳ ಕಂಪನ

* ಮೊದಲಿಗೆ ಲೋಳೆ ಪೊರೆಗೆಳು (Mucus membrane) ಕಡುಗೆಂಪು ಬಣ್ಣದಿಂದ ಗೋಚರಿಸಿ ನಂತರ ತೆಳು ನೀಲಿ ಬಣ್ಣಕ್ಕೆ ತಿರುಗುತ್ತದೆ.

ಪತ್ತೆ ಹಚ್ಚುವ ವಿಧಾನ:

* ಈ ಗಿಡಗಳು ರಾಸುಗಳು ಮೇಯುವ ಜಾಗದಲ್ಲಿ ಮುರಿದು ಬಿದ್ದಿರುವುದು / ಸೊಪ್ಪು ತರುವವರು ತಿಳಿಯದೇ ಕಡಿದು ಹಾಕಿರುವ ಸಾಂದರ್ಬಿಕ ಪುರಾವೆಗಳು ಸಮಸ್ಯೆಯ ಕಾರಣ ಪತ್ತೆ ಹಚ್ಚಲು ಸಹಕಾರಿಯಾಗಿರುತ್ತದೆ.

* ಸೊಪ್ಪನ್ನು ತಿಂದ ಜಾಗದಲ್ಲಿಯೇ ಕೆಲವು ಜಾನುವಾರುಗಳು ಮರಣ ಹೊಂದಿರುವುದನ್ನು ನೋಡಿ, ಸೈಯನೈಡ್ ವಿಷಬಾದೆಯೆಂದು (ಪ್ರಮುಖವಾಗಿ) ಶಂಕಿಸಬಹುದಾಗಿದೆ. ಏಕೆಂದರೆ ಬೇರೆ ವಿಷಯುಕ್ತ ಸೊಪ್ಪುಗಳನ್ನು ತಿಂದೊಡನೆ ಇಷ್ಟು ಬೇಗ ಸಾವು ಸಂಬವಿಸುವುದಿಲ್ಲ.

* ಮೇಲೆ ತಿಳಿಸಿದ ಲಕ್ಷಣಗಳನ್ನು ಆದರಿಸಿ, ಸೈಯನೈಡ್ ವಿಷಬಾದೆಯನ್ನು ಶಂಕಿಸಬಹುದು.

* ಮೃತ ಪಟ್ಟ ಜಾನುವಾರುಗಳ ಮರಣೋತ್ತರ ಪರೀಕ್ಷೆ ಮಾಡಿ, ಮೇವಿನ ಮಾದರಿಗಳನ್ನು ಕಡಿಮೆ ಸಮಯದ ಅಂತರದಲ್ಲಿ ಪ್ರಯೋಗಾಲಯಕ್ಕೆ ಕಳಿಸಿ ದೃಢಪಡಿಸಬಹುದಾಗಿದೆ.

* ರಾಸುಗಳು ತಿನ್ನುತ್ತಿದ್ದ ಸೊಪ್ಪನ್ನು ಸಹ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳಿಸಿ ವಿಷಕಾರಿ ಅಂಶವನ್ನು ಪತ್ತೆ ಹಚ್ಚಬಹುದು.

* ಹೈಡ್ರೋಸೈಯನೈಡ್ ವಿಷಭಾದೆಗೆ ಒಳಗಾಗಿರುವ ಜಾನುವಾರುಗಳಿಗೆ ಸೂಕ್ತ ಚಿಕೆತ್ಸೆ ಲಭ್ಯವಿದ್ದರೂ ಸಹ ಆದಷ್ಟು ಬೇಗನೆ ಪಶುವೈದ್ಯರಿಂದ ಚಿಕೆತ್ಸೆಗೆ ಒಳಪಡಿಸಿದಾಗ ಮಾತ್ರ ರಾಸುಗಳನ್ನು ಬದುಕಿಸಲು ಸಾದ್ಯ. ಆದ್ದರಿಂದ ನಾಟಿ ಔಷಧವನ್ನು ಮಾಡುತ್ತಾ ಕಾಲಹರಣ ಮಾಡದಿರುವುದೇ ಲೇಸು.

ಮುಂಜಾಗ್ರತೆ : 

* ಕಾಡು ರಬ್ಬರ್ ಗಿಡಗಳು ಮನೆಯ ಸುತ್ತಮುತ್ತ ಮತ್ತು ಬೇಲಿಗಳಲ್ಲಿ , ತಮ್ಮ ಜಮೀನುಗಳಲ್ಲಿ ಬೆಳೆಯದಂತೆ ಎಚ್ಚರವಹಿಸಬೇಕು.

* ಅದರ ಟೊಂಗೆಗಳು ಬಹಳ ಸೂಬ್ರವಾಗಿದ್ದು, ಗಾಳಿಮಳೆಗೆ ಮುರಿದು ಬೀಳುತ್ತವೆ. ಅಂತಹ ಸಮಯದಲ್ಲಿ ಅವುಗಳು ಜಾನುವಾರುಗಳಿಗೆ ಆಹಾರವಾಗದಂತೆ ಎಚ್ಚರವಹಿಸಿ ಸೂಕ್ತ ವಿಲೇವಾರಿ ಮಾಡಬೇಕು.

* ಕಾಲಹರಣ ಮಾಡದೆ , ಆದಷ್ಟು ಬೇಗನೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕು.

ತಪ್ಪು ತಿಳುವಳಿಕೆ:

ಗ್ರಾಮೀಣ ಭಾಗಗಳಲ್ಲಿ ಕತ್ತಿ ಅಥವಾ ಹರಿತವಾದ ಆಯುಧದಿಂದ ಕತ್ತರಿಸಿದ ಕಾಡು ರಬ್ಬರ್ ಗಿಡಗಳು ಮಾತ್ರ ವಿಷಕಾರಿಯಾಗಿರುತ್ತದೆ ಎಂಬ ತಪ್ಪು ಗ್ರಹಿಕೆ ಇರುತ್ತದೆ. ಗಿಡವು ತಾನಾಗಿಯೇ ಮುರಿದು ಬಿದ್ದಿರಲಿ, ಆ ಸಸ್ಯವನ್ನು ಆಯುಧಗಳಿಂದ ಕಡಿದು ಹಾಕಿದ್ದಿರಲಿ ಅಥವಾ ಜಾನುವಾರುಗಳು ನೇರವಾಗಿ ಗಿಡಗಳ ಸೊಪ್ಪನ್ನು ತಿಂದಿರಲಿ, ತಿಂದಂತಹ ರಾಸುಗಳು ವಿಷಭಾದೆಯಿಂದ ಬಳಲುವುದು ನಿಶ್ಚಿತ. ತಪ್ಪು ತಿಳುವಳಿಕೆಗೆ ಬಲಿಯಾಗಿ ತಮ್ಮ ಅಮೂಲ್ಯ ರಾಸುಗಳನ್ನು ಕಳೆದು ಕೊಳ್ಳಬೇಡಿ.



ಗಮನಿಸಿ :

ಕಾಡು ರಬ್ಬರ್ ಸಸ್ಯಕ್ಕೆ ಸಾಮ್ಯತೆ ಇರುವ ಮರ ಗೆಣಸು, ತೋಟಗಾರಿಕಾ ಬೆಳೆ ರಬ್ಬರ್ ಗಿಡಗಳೂ ಸಹ ಒಂದೇ ಕುಟುಂಬಕ್ಕೆ ಸೇರಿದ ಸಸ್ಯಗಳಾಗಿದ್ದು, ಇವುಗಳಲ್ಲಿಯೂ ಸೈಯನೈಡ್ ವಿಷ ಅಂಶವು ಇರುವುದು ದೃಡಪಟ್ಟಿದ್ದು ,ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು ಅಷ್ಟೆ. ಹಾಗಾಗಿ Euphorbiaceae ಕುಟುಂಬಕ್ಕೆ ಸೇರಿದ ಮೇಲೆ ತಿಳಿಸಲಾದ ಮೂರು ಸಸ್ಯಗಳೂ ಸಹ ಜಾನುವಾರುಗಳಿಗೆ ಮಾರಕವಾಗಿರುತ್ತದೆ.

* ಬಿದಿರಿನ ಕಳಲೆ , ಸೋರ್ಗಂ ಮೇವಿನ ಎಳೆ ಹುಲ್ಲು , ಚಪ್ಪರದ ಅವರೆಯನ್ನು ಜಾನುವಾರುಗಳು ತಿಂದಾಗಲೂ ಸಹ ಸೈಯನೈಡ್ ವಿಷಭಾದೆ ರಾಸುಗಳನ್ನು ಕಾಡುತ್ತದೆ.


  • ಡಾ. ಯುವರಾಜ್ ಹೆಗಡೆ  (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ.

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW