ಆಂಜನೇಯ ಚಿತ್ರದ ಖ್ಯಾತಿಯ ಹಿಂದೆ ಕೇಳಿ ಬರುವ ಹೆಸರು ಕರಣ್ ಆಚಾರ್ಯ. ಈ ಕಲಾವಿದ ಮತ್ಯಾರು ಅಲ್ಲ ಖ್ಯಾತ ಸಿನಿ ಬರಹಗಾರ,ಪತ್ರಕರ್ತ ಗಣೇಶ ಕಾಸರಗೋಡು ತಂಗಿಯ ಅಳಿಯ. ಕರಣ್ ಅವರ ಬಗೆಗಿನ ಆಪ್ತ ಬರಹ. ಮುಂದೆ ಓದಿ…
ಇಲ್ಲಿರುವ ಮೂವರ ಹೆಸರನ್ನು ಮೊದಲು ಪರಿಚಯಿಸಿ ಬಿಡುತ್ತೇನೆ – ಮೊದಲಿನವಳು ಪೂಜಾ, ಮಧ್ಯದಲ್ಲಿರುವವನು ತುಂಟ ಕೃಷ್ಣ, ಪಕ್ಕದಲ್ಲಿರುವವನು #ಕರಣ್_ಆಚಾರ್ಯ.

(ಕರಣ್ ಆಚಾರ್ಯ ಕೈಯಲ್ಲಿ ಅರಳಿದ ಆಂಜನಯ್ಯ)
◆ ಕರಣ್ ಆಚಾರ್ಯ : ಆಂಜನೇಯ ಖ್ಯಾತಿಯ ಈತ ನನ್ನ ಖಾಸಾ ತಂಗಿ ಉಷಾಗೋಪಾಲಕೃಷ್ಣಳ ಮಗಳು ಪೂಜಾಳ ಗಂಡ. ಕೇರಳದ ಕುಂಬಳೆಯ ಯಾವುದೋ ಕಾರ್ಯಕ್ರಮದ ಬ್ಯಾನರಿಗಾಗಿ ಗೀಚಿದ ಆಂಜನೇಯನ ಸ್ಕೆಚ್ ಈ ಮಟ್ಟದಲ್ಲಿ ಹೆಸರು ತಂದುಕೊಡುತ್ತದೆ ಅಂತ ಈತನಿಗೇ ಗೊತ್ತಿರಲಿಲ್ಲ! ವೈರಲ್ ಆಗುವುದೆಂದರೆ ಇದೇ ಇರಬೇಕು. ಸ್ಟಿಕ್ಕರ್ ರೂಪದಲ್ಲಿ ಕೇರಳದ ಜತೆ ಕರ್ನಾಟಕದ ಆಟೋ, ಕಾರು, ಲಾರಿಗಳನ್ನು ಅಲಂಕರಿಸಿದ್ದೇ ತಡ ಆಂಜನೇಯ ಖ್ಯಾತಿಗೆ ಬಂದನೇ ಹೊರತು ಕರಣ್’ಗೆ ಖ್ಯಾತಿ ಕೈ ಹಿಡಿಯಲಿಲ್ಲ. ಇದನ್ನು ಗಮನಿಸಿದ ನಾನು ಕರಣ್ ಕಿವಿಯಲ್ಲಿ ಹೇಳಿದ್ದು ವರ್ಕೌಟ್ ಆಯ್ತು : ‘#ಕಿರಣ್ (ಆಗ ಕಿರಣ್ ಆಗಿದ್ದ) ನಿನ್ಗೆ ನಿನ್ನೊಳಗಿನ ಕಲಾಗಾರನ ಬೆಲೆಯೇ ಗೊತ್ತಿಲ್ಲ. ನಿನ್ನ ವಿವರ ಕೊಡು, ನಾನು ವ್ಯವಸ್ಥೆ ಮಾಡುತ್ತೇನೆ’ ಎಂದವನೇ ಬೆಂಗಳೂರಿನ ಎಲ್ಲಾ ಚಾನಲ್’ಗಳಿಗೆ, ಪ್ರಿಂಟ್ ಮೀಡಿಯಾಗಳಿಗೆ ಕರಣ್ ಆಚಾರ್ಯನ ವಿವರ ಮತ್ತು ಫೋನ್ ನಂಬರ್ ಕಳಿಸಿಕೊಟ್ಟೆ. ಇದು ಯಾವ ಮಟ್ಟದಲ್ಲಿ ವರ್ಕೌಟ್ ಆಯಿತೆಂದರೆ ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಒಂದು ಹವಾ ಕ್ರಿಯೇಟ್ ಮಾಡಿ ಬಿಟ್ಟಿತು! ಎಲ್ಲಿಯವರೆಗೆ ಅಂದರೆ ಮಂಗಳೂರಿನ ಭಾಷಣವೊಂದರಲ್ಲಿ ಸಾಕ್ಷಾತ್ ಈ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರೇ ಈ ಕರಣ್ ಆಚಾರ್ಯನನ್ನು ಹಾಡಿ ಹೊಗಳಿ ಬಿಟ್ಟರು! ಅಲ್ಲಿಗೆ ಕರಣ್ ಆಚಾರ್ಯ ಜಗತ್ತಿನಾದ್ಯಂತ ಪ್ರಚಾರಕ್ಕೆ ಬಂದ! ಈಗ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರ ಹಿರಿಯ ಆರ್ಟಿಸ್ಟ್ ಆಗಿ ಉದ್ಯೋಗದಲ್ಲಿದ್ದಾನೆ…
◆ ಪೂಜಾ ಕರಣ್ ಆಚಾರ್ಯ :
ಮೊದಲೇ ಹೇಳಿದ ಹಾಗೆ ಈಕೆ ನನ್ನ ಕಿರಿಯ ತಂಗಿ ಉಷಾಳ ಮಗಳು. ಕರಣ್’ನನ್ನು ಪ್ರೀತಿಸಿ ಮದುವೆಯಾಗಿರುವ ಪೂಜಾ ಕೂಡಾ ಕಲಾವಿದೆಯೇ. ಬೆಂಗಳೂರಿನ ಸ್ಕೂಲೊಂದರಲ್ಲಿ ಡ್ರಾಯಿಂಗ್ ಡಿಪಾರ್ಟ್ಮೆಂಟ್ ಹೆಡ್ ಆಗಿ ಉದ್ಯೋಗದಲ್ಲಿದ್ದಳು. ಪುಟ್ಟ ಮಗುವಿನ ಕಾರಣಕ್ಕಾಗಿ ಸಧ್ಯಕ್ಕೆ ಹೌಸ್’ವೈಫ್ ಆಗಿರುವ ಪೂಜಾಳ ಹೆಸರಿನ ಕಥೆಯನ್ನು ಈ ಮೊದಲೇ ಅಲ್ಲಲ್ಲಿ ದಾಖಲಿಸಿದ್ದೇನೆ. ಈಗ ಸಾಂದರ್ಭಿಕವಾಗಿ ಇಲ್ಲಿ ಉಲ್ಲೇಖಿಸಲೇ ಬೇಕು : ನಮ್ಮ ದಾಂಪತ್ಯದ ಮೊದಲ ಕುಡಿ ಅಭಿಷೇಕ್. ಅಭಿಷೇಕನ ನಂತರ ಹುಟ್ಟುವ ಹೆಣ್ಣು ಮಗುವಿಗಾಗಿ ಈ ‘ಪೂಜಾ’ ಹೆಸರನ್ನು ರಿಜರ್ವ್ ಮಾಡಿದ್ದೆವು ನಾನು ಮತ್ತು ಗಾಯತ್ರಿ! ಆದ್ರೆ ಗಂಡು ಮಗು ಹುಟ್ಟಿತು. ಅನಿವಾರ್ಯವಾಗಿ ‘ಪೂಜಾ’ ಹೆಸರನ್ನು ತ್ಯಾಗ ಮಾಡ ಬೇಕಾಯಿತು! ಅವನಿಗೆ ಅಲೋಕ್ ಎಂದು ಹೆಸರಿಟ್ಟೆವು. ಉಳಿದು ಹೋದ ‘ಪೂಜಾ’ ಹೆಸರನ್ನು ತನ್ನ ಮಗಳಿಗಿಡಲೇ ಎಂದು ಉಷಾ ಬೇಡಿಕೆ ಮುಂದಿಟ್ಟಳು. ನಾವು ಜಂಟಿಯಾಗಿ ಓಕೆ ಅಂದೆವು!

(ಖ್ಯಾತ ಚಿತ್ರಕಾರ ಕರಣ್ ಆಚಾರ್ಯ, ಪತ್ನಿ ಪೂಜಾ ಕರಣ್ ಆಚಾರ್ಯ ಮತ್ತು ಮಗ ರೆಯಾನ್ ಕೃಷ್ಣ)
◆ ರೆಯಾನ್ ಕೃಷ್ಣ :
ಕಳೆದ ವರ್ಷದ ಕೊರೊನಾ ಆರ್ಭಟಕ್ಕೆ ಉಷಾಳ ಗಂಡ P&Tಯಲ್ಲಿ ಉದ್ಯೋಗದಲ್ಲಿದ್ದ ಗೋಪಾಲಕೃಷ್ಣ ಆಚಾರ್ಯ ಬೆಲೆ ತೆರಬೇಕಾಯಿತು. ಆಗಲೇ ಹುಟ್ಟಿದ ಪೂಜಾ-ಕರಣ್ ದಂಪತಿಗಳ ಪುಟ್ಟ ಕಂದಮ್ಮನಿಗೆ ‘ರೆಯಾನ್ ಕೃಷ್ಣ’ ಎಂಬ ಹೆಸರನ್ನಿಟ್ಟರು. ತಾತನ ಹೆಸರು ಮೊಮ್ಮಗನಿಗೆ ಬಂತು! ಹೆಸರು ‘ರೆಯಾನ್ ಕೃಷ್ಣ’ ಎಂದಿದ್ದರೂ ಈ ಪುಟ್ಟ ಪುಟಾಣಿ ಶಾರ್ಟ್ ಅಂಡ್ ಸ್ವೀಟ್ ಆಗಿ ಎಲ್ಲರ ಬಾಯಲ್ಲೂ ‘ಕೃಷ್ಣ’ ಆಗಿದ್ದಾನೆ! ಮೊನ್ನೆ ತಾನೇ ಮೊದಲ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿಕೊಂಡ ಕೃಷ್ಣ ನನ್ನ ತಂಗಿ ಉಷಾಳ ಕೈಗೂಸಾಗಿ ಬಿಟ್ಟಿದ್ದಾನೆ! ಪತಿದೇವರ ಹೆಸರಿನ ಎಮೋಷನಲ್ ಅಟ್ಯಾಚ್ಮೆಂಟ್ ಕೂಡಾ ಇದಕ್ಕೆ ಕಾರಣವಾಗಿದೆ!
– ಇವೆಲ್ಲಾ ಈಗ ಏಕೆ ನೆನಪಾಯಿತೆಂದರೆ : ಈ ಮೂವರೂ ಮೊನ್ನೆ ನಮ್ಮ ‘ಅಮ್ಮನ ಮನೆ’ಗೆ ಬಂದಿದ್ದರು. ಜತೆಗೆ ಕೃಷ್ಣನ ಮತ್ತೊಬ್ಬ ಅಜ್ಜಿ ಮಂಜುಳಾ (ಕರಣ್ ಅಮ್ಮ) ಕೂಡಾ ಇದ್ದರು. ಇದೊಂದು ಆತ್ಮೀಯ ವಿಸಿಟ್. ಎಲ್ಲರೂ ಖುಷ್ ಖುಷ್…ನಮ್ಮೆಲ್ಲರ ಈ ಖುಷಿಯನ್ನು ನಿಮ್ಮೆಲ್ಲರ ಜತೆ ಹಂಚಿಕೊಂಡಿದ್ದೇನೆ. ಓಕೆನಾ?
- ಗಣೇಶ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)
