‘ನಮ್ಮ ಮೆಟ್ರೋ’ – ಶುರುವಾಗುವ ಹೊತ್ತಿಗೆ ‘ಇದು ಶಂಕರನಾಗ್ ಕನಸು. ಈ ಪ್ರಾಜೆಕ್ಟಿಗೆ ಅವರ ಹೆಸರು ಸೂಕ್ತ’ ಎಂದು ವಿನಯದಿಂದಲೇ ತಮ್ಮ ಅಭಿಪ್ರಾಯವನ್ನು ಸರ್ಕಾರದ ಮುಂದಿಟ್ಟಿದ್ದ ಜಗದೀಶ್ ಮಲ್ನಾಡ್ ಇದೀಗ ‘ರೋಪ್ ವೇ’ಗೆ ಶಂಕರನಾಗ್ ಹೆಸರಿಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಇಷ್ಟಕ್ಕೂ ಯಾರೀ ಜಗದೀಶ್ ಮಲ್ನಾಡ್? ರಂಗಭೂಮಿಯ ಈ ಅಪರೂಪದ ಪ್ರತಿಭೆ ಶಂಕರನಾಗ್ ಅವರ ಬಲಗೈ ಬಂಟನಂತಿದ್ದವರು. ಶಂಕರ್ ಕಟ್ಟಿದ ‘ಸಂಕೇತ್’ ತಂಡದ ಒಂದು ಪಿಲ್ಲರಾಗಿದ್ದವರು. ‘ಸಂಕೇತ್’ ತಂಡವನ್ನು ಹುಟ್ಟು ಹಾಕುವುದರಲ್ಲಿ ಶಂಕರ್ ಅವರ ಹೆಗಲಿಗೆ ಹೆಗಲೆಣೆಯಾಗಿ ನಿಂತವರು ಇದೇ ಜಗದೀಶ್ ಮಲ್ನಾಡ್. ನಂತರದ ದಿನಗಳಲ್ಲಿ ಶಂಕರ್ ಕಾರ್ಯವ್ಯಾಪ್ತಿ ಹಿರಿದಾಗುತ್ತಿರುವಂತೆಯೆ ಒಟ್ಟು ಹತ್ತು ಹೊಸ ಪ್ರಾಜೆಕ್ಟ್’ಗಳ ರೂಪುರೇಷೆಗಳಲ್ಲಿ ಸಕ್ರಿಯರಾಗಿದ್ದವರು ಮಲ್ನಾಡ್.
ಅವುಗಳಲ್ಲಿ ಮೊದಲನೆಯದ್ದು ಬೆಂಗಳೂರಿಗೊಂದು ಮೆಟ್ರೋ ರೈಲಿನ ಯೋಜನೆ. ಎರಡನೆಯದ್ದು ನಂದಿ ಬೆಟ್ಟಕ್ಕೊಂದು ರೋಪ್ ವೇ. ಮೂರನೆಯದ್ದು ಕಂಟ್ರಿ ಕ್ಲಬ್ ಸ್ಥಾಪನೆ. ನಾಲ್ಕನೆಯದ್ದು ಅಮ್ಯೂಸ್ಮೆಂಟ್ ಪಾರ್ಕ್, ಐದನೆಯದ್ದು ನಂದಿ ಬೆಟ್ಟದ ತಪ್ಪಲಿನಲ್ಲಿ ಫೈವ್ ಸ್ಟಾರ್ ಹೋಟೆಲ್ ಸ್ಥಾಪನೆ, ಆರನೆಯದ್ದು ಮದ್ಯಮ ವರ್ಗದ ಮಂದಿಗಾಗಿ ಇಟ್ಟಿಗೆ ಫ್ಯಾಕ್ಟರಿ ಸ್ಥಾಪನೆ, ಏಳನೆಯದ್ದು ಅಗ್ಗದ ಖರ್ಚಿನಲ್ಲಿ ಮನೆ ನಿರ್ಮಾಣ, ಎಂಟನೆಯದ್ದು ಸಿದ್ದ ಉಡುಪು ತಯಾರಿಕೆ, ಒಂಭತ್ತನೆಯದ್ದು ಬಿಜಿಯಾಗಿರುವ ಕಲಾವಿದರಿಗಾಗಿ #ಮೊಬೈಲ್ ಡಬ್ಬಿಂಗ್ ಥಿಯೇಟರ್ ಸ್ಥಾಪನೆ, ಹತ್ತನೆಯದ್ದು ಬಡವರಿಗಾಗಿ ಫಿಶ್ ಮಾರ್ಕೆಟ್ ಸ್ಥಾಪನೆ!

ಇವೆಲ್ಲಾ ಕನಸು ನನಸಾಗುವ ಮೊದಲೇ ಶಂಕರನಾಗ್ ಇತಿಹಾಸ ಪುಟದಲ್ಲಿ ಸೇರಿಕೊಂಡು ಬಿಟ್ಟರು. ಆದರೆ ದಶಕಗಳ ಹಿಂದಿನ ಅವರ ಕನಸುಗಳು ಈಗ ಒಂದೊಂದಾಗಿಯೇ ನನಸಾಗುತ್ತಿದೆ. ಆದರೆ ದುರಂತವೆಂದರೆ ಈ ಅಪರೂಪದ ಕನಸುಗಾರನ ಹೆಸರು ಮಾತ್ರ ಹಿನ್ನೆಲೆಗೆ ಸರಿದುಕೊಂಡು ಬಿಟ್ಟಿದೆ. ಜಗದೀಶ್ ಮಲ್ನಾಡ್ ಅವರಿಗೆ ಈ ವಿಚಾರವೇ ನುಂಗಲಾರದ ತುತ್ತು. ಇವರದ್ದು ಮೌನ ಬೇಡಿಕೆ : ಮೆಟ್ರೋ ರೈಲಿನ ಕನಸು ಕಂಡ ಶಂಕರನಾಗ್ ಹೆಸರು ಹಿನ್ನೆಲೆಗೆ ಸರಿದು ಬಿಟ್ಟಿತು. ಈಗ ಅವರ ಮತ್ತೊಂದು ಕನಸು ನನಸಾಗುವ ಹಂತಕ್ಕೆ ಬಂದು ನಿಂತಿದೆ.
ಮೊನ್ನೆ ತಾನೇ ನಂದಿ ಬೆಟ್ಟಕ್ಕೆ ವಿಸಿಟ್ ಕೊಟ್ಟಿರುವ ಪ್ರವಾಸೋದ್ಯಮ ಖಾತೆ ಸಚಿವ ಆನಂದ ಸಿಂಗ್ ಶಂಕರನಾಗ್ ಅವರ ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ನಂದಿ ಬೆಟ್ಟಕ್ಕೆ ರೋಪ್ ವೇ ಹಾಕಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ ಈ ಸಚಿವರಿಗೆ ಇದು ಶಂಕರನಾಗ್ ಕನಸು ಎನ್ನುವುದು ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರೋಪ್ ವೇ ಯೋಜನೆ ಬಗ್ಗೆ ನಿರ್ಧರಿಸಿರುವುದು ಮಾತ್ರ ಸ್ವಾಗತಾರ್ಹ. ಈ ಹೊತ್ತಿನಲ್ಲಿ ಮತ್ತೆ ಪ್ರತ್ಯಕ್ಷರಾಗಿರುವ ಜಗದೀಶ್ ಮಲ್ನಾಡ್ ನನಗೆ ಫೋನ್ ಮಾಡಿ ಈ ವಿನಂತಿಯನ್ನಿಟ್ಟಿದ್ದಾರೆ : ‘ಗಣೇಶ್’ಜೀ ಮೆಟ್ರೋ ರೈಲು ಕೇಂದ್ರದ ಯೋಜನೆ. ಅವರಿಗೆ ಶಂಕರನಾಗ್ ಕನಸಿನ ಬಗ್ಗೆ ಗೊತ್ತಿಲ್ಲದೇ ಬೇರೆ ಹೆಸರನ್ನಿಟ್ಟಿರಬಹುದು. ಆದರೆ ನಂದಿ ಬೆಟ್ಟದ ರೋಪ್ ವೇ ರಾಜ್ಯ ಸರ್ಕಾರದ ಯೋಜನೆ. ಇದಕ್ಕಾದರೂ ಶಂಕರನಾಗ್ ಹೆಸರಿಟ್ಟು ಪುಣ್ಯ ಕಟ್ಟಿ ಕೊಳ್ಳಲಿ…’ – ಎಂದಿದ್ದಾರೆ.

ಶಂಕರನಾಗ್ ಪರಮಾಪ್ತರಾದ #ಜಗದೀಶ್_ಮಲ್ನಾಡ್ ಅವರ ಈ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ…ಯುವ ಸಚಿವರಾಗಿರುವ ಆನಂದ ಸಿಂಗ್ ಮನಸ್ಸು ಮಾಡಿದರೆ ಇದು ಸಾಧ್ಯ. ಅವರು ಮನಸ್ಸು ಮಾಡಿ ನಂದಿ ಬೆಟ್ಟದ ರೋಪ್ ವೇಗೆ ‘ಶಂಕರನಾಗ್ ರೋಪ್ ವೇ’ ಎಂಬ ಹೆಸರಿಟ್ಟರೆ ಅದು ಕನ್ನಡದ ಸಾಹಸೀ ನಿರ್ದೇಶಕನೊಬ್ಬನಿಗೆ ಸಲ್ಲಿಸುವ ಸಾರ್ಥಕ ಗೌರವ ಎಂದು ಧಾರಾಳವಾಗಿ ಹೇಳಬಹುದು…
- ಗಣೇಶ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)
