ಕಾಶ್ಮೀರದ ಗಂಗಬಾಳ್ ಸರೋವರಕ್ಕೆ ಚಾರಣ – ಡಾ.ಗಜಾನನ ಶರ್ಮ



ಹನ್ನೊಂದೂವರೆ ಸಾವಿರ ಅಡಿ ಎತ್ತರದ ಪರ್ವತವನ್ನು ಏರುವ ವಯಸ್ಸು ನಿಮ್ಮದಲ್ಲ ಎಂದಳು ನನ್ನಾಕೆ. ಆದರೆ ಪುಸ್ತಕ ಬರೆಯುವ ಹುಚ್ಚು ನನಗೆ ಹತ್ತಿದ್ದರಿಂದ ನಾನು ಹಿಂದೇಟು ಹಾಕಲಿಲ್ಲ. ನನ್ನ ಹಠಕ್ಕೆ ಮಣಿದು ಇಡೀ ಕುಟುಂಬ ನಾನೊಂದಿಗೆ ಹೊರಟು ನಿಂತಿತು, ಉಗ್ರಗಾಮಿ ಗಳ ಕೈ ಸಿಕ್ಕರೆ ಇಬ್ಬರೂ…ಎಂದು ಕಣ್ಣೊದ್ದೆ ಮಾಡಿಕೊಂಡಳು. ಮೂರು ತಿಂಗಳ ಹಿಂದೆ ಪಾದದ ಮೂಳೆ ಮುರಿದು ಒಂದು ತಿಂಗಳು ಬ್ಯಾಂಡೇಜು ಬಿಗಿದದ್ದು, ಒಂದು ತಿಂಗಳು ಮನೆಯಲ್ಲಿ ತೆವಳುತ್ತ, ವ್ಹೀಲ್ ಚೇರಿನಲ್ಲಿ ಓಡಾಡುತ್ತಿದ್ದ ನನ್ನಾಕೆ ಈಗ ಕಾಶ್ಮೀರದ ಗಂಗಬಾಳ್ ಸರೋವರಕ್ಕೆ ಚಾರಣ ನಡೆಸಿದ ಪರಮತೃಪ್ತಿಯ ಅಮೃತಕ್ಷಣ ನಮ್ಮದಾಗಿದೆ. ಸುಂದರ ಅನುಭವವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ ಖ್ಯಾತ ಲೇಖಕ ಗಜಾನನ ಶರ್ಮಾ ಅವರು, ಮುಂದೆ ಓದಿ…

#ಕಾಶ್ಮೀರದ ಶ್ರೀನಗರದಿಂದ ಸುಮಾರು ನಲವತ್ತೈದು ಕಿಲೋಮೀಟರ್ ದೂರದ, ಪಾಂಡವರಿಂದ ನಿರ್ಮಿಸಲ್ಪಟ್ಟ ದೇಗುಲ ಸಮುಚ್ಛಯವೆಂದು ನಂಬಲಾದ, ಈಗ ವಿನಾಶದ ಅಂಚಿನಲ್ಲಿರುವ, ರಾಷ್ಟ್ರೀಯ ಆರ್ಕಿಯಾಲಾಜಿಕಲ್ ಇಲಾಖೆಯ ಸ್ವಾಧೀನದಲ್ಲಿರುವ “ನಾರಾನಾಗ್” ಗ್ರಾಮದಂಚಿನಿಂದ ಮೇಲ್ಚಾಚಿಕೊಂಡ ಭೂತೇಶ್ವರ ಪರ್ವತಕ್ಕೆ ತಾಕಿದಂತೆ ಅಲ್ಲಿಂದ ಹದಿನಾಲ್ಕು ಕಿಲೋಮೀಟರ್ ದೂರದಲ್ಲಿದೆ ಹರ್ಮುಖ ಪರ್ವತ ಮತ್ತು ನಂದಕೋಲ್ ಹಾಗೂ ಗಂಗಬಾಳ್ ಎಂಬ ಜೋಡಿ ಸರೋವರ. ಕಾಶ್ಮೀರಿ ಪಂಡಿತರು “ಹರಮುಕುಟ” ಎಂದು ಕರೆಯುತ್ತಿದ್ದ, ಶಿವಶಿವಾಣಿಯರ ಆವಾಸಸ್ಥಾನವೆಂದೂ, ಪರಮೇಶ್ವರನ ಪರಮ ಪಾವನ ನೆಲೆಯೆಂದೂ, ಕಾಶ್ಮೀರದ ಕೈಲಾಸವೆಂದೂ ಭಾವಿಸಲಾದ ಪರ್ವತವೇ ಈ ಹರ್ಮುಖ. ಸಮುದ್ರಮಟ್ಟದಿಂದ ಹದಿನಾರು ಸಾವಿರದ ಎಂಟುನೂರ ಎಪ್ಪತ್ತು ಅಡಿ ಎತ್ತರದ ಈ ಪರ್ವತದ ನೆತ್ತಿಯಲ್ಲಿ ಶಿವ ಶಿವಾಣಿಯರು ನೆಲೆಸಿದ್ದಾರೆ. ಹಾಗಾಗಿ ತುದಿಯವರೆಗೂ ಅದನ್ನು ಸಾಮಾನ್ಯ ಲೌಕಿಕರು ಹತ್ತಬಾರದು ಎಂಬುದು ಕಾಶ್ಮೀರಿಗಳ ನಂಬಿಕೆ.

ಆದರೆ 1856 ರಲ್ಲಿ ಭಾರತದ ಟ್ರಿಗ್ನಾಮೆಟ್ರಿಕಲ್ ಸರ್ವೆಯ ಭಾಗವಾಗಿ ಥಾಮಸ್ ಮಾಂಟೆಗ್ಮೊರಿ ತನ್ನ ತಂಡದ ಜೊತೆಗೆ ಈ ಪರ್ವತವನ್ನು ಹತ್ತುತ್ತಾನೆ. ಅದನ್ನು ಸರ್ವೆ ಮಾಡಿ ಅಕ್ಷಾಂಶ, ರೇಖಾಂಶ, ಎತ್ತರ, ಟೋಪಾಲಜಿ ಮುಂತಾಗಿ ಎಲ್ಲವನ್ನೂ ಕಂಡುಹಿಡಿಯುತ್ತಾನೆ. ಎಲ್ಲಕ್ಕಿಂತ ಮುಖ್ಯವಾಗಿ ಇದರ ತುದಿಯಿಂದ ಆತ ಕಾರಕೋರಂ ಪರ್ವತ ಶ್ರೇಣಿಯ ಶೃಂಗ K-2 ( ಪ್ರಪಂಚದಲ್ಲೇ ಎರಡನೆ ಅತ್ಯಂತ ಎತ್ತರದ ಪರ್ವತ ಶೃಂಗ) ಶಿಖರವನ್ನು ಕಾಣುತ್ತಾನೆ ಮತ್ತು ಅದರ ಎತ್ತರವನ್ನು ಟ್ರಿಗ್ನಾಮೆಟ್ರಿಯ ಸೂತ್ರವನ್ನು ಬಳಸಿ ಲೆಕ್ಕಹಾಕಿ K2 ಎವರೆಸ್ಟ್ ನಂತರದ ಎತ್ತರ ಶಿಖರ ಎಂದು ಘೋಷಿಸುತ್ತಾನೆ.

ಈ ಹರ್ಮುಖ ಪರ್ವತದ ಭುಜ ಪ್ರದೇಶದಲ್ಲಿರುವ ಮೇಲೆ ಹೇಳಿದ ಎರಡು ಪವಿತ್ರವಾದ ಸರೋವರಗಳಲ್ಲಿ ಮೊದಲು, ಸುಮಾರು 11,499 ಅಡಿ ಎತ್ತರದಲ್ಲಿ ಸಿಗುವುದು ನಂದಕೋಲ್. ಅದನ್ನು ನಂದಿ ಸರೋವರ ಎನ್ನುತ್ತಾರೆ ಮತ್ತು ಈ ಪ್ರದೇಶವನ್ನು ನಂದಿಕ್ಷೇತ್ರ ಎನ್ನುತ್ತಾರೆ. ಶಿಖರದ ಶೃಂಗದಲ್ಲಿ ಶಿವ ಪಾರ್ವತಿಯರಿದ್ದ ಮೇಲೆ ಇಲ್ಲಿ ನಂದಿ ಇರಲೇ ಬೇಕಲ್ಲ!? ಇಲ್ಲಿಂದ ಸುಮಾರು ಮುನ್ನೂರು ಅಡಿಗಳ ಮೇಲಿರುವುದೇ ಗಂಗಬಾಳ್ ಸರೋವರ. ಕಾಶ್ಮೀರಿ ಪಂಡಿತರು ತಮ್ಮ ಮೃತ ಹಿರಿಯರ ಅಸ್ತಿ ವಿಸರ್ಜನೆ ಮತ್ತು ಅಪರ ಕಾರ್ಯ ನಡೆಸುತ್ತಿದ್ದ ಸರೋವರ ತೀರ. ಅವರ ಪಾಲಿಗೆ ಅತ್ಯಂತ ಪವಿತ್ರ.( ಈಗಲೂ ಕೆಲವು ಪಂಡಿತರು ಪಿತೃಕಾರ್ಯಕ್ಕೆ ಅಲ್ಲಿಗೆ ಬರುತ್ತಾರೆ ಎಂಬುದು ಸ್ಥಳೀಯರ ಹೇಳಿಕೆ) ಎಲ್ಲವೂ ಸರಿ, ಆದರೆ ಇಲ್ಲಿಗೆ ಹತ್ತಿ ಬರುವುದೊಂದೇ ಕಡು ಕಷ್ಟದ ಕಾರ್ಯ. ಹೆಚ್ಚು ಕಡಿಮೆ ಸಮುದ್ರ ಮಟ್ಟದಿಂದ ಹನ್ನೊಂದೂವರೆ ಸಾವಿರ ಅಡಿಗೂ ಮಿಕ್ಕ ಎತ್ತರ. ನಾರಾನಾಗಿನಿಂದ ಕನಿಷ್ಠ ನಾಲ್ಕೂವರೆ ಸಾವಿರ ಅಡಿ ಎತ್ತರ ಮತ್ತು ಹದಿನಾಲ್ಕು ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲೇ ಹತ್ತಬೇಕು.

This slideshow requires JavaScript.

ಭಾರತದಲ್ಲಿ ಬ್ರಿಟಿಷರ ಕೈಗೊಂಡ ಅದ್ಭುತ ವೈಜ್ಞಾನಿಕ ಸಾಹಸ ಕಾರ್ಯಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ಟ್ರಿಗ್ನಾಮೆಟ್ರಿಕ್ ಸರ್ವೆಯನ್ನು ಆಧರಿಸಿ ಕೃತಿಯೊಂದನ್ನು ರಚಿಸುವ ಹುಚ್ಚು ಹತ್ತಿಸಿಕೊಂಡ ನನಗೆ ಆ ಸರ್ವೆ ಕಾರ್ಯದ ಭಾಗವಾಗಿ ಥಾಮಸ್ ಮಾಂಟೆಗ್ಮೊರಿ ಎಂಬ ಕರ್ತವ್ಯನಿಷ್ಠ ಅಧಿಕಾರಿ ಸಾಹಸಗೈದ ಈ ಪ್ರದೇಶವನ್ನು ಕಣ್ಣಾರೆ ಕಾಣುವ ಆಸೆ ಹುಟ್ಟಿ ಅದು ಉಲ್ಭಣಗೊಳ್ಳತ್ತ ಬಂದು ಕೊನೆಗೆ ಈಗೊಂದು ತಿಂಗಳ ಹಿಂದೆ, ಏನಾದರಾಗಲಿ, ಕಾಶ್ಮೀರಕ್ಕೆ ಭೇಟಿ ನೀಡಲೇಬೇಕೆಂದು ನಿರ್ಧರಿಸಿಬಿಟ್ಟೆ. ಆದರೆ ನನ್ನ ಹೆಂಡತಿಗೆ ನಾನು ಉದ್ವಿಗ್ನ ಕಾಶ್ಮೀರಕ್ಕೆ ಹೋಗುವುದು ಇಷ್ಟವಿಲ್ಲದ ಸಂಗತಿ. ಇದುವರೆಗೂ ನನ್ನ ಯಾವುದೇ ಕಾರ್ಯಕ್ಕೆ ಅಡ್ಡಿ ಬರದಿದ್ದ ಆಕೆ, ಈ ಬಾರಿ ಮಾತ್ರ ಮೀಡಿಯಾಗಳಲ್ಲಿ ಬರುತ್ತಿದ್ದ ಸುದ್ದಿಗಳಿಂದ ಭೀತಳಾಗಿ ಕಾಶ್ಮೀರಕ್ಕೆ ಖಂಡಿತ ಹೋಗುವುದು ಬೇಡವೆಂದು ಹಠ ಹಿಡಿದಳು. ಜೊತೆಗೆ ಹನ್ನೊಂದೂವರೆ ಸಾವಿರ ಅಡಿ ಎತ್ತರದ ಪರ್ವತವನ್ನು ಏರುವ ವಯಸ್ಸು ನಿಮ್ಮದಲ್ಲ ಎಂದು ನೆವ ತೆಗೆದಳು. ನಾನು ತರತರದ ಬಣ್ಣದ ಮಾತಾಡಿ ಒಪ್ಪಿಸಲು ಯತ್ನಿಸಿದೆ. ಕೊನೆಗೆ ಆಕೆ ಒಂದು ಸಂಧಾನಕ್ಕೆ ಬಂದಳು. “ಕೈಲಾಸಪರ್ವತದಿಂದ ಗೋಮುಖ ಯಾತ್ರೆಯವರೆಗೆ ಇದುವರೆಗೆ ಕೈಗೊಂಡಿರುವ ಹಲವು ಹಿಮಾಲಯ ಯಾತ್ರೆಯನ್ನು ಒಟ್ಟಿಗೇ ಮಾಡಿದ್ದೇವೆ. ಈಗಲೂ ಇಬ್ಬರೂ ಹೋಗೋಣ. ಉಗ್ರಗಾಮಿಗಳಿಗೆ ಸಿಕ್ಕರೆ ಇಬ್ಬರೂ…” ಎಂದು ಕಣ್ಣೊದ್ದೆ ಮಾಡಿಕೊಂಡು ಹೇಳಿದಳು. ನನಗೆ ಹೂಂ ಎನ್ನದಷ್ಟು ಜೀವಭಯವೇನೂ ಇರಲಿಲ್ಲ.‌ ಆದರೆ ಕೇವಲ ಮೂರು ತಿಂಗಳ ಹಿಂದೆ ಪಾದದ ಮೂಳೆ ಮುರಿದು ಒಂದು ತಿಂಗಳು ಬ್ಯಾಂಡೇಜು ಬಿಗಿದದ್ದು, ನಂತರವೂ ಹೆಚ್ಚು ಕಡಿಮೆ ಒಂದು ತಿಂಗಳು ಮನೆಯಲ್ಲಿ ತೆವಳುತ್ತ, ವ್ಹೀಲ್ ಚೇರಿನಲ್ಲಿ ಓಡಾಡುತ್ತ ಬಳಲಿದ್ದ ಆಕೆಯನ್ನು ಕರೆದುಕೊಂಡು ಹೋಗುವುದು ಹೇಗೆಂಬ ಕಡುಕಷ್ಟ ನೆನಪಾಗಿ,” ಈ ಬಾರಿ ನಿನಗೆ ಚಾರಣ ಸಾಧ್ಯವಾಗುವುದಿಲ್ಲ” ಎಂದೆ.‌ ಆಕೆ, “ಗಟ್ಟಿ ಮನಸ್ಸು ಮಾಡಿ ನಾನು ಬರುತ್ತೇನೆ. ಏನಾದರಾಗಲಿ. ಆದರೆ ನೀವೊಬ್ಬರೇ ಹೋಗಲು ಸುತರಾಂ ನಾನು ಒಪ್ಪಲಾರೆ” ಎಂದು ಕಡ್ಡಿ ಮುರಿದು ಹೇಳಿದಳು. ನಾನು ಮಗ ಸೊಸೆಯರ ಮೊರೆಹೋದೆ.‌ ಆದರೆ ಅವರೂ ನನ್ನಾಕೆಯ ಪರ ನಿಂತರು. ಸರಿ, ಎಲ್ಲರೂ ಮುಂದಿನ ವರ್ಷ ಹೋಗೋಣವೆಂದರು. ನಾನು ನನಗೆ ಪುಸ್ತಕ ಬರೆಯುವ ತುರಿಕೆ ಹತ್ತಿದೆ. ಹೋದರೆ ಈ ವರ್ಷ. ಇಲ್ಲದಿದ್ದರೆ ಬೇಡವೇ ಬೇಡ ಎಂಬ ಮುದಿ ಹಠಕ್ಕೆ ಬಿದ್ದೆ. ಕೊನೆಗೆ ಮಗ ಸೊಸೆ ನೀವಿಬ್ಬರೇ ಹೋಗುವುದು ಬೇಡ, ಜೊತೆಗೆ ನಾವೂ ಬರುತ್ತೇವೆ ಎಂದು ಗಟ್ಟಿ ನಿಂತರು. ಕೊನೆಗೆ ಅಳೆದೂ ತೂಗಿ ನಾಲ್ವರೂ ಹೋಗುವುದೆಂದಾಯಿತು. ನನ್ನಕ್ಕ ತಾನೂ ಬರುತ್ತೇನೆ ಎಂದಳು. ನನ್ನ ಯಾವತ್ತಿನ ಯಾತ್ರಾ ಮಿತ್ರ ಮತ್ತು ಬಂಧು, ಐ ಡಿ ಗಣಪತಿ ತನ್ನ ಪತ್ನಿಯೊಡಗೂಡಿ ತಾನೂ ಬರುತ್ತೇನೆ ಎಂದ. ನನ್ನ ಸೊಸೆಯ ಅಕ್ಕ ಭಾವ ಬರುತ್ತೇನೆ ಎಂದರು.

‘ನಾವು ನಾವೇ ಆದರೆ #ಶ್ರೀನಗರದ ಸುತ್ತ ಮುತ್ತ ಹೋಗಿ ನೋಡಿ ಹಿಂದೆ ಬರಬಹುದು. ಆದರೆ ಗಂಗಬಾಳ್ ಚಾರಣಕ್ಕೆ ಟೆಂಟು, ಕುದುರೆ, ಗೈಡ್, ಅಡುಗೆ ಮಾಡುವವರು ಎಲ್ಲರೂ ಬೇಕು,ಯಾರಾದರೂ ಟೂರ್ ಅರೇಂಜ್ ಮಾಡುವವರನ್ನು ಸಂಪರ್ಕಿಸಬೇಕು ಎಂದು ಯೋಚಿಸುತ್ತಿರುವಾಗ, ನನ್ನ ತಂಗಿಯ ಮಗಳು ಕೀರ್ತನಾಳ ಸಹಪಾಠಿ ಗಿರಿನಗರದ ರಕ್ಷಿತ್ ಎಂಬ ಎಂ ಬಿ ಬಿ ಎಸ್ ವಿದ್ಯಾರ್ಥಿ, ತಾನು ಕಳೆದ ತಿಂಗಳು ಅಲ್ಲಿಗೆ ಹೋಗಿ ಬಂದಿದ್ದೇನೆ. ನಾನು ವ್ಯವಸ್ಥೆ ಮಾಡುತ್ತೇನೆ, ನನಗೆ ಗೊತ್ತು ಎಂದ. ನಾವು, “ಬರೀ ವ್ಯವಸ್ಥೆ ಮಾಡುವುದಲ್ಲ. ನೀನೂ ಬರಬೇಕು. ನಿನ್ನ ವೆಚ್ಚವನ್ನು ಟೂರ್ ಖರ್ಚಿಗೆ ಸೇರಿಸೋಣ ” ಎಂದೆವು. ಪರ್ವತಾರೋಹಣದ ಕ್ರೇಜ್ ಹತ್ತಿಸಿಕೊಂಡಿರುವ ಆತ ಎಲ್ಲ ವ್ಯವಸ್ಥೆ ಮಾಡಿದ. ಹಾಗಾಗಿ ಕಳೆದೊಂದು ವಾರ ಕಾಶ್ಮೀರವನ್ನೂ ಮತ್ತು ಕಳೆದ ಗುರುವಾರದಿಂದ ಮೂರು ದಿನ ಹರ್ಮುಖ ಪರ್ವತದ ಗಂಗಬಾಳ್ ಸರೋವರದವರೆಗೂ ಟ್ರೆಕಿಂಗ್ ಮಾಡಿ ಕ್ಷೇಮವಾಗಿ ಮೊನ್ನೆ ರಾತ್ರಿ ಮನೆಗೆ ಹಿಂತಿರುಗಿದೆವು.



ಇಷ್ಟೆಲ್ಲ ನಡೆದಿದೆ ಎನ್ನುವಾಗ ಇದರ ಹಿನ್ನೆಲೆಯಲ್ಲಿ ಒಂದಿಷ್ಟು ಆತ್ಮಶ್ಲಾಘನೆ ಬೇಡವೇ?

ಇವತ್ತಿನ ಕಾಶ್ಮೀರದ ಗೊಂದಲದ ಪರಿಸ್ಥಿತಿಯಲ್ಲಿ ಮತ್ತು ನಮ್ಮ ವಯಸ್ಸಿನ ಪರಿಗಣನೆಯಲ್ಲಿ ಇಂಥದ್ದೊಂದು ಪ್ರವಾಸ ಮತ್ತು ಚಾರಣದ ಅಗತ್ಯವಿತ್ತೇ? ಉತ್ತರ ಗೊತ್ತಿಲ್ಲ. ಆದರೆ ಅದೊಂದು ಹುಚ್ಚು ಎಂಬುದಂತೂ ಹೌದು. ಜೊತೆಗೆ ನಾನು ಏನನ್ನೂ ಸುಮ್ಮನೆ ಬರೆಯುವುದಿಲ್ಲ, ಕ್ಷೇತ್ರಕಾರ್ಯ ಮಾಡುತ್ತೇನೆ ಎಂಬ ಸಣ್ಣ ಅಹಂಕಾರ. ಜೊತೆಗೆ ಸ್ಥಳವನ್ನು ಕಣ್ಣಾರೆ ನೋಡಿದಾಗ ಏನಾದರೂ ಹೆಚ್ಚು ವಿವರ ಹೊಳೆಯಬಹುದು ಎಂಬ ಸದಭಿಲಾಷೆ ಕೂಡಾ. ಆದರೆ ನನಗಿದ್ದುದು ನನ್ನ ಹೆಂಡತಿಯ ಆರೋಗ್ಯದ ಬಗ್ಗೆ ಕಾಳಜಿ. ನಾನು ಬದುಕಿನಲ್ಲಿ ಸೋಮಾರಿಯಾದರೆ ಆಕೆ ಶ್ರಮಜೀವಿ. ಆಕೆ ಸುಲಭಕ್ಕೆ, ಕಷ್ಟಕ್ಕೆ ಜಗ್ಗುವವಳಲ್ಲ. ಜೊತೆಗೆ ಅವಳು ದೈವಭಕ್ತೆ. ನಾನೇನು ಎಂಬುದು ಇದುವರೆಗೂ ನನಗೇ ಗೊತ್ತಿಲ್ಲ. ನನಗೆ ಧರ್ಮದ ಕುರಿತು ಶ್ರದ್ಧೆ ಇಲ್ಲವೆಂದಲ್ಲ. ಆದರೆ ಅನುಷ್ಠಾನ ಶೂನ್ಯ. ಹಾಗಾಗಿ ದೇವರ ಮೇಲೆ ಭಾರ ಹಾಕಿ ಹೋಗೋಣ ಎನ್ನುವಷ್ಟು ಧೈರ್ಯ ನನಗಿಲ್ಲ. ಆ ಮಟ್ಟದ ಶರಣಾಗತಿ ನನ್ನದಲ್ಲ. ಆ ಮಟ್ಟದ ಶ್ರದ್ಧೆಯೂ ಇಲ್ಲ. ಆದರೆ ನನ್ನವಳಿಗೆ ಅಂಥದ್ದೊಂದು ಗಟ್ಟಿ ಶ್ರದ್ಧೆಯಿದೆ. ನನ್ನ ಮಗ ನನ್ನಂತೆ. ಸೊಸೆ ಅತ್ತೆಯಂತೆ) ನನ್ನಾಕೆಗೆ ಇದುವರೆಗೂ ನಾಲ್ಕು ಆಪರೇಶನ್ ಆಗಿದೆ. ಒಮ್ಮೆ ಕೈ ಮುರಿದಿದೆ. ಮೊನ್ನೆ ಮೊನ್ನೆ ಪಾದದ ಮೂಳೆ ಮುರಿದಿತ್ತು. ನಮ್ಮ ಕುಟುಂಬದಲ್ಲಿ ಕೊರೋನಾ ಕಾಟದಿಂದ ಬಸವಳಿದದ್ದೂ ಆಕೆ ಮಾತ್ರ. ನಮಗಿಬ್ಬರಿಗೂ ಶುಗರ್ ಇದೆ. ನನಗೆ ಅರವತ್ತೆಂಟಾದರೆ ಆಕೆಗೆ ಅರವತ್ತೊಂದು. ಈ ದೈಹಿಕ ಪರಿಸ್ಥಿತಿಯಲ್ಲಿ ಇದೆಲ್ಲ ಬೇಕಿತ್ತಾ? ಮತ್ತೆ ಅದೇ ಉತ್ತರ, ಗೊತ್ತಿಲ್ಲ.‌ ಆದರೆ ರಕ್ಷಿತನೆಂಬ ಆ ಯುವಕನನ್ನು ನಂಬಿ ಹೊರಟೆವು. ಮಗ ಸೊಸೆಯರು ಬೆನ್ನಿಗೆ ಗಟ್ಟಿಯಾಗಿ ಆತುಕೊಂಡರು. ಜೊತೆಗೆ ರಕ್ಷಿತ ಗಟ್ಟಿಗ. ಸ್ನೇಹಶೀಲ. ಹಿರಿಯರಲ್ಲಿ ಗೌರವ ಉಳ್ಳವ. ಹೆಚ್ಚೂ ಕಡಿಮೆ ಆರೂವರೆ ಅಡಿ ಎತ್ತರದ ಆ ತರುಣ ಅದೆಷ್ಟು ಶ್ರದ್ಧೆಯಿಂದ ಸುರಕ್ಷಿತವಾಗಿ ನಮ್ಮನ್ನು ಕರೆದೊಯ್ದನೆಂದರೆ, ಅಲ್ಲಿ ಎಷ್ಟು ಚೆನ್ನಾಗಿ ವ್ಯವಸ್ಥೆ ಮಾಡಿದನೆಂದರೆ ಅದನ್ನು ಹೇಳತೀರದು. ತಾನು ಇನ್ನೊಂದು ಚಾರಣಕ್ಕೆ ಹೊರಟಿದ್ದರೂ ನಮ್ಮನ್ನು ಶ್ರೀನಗರ ವಿಮಾನ ನಿಲ್ದಾಣಕ್ಕೆ ಕರೆತಂದು ಬಿಟ್ಟೇ ಹೊರಟ!

ಆದರೆ ಇಡೀ ಚಾರಣದಲ್ಲಿ ನಮಗೆ ಆಶ್ಚರ್ಯವಾದದ್ದು ನನ್ನವಳ ಅದಮ್ಯ ಶ್ರದ್ಧೆ. ಶ್ರದ್ಧೆ ಶ್ರಮಪಡುವ ಆಸ್ಥೆ ಮತ್ತು ಶುದ್ಧ ಮನಸ್ಸು ಹೇಗೆ ಬದುಕನ್ನು ಸುಲಭವಾಗಿಸಬಲ್ಲದು ಎಂಬುದಕ್ಕೆ ಉದಾಹರಣೆಯಾಗಿ ಈ ಪ್ರಸಂಗದಲ್ಲಿ ಇಷ್ಟೊಂದು ಆತ್ಮಶ್ಲಾಘನೆಗಿಳಿದೆ. ಗೋಮುಖದ ಚಾರಣಕ್ಕಿಂತ ದುಪ್ಪಟ್ಟು ಕಠಿಣವಾದ, ಕೇದಾರನಾಥ್, ಯಮುನೋತ್ರಿ ಮುಂತಾದ ಚಾರಣಗಳಿಗಿಂತ ಇಮ್ಮಡಿ ಕಷ್ಟದ ಈ ಚಾರಣ ಸುಲಭಕ್ಕೆ ಸಾಧ್ಯವಾದದ್ದು ನನ್ನವಳ ದೈವಶ್ರದ್ಧೆ ಮತ್ತು ಗುರುಭಕ್ತಿಯಿಂದ.



ಶಂಕರ ಭಗವತ್ಪಾದರ ಶಿವ- ಮಾನಸ ಸ್ತೋತ್ರದ ಭಾವವೇ ಅವಳ ಭಾವ. ಆ ಭಾವ ನನಗೂ ಇಷ್ಟವೇ.

ಆತ್ಮಾ ತ್ವಂ ಗಿರಿಜಾ ಮತಿ- ಸ್ಸಹಚರಾಃ ಪ್ರಾಣಾ-ಶ್ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗ- ರಚನಾ ನಿದ್ರಾ ಸಮಾಧಿ- ಸ್ಥಿತಿಃ
ಸಂಚಾರಃ ಪದಯೋಃ ಪ್ರದಕ್ಷಿಣ- ವಿಧಿಃಸ್ತ್ರೋತ್ರಾಣಿ ಸರ್ವಾ ಗಿರೋ
ಯದ್ಯತ್ಕರ್ಮ ಕರೋಮಿ ತತ್ತ- ದಖಿಲಂ ಶಂಭೋ ತವಾ-ರಾಧನಂ

ನನ್ನ ಆತ್ಮವೇ ನೀನು.ನನ್ನ ಮನಸ್ಸೇ ಗಿರಿಜೆ.ನನ್ನ ಪ್ರಾಣಗಳೇ ನಿನ್ನ ಸಹಚರರು.ನನ್ನ ಶರೀರವೇ ನಿನ್ನ ಗೃಹ. ಶಬ್ಧ ಸ್ಪರ್ಶ ರೂಪ ರಸ ಗಂಧಗಳೆಂಬ ವಿಷಯಗಳನ್ನು ನಾನು ಅನುಭವಿಸುವುದೇ ನಿನ್ನ ಪೂಜೆ. ನಿದ್ದೆಯೇ ಸಮಾಧಿಯ ಸ್ಥಿತಿ. ಕಾಲುಗಳಿಂದ ನಾನು ನಡೆಸುವ ಸಂಚಾರವೇ ನಿನಗೆ ಪ್ರದಕ್ಷಿಣೆ. ನಾನಾಡುವ ಮಾತೆಲ್ಲ ನಿನ್ನ ಸ್ತೋತ್ರ. ನಾನು ಮಾಡುವ ಕರ್ಮಗಳೇ ನಿನ್ನ ಆರಾಧನೆ….
ನಾನಿದನ್ನು ಭಕ್ತಿಯಿಂದ ಪಠಿಸದಿದ್ದರೂ ಅದನ್ನು ನನ್ನ ಬದುಕಿನ ಧ್ಯೇಯದಂತೆ ಭಾವಿಸಿಕೊಂಡಿರುವುದು ಸತ್ಯ. ಮನೆಯಲ್ಲಿ ಪ್ರತಿನಿತ್ಯವೂ ಶಿವ ಮಾನಸ ಪೂಜಾ ಸ್ತೋತ್ರವನ್ನು ಪಠಿಸುವ ನನ್ನಾಕೆ ಯಾತ್ರೆಯ ಉದ್ದಕ್ಕೂ, ನಂದಕೋಲ್ ಸರೋವರ ತೀರದಿಂದ ಹಿಡಿದು ಶಂಕರಾಚಾರ್ಯ ಗುಡ್ಡದವರೆಗೆ ಎಲ್ಲಡೆಯೂ ಮತ್ತೆ ಮತ್ತೆ ಪಠಿಸುತ್ತಿದ್ದಳು. ಪ್ರಾಯಶಃ ಅದೇ ಶ್ರದ್ಧೆ ಮತ್ತು ನಂಬಿಕೆ ಅವಳನ್ನು ಗಂಗಬಾಳ್ ವರೆಗೂ ಮುನ್ನಡೆಸಿತು. ಕ್ಷೇಮವಾಗಿ ಮರಳಿ ಮನೆಗೆ ಕರೆತಂದಿತು- ಅವಳನ್ನು ಮಾತ್ರವಲ್ಲ, ನಮ್ಮೆಲ್ಲರನ್ನೂ.

(ಆಸಕ್ತರಿಗಾಗಿ ಇಲ್ಲಿ ನಮ್ಮ ಚಾರಣದ ಕೆಲವು ಫೋಟೋ ಮತ್ತು ಒಂದೆರಡು ಪುಟ್ಟ ವೀಡಿಯೋ ಲಗತ್ತಿಸಿದ್ದೇನೆ)


  • ಡಾ.ಗಜಾನನ ಶರ್ಮ (ಹಿರಿಯ ಖ್ಯಾತ ಲೇಖಕರು, ಕಾಳು ಮೆಣಸಿನ ರಾಣಿಯ ಚೆನ್ನಭೈರಾದೇವಿ ಕಾದಂಬರಿಕಾರರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading