ಸುಪ್ರಭ ಅವರು ಹಾಡಿದ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ…’ ಯೂಟ್ಯೂಬ್ ನಲ್ಲಿ ಬಾರಿ ಸದ್ದುಮಾಡಿತು. ಅದರ ಸಾಹಿತ್ಯವನ್ನು ಬರೆದವರು ಕರಿಮೆಣಸಿನ ರಾಣಿ ‘ಚೆನ್ನಭೈರಾದೇವಿ’ ಕಾದಂಬರಿಕಾರ ಡಾ. ಗಜಾನನ ಶರ್ಮ ಅವರು. ಕರಿಮೆಣಸಿನ ರಾಣಿ ಹಾಗೂ ಹಾಡಿನ ಸಾಹಿತ್ಯದ ಬಗ್ಗೆ ಇನ್ನಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ ಲೇಖಕ ರಘುರಾಂ ಅವರು. ಮುಂದೆ ಓದಿ…
ಕಳೆದ ವರ್ಷ ಗೃಹಬಂಧನಲ್ಲಿ (ಲಾಕಾಡೌನ್) ಇರುವಾಗ ಸುಪ್ರಭ ಎನ್ನುವವರು ಹಾಡಿರುವ ‘#ಇನ್ನಷ್ಟು_ಬೇಕೆನ್ನ_ಹೃದಯಕ್ಕೆ_ರಾಮ….‘ ಎಂಬ ಹಾಡನ್ನು ಯು ಟ್ಯೂಬ್ ನಲ್ಲಿ ಬಹಳ ಸಾರಿ ಕೇಳಿದ್ದೇನೆ. ಹಾಡಿನ ಸಾಹಿತ್ಯ ಬಹಳ ಮುದ್ದಾಗಿದೆ, ಸುಲಭದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಇದೆ. ಯಾರು ಇದನ್ನು ಬರೆದವರು ಎಂದು ಗೊತ್ತಾಗಿರಲಿಲ್ಲ. ಬಹುಶಃ ಆ ತರಹದ ಹಾಡೊಂದನ್ನು ಬರೆಯುವುದು ಪ್ರತಿಯೊಬ್ಬ ಬರಹಗಾರರ ಆಸೆಯಾಗಿರುತ್ತದೆ ಎಂದರೆ ತಪ್ಪಾಗುವುದಿಲ್ಲವೇನೊ! ಹಾಡನ್ನು ಚೆನ್ನಾಗಿ ಹಾಡಿದ್ದಾರೆ. ಅದನ್ನು ನಾನು ಬಹಳಷ್ಟು ಸಾರಿ ಕೇಳಿದ್ದೇನೆ. ಆ ಹಾಡಿನಲ್ಲಿ ಬಹಳಷ್ಟು ಸಾರಿ ರಘುರಾಮ, ರಘುರಾಮ ಎಂದು ನನ್ನ ಹೆಸರು ಬಂದಿರುವುದರಿಂದ ನನಗೆ ಈ ಹಾಡು ಇಷ್ಟ ಎಂದು ನನ್ನ ಮಗಳು ನನಗೆ ರೇಗಿಸುತ್ತಿರುತ್ತಾಳೆ! ಬಹಳ ದಿನಗಳ ನಂತರ ಇದನ್ನು ಬರೆದವರು ಡಾ. ಗಜಾನನ ಶರ್ಮರವರು ಎಂದು ತಿಳಿದಾಗ ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು.

(ಕಾಳು ಮೆಣಸಿನ ರಾಣಿ ಚೆನ್ನಭೈರಾದೇವಿ ಕಾದಂಬರಿ ಲೇಖಕರು)
ಗಜಾನನ ಶರ್ಮರವರು ‘ಪುನರ್ವಸು‘ ಎಂಬ ಪುಸ್ತಕ ಬರೆದಿರುವುದು ಮತ್ತು ಅದು ಶರಾವತಿ ಪ್ರಾಂತ್ಯದ ಮುಳುಗಡೆ ವಿಷಯ ಹೊಂದಿದೆ ಎಂದು ತಿಳಿದಾಗ, ಅವರು ಆ ಪ್ರಾಂತ್ಯದವರು ಎಂದು ಗೊತ್ತಿದ್ದರಿಂದ ಹೆಚ್ಚಿನ ಆಶ್ಚರ್ಯ ಆಗಲಿಲ್ಲ.
ನಂತರ ಆಕೃತಿಕನ್ನಡದ ಸಾಮಾಜಿಕ ಜಾಲ ತಾಣದಲ್ಲಿ ಕಾಳು ಮೆಣಸಿನ ರಾಣಿ ಚೆನ್ನಭೈರಾದೇವಿ ಎಂಬ ವಿಷಯ ಬಂದಾಗ ಆಶ್ಚರ್ಯ ಆಯಿತು. ಈ ಹೆಸರು ಇದುವರೆಗೆ ಎಲ್ಲೂ ಕೇಳಿರಲಿಲ್ಲ. ಹಾಗಾಗಿ ಕುತೂಹಲ ಹೆಚ್ಚಿತು. ಎರಡನೇ ಗೃಹಬಂಧನದಲ್ಲಿ ಇರುವಾಗ ಈ ಪುಸ್ತಕ ಬಂದಿದೆ. ಈ ಪುಸ್ತಕ ಓದಿದಾಗ ರಾಮನ ಹಾಡನ್ನು ಬರೆದಿರುವ ಶರ್ಮರವರ ಬಗ್ಗೆ ಇದ್ದ ಗೌರವ ಜಾಸ್ತಿ ಆಯಿತು. ಪುಸ್ತಕ ಓದುವ ಅಭ್ಯಾಸ ಇದ್ದವರಿಗೆ ಓದಲು ಇದೊಂದು ಒಳ್ಳೆಯ ಪುಸ್ತಕ. ಈ ಅಭ್ಯಾಸ ಇಲ್ಲದವರು ಕೂಡ ಚರಿತ್ರೆಯ ಕೆಲವು ಬಿಂದುಗಳನ್ನಾದರೂ ತಿಳಿಯಲು ಇದನ್ನು ಓದಬೇಕು ಎಂದು ಅನಿಸಿತು.
ನಮಗೆ ಚರಿತ್ರೆ ಎಂದರೆ ರಾಜ, ಮಹಾರಾಜರ ಹುಟ್ಟಿದ ದಿನ, ಅವರ ವಂಶ, ಅವರು ಮಾಡಿದ ದಂಡಯಾತ್ರೆ ಬಗ್ಗೆ ತಿಳಿದುಕೊಳ್ಳುವುದು ಅಥವ ಬಾಯಿ ಪಾಠ ಮಾಡುವುದೇ ಆಗಿದೆ!. ಅಕ್ಬರ್ ಬಗ್ಗೆ ಶಾಲೆಯಲ್ಲಿ ಪಾಠ ಮಾಡುವಾಗಲೂ ಅವನು ಮಾಡಿದ ಯುದ್ಧಗಳ ವಿವರವೇ ಜಾಸ್ತಿ. ಕೊನೆಗೆ ಅಕ್ಬರ್ ಗೆ ಕೂಡ ಯುದ್ಧ ಬೇಸರ ಬಂದ ವಿಷಯದ ಬಗ್ಗೆ ಶಾಲೆಗಳಲ್ಲಿ ಒಂದು ಸಾಲಿನಲ್ಲಿ ಹೇಳಿ ಮುಗಿಸುತ್ತಿದ್ದರು. ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆಗಳು ಯುಧ್ಧದ ಸುತ್ತ ಸುತ್ತುವುದರಿಂದ ಅಂಕಗಳನ್ನು ಪಡೆಯಲು ನಾವು ಅದನ್ನೇ ಓದುತ್ತಿದ್ದವು! ಸಾಮ್ರಾಜ್ಯ ವಿಸ್ತರಣೆ ಮಾಡಿ ಚಕ್ರವರ್ತಿ ಆಗಲು ಆಸೆ ಪಡದೆ ವ್ಯಾಪಾರ ಕುಶಲತೆಯಿಂದ ಪ್ರಜೆಗಳ ಆದಾಯ ಹೆಚ್ಚಿಸುವ ಮತ್ತು ಆ ಮೂಲಕ ನಾಡಿನಲ್ಲಿ ಸುಭೀಕ್ಷತೆ ತರಲು ಪ್ರಯತ್ನಿಸುವೆ ಹೆಣ್ಣು ಮಗಳೊಬ್ಬಳು ನಗಿರೆಯ ಪ್ರಾಂತ್ಯದಲ್ಲಿ ಐವತ್ತುಕ್ಕೂ ಹೆಚ್ಚಿನ ವರ್ಷ ರಾಣಿ ಆಗಿದ್ದಳು ಎನ್ನುವ ವಿಷಯ ಚರಿತ್ರೆಯ ಪಾಠದಲ್ಲಿ ಇರದೇ ಇರುವುದು ಮತ್ತು ಬಹುಶಃ ಬಹುಪಾಲು ಜನರಿಗೆ ತಿಳಿಯದೆ ಇರುವುದು ಅತ್ಯಂತ ಆಶ್ಚರ್ಯ ಮತ್ತು ಖೇದದ ಸಂಗತಿ. ವ್ಯಾಪಾರಕ್ಕೆ ಬಂದು ರಾಜ್ಯವಾಳಿದವರು ಅಂದರೆ ತಲೆಯಲ್ಲಿ ಬರುವುದು ಬ್ರಿಟಿಷರು. ಆದರೆ ಅವರಿಗಿಂತ ಮುಂಚೆಯೇ ಫೋರ್ಚುಗೀಸ್ನವರು ಆ ಕೆಲಸದ ಮೇಲೆ ಗೋವೆಗೆ ಬಂದಿದ್ದರು ಎಂದು ತಲೆಗೆ ತಕ್ಷಣ ಬರುವುದಿಲ್ಲ. ಬಹುಶಃ ಈ ಕಾರಣದಿಂದಲೇ ಗೋವೆಯನ್ನು ಭಾರತದ ಅಂಗವನ್ನಾಗಿ ಮಾಡಲು ೧೯೬೧ ರವರೆಗೆ ಕಾಯಬೇಕಾಯಿತು! ಬಹುಶಃ ಪಶ್ಚಿಮ ತೀರದ ರಾಜರು ಒಂದಾಗಿ ಚೆನ್ನಭೈರಾದೇವಿಯ ಜೊತೆ ಹೋರಾಡಿದ್ದರೆ ಗೋವದಲ್ಲಿ ಅವರು ನೆಲೆ ನಿಲ್ಲುವ ಅವಕಾಶ ಇರುತ್ತಿರಲಿಲ್ಲ. ಅದು ಬಹುಶಃ ಚರಿತ್ರೆಯನ್ನೇ ಬದಲಿಸುವ ಘಟನೆ ಆಗಿರುತ್ತಿತ್ತು. ನಾ ಕಂಡ ಶರ್ಮರವರ ಚೆನ್ನಭೈರಾದೇವಿ ಕಾದಂಬರಿ ಆದರೂ ಚರಿತ್ರೆ ಮುಚ್ಚಿಟ್ಟಿದ್ದ ಒಂದಿಷ್ಟು ವಿಷಯಗಳನ್ನು ಹೊರತಂದಿದೆ ಎಂದು ಸಂತೋಷವಾಯಿತು.

ಗಜಾನನ ಶರ್ಮರವರು ಹಾಕಿದ ಚುಕ್ಕಿ ರಂಗೋಲಿ!
ನಮ್ಮ ಮನೆಗಳಲ್ಲಿ ಹೊರಗಡೆ ದಿನ ನಿತ್ಯ ಬಾಗಿಲ ಬಳಿ ಎರಡು ಎಳೆ ರಂಗೋಲಿ ಹಾಕುವುದು ಸಾಮಾನ್ಯ ಬಿಡಿ. ಹಬ್ಬ, ಹರಿದಿನಗಳು ಬಂದರೆ ಚುಕ್ಕಿ ಇಟ್ಟು ದೊಡ್ಡ ರಂಗೋಲಿ ಹಾಕುವುದು ಬಹಳ ಕಾಲದಿಂದಲೂ ಬಂದ ಪದ್ದತಿ. ಚುಕ್ಕಿ ಜೊಡಿಸುತ್ತಾ ಹೋದಂತೆ, ಆಕಾರವೊಂದು ಮೂಡುವುದನ್ನು ನೋಡಲು ಕೂಡ ಬಹಳ ಚೆನ್ನಾಗಿರುತ್ತದೆ. ಅದಕ್ಕೆ ವಿವಿಧ ಬಣ್ಣಗಳನ್ನು ತುಂಬಿಸಿದರೆ, ಅದರ ಅಂದ ಇನ್ನೂ ಹೆಚ್ಚುತ್ತದೆ. ಶರ್ಮರವರು ಈಗ ಒಂದು ದೊಡ್ಡ ರಂಗೋಲಿ ಬಿಡಿಸಿದ್ದಾರೆ. ಘಟನೆಗಳ ಚುಕ್ಕಿಗೆ, ಅವರ ಮಾತಿನ ಪ್ರಾಕಾರ, ಮನೋ ರೇಖೆಗಳ ಮೂಲಕ ಚೆನ್ನಭೈರಾದೇವಿಯ ಜೀವನಾಮೃತವನ್ನು ತುಂಬಿಸಿ ಒಂದು ಸುಂದರವಾದ ಮತ್ತು ದೊಡ್ಡದಾದ ರಂಗೋಲಿಯನ್ನು ಹಾಕಿದ್ದಾರೆ.
ಆ ರಂಗೋಲಿ ಬಲಗಡೆಯಿಂದ (ಪೂರ್ವ) ನೋಡಿದರೆ, ಕುದುರೆ ಮೇಲೆ ಕುಳಿತಿರುವ ಸಣ್ಣಮ್ಮನ ಕಂಡರೆ, ಎಡಗಡೆಯಿಂದ(ಪಶ್ಚಿಮ) ನೋಡಿದಾಗ ಕೀರಿಟ ಧರಿಸಿರುವ ರಾಣಿ ಕಾಣುತ್ತಾಳೆ. ಮುಂದೆ (ಉತ್ತರ) ನಿಂತು ನೋಡಿದಾಗ ತಾಯಿ ರೂಪದಲ್ಲಿ ಕಾಣುವ ರಾಣಿ ಅವ್ವರಸಿ, ಕೆಳಗೆ (ದಕ್ಷಿಣ) ನಿಂತು ನೋಡಿದಾಗ, ವೈರಾಗಿಯೊಬ್ಬರ ರೂಪ ಕಂಡು ಬರುತ್ತದೆ. ಶರ್ಮರವರು ಬರೀ ಚುಕ್ಕಿ ರಂಗೋಲಿ ಹಾಕಿಲ್ಲ. ಅದರಲ್ಲಿ ಓಳ್ಳೆಯ ಬಣ್ಣಗಳನ್ನು ತುಂಬಿಸಿ, ಇಡೀ ರಂಗೋಲಿ ಚಿತ್ತಾಕರ್ಷಕ ಮಾಡಿದ್ದಾರೆ. ಆದರೆ ಯಾವ ದಿಕ್ಕಿನಲ್ಲಿ ನಿಂತು ನೋಡಿದಾಗಲೂ ಕಾಣುವುದು ಚೆನ್ನಭೈರಾದೇವಿಯ ಬಿಳಿ ಬಣ್ಣದ ನಿಶ್ಕಲ್ಮಶ ಹೃದಯ.
ನೋಡಲು ಇದು ಚೆನ್ನಭೈರಾದೇವಿ ಕಥೆಯಂತೆ ಇದ್ದರೂ ಕೂಡ ಈ ರಂಗೋಲಿ ಗೆರೆಗಳಲ್ಲಿ ಬಹುಶಃ ಸರ್ವ ಕಾಲಕ್ಕೂ ಸಲ್ಲುವಂತ ರಾಜನೀತಿ, ರಾಜನಿಷ್ಠೆ, ಆಡಳಿತದ ರೂಪ ರೇಶೆಗಳು, ಧೈರ್ಯ, ಸಹಾಸ, ವ್ಯವಹಾರದ ಕುಶಲತೆ, ಪ್ರಜೆಗಳ ಅಭ್ಯುದಯ, ಜೊತೆಗೆ ಹೃದಯದಲ್ಲಿ ಅಚಲವಾಗಿ ಅಡಗಿರುವ ವೈರಾಗ್ಯವೇ ಇದೆ!
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ಹುಟ್ಟಿದ ಊರಿನಲ್ಲಿ ಬಾಲ್ಯದಲ್ಲಿ ಕೇಳಿದ ರಾಣಿಯ ಕಥೆ ಮುಂದೆ ಎಲ್ಲೂ ಕಾಣದೆ ಹೋದಾಗ, ಆ ರಾಣಿಯನ್ನು ಶರ್ಮರವರು ಹುಡುಕಿಕೊಂಡು ಹೊರಡುತ್ತಾರೆ. ಅದರ ಫಲವೇ ಈ ಕಾದಂಬರಿ ಕರಿ ಮೆಣಸಿನ ರಾಣಿಯ ಚರಿತೆ.
ಒಳ್ಳೆಯ ರೇಷ್ಮೆ ಸೀರೆ, ಮೈತುಂಬ ಆಭರಣ, ತಲೆಯ ಮೇಲೆ ಕಿರೀಟ ಇಲ್ಲದೇ ಇದ್ದರೆ ಯಾರನ್ನಾದರೂ ರಾಣಿ ಎಂದು ಹೇಳಲಿಕ್ಕೆ ಸಾಧ್ಯವಿದೆಯೇ? ಮೊದಲಿಗೆ ಶರ್ಮರವರು ಪಿತಾಂಬರ ಇಲ್ಲದ, ಮೈತುಂಬ ಆಭರಣ ಮತ್ತು ಕಿರೀಟ ಧರಿಸಿರದ ರಾಣಿಯ ಪರಿಚಯ ಮಾಡಿಕೊಡುತ್ತಾರೆ. ತನ್ನ ಸುತ್ತ ಎಲ್ಲವೂ ಇದ್ದು ಅದರ ಅರಿವೂ ಇದ್ದರೂ, ತನ್ನ ಮನದಲ್ಲಿ ಆ ಸುಖಃಗಳು ಅಂಟಿಕೊಳ್ಳದಂತೆ ಇರುವಂತ ರಾಣಿಯ ಮನಸ್ಥಿತಿ ‘ನೀನಿಷ್ಟದಂತೆನ್ನ ಇಟ್ಟಿರುವೆ ರಾಮ| ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|| ಎನ್ನುವ ಹಾಡಿನ ಸಾಲಿನ ನೆನಪಾಗಿಸುತ್ತದೆ.
ದಾಸಿಯರ ಕೈಯಲ್ಲಿ ಸೇವೆ ಮಾಡಿಸಿಕೊಳ್ಳುತ್ತಾ, ಪಲ್ಲಂಗದಲ್ಲಿ ಕುಳಿತುಕೊಂಡಿರುವ ರಾಣಿಯ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿರುವ ನಮಗೆ ಇದ್ದರೆ ರಾಣಿಯ ತರಹ ಇರಬೇಕು ಅನಿಸುವುದಿಲ್ಲವೇ? ಅದಕ್ಕೋಸ್ಕರವೇ ಇರಬೇಕು, “ನಿನ್ನನ್ನು ರಾಣಿ ತರಹ ನೋಡಿಕೊಳ್ಳುತ್ತೇನೆ” ಎಂದು ಹೇಳುವ ರೂಢಿ ಬಂದಿರಬೇಕು! ಆದರೆ ಈ ನಗಿರೆಯ ರಾಜಕುಮಾರಿಗೆ ದೂರದ ಊರಿನಲ್ಲಿ ಬಾಲಕಿಯಾಗಿ ಇದ್ದಾಗಲೇ ಯುದ್ದದ ತರಬೇತಿ, 18 ವರ್ಷಕ್ಕೆ ಹಾಡವಳ್ಳಿಯ ರಾಣಿ, ಸುತ್ತಲೂ ರಾಜ್ಯ ವಿಸ್ತರಿಸುವ ಬಗ್ಗೆ ದಿನಲೂ ಯೋಚಿಸುವ, ಹೊಂಚು ಹಾಕುತ್ತಿರುವ ರಾಜರುಗಳು, ವ್ಯಾಪಾರದ ಹೆಸರಿನಲ್ಲಿ ಬಂದು ದೇಶದ ಸಂಪತ್ತನ್ನು ದೋಚುವುದರ ಜೊತೆಗೆ ಧರ್ಮ ಪ್ರಸಾರದಲ್ಲಿ ನಿರತರಾಗಿರುವ ಫೋರ್ಚುಗೀಸ್ ರು. ಇಷ್ಟು ಕಷ್ಟ ಸಾಲದೆ? ಯಾವುದೇ ಕಷ್ಟವನ್ನು ಸಹನೆಯಿಂದ ಎದುರಿಸುವ ಸಣ್ಣಮ್ಮ ಶರ್ಮರವರ ಹಾಡಿನ
ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ ||
ಎನ್ನುವ ಹಾಡಿನ ಸಾಲನ್ನು ನೆನಪಿಸುತ್ತಾಳೆ.

(”ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ….” ಗಾಯಕಿ ಸುಪ್ರಭ)
ನಮ್ಮ ನಾಡು ಈಗ ಇಷ್ಟೆಲ್ಲಾ ಮುಂದುವರಿದಿದ್ದರೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಇನ್ನೂ ಹೋರಾಟ ಮಾಡಿ ಪಡೆದು ಕೊಳ್ಳುವ ಸ್ಥಿತಿಯಲ್ಲಿ ಇದ್ದಾರೆ. ಹೀಗಿರುವಾಗ, ಸುಮಾರು ಆರು ನೂರು ವರ್ಷಗಳ ಹಿಂದೆ ಮದುವೆ ಆಗದ ಹುಡುಗಿಯನ್ನು ರಾಣಿಯೆಂದು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಆ ಸಮಾಜದಲ್ಲಿ ಆಗುತ್ತದೆಯೇ? ಎಂದು ಯೋಚಿಸಿ. ಅದೂ ಸಣ್ಣ ವಯಸ್ಸಿನ ರಾಣಿ, ಪ್ರಜೆಗಳ ಅಭ್ಯುದಯಕ್ಕೆ ಆದ್ಯತೆ ನೀಡಿ, ಯಶಸ್ಸಿನ ಹಾದಿಯಲ್ಲಿ ಸಾಗಿದರೆ ನೋಡುವವರಿಗೆ ಹೇಗೆ ಸಹಿಸಲು ಸಾಧ್ಯ? ಗುಣಕ್ಕೆ ಮಸಿಬಳಿಯುವ ಕೆಲಸ ನಡೆಯಲು ಪ್ರಾರಂಭ ಆದರೂ, ಒಳ್ಳೆಯ ರೀತಿಯಲ್ಲಿ ಮುನ್ನಡೆಯುವ ಆ ರಾಣಿಯ ಕಂಡಾಗ
ಒಳಿತಿನೆಡೆ ಮುನ್ನೆಡೆವ ಮನವ ಕೊಡು ರಾಮ|
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ||
ಹಾಡಿನ ಸಾಲುಗಳನ್ನು ನೆನಪು ಮಾಡುತ್ತಾಳೆ.
ಒಂದು ಕಡೆ ವ್ಯಾಪಾರದ ಬುದ್ದಿ ಉಪಯೋಗಿಸಿ ಜನರ ಬಡತನತದ ಪಾಪ ಕಳೆಯುವ ಪ್ರಯತ್ನ, ಯುಕ್ತಿ ಮತ್ತು ಶಕ್ತಿ ಗಳಿಂದ ವೈರಿಗಳಿಂದ ರಕ್ಷಣೆ ಕೊಡುವ ಚಾಣಾಕ್ಷತನ ಮತ್ತು ಧೈರ್ಯಶಾಲಿ ಗುಣ, ಅಧಿಕಾರದ ಮಧ್ಯೆದಲ್ಲೂ ಹೃದಯದಲ್ಲಿ ಕಾಪಾಡಿಕೊಂಡು ಬರುವ ನಿರ್ಲಿಪ್ತತೆ, ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ ಹಾಡಿನ ಸಾಲಿನಂತೆ, ಆ ರಾಮನ ದಯದಿಂದ ಮಾತ್ರ ಬರಲು ಸಾಧ್ಯ.
ನಾಡಿನ ಪ್ರಜೆಗಳಿಗೆ ತಾಯಿಯ ಪ್ರೀತಿ ಹರಿಸಿದ ಅವ್ವರಸಿ ತಾಯಿ ಕೌಸಲ್ಯಳ ನೆನಪಿಸಿದರೆ , ಜನರ ಏಳಿಗೆಯ ಕನಸಿನ ಪಾದುಕೆ ತಲೆಯಲ್ಲಿ ಹೊತ್ತು ರಾಜ್ಯವಾಳಿದ ರಾಣಿ ಭರತನನ್ನು ನೆನಪಿಸುತ್ತಾಳೆ. ವಿಜಯನಗರ ಸಾಮ್ರಾಜ್ಯ ಅವನತಿಯತ್ತ ಸಾಗಿದ್ದರೂ ಅವರಲ್ಲಿ ನಿಷ್ಟೆಯನ್ನು ಮುಂದುವರಿಸಿ, ದೂರದ ಬಹುಮುನಿ ಸಾಮ್ರಾಜ್ಯದವರು ಗೌರವದಿಂದ ನೋಡುವ ಸಮಯದಲ್ಲೂ, ದೇಹ ಬಂದಿಯದಾಗಲೂ ಮನಸ್ಸು ಪ್ರಶಾಂತವಾಗಿ ಮುಕ್ತಿಯ ನಿರೀಕ್ಷೆ ಮಾಡುವ ಸ್ಥಿತಿ ಶಬರಿಯಾಗುವೆ ನಿನ್ನ ಭಾವ ಕೊಡು ರಾಮ ಸಾಲನ್ನು ನೆನಪಿಸುತ್ತಾಳೆ.
ರಾಜ್ಯಭಾರದಲ್ಲಿ ಮುಳುಗಿರುವಾಗಲೂ, ಫೋರ್ಚುಗೀಸ್ ರ ಹಿಮ್ಮೆಟ್ಟಿಸಿದಾಗಲೂ, ಎಲ್ಲೆಡೆ ಹೆಸರು ಮಾಡಿದಾಗಲೂ, ಅಪಪ್ರಚಾರ ನಡೆದಾಗಲೂ, ಮನಸ್ಸಿನಲ್ಲಿದ್ದ ವೈರಾಗ್ಯದ ಗಿಡಗಳು ಹೆಮ್ಮರವಾಗಿ ಬೆಳೆಯುವುದು ಕೊನೆಗೆ ಆ ರಾಮನಲ್ಲಿ ಲೀನಳಾಗುವುದು ಕಂಡಾಗ ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ| ಹಾಡಿನ ಸಾಲುಗಳನ್ನು ನೆನಪಿಸುತ್ತಾಳೆ.
ಕಾದಂಬರಿ ಒದಿದ ಮೇಲೆ ಮತ್ತೆ ಮತ್ತೆ ಅನಿಸುವುದು
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ಮೂರ್ಕೋಡಿ ಹಳ್ಳದಲ್ಲಿ (ತಲಕಳಲೆ ಹಳ್ಳ) ರಾಣಿ ಅರಿಶಿನ ಎಣ್ಣೆ ಸ್ನಾನ ಮಾಡಿದರೆ ಮುಂದೆ ಅದು ಶರಾವತಿಗೆ ಸೇರಿ ಗೇರುಸೊಪ್ಪೆಯವರೆಗೆ ಅರಿಶಿನ ಬಣ್ಣದ ನೀರು ಹರೀತಿತ್ತು ಎಂದು ಜನ ಹೇಳುತ್ತಿದ್ದರಂತೆ! ಈಗ ಆ ಅರಿಶಿನದ ನೀರನ್ನು ಎಲ್ಲರಿಗೂ ತೋರಿಸುವ ಶರ್ಮರವರ ಪ್ರಯತ್ನ ಆ ರಾಮನ ದಯೆಯಿಂದ ಸಫಲವಾಗಿದೆ ಎಂದು ನನ್ನ ಅನಿಸಿಕೆ.
ಒಳ್ಳೆಯ ಕಾದಂಬರಿಯನ್ನು ಕೊಟ್ಟ ಶ್ರೀಯುತ ಶರ್ಮರವರಿಗೆ ಧನ್ಯವಾದಗಳೊಂದಿಗೆ.
- ಎನ್.ವಿ.ರಘುರಾಂ (ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ.
