ಕರಿಮೆಣಸಿನ ರಾಣಿಯ ‘ಚೆನ್ನಭೈರಾದೇವಿ’ ಕಾದಂಬರಿ ಲೋಕಾರ್ಪಣೆಗೆ ಸಿದ್ಧತೆ



ಕರಿಮೆಣಸಿನ ರಾಣಿಯ ‘ಚೆನ್ನಭೈರಾದೇವಿ’ ಕಾದಂಬರಿ ಲೋಕಾರ್ಪಣೆಗೆ ಸಿದ್ದವಾಗಿದ್ದು, ಇದೇ ತಿಂಗಳು ೨೫ ರಂದು ಓದುಗರ ಕೈ ಸೇರಲಿದೆ. ಚೆನ್ನಭೈರಾದೇವಿ ಕುರಿತಾದ ಸಾಕಷ್ಟು ಸ್ವಾರಸ್ಯಕರ ವಿಷಯಗಳು ಈ ಕಾದಂಬರಿ ಒಳಗೊಂಡಿದೆ. ಇದರ ಬಗ್ಗೆ ಲೇಖಕರ ಮಾತು. ಮುಂದೆ ಓದಿ…

ಪುಸ್ತಕ ಬಿಡುಗಡೆ : ಚೆನ್ನಭೈರಾದೇವಿ ಕಾದಂಬರಿ
ಲೇಖಕರು : ಡಾ.ಗಜಾನನ ಶರ್ಮಾ
ದಿನಾಂಕ : ಏಪ್ರಿಲ್೨೫, ೨೦೨೧
ಸಮಯ : ಭಾನುವಾರ ಬೆಳಗ್ಗೆ ೧೧ ಗಂಟೆ 
ಸ್ಥಳ : ಫೇಸ್ ಬುಕ್ ಲೈವ್ 

ಬಂಧುಗಳೇ,

ಅಂಕಿತ ಪುಸ್ತಕ ಮತ್ತು ಬುಕ್ ಬ್ರಹ್ಮ ಸಹಯೋಗದಲ್ಲಿ ನನ್ನ ಕಾದಂಬರಿ, “ಚೆನ್ನಭೈರಾದೇವಿ” ‘ಕರಿಮೆಣಸಿನ ರಾಣಿಯ ಅಕಳಂಕ ಚರಿತೆ’ ವರ್ಚುಅಲ್ ಆಗಿ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಸಾಹಿತಿ ಸನ್ಮಾನ್ಯ ಜೋಗಿಯವರಿಂದ ಬಿಡುಗಡೆಗೊಳ್ಳಲಿದೆ. ಎರಡು ವರ್ಷದ ಹಿಂದೆ ನನ್ನ ಮೊದಲ ಕಾದಂಬರಿ “ಪುನರ್ವಸು” ಪುಸ್ತಕವನ್ನು ತಮ್ಮಂತಹ ಅಪಾರ ಸಂಖ್ಯೆಯ ಆತ್ಮೀಯರ ನಡುವೆ ಬಿಡುಗಡೆ ಮಾಡಲು ಸಾಧ್ಯವಾಗಿತ್ತು. ಈಗಲೂ ಅಂದಿನಂತೆ ಚೊಕ್ಕದಾದ ಕಾರ್ಯಕ್ರಮವೊಂದನ್ನು ಆಯೋಜಿಸಿ ಬಿಡುಗಡೆ ಮಾಡುವ ಇರಾದೆ ಇತ್ತು.

ಆದರೆ ಕೊರೋನಾ ಕಾರಣದಿಂದ ಅನಿವಾರ್ಯವಾಗಿ ವರ್ಚುಅಲ್ ಪ್ರೋಗ್ರಾಮ್ ಮಾಡಬೇಕಿದೆ. ಮೂರು ವರ್ಷಗಳ ಕಾಲ ಪ್ರಾಮಾಣಿಕವಾಗಿ ನಡೆಸಿದ ಹಲವು ಗ್ರಂಥಗಳ ಅಧ್ಯಯನ, ಹಲವು ತಜ್ಞರ ಭೇಟಿ, ಗೇರುಸೊಪ್ಪೆ, ಹಾಡುವಳ್ಳಿ, ಹೊಗೆವಡ್ಡಿ, ಕಾನೂರು ಕೋಟೆ, ಮಿರ್ಜಾನ,ಕಾಗಲ್ ಮುಂತಾಗಿ ಹತ್ತು ಹಲವು ಊರುಗಳ ಸುತ್ತಾಟ, ರಾಣಿ ಚೆನ್ನಭೈರಾದೇವಿ ಸಂಚರಿಸುತ್ತಿದ್ದ ಘಟ್ಟ ಕಣಿವೆಗಳ ಹಾದಿಗಳ ಕಾಲ್ನಡಿಗೆ, ಪ್ರಸ್ತುತ ಸೋದೆಯಲ್ಲಿರುವ ಹಾಡುವಳ್ಳಿಯ ಭಟ್ಟಾಕಳಂಕ ಶ್ರೀಮಠದ ಪರಂಪರೆಯ ಭಟ್ಟಾಕಳಂಕ ಭಟ್ಟಾಚಾರ್ಯರ ಸಂದರ್ಶನ, ಗೋಪಾಲರಾಯರಂತಹ ಹಿರಿಯ ಇತಿಹಾಸ ತಜ್ಞರೊಂದಿಗೆ ನಡೆಸಿದ ಚರ್ಚೆ, ಪೋರ್ಚುಗೀಸ್ ಸಾಹಿತ್ಯದ ಆಂಗ್ಲ ಅವತರಿಣಿಕೆಯ ಅಭ್ಯಾಸ ಮತ್ತು ಜೈನ, ಗೊಂಡ ಸಮುದಾಯದ ಸ್ಥಳೀಯ ಹಿರಿಯರ ಭೇಟಿ, ಇದೆಲ್ಲದರ ಒಟ್ಟೂ ಪರಿಣಾಮವಾಗಿ ಮನಸ್ಸಿನಲ್ಲಿ ಮೂಡಿದ ಚೆನ್ನಭೈರಾದೇವಿಯ ಮೂರ್ತಿಯನ್ನು ಅಕ್ಷರದಲ್ಲಿ ಕಟೆದು‌ ನಿಲ್ಲಿಸುವ ಕಿರು ಪ್ರಯತ್ನವಿದು. ಸ್ಪಷ್ಟವಾಗಿ ಹೇಳುತ್ತೇನೆ, ಇದು ಆಕೆಯ ನೈಜ ಕತೆಯಲ್ಲ. ಅವಳ ಜೀವನ ಚರಿತ್ರೆಯೂ ಅಲ್ಲ. ಆ ಕಾಲದ ಹಲವು ಸತ್ಯಘಟನೆಗಳನ್ನು ಆಧರಿಸಿ, ದೇಶಕಾಲಗಳಿಗೆ ಅನ್ವಯವಾಗುವಂತೆ ಹೆಣೆದ ಕಾಲ್ಪನಿಕ ಚಿತ್ರಣ.

ಲೇಖಕರಾದ ಡಾ.ಗಜಾನನ ಶರ್ಮಾ ಅವರಿಂದ ಚೆನ್ನಭೈರಾದೇವಿ ಕಾದಂಬರಿಯ ಕಿರು ಪರಿಚಯ :

ಐವತ್ನಾಲ್ಕು ವರ್ಷ ರಾಜ್ಯವಾಳಿದ ಈ ದಿಟ್ಟ ಜಿನವನಿತೆಯನ್ನು ದುರದೃಷ್ಟವಶಾತ್ ಕರುನಾಡು ಮರೆತಿದೆ. ಹಾಡುವಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ದಾಲ್ಚಿನ್ನಿ, ಕರಿಮೆಣಸನ್ನು ನಿರ್ಯಾತು ಮಾಡುತ್ತ, ತಾನು ಹುಟ್ಟಿದ ನಾಡಿಗೆ ಅಪಾರ ಪ್ರಮಾಣದ ಸಂಪತ್ತನ್ನು ಗಳಿಸಿಕೊಟ್ಟ ಈಕೆ ಗೋವೆಯ ಪರಂಗಿಗಳನ್ನು ಕಾಳಿ ನದಿಯನ್ನು ದಾಟಗೊಡದ ಧೀರೆ. ಅಂತಿಮವಾಗಿ ಇಕ್ಕೇರಿಯ ಸೆರೆಮನೆಯಲ್ಲಿ ಸಲ್ಲೇಖನದ ಮೂಲಕ ಪ್ರಾಣತ್ಯಾಗಗೈದವಳು. ಇವಳಷ್ಟು ಸುದೀರ್ಘ ಕಾಲ ರಾಜ್ಯವಾಳಿದ ಇನ್ನೊಬ್ಬ ರಾಣಿ ಅಖಂಡ ಭಾರತದ ಚರಿತ್ರೆಯಲ್ಲೇ ಇಲ್ಲ. ರಾಜರೂ ಕೇವಲ ಬೆರಳೆಣಿಕೆಯಷ್ಟೇ.

ಕ್ರಿಸ್ತಶಕ ೧೫೫೨ ರಿಂದ ೧೬೦೬ ರವರೆಗೆ ಒಟ್ಟು ಐವತ್ನಾಲ್ಕು ವರ್ಷಗಳ ಕಾಲ ಇಂದಿನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪೆಯಿಂದ, ಕೊಂಕಣ ಹೈವ ತುಳು ಪ್ರಾಂತ್ಯಗಳನ್ನಾಳಿದ ಸಾಳುವ ವಂಶದ ಈ ವೀರ ಜಿನವನಿತೆ, ತಾನು ಬದುಕಿದ್ದಷ್ಟೂ ಕಾಲ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದಳು. ದಕ್ಷಿಣ ಕೊಂಕಣಕ್ಕೆ ತಮ್ಮ ಮತಾಂತರ ಪ್ರಕ್ರಿಯೆಯನ್ನು ವಿಸ್ತರಿಸಲು ತುದಿಗಾಲಲ್ಲಿ ನಿಂತಿದ್ದ ಪರಂಗಿಗಳ ಪ್ರಯತ್ನಕ್ಕೆ ತಡೆಗೋಡೆಯಾಗಿ ನಿಂತು ಇಂದಿನ ಉತ್ತರ ಕನ್ನಡವನ್ನು ಸಂರಕ್ಷಿಸಿದವಳು. ಪೋರ್ಚುಗೀಸರ ಜೊತೆಗೆ ಅಗತ್ಯವಿದ್ದಲ್ಲಿ ಸ್ನೇಹ, ಅನಿವಾರ್ಯವಿದ್ದಲ್ಲಿ ಸಮರ ಎರಡಕ್ಕೂ ಸೈ ಎಂದವಳು. ರಾಜಕೀಯವಾಗಿ ಅವರನ್ನು ವಿರೋಧಿಸುತ್ತಲೇ ಅವರೊಂದಿಗೇ ಚಾಣಾಕ್ಷತೆಯಿಂದ ವ್ಯಾವಹಾರಿಕ ಮೈತ್ರಿಯನ್ನು ಬೆಸೆದುಕೊಂಡು, ಕಾಳುಮೆಣಸು, ದಾಲ್ಚಿನ್ನಿ, ಭತ್ತ, ಬೆಲ್ಲ, ಬೆತ್ತ, ಗಂಧ, ಶುಂಠಿ, ದಂತವೇ ಮುಂತಾದ ಪದಾರ್ಥಗಳನ್ನು ಮಾರಿ ಅವರಿಂದಲೇ ‘ರೈನಾ ದ ಪಿಮೆಂಟಾ’ (The pepper Queen) ಎಂಬ ಬಿರುದು ಪಡೆದ ಮಹಾ ಮುತ್ಸದ್ದಿ.



ಬಿಜಾಪುರದ ಸುಲ್ತಾನರಿಂದ ಗೋವೆಯನ್ನು ಗೆದ್ದ ಪೋರ್ಚುಗೀಸರು, ತಮ್ಮ ವಸಾಹತನ್ನು ಉಳಿಸಿಕೊಳ್ಳಲು ಸ್ಥಳೀಯರ ನೆರವು ಅನಿವಾರ್ಯ ಎಂಬುದನ್ನು ಮನಗಂಡು ಅವರನ್ನು ಆಮಿಷ, ಒತ್ತಡ, ಭಯ, ವಂಚನೆಗಳ ಮೂಲಕ ಮತಾಂತರಕ್ಕೆ ಒಳಪಡಿಸಿ ‘ತಮ್ಮವರ’ನ್ನಾಗಿಸಿಕೊಳ್ಳತೊಡಗಿದ್ದರು. ಮತಾಂತರಕ್ಕಾಗಿ ಹಿಂಸೆ, ಅತ್ಯಾಚಾರ ಅನಾಚಾರಕ್ಕಿಳಿದಿದ್ದರು. ಅಂತಹ ದುರ್ಭರ ಪರಿಸ್ಥಿತಿಯಲ್ಲಿ ಪರಂಗಿಗಳ ದಬ್ಬಾಳಿಕೆಗೆ ಸಿಲುಕಿ ನಿರಾಶ್ರಿತರಾಗಿ ವಲಸೆ ಬಂದ ಹಲವು ಹತ್ತು ಸಮುದಾಯದವರಿಗೆ ತನ್ನ ರಾಜ್ಯದಲ್ಲಿ ಸುರಕ್ಷಿತ ಆಶ್ರಯವಿತ್ತು ವಾತ್ಸಲ್ಯದಿಂದ ಪರಿಪೋಷಿಸಿದವಳು ಚೆನ್ನಭೈರಾದೇವಿ. ಕಲ್ಲಿಕೋಟೆಯ ಜಾಮೋರಿನ್ನನಿಂದ ಹಿಡಿದು ಗುಜರಾತಿನ ಸುಲ್ತಾನನವರೆಗೆ ಇಡೀ ಪಶ್ಚಿಮ ಕರಾವಳಿಯ ಅರಸರು ಒಗ್ಗೂಡಿ ೧೫೭೦ ರಲ್ಲಿ ಪೋರ್ಚುಗೀಸರ ವಿರುದ್ಧ ನಡೆಸಿದ ಸಂಯುಕ್ತ ಹೋರಾಟದ ಹಿಂದಿನ ಸ್ಪೂರ್ತಿ ಚೆನ್ನಭೈರಾದೇವಿ.

ಎಲ್ಲ ಧರ್ಮ, ಜಾತಿ, ಮತದವರನ್ನು ಒಳಗೊಂಡಂತೆ ಸುಸ್ಥಿರ ಆಡಳಿತ ನಡೆಸುವ ಧರ್ಮಸಮನ್ವಯತೆಗೆ ಆಕೆಯೊಂದು ಗಟ್ಟಿ ಉದಾಹರಣೆ. ಹಾಡುವಳ್ಳಿಯಲ್ಲಿ ಹುಟ್ಟಿದ ಈ ಹೆಣ್ಣುಮಗಳ ವಿದ್ಯಾಭ್ಯಾಸ ನಡೆದದ್ದು ಹಾಡುವಳ್ಳಿಯ ಜೈನರ ಅಕಳಂಕ ಗುರುಕುಲದಲ್ಲಿ. ಬಾಲ್ಯದಲ್ಲಿ ಅವಳ ವ್ಯಕ್ತಿತ್ವವನ್ನು ರೂಪಿಸಿದವರು ಜೈನ ಗುರುಗಳು. ಆಡಳಿತದಲ್ಲಿ ಅವಳಿಗೆ ಮಾರ್ಗದರ್ಶನ ನೀಡಿ ರಾಜಕೀಯ ವ್ಯಕ್ತಿತ್ವ ಕಟ್ಟಿಕೊಟ್ಟವರು ಹವ್ಯಕರು, ಸಾರಸ್ವತರು. ‘ಅವ್ವರಸಿ’ ಎಂದು ಪ್ರೀತಿ ಮತ್ತು ಗೌರವದಿಂದ ಆಕೆಯನ್ನು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಬೆಂಬಲಿಸಿದವರು ಗೊಂಡರು, ಖಾರ್ವಿಗಳು, ಬೆಸ್ತರು, ಹಾಲಕ್ಕಿಗಳು. ಆರಂಭದ ಅವಳ ವಾಣಿಜ್ಯ ವ್ಯವಹಾರಕ್ಕೆ ಬೆಂಬಲವಿತ್ತು ಮಧ್ಯಪ್ರಾಚ್ಯದ ಮಹ್ಮದೀಯರೊಂದಿಗೆ ವ್ಯಾವಹಾರಿಕ ಸಂಬಂಧ ಬೆಸೆಯಲು ನೆರವಾದವರು ಭಟ್ಕಳದ ನವಾಯಿತರು. ಉದ್ದಕ್ಕೂ ಅವಳ ಮೈತ್ರಿ ಬಿಜಾಪುರದ ಸುಲ್ತಾನರೊಂದಿಗೆ. ಅವಳಿಗೆ ಗೇರುಸೊಪ್ಪೆ ಗದ್ದುಗೆಯನ್ನು ವಹಿಸಿಕೊಟ್ಟು, ಉದ್ದಕ್ಕೂ ಬೆಂಬಲಕ್ಕೆ ನಿಂತವರು ವಿಜಯನಗರದ ಚಕ್ರವರ್ತಿಗಳು. ಅವಳ ವ್ಯಾವಹಾರಿಕ ಸ್ನೇಹ ಮತ್ತು ರಾಜಕೀಯ ಸಂಘರ್ಷ ಇದ್ದುದು ಪೋರ್ಚುಗೀಸರೊಂದಿಗೆ. ಅವಳ ದೀರ್ಘಕಾಲದ ಒಡನಾಟ ಮಲಬಾರದ ಜಾಮೋರಿನ್ನನ ಜೊತೆಗೆ. ಇನ್ನು ಅವಳ ಪ್ರಜೆಗಳು ಜೈನರು, ಸಾರಸ್ವತರು, ದೈವಜ್ಞರು, ಬೆಸ್ತರು ಮಡಿವಾಳರು, ಬ್ರಾಹ್ಮಣರು, ಹಾಲಕ್ಕಿಗಳು, ಗೊಂಡರು, ಮುಕ್ರಿಗಳು, ಖಾರ್ವಿ ಮುಂತಾಗಿ ಹತ್ತು ಹಲವು ಜಾತಿಗಳು. ಈ ಎಲ್ಲ ಜಾತಿ ಧರ್ಮಗಳ ಜೊತೆ ಸಾಮರಸ್ಯ ಕಾಪಾಡಿಕೊಂಡು, ಸಮಾನ ಪ್ರೀತಿ ವಿಶ್ವಾಸದಿಂದ ಎಲ್ಲರನ್ನೂ ಒಳಗೊಂಡು ಐವತ್ನಾಲ್ಕು ವರ್ಷಗಳಿಗೂ ಹೆಚ್ಚುಕಾಲ ಪ್ರಜಾವತ್ಸಲಳಾಗಿ ಆಕೆ ರಾಜ್ಯಭಾರ ನಡೆಸಿದಳೆಂದರೆ ಅವಳ ಸರ್ವಧರ್ಮ ಸಮಭಾವ ಎಷ್ಟು ಗಟ್ಟಿ ಮತ್ತು ಪ್ರಭಾವಶಾಲಿಯಾಗಿದ್ದಿರಬೇಡ?

 

ಚೆನ್ನಭೈರಾದೇವಿ ಎಂದೂ ಯಾರ ಮೇಲೂ ತಾನಾಗಿ ಯುದ್ದ ಘೋಷಿಸಿದವಳಲ್ಲ. ಪರಂಗಿಗಳೂ ಸೇರಿದಂತೆ ಮಲೆತು ಮೇಲೆ ಬಿದ್ದ ಯಾರನ್ನೂ ಮಣ್ಣುಮುಕ್ಕಿಸದೆ ಬಿಟ್ಟವಳೂ ಅಲ್ಲ. ಅಹಿಂಸೆಯೇ ಪರಮ ಧರ್ಮವೆನ್ನುವ ಜೈನಸಿದ್ಧಾಂತವನ್ನು ಚಾಚೂ ತಪ್ಪದ ನಿಷ್ಠ ಶ್ರಾವಕಿ ಅವಳು. ಶತ್ರುಗಳೆದುರು ಧೈರ್ಯ, ಆಪತ್ತಿನೆದುರು ಆತ್ಮಸ್ಥೈರ್ಯ, ಸಂದಿಗ್ಧ ಸಂದರ್ಭಗಳಲ್ಲಿ ದಿಟ್ಟನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ದಾರ್ಢ್ಯತೆಗಳ ಜೊತೆಗೆ, ಆತ್ಮಕ್ಕೆ ವ್ರತ, ದೇಹಕ್ಕೆ ಸಂಯಮ, ಮನಸ್ಸಿಗೆ ನಿಯಂತ್ರಣ, ಹೃದಯದಲ್ಲಿ ದಯೆ, ವರ್ತನೆಯಲ್ಲಿ ನೇರ ನೈಷ್ಠುರ್ಯ, ವ್ಯವಹಾರದಲ್ಲಿ ನ್ಯಾಯ, ಕರ್ತವ್ಯದಲ್ಲಿ ನಿಷ್ಠೆ, ಧರ್ಮದಲ್ಲಿ ಶ್ರದ್ಧೆ, ಪ್ರಜೆಗಳಲ್ಲಿ ವಾತ್ಸಲ್ಯ ಮತ್ತು ಸಿಂಹಾಸನಕ್ಕೆ ಬದ್ಧತೆಯನ್ನು ಮೈಗೂಡಿಸಿಕೊಂಡವಳು ಆಕೆ.

ಹದಿನಾರನೆಯ ಶತಮಾನದಲ್ಲಿ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಸಂಸ್ಥಾನವೆಂದು ಗೇರುಸೊಪ್ಪೆ ರಾಜ್ಯ ಹೆಸರಾಗಲು ಆಕೆಯ ವ್ಯವಹಾರ ಕೌಶಲವೇ ಕಾರಣ. ವರ್ತಕರು ಅನ್ಯ ರಾಜ್ಯಗಳಲ್ಲಿ ಖರೀದಿಸಿದ ವಸ್ತುಗಳನ್ನು ತನ್ನ ರಾಜ್ಯದಲ್ಲಿ ವಿದೇಶೀಯರಿಗೆ ಮಾರಿ ಲಾಭಗಳಿಸಲು ಮುಕ್ತ ಪರವಾನಗಿ ಕೊಟ್ಟು ವ್ಯವಹಾರ ನೈಪುಣ್ಯವನ್ನು ಮೆರೆದ ರಾಣಿ, ತನ್ನ ರಾಜ್ಯದ ವರ್ತಕರಿಗೆ ವಿಧಿಸುವ ಅಗ್ಗದ ಸುಂಕವನ್ನೇ ಅನ್ಯ ರಾಜ್ಯಗಳ ವರ್ತಕರಿಗೂ ವಿಸ್ತರಿಸಿ, ಭಟ್ಕಳ, ಬೈಂದೂರು, ಹೊನ್ನಾವರ, ಕುಮುಟ, ಮಿರ್ಜಾನ, ಅಂಕೋಲ, ಕಾರವಾರ, ಹಳ್ಳಿಕೇರಿ ರೇವುಗಳನ್ನು ವ್ಯಾಪಾರ ಕೇಂದ್ರಗಳಾಗಿ ಪರಿವರ್ತಿಸಿ, ರಾಜ್ಯದಲ್ಲಿ ಸದಾ ವಾಣಿಜ್ಯ ಚಟುವಟಿಕೆ ನಡೆಯುವಂತೆ ನೋಡಿಕೊಂಡ ಚತುರೆ. ಗೋವೆಯ ಕುಶಲಕರ್ಮಿಗಳಿಗೆ ತನ್ನ ರಾಜ್ಯದಲ್ಲಿ ಆಶ್ರಯವಿತ್ತು ರಥ, ಮೇನೆ, ಎತ್ತಿನಗಾಡಿ ಕುದುರೆಬಂಡಿಗಳನ್ನು ತಯಾರಿಸಿ, ಇಡೀ ರಾಜ್ಯದಲ್ಲಿ ರಸ್ತೆಗಳ ಜಾಲವನ್ನು ನಿರ್ಮಿಸಿ ಜನರ ಮತ್ತು ವಸ್ತುಗಳ ಸುಲಭದ ಸಾಗಣೆಗೆ ಅವಕಾಶ ಕಲ್ಪಿಸಿದವಳು. ನೌಕೆ ಮತ್ತು ದೋಣಿಗಳ ನಿರ್ಮಾಣಕ್ಕೆ ಆದ್ಯತೆ ಕೊಟ್ಟು ಸಾಗರೋತ್ತರ ವ್ಯಾಪಾರವನ್ನು ಪ್ರೋತ್ಸಾಹಿಸಿದವಳು. ಬಿಳಿಮೆಣಸಿಗೆ ಬರುತ್ತಿದ್ದ ಬೇಡಿಕೆಯನ್ನು ಮುಂದಾಗಿ ಗ್ರಹಿಸಿ ಮೆಣಸನ್ನು ಬಿಳಿಮೆಣಸನ್ನಾಗಿ ಪರಿವರ್ತಿಸಿ, ಅಧಿಕ ದರದಲ್ಲಿ ನಿರ್ಯಾತು ಮಾಡಿ ಅಪಾರ ಲಾಭ ಗಳಿಸಿದವಳು. ಮಲೆಯಾಳದಿಂದ ಮೆಣಸಿನ ಕುಡಿ ತರಿಸಿ ಕಾಳುಮೆಣಸನ್ನು ತೋಟದ ಬೆಳೆಯಾಗಿ ಬೆಳೆಯುವುದನ್ನು ಕೆನರಾ ಮತ್ತು ಮಲೆನಾಡಿಗೆ ವಿಸ್ತರಿಸಿದ ಬುದ್ಧಿವಂತೆ. ಭಟ್ಕಳ ಹೊನ್ನಾವರ ರೇವುಗಳ ಮೂಲಕ ವಿಜಯನಗರದ ಚಕ್ರವರ್ತಿಗಳಿಗೆ ಪರ್ಶಿಯಾದಿಂದ ಉತ್ತಮ ಜಾತಿಯ ಕುದುರೆಗಳನ್ನು ತರಿಸಿ ತಲುಪಿಸುತ್ತಿದ್ದ ಆಕೆ ಗೋವೆ ಪರಂಗಿಗಳ ಪಾಲಾದ ಮೇಲೆ ಬಿಜಾಪುರದವರಿಗೂ ಕುದುರೆಗಳನ್ನು ಒದಗಿಸುತ್ತಿದ್ದ ವ್ಯವಹಾರ ಕುಶಲಿ. ಯುರೋಪು ಬೆಳ್ಳಿಯ ಅತಿಪ್ರಸರಣಕ್ಕೆ ಸಿಲುಕಿ ಬಳಲುತ್ತಿದ್ದ ಸಂದರ್ಭದಲ್ಲಿ ತಾನು ಸಾಂಬಾರು ಪದಾರ್ಥಗಳಿಗೆ ಬಂಗಾರದ ಬದಲಿಗೆ ಬೆಳ್ಳಿ ವಿನಿಮಯವನ್ನು ಒಪ್ಪಿ ಅದಕ್ಕೆ ಅನುಗುಣವಾಗಿ ವ್ಯಾಪಾರದ ಒಪ್ಪಂದಗಳನ್ನು ಪರಿಷ್ಕರಿಸಿ ಲಾಭಗಳಿಸಿ ಸಾಗರೋತ್ತರ ವ್ಯವಹಾರದಲ್ಲಿ ಮುಂಚೂಣಿಯಲ್ಲಿ ನಿಂತ ಹೆಣ್ಣುಮಗಳು. ತನ್ನ ರಾಜ್ಯದಲ್ಲಿ ಬೆಳ್ಳಿಯ ನಾಣ್ಯವನ್ನು ಠಂಕಿಸಿ ವ್ಯವಹಾರವನ್ನು ಸರಳಗೊಳಿಸಿದವಳು. ತನ್ನ ವ್ಯಾಪ್ತಿಯ ಕಾನೂರು, ಮೇದಿನಿ, ಮಿರ್ಜಾನಗಳಲ್ಲಿ ಪಾಳುಬಿದ್ದಿದ್ದ ಹಳೆಯ ಕೋಟೆಗಳನ್ನು ಪುನರ್ನಿರ್ಮಿಸಿ ಅಲ್ಲಿ ಕಾಳುಮೆಣಸು ಮತ್ತು ಸಂಪತ್ತನ್ನು ಸಂಗ್ರಹಿಸಿದವಳು. ರಾಜ್ಯದುದ್ದಕ್ಕೂ ಕೋಟೆ, ಕೆರೆ ಬಾವಿ ರಸ್ತೆ ಕಾಲುವೆ ಸಂತೆಕಟ್ಟೆಗಳನ್ನು ನಿರ್ಮಿಸಿ ಅಥವಾ ದುರಸ್ತಿಗೊಳಿಸಿ ರಾಜ್ಯದ ಸಮೃದ್ಧಿಗೆ ಕಾರಣಳಾದವಳು. ನಾಡಿನ ಹಲವೆಡೆ ದೇಗುಲ, ಬಸಿದಿ, ಚೈತ್ಯಾಲಯಗಳನ್ನು ನಿರ್ಮಿಸಿದವಳು. ಚತುರ್ಮುಖ ಬಸಿದಿಯಂತಹ ಬಹು ಅಪರೂಪದ ನಿರ್ಮಾಣಕ್ಕೆ ಇಂಬುಗೊಟ್ಟವಳು. ನೂರಾರು ದೇಗುಲ ಮತ್ತು ಬಸಿದಿಗಳಿಗೆ ದಾನ ಧರ್ಮ ದತ್ತಿ ಉಂಬಳಿಗಳನ್ನಿತ್ತು ಸಮಾಜದಲ್ಲಿ ಧರ್ಮಕಾರ್ಯದ ಸುಸ್ಥಿರತೆಯನ್ನು ಕಾಪಾಡಿದವಳು.

೧೬೦೬ ರಲ್ಲಿ ಕೆಳದಿಯವರ ವಂಚನೆಗೆ ಕೈಸೆರೆ ಸಿಕ್ಕಿ ಸೆರೆಮನೆಯಲ್ಲೇ ಸಲ್ಲೇಖನ ಪುಣ್ಯವ್ರತ ಕೈಗೊಂಡು ಅಮರಳಾದ ಆಕೆಯನ್ನು ಪ್ರಸ್ತುತ ಅಮೆರಿಕೆಯ ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವ ಡಾ.ವೋಜೋವಸ್ಕಿಯಂತಹ ಪಾಶ್ಚಾತ್ಯ ವಿದ್ವಾಂಸರು ಆಕೆಯನ್ನು ಅವಳ ಸಮಕಾಲೀನಳಾಗಿದ್ದ ಇಂಗ್ಲೆಂಡಿನ ರಾಣಿ ಮೊದಲನೇ ಎಲಿಜಬೆತ್ತಳಿಗೆ ಹೋಲಿಸಿದ್ದರಲ್ಲಿ ಕಿಂಚಿತ್ತೂ ಆಶ್ಚರ್ಯವಿಲ್ಲ.ಆದರೆ ಇಟಲಿ ದೇಶದ ವಿಕ್ಷಿಪ್ತ ಮನಸ್ಸಿನ ಪ್ರವಾಸಿ ಡೆಲ್ಲವೆಲ್ಲೆಯ ಕ್ಷುಲ್ಲಕ ಆಪಾದನೆಯೊಂದರ ದೆಸೆಯಿಂದ ಅವಳಂತಹ ದಿಟ್ಟ, ಧೀಮಂತ ರಾಣಿಯನ್ನು ನಮ್ಮ ಚರಿತ್ರೆ ಕಡೆಗಣಿಸಿದ್ದು ಕರುನಾಡಿನ ದೌರ್ಭಾಗ್ಯ.

ಆ ಕಾರಣಕ್ಕಾಗಿಯೇ ಕರಿಮೆಣಸಿನ ರಾಣಿಯ ಈ ಅಕಳಂಕ ಚರಿತೆಯನ್ನು ನಿಮ್ಮ ಕೈಗಿಡುತ್ತಿದ್ದೇನೆ. ಓದಿ, ಶುಭ ಹಾರೈಸಿರೆಂದು ವಿನಯಪೂರ್ವಕವಾಗಿ ತಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ.

ನಮಸ್ಕಾರ.


  • ಡಾ.ಗಜಾನನ ಶರ್ಮಾ (ಕರಿಮೆಣಸಿನ ರಾಣಿಯ ‘ಚೆನ್ನಭೈರಾದೇವಿ’ ಕಾದಂಬರಿ ಲೇಖಕರು)

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW