‘ಒಂದೇ ಒಂದು ‘ನಾಗರಹಾವು’ ಸಿನಿಮಾ ನನಗೆ ನೂರು ಸಿನಿಮಾಗಳ ಯಶಸ್ಸು ತಂದುಕೊಟ್ಟಿತು ‘ ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ, ‘ನಾಗರಹಾವು’ ಸಿನಿಮಾದ ‘ರಾಮಾಚಾರಿ’ ವಿಷ್ಣುವರ್ಧನ್! ಇದು ನಿಜವಾ? ನಿಜ ಎನ್ನುವುದಕ್ಕೆ ಸಾಕ್ಷಿಯಾಗಿ ವಿಷ್ಣುವರ್ಧನ್ ಅವರ ಮಾತುಗಳೇ ಇವೆಯಲ್ಲಾ?..ಮುಂದೆ ಓದಿ.
‘ನಾನು ಅದೃಷ್ಟವಂತ. ಒಂದೇ ಒಂದು ಫಿಲಂ ನನ್ನ ಭವಿಷ್ಯವನ್ನೇ ಬದಲಿಸಿಬಿಟ್ಟಿತು! ಯಾಕಂದ್ರೆ ನಾನು ಮಹಾ ತುಂಟನಾಗಿದ್ದೆ. ಮಹಾ ಹಠವಾದಿ. ಜತೆಗೆ ಮಹಾ ಒರಟ. ಮಹಾ ಸ್ವಾಭಿಮಾನಿ. ಈ ಎಲ್ಲವನ್ನೂ ಪಕ್ಕಕ್ಕಿಟ್ಟು ಚಿತ್ರರಂಗದಲ್ಲಿ ಬೆಳಗಿದೆ ಅಂತ ಅಂದ್ಕೋಬೇಡಿ! ಇವೆಲ್ಲವನ್ನೂ ಜತೆಗಿಟ್ಟುಕೊಂಡೇ ಇಲ್ಲಿ ಉಸಿರಾಡಿದೆ, ಬದುಕಿದೆ, ಬೆಳೆದೆ…’ – ವಿಷ್ಣುವರ್ಧನ್ ಹೇಳಿರುವಂತೆ ಇವಿಷ್ಟೂ ಕ್ವಾಲಿಟಿಯನ್ನು ಜತೆಗಿಟ್ಟುಕೊಂಡು ಈ ಚಿತ್ರರಂಗದಲ್ಲಿ ಉಸಿರಾಡೋದೇ ಕಷ್ಟ, ಅಂಥಾದ್ದರಲ್ಲಿ ನಾಲ್ಕು ದಶಕಗಳ ಕಾಲ ಏಕರೀತಿಯ ಜನಪ್ರಿಯತೆಯನ್ನಿಟ್ಟುಕೊಂಡು ಸಂಭಾಳಿಸುವುದೆಂದರೆ ಅದು ಹುಡುಗಾಟದ ವಿಷಯವಲ್ಲ!

ಫೋಟೋ ಕೃಪೆ : kn.wikipedia
ಇರಲಿ, ಈಗ ನೇರವಾಗಿ ‘#ನಾಗರಹಾವು‘ ಸಿನಿಮಾದ ಕಡೆ ಬರೋದಿದ್ರೆ…ವಾಸ್ತವವಾಗಿ ವಿಷ್ಣುವರ್ಧನ್ ಅವರು ಸಿನಿಮಾ ನಟರಾಗುವ ಕನಸ್ಸನ್ನೂ ಕಂಡವರಲ್ಲ. ಎಲ್ಲವೂ ಅನಿರೀಕ್ಷಿತವಾಗಿಯೇ ನಡೆದು ಹೋಯಿತು. ನಿಜ ಹೇಳಬೇಕೆಂದರೆ ಡಿಗ್ರಿ ಮುಗಿಸಿದ ನಂತರ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗ ಬಯಸಿದ್ದರಂತೆ ವಿಷ್ಣು! ಹಾಗೊಂದು ಚಾನ್ಸ್ ತಗೊಂಡು ಮುಂಬೈಯ ಕಂಪೆನಿಯೊಂದಕ್ಕೆ ಸಂದರ್ಶನಕ್ಕೆ ಹೋದದ್ದೂ ಇದೆ. ಆಗ ಅಲ್ಲಿನ ಆಯ್ಕೆ ಸಮಿತಿಯ ಮಂದಿ ಏಕಕಂಠದಲ್ಲಿ : ‘ಇಂಥಾ ಪರ್ಸನಾಲಿಟಿ ಇಟ್ಕೊಂಡು ದಿನಬೆಳಗಾದ್ರೆ ಯಾಕೆ ಮಾತ್ರೆಗಳ ಬ್ಯಾಗ್ ಹೊತ್ಕೊಂಡು ಆಸ್ಪತ್ರೆ ಅಲೀಬೇಕು? ಸಿನಿಮಾ ನಟನಾಗಿ ಬಿಡು ಹೋಗು…’ – ಎಂದು ಹೇಳಿ ಬರಿಗೈಲಿ ಕಳಿಸಿದ್ದೂ ಇದೆಯಂತೆ!

ಇದು ವಿಷ್ಣುವರ್ಧನ್ ಬದುಕಿನ ಒಂದು ಮುಖವಾದರೆ, ಮತ್ತೊಂದು ಮುಖ ಇಲ್ಲಿದೆ : ನೀವು ನಂಬಲೇ ಬೇಕು, ಒಂದೇ ಒಂದು ದಿನ ಹೆಚ್ಚುಕಮ್ಮಿಯಾಗಿರುತ್ತಿದ್ದರೂ ಈ ‘ರಾಮಾಚಾರಿ’ ಡಕಾಯಿತರಾಗಿ ಬಿಡುವ ಅಪಾಯವಿತ್ತಂತೆ! ಆ ಘಟನೆ ನಡೆದದ್ದು ಹೀಗೆ : ವಿಷ್ಣುವರ್ಧನ್ ಅವರ ಒಬ್ಬ ಅಕ್ಕನ ಮನೆ ರಾಜಾಸ್ಥಾನದಲ್ಲಿತ್ತು. ಡಿಗ್ರಿ ಮುಗಿದ ಮೇಲೆ ಜಾಲಿಯಾಗಿ ಉತ್ತರಭಾರತ ಪ್ರವಾಸಕ್ಕೆ ಹೊರಟುಬಿಟ್ಟರು ವಿಷ್ಣುವರ್ಧನ್. ಅಕ್ಕನ ಮನೆಯಲ್ಲಿ ವಾಸ. ಆಗ ಸಂಪರ್ಕಕ್ಕೆ ಬಂದವರೇ ಈ ರಾಜಾಸ್ತಾನಿಗಳು. ಮಹಾ ಧೈರ್ಯಶಾಲಿಗಳಾದ ಇವರ ಜೀವನ ಶೈಲಿ ಕಂಡು ವಿಷ್ಣುವರ್ಧನ್ ಆಕರ್ಷಿತರಾದದ್ದು ಸಹಜವೇ ಆಗಿತ್ತು. ದೌರ್ಜನ್ಯಕ್ಕೊಳಗಾದ ಮಂದಿ ಸೇಡು ತೀರಿಸಿಕೊಳ್ಳುವ ನೆಪದಲ್ಲಿ ಡಕಾಯಿತರಾಗಿ ಮಾರ್ಪಟ್ಟರು. ದಿನನಿತ್ಯ ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸುದ್ದಿಗಳನ್ನು ಓದುತ್ತಾ ಓದುತ್ತಾ ತಾವೂ ಯಾಕೆ ಬಂದೂಕು ಹಿಡಿದು ಡಕಾಯಿತರಾಗಬಾರದು ಎಂದು ಯೋಚಿಸಿದ್ದೂ ಇದೆಯಂತೆ! ಅಷ್ಟೇ ಯಾಕೆ, ಡಕಾಯಿತರ ಥರ ಮಾತಾಡಲು, ವರ್ತಿಸಲು ಹೊರಟಿದ್ದೂ ಇದೆಯಂತೆ! ವಿಷ್ಣುವರ್ಧನ್ ಅವರ ವರ್ತನೆಯಲ್ಲಿ ಈ ಬದಲಾವಣೆಯನ್ನು ಗಮನಿಸಿದ ಅವರ ಅಕ್ಕ ಆದಷ್ಟು ಜಾಗ್ರತೆಯಾಗಿ ಇವರನ್ನು ಬೆಂಗಳೂರಿಗೆ ಸಾಗ ಹಾಕಿದರಂತೆ! ಈ ಘಟನೆಯನ್ನು ಆ ದಿನ ನಿರ್ಮಾಪಕ ವಿಜಯಕುಮಾರ್ ಆಫೀಸಿನಲ್ಲಿ ಮಾತನಾಡುತ್ತಾ ಸ್ವತಃ ವಿಷ್ಣುವರ್ಧನ್ ಅವರೇ ನನ್ನ ಬಳಿ ಹೇಳಿಕೊಂಡಿದ್ದರು.

ಫೋಟೋ ಕೃಪೆ :imdb
ಮೊದಲು ‘ವಂಶವೃಕ್ಷ’ ಸಿನಿಮಾದಲ್ಲಿ ಪುಟ್ಟ ಪಾತ್ರ, ನಂತರ ಬದುಕನ್ನೇ ಬದಲಿಸಿದ ‘ನಾಗರಹಾವು’ ಪಾತ್ರ. ಈ ಚಿತ್ರಕ್ಕೆ ವಿಷ್ಣುವರ್ಧನ್ ಅವರು ನಾಯಕರಾಗಿ ನಟಿಸಲು ಆಯ್ಕೆಯಾದ ಘಟನೆಯನ್ನು ಸಾದ್ಯಂತವಾಗಿ ಸ್ವತಃ ಅವರೇ ಹೇಳಿದ್ದು ಹೀಗೆ : ‘ಅಪ್ಪನ ಸಂಭ್ರಮಕ್ಕೆ ಪಾರವೇ ಇರಲಿಲ್ಲ, ಕಾರಣ : ಅವರ ಆತ್ಮೀಯ ಗೆಳೆಯರಾಗಿದ್ದ ಪುಟ್ಟಣ್ಣ ಕಣಗಾಲರನ್ನು ಭೇಟಿಯಾಗುವಂತೆ ಸ್ವತಃ ಪುಟ್ಟಣ್ಣನವರೇ ಹೇಳಿ ಕಳಿಸಿದ್ದರು. ಆದರೆ ನನಗೆ ಇದರಲ್ಲಿ ಆಸಕ್ತಿ ಇರಲಿಲ್ಲ. ಆದರೇನು ಮಾಡುವುದು? ಅಪ್ಪನ ಆರ್ಡರ್ ಮೀರುವುದುಂಟೇ? ಸಂಜೆ ನಾಲ್ಕಕ್ಕೆ ಸರಿಯಾಗಿ ಏರ್’ಲೈನ್ಸ್ ಹೋಟೆಲಿಗೆ ಹೋದೆ. ಅಲ್ಲಿ ಪುಟ್ಟಣ್ಣನವರನ್ನು ಭೇಟಿಯಾಗಿ ಕ್ಯಾಸುವಲ್ ಆಗಿ ನಮಸ್ಕಾರ ಮಾಡಿದೆ. ಅವರು ಗಾಂಧೀನಗರದಲ್ಲಿರುವ ವೀರಾಸ್ವಾಮಿಯವರ ಆಫೀಸಿಗೆ ಕಳಿಸಿಕೊಟ್ಟರು. ಏಕೆಂದರೆ, ಅವರೇ ಈ ಸಿನಿಮಾದ ನಿರ್ಮಾಪಕರು! ಮಾರನೇ ದಿನವೇ ಮೈಸೂರಿನ ದಾಸಪ್ರಕಾಶ್ ಹೋಟೆಲಿನಲ್ಲಿ ಸ್ಕ್ರೀನ್ ಟೆಸ್ಟ್. ಎಲ್ಲಾ ವ್ಯವಸ್ಥೆ ಮಾಡಿದ್ದರು. ಉಳಕೊಳ್ಳಲು ರೂಮು, ಹೊಟ್ಟೆತುಂಬಾ ಊಟ, ಜತೆಗೆ ಗೌರವ! ಸಂದರ್ಶನದಲ್ಲಿ ನಾನು ಅವರು ಕೇಳಿದ ಪ್ರಶ್ನೆಗಳಿಗೆ ನಿರ್ಭಯನಾಗಿ ಉತ್ತರಿಸಿದೆ. ನಂತರ ನನ್ನ ಫೇವರಿಟ್ ಆದ ಹಿಂದಿಯ ರಾಜಕುಮಾರ್ ಮತ್ತು ಶಮ್ಮಿ ಕಪೂರ್ ಅವರ ಸಿನಿಮಾ ಡಾಯಲಾಗ್ ಹೇಳಿದೆ. ನಿಜ ಹೇಳಬೇಕೆಂದರೆ ನಾನು ಅಪ್ಪನ ಒತ್ತಾಯಕ್ಕಾಗಿ ಬಂದಿದ್ದೇನೆ ಹೊರತಾಗಿ, ನನಗೇನೂ ಆಸಕ್ತಿ ಇರಲಿಲ್ಲ. ಎಲ್ಲವೂ ಮುಗಿದ ನಂತರ ಫಲಿತಾಂಶ ಅನೌನ್ಸ್ ಮಾಡಿದರು ಪುಟ್ಟಣ್ಣ. ನಾನು ‘ನಾಗರಹಾವು’ ಸಿನಿಮಾದ ನಾಯಕನಾಗಿ ಆಯ್ಕೆಯಾದದ್ದು ಹೀಗೆ…’ – ಇದು ಸಾಕ್ಷಾತ್ ವಿಷ್ಣುವರ್ಧನ್ ಅವರ ಮಾತು. ಸಂದರ್ಶನಕ್ಕೆ ಹೋಗಿದ್ದಾಗ ‘ಕುಮಾರ್’ ಆಗಿದ್ದರು. ಪುಟ್ಟಣ್ಣ ಅವರು ತ.ರಾ.ಸು. ಕಾದಂಬರಿಯನ್ನು ಓದಲು ಕೊಟ್ಟಾಗ ‘ರಾಮಾಚಾರಿ’ ಆದರು. ನಂತರ ಅದೇ ಪುಟ್ಟಣ್ಣ ಹೊಸ ನಾಮಕರಣ ಮಾಡಿ ‘ವಿಷ್ಣುವರ್ಧನ್’ ಎಂಬ ಹೆಸರಿಟ್ಟರು! ಇದು ವಿಷ್ಣು ಅವರ ಜರ್ನಿ…
ಎಲ್ಲವೂ ಸಲೀಸಾಗಿಯೇ ನಡೆಯಿತು. ಪುಟ್ಟಣ್ಣ ‘ರಾಮಾಚಾರಿ’ಯ ಪಾತ್ರವನ್ನು ತಿದ್ದಿ ತೀಡಿದರು. ‘ನಾಗರಹಾವು’ ತೆರೆಕಂಡಿತು. ಮಾರನೇ ದಿನವೇ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ‘ಇದು ನಾಗರಹಾವಲ್ಲ, ಕೇರೆ ಹಾವು’. ಬಾಂಬು ಸ್ಫೋಟಿಸಿದವರು ಬೇರೆ ಯಾರೂ ಅಲ್ಲ, ಈ ಕಾದಂಬರಿಯನ್ನು ಬರೆದ ತ.ರಾ.ಸು! ಪುಟ್ಟಣ್ಣನ ಪರಿಸ್ಥಿತಿ ಏನಾಗಬೇಡ ನೀವೇ ಹೇಳಿ? ವಿಷ್ಣುವರ್ಧನ್ ಅವರಂತೂ ಭೂಮಿಗಿಳಿದು ಹೋಗಿದ್ದರು! ಅಲ್ಲಿಂದ ಶುರುವಾದ ವಾದ-ವಿವಾದ ವಿಷ್ಣುವರ್ಧನ್ ಬದುಕು ಪೂರ್ತಿ ಕಾಡಿದ್ದು ಮಾತ್ರ ವಿಪರ್ಯಾಸ.

ಫೋಟೋ ಕೃಪೆ : ಪುಸ್ತಕ ಪ್ರೇಮಿ
ಒಂದು ಚಿತ್ರ ತೆರೆಕಂಡ ದಿನವೇ ಮೂಲ ಕಾದಂಬರಿಕಾರ ಹೀಗೆ ಅನಾಮತ್ತಾಗಿ ಕಾಲೆಳೆದರೆ ಗತಿಯೇನು? ಆದರೆ ಹಾಗಾಗಲಿಲ್ಲ. ಪುಟ್ಟಣ್ಣ ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ, ಮೌನವಾಗಿದ್ದು ಬಿಟ್ಟರು. ತ.ರಾ.ಸುಬ್ಬರಾಯರ ಈ ತೀಕ್ಷ್ಣ ಕಾಮೆಂಟಿಗೆ ಪ್ರೇಕ್ಷಕರೇ ಉತ್ತರಿಸುತ್ತಾರೆ ಎಂಬ ನಿಲುವು ಅವರದ್ದಾಗಿತ್ತು. ಹಾಗೆಯೇ ಆಯಿತು ಕೂಡಾ. ‘ನಾಗರಹಾವು’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು ಗೊತ್ತೇ? ‘ನಾವು ನೋಡಿದ್ದು ನಾಗರಹಾವು, ತ.ರಾ.ಸು. ಬರೆದದ್ದು ಕೇರೆಹಾವು ಆಗಿರಬಹುದು!’
ಪ್ರೇಕ್ಷಕರು ‘ನಾಗರಹಾವು’ ಸಿನಿಮಾವನ್ನು ತಲೆ ಮೇಲಿಟ್ಟು ಮೆರವಣಿಗೆ ಹೊರಟರು! ಆ ದಿನಗಳಲ್ಲಿ ಈ ಫಿಲಂ ಒಂದು ಇತಿಹಾಸವನ್ನೇ ಸೃಷ್ಟಿಸಿ ಬಿಟ್ಟಿತು. ಅಂಬರೀಶ್ ಮತ್ತು ಧೀರೇಂದ್ರಗೊಪಾಲ್ ಚಿತ್ರರಂಗ ಪ್ರವೇಶಿಸಿದ್ದು, ಈ ಸಿನಿಮಾದ ಮೂಲಕವೇ. 1972-73ರ ಸಾಲಿನ ರಾಜ್ಯಪ್ರಶಸ್ತಿಯೂ ಈ ಚಿತ್ರದ ಪಾಲಾಯಿತು. ‘ಅತ್ಯುತ್ತಮ ನಟ’ರಾಗಿ ವಿಷ್ಣುವರ್ಧನ್, ‘ಅತ್ಯುತ್ತಮ ನಟಿ’ಯಾಗಿ ಆರತಿ, ಅತ್ಯುತ್ತಮ ಪೋಷಕನಾಟರಾಗಿ ‘ಚಾಮಯ್ಯಮೇಸ್ಟ್ರು’ ಅಶ್ವಥ್, ಅತ್ಯುತ್ತಮ ಪೋಷಕನಟಿಯಾಗಿ ಶುಭಾ, ಅತ್ಯುತ್ತಮ ಚಿತ್ರಕಥೆಗಾರರಾಗಿ ಪುಟ್ಟಣ್ಣ ಕಣಗಾಲ್, ಅತ್ಯುತ್ತಮ ಸಂಭಾಷಣೆಗಾಗಿ ಚಿ|ಉದಯಶಂಕರ್ ರಾಜ್ಯಪ್ರಶಸ್ತಿ ಪಡೆದು ಧನ್ಯರಾದರು! ವಿಶೇಷವೆಂದರೆ ಯಾರು ‘ನಾಗರಹಾವು’ ಚಿತ್ರವನ್ನು ಕೇರೆಹಾವು ಅಂತ ಛೇಡಿಸಿದ್ದರೋ ಅವರಿಗೆ (ತ.ರಾ.ಸು.) ಅತ್ಯುತ್ತಮ ಕಥಾ ಲೇಖಕ ಪ್ರಶಸ್ತಿ ನೀಡಿ ಗೌರವಿಸಲಾಯಿತು! ಮತ್ತೊಂದು ಅಚ್ಚರಿಯ ವಿಷಯವೆಂದರೆ, ಅದೇ ತ.ರಾ.ಸುಬ್ಬರಾಯರು ಈ ಸಿನಿಮಾದ ಅದ್ದೂರಿ ಶತದಿನ ಸಮಾರಂಭದಲ್ಲಿ ವೇದಿಕೆ ಮೇಲೆ ಹಾಜರಿದ್ದು ಸ್ಮರಣಿಕೆ, ಹಾರ, ತುರಾಯಿ ಸ್ವೀಕರಿಸಿ ಪುನೀತರಾದರು!
ಒಟ್ಟಿನಲ್ಲಿ ‘ನಾಗರಹಾವು’ ಸಿನಿಮಾ ಬರಿಯ ಒಂದು ಸಿನಿಮಾವಾಗಿ ಮಾತ್ರ ಉಳಿಯಲಿಲ್ಲ. ಇದು ಹಲವು ಮನಸ್ಸುಗಳ ವಿಕೃತಿಯನ್ನು ತೆರೆದಿಟ್ಟಿದ್ದಲ್ಲದೇ, ಮುಂದಿನ ಸುವರ್ಣ ಯುಗಕ್ಕೆ ನಾಂದಿ ಹಾಡಿತು…
- ಗಣೇಶ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)
