ಸ್ವಾರ್ಥ ಮರೆತು ಸ್ಫೂರ್ತಿಯಾದ ಮಹಾನ್ ಕ್ರೀಡಾಪಟುಗಳು..



ಸೋಲು- ಗೆಲುವುಗಳು ಕ್ರೀಡೆಯ ನಾಣ್ಯದ ಎರಡು ನಿಶ್ಚಿತ ಮುಖಗಳು. ಸೋತಾಗ ಕುಗ್ಗುವುದು, ಗೆದ್ದಾಗ ಹಿಗ್ಗುವುದು, ತೆಗಳುವುದು ಹೊಗಳುವುದು ಇದ್ದೇ ಇರುತ್ತದೆ. ಇವುಗಳ ಮಧ್ಯೆ ತಮ್ಮ ಭವಿಷ್ಯ, ಸ್ವಾರ್ಥ, ಸ್ಪರ್ಧೆಗಳನ್ನು ಬದಿಗೊತ್ತಿ ಸೋಲು ಗೆಲುವುಗಳನ್ನು ಸಂಸ್ಕಾರ, ಸಜ್ಜನಿಕೆ, ಪ್ರಾಮಾಣಿಕತೆಗಳ ಪ್ರಾಂಗಣದಲ್ಲಿ ತಂದು ಸಾಕ್ಷಾತ್ಕರಿಸುವ ಅಪರೂಪದಲ್ಲೇ ಅಪರೂಪದ ಸುಮನಸ್ಸುಗಳೂ ಕುರಿತಾದ  ಲೇಖಕರಾದ ಮುಷ್ತಾಕ್ ಹೆನ್ನಾಬೈಲ್ ಅವರು ಬರೆದ ಲೇಖನ, ಮುಂದೆ ಓದಿ…

ಅವರು ಕರ್ನಾಟಕದ ಭದ್ರಾವತಿಯ ಗುಂಡಪ್ಪ ವಿಶ್ವನಾಥ್. “ವಿಶಿ” ಎಂಬ ಚುಟುಕು ನಾಮದಿಂದ ಕರೆಯಲ್ಪಡುತ್ತಿದ್ದ ಈ ಜಿ.ಆರ್ ವಿಶ್ವನಾಥ್ ಹೆಸರು ಕ್ರಿಕೆಟ್ ಲೋಕದಲ್ಲಿ ಇಂದಿಗೂ ಪರಿಚಿತವಾದುದು. ಇವರಷ್ಟು ಕಲಾತ್ಮಕ ಮತ್ತು ಸೊಗಸಿನ ಶೈಲಿಯ ಬ್ಯಾಟ್ಸಮನ್ ಜಾಗತಿಕ ಕ್ರಿಕೆಟಿನಲ್ಲಿ ಮತ್ತೊಬ್ಬರಿಲ್ಲ. ಇವರ ನಂತರದ ಕಾಲದಲ್ಲಿ ಬಂದ ಹೈದರಾಬಾದಿನ ಮೊಹಮ್ಮದ್ ಅಜರುದ್ದೀನ್, ವಿವಿಎಸ್ ಲಕ್ಷ್ಮಣ್ ಇವರ ಶೈಲಿಯನ್ನೇ ಅನುಕರಿಸಿ ಹೆಸರು ಗಳಿಸಿದವರು. 5.3 ಅಡಿಯಷ್ಟೇ ಎತ್ತರದ ವಿಶ್ವದ ಅತೀ ಕುಳ್ಳ ಕ್ರಿಕೆಟಿಗ ವಿಶ್ವನಾಥರ ಸ್ಕ್ವೇರ್ ಕಟ್ ಮತ್ತು ಲೆಗ್ ಗ್ಲಾನ್ಸ್ ಗಳ ಸೊಬಗು ನೋಡಿದವರಿಗೆ ಮಾತ್ರ ಗೊತ್ತು. ವಿಶ್ವನಾಥ್ ಕ್ರಿಕೆಟನ್ನು ಅಪ್ಪಟ ಕಾವ್ಯದಂತೆ ಆಡಿದವರು.

ಜಿ ಆರ್ ವಿಶ್ವನಾಥ್

ಶಿಸ್ತಿನ ಟೆಸ್ಟ್ ಕ್ರಿಕೆಟ್ ಅಭಿಮಾನಿಗಳಿರುವ ಇಂಗ್ಲೆಂಡ್‌ನಲ್ಲಿ ವಿಶ್ವನಾಥರ ಸಿಂಗಲ್ ಸ್ಕೋರಿಗೂ ಕೂಡ ಇಡೀ ಸ್ಟೇಡಿಯಂನಲ್ಲಿ ಚಪ್ಪಾಳೆಯ ಮೂಲಕ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಗವಾಸ್ಕರ್ ಮ್ಯಾರಥಾನ್ ಇನ್ನಿಂಗ್ಸ್ ಕಟ್ಟುತ್ತಿದ್ದರಾದರೂ ವಿಶ್ವನಾಥರಷ್ಟು ಸೊಗಸಿನ ಶೈಲಿ ಅವರಲ್ಲಿರಲಿಲ್ಲ. ಈ ಭಾವ- ಭಾಮೈದರು ಬಹುಕಾಲ ಭಾರತೀಯ ಕ್ರಿಕೆಟಿನ ಆಧಾರಸ್ತಂಭವಾಗಿದ್ದರು. 1980ರಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಸ್ಥಾಪನೆಯ 50ನೇ ವರ್ಷದ ಸವಿನೆನಪಿಗಾಗಿ ಜ್ಯುಬಿಲಿ ಟೆಸ್ಟನ್ನು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿತು. ಐತಿಹಾಸಿಕವಾದ ಏಕೈಕ ಟೆಸ್ಟ್ ಆದ್ದರಿಂದ ಸ್ಟೆಡಿಯಂ ಸಂಪೂರ್ಣ ಭರ್ತಿಯಾಗಿತ್ತು. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡು ಪ್ರಥಮ ಇನ್ನಿಂಗ್ಸ್‌ನಲ್ಲಿ 242 ರನ್ನಿಗೆ ಆಲೌಟ್ ಆಯಿತು. ಉತ್ತರವಾಗಿ ಇಂಗ್ಲೆಂಡ್ 58 ರನ್ ಆಗುವಷ್ಟರಲ್ಲಿ ಪ್ರಮುಖ 5 ವಿಕೆಟ್‍ಗಳನ್ನು ಉರುಳಿಸಿಕೊಂಡಿತು. ಸ್ಕೋರ್ 84 ಆಗುವಾಗ ಕಪಿಲ್ ದೇವ್ ಎಸೆದ ಎಸೆತವೊಂದು ಇಂಗ್ಲೆಂಡ್ ವಿಕೆಟ್ ಕೀಪರ್ ಬಾಬ್ ಟೇಲರ್ ಬ್ಯಾಟ್ ಸವರಿಕೊಂಡು ಹೋಯಿತೆಂದು ಭಾವಿಸಿ ಎಲ್ಲ ಭಾರತೀಯ ಆಟಗಾರರು ಬಲವಾದ ಮನವಿ ಸಲ್ಲಿಸಿದರು. ಮನವಿಯನ್ನು ಪುರಸ್ಕರಿಸಿದ ಕನ್ನಡಿಗ ಅಂಪಾಯರ್ ಹನುಮಂತ ರಾವ್ ಬೆರಳೆತ್ತಿದರು. ಆದರೆ ಟೇಲರ್ ಅಂಪಾಯರ್ ತೀರ್ಪಿಗೆ ತಲೆಯಲ್ಲಾಡಿಸುವುದರ ಮೂಲಕ ಅಸಮಾಧಾನ ಹೊರಹಾಕಿದರು. ಇದನ್ನು ಗಮನಿಸಿದ ಭಾರತ ತಂಡದ ನಾಯಕ ಜಿ ಆರ್ ವಿಶ್ವನಾಥ್ ಪೆವಿಲಿಯನ್ ನತ್ತ ಹೋಗುತ್ತಿದ್ದ ಟೇಲರ್ ರನ್ನು ನಿಲ್ಲುವಂತೆ ಸೂಚಿಸಿ, ನೇರ ಕೀಪರ್ ಸಯ್ಯದ್ ಕಿಮಾರ್ನಿಯ ಅಭಿಪ್ರಾಯ ಕೇಳಿದರು. ಕಿರ್ಮಾನಿ, ತನಗೆ ಬಾಲ್ ಬ್ಯಾಟಿಗೆ ತಾಗಿದ ಶಬ್ದ ಕೇಳಿಸಲಿಲ್ಲ ಎಂದರು. ಬ್ಯಾಟ್ಸ್‌ಮನ್ನಿನ ಹತ್ತಿರ ಕ್ಷೇತ್ರರಕ್ಷಣೆ ಮಾಡುತ್ತಿದ್ದ ವೆಂಗಸರ್ಕಾರ್ ರನ್ನು ಕೇಳಿದಾಗಲೂ ಇದೇ ಉತ್ತರ ಬಂತು. ಗವಾಸ್ಕರ್ ಹತ್ತಿರ ಕೇಳಲಿಲ್ಲ. ಯಾಕೆಂದರೆ ಈ ವಿಚಾರದಲ್ಲಿ ಗವಾಸ್ಕರ್ ಕೊಡಬಹುದಾದ ಉತ್ತರ ವಿಶಿಗೆ ಗೊತ್ತಿತ್ತು. ಸ್ಟೇಡಿಯಂ ಭರ್ತಿಯಾಗಿದ್ದರಿಂದ ಪ್ರೇಕ್ಷಕರ ಗದ್ದಲದಲ್ಲಿ ಸಣ್ಣ ಶಬ್ದ ಕೇಳಲು ಸಾಧ್ಯವೇ ಇರಲಿಲ್ಲ. ಇದನ್ನು ಮನಗಂಡ ವಿಶ್ವನಾಥ್ ಸೀದಾ ಟೇಲರ್ ಹತ್ತಿರ ಹೋಗಿ ಆಟ ಮುಂದುವರಿಸಲು ಹೇಳಿದರು. ನಂತರ ಇಯಾನ್ ಬಾಥಮ್ ಮತ್ತು ಬಾಬ್ ಟೇಲರ್ ಇಂಗ್ಲೆಂಡ್ ಸ್ಕೊರನ್ನು 292 ರನ್‌ಗಳವರೆಗೆ ವಿಸ್ತರಿಸಿದರು.



ಒಂದೊಮ್ಮೆ ಟೇಲರ್ ಗೆ ಮತ್ತೊಮ್ಮೆ ಅವಕಾಶ ಕೊಡದೇ ಇದ್ದರೆ, ಇಂಗ್ಲೆಂಡ್ 100 ಚಿಲ್ಲರೆ ರನ್ನಿಗೆ ಖಂಡಿತ ಆಲೌಟ್ ಆಗುತಿತ್ತು. ಆದರೆ ಟೇಲರ್ ಬಾಥಮ್ ಗೆ ದೊಡ್ಡ ಮಟ್ಟದಲ್ಲಿ ಸಹಕಾರ ನೀಡಿ ಕೊನೆಗೆ ಈ ಟೆಸ್ಟ್ ಇಂಗ್ಲೆಂಡ್ ಗೆಲ್ಲುವಂತಾಯಿತು. ಇಂಗ್ಲೆಂಡಿನ ಟೆಸ್ಟ್ ಗೆಲುವಿನಲ್ಲಿ ಬಾಬ್ ಟೇಲರ್ ಇನ್ನಿಂಗ್ಸ್ ಮತ್ತು ಬಾಥಮ್ ರೊಂದಿಗಿನ ಅವರ ಜೊತೆಯಾಟವೇ ನಿರ್ಣಾಯಕವಾಯಿತು. ಟೆಸ್ಟ್ ಸೋತರೂ ವಿಶ್ವನಾಥರ ಕ್ರೀಡಾಸ್ಪೂರ್ತಿ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. ಪ್ರಮುಖ ಇಂಗ್ಲೀಷ್ ಪತ್ರಿಕೆಯೊಂದು” ಭಾರತ ಪಂದ್ಯ ಸೋತಿತು. ಇಂಗ್ಲೆಂಡ್ ಪಂದ್ಯ ಗೆದ್ದಿತು. ಆದರೆ ವಿಶ್ವನಾಥ್ ವಿಶ್ವ ಗೆದ್ದರು. ಮುಂದಿನ ದಿನಗಳಲ್ಲಿ ಭಾರತ ಇಂಗ್ಲೆಂಡನ್ನು ಸೋಲಿಸಬಹುದು. ಇಂಗ್ಲೆಂಡ್ ಭಾರತವನ್ನು ಸೋಲಿಸಬಹುದು. ಆದರೆ ವಿಶ್ವನಾಥರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಭಾರತದ ಕ್ರಿಕೆಟ್ ಮಂಡಳಿ ಸ್ಥಾಪನೆಯ 50ನೇ ವರ್ಷ ವಿಶ್ವನಾಥರಿಂದಾಗಿ ಸದಾ ಸ್ಮರಣೀಯವಾಯಿತು” ಎಂದು ಬರೆಯಿತು. ಇತರರನ್ನು ಹಿಂದಿಕ್ಕಿ ಮನ್ನುಗ್ಗುವ ಧಾವಂತ ಮನಸ್ಥಿತಿಯನ್ನು ಸೃಷ್ಟಿಸಿ ಸ್ಪರ್ಧೆಯನ್ನು ತುರುಸಾಗಿಸುವುದು ಕ್ರೀಡೆಯ ಪ್ರಧಾನ ಲಕ್ಷಣ. ಕ್ರೀಡಾಪಟುಗಳೂ ಕೂಡ ಶತಾಯಗತಾಯ ಯಾವುದೇ ಬೆಲೆ ತೆತ್ತಾದರೂ ಜಯದ ಮಾರ್ಗದ ಬಗ್ಗೆ ತಲೆಕೆಡಿಸಿಕೊಳ್ಳದೆ, ಬಹುತೇಕ ಸರಿಯ ಸನಿಹದ ತಪ್ಪುಗಳು, ಚತುರತೆಯ ಚಕ್ರದೊಳಗಿನ ಅಚಾತುರ್ಯಗಳು, ಕೆಲವೊಂದು ಸಂಭಾವ್ಯ ಅಸಂಬದ್ಧಗಳನ್ನು ಕ್ರೀಡೆಯ ಸಹಜ ಭಾಗ ಎಂದು ತಿಳಿದು ನಗಣ್ಯವಾಗಿಸುವುದು ಸಾಮಾನ್ಯ. ಆದರೆ ವಿಶ್ವನಾಥರಂತಹ ಕ್ರೀಡಾ ಮನೋಭಾವದ ಬಗಿಗಿನ ಮಹಾನ್ ಬದ್ಧತೆಯುಳ್ಳ ಆಟಗಾರರು ಅಪರೂಪದಲ್ಲೇ ಅಪರೂಪ. ತಪ್ಪುಗಳಿಗೆ ತೇಪೆ ಹಾಕದೇ, ತಪ್ಪನ್ನು ತಪ್ಪೇ ಎಂದು ಬದುಕಿನುದ್ದಕ್ಕೂ ಭಾವಿಸಿ ಕ್ರೀಡಾಕ್ಷೇತ್ರದಲ್ಲಿ ಬಾಳಿ ಬೆರಗು ಮೂಡಿಸಿದವರು.

ಫೋಟೋ ಕೃಪೆ : newzworldindia

1989ರಲ್ಲಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಮಾಡಿತು. ಭಾರತ ಪಾಕಿಸ್ತಾನ ಪಂದ್ಯಗಳೆಂದರೆ ಒಂದು ರೀತಿಯ ಪರೋಕ್ಷ ಯುದ್ಧ ಸ್ವರೂಪದಂತವುಗಳು.3 ತಿಂಗಳ ಆ ಸುದೀರ್ಘ ಪಾಕ್ ಪ್ರವಾಸದಲ್ಲಿ ಆಡಿದ ನಾಲ್ಕೂ ಟೆಸ್ಟಗಳೂ ನೀರಸ ಡ್ರಾಗೊಂಡವು. ಸೋತರೆ ಉಳಿಗಾಲವಿಲ್ಲ ಎಂದು ಬಗೆದು ಎರಡೂ ತಂಡಗಳು ಒಂದೊಂದು ಇನ್ನಿಂಗ್ಸಿಗೆ ಎರಡೆರಡು ದಿನ ತೆಗೆದುಕೊಂಡು ಆಡಿದವು. ಜಾಗತಿಕ ಕ್ರಿಕೆಟಿನ ದಂತಕಥೆ ಸಚಿನ್ ತೆಂಡುಲ್ಕರ್ ಕ್ರಿಕೆಟಿಗೆ ಪಾದಾರ್ಪಣೆಗೈದ, ಸಂಜಯ್ ಮಾಂಜ್ರೇಕರ್ ಅಮೋಘ ಬ್ಯಾಟಿಂಗ್ ವೈಭವಕ್ಕೆ ಸಾಕ್ಷಿಯಾದ ಮತ್ತು ಹಲವಾರು ದಾಖಲೆ-ದಾಂಧಲೆಗಳಿಂದ ಖ್ಯಾತಿ-ಕುಖ್ಯಾತಿಗಳಿಸಿದ ಐತಿಹಾಸಿಕ ಸರಣಿಯದು. ಸುದೀರ್ಘ ಟೆಸ್ಟ್ ಸರಣಿ ಫಲಿತಾಂಶರಹಿತವಾಗಿ ನಿರಾಸೆ ಮೂಡಿಸಿದ್ದು ಮಾತ್ರವಲ್ಲ, 4ರಲ್ಲಿ 2 ಏಕದಿನ ಪಂದ್ಯಗಳೂ ರದ್ದುಗೊಂಡು, ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಭಾರೀ ನಿರಾಸೆಗೊಂಡಿದ್ದರು. ಪಾಕ್ ಕ್ರಿಕೆಟ್ ಅಭಿಮಾನಿಗಳು ಜಯಕ್ಕಾಗಿ ಕರಾಚಿ, ಲಾಹೋರ್, ಸಿಯಾಲ್ ಕೋಟ್, ಗುಜ್ರನ್ ವಾಲಾ, ಪೇಶಾವರ್ ಸ್ಟೇಡಿಯಂಗಳಲ್ಲಿ ತಿಂಗಳುಗಟ್ಟಲೆ ಕಾದರೂ ಜಯದ ಸವಿ ಸವಿಯಲಾಗಲಿಲ್ಲ. ಗುಜ್ರನ್ ವಾಲಾದ ಮೂರನೇ ಏಕದಿನ ಪಂದ್ಯ ಪಾಕ್ 7 ರನ್ ಅಂತರದಿಂದ ಗೆದ್ದಿತ್ತು. ಆ ಸರಣಿಯ 4ನೇ ಮತ್ತು ಕೊನೆಯ ಏಕದಿನ ಪಂದ್ಯ ಲಾಹೋರಿನ ಗದ್ಧಾಫಿ ಸ್ಟೇಡಿಯಂನಲ್ಲಿ ನಡೆಯುತಿತ್ತು. ಮೊದಲು ಬ್ಯಾಟ್ ಮಾಡಿದ ಪಾಕ್ 150 ರನ್ನುಗಳಿಗೆ ಆಲೌಟ್ ಆಯಿತು. ಪಾಕ್ ಸೋಲುವ ಸಂಭಾವ್ಯತೆ ಅರಿತು ಪ್ರೇಕ್ಷಕರು ತುಸು ಹಿಂಸಾತ್ಮಕವಾಗಿ ವರ್ತಿಸುತ್ತಿದ್ದರು. ಸಣ್ಣ ಸ್ಕೋರ್ ನ್ನು ಹೊಡೆದು ಏಕದಿನ ಸರಣಿಯನ್ನು ಸಮಬಲಗೊಳಿಸಲು ಭಾರತ ಆಡಲಿಳಿಯಿತು. ಯಾವುದೇ ಬೆಲೆತೆತ್ತಾದರೂ ಭಾರತದ ವಿಕೆಟ್ ಪಡೆಯಲು ಪಾಕ್ ಆಟಗಾರರು ಮೈದಾನದಲ್ಲಿ ನಾನಾ ರೀತಿಯ ತಂತ್ರ ಅನುಸರಿಸುತ್ತಿದ್ದರು. ಭಾರತ ರಕ್ಷಣಾತ್ಮಕವಾಗಿ ಪೂರ್ತಿ ಓವರ್ ಗಳನ್ನು ಆಡಿದರೂ ಜಯ ಸುಲಭದಲ್ಲಿ ಕೈಗೆಟುಕುತಿತ್ತು. ಆದರೆ 30 ಚಿಲ್ಲರೆ ರನ್ ಆಗುವಷ್ಟರಲ್ಲಿ ರಮಣ್ ಲಾಂಬಾ, ನವಜ್ಯೋತ್ ಸಿಂಗ್ ಸಿಧು, ಜೀವಮಾನದ ಪ್ರಚಂಡ ಫಾರ್ಮ್ ನಲ್ಲಿದ್ದ ಸಂಜಯ್ ಮಾಂಜ್ರೇಕರ್ ಔಟಾಗಿ ನಿರಾಶೆ ಮೂಡಿಸಿದರು.

ಫೋಟೋ ಕೃಪೆ : cricketaddictor (ಸಂಜಯ್ ಮಾಂಜ್ರೇಕರ್)

ಒಂದು ಬದಿಯಲ್ಲಿ ತಮ್ಮ ಎಂದಿನ ಹೊಡಿಬಡಿಯ ಶೈಲಿಗೆ ವಿರುದ್ಧವಾಗಿ ಬಹಳ ಎಚ್ಚರಿಕೆಯಿಂದ ಆಡುತ್ತಿದ್ದ ಕೃಷ್ಣಾಮಾಚಾರಿ ಶ್ರೀಕಾಂತ್, ಪಾಕ್ ಮತ್ತು ಜಯದ ನಡುವೆ ದೊಡ್ಡ ತಡೆಯಾಗಿ ಪಾಕಿಗಳಿಗೆ ಗೋಚರವಾಗುತ್ತಿದ್ದರು. ಪಾಕ್ ಬೌಲಿಂಗಿನ 18ನೇ ಓವರ್ ಎಸೆಯಲು ಬಂದ ವಕಾರ್ ಯೂನಿಸ್ ಎಸೆದ ಇನ್ ಸ್ವಿಂಗ್ ಎಸೆತವೊಂದು ಆಫ್ ಮತ್ತು ಮಿಡ್ಲ್ ಸ್ಟಂಪ್ ಗಳ ಮಧ್ಯಕ್ಕೆ ನೇರವಾಗಿ ನಾಯಕ ಶ್ರೀಕಾಂತರ ಪ್ಯಾಡಿಗೆ ಬಂದು ಬಡಿಯಿತು. ಪಾಕ್ ಆಟಗಾರರು ಮಾತ್ರವಲ್ಲ, ಪೆವಿಲಿಯನ್ ನಲ್ಲಿ ಕೂತಿದ್ದ ಆಟಗಾರರು ಮತ್ತು ಸಮಸ್ತ ಲಾಹೋರ್ ಸ್ಟೇಡಿಯಂನಲ್ಲಿದ್ದವರೆಲ್ಲ ಇಡೀ ಲಾಹೋರ್ ನಗರವೇ ನಡುಗುವಂತೆ ಒಕ್ಕೊರಲಿನಿಂದ ಬಲವಾದ ಮನವಿ ಸಲ್ಲಿಸಿದರು. ಅಂಪಾಯರ್ ಶುಕೂರ್ ರಾಣಾ ಕೈಬೆರಳು ಎತ್ತಿಯೇ ಬಿಟ್ಟರು. ಅಂಪಾಯರ್ ಕೈಬೆರಳು ಎತ್ತಿದೇ ತಡ ಇಡೀ ಸ್ಟೇಡಿಯಂ ಸಾಗರವೇ ಉಕ್ಕಿ ಭೋರ್ಗರೆಂದಂತಹ ರೀತಿಯಲ್ಲಿ ಸಂಭ್ರಮಾಚರಣೆಗಿಳಿಯಿತು. ಪಾಕ್ ಆಟಗಾರರು ವಕಾರ್ ಯೂನಿಸ್ ರನ್ನು ತಬ್ಬಿಕೊಂಡು ಅಪ್ಪಿ ಮುತ್ತಿಕ್ಕಿ ಇನಿಲ್ಲದಂತೆ ಸಂಭ್ರಮಿಸಿದರು. ಟಿವಿ- ರೇಡಿಯೋ ಕಮೆಂಟ್ರಿ ಹೇಳುವವರೂ ಬಾಕ್ಸ್ ನ ಒಳಗಡೆ ಕುಣಿದು ಕುಪ್ಪಳಿಸತೊಡಗಿದರು. ಬಾಲ್ ಪ್ಯಾಡಿಗೆ ತಾಗುವ ಮುಂಚೆ ಬ್ಯಾಟಿಗೆ ತಾಗಿತ್ತು ಎಂದು ಶ್ರೀಕಾಂತ್ ತೀರ್ಪು ನೀಡುವ ಮುಂಚೆಯೇ ಬ್ಯಾಟೆತ್ತಿ ತೋರಿಸಿದರೂ, ಅಂಪಾಯರ್ ರಾಣಾ ನಂಬಲಿಲ್ಲ. ಆಘಾತಗೊಂಡು ಅರೆಕ್ಷಣ ಪಿಚ್ ಮಧ್ಯೆಯೇ ಗರಬಡಿದವರಂತೆ ನಿಂತು, ನಂತರ ಪೆವಿಲಿಯನ್ ಕಡೆ ಇನ್ನೇನು ಕೆಲವೇ ಹೆಜ್ಜೆಯಿಟ್ಟಿದ್ದಷ್ಟೆ, ಸ್ಕ್ವೇರ್ ಲೆಗ್ ಕಡೆಯಿಂದ ಪಾಕಿಸ್ತಾನದ ಈಗಿನ ಪ್ರಧಾನಿ ಮತ್ತು ಆಗಿನ ತಂಡದ ನಾಯಕ ಇಮ್ರಾನ್ ಖಾನ್ ಎದುರಾದರು. ತಕ್ಷಣ ಇಮ್ರಾನ್ ಶ್ರೀಕಾಂತ್ ಗೆ ನಿಲ್ಲುವಂತೆ ಸೂಚಿಸಿದರು. ತಿಂಗಳ ಹಿಂದೆ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಕರಾಚಿಯಲ್ಲಿ ನಡೆದಾಗ ವಸೀಮ್ ಅಕ್ರಮ್ ಎಸೆತದಲ್ಲಿ ತಪ್ಪಾದ ಎಲ್ ಬಿ ಡಬ್ಲ್ಯೂ ನಿರ್ಣಯಕ್ಕೆ ಶ್ರೀಕಾಂತ್ ಬಲಿಯಾಗಿದ್ದರು. ನಿಮಗೆ ಗೊತ್ತಿರಲಿ, ಭಾರತ ಪಾಕಿಸ್ತಾನದ ನಡುವಿನ ಪಂದ್ಯಗಳು ಸಮರಭೂಮಿಯ ಸಂಘರ್ಷವನ್ನು ನೆನಪಿಸಿದರೂ, ಉಭಯ ದೇಶಗಳ ನಡುವಿನ ಆಟಗಾರರ ನಡುವಿನ ಬಾಂಧವ್ಯ ಮಾತ್ರ ಬೇರಾವ ದೇಶಗಳ ನಡುವೆ ಕಾಣಸಿಗಲಾರದು. ಅಂದಿಗೂ ಇಂದಿಗೂ ಭಾರತ- ಪಾಕ್ ನ ಹೆಚ್ಚಿನ ಆಟಗಾರರು ಪರಸ್ಪರ ಭಾರೀ ಸ್ನೇಹಿತರು.

ಫೋಟೋ ಕೃಪೆ : youtube  (ಇಮ್ರಾನ್ ಖಾನ್)

ಉರ್ದು ಮತ್ತು ಹಿಂದಿ ಭಾಷೆಯ ಸಾಮ್ಯತೆಯ ಕಾರಣದಿಂದ ಇವರುಗಳು ಒಂದೇ ಭಾಷೆಯವರಂತೆ ಬೆರೆಯುತ್ತಾರೆ. ಟಿವಿಗಳ ಸಂಗೀತ, ಹಾಸ್ಯ ಮತ್ತು ಚರ್ಚಾಕೂಟಗಳಲ್ಲಿ ಭಾರತ ಪಾಕಿಸ್ತಾನದ ಆಟಗಾರರು ಜೊತೆಯಾಗಿ ಕಾಣಿಸಿಕೊಂಡಷ್ಟು ಬೇರಾವ ದೇಶಗಳ ಆಟಗಾರರು ಕಾಣಿಸಿಕೊಳ್ಳುವುದಿಲ್ಲ. ಪರಸ್ಪರ ದೇಶಗಳ ಪ್ರವಾಸಗಳ ಸಂದರ್ಭದಲ್ಲಿ ಆಟಗಾರರು ಒಂದಿಡೀ ತಂಡವನ್ನು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ವಿಶೇಷ ಆತಿಥ್ಯ ನೀಡುತ್ತಾರೆ. ಶ್ರೀಕಾಂತ್ ಮತ್ತು ಇಮ್ರಾನ್ ಇಬ್ಬರೂ ಮೈದಾನದ ಹೊರಗೆ ಅತೀ ಆತ್ಮೀಯ ಸ್ನೇಹಿತರಾಗಿದ್ದರು. ಕರಾಚಿಯಲ್ಲಿ ಔಟಾದ ದಿನದ ಅಂದಿನ ಆಟ ಮುಗಿದು ಇಮ್ರಾನ್ ಖಾನ್ ಭಾರತೀಯ ಡ್ರೆಸಿಂಗ್ ರೂಮ್ ಎದುರು ಬಂದಾಗ, ಶ್ರೀಕಾಂತ್ ತಪ್ಪು ನಿರ್ಣಯಕ್ಕೆ ಬಲಿಯಾದ ಬಗ್ಗೆ ಇಮ್ರಾನ್ ರಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಪಂದ್ಯದ ಫಲಿತಾಂಶ ಏನೇ ಆಗಲಿ, ಈ ಬಾರಿಯೂ ಗೆಳೆಯ ಶ್ರೀಕಾಂತ್ ತಪ್ಪು ನಿರ್ಣಯಕ್ಕೆ ಬಲಿಯಾದದ್ದು ಇಮ್ರಾನ್ ಗೆ ಸರಿಕಾಣಲಿಲ್ಲ. ನೇರ ವಕಾರ್ ಯೂನುಸ್ ಹತ್ತಿರ ಬಂದು ಒಂದೆರಡು ಮಾತನಾಡಿದ ನಂತರ ಇಮ್ರಾನ್ ಶ್ರೀಕಾಂತ್ ಗೆ ಆಟ ಮುಂದುವರೆಸಲು ಹೇಳಿದರು. ಶಾರ್ಟ್ ಮೀಡಾಫ್ ನಲ್ಲಿ ನಿಂತಿದ್ದ ಆ ಕಾಲದ ಪರಮ ಜಗಳಗಂಟ, ಪುಡಿ ರೌಡಿಯಂತಿದ್ದ ಜಾವೇದ್ ಮಿಯಾಂದಾದ್ ಇಮ್ರಾನ್ ನಿರ್ಣಯ ಕೇಳಿ ಅದೇನನ್ನೋ ಗೊಣಗತೊಡಗಿದರು. ಇಡೀ ಲಾಹೋರ್ ಸ್ಟೇಡಿಯಂ ಇಮ್ರಾನ್ ನಿರ್ಣಯ ಮತ್ತು ಶ್ರೀಕಾಂತ್ ಆಟ ಮುಂದುವರಿಸಿದ್ದು ಕಂಡು ಆಶ್ಚರ್ಯಚಕಿತವಾಯಿತು. ಬಹುತೇಕರು ಚಪ್ಪಾಳೆ ತಟ್ಟಿ ಇಮ್ರಾನ್ ಕ್ರೀಡಾಸ್ಫೂರ್ತಿಯನ್ನು ಬೆಂಬಲಿಸಿದರು. ತಂಡ ಮತ್ತು ಪ್ರೇಕ್ಷಕರ ವಲಯದಲ್ಲಿ ಇಮ್ರಾನ್ ನಿರ್ಣಯದ ಕುರಿತು ಮಿಶ್ರ ಅಭಿಪ್ರಾಯ ವ್ಯಕ್ತವಾಯಿತು. ಆದರೆ ತಪ್ಪು ನಿರ್ಣಯಕ್ಕೆ ಬಲಿಯಾಗಿ ಇಮ್ರಾನರ ಕ್ರೀಡಾಸ್ಫೂರ್ತಿಯ ಕಾರಣದಿಂದ ಮತ್ತೊಂದು ಅವಕಾಶ ಪಡೆದ ಶ್ರೀಕಾಂತ್ ದುರದೃಷ್ಟವಶಾತ್ ವಕಾರ್ ಯೂನಿಸ್ ರ ಮರು ಎಸೆತದಲ್ಲಿಯೇ ಕೀಪರ್ ಸಲೀಮ್ ಯೂಸುಫ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಒಂದೊಮ್ಮೆ ಶ್ರೀಕಾಂತ್ ಇನ್ನೂ ಐದೋ ಹತ್ತೋ ಓವರ್ ನಿಂತು ಆಡಿದ್ದರೆ ಪಂದ್ಯದ ಗತಿಯೇ ಬದಲಾಗುತಿತ್ತು. ಪಾಕ್ ನ ಈ ಸಣ್ಣ ಸ್ಕೋರನ್ನು ಭಾರತ ಸುಲಭದಲ್ಲಿ ಹೊಡೆಯುತಿತ್ತು. ಹಾಗೇನಾದರೂ ಆಗಿ ಭಾರತ ಗೆದ್ದರೆ ಜೀವನಪರ್ಯಂತ ಅದಕ್ಕಾಗಿ ಇಮ್ರಾನ್ ಬೆಲೆತೆರಬೇಕಿತ್ತು. ಟೆಸ್ಟ್ ಸರಣಿ ಡ್ರಾಗಳ ಮೂಲಕ ನೀರಸವಾದಂತೆ ಏಕದಿನ ಸರಣಿಯೂ 1-1 ಸಮಬಲವಾಗುತಿತ್ತು. ಆದರೆ ಪಾಕಿಸ್ತಾನ ಈ ಪಂದ್ಯದಲ್ಲಿ 37 ರನ್ನುಗಳಿಂದ ಜಯಗಳಿಸಿ ಸರಣಿ ವಶಪಡಿಸಿಕೊಂಡಿತು. ಕ್ರಿಕೆಟ್ ಇತಿಹಾಸದಲ್ಲಿ ಬಹಳಷ್ಟು ಕ್ರೀಡಾಸ್ಫೂರ್ತಿಯ ನಿದರ್ಶನಗಳನ್ನು ಕಾಲಕಾಲಕ್ಕೆ ಕಂಡರೂ,ಜಿ ಆರ್ ವಿಶ್ವನಾಥ್ ಮತ್ತು ಇಮ್ರಾನ್ ಖಾನ್ ಪ್ರಕರಣದಲ್ಲಿ ಸಂಭಾವ್ಯ ಸೋಲು ಕಣ್ಣ ಮುಂದಿದ್ದರೂ ಅವರು ಅದನ್ನು ಲೆಕ್ಕಿಸದೆ ಸ್ಪೂರ್ತಿಯಾದದ್ದು ವಿಶೇಷ.

ಫೋಟೋ ಕೃಪೆ : dnaindia.

ತದನಂತರದ ದಿನಗಳಲ್ಲಿ ಭಾರತದ #ಮಹೇಂದ್ರ_ಸಿಂಗ್_ಧೋನಿ ಕೂಡ ಇಂಗ್ಲೆಂಡಿನ ಇಯಾನ್ ಬೆಲ್ ಗೆ ಅಂಪಾಯರ್ ತಪ್ಪು ತೀರ್ಪಿನ ಕಾರಣದಿಂದ ಮತ್ತೊಮ್ಮೆ ಆಡಲು ಅವಕಾಶ ನೀಡಿದರು. ಸಚಿನ್ ತೆಂಡುಲ್ಕರ್ , ಹಾಶಿಮ್ ಆಮ್ಲಾ, ಆ್ಯಡಂ ಗಿಲ್‌ಕ್ರಿಸ್ಟ್ , ಬ್ರಿಯಾನ್ ಲಾರಾ ಮುಂತಾದ ಖ್ಯಾತನಾಮರು ಬ್ಯಾಟಿಂಗ್ ಮಾಡುವಾಗ ಔಟಾದರೆ ಅಂಪಾಯರ್ ತೀರ್ಪಿಗೆ ಕಾಯದೆ ಪ್ರಾಮಾಣಿಕವಾಗಿ ಕ್ರೀಸ್ ತೊರೆಯುತ್ತಿದ್ದರು. ವೆಸ್ಟಿಂಡೀಸಿನ ವೇಗಿ ಕರ್ಟ್ನಿ ವಾಲ್ಶ್ ಕೂಡ ತಮ್ಮ ಕ್ರೀಡಾಸ್ಫೂರ್ತಿಗೆ ಹೆಸರುವಾಸಿಯಾಗಿದ್ದರು. ಯುದ್ಧರಂಗದಲ್ಲಿ ಎದುರಾಳಿಯನ್ನು ಸಾಯಿಸಿ ತಾನು ಬದುಕುವಂತೆ ಕ್ರೀಡಾಂಗಣದಲ್ಲಿ ಎದುರಾಳಿಯನ್ನು ಸೋಲಿಸಿ ತಾನು ಗೆಲ್ಲಬೇಕೆಂಬುದು ಪ್ರತಿಯೊಬ್ಬ ಕ್ರೀಡಾಪಟುವಿನ ಪ್ರಧಾನ ಉದ್ದೇಶವಾದರೂ, ಕೆಲವು ಕ್ರೀಡಾಪಟುಗಳು ಕಣ್ಣೆದುರು ಸೋಲಿನ ಕರಾಳ ಛಾಯೆ ಆವರಿಸಿಕೊಂಡಾಗಲೂ ತಮ್ಮ ಭವಿಷ್ಯವನ್ನು ಪಣಕ್ಕಿಟ್ಟು ಕ್ರೀಡೆಯ ಘನತೆಯನ್ನು ಎತ್ತರಿಸಿರುವುದನ್ನು ಕಾಣಬಹುದು.

ಫೋಟೋ ಕೃಪೆ : dnaindia. (ಮುತಾಜ್ ಈಸಾ ಮೊಹಮ್ಮದ್ ಬಾರ್ಶಿಮ್ ಮತ್ತು ಗಿಯಾನ್ ಮಾರ್ಕೋ ತಾಂಬೇರಿ )

ಇತ್ತೀಚೆಗೆ ನಡೆದ ಟೋಕಿಯೋ ಒಲಂಪಿಕ್ಸ್ ನಲ್ಲಿ ಇಡೀ ಜಗತ್ತು ಮೆಚ್ಚಿದ ಕ್ರೀಡಾಸ್ಫೂರ್ತಿಯನ್ನು ಕತಾರ್ ನ ಹೈಜಂಪರ್ ಮುತಾಜ್ ಈಸಾ ಮೊಹಮ್ಮದ್ ಬಾರ್ಶಿಮ್ ತೋರಿದರು. ಇಟೆಲಿಯ ಸಹಸ್ಪರ್ಧಿ ಗಿಯಾನ್ ಮಾರ್ಕೋ ತಾಂಬೇರಿ ಮತ್ತು ಮುತಾಜ್ ಬಾರ್ಶಿಮ್ ದಶಕಗಳಿಂದ ಆತ್ಮೀಯ ಸ್ನೇಹಿತರು. ಹಿಂದಿನ 2012ರ ಲಂಡನ್ ಮತ್ತು 2016ರ ರಿಯೋ ಒಲಂಪಿಕ್ಸ್ ಗಳಲ್ಲಿ ಮುತಾಜ್ ಬಾರ್ಶಿಮ್ ಅನುಕ್ರಮವಾಗಿ ಕಂಚು ಮತ್ತು ಬೆಳ್ಳಿಯ ಪದಕ ಗೆದ್ದಿದ್ದರು. ಇಟೆಲಿಯ ಮಾರ್ಕೋ ತಾಂಬೇರಿ ಮಹಾ ಪ್ರತಿಭಾವಂತ ಕ್ರೀಡಾಪಟು. ಆದರೆ ಒಲಿಂಪಿಕ್ಸ್ ಸಂದರ್ಭಗಳಲ್ಲಿ ಸದಾ ಕಾಡುವ ಅವರ ಕಾಲಿನ ಗಾಯದ ನೋವು ಅವರ ಸಾಧನೆಗೆ ಬಹಳ ತೊಂದರೆ ನೀಡುತಿತ್ತು. ಹಾಗಾಗಿ ಹಲವಾರು ಅಂತರರಾಷ್ಟ್ರೀಯ ದಾಖಲೆಗಳ ಹೊರತಾಗಿಯೂ ಹಿಂದಿನ ಲಂಡನ್ ಮತ್ತು ರಿಯೋ ಒಲಂಪಿಕ್ಸ್ ನಲ್ಲಿ ಅವರಿಗೆ ಭಾಗವಹಿಸಲಾಗಲಿಲ್ಲ. ಅದಕ್ಕಾಗಿ ತಾಂಬೇರಿ ಬಹಳ ದು:ಖಿತರಾಗಿದ್ದರು. ನಿರಂತರ ಕಠಿಣ ತರಬೇತಿ ಪಡೆದು ಒಲಂಪಿಕ್ಸ್ ಪದಕ ಗೆಲ್ಲಲೇಬೇಕೆಂಬ ಬದುಕಿನ ಮಹಾ ಕನಸನ್ನು ಹೊತ್ತು, ತಮ್ಮ ಜೀವಮಾನದ ಕೊನೆಯ ಪ್ರಯತ್ನದ ಭಾಗವಾಗಿ ಮಾರ್ಕೋ ತಾಂಬೇರಿ ಟೋಕಿಯೋ ಒಲಂಪಿಕ್ಸ್ ಗೆ ಬಂದಿದ್ದರು. ಹೈಜಂಪ್ ಫೈನಲ್ ನಲ್ಲಿ ಕತಾರಿನ ಗೆಳೆಯ ಮುತಾಜ್ ಬಾರ್ಶಿಮ್ ರೊಂದಿಗೆ ಸರಿಸಮವಾಗಿ ಸೆಣಸಾಡಿದರು. ತುರುಸಿನ ಸ್ಪರ್ಧೆಯಲ್ಲಿ ಮೂರು ಸುತ್ತು ಮುಗಿದಾಗ ಇಬ್ಬರೂ 2.37 ಮೀ ಜಿಗಿದು ಸಮಬಲರಾಗಿ ಮೂಡಿಬಂದರು.

ನಿರ್ಣಾಯಕರು ಸ್ಪರ್ಧೆಯ ನಿರ್ಣಾಯಕ ಫಲಿತಾಂಶ ದಾಖಲಿಸಲು ಜಂಪ್ ಆಫ್ ಗೆ ಸೂಚಿಸಿದರು. ಆ ನಿರ್ಣಾಯಕ ಹೊತ್ತಿನಲ್ಲೇ ದುರದೃಷ್ಟವಶಾತ್ ಮಾರ್ಕೋ ತಾಂಬೇರಿಯ ಹಳೆಯ ಕಾಲಿನ ನೋವು ಮತ್ತೆ ಮರುಕಳಿಸಿತು. ತಾಂಬೇರಿ ಆಘಾತದಿಂದ ಕುಗ್ಗಿಹೋದರು. ಮನಸ್ಸು ಇನ್ನಿಲ್ಲದಂತೆ ರೋಧಿಸತೊಡಗಿತು. ಅದೆಷ್ಟೋ ಹಗಲು ರಾತ್ರಿಗಳ ಅಹರ್ನಿಶಿ ಪ್ರಯತ್ನ ಮತ್ತು ಕನಸುಗಳು ಭಗ್ನಗೊಂಡು ಆಕಾಶವೇ ಕಳಚಿ ಬಿದ್ದಂತೆ ಭಾಸವಾಯಿತು. ಇಬ್ಬರ ನಡುವೆ ಹಲ್ಲು ಕಚ್ಚಿಕೊಂಡು ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದ್ದರೂ, ಆಗಿನ್ನೂ ಮುತಾಜ್ ಬಾರ್ಶಿಮ್ ರ ಮನದಲ್ಲಿ ಮಿತ್ರನ ಮನದಂತರಂಗದ ನೋವಿನ ಧ್ವನಿ ಸರಿಯಾಗಿಯೇ ಕೇಳಿಸುತಿತ್ತು. ಏಕಮೇವರಾಗಿ ಚಿನ್ನ ಗೆದ್ದು ಮೆರೆವ ಸರ್ವ ಆಯ್ಕೆಗಳು ಕಣ್ಣ ಮುಂದಿದ್ದವು. ಜಗತ್ತಿನ ಅದ್ಯಾವ ಕ್ರೀಡಾಪಟುವಾದರೂ ಆ ಹೊತ್ತಿನಲ್ಲಿ ಸಹಸ್ಪರ್ಧಿಯ ಕುರಿತು ಇಷ್ಟು ಕಾಳಜಿ ತೋರುತ್ತಿರಲಿಲ್ಲ. ಎದುರಾಳಿ ನಿಲ್ಲಲಾರದೆ ಅದಾಗಲೇ ಧರಾಶಾಹಿಯಾಗಿದ್ದ. ಮುತಾಜ್ ಬಾರ್ಶಿಮ್ ಪರವಿದ್ದ ಎಲ್ಲರಿಗೂ ಜಯದ ಹೊರತಾಗಿ ಬೇರೇನೂ ಕಾಣುತ್ತಿರಲಿಲ್ಲ. ಆದರೆ ಗೆಲುವಿನ ಗದ್ದಲದಲ್ಲಿ ಮುತಾಜ್ ಬಾರ್ಶಿಮ್ ಗೆ ಮಿತ್ರನ ಸೋಲು ಮತ್ತು ಅವನ ದೈಹಿಕ-ಮಾನಸಿಕ ನೋವು ಕಾಣುತ್ತಿತ್ತು. ಎದುರಾಳಿ ಅಂಗಣದಿಂದ ಹಿಂದೆ ಸರಿದದ್ದಕ್ಕಾಗಿ ಮುತಾಜ್ ಬಾರ್ಶಿಮ್ ಮುಖದಲ್ಲಿ ಸಂಭ್ರಮವಿರಲಿಲ್ಲ. ಎಲ್ಲರೂ ಏನೇನೋ ಆಲೋಚಿಸುತ್ತಿರುವಾಗ ಮುತಾಜ್ ಬಾರ್ಶಿಮ್ ಆಲೋಚನಾಲಹರಿ ಬೇರೆ ಕಡೆ ಹರಿಯಿತು.



ಶತಮಾನಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಗೆಲುವಿನ ಸಂಭ್ರಮ -ಅಮಲುಗಳಲ್ಲಿ ಆ ಯೋಚನೆ ಯಾರಿಗೂ ಬಂದಿರಲಿಲ್ಲ. ನೇರ ನಿರ್ಣಾಯಕರತ್ತ ಧಾವಿಸಿದ #ಮುತಾಜ್ ಬಾರ್ಶಿಮ್, ಒಂದೊಮ್ಮೆ ತಾನೂ ಸ್ಪರ್ಧೆಯಿಂದ ಹಿಂದೆ ಸರಿದರೆ ಪದಕವನ್ನು ಇಬ್ಬರಿಗೂ ಸಮನಾಗಿ ಹಂಚಲಾಗುವುದೇ? ಎಂದು ಪ್ರಶ್ನಿಸಿದರು. ಸ್ಪರ್ಧೆಯಿಂದ ಹಿಂದೆ ಸರಿದರೂ ಸಂಭ್ರಮಾಚರಣೆಗೆ ಇಳಿಯದೆ ಗೆಳೆಯ ಮುತಾಜ್ ನಿರ್ಣಾಯಕರೊಂದಿಗೆ ಸಮಾಲೋಚಿಸುತ್ತಿರುವುದನ್ನು ದೂರದಿಂದಲೇ ಮಾರ್ಕೋ ತಾಂಬೇರಿ ತದೇಕಚಿತ್ತದಿಂದ ನೋಡುತ್ತಿದ್ದರು. ಮುತಾಜ್ ರ ಪದಕ ಹಂಚಿಕೆಯ ಪ್ರಸ್ತಾಪ ಕೇಳಿ ಒಮ್ಮೆಗೆ ಬೆಚ್ಚಿಬಿದ್ದ ನಿರ್ಣಾಯಕರು ತುಸು ಆಲೋಚಿಸಿ, ಹಾಗೆ ಮಾಡುವ ಅವಕಾಶ ತಮಗಿದೆ ಎಂದರು. ತಾನು ತನಗಿರುವ ಅವಕಾಶ ಬಳಸಿಕೊಳ್ಳುವುದಿಲ್ಲ. ಪದಕವನ್ನು ನಾವಿಬ್ಬರು ಹಂಚಿಕೊಳ್ಳೋಣ ಎಂದು ಮುತಾಜ್ ಹೇಳಿದಾಗ ಮಾರ್ಕೋ ತಾಂಬೇರಿಯ ಸಂಭ್ರಮ ಮುಗಿಲುಮುಟ್ಟಿತು. ಇಡೀ ಜಗತ್ತು ಮುತಾಜ್ ಬಾರ್ಶಿಮ್ ಕ್ರೀಡಾಸ್ಫೂರ್ತಿಗೆ ಮನಸೋತಿತು. ಒಲಿಂಪಿಕ್ಸ್ ಬಾನಂಗಳದಲ್ಲಿ ಮುತಾಜ್ ಈಸಾ ಮೊಹಮ್ಮದ್ ಬಾರ್ಶಿಮ್ ಸದಾಕಾಲ ಮಿನುಗುವ ತಾರೆಯಾದರು. ಟೋಕಿಯೋ ಒಲಿಂಪಿಕ್ಸ್ ಮುರ್ತಾಜ್ ಬಾರ್ಶಿಮ್ ರ ಈ ನಡೆಯ ಕಾರಣದಿಂದಾಗಿ ಸ್ಮರಣೀಯವಾಯಿತು. ಕತಾರ್ ದೇಶದವರು ತಮ್ಮ ಕ್ರೀಡಾಪಟುವಿನ ಕ್ರೀಡಾ ಸಾಧನೆಗಿಂತ ಹೆಚ್ಚಾಗಿ, ಅಂಗಣದಲ್ಲಿ ನಡೆದ ಹೃದಯಸ್ಪರ್ಶಿ ವಿದ್ಯಮಾನಕ್ಕೆ ಬಹುವಾಗಿ ಸಂಭ್ರಮಿಸಿದರು.

ನಾವು ಜಾಗತಿಕವಾದ ರಾಜಕೀಯ, ಧಾರ್ಮಿಕ, ಸಾಮಾಜಿಕ, ಕ್ರೀಡಾರಂಗದ ಬೆಳವಣಿಗೆಗಳಿಂದ ಕೆಲವೊಮ್ಮೆ ಭ್ರಮನಿರಸನಗೊಂಡರೂ, ಅವೆಲ್ಲವನ್ನು ಮರೆಸಿ ನಮ್ಮ ಮುಖದ ಮೇಲೆ ಮುಗುಳ್ನಗೆ ಮೂಡಿಸುವ ವಿದ್ಯಮಾನ ಅಥವ ವ್ಯಕ್ತಿತ್ವಗಳನ್ನು ಆಗಾಗ ಕಾಣುತ್ತೇವೆ. ಬಹುಶಃ ಆಯಾಯಾ ಕ್ಷೇತ್ರಗಳ ಇಂತಹ ಮಹಾನರ ಉಪಸ್ಥಿತಿಯೇ ಪ್ರತಿಕೂಲ ಪರಿಸ್ಥಿತಿ-ಮನಸ್ಥಿತಿಗಳನ್ನು ಕಾಲಕಾಲಕ್ಕೆ ಸಮಸ್ಥಿತಿಗೆ ತರುವುದು ಮತ್ತು ಆ ಕ್ಷೇತ್ರಗಳ ಮೇಲೆ ಅಭಿಮಾನ ಮೂಡಿಸುವುದು. ಕ್ರೀಡಾಲೋಕದಲ್ಲಿ ಸದಾ ನಾವು ನಮ್ಮವರ ಜಯ ನಮ್ಮವರಲ್ಲದವರ ಸೋಲನ್ನೇ ನಿರೀಕ್ಷಿಸುವುದು. ಆದರೆ ಸೋತಾಗ ಕುಗ್ಗುವುದು, ಗೆದ್ದಾಗ ಹಿಗ್ಗುವುದು, ತೆಗಳುವುದು ಹೊಗಳುವುದು ಇದ್ದೇ ಇರುತ್ತದೆ. ಸುತ್ತಲಿನ ಇಂತಹ ಭಾವ ವೈಪರಿತ್ಯ ಮತ್ತು ಸೋಲನ್ನು ಅರಗಿಸಿಕೊಳ್ಳದವರ ನಡುವೆಯೂ ತಮ್ಮ ಭವಿಷ್ಯ, ಸ್ವಾರ್ಥ, ಸ್ಪರ್ಧೆಗಳನ್ನು ಬದಿಗೊತ್ತಿ ಸೋಲು ಗೆಲುವುಗಳನ್ನು ಸಂಸ್ಕಾರ, ಸಜ್ಜನಿಕೆ, ಪ್ರಾಮಾಣಿಕತೆಗಳ ಪ್ರಾಂಗಣದಲ್ಲಿ ತಂದು ಸಾಕ್ಷಾತ್ಕರಿಸುವ ಅಪರೂಪದಲ್ಲೇ ಅಪರೂಪದ ಸುಮನಸ್ಸುಗಳೂ ಇರುತ್ತವೆ. ಇಂಥವರು ಕಾಣಸಿಗುವುದು ವಿರಳವಾದರೂ, ಇವರು ಮೂಡಿಸುವ ಸಂಚಲನ ಸದಾ ಸ್ಮರಣೀಯ. ಸೋಲು ಗೆಲುವುಗಳು ಕ್ರೀಡೆ ಎಂಬ ನಾಣ್ಯದ ಎರಡು ನಿಶ್ಚಿತ ಮುಖಗಳು. ಸಾರ್ವಕಾಲಿಕವಾದ ಜಾಗತಿಕ ಕ್ರೀಡಾಲೋಕದಲ್ಲಿ ಅದೆಷ್ಟೋ ಜನರು ಬಂದರು, ಹೋದರು, ಬರುತ್ತಲೂ ಇದ್ದಾರೆ. ಆದರೆ ಕ್ರೀಡಾಂಗಣದಲ್ಲಿ ಕೆಲವು ಕ್ರೀಡಾಪಟುಗಳು ತೋರುವ ಸ್ಫೂರ್ತಿ ಸ್ವತಃ ಅವರೇ ಗತಿಸಿದರೂ ನೆನಪಿನಂಗಳದಿಂದ ಮರೆಯಾಗದು.


  • ಮುಷ್ತಾಕ್ ಹೆನ್ನಾಬೈಲ್ (ಚಿಂತನಕರಾರು, ಲೇಖಕರು) ಕುಂದಾಪುರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading