ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ಆಸ್ತಿ ಗುಂಡಾ ಜೋಯಿಸರು



 ಶ್ರೀ ಗುಂಡಾ ಜೋಯಿಸರು ಸಂಗ್ರಹಿಸಿದ ಎಲ್ಲಾ ವಸ್ತುಗಳನ್ನು, ಹಸ್ತಪ್ರತಿ, ಶಿಲ್ಪಗಳನ್ನು ಕೆಳದಿ ವಸ್ತುಸಂಗ್ರಹಾಲಯಕ್ಕೆ ಪ್ರತಿಫಲ ಅಪೇಕ್ಷೆ ಪಡದೆ ದೇಣಿಗೆಯಾಗಿ ಕೆಳದಿ ವಸ್ತುಸಂಗ್ರಹಾಲಯಕ್ಕೆ ಕೊಟ್ಟಿದ್ದಾರೆ. ಇಂದು ಅವರ ಜನ್ಮದಿನ, ಇನ್ನಷ್ಟು ಮಾಹಿತಿಯನ್ನು ಲೇಖಕರಾದ ಶಿವಕುಮಾರ್ ಅವರು ಆಕೃತಿಕನ್ನಡ ಓದುಗರೊಂದಿಗೆ ಹಂಚಿಕೊಂಡಿದ್ದಾರೆ…

ವಿದ್ವಾಂಸರೂ, ಸಂಶೋಧಕರೂ ಆಗಿ ಮಹತ್ವದ ಸಾಧನೆ ಮಾಡಿದವರು ಗುಂಡಾ ಜೋಯಿಸರು. ಕೆಳದಿ ಸಂಸ್ಥಾನದ ಬಗ್ಗೆ ವಿಶಿಷ್ಟ ಸಂಶೋಧನೆ ನಡೆಸಿ ವಿಶ್ವಭೂಪಟದಲ್ಲಿ ಕೆಳದಿ ಹೆಸರು ಮೂಡಿಸಿದ ಕೀರ್ತಿ ಇವರದು. 

ಗುಂಡಾ ಜೋಯಿಸರು ಸಾಗರ ತಾಲ್ಲೂಕಿನ ಕೆಳದಿಯಲ್ಲಿ 1931ರ ಸೆಪ್ಟೆಂಬರ್ 27 ರಂದು ಜನಿಸಿದರು. ತಂದೆ ನಂಜುಂಡ ಜೋಯಿಸರು, ತಾಯಿ ಮೂಕಾಂಬಿಕೆ. ಗುಂಡಾ ಜೋಯಿಸರ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ ನಡೆಯಿತು. ಮುಂದೆ ಬೆಂಗಳೂರಿನ ಕೋಟೆ ಹೈಸ್ಕೂಲು ಸೇರಿದರು. ಮೈಸೂರು ವಿಶ್ವವಿದ್ಯಾಲಯ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಿಂದ ಬಿ.ಎ. (ಇತಿಹಾಸ) ಪದವಿ, ಕನ್ನಡ ಪಂಡಿತ, ಸಂಸ್ಕೃತ ಪಂಡಿತ, ಹಿಂದಿ ಪ್ರಬೋಧ, ಕನ್ನಡರತ್ನ, ಆಗಮ ವಿದ್ವಾನ್ ಪದವಿ ಮುಂತಾದವುಗಳನ್ನು ಪಡೆದರು.

Exploring the grandeur of Keladi and Ikkeri - Destinations - The Jakarta Post

 

ಗುಂಡಾ ಜೋಯಿಸರು ತಿಗಳಾರಿ, ಸಂಸ್ಕೃತ, ಕನ್ನಡ ಮೋಡಿ ಲಿಪಿಯನ್ನು ಓದುವ ಅತ್ಯಂತ ಪ್ರತಿಭಾನ್ವಿತ ಸಂಶೋಧಕರಾಗಿ ರೂಪುಗೊಂಡರು. ಗುಂಡಾ ಜೋಯಿಸರ ಪೂರ್ವಿಕರು ಆನೆಗೊಂದಿ ನಿವಾಸಿಗಳಾಗಿದ್ದು ವಿಜಯನಗರ ರಾಜ ಪುರೋಹಿತರಾಗಿದ್ದರು. ತಾಯಿ ಕೆಳದಿ ಆಸ್ಥಾನ ಕವಿಗಳ ಮಗಳು. ಹೀಗೆ ಇವರು ಕೆಳದಿವಂಶ ವಾಹಿನಿಯಲ್ಲಿ ಹರಿದುಬಂದ ಪುರಾತನ ಇತಿಹಾಸದ ಕೊಂಡಿಯಾಗಿದ್ದಾರೆ.

This slideshow requires JavaScript.

ಇತಿಹಾಸದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಗುಂಡಾ ಜೋಯಿಸರಿಗೆ ಕೆಳದಿಯ ಇತಿಹಾಸವೇ ಉಸಿರಾಯಿತು. 1960ರಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ವಸ್ತು ಸಂಗ್ರಹಾಲಯ ಮತ್ತು ಸಂಶೋಧನ ಕೇಂದ್ರ ಪ್ರಾರಂಭಿಸಿದರು. ತಮ್ಮ ಮನೆತನಕ್ಕೆ ಸೇರಿದ ವಿಪುಲವಾದ ಓಲೆಗರಿ, ಶಾಸನಗಳು. ಪ್ರಾಚೀನ ವಸ್ತುಗಳ ಸಂಗ್ರಹ ಮಾಡಿದರು. ಈ ವಸ್ತು ಸಂಗ್ರಹಾಲಯದಲ್ಲಿ ಎರಡು ಸಾವಿರ ಪ್ರಾಚೀನ ಓಲೆಗರಿಗಳಿದ್ದು ಅವು ಆಯುರ್ವೇದ, ಸಂಗೀತ, ಜ್ಯೋತಿಷ್ಯಕ್ಕೆ ಸಂಬಂಧಿಸಿವೆ ಎಂದು ಹೇಳಲಾಗಿದೆ. 120 ವಿವಿಧ ಚಾರಿತ್ರಿಕ ದಾಖಲೆಗಳು, ಸುಮಾರು ಮೂರು ಸಾವಿರ ವಿವಿಧ ಭಾಷಾ ಗ್ರಂಥಗಳು, ಕೃಷ್ಣದೇವರಾಯನ ಕಾಲದ ದಿನಚರಿಯ ಓಲೆಗಳು, ಸರ್ವಜ್ಞನ ಪೂರ್ವೋತ್ತರದ ತಾಡಓಲೆಗಳು, ಮಹಾಭಾರತದ ಸೂಕ್ಷ್ಮ ವರ್ಣಚಿತ್ರಗಳು, ಬಿಜಾಪುರದ ಆದಿಲ್‌ಷಾನ ಚಾರಿತ್ರಿಕ ದಾಖಲೆಗಳು ಮುಂತಾದುವುಗಳ ಆಗರವಾಗಿದೆ. ಈ ಸಂಶೋಧನಾ ಕೇಂದ್ರವು ಕೇಂದ್ರ ಸರಕಾರ, ರಾಜ್ಯ ಸರಕಾರ, ದೆಹಲಿ ಇಂದಿರಾಗಾಂಧೀ ಕಲಾ ಕೇಂದ್ರ, ಲಕ್ನೋ ಪ್ರಾಚ್ಯ ವಸ್ತು ಸಂರಕ್ಷಣಾ ಕೇಂದ್ರ, ನ್ಯಾಷನಲ್ ಮ್ಯೂಸಿಯಂ, ಯುನೆಸ್ಕೊ ಮುಂತಾದುವುಗಳಿಂದ ಮಾನ್ಯತೆ ಪಡೆದಿದೆ. ಫ್ರಾನ್ಸ್, ಆಸ್ಟ್ರೇಲಿಯಾ, ಕೆನಡಾ ಮುಂತಾದ ಕಡೆಗಳಿಂದ ಸಂಶೋಧಕರು ಕೆಳದಿಗೆ ಭೇಟಿ ನೀಡಿದ್ದಾರೆ. ಹೀಗೆ ಇದೊಂದು ಏಕವ್ಯಕ್ತಿಯ ಮಹಾನ್ ಸಾಧನೆಯಾಗಿದೆ.



ಗುಂಡಾ ಜೋಯಿಸರು ಹಲವಾರು ಚಾರಿತ್ರಿಕ ಕೃತಿ ಪ್ರಕಟಿಸಿದ್ದಾರೆ. ಕೆಟಲಾಗ್ ಆಫ್ ಏನ್ಷಿಯಂಟ್ ತಿಗಳಾರಿ ಪಾಮ್‌ಲೀಫ್, ಇತಿಹಾಸ ವೈಭವ, ಕೆಳದಿಯ ಸಂಕ್ಷಿಪ್ತ ಇತಿಹಾಸ, ಇಕ್ಕೇರಿ ಅರಸರು, ಬಿದನೂರಿನ ಕೆಳದಿ ನಾಯಕರು, ಕೆಳದಿಯ ವೆಂಕಣ್ಣಯ್ಯ ಕವಿಯ ಕೀರ್ತನೆಗಳು, ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಕೆಳದಿ ಅರಸರು ಮುಂತಾದ 35ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ.

ಗುಂಡಾ ಜೋಯಿಸರಿಗೆ ಸ್ವೀಡನ್ ವಿಶ್ವವಿದ್ಯಾಲಯದಿಂದ ಸ್ಕ್ರಿಪ್ಟ್ ಎಕ್ಸ್‌ಪರ್ಟ್ ಬಿರುದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತಾಳಪತ್ರ ಗ್ರಂಥತಜ್ಞ ಪ್ರಶಸ್ತಿ, ಹುಬ್ಬಳ್ಳಿ ಮೂರು ಸಾವಿರ ಮಠ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಸನ್ಮಾನ ಮುಂತಾದ ಗೌರವಗಳು ಸಂದಿವೆ. ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಕೆಳದಿಶ್ರೀ’.

ಹಿರಿಯರಾದ ಕೆಳದಿಯ #ಗುಂಡಾ_ಜೋಯಿಸರಿಗೆ ಜನ್ಮದಿನದ ಗೌರವಗಳು.


  • ಶಿವಕುಮಾರ್ ಬಾಣಾವರ  (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು ) ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading