ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೩)- ಶಿವಕುಮಾರ್ ಬಾಣಾವರ



ಅಂಬಿಕಾನಗರವು ಭಾಷಾತೀತವಾದ ನಗರವಾಗಿತ್ತೆಂದರೆ ಅಚ್ಚರಿ ಪಡಬೇಕಿಲ್ಲ.ದೀಢ್ ರೂಪಾಯಿಗೆ ನಾಲ್ಕು ಮುಂತಾದ ಮರಾಠಿ ದವಾಖಾನೆ, ಖಾನಾವಳಿಗಳಲ್ಲಿ ಮೆರೆಯುತ್ತಿತ್ತು. ರಾತ್ರಿ ಪಾಳಿಗಳಲ್ಲಿ ಕೆಲಸ ನಿರ್ವಹಿಸುವಾಗ ಈ ಮಲಯಾಳಿಗಳಿಂದಾಗಿಯೇ ಅಂಗಡಿಗಳಲ್ಲಿನ ಹಾಲಿನ ಪುಡಿಯ ಪರಿಚಯವಾದದ್ದು ಶಿವಕುಮಾರ್ ಬಾಣಾವರ ಅವರ ಅನುಭವದ ಸವಿ ಸವಿ ನೆನಪುಗಳನ್ನು ಮುಂದೆ ಓದಿ…

ಇಷ್ಟೆಲ್ಲಾ ಕೆಲಸವಾಗುತ್ತಿದ್ದಂತೆಯೇ ಮೇಲಧಿಕಾರಿಗಳಿಂದ ನನಗೆ ಕರೆ ಬಂತು. ಅವರೊಂದಿಗೆ ಇಂಟರ್ ಕಾಮ್ ನಲ್ಲಿ ಮಾತನಾಡಿದಾಗ ಬ್ಯಾಚಿಂಗ್ ಪ್ಲ್ಯಾಂಟಿಗೆ ಬರುವಂತೆ ಸೂಚಿಸಿದರು. ಅಷ್ಟರಲ್ಲೇ ಕಾಂಕ್ರೀಟ್ ಖಾಲಿ ಮಾಡಿದ ಅಜಿಟೇಟರ್ ಕಾರು ಬಂತು. ಅದರೊಳಗೆ ಕೂತು ಮೇಲಿನ ಪ್ಲ್ಯಾಟ್ ಫಾರಂಗೆ ಬಂದೆ. ಅವರ ಆದೇಶದಂತೆ ಮುಂದಿನ ದಿನಗಳಲ್ಲಿ ಬ್ಯಾಚಿಂಗ್ ಪ್ಲ್ಯಾಂಟಿನಲ್ಲೇ ಇದ್ದು ಬ್ಯಾಚಿಂಗ್ ಪ್ಲ್ಯಾಂಟಿನಲ್ಲಿ ಕಾಂಕ್ರೀಟ್ ಮಿಶ್ರಣದ ಉಸ್ತುವಾರಿಯನ್ನು ನೋಡಿಕೊಳ್ಳತೊಡಗಿದೆ.

ಕಾಂಕ್ರೀಟ್ ಮಿಶ್ರಣ ಮಾಡುವ ಡ್ರಮ್ ಡಗ ಡಗ ಗರ ಗರ ತಿರುಗಲು ಪ್ರಾರಂಭಿಸಿತು ಜೆಲ್ಲಿ, ಮರಳು, ಸಿಮೆಂಟ್ ಗಳು ಡ್ರಮ್ಮಿಗೆ ಬಂದು ಬೀಳುವ ಶಬ್ಧ ಆ ನೀರವ ರಾತ್ರಿಯಲ್ಲಿ ಅದೆಲ್ಲಿಯವರೆಗೆ ಕೇಳಿಸುತ್ತಿತ್ತೋ ಗೊತ್ತಿಲ್ಲ. ಹತ್ತು ನಿಮಿಷ ಡ್ರಮ್ ತಿರುಗಿದ ಮೇಲೆ ಮತ್ತೆ ಅದಕ್ಕೆ ಐದು ಲೀಟರ್ ಸಿಮೋಸೆಟ್ಟನ್ನು (ಕಾಂಕ್ರೀಟ್ ಬೇಗ ಗಟ್ಟಿಯಾಗದಿರಲೆಂದು ಬೆರೆಸುವ ದ್ರಾವಣ) ಸೇರಿಸಿ ಮತ್ತೆ ಐದುನಿಮಿಷ ಡ್ರಮ್ ತಿರುಗಿದ ಮೇಲೆ ಚೂಟ್ ಮುಖಾಂತರ ಕಾಂಕ್ರೀಟನ್ನು ಅಜಿಟೇಟರ್ ಕಾರಿಗೆ ತುಂಬಿಸಲಾಯಿತು. ಯಥಾ ಪ್ರಕಾರ ಚಾಲಕ ವಾಹನವನ್ನು ಚಲಿಸುವ ಪ್ಲಾಟ್ ಫಾರಂ ಮೇಲೆ ನಿಲ್ಲಿಸಿದ ಚಕ್ರಗಳಿಗೆ ಕಟ್ಟಿಗೆ ಇಟ್ಟು ಕ್ಲೀನರ್ ವಾಹನ ಏರಿದ. ವಿಂಚ್ ಚಾಲೂ ಆಯಿತು. ಚಲಿಸುವ ಪ್ಲ್ಯಾಟ್ ಫಾರಂ ನಿಧಾನವಾಗಿ ಕೆಳಕ್ಕೆ ಇಳಿಯತೊಡಗಿತು. ಅದರ ವೇಗ ತೀರಾ ಕಮ್ಮಿ ಇದ್ದುದರಿಂದ ಮದ್ದಾನೆಯಂತೆ ಹೆಜ್ಜೆಯಮೇಲೊಂದು ಹೆಜ್ಜೆಯನ್ನಿಟ್ಟು ಚಲಿಸುತ್ತಿರುವಂತೆ ಭಾಸವಾಗುತ್ತಿತ್ತು.

ನಾವೆಲ್ಲಾ ಮೇಲಧಿಕಾರಿಯೂ ಸೇರಿದಂತೆ ಕೆಳಕ್ಕಿಳಿಯುತ್ತಿರುವ ಉಕ್ಕಿನ ಪ್ಲ್ಯಾಟ್ ಫಾರಮ್ಮನ್ನೇ ನೋಡುತ್ತಿದ್ದೆವು. ಹತ್ತು – ಹದಿನೈದು ಅಡಿ ಕೆಳಗೆ ಇಳಿದಿರಬಹುದು ಆ ಇಡೀ ಪ್ಲ್ಯಾಟ್ ಫಾರಂ ಹಳಿ ತಪ್ಪಿ ಬಲ ಬದಿಗೆ ಸರಿಯಿತು. ನೋಡುನೋಡುತ್ತಿದ್ದಂತೆಯೇ ಅಜಿಟೇಟರ್ ಕಾರಿನ ಮುಂಭಾಗ ಮೇಲೆದ್ದು ಪಲ್ಟಿ ಹೊಡೆದು ತನ್ನೊಂದಿಗೆ ವಿದ್ಯುತ್ ಕಂಬಗಳನ್ನು ಮುರಿದುಕೊಳ್ಳುತ್ತಾ ಕೆಳಕ್ಕೆ ಹೋಗಿಬಿಟ್ಟಿತು. ಕ್ಷಣಾರ್ಧದಲ್ಲಿ ಇದು ನಡೆದುಹೋಯಿತು. ತಕ್ಷಣಕ್ಕೆ ಯಾರಿಗೂ ಏನು ಮಾಡಬೇಕೆಂಬುದೇ ಹೊಳೆಯಲಿಲ್ಲ. ಮೊದಲು ವಿಂಚ್ ನಿಲ್ಲಿಸಲು ಯಾರೋ ಹೇಳಿದರು. ಮತ್ಯಾರೋ ಓಡಿಹೋಗಿ ವಿದ್ಯುತ್ ನ ಮುಖ್ಯ ಸಂಪರ್ಕ ತಪ್ಪಿಸಿ ಬಂದರು. ಅಲ್ಲಿದ್ದವರೆಲ್ಲಾ ದುಡು ದುಡು ಮೆಟ್ಟಿಲುಗಳ ಮೂಲಕ ಟಾರ್ಚ್ ಬೆಳಕಿನ ಆಶ್ರಯದಲ್ಲಿ ಇಳಿಯಲಾರಂಭಿಸಿದರು. ನಾನೂ ಸಹ ಅವರನ್ನು ಹಿಂಬಾಲಿಸಿದೆ. ಮೊದಲು ಚಾಲಕ ಮತ್ತು ಅವನ ಸಹಾಯಕನಿಗೆ ಹುಡುಕಲಾಯಿತು. ಒಬ್ಬ ದೂರಕ್ಕೆ ಎಸೆಯಲ್ಪಟ್ಟಿದ್ದ. ಮತ್ತೊಬ್ಬ ಅಜಿಟೇಟರ್ ಕಾರಿನ ಅಡಿಯಲ್ಲಿ ಸಿಲುಕಿದ್ದ. ಐ. ಹೆಚ್. ಪಿ. ಕಂಪನಿಯ ಕಾರ್ಮಿಕನೊಬ್ಬ ತಕ್ಷಣ ಜಾಕ್ ತಂದು ವಾಹನದ ಅಡಿಯಲ್ಲಿ ಸಿಲುಕಿದವನನ್ನು ತೆಗೆಯಲು ಸಹಕರಿಸಿದ ಇಬ್ಬರನ್ನೂ ಮೇಲೆ ತಂದು ಆಸ್ಪತ್ರೆಗೆ ಸಾಗಿಸಲಾಯಿತು. ಗಾಡಿಗೆ ಸಿಲುಕಿಕೊಂಡವನು ಜೀವಂತವಾಗಿರಲಿಲ್ಲ. ದೂರಕ್ಕೆ ಎಸೆಯಲ್ಪಟ್ಟವನು ಆಸ್ಪತ್ರೆಯಲ್ಲಿ ಅಸುನೀಗಿದ.

“ಮೊದಲನೇ ಟ್ರಿಪ್ಪಿಗೆ ಹೀಗಾಗಿದ್ದರೆ ನೀವೂ ಹೋಗಿಬಿಡ್ತಿದ್ರಲ್ಲಪ್ಪಾ” ಎಂದು ನನ್ನ ಮೇಲಧಿಕಾರಿಗಳು ಹೇಳಿದಾಗಲೇ ನನಗೆ ದಿಗಿಲಾದದ್ದು ಮತ್ತು ಸಾವಿನಿಂದ ಪಾರಾದುದರ ಅರಿವಾದದ್ದು. ಎಲ್ಲಾ ಸೃಷ್ಟಿಕರ್ತನ ಇಚ್ಛೆ ತಾನೇ! ಅವನು ಬಾ ಎಂದಾಗ ಹೋಗದೇ ಇರುವುದಾದರೂ ಹೇಗೆ? ಅದ್ಯಾರ ಪುಣ್ಯವೋ ಕೃಪೆಯೋ ನನಗಂತೂ ಗೊತ್ತಿರಲಿಲ್ಲ. ಕೆಲಸಕ್ಕೆಸೇರಿದ ಮೊದಲ ದಿನವೇ ಪರಲೋಕಕ್ಕೆ ಪಯಣಿಸಬೇಕಾದವನು ಉಳಿದೆ. ಹಾಗಾಗಿ ಉಸಿರಿರುವ ತನಕ ಆ ದಿನವನ್ನು ಮರೆಯಲಾರೆ. ಕೆಲಸಕ್ಕೆ ಸೇರಿದ ಸಂತಸ ಒಂದೆಡೆಯಾದರೆ ಇಬ್ಬರು ಕಾರ್ಮಿಕರ ಅಂತ್ಯವನ್ನು ಕಂಡ ನೋವು ಮತ್ತೊಂದೆಡೆ. ಒಂದರ ಆರಂಭ ಮತ್ತೊಂದರ ಅಂತ್ಯ. ಇಂತಹ ದಿನವನ್ನು ಏನೆಂದು ಕರೆಯುವುದು? ಸುದಿನ ಅಂದುಕೊಳ್ಳಲೇ? ಹೀಗೆಂದುಕೊಂಡರೆ ನನ್ನನ್ನು ಸ್ವಾರ್ಥಿ ಅಂದುಕೊಳ್ಳುವುದಿಲ್ಲವೆಂಬ ಖಾತ್ರಿಯೇನು?



ವಾಸ್ತವ್ಯಕ್ಕೆಂದು ಮೂರು ನಾಲ್ಕು ಜನರು ಒಟ್ಟಿಗೆ ಇರಲು ಮನೆಯೊಂದನ್ನು ವಿತರಿಸಿದ ಮೇಲೆ ಇತರ ಚಟುವಟಿಕೆಗಳತ್ತ ಗಮನ ಹರಿಸಿದೆ. ಬಿಡುವಿನ ಸಮಯ ಕಳೆಯಲು ಯೋಚಿಸುತ್ತಿದ್ದಾಗ ಗೆಳೆಯನೊಬ್ಬ “ಮನರಂಜನಾ ಸಂಘ” ದತ್ತ ಕರೆದೊಯ್ದ. ಅಲ್ಲಿನ ಸದಸ್ಯತ್ವ ಪಡೆದುಕೊಂಡು ಗ್ರಂಥಾಲಯ ಕೇರಂಗಳಲ್ಲಿ ತೊಡಗಿಸಿಕೊಂಡೆ.

ಜೇಸೀಸ್, ಲಯನ್ಸ್ ಸಂಸ್ಥೆಗಳೊಂದಿಗೆ, ಕೆ, ಪಿ. ಸಿ. ಮನರಂಜನಾ ಸಂಘವು ಮನರಂಜನಾ ಕಾರ್ಯಕ್ರಮಗಳನ್ನು ನೀಡುತ್ತಿದ್ದವು. ತುಂಬಾ ಜನದಟ್ಟಣೆ ಇದ್ದುದರಿಂದ ಸಿನಿಮಾ ಟೆಂಟ್ ಕೂಡಾ ಇತ್ತು. ವಿವಿಧ ಊರುಗಳ ಬೇರೆ ಬೇರೆ ಜನರಿಂದ ತುಂಬಿದ #ಅಂಬಿಕಾನಗರವು ಭಾಷಾತೀತವಾದ ನಗರವಾಗಿತ್ತೆಂದರೆ ಅಚ್ಚರಿ ಪಡಬೇಕಿಲ್ಲ. ಅದರಲ್ಲೂ ಧಾರವಾಡದ ಗಂಡು ಮೆಟ್ಟಿನ ಭಾಷೆಯೊಂದಿಗೆ ಕಲಬುರ್ಗಿ, ರಾಯಚೂರು ಕಡೆಯ ಕನ್ನಡದ ಸೊಗಡು ಒಂದೆಡೆಯಾದರೆ ಮೈಸೂರು ಬೆಂಗಳೂರು, ತುಮಕೂರು ಕಡೆಯ ಕನ್ನಡದ ಕಂಪು ಮತ್ತೊಂದೆಡೆ. ಇದರ ಮಧ್ಯೆ ರಾಜಾಸ್ಥಾನದ ಕಡೆಯಿಂದ ಬಂದಿದ್ದವರ ಹಿಂದಿ ಇನ್ನೊಂದೆಡೆ. ದೀಢ್ ರೂಪಾಯಿಗೆ ನಾಲ್ಕು ಮುಂತಾದ ಮರಾಠಿ ದವಾಖಾನೆ, ಖಾನಾವಳಿಗಳಲ್ಲಿ ಮೆರೆಯುತ್ತಿತ್ತು. ಯಾವುದೇ ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಹೋದರೂ ಮಲಯಾಳಿಗಳ ಒಂದು ಚಹಾದ ಅಂಗಡಿ ಸಿಕ್ಕೇ ಸಿಗುತ್ತಿತ್ತು. ಇಂತಹ ಚಹಾದ ಅಂಗಡಿಯಲ್ಲಿ ಕಟ್ಟಂ ಚಹಾದ ರುಚಿಯನ್ನು ನಾನು ಮೊದಲು ಸವಿದದ್ದು. ಅದೂ ರಾತ್ರಿ ಪಾಳಿಗಳಲ್ಲಿ ಕೆಲಸ ನಿರ್ವಹಿಸುವಾಗ ಈ ಮಲಯಾಳಿಗಳಿಂದಾಗಿಯೇ ಅಂಗಡಿಗಳಲ್ಲಿನ ಹಾಲಿನ ಪುಡಿಯ ಪರಿಚಯವಾದದ್ದು. ಹೀಗಾಗಿ ಅಲ್ಲಿನ ಬುಡಕಟ್ಟು ಜನರಾದ ಗೌಳಿಗಳು ತಂದು ಮಾರುವ ಹಾಲಿಗಾಗಿ ಯಾರೂ ಕಾಯುತ್ತಿರಲಿಲ್ಲ. ಪಾಳಿ ಕೆಲಸ ನಿರ್ವಹಿಸುವ ಎಲ್ಲರ  ಮನೆಗಳಲ್ಲೂ ಹಾಲಿನ ಪುಡಿ ಡಬ್ಬಗಳು ಇದ್ದೇ ಇರುತ್ತಿದ್ದವು.

ಎರಡು ಭಾಗವಾಗಿದ್ದ ಕಾಲೋನಿಯನ್ನು ಬೇರ್ಪಡಿಸುವಲ್ಲಿ ರಸ್ತೆಯೊಂದು ಪ್ರಮುಖ ಪಾತ್ರ ವಹಿಸಿತ್ತು. ಈ ರಸ್ತೆಯ ಒಂದು ಪಾರ್ಶ್ವದಲ್ಲಿ ಅಂದರೆ ನಾಗಝರಿ ವಿದ್ಯುದಾಗಾರಕ್ಕೆ ತೆರಳುವ ಎಡಬದಿಗೆ ಅಂಗಡಿ ಮುಂಗಟ್ಟುಗಳು, ಹೋಟೆಲ್ಲುಗಳು, ಫೋಟೋ ಸ್ಟುಡಿಯೋ ಇತ್ಯಾದಿಗಳು ತಲೆ ಎತ್ತಿದ್ದವು. ಆಯಾ ಪ್ರದೇಶದ ಭಾಷೆಯ ಜನರಿಗೆ ಬೇಕಾದಂಥವರಿಂದಲೇ ಅಂಗಡಿಗಳು ತೆರೆಯಲ್ಪಟ್ಟಿದ್ದವು ಅನ್ನುವುದೊಂದು ಸೋಜಿಗ. ನೀವು ಮೈಸೂರಿನವರಾಗಿದ್ದರೆ ಇಂಥವರ ಅಂಗಡಿಗೆ ಹೋಗಿ. ಮಂಗಳೂರಾ ನಿಮ್ಮದು? ಹೋಯ್ ಆ ಅಂಗಡಿ ಮಾರಾಯ್ರೇ. ನೀವು ಬ್ರಾಹ್ಮಣರಾ? ನೋಡಿ ಆ ಕೊನೇ ಅಂಗಡಿ. ನೀವು ಮುಸ್ಲಿಂ ಹೌದಾದರೆ ಹೋ ಅದೇ ನೋಡಿ. ನೀವು ಕೇರಳದವರಾ? ಹಾಗಾದ್ರೆ ನೀವು ಮೀನಿನ ಸಾರಿಗೆ ಹಾಕುವ ಕೊಡಪ್ಪುಳಿ ಬೇರೆಲ್ಲೂ ಸಿಗುವುದಿಲ್ಲ. ಕುಟ್ಟಿಯ ಅಂಗಡಿಗೇ ಹೋಗಬೇಕು. ಹೀಗೆ ನಾವು ಬಜಾರಿಗೆ ಹೋಗುತ್ತಿದ್ದಂತೆಯೆ ಯಾರ ಅಂಗಡಿಗೆ ಹೋಗಬೇಕು ಎಂಬುದು ತೀರ್ಮಾನ ಆಗಿಬಿಡುತ್ತಿತ್ತು. ಕೆಲವು ಅಂಗಡಿಯಲ್ಲಿ ಖಾಯಂ ಗಿರಾಕಿಗಳಾಗಿದ್ದವರಿಗೆ ಸಾಲವೂ ದೊರೆಯುತ್ತಿತ್ತು. ಭಾನುವಾರ ಮತ್ಣು ರಜಾ ದಿನಗಳಂದು ವಿವಿಧ ಕಾರ್ಯ ಸ್ಥಳದ ಕಾರ್ಮಿಕರು, ಕೂಲಿಕಾರರು ಇದೇ ಬಜಾರಿಗೆ ಬರುತ್ತಿದ್ದುದರಿಂದ ಇಡೀ ಬಜಾರಿನಲ್ಲಿ ಸಂಭ್ರಮವೋ ಸಂಭ್ರಮ! ಜಾತ್ರೆಯೋ ಜಾತ್ರೆ! ಖಾನಾವಳಿ, ಹಿಂದೂ ಮಿಲಿಟರಿ ಹೋಟಲ್, ಪಫಲಾಹಾರ ಮಂದಿರ ಅಂಥವುಗಳೆಲ್ಲ ಭರ್ತಿ. ಮಾಡಿದ್ದೆಲ್ಲವೂ ಖಾಲಿ ಖಾಲಿ. ಗಲ್ಲಾ ಪೆಟ್ಟಿಗೆಯೂ ಭರ್ತಿ. ಹೋಟೆಲ್ಲಿನವರ ಟೇಪ್ ರೆಕಾರ್ಡರಿನಿಂದ ಹೊರಬೀಳುತ್ತಿದ್ದ ಹಾಡುಗಳು ಮಾತ್ರ ಖಾಲಿಯಾಗದೆ ಹಾಡಿದ್ದನ್ನೇ ಹಾಡುತ್ತಿದ್ದದ್ದೇ ವಿಶೇಷ.

 

ಮೊದಲನೇ ಆರ್. ಸಿ. ಸಿ. ಸುರಂಗ ಮತ್ತು ಇಳಿಜಾರು ಒತ್ತಡದ ಸುರಂಗದ (Inclined Pressure Shaft – 30ಡಿಗ್ರಿಗಳು inclination to vertical) ಕೆಲಸ ಒಂದು ಹಂತಕ್ಕೆ ಬಂದಿದ್ದು ಎರಡು ಮತ್ತು ಮೂರನೇ ಆರ್. ಸಿ. ಸಿ. ಸುರಂಗಗಳ ಕಾಂಕ್ರೀಟ್ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿತ್ತು. ಎರಡನೇ ಆರ್. ಸಿ. ಸಿ. ಸುರಂಗದ ಉಸ್ತುವಾರಿ ನನ್ನ ಪಾಲಿನದಾಗಿತ್ತು. ಸರ್ಜ್ ಟ್ಯಾಂಕಿನ ಬದಿಯಿಂದ ಕಾಂಕ್ರೀಟ್ ಮಾಡಿಕೊಂಡು ಬರುತ್ತಿದ್ದೆವು. ತಗಡುಗಳಿಂದ ಮಾಡಲ್ಪಟ್ಟ ಗ್ಯಾಂಟ್ರಿಯನ್ನು ಉಪಯೋಗಿಸಿ ಕಾಂಕ್ರೀಟ್ ಮಾಡುತ್ತಿದ್ದೆವು. ಹಂತಹಂತವಾಗಿ ಕಾಂಕ್ರೀಟ್ ಆದ ನಂತರ ಕಬ್ಬಿಣವನ್ನು (Reinforcement) ಕಟ್ಟಿಕೊಂಡು ಅವುಗಳನ್ನು ಪರಿಶೀಲಿಸಿ ಅಳತೆ ತೆಗೆದುಕೊಂಡು ನಂತರ ಗ್ಯಾಂಟ್ರಿಯನ್ನು ಮುಂದಕ್ಕೆ ಎಳೆದು, ಸರಿಯಾಗಿ ಕೂರಿಸಿ, ಶಟರ್ ವೈಬ್ರೇಟರ್ ಗಳು ಕಾರ್ಯ ನಿರ್ವಹಿಸಲು ಸಮರ್ಥವಾಗಿದೆಯೇ ಎಂದು ಖಾತರಿ ಪಡಿಸಿಕೊಂಡು ಕಾಂಕ್ರೀಟ್ ಮಾಡಲು ಸೂಚಿಸಲಾಗುತ್ತಿತ್ತು. ಹೀಗೆ ನಿರ್ದಿಷ್ಟ ಆಕಾರದಲ್ಲಿದ್ದ ಗ್ಯಾಂಟ್ರಿಯನ್ನು ಮುಂದಕ್ಕೆ ಸರಿಸಲು ಹೋದರೆ ಸುರಂಗದ ಕಲ್ಲು ತಡೆಯುತ್ತಿತ್ತು (undercut) ಅಂದರೆ ಆ ಜಾಗದಲ್ಲಿ ಸುರಂಗವನ್ನು ನಿಗದಿತ ಪ್ರಮಾಣದಲ್ಲಿ ಅಗೆದಿರಲಿಲ್ಲ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿ, ಅವರು ಬೇಕಾದ ಅಳತೆಗೆ ಕಲ್ಲನ್ನು ತೆಗೆಸಲು ಅನುಮತಿ ಕೊಟ್ಟರು.

ಸುರಂಗದ ನೆತ್ತಿಯ (arch portion) ಅಂದರೆ ಅರ್ಧ ವೃತ್ತಾಕಾರದ ಮೇಲ್ಭಾಗದಲ್ಲೇ ಹೆಚ್ಚು ಕಲ್ಲನ್ನು ತೆಗೆಯಬೇಕಾಗಿತ್ತು. ಏಕೆಂದರೆ ಕೆಳ ಭಾಗದ ಕಾಲು ಭಾಗವನ್ನು ಈ ಮುಂಚೆಯೇ ಆಕಾರಕ್ಕೆ, ಇಳಿಜಾರಿಗೆ ತಕ್ಕಂತೆ ಕಾಂಕ್ರೀಟ್ ಮಾಡಲಾಗಿತ್ತು. ಉಳಿದ ಭಾಗಕ್ಕೆ ಮಾತ್ರ ಕಾಂಕ್ರೀಟ್ ಮಾಡಬೇಕಾಗಿತ್ತು. ಗುತ್ತಿಗೆದಾರರ ಕಡೆಯವರು ಗುರುತಿಸಲಾದ ಕಡೆಯಲ್ಲೆಲ್ಲ ರಂದ್ರಗಳನ್ನು ಕೊರೆದು ಅದರಲ್ಲಿ ಸ್ಪೋಟಕಗಳನ್ನು ತುಂಬಿ ಸ್ಪೋಟಿಸಿ (blasting) ಅದರಲ್ಲಿ ಬಂದ ಕಲ್ಲು ಮಣ್ಣುಗಳನ್ನೆಲ್ಲಾ ಹೊರಗೆ ಸಾಗಿಸಿದ ನಂತರ ನನಗೆ ತಿಳಿಸಿದರು. ಮತ್ತೊಮ್ಮೆ ಅಳತೆ ಮಾಡಿ ನೋಡಿದಾಗ ಬೇಕಾದಲ್ಲೆಲ್ಲಾ ಸರಿಯಾದ ಅಗೆತವಾಗಿತ್ತು. ಇದನ್ನೇ ಮೇಲಧಿಕಾರಿಗಳಿಗೆ ತಿಳಿಸಿ ಅವರಿಂದ ಅನುಮತಿ ಪಡೆದುಕೊಳ್ಳುವ ದೃಷ್ಠಿಯಿಂದ ಮರುದಿನ ಅವರನ್ನು ಆರ್. ಸಿ. ಸಿ. ಸುರಂಗ -2 ಕ್ಕೆ ಎಲ್ಲೆಲ್ಲಿ ಹೊಸದಾಗಿ ಅಗೆತವಾಗಿದೆ ಎಂಬುದನ್ನು ಟಾರ್ಚ್ ಲೈಟ್ ಬೆಳಕನ್ನು ಬಿಟ್ಟು ತೋರಿಸುತ್ತಾ ನಿಂತಿದ್ದೆ. “ನಮಗೆ ಬೇಕಾದಷ್ಟು ಅಳತೆಗೆ ಅಗೆತವಾಗಿದ್ದರೆ ಸರಿ” ಋಂದು ಮೇಲಧಿಕಾರಿಗಳು ತಿಳಿಸಿದರು. ನಾನು ಮತ್ತೊಂದು ಕಡೆ ಟಾರ್ಚ್ ಬೆಳಕನ್ನು ಬಿಡುತ್ತಾ “ಸಾರ್ ಅಲ್ಲೂ ಸ್ವಲ್ಪ ಅಂಡರ್ ಕಟ್ ಆಗಿತ್ತು ತೆಗೆಸಿದ್ದೀನಿ” ಅಂದೆ. ಅಷ್ಟರಲ್ಲಿ ಅವರಿಗೆ ಏನನಿಸಿತ್ತೋ ಕಾಣೆ ಅವರ ಬಲ ಭಾಗದಲ್ಲಿ ನಿಂತಿದ್ದ ನನ್ನನ್ನು “ಈ ಕಡೆ ಬನ್ನಿ” ಅಂತ ನನ್ನ ಎಡಭಾಗಕ್ಕೆ ಕೈಹಿಡಿದು ಎಳೆದುಕೊಂಡರು. ಇದ್ದಕ್ಕಿದ್ದಂತೆ ಟಫ್ ಎಂಬ ಶಬ್ಧಕ್ಕೆ ಇಬ್ಬರೂ ಬೆಚ್ಚಿಬಿದ್ದೆವು! ನೋಡಿದರೆ ಈ ಮೊದಲು ನಾನು ನಿಂತಿದ್ದ ಆ ಜಾಗದಲ್ಲಿ ಸೈಜುಗಲ್ಲಿನಂತಿದ್ದ ಕಲ್ಲೊಂದು ಬಿದ್ದಿತ್ತು! ಆ ಕ್ಷಣದಲ್ಲಿ ಯಾವುದೋ ಅಗೋಚರ ಶಕ್ತಿ ಮೇಲಧಿಕಾರಿಗಳ ಮೂಲಕ ನನ್ನನ್ನು ಮತ್ತೊಮ್ಮೆ ಬದುಕಿಸಿತ್ತು. ಹೀಗೆಯೇ ಅಲ್ಲವೇ ಮನುಷ್ಯ ಕ್ಷಣ ಕ್ಷಣವೂ ಸಾವಿನೊಂದಿಗೆ ಬದುಕುವುದು? ಒಂದು ದುರಂತದಿಂದ ತಪ್ಪಿಸಿಕೊಂಡರೆ ಮತ್ತೊಂದು ಸಿದ್ಧವಾಗಿರುತ್ತದೆ. ಆದರೂ ಮಾನವ ಬದುಕಲು ಏನೆಲ್ಲಾ ಕಸರತ್ತು ಮಾಡುತ್ತಿರುತ್ತಾನೆ ಎಂದರೆ ಶಾಶ್ವತವಾಗಿಯೇ ಇರುವೆನೆಂಬ ಭ್ರಮೆಯಲ್ಲಿ ಮುಳುಗಿಹೋಗಿರುತ್ತಾನೆ. ಹುಟ್ಟಿನ ನೆರಳೇ ಸಾವಲ್ಲವೇ? ಇದನ್ನು ಪ್ರತಿಯೊಬ್ಬ ಜೀವಿಯೂ ಅರಿತು ಬಾಳಿದರೆ ಮನುಷ್ಯತ್ವಕ್ಕೆ ಕೊರತೆ ಇರುವುದಿಲ್ಲ‌. ಅಲ್ಲವೇ?.

 


  • ಶಿವಕುಮಾರ್ ಬಾಣಾವರ  (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW