ಒಂದು ಕ್ಷಮೆ ಎಂಥ ಮನುಷ್ಯನ ಮನಸ್ಸನ್ನು ಕೂಡಾ ಪರಿವರ್ತನೆ ಮಾಡಬಲ್ಲದು ಎನ್ನುವುದಕ್ಕೆ ಚೇತನ ಭಾರ್ಗವ ಅವರ ಈ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ….
ಜೈಲಿನಿಂದ ಆಗತಾನೆ ಆತ ಬಿಡುಗಡೆಯಾಗಿದ್ದ. ಚಿಕ್ಕಂದಿನಿಂದ ಅನುಭವಿಸಿದ ಬಡತನ ಹಸಿವು, ನೋವು, ಹತಾಶೆ ಹೊಟ್ಟೆಪಾಡಿಗೆ ಪಟ್ಟ ಯಾತನೆ ಆತನನ್ನು ಕಳ್ಳತನದ ದಾರಿಗೆ ತಳ್ಳಿತ್ತು. ಚಿಕ್ಕ ಪುಟ್ಟ ಕಳ್ಳತನ ಮಾಡಿ ಹೊಟ್ಟೆಹೊರೆಯುತ್ತಾ ಬರಬರುತ್ತಾ ಕಳ್ಳತನ ಅಭ್ಯಾಸವಾಗಿ ಬಿಟ್ಟಿತ್ತು. ಆದರೆ ಅವನಿದ್ದ ಊರು ಸಣ್ಣದು ಹಾಗೂ ಜನಸಂಖ್ಯೆಯೂ ಹೆಚ್ಚಿರಲಿಲ್ಲ. ಹಾಗಾಗಿ ಊರ ಜನರು ಜಾಗೃತರಾಗಿ ಒಮ್ಮೆ ಈತ ಕಳ್ಳತನ ಮಾಡುತ್ತಾ ಸಿಕ್ಕಿಬಿದ್ದ. ಶಿಕ್ಷೆಯಾಗಿ ಹೊರಬಂದು ಹೊಟ್ಟೆ ಹೊರೆಯುವ ಸಲುವಾಗಿ ಕಂಡ ಕಂಡ ಕಡೆ ಕೆಲಸ ಯಾಚಿಸಿದ. ಈತನ ಹಿನ್ನೆಲೆಯ ಅರಿವಿದ್ದವರು ಬೆದರಿಸಿ ಕಳಿಸಿದರು. ಉಳಿದವರು ಈತನ ಕೆದರಿದ ಕೂದಲು ಹರಿದ ಮಾಸಲು ಬಟ್ಟೆಯನ್ನು ನೋಡಿಯೇ ದೂರ ಹೋದರು.
ಒಟ್ಟಿನಲ್ಲಿ ಕೆಲಸವೂ ಸಿಗದೇ ಅನ್ನ, ನೀರು ಇಲ್ಲದೆ ಹಸಿವು ಬಾಯಾರಿಕೆಗಳಿಂದ ಬಳಲಿ ಆತ ಹಳ್ಳಿಯ ಅಂಚಿನಲ್ಲಿದ್ದ ಇಗರ್ಜಿಗೆ ಬಂದ. ಈತನನ್ನು ನೋಡಿದ ಪಾದ್ರಿಯು ಆತನಿಗೆ ಊಟ ಉಪಚಾರ ಒದಗಿಸಿ ಪ್ರೀತಿಯಿಂದ ಮಾತನಾಡಿಸಿ ರಾತ್ರಿ ಮಲಗಲು ವ್ಯವಸ್ಥೆ ಮಾಡಿದ. ಆತ ಜೀವಮಾನದಲ್ಲಿ ಈ ರೀತಿಯ ಪ್ರೀತಿಯ ಉಪಚಾರವನ್ನು ಕಂಡಿರಲಿಲ್ಲ. ಮಧ್ಯರಾತ್ರಿಯಲ್ಲಿ ಆತನಿಗೆ ಎಚ್ಚರವಾಯಿತು ಸುತ್ತ ಮುತ್ತ ನೋಡಿದ ಆತನಿಗೆ ಮಂದವಾಗಿ ಉರಿಯುತ್ತಿದ್ದ ಬೆಳ್ಳಿಯ ದೀಪ ಕಣ್ಣಿಗೆ ಬಿತ್ತು. ತಾನು ತಪ್ಪು ಮಾಡುತ್ತಿದ್ದೇನೆ ಎಂದು ಅರಿವಿದ್ದೂ ಅಭ್ಯಾಸ ಬಿಡದೆ ಬೆಳ್ಳಿಯ ದೀಪವನ್ನು ತನ್ನ ಜೋಳಿಗೆಗೆ ಹಾಕಿಕೊಂಡ.
ಮರುದಿನ ಬೆಳಗ್ಗೆ ಬೇಗನೆ ಎದ್ದು ಪಕ್ಕದ ಹಳ್ಳಿಗೆ ಹೋದ . ಅಲ್ಲಿ ಅಕ್ಕಸಾಲಿಗನೊಬ್ಬನಿಗೆ ಬೆಳ್ಳಿಯ ದೀಪವನ್ನು ಮಾರಲು ಪ್ರಯತ್ನಿಸಿದಾಗ ಆತನಿಗೆ ಅನುಮಾನ ಬಂದು ಊರಿನ ಆರಕ್ಷಕರಿಗೆ ಸುದ್ದಿ ಮುಟ್ಟಿಸಿದ . ವಿಷಯ ತಿಳಿದ ಆರಕ್ಷಕರು ಈತನನ್ನು ಬೆಳ್ಳಿಯ ದೀಪದೊಡನೆ ಇಗರ್ಜಿಗೆ ಬಂದು ಪಾದ್ರಿಯನ್ನು ವಿಚಾರಿಸಿ ಇವು ತಮ್ಮದಲ್ಲವೇ ಈತ ಕದ್ದಿದ್ದಾನಲ್ಲವೇ ಎಂದರು . ಆತನಿಗೆ ಈಗ ಸರಿಯಾಗಿ ಸಿಕ್ಕಿಬಿದ್ದೆ ಅಷ್ಟೆಲ್ಲಾ ಪ್ರೀತಿ ತೋರಿ ಉಪಚರಿಸಿದ ಪಾದ್ರಿಗೆ ನಾನು ಮೋಸಮಾಡಿ ಕದ್ದಿದ್ದಕ್ಕೆ ದೇವರು ಇನ್ನೂ ಕಠಿಣ ಶಿಕ್ಷೆ ಕೊಡಲಿದ್ದಾನೆ ಎಂದು ಅನಿಸಿತು . ಆದರೆ ಪಾದ್ರಿಯು ಆರಕ್ಷಕರಿಗೆ ಇದು ಈತ ಕದ್ದಿದ್ದಲ್ಲ ನಾನೇ ಕೊಟ್ಟಿದ್ದು, ಅಲ್ಲಯ್ಯಾ ಯುವಕ ಇದರ ಜೊತೆ ಒಂದು ಬೆಳ್ಳಿಯ ಬಟ್ಟಲು ಕೊಟ್ಟಿದ್ದೆ ಅದು ಏಕೆ ಅಲ್ಲಿಯೇ ಬಿಟ್ಟು ಹೋದೆ ಇದೋ ತೆಗೆದು ಕೋ ಎಂದು ನೀಡಿದ. ಆರಕ್ಷಕರು ಪಾದ್ರಿಗೆ ನಮಿಸಿ ತಮ್ಮ ತಪ್ಪು ಕಲ್ಪನೆಗೆ ಕ್ಷಮೆ ಕೋರುತ್ತಾ ನಿರ್ಗಮಿಸಿದರು . ಕಳ್ಳತನ ಮಾಡಿದ್ದ ಆತನ ಕಣ್ಣಲ್ಲಿ ನೀರು ಹರಿಯುತ್ತಿತ್ತು . ಇಗರ್ಜಿಗೆ ಹೋಗಿ ಪಾದ್ರಿಯ ಕಾಲಿಗೆ ಬಿದ್ದು ತನಗೆ ಈಕೆ ಪೊಲೀಸರಿಗೆ ಒಪ್ಪಿಸಲಿಲ್ಲ , ನಾನು ಕ್ಷಮೆ ಇಲ್ಲದ ತಪ್ಪನ್ನು ಎಸಗಿದ್ದೇನೆ . ದೇವಾಲಯದಲ್ಲಿ ಕಳ್ಳತನ ಮಾಡಿದ್ದೇನೆ ನಿನ್ನ ಪ್ರೀತಿ ವಿಶ್ವಾಸಕ್ಕೆ ದ್ರೋಹ ಮಾಡಿದ್ದೇನೆ ಎಂದ. ನನಗೆ ಕ್ಷಮೆ ಇಲ್ಲ ಎಂದ ಆಗ ಪಾದ್ರಿಯು ದೇವರ ಸೃಷ್ಟಿಯಲ್ಲಿ ಎಲ್ಲರೂ ಮಕ್ಕಳೇ , ಮಕ್ಕಳ ತಪ್ಪನ್ನು ಹಿರಿಯರು ಕ್ಷಮಿಸುವಂತೆ ದೇವರು ಕರುಣಾಮಯನಾಗಿ ಎಲ್ಲರನ್ನೂ ಸಲಹುತ್ತಾನೆ , ದಯಾವಂತನಾದ ಆತನಿಗೆ ಸಹಾನುಭೂತಿಯಲ್ಲಿ ಆಯ್ಕೆ ಇಲ್ಲ. ಅದು ಎಲ್ಲರ ಮೇಲೂ ಒಂದೇ . ಆತ ಶ್ರೀಮಂತನಿರಲಿ ದರಿದ್ರನಿರಲಿ , ಕಳ್ಳನಿರಲಿ ಅಥವಾ ಸುಳ್ಳನಿರಲಿ . ಆತನ ಕೃಪೆ ಎಲ್ಲರ ಮೇಲೆ ಇದೆ ಎಂದು ನುಡಿದ.
ಪಾದ್ರಿಯ ಕ್ಷಮಾ ಗುಣ ಈತನನ್ನು ಕರಗಿಸಿತ್ತು . ಆತ ಕಳ್ಳತನವನ್ನು ಬಿಟ್ಟು ಇಗರ್ಜಿಯಲ್ಲಿ ಸೇವಕನಾಗಿ ಸತ್ಯವಂತನಾಗಿ ತನ್ನ ಉಳಿದ ಜೀವನ ದೇವರ ಸೇವೆಯಲ್ಲಿ ಕಳೆದು ಧನ್ಯನಾದ . ಕ್ಷಮೆಯ ಹಿರಿತನ ಆಕಾಶಕ್ಕಿಂತಲೂ ದೊಡ್ಡದು.
- ಚೇತನ ಭಾರ್ಗವ
