ಬಾಬಣ್ಣನ ಮೌನ ತುಂಬಾ ಮಾತನಾಡುತ್ತಿತ್ತು. ಒಂದು ಕಾಲದಲ್ಲಿ ತನ್ನ ಒಡಹುಟ್ಟಿದವರನ್ನು ದಡ ಸೇರಿಸಿದ ನಂತರ ತನ್ನ ಜೀವನ ಶುರು ಮಾಡಿದ್ದ, ಆದರೆ ಸಹಾಯ ಪಡೆದ ಸಹೋದರ ಸಹೋದರಿಯರು ಮರೆತುಬಿಟ್ಟಿದ್ದರು, ಬಾಬಣ್ಣನ ಮನಸ್ಸು ಎಲ್ಲಿತನ್ನಿಂದ ತಪ್ಪಾಯಿತು ಎಂದು ಹುಡುಕುತ್ತಿತ್ತೋ ಏನೋ..ಪ್ರೊ.ರೂಪೇಶ್ ಪುತ್ತೂರು ಅವರ ಕುಟುಂಬ ಸಂಗಮ ಒಳ್ಳೆ ಕತೆ ಮುಂದೆ ಓದಿ…
“ರೂಪಾ ಪುತ್ತೂರಲ್ಲಿದ್ಯಾ?”….”ಇದ್ದೇನೆ ಮಾರೆ”
“ನಂಗೆ ಕೈ ಏಟಾಗಿದೆ, ನಾಳೆ #ನರಹರಿ_ಬೆಟ್ಟದಲ್ಲಿ ನಮ್ಮ ಕುಟುಂಬ ಸಂಗಮ/family get together ಇದೆ. ತುಂಬಾ ಕಷ್ಟ ಪಟ್ಟು ತಂದೆಯ 15 ಸಹೋದರ ಸಹೋದರಿಯರನ್ನು ಸೇರಿಸಿದ್ದೇನೆ. ಅಡಿಕ್ಕೆ ಮರದ ಸೋಗೆ ಕೊಯ್ಯುವಾಗ ಬಲಗೈಗೆ ಪೆಟ್ಟು ಬಿತ್ತು. ಡ್ರೈವ್ ಮಾಡಕ್ಕೆ ಆಗಲ್ಲ. ನೀನು ಡ್ರೈವರ್ ಆಗಿ ಬಾರಾ. ಸಂಗಮದಲ್ಲಿ ಯಾವುದೇ ಬಾಂಬ್ ಸಿಡಿಯಬಹುದು. ನಿನಗೆ ನಮ್ಮ ಕುಟುಂಬದ ಬಗ್ಗೆ ಚೆನ್ನಾಗಿ ಗೊತ್ತು. ಬರ್ತಿಯಲ್ಲಾ ಖದೀಮಾ…” ಸತೀಶ್ಚಂದ್ರನ ಮಾತು ಬೇರೆ.
ಸರಿಯಪ್ಪಾ… ಎಂದು ಹೇಳಿ ನನ್ನ ಕೆಲ ಕೆಲಸ ಬದಿಗೊತ್ತಿ ಅಂದು ಅವನ #ಡ್ರೈವರ್ ಆದೆ. ಅವನ ಕೈಗೆ ಸ್ವಲ್ಪ ಜಾಸ್ತಿಯೇ ಏಟಾಗಿತ್ತು. ಮುಂದಿನ ಸೀಟಿನಲ್ಲಿ ಅವನಪ್ಪ ಬಾಬಣ್ಣ ಕುಳಿತ್ತಿದ್ದರು. ” ಒಬ್ಬರಿಗೆ ಇಷ್ಟು ರೂಪಾಯಿ ಅಂದ ಮೇಲೆ ಮೂರು ಜನರಿಗೆ ಅವನು, ಹದಿನೈದು ಜನರ ದುಡ್ಡು ಯಾಕೆ ಕೊಟ್ಟ? ದೊಡ್ಡಸ್ತಿಕೆ ತೋರಿಕೆಯಾ? ಇದು ಸಂತೋಷವಾಗಿ ಸೇರಬೇಕಾದ ಹಬ್ಬ, ಅಲ್ಲಿ ನಾನು ಕಾಸಿನವ ನೀವೆಲ್ಲಾ ಮೂರು ಕಾಸಿನವರು ಅಂತ ತೋರಿಸಿದ್ದಾನಲ್ಲ ನೀಲಪ್ಪ. ಹದಿಮೂರು ಜನ ಒಡಹುಟ್ಟಿದವರು, ನೀಲಪ್ಪನ ಬಗ್ಗೇ ನನಗೆ ಹೇಳ್ತಿದ್ದಾರೆ”. ಸತೀಶ್ಚಂದ್ರನ ತಂದೆ ಬಾಬಣ್ಣ ಮೂರನೇ ಹಿರಿಯ, ಇಬ್ಬರು ಅವನಿಗೆ ದೊಡ್ಡಮ್ಮ, ನೀಲಪ್ಪ ಅವನ ಚಿಕ್ಕಪ್ಪ -ಹಿರಿತನದಲ್ಲಿ ಹದಿಮೂರನೇಯವರು. ನೀಲಪ್ಪನ ಪ್ರತೀ ಏಳಿಗೆ , ಸಂಕಟದಲ್ಲಿ ಜೊತೆ ಇದ್ದವರು ಬಾಬಣ್ಣ ಮಾತ್ರ.

ನರಹರಿ ಬೆಟ್ಟ ಫೋಟೋ ಕೃಪೆ : Flicker
“ಅಪ್ಪಾ ನೀವಲ್ಲಿ ಸುಮ್ಮನೆ ಇರಬೇಕು. ಅಲ್ಲಿರುವ ಸಂಚಾಲಕ ಜೆನರೇಷನ್ ಹುಡುಗರಿಗೆಲ್ಲಾ ನಿಮ್ಮನ್ನು ಗೊತ್ತೇ ಇಲ್ಲ , ಯಾರನ್ನೂ ಸರಿಯಾಗಿ ಅರಿಯದವರು.. ಹೇಗೋ ವೈಮನಸ್ಯದಿಂದ ಎಲ್ಲಾ ಬೇರೆ ಬೇರೆ ಹೋದವರನ್ನು ಕಷ್ಟಪಟ್ಟು ಸೇರಿಸುತ್ತಾ ಇದ್ದೀವಿ.ಅವರೊಂದಿಗೆ ನಾನೇ ಅಡ್ಜೆಸ್ಟ್ ಮಾಡ್ತಿದ್ದೇನೆ. ಏನಾದರೂ ಮಾಡಲಿ, ನಮಗೆ ಎಲ್ಲರನ್ನೂ ಒಂದ್ಸಲ ನೋಡಬಹುದು. ದಯವಿಟ್ಟು ಕಾರ್ಯಕ್ರಮ ಮುಗಿವವರೆಗೆ ಸುಮ್ಮನಿರ್ತೀರಾ..” ಅಂದ ಹಿಂದಿನಿಂದ ಸತೀಶ. ಆದರೂ ಅಲ್ಲಿ ತಲುಪುವವರೆಗೂ ಬಾಬಣ್ಣ ಮಾತನಾಡುತ್ತಲೇ ಇದ್ದರು. ಆ ಮಾತುಗಳಲ್ಲಿ ಸತ್ಯ ಹಾಗೂ ನ್ಯಾಯ ಇದ್ದುದರಿಂದ ಅದು ಚುಚ್ಚುವಂತಿತ್ತು.
ಊರು ಬಿಟ್ಟು ಹೋಗಿ, ದೊಡ್ಡಕ್ಕನ ಮದುವೆ ನಂತರ, ತನ್ನ ತಂದೆಯ ಮರಣಾನಂತರ ಮುಂಬಾಯಿಯಿಂದ ಮರಳಿ ಬಂದವರೇ ಹಳೇ ಈ ಎಸ್ಸೆಸ್ಸೆಲ್ಸಿ ಉತ್ತೀರ್ಣನಾದ ಬಾಬಣ್ಣ. ಸಹೋದರ ಸಹೋದರಿಯರ ವಿದ್ಯಾಭ್ಯಾಸ, ಚಿಕ್ಕ ಜಮೀನು, ಒಂದು ಅಂಗಡಿ ನಡೆಸುತ್ತಾ , ಅವರೆಲ್ಲರ ಮದುವೆ ಮುಗಿಸಿ, ಆಸ್ತಿ ಎಲ್ಲರಿಗೂ ಹಂಚಿ ತನ್ನ ಪಾಲನ್ನು ಮಾರಿ, ಒಳ ಗ್ರಾಮದಲ್ಲಿ ಎರಡೇಕರೆ ಖಾಲಿ ಜಮೀನನ್ನು ಖರೀದಿಸಿ, ಹರೆಯದಾಟಿ ಒಬ್ಬ ಅನಾಥೆಯನ್ನು ಮದುವೆಯಾಗಿ, ಆ ಭೂಮಿ ಹಸಿರುಬನ ಮಾಡಿದವರು ಇದೇ ಬಾಬಣ್ಣ ಎಂಬ ಸತೀಶ್ಚಂದ್ರನ ತಂದೆ ಈವಾಗ ೮೭ಹರೆಯ.
ಮಿಲಿಟರಿಯಿಂದ ಕದ್ದು ಮುಚ್ಙಿ ಓಡಿ ಬಂದ, ನೀಲಪ್ಪನನ್ನು , ಸೈನ್ಯದಲ್ಲಿದ್ದ ತನ್ನ ಮಿತ್ರರ ಸಹಾಯದಿಂದಸ್ಪಷ್ಟವಾದ ವಿನಂತಿಯ ಮಾಹಿತಿ ಸಮರ್ಪಿಸಿ, ವಿವರಿಸಿ, ಕೋರ್ಟ್ ಮಾರ್ಷಲ್ ನಿಂದ ತಪ್ಪಿಸಿ, ಮುಂಬಯಿಯ ಒಬ್ಬ ನಟನ ಸಮಾಜ ಕಾರ್ಯದ ಸೊಸೈಟಿಯಲ್ಲಿ ಕೆಲಸ ಕೊಡಿಸಿದ್ದು ಇದೇ ಬಾಬಣ್ಣ. ನಂತರ ನೀಲಪ್ಪರ ಮೂವರು ಮಕ್ಕಳು ಹಾದಿ ತಪ್ಪಿದಾಗ, ಅವರಿಂದಾದ ಸಮಸ್ಯೆ ಹೇಗಾದರೂ ಹತೋಟಿಗೆ ತರಿಸಲು ಬಾಬಣ್ಣನಿಗೇ ಮುಂಬಾಯಿಗೆ ಹಲವು ಬಾರಿ ಹೋಗಿ ಬರಬೇಕಾಯಿತು. ಎರಡು ಗಂಡು ಮಕ್ಕಳ ನಾರ್ಥ್ ಇಂಡಿಯನ್ ಸೊಸೆಯಂದಿರು ನೀಲಪ್ಪನನ್ನು ಅವರದೇ ಮನೆಯಿಂದ ಹೊರದಬ್ಬಿ, ಗಂಡು ಮಕ್ಕಳು ಸುಮ್ಮನಿದ್ದಾಗ, ಮಗಳು ಒಬ್ಬ ಹರಿಯಾಣದವನೊಂದಿಗೆ ಓಡಿ ಹೋಗಿ ವರುಷಗಳ ನಂತರ ಮರಳಿ ಫೆವಿಲಿಯನ್ ತವರುಮನೆಗೆ ಬಂದಾಗ, ಬಾಬಣ್ಣನೇ ಮಾತನಾಡಕ್ಕೆ ಹೋಗಬೇಕಾಯಿತು.
ಮೂವರೂ ಮಕ್ಕಳು ಮನೆ ಬಿಟ್ಟು ದೂರವಾದ ಸಮಯ ನೀಲಪ್ಪರಿಗೆ 55 ವಯಸ್ಸು , ನಟ ತೀರಿ ಹೋಗಿ ಕೆಲಸ ಇಲ್ಲದಾಗಿತ್ತು. ಸಂಕಟ ಮರೆಯಲು ನೀಲಪ್ಪಣ್ಣ ಮುಂಬಾಯಿಯ ಒಂದು ಸಂಜೆ ಕಾಲೇಜಿನಲ್ಲಿ ಕಲಿತು, ಎಲ್ ಎಲ್ ಬಿ ಮಾಡಿದರು. ಆ ಸಮಯದಲ್ಲಿ ಕಲಿಯುವವರೆಗೂ ಬಾಬಣ್ಣ ಆರ್ಥಿಕ ಸಹಾಯ ಮಾಡಿದರು. ಬಾಬಣ್ಣನಿಗೆ ಪರಿಚಯ ಇರುವ ನಾಸಿಕ್ ನ ಒಬ್ಬ ಹಿರಿಯ ವಕೀಲನ ಕೆಳಗೆ practice /ವೃತ್ತಿ ಅಭ್ಯಾಸಕ್ಕೆ ಅನುವು ಮಾಡಿಸಿದರು. ಕೆಲ ವರುಷದಲ್ಲಿ ಆ ಹಿರಿಯ ವಕೀಲನಿಗೆ ಮೋಸ ಮಾಡಿ, ನೀಲಪ್ಪ ಅವರದೇ ಆಫೀಸು ತೆರೆದ ವಿಷಯದಲ್ಲಿ ಬಾಬಣ್ಣ ಕ್ರೋಧಿತರಾಗಿ ದೂರವಾದರು. ಹತ್ತು ಹದಿನೈದು ವರುಷದಲ್ಲಿ ನೀಲಪ್ಪಣ್ಣ ಎಕ್ಸ್ ಪ್ರೆಸ್ ಆಗಿ ಹಣವಂತರಾದರು.
ಆದರೆ ಇಂದು ಕುಟುಂಬ ಸಂಗಮದಲ್ಲಿ, ಸತೀಶನ ಜೊತೆ ಇದ್ದ ಅವನ ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಮ್ಮರ ಮಕ್ಕಳಿಗೆ, ಸ್ಟೇಜ್ ನಲ್ಲಿ ನೀಲಪ್ಪಣ್ಣನನ್ನು ಕೂರಿಸಬೇಕು ಎಂಬ ಒಕ್ಕೊರಲು. ಅದರ ಮೇಲೆ ಸಂಗಮಕ್ಕೆ ಹೆಚ್ಚು ದುಡ್ಡು ಕೊಟ್ಟಿದ್ದೂ ನೀಲಪ್ಪಣ್ಣ. ಸ್ಟೇಜ್ ನಲ್ಲಿ ನೀಲಪ್ಪಣ್ಣ ಕೂರುವ ವಿಷಯ ಬಾಬಣ್ಣನಿಗೆ ಗೊತ್ತಿರಲಿಲ್ಲ. 90 ದಾಟಿದ ಇಬ್ಬರು ದೊಡ್ಡಕ್ಕನಿಗೆ ಸನ್ಮಾನವಾದುದರಿಂದ ಅವರಿಬ್ಬರೂ, ಹಾಗೂ ಅವರ ಕುಟುಂಬದ ಸಮಾಜ ಪ್ರತಿನಿಧಿ ಒಬ್ಬ , ಹೀಗೆ ಮೂರು ಚೇರು ಸ್ಟೇಜಿನಲ್ಲಿರಬೇಕಿತ್ತು.

ನರಹರಿ ಬೆಟ್ಟ ಫೋಟೋ ಕೃಪೆ : thequint
11 ಗಂಟೆಗೆ ಕಾರ್ಯಕ್ರಮ, ನಾನು ಕಾರೊಳಗೇ ಮರದ ನೆರಳಲ್ಲಿ ಇದ್ದೆ. ಸತೀಶ್ ಎಳೆದು ಕರೆದು ಒಳಗಡೆ ಕೂಳ್ಳಿರಿಸಿದ. ನಾನು ಅತ್ಯಂತ ಹಿಂಬದಿಯ ಕೊನೆಯ ಸೀಟಿನಲ್ಲಿ ಕೂತೆ. ಬಾಬಣ್ಣ ಸ್ಟೇಜಿನ ಕೆಳಗಿನ ಮುಂದಿನ ಸಾಲಿನ ಕುರ್ಚಿಯಲ್ಲಿ ಕೂತಿದ್ದು, ಒಂದೊಂದು ತಲೆಮಾರಿನ ಮಕ್ಕಳು ಬಂದು ಅವರಿಂದ ಆಶೀರ್ವಾದ ಪಡೆಯಲು ಸಾಲು ನಿಂತಿದ್ದು ಕಂಡೆ. ಏನೇನೋ ನಡೆಯುತ್ತಿತ್ತು, ಎಲ್ಲವೂ ಕಾಣುತಿತ್ತು ಆದರೆ ಅರ್ಥವಾಗುತ್ತಿರಲಿಲ್ಲ. ಒಬ್ಬ ಚಿಕ್ಕಪ್ಪ ಬಾಬಣ್ಣನನ್ನು ಬಿಟ್ಟು ಬೇರೆ ಎಲ್ಲಾ ಸಹೋದರ-ಸಹೋದರಿಯರನ್ನು ಒಂದು ಬದಿಗೆ ಕರ್ಕೊಂಡು ಹೋಗಿ ಒಂದು ಬಾಕ್ಸ್ ಕೊಡುವುದು ಕಂಡೆ. ಏನೋ ಸ್ನೇಹಾರ್ಪಣೆ ಎಂದು ತಿಳಿದೆ.
ಕಾರ್ಯಕ್ರಮ ಶುರುವಾಯಿತು. #ಸಮಾಜ_ಪ್ರತಿನಿಧಿ ಜೊತೆ ನೀಲಪ್ಪಣ್ಣನ ಆಗಮನ. ಪ್ರತಿನಿಧಿ ಸ್ಟೇಜಿನಲ್ಲಿ ಹತ್ತಿ, ಸೀಟು ಐದು ಮಾಡಿದ!!!!!! , ಬಾಬಣ್ಣ , ಎರಡು ಹಿರಿಯ ಸಹೋದರಿ, ಪ್ರತಿನಿಧಿ ಸ್ಟೇಜಿಗೆ ಆಹ್ವಾನ. ಐದನೇಯದಾಗಿ ನೀಲಪ್ಪಣ್ಣನನ್ನು ಪ್ರತಿನಿಧಿ ಆಹ್ವಾನಿಸಿದರು. ಸ್ಟೇಜಿನಲ್ಲಿ ದೀಪ ಹಚ್ಚುವುದು, ಇಬ್ಬರು ಅಕ್ಕಂದಿರಿಗೆ ಸನ್ಮಾನ, ಗೌರವ ಸಮರ್ಪಣೆ , ಶಾಲು ಹೊದಿಸುವುದು, ಅವರ ಕುಟುಂಬದಲ್ಲಿ ವಿದ್ಯಾಬ್ಯಾಸದಲ್ಲಿ ಏಳಿಗೆ ಪಡೆದ ಮಕ್ಕಳಿಗೆ ಬಹುಮಾನ ಎಲ್ಲವೂ ನೀಲಪ್ಪಣ್ಣನ ಕೈಯಿಂದ… ಪ್ರತಿನಿಧಿ ನೀಲಪ್ಪಣ್ಣನನ್ನೂ , ನೀಲಪ್ಪಣ್ಣ ಪ್ರತಿನಿಧಿಯನ್ನು ಹೊಗಳುವುದೇ ಕಾರ್ಯಕ್ರಮವಾಯಿತು. ಸ್ಟೇಜಿನಲ್ಲಿ ಬಾಬಣ್ಣ, ದೊಡ್ಡಕ್ಕ , ಚಿಕ್ಕಕ್ಕ ಡಮ್ಮಿ….
ಬಹುಮಾನ ವಿತರಣೆಯ ನಂತರ ,ಮನೋರಂಜನ ಕಾರ್ಯಕ್ರಮ ನಡೆಯುತ್ತಿದ್ದಂತೆ ಪ್ರತಿನಿಧಿ ಹಾಗೂ ನೀಲಪ್ಪಣ್ಣ ಕಾಣದಂತೆ ಮಾಯವಾದರು. ಉಳಿದ ಸಹೋದರರು ಒಬ್ಬೊಬ್ಬರಾಗಿ ಬಾಬಣ್ಣನನ್ನು ದೂರ ಕರೆದುಕೊಂಡು ಹೋಗಿ, ಒಂದು ಕುರ್ಚಿ ಹಾಕಿಸಿ ಒಬ್ಬರ ನಂತರ ಒಬ್ಬರು ಸರದಿಯಂತೆ ಹೋಗಿ ಏನೋ ಗೊಣಗಿ ಬರುತ್ತಿದ್ದರು. ಒಬ್ಬೊಬ್ಬರೂ ಹೋಗಿ ಬಂದಂತೆ ಬಾಬಣ್ಣನ ಮುಖ ಕೆಂಪು ಬಣ್ಣಕ್ಕೂ, ಗಲ್ಲಗಳು , ಕೈಗಳು ನಡುಗಿತ್ತಿದ್ದವು.
ಕಾರ್ಯಕ್ರಮದ ಕೊನೆ ಸಂಜೆ ೭ ಗಂಟೆ.
” ಯಾರಿಗಾದರೂ suggetions ಇದೆಯಾ?” ಎಂದು #ಕಾರ್ಯಕ್ರಮ_ಸಂಚಾಲಕ generation ಯುವಕರು ಕೇಳಿದ್ದೇ ತಡ. ಬಾಬಣ್ಣ ಮುಂದೆ ಬಂದು
” ನೋಡಿ ನೀವು ಮಾಡಿದ ತಪ್ಪು ,ಒಬ್ಬರಿಗಿಷ್ಟು ದುಡ್ಡು ಅಂತಹೇಳಿ, ನೀಲಪ್ಪ ಎಷ್ಟು ಜನ ಬರ್ತಾರೆ ಅಂತ ಹೇಳದೆ, ಜಾಸ್ತಿ ದುಡ್ಡು ಕೊಟ್ಟ. ಇದನ್ನು ನೋಡಿದ ನಮ್ಮ ಕುಟುಂಬದಲ್ಲಿ ಬಡತನದಲ್ಲಿರುವ ಕೆಲವರು ಬರಲೇ ಇಲ್ಲ. ಅವರೂ ನಮ್ಮವರಲ್ಲವೇ? ದುಡ್ಡಿಲ್ಲದಿದ್ದರೂ ಬನ್ನೀ ಎನ್ನಲು ನಿಮಗೇನು ಸಂಕಟವಾಗಿತ್ತು? ಎರಡನೇಯದು ನೀಲಪ್ಪನಿಗಿಂತ ಹಿರಿಯರನ್ನು ಕೆಳಗೆ ಕೂರಿಸಿ, ಅವನನ್ನು ಮೇಲೆ ಕೂರಿಸುವುದೂ ಅಲ್ಲದೇ ಯಾವನೋ ನಮ್ಮ ಕುಟುಂಬದವನಲ್ಲದ ಪ್ರತಿನಿಧಿಯನ್ನು ಇಲ್ಲಿ ಲಾಟುಪುಟು ಮಾತನಾಡಿಸುದು, ಯಾವ ಕುಟುಂಬ ಸಂಗಮ?” ಎಂದು ತನ್ನ ಸಹೋದರ ಸಹೋದರಿಯತ್ತ ನೋಡಿದರು. ಆದರೆ ಅವರ್ಯಾರು ಬಾಬಣ್ಣನ ಪರ ಅಥವಾ ವಿರೋಧ ಮಾತನಾಡದೆ ಮೌನವಾದರು. ಎಲ್ಲರೂ ಬಾಬಣ್ಣನ ತಲೆಗೆ ಬೆಂಕಿ ಹೊತ್ತಿಸಿ, ಕೊನೆಗೆ ಸುಮ್ಮನೆ ಅಮಾಯಕರಂತೆ ಕೂತಿದ್ದರು.ಉಳಿದೆರಡು ತಲೆಮಾರಿನ ಹುಡುಗ ಹುಡುಗಿಯರು ಬಾಬಣ್ಣನ ಮೇಲೆ ಮಾತಿನ ಪ್ರಯೋಗ ನಡೆಸತೊಡಗಿದರು.
” ಯೂಸ್ ಲೆಸ್ಸ್…ಮ್ಯಾಡ್… ಅನ್ ಎಜುಕೇಟೆಡ್…” ಎನ್ನುತ್ತಾ ಮುಂದೆ ಬರತೊಡಗಿದಾಗ, ನಾನೂ ಸತೀಶನೂ ಸಮಯೋಚಿತವಾಗಿ ಬಾಬಣ್ಣನನ್ನು ಆವರಿಸಿ, ಕಾರ್ ಪಾರ್ಕಿಂಗ್ ಗೆ ತಂದಾಗ ಸತೀಶನ ಗಾಯದಿಂದ ನೆತ್ತರು ಬರುತ್ತಿತ್ತು. ಬಾಬಣ್ಣನನ್ನೂ ಸತೀಶನ ಮನೆಯವರನ್ನು ಕಾರು ಹತ್ತಿಸಿ ಆಸ್ಪತ್ರೆಗೆ ಹೋಗಿ ಬ್ಯಾಂಡೇಜು ಹಾಕಿಸಿ, ಅವನ ಮನೆ ತಲುಪುವವರೆಗೂ ಬಾಬಣ್ಣ ಮೌನವಾಗಿದ್ದರು.
ಒಂದು ಕಾಲದಲ್ಲಿ ತನ್ನ ಒಡಹುಟ್ಟಿದವರನ್ನು ದಡ ಸೇರಿಸಿದ ನಂತರ ತನ್ನ ಜೀವನ ಶುರು ಹಚ್ಚಿದ, ನಂತರದ ದಿನಗಳಲ್ಲಿ ಎಲ್ಲಾ ಸಹೋದರ ಸಹೋದರಿಯರಿಗೂ ತನ್ನಿಂದಾದ ಸಹಾಯ ಕೊಟ್ಟ ಬಾಬಣ್ಣನ ಮನಸ್ಸು ತನ್ನ ತಪ್ಪನ್ನು ಹುಡುಕುತಿತ್ತೋ ಏನೋ..
ಬಾಬಣ್ಣನ ಮೌನ ತುಂಬಾ ಮಾತನಾಡುತಿತ್ತು. ಕಣ್ಣೀರು ಬಂದೇ ಇರಲಿಲ್ಲ. ಅಂದು ಒಬ್ಬೊಬ್ಬ ಸಹೋದರ ಸಹೋದರಿಯರಿಗೂ ಮೊಬೈಲ್ ಫೋನನ್ನು ನಿಲಪ್ಪಣ್ಣ ಇನ್ನೊಬ್ಬ ಸಹೋದರನ ಮುಖಾಂತರ ಕೊಟ್ಟು ಅವರನ್ನೆಲ್ಲಾ ತನ್ನ ಪಾಕೇಟಿಗೆ ಹಾಕಿ, ಬಾಬಣ್ಣನನ್ನು ಚಕ್ರವ್ಯೂಹದ ಒಳಗೆ ಸಿಲುಕಿಸಿ..
ಈ ಕಾರ್ಯಕ್ರಮ ಹಾಳಾಗಲು ಕಾರಣ ಬಾಬಣ್ಣ ಎಂದು ಸಾಬೀತುಪಡಿಸುವುದರಲ್ಲಿ ತನ್ನ ಕೈ ಚಳಕ ತೋರಿದ್ದರು ನೀಲಪ್ಪಣ್ಣ. ಕಾರಿನ ಕೀ ಅವನಿಗೆ ಮರಳಿಸುವಾಗ,ಮನೆಯ ವರಾಂಡದ ಈಸೀ ಚೇರಿನಲ್ಲಿ ಕುಳಿತು ಬಾಬಣ್ಣ ಹೇಳಿದ್ದು…
” ಸಮ್ಮಾನ (ಉಡುಗೊರೆ) ಕೊಟ್ಟು ಬುಟ್ಟಿಯಲ್ಲಿ ಹಾಕುವ ಚಪಲ ನನಗಿಲ್ಲ ಮಕ್ಕಳೇ…. #ಪ್ರೀತಿ ಕೊಟ್ಟು ಹೃದಯ ತುಂಬಿಸುವ ಅನ್ ಎಜುಕೇಷನ್ , ಸತ್ಯ ಹೇಳಿ ಮನಸ್ಸು ಶುಚಿಗೊಳಿಸುವ ಮ್ಯಾಡ್ ನೆಸ್. ಎಲ್ಲಾ ಕುಟುಂಬದ ಸದಸ್ಯರೂ ಅನ್ಯೋನ್ಯವಾಗಿರಬೇಕೆಂಬ ಯೂಸ್ ಲೆಸ್ ನೆಸ್ ಮಾತ್ರ ನನ್ನಲ್ಲಿದೆ” ಎಂದರು.
ಅಷ್ಟೋತ್ತಿಗೆ ಈ ಯಜಮಾನರು ಎಲ್ಲಿ ಹೋಗಿದ್ದರು ಎಂಬ ಪ್ರಶ್ನೆಗಳೊಂದಿಗೆ ಅವರ ನಾಯಿ ಸುಕ್ಮಿ ಅವರನ್ನು ಅಪ್ಪಿ ಆಗಿತ್ತು.
ಶುಭದಿನ.
ನಿಮ್ಮವ ನಲ್ಲ
*ರೂಪು*
- ಪ್ರೊ.ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)
