ಪ್ರೇಮ-ಗೀಮ ಅಂದ್ರೆಗಿನ ಸಮ್ಮನೆ ಅಲ್ಲ!



‘ಡಾಕ್ಟರ್‌ ಜಿ಼ವಾಗೋ’ ಕವಿತೆಗಳನ್ನ ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಕೇಶವ ಮಳಗಿ ಅವರು, ಮುಂದೆ ಓದಿ…

* ಬೋರಿಸ್‌ ಪಾಸ್ತರ್‌ನಾಕ್‌: Boris Pasternak

ಫೋಟೋ ಕೃಪೆ : theguardian

ಗಾಳಿ

ಇಲ್ಲಿಗೆ ನನ್ನ ಕಥೆ ಮುಗಿದಂತೆ:
ನೀನು ಬದುಕಿಯೇ ಉಳಿವೆ.
ಗಾಳಿ ಗುಟುರಿ, ಗೋಳಿಟ್ಟು
ಕಾಡು, ಮನೆಮಾರು ಅಲುಗಾಡಿಸುತಿದೆ.
ಬರಿಯ ಪೈನ್ ಮರವನಷ್ಟೇ ಅಲ್ಲ,
ಕಣ್ಣು ಕಾಣುವವರೆಗೂ ಹಬ್ಬಿದ
ಮಲೆನಾಡು, ತೀರದಲಿ ತಂಗಿದ
ಹಾಯಿಯಿಲ್ಲದ ಹಡಗಿನೊಡಲು ಅಲುಗುವ ಹಾಗೆ
ಎಲ್ಲವನೂ ಹಿಡಿದು ಒಗ್ಗೂಡಿಸಿ ಗುದ್ದುತಿದೆ.
ಹೀಗೆಲ್ಲವನೂ ಜಪ್ಪಿಸಿ ನಡುಗಿಸುತಿರುವುದು
ಗುರಿಯಿರದ ಗೂಳಿಮದ ಅಥವ ಹುಡುಗಾಟಿಕೆಯಿಂದಲ್ಲ,
ಅದಕೆ ನಿನ್ನ ಹುಡುಕಾಟ.
ಈ ಅಬ್ಬರಿಕೆ
ನಿನ್ನ ಕೊರಗಲ್ಲಿ ಹಾಡಿದ ಲಾಲಿಹಾಡು!
*
ಉನ್ಮಾದ

ಬಳಕು ಬಳ್ಳಿ ಬಳಸಿದ ವಿಲೋ ಪೊದೆಯಡಿ
ಮಳೆಗಾಳಿ, ಗುಡುಗು-ಸಿಡಿಲಿಂದ ಆಸರೆ ಬಯಸಿ ಓಡಿದೆವು.
ನೀಳ ನಿಲುವಂತಿ ನಮ್ಮ ಭುಜವನು ಬಳಸಿತ್ತು,
ನನ್ನ ತೋಳು ನಿನ್ನನು ಬಾಚಿ ಬಿಗಿದಿತ್ತು.
ನನ್ನ ಈ ಊಹೆ ನಿಜವಲ್ಲ! ದಟ್ಟ ಮರಗಿಡವನೆಲ್ಲ
ಬಾಚಿ ತಬ್ಬಿರುವುದೆಲ್ಲ ಬಳ್ಳಿಯಲ್ಲವೇ ಅಲ್ಲ; ಬಯಕೆ, ಉನ್ಮಾದ!
ಹಾಗೆಂದೇ, ಬಾ ನೆಲಕೆ ನಿಲುವಂಗಿ ಹಾಸೋಣ
ಹಾಸಿ, ತುಸುತುಸುವೇ ಒರಗೋಣ!
*
ನೀನಿಲ್ಲೆ ಇರುವೆ

ಕಿಟಕಿಯಾಚೆ ನಿಶಬ್ದ. ಬಿಸಿಲಲಿ ಬೇಯುತಿರುವ
ನಗರದಂತೆ ನೀನೂ ಇಲ್ಲೇ ಇರುವೆ.
ಇಬ್ಬರೂ ಒಂದೇ ಗಾಳಿಯನು ಹೀರುತಿದ್ದೇವೆ.
ಈಡೇರದ ಬಯಕೆಗಳೊಂದಿಗೆ ಕನಸಲ್ಲೇ
ನಗರ ಹೋರಾಡುತಿದೆ.
ಅಂಗಿಯ ಕೊರಳಪಟ್ಟಿ ಬೆವರುವ ಹಾಗೆ
ಇಟ್ಟಿಗೆಯ ಕಂಠದಲಿ ಗೋಳಿಡುತಿದೆ.
ಕಾಲುಹಾದಿಯ ನೀಳ ಮರಗಳು
ದಣಿಯುತ ನೆಲಕೆ ಬಾಗುತಿವೆ.
ಸಾಲುಮರಗಳ ನಡುವೆ ಕುಡಿಯೊಡೆದ ಹಾದಿ
ದಿನದ ಬವಣೆಗಳ ಬರೆಯಲು
ಬುವಿಯು ತೆರೆದಿಟ್ಟ ಪುಸ್ತಕದಂತಿದೆ!
*
ನಿನಗೆ ಮುಪ್ಪು ಆವರಿಸಿದಾಗ

* ವಿಲಿಯಂ ಬಟ್ಲರ್‌ ಏಟ್ಸ್‌: WILLIAM BUTLER YEATS

ಫೋಟೋ ಕೃಪೆ : krwg

ನಿನಗೆ ಮುಪ್ಪು ಆವರಿಸಿ, ಕೂದಲು ನೆರೆತು, ತುಂಬು ತೂಕಡಿಕೆಯಲಿ
ಬೆಂಕಿಯ ಬಳಿ ಗೋಣು ಬಾಗಿಸಿ ಕುಳಿತಾಗ, ಈ ಪುಸ್ತಕವ ತೆಗೆದುಕೋ,
ಓದು ನಿಧಾನದಲಿ, ಒಂದೊಮ್ಮೆ ನಿನ್ನ ಕಂಗಳು ಪಡೆದಿದ್ದ
ನವಿರು ನೋಟವ, ಅವು ಹೊಮ್ಮಿಸಿದ್ದ ಆಳದ ನೆರಳುಗಳ ಕನಸು.
ಏಸೊಂದು ಮಂದಿ ಮೆಚ್ಚಿದ್ದರು ನಿನ್ನ ಸಂತಸದ ಗಳಿಗೆಗಳ,
ದಿಟವೋ, ಸಟೆಯೋ ನಿನ್ನ ಚೆಲುವನವರು ಹೀರಿದ್ದರು,
ಆದರೊಬ್ಬ, ನಿನ್ನೊಳಗಿನ ದೈವಿಕ ತಾವನ್ನು ಆರಾಧಿಸಿದ್ದ,
ಬದಲಾದ ನಿನ್ನ ಚಹರೆಯ ಕಳವಳಗಳಿಗೆ ಒಲುಮೆ ಹರಿಸಿದ್ದ;
ಹೊಳೆವ ಸರಳುಗಳ ಬದಿಯಲಿ ಬಳುಕಿ ಬಾಗುತ ಮತ್ತೆ
ಬೆಟ್ಟದ ನೆತ್ತಿಯ ಮೇಲೆ ಹೆಜ್ಜೆಗಳ ಹಾಕುತ
ಚುಕ್ಕೆಗಳ ಗುಂಪಲ್ಲಿ ಮುಖವ ಮರೆಸಿಕೊಳುತ
ಪ್ರೀತಿ ಹೇಗೆ ಹಾರಿ ಹೋಯಿತೆಂದು ರವಷ್ಟು ಖೇದದಲಿ ಗೊಣಗಿ.

* ಡೆರಿಕ್‌ ವಾಲ್ಕಾಟ್‌: Derek Walcott


ಫೋಟೋ ಕೃಪೆ : google

ಪ್ರೀತಿಯ ಬಳಿಕ ಪ್ರೀತಿ

ಬರುವುದೊಂದು ಕಾಲ-
ಆಗ ಸಡಗರದಲಿ
ನಿನ್ನದೇ ಹೊಸಿಲಿನ ಬಳಿ
ನಿನ್ನ ಬರುವಿಕೆಯನು
ನೀನೆ ಎದುರುಗೊಂಡು
ನಿನ್ನದೇ ಕನ್ನಡಿಯಲಿ ಕಾಣುವ
ಮುಖವ ನಗುತ ಬರಮಾಡಿಕೊಳುವೆ,
ಕುಳ್ಳಿರಿ, ಉಣ್ಣಿರಿ, ಎಂದು ಹೇಳಿಕೊಳುವೆ.
ನೀನೆ ಆದ ಅಪರಿಚಿತನನು ಮತ್ತೆ ಪ್ರೀತಿಸತೊಡಗುವೆ.
ಪಾನಕ, ರೊಟ್ಟಿಯ ಕೊಡುವೆ.
ಬದುಕಿಡೀ ನಿನ್ನನು ಪ್ರೀತಿಸಿದ,
ಬೇರೊಬ್ಬರಿಗಾಗಿ ಅಸಡ್ಡೆ ಮಾಡಿದ
ಮನದಾಳದಿಂದ ನಿನ್ನನು ಅರಿತಿರುವ
ನಿನ್ನದೇ ಅಪರಿಚಿತ ಹೃದಯವನು
ಅದಕೇ ಒಪ್ಪಿಸುವೆ.
ಪುಸ್ತಕದ ಕಪಾಟಿನಿಂದ ಪ್ರೇಮಪತ್ರ,
ಭಾವಚಿತ್ರ, , ಹತಾಶೆಯ ಟಿಪ್ಪಣಿಗಳನು ಹೊರ ತೆಗೆ,
ಕನ್ನಡಿಗಂಟಿದ ನಿನ್ನದೇ ಪತ್ರಿಮೆಯನು
ಸುಲಿದು ಹಾಕು.
ಕುಳಿತುಕೋ. ನಿನ್ನ ಬದುಕಿನ ಹಬ್ಬದೂಟ ಸವಿ.
*
(ಭಾಷಾಂತರಿತ ಸ್ವೈರ ಅನುವಾದ)


  • ಕನ್ನಡಕ್ಕೆ ಅನುವಾದ : ಕೇಶವ ಮಳಗಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading