ಪ್ರತಿಯೊಂದು ಜೀವಕ್ಕೂ ಬೆಲೆಯಿದೆ ಎಂದಾಗ ಅವರು ಸತ್ತಾಗಲೂ ಬೆಲೆ ನೀಡಿ, ಹಳ್ಳಿಯಲ್ಲಿಯು ಸುವ್ಯವಸ್ಥಿತವಾದ ಒಂದು ರುದ್ರಭೂಮಿ ಅಥವಾ ಚಿತಾಗಾರ ಬೇಕು, ದೇವರಾಜಾಚಾರ್ ಅವರ ಲೇಖನಿಯಲ್ಲಿ, ಮುಂದೆ ಓದಿ…
ಸಾವಿನ ಸುದ್ದಿ ತಿಳಿದ ತಕ್ಷಣ ನಮ್ಮ ಮೊದಲ ಪ್ರತಿಕ್ರಿಯೆ ಹೀಗಿರುತ್ತೆ. ಹೌದಾ? …ಅಯ್ಯೋ, ಪಾಪ… ಎಂತಹ ಒಳ್ಳೆ ಮನುಷ್ಯ!…ಅನ್ನುತ್ತೇವೆ. ಸಂಸ್ಕಾರ ಸಮಯವನ್ನೆಲ್ಲ ತಿಳಿದುಕೊಂಡು ಎಷ್ಟು ಗಂಟೆಗೆ ಹೊರಟರೆ, ದೇಹವನ್ನು ನೋಡಬಹುದು, ಮತ್ತೆ ಅಲ್ಲಿಂದ ಹೊರಟರೆ ಮನೆಗೆ ಎಷ್ಟು ಗಂಟೆಗೆ ತಲುಪಬಹುದು ಎಂಬ ಲೆಕ್ಕ ಹಾಕಿಕೊಳ್ಳುತ್ತಾರೆ. ಬಹಳ ದೂರದಲ್ಲಿದ್ದು ಹೋಗಲಿಕ್ಕೇ ಆಗಲಿಲ್ಲ ಅಂದರೆ,ಇದ್ದೇ ಇದೆಯಲ್ಲ ಮೊಬೈಲ್ ನಲ್ಲಿ ಒಂದು ಸಂದೇಶ ಕಳಿಸುವುದು RIP ಅಂತ, ಅಂದರೆ rest in peace ಅಂತ . RIP ಹಳ್ಳಿಗಳಲ್ಲಿ ಸಾಧ್ಯವಾಗದ ಮಾತು. ಕಾರಣ ಹಳ್ಳಿಗಳಲ್ಲಿ ವಿಶ್ರಾಂತಿಗಾಗಿ ಶಕ್ತಿಧಾಮ ಎಲ್ಲಿದೆ ?.
ಕೆಲವು ಹಳ್ಳಿಗಳಲ್ಲಿ ರುದ್ರಭೂಮಿಗಾಗಿ ಒಂದು ಗುರುತಿನ ಜಾಗವಿರುವುದಿಲ್ಲ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಅವರವರ ಜಮೀನಿನಲ್ಲಿ ಸಂಸ್ಕಾರ ಮಾಡಿ ಮುಗಿಸುತ್ತಾರೆ. ಹೂಳುವುದಾಗಲಿ, ಸುಡುವುದಾಗಲಿ ಅಂಥ ತೊಂದರೆ ಆಗುವುದಿಲ್ಲ. ಆದರೆ ಎಲ್ಲರಿಗೂ ಜಮೀನು ಇರಬೇಕಷ್ಟೆ ? ಜಮೀನು ಇಲ್ಲದಿದ್ದವರು ಯಾವುದಾದರೂ ಸರ್ಕಾರದ ನೆಲ ಹುಡುಕಿಕೊಂಡು ಹೋಗಬೇಕು. ಒಣಭೂಮಿ ಆದರೆ ಹೇಗಾದರೂ ನಿಭಾಯಿಸಬಹುದು. ಸಾಮಾನ್ಯವಾಗಿ ಪಟ್ಟಣದಲ್ಲಿ ರುದ್ರಭೂಮಿ ಎಂದರೆ ಹೂಳಲು ಜಾಗವಿರದಿದ್ದರೂ, ಸುಡಲು ಅವಕಾಶವಿದೆ. ಆದರೆ ಒಂದು ಸುಸಜ್ಜಿತವಾದ ರುದ್ರಭೂಮಿ ಹಳ್ಳಿಗಳಲ್ಲಿ ಇರುವುದಿಲ್ಲ.

ಫೋಟೋ ಕೃಪೆ :adobe stock
ಸತ್ತ ಸುದ್ದಿ ಕೇಳಿದ ಸುತ್ತಮುತ್ತಲಿನ ಜನ ಒಂದು ಹೂವಿನ ಹಾರ ಹಾಕಿ ಕೈ ಮುಗಿದು, ಹತ್ತು ನಿಮಿಷದಲ್ಲಿ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಇನ್ನೂ ಕೆಲವರು ಸಂಸ್ಕಾರದ ಸಮಯದಲ್ಲಿ ಹೋಗಿ, ಸ್ವಲ್ಪ ಸಮಯದಲ್ಲಿ ಅಲ್ಲಿಂದ ಕಾಲ್ತೆಗೆಯುತ್ತಾರೆ. ಬಹಳ ದೂರವಂತೆ, ನಿಂತುಕೊಳ್ಳುವುದಕ್ಕೆ ಜಾಗವಿಲ್ಲವಂತೆ, ನೆರಳಿಲ್ಲವಂತೆ ಅಂತ ಸಬೂಬು ಹೇಳಿ ಸಂಸ್ಕಾರಕ್ಕೆ ಹೋಗುವುದರಿಂದ ಮುಕ್ತಿ ತೆಗೆದುಕೊಳ್ಳುತ್ತಾರೆ .ಎಲ್ಲರಿಗೂ ಧಾವಂತ, ಯಾರಿಗೂ ಪುರುಸೊತ್ತು ಇರುವುದಿಲ್ಲ. ಸಂಬಂಧಿಕರಿಗೆ ಸಾಂತ್ವಾನ ಹೇಳುವುದಾಗಲೀ ,ತೀರಿ ಹೋದವರ ಬಗ್ಗೆ ಒಂದೆರಡು ಮಾತು ಆಡುವುದಾಗಲಿ ಇರುವುದಿಲ್ಲ .
ಮನುಷ್ಯನ ಉಸಿರು ನಿಂತ ತಕ್ಷಣ ಅದು ‘ಬಾಡಿ’ ಅಂತ ಕರೆಯುತ್ತಾರೆ. ಹೀಗೆ ಒಮ್ಮೆ ಒಬ್ಬರ ಸಂಸ್ಕಾರಕ್ಕೆ ಹೋಗಿದ್ದಾಗ, ಪುರೋಹಿತ ಬಾಡಿನ ಈ ದಿಕ್ಕಿಗೆ ಇಡಿ ಎಂದ ತಕ್ಷಣ, ಅವರ ಮಗ ನನ್ನಪ್ಪನ್ನ ಬಾಡಿ ಅನ್ನಬೇಡಿ ಅಂತ ಸಿಟ್ಟು ಮಾಡಿಕೊಂಡ. ಸೂಕ್ಷ್ಮವಾಗಿ ಅಪ್ಪನ ದೇಹವನ್ನು ನೇವರಿಸುತ್ತಿದ್ದ. ಈ ಸನ್ನಿವೇಶ ಒಂದು ಕಡೆ ಯಾದರೆ, ಇನ್ನೊಂದು ಕಡೆ ಅಲ್ಲಿ ಸೇರಿರುವ ಜನ ತಡಮಾಡಬೇಡಿ . ಬೇಗ ಬೇಗ ಸರಂಜು ಮಾಡಿ, ಮಳೆ ಬಂದ್ರೆ ಕಷ್ಟ, ಬಸ್ಸಿಗೆ ಲೇಟಾಗುತ್ತೆ .ನೀವು ಎಷ್ಟು ಮಾಡಿದ್ರೂ ಅಷ್ಟೆ. ಹೆಣಕ್ಕೆಂತ ಶೃಂಗಾರ? ಎತ್ರಿ ಎತ್ರಿ ಎನ್ನುವ ಜನರನ್ನು ನಾನು ನೋಡಿದ್ದೇನೆ.

ಫೋಟೋ ಕೃಪೆ : google
ನೀರಾವರಿ ಜಮೀನಿನಲ್ಲಿ ಉಳಲು ಅಥವಾ ಸುಡಲು ಒಂದು ಜಾಗ ಸಿಗುವುದು ಕಷ್ಟ.ಸಣ್ಣ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾದರೆ ಜನ ನಿಲ್ಲಲು ಸಾಧ್ಯವಾಗದೆ, ಏನಾದರು ಒಂದು ಕಾರಣ ಕೊಟ್ಟು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಕೆಲವು ಹಳ್ಳಿಗಳಲ್ಲಿ ಮೂರರಿಂದ 4ಕಿಲೋ ಮೀಟರ್ ಮೃತದೇಹವನ್ನು ಹೊತ್ತುಕೊಂಡು ಸಾಗಿಸಬೇಕು. ನೆಮ್ಮದಿಯಿಂದ ಯಾರೂ ಬೀಳ್ಕೊಡುವುದಿಲ್ಲ .
ದೇಹದ ಅಂತ್ಯಕ್ರಿಯೆಯಾದ ಮೇಲೆ ಹಿಂದೆ ತಿರುಗಿ ನೋಡಬೇಡಿ ನಿಮ್ಮ ಮನೆ ದಾರಿ ಹಿಡಿಯಿರಿ ಎನ್ನುತ್ತಾರೆ ಹಿರಿಯರು, ಸತ್ತು ಅವನ ಆತ್ಮ ಹಿಮ್ಮೆಟ್ಟಿ ಬರುತ್ತದೆ ಎಂದಲ್ಲ, ಅವನ ಆತ್ಮಕ್ಕೆ ಶಾಂತಿ ಸಿಕ್ಕಿದೆ ನೀವು ನೆಮ್ಮದಿಯಿಂದ ನಿಮ್ಮ ಮುಂದಿನ ಜೀವನವನ್ನು ನಿಶ್ಚಿಂತೆಯಿಂದ ನೋಡಿಕೊಳ್ಳಿ ಎಂದರ್ಥ. ಆದರೆ ಸತ್ತವನಿಗೆ ಆತ್ಮಕ್ಕೆ ಶಾಂತಿಯೇ ಸಿಗದಿದ್ದರೆ, ಅವರ ಮನೆಯವರಿಗೆ ನೆಮ್ಮದಿ ಎಲ್ಲಿಂದ ಬರುತ್ತದೆ.
ಹಾಗೆ ನೋಡಿದರೆ ರಾಜಕಾರಣಿಗಳು, ಸಿನಿಮಾದವರು, ಇತರೆ #ಸಾಧಕರು ಸತ್ತಾಗ ಸಿಗುವ ವ್ಯವಸ್ಥೆಗಳನ್ನೂ ನೋಡಿದಾಗ ಪುಣ್ಯವಂತರು ಎನ್ನಿಸುತ್ತದೆ. ಇಂತಹ ಸಂಸ್ಕಾರಗಳು ಶಾಂತಿಯುತವಾಗಿ, ನೆಮ್ಮದಿಯಿಂದ ,ಸುರಕ್ಷಿತ ಜಾಗದಲ್ಲಿ ನಿಧಾನವಾಗಿ, ಸಂಸ್ಕಾರ ಮಾಡಿಸಿಕೊಳ್ಳುತ್ತಾರೆ . ಹಳ್ಳಿಯಲ್ಲಿ ಸತ್ತ ಮನುಷ್ಯನಿಗೆ ಸಿಗುವುದಿಲ್ಲ.
ಪ್ರತಿಯೊಬ್ಬನ ಮನುಷ್ಯನಿಗೂ ಬದುಕಿದ್ದಾಗಲೂ ಬೆಲೆ ಇದೆ, ಸತ್ತಾಗಲೂ ಅದೇ ಬೆಲೆ ಸಿಗಬೇಕು. ಸರ್ಕಾರ ಪ್ರತೀ ಗ್ರಾಮಕ್ಕೂ ಒಂದು ರುದ್ರಭೂಮಿ ಕಟ್ಟಿಸಬೇಕು. ಸುವ್ಯವಸ್ಥಿತವಾದ ಜಾಗದಲ್ಲಿ ರುಧ್ರಭೂಮಿಯನ್ನು ಗುರುತಿಸಿ ಮೇಲ್ಛಾವಣಿ, ನೀರಿನ ವ್ಯವಸ್ಥೆ, ಮರ ಗಿಡ ಇರಬೇಕು. ಇಷ್ಟಾದರೂ ಇದ್ದರೆ ಆ ದೇಹ ಕ್ಕೆ ಒಂದುಬೆಲೆ ಕೊಟ್ಟಂತಾಗುತ್ತದೆ ಅಲ್ಲವೇ? ಈ ನಿಟ್ಟಿನಲ್ಲಿ ಸರ್ಕಾರ ಮನಸ್ಸು ಮಾಡಬೇಕು ಅಷ್ಟೆ.
- ದೇವರಾಜಾಚಾರ್ (ಕೆಪಿಸಿಎಲ್ ನಿವೃತ್ತ ಅಧಿಕಾರಿ, ಲೇಖಕರು)ಮೈಸೂರು
