ಕಾಲೇಜ್ ದಿನಗಳು ಅಮೂಲ್ಯ, ಅದರಲ್ಲಿ ಅಳಸಿ ಉಳಿಯುವ ಕೆಲವು ನೆನಪುಗಳು ಕತೆಯಾಗಿ ಬರೆಯುವ ಸಣ್ಣ ಪ್ರಯತ್ನ ನನ್ನದು, ವಾಸ್ತವಕ್ಕೆ ಹತ್ತಿರವಾಗಿದ್ದು, ಇದು ಯಾರ ವೈಯಕ್ತಿಕ ಕತೆಯಲ್ಲ . ಕತೆಯನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ….
ಈಗಿನಂತೆ ಬೈಕ್, ಕಾರಿನ ಕಾಲವಲ್ಲ. ಕಾಲೇಜ್ ಎಷ್ಟೇ ದೂರ ಆದ್ರೂ ನೆಲ ನೋಡ್ತಾ ಹೋಗ್ಬೇಕು…ನೆಲನೋಡ್ತಾ ಬರಬೇಕು…ಅನ್ನುವ ಪಾಲಕರ ಕಾಲವದು. ಒಂದು ವೇಳೆ ಬಲವಂತ ಮಾಡಿ ಸೈಕಲ್ ಆದ್ರೂ ಕೊಡಸಿ ಅಂತ ಹಠ ಮಾಡಿದ್ರೆ, ಮುಗಿತು ನಮ್ಮ ಕತೆ… ಅಪ್ಪ ಅಮ್ಮ ಕಳೆದು ವರ್ಷದ ಮಾರ್ಕ್ಸ್ ತಂಟೆಗೆ ಬರುತ್ತಿದ್ದರು. ಆಗ ಸೈಕಲು ಬೇಡ…ಏನು ಬೇಡ…ಯಾವ ತಲೆ ನೋವೇ ಬೇಡ ಅಂತ ಎಷ್ಟೇ ದೂರ ಕಾಲೇಜ್ ಇದ್ರೂ ನಡ್ಕೊಂಡೆ ಹೋಗ್ತಿದ್ವಿ, ಬರ್ತಿದ್ವಿ…. ಆದರೆ ನೆಲನೋಡ್ಕೊಂಡು ಬರುವಷ್ಟು ಸಂಭಾವಿತರoತೂ ನಾವಾಗಿರಲಿ…
ಅವತ್ತು ಕೂಡಾ ಗೆಳತಿಯರಾದ ಮಿನಿ, ಮಾಲಿನಿ, ಮೋಹಿನಿ ಜೊತೆಗೆ ಕಾಲೇಜ್ ಗೆ ಹೊರಟ್ಟಿದ್ದೆ. ಎಲ್ಲರೂ ನೋಡೋಕೆ ಬೆಂಜ್, ಆಡಿ, ಬಿಎಂಡಬ್ಲ್ಯೂ ತರ ಕಣ್ಣಿಗೆ ಕುಕ್ಕುವಂತೆ ಇದ್ದರು. ನಾನು ಮಾತ್ರ ಮಾರುತಿ 800 ರೇಂಜ್ ಗೆ ಇದ್ದೆ. ಹುಡುಗುರೆಲ್ಲ ಆಡಿ, ಬಿಎಂಡಬ್ಲ್ಯೂ, ಬೆಂಜ್ ಹಿಂದೆ ಬೀಳುತ್ತಿದ್ದರು.
ನಾವು ನಾಲ್ಕು ಜನ ಇನ್ನೇನು ಕಾಲೇಜ್ ನೊಳಗೆ 20 ಹೆಜ್ಜೆ ಹಾಕಿ ಒಳಕ್ಕೆ ಹೋಗ್ಬೇಕು, ಅನ್ನೋವಷ್ಟರಲ್ಲಿ ಒಂದು ಹುಡುಗ ಬಂದವನೇ ಮಿನಿಯ ಮುಂದೆ ಒಂದು ಪತ್ರ ಮುಂದಿಟ್ಟ, ಇದನ್ನ ಓದಿ, ನಿನ್ನ ಉತ್ತರ ತಿಳಿಸು… ಅಂತ ಹೇಳಿ ಅಲ್ಲಿಂದ ಗಂಭೀರವಾಗಿ ಹೊರಟು ಹೋದ. ನೋಡೋಕೆ ಪಕ್ಕಾ ಪರೋಡಿ ತರನೇ ಇದ್ದ. ಅದನ್ನು ನೋಡಿ “ಶಾಲಿನಿ… ಆ ಹುಡುಗ ತಲೆಗೆ ಸ್ನಾನನೇ ಮಾಡ್ತಾನೋ, ಇಲ್ವೋ… ಕೂದಲು ಕೆಂಜಗೆ ಇದೆ. ಬಟ್ಟೆ ಬೇರೆ ಅಲ್ಲಲ್ಲಿ ಹರೆದಿದೆ, ಪಾಪ ಮಿನಿಗೆ ಇಂತ ಪ್ರೇಮಿ ಬೀಳಬಾರದಿತ್ತು ಅಂತ ಗಿಸಕ್ಕನೆ ನಕ್ಕಳು. “ಅಯ್ಯೋ… ಮೋಹಿನಿ, ಅವನು ಕೂದಲಿಗೆ ಬಣ್ಣ ಹಚ್ಚಿರೋ ಅವತಾರ ಅದು. ಬಟ್ಟೆ ಹರಿದಿಲ್ಲ, ಅದು ಈಗಿನ ಫ್ಯಾಷನ್ ಮಾರಾಯ್ತಿ”… ಅಂದೆ. ಮೋಹಿನಿ ಹೌದಾ ಎಂತ ಫ್ಯಾಷನ್ ಅಂತ ಬಾಯಿ ತೆರೆದು ನೋಡಿದಳು.
ನಮಗೆಲ್ಲ ಮಿನಿ ಪತ್ರದ ಮೇಲೆ ಕಣ್ಣಿತ್ತು. “ಬೇಗ ಬೇಗ ಪತ್ರ ಓದು ಮಿನಿ…. ಮ್ಯಾಟರ್ ಏನಿದೆ ನೋಡೋಣ”… ಅಂದ್ವಿ. ಆದರೆ ಮಿನಿ ಮಾತ್ರ ಪತ್ರ ಓದೋಕೆ ಮೀನಾ ಮೇಷ ಎನಿಸುತ್ತಿದ್ದಳು. ಅದಕ್ಕೆ ಕಾರಣವಿಷ್ಟೇ ಜೊತೆಗಿದ್ದ ಗೆಳತಿಯರ್ಯಾರು ಸಾಚಾಗಳಲ್ಲ. ಪತ್ರದಲ್ಲಿ ಅವನು ಏನ್ ಬರೆದಿದ್ದಾನೋ ಕರ್ಮ ಕಾಂಡ, ಇದನ್ನ ಓದಿ ಈ ನನ್ನ ಗೆಳತಿಯರು ಅಪ್ಪ ಅಮ್ಮನಿಗೆ ಹೇಳಿ ಬಿಟ್ಟರೇ ಎನ್ನುವ ಭಯ ಆಕೆಗಿತ್ತು.
ಆದರೆ ನಾವು ಹಿಂದೆ ಸರಿಯಲಿಲ್ಲ. ಆಕರ್ಷನೀಯ ಪ್ರೊಮೊ ನೋಡಿದ್ಮೇಲೆ ಸಿನಿಮಾ ಪೂರ್ತಿ ನೋಡೋದೇಯಾ ಅಂತ ನಾವು ಮನಸ್ಸಲ್ಲೇ ನಿರ್ಧಾರ ಮಾಡಿದ್ವಿ. “ಮಿನಿ….ನೀನು ಪತ್ರವನ್ನ ನಮ್ಮ ಮುಂದೆ ಓದ್ಲಿಲ್ಲ ಅಂದ್ರೆ, ನಿನ್ನ ಜೊತೆ ನಾವು ಬರೋಲ್ಲ ನೋಡು”… ಅಂತ ಹೆದರಿಕೆ ಹಾಕಿ ಬಲವಂತದಿಂದ ಪತ್ರ ಓದುವಂತೆ ಮಾಡಿದೆವು. ಆ ಪ್ರೇಮ ಪತ್ರ ಸಾಮಾನ್ಯದಾಗಿರಲಿಲ್ಲ, ಅದರಲ್ಲಿನ ಪ್ರತಿ ಅಕ್ಷರವೂ ರಕ್ತದಿಂದ ಬರೆಯಲಾಗಿತ್ತು. ಅದನ್ನು ತೆರೆಯುತ್ತಿದ್ದಂತೆ ಮಿನಿಗೆ ಪ್ರೀತಿ ಹುಟ್ಟುವುದಿರಲಿ ರಕ್ತ ನೋಡಿಯೇ ತಲೆ ಗಿರಗಿಟ್ಟಲೇ ಆಡಿತು. ಭಯದಲ್ಲಿ ಪತ್ರ ಕೆಳಗೆ ಹಾಕಿದಳು. ರಕ್ತದಲ್ಲಿ ಬರೆದಿದ್ದಾನೆ, ವಾಸನೆ ಗಿಸನೆ ಏನಾದ್ರೂ ಬರ್ತಿದೇನಾ ಅಂತ ಕೆಳಗೆ ಬಿದ್ದ ಪತ್ರವನ್ನು ಎತ್ತಿಕೊಂಡು ಮೋಹಿನಿ ಮೂಸಿ ನೋಡಿದಳು. “ವಾಸನೆಗಿಂತ ಅವನ ಹ್ಯಾಂಡ್ ರೈಟಿಂಗ್ ಕೆಟ್ಟದಾಗಿದೆ ಶಾಲಿನಿ”… ಎಂದಳು. “ಅಯ್ಯೋ ನಿನ್ನ, ರಕ್ತದಲ್ಲಿ ಬರೆದಿದ್ದು ಮಾರಾಯ್ತಿ, ಪೆನ್ನಿನಲ್ಲಿ ಅಲ್ಲ…ಹ್ಯಾಂಡ್ ರೈಟಿಂಗ್, ಈ ರಕ್ತ ಮುಖ್ಯ ಅಲ್ಲ, ಭಾವನೆಗಳು ಮುಖ್ಯ ಆ ಹುಚ್ಚು ಹುಡುಗನಿಗೆ ಎಲ್ಲಿ ಅರ್ಥ ಆಗ್ಬೇಕು ಎಂದು ಬೈದು ಕೊಂಡೆ. ಆ ಪತ್ರದಲ್ಲಿ ನೀನು ನನ್ನ ಪ್ರೀತಿಯನ್ನು ಒಪ್ಪದೇ ಹೋದರೆ ಮುಂದಿನ ಬಾರಿ ರಕ್ತದಲ್ಲಿ ಬರೆಯೋಲ್ಲ ಬೇರೇನೇ ಕತೆ ಇರುತ್ತೆ.. ನೀನು ಪ್ರೀತಿಗೆ ಒಪ್ಪುವರೆಗೂ ಬಿಡೋದಿಲ್ಲ ಎಂದು ಧಮಕಿ ಬೇರೆ ಹಾಕಿದ್ದ. ಅದನ್ನು ಮೋಹಿನಿ ಜೋರಾಗಿ ಓದುತ್ತಿದ್ದಂತೆ ಮಿನಿ… ನಡುಗಲು ಶುರು ಮಾಡಿದಳು. “ಅಯ್ಯೋ…. ಅವನ್ ನೋಡಿದ್ರೆ ಪ್ರೀತಿನೇ ಬರ್ತಿಲ್ಲಾ… ಸಿಕ್ಕಾಪಟ್ಟೆ ಭಯ ಆಗ್ತಿದೆ” ಎಂದಳು ಮಿನಿ. ಅವಳ ಮಾತು ನಿಜ. ಅವನು ನೋಡವುದಕ್ಕಾಗಲಿ ಅಥವಾ ಬುದ್ದಿವಂತಿಕೆಯಲ್ಲಾಗಲಿ ಯಾವುದರಲ್ಲಿಯೂ ಮಿನಿಗೆ ಸರಿಸಮನಾದ ಹುಡುಗನಾಗಿರಲಿಲ್ಲ. ಆದರೆ ಮಿನಿ ರೂಪಕ್ಕೆ ಹುಚ್ಚನಾಗಿದ್ದ. ಹೆದರಿದ ಗೆಳತಿಗೆ ಏನು ಆಗೋಲ್ಲ ಧೈರ್ಯವಾಗಿ ಇರು ಮಿನಿ ಎಂದೆವು.
ಮಿನಿ ಆ ಹುಡುಗನ ಪತ್ರಕ್ಕೆ ಉತ್ತರಿಸಲಿಲ್ಲ. ನಾವು ಮಾತ್ರ ಹೆದರಿದವರ ಮೇಲೆ ಕಪ್ಪೆ ಚಲ್ಲುವ ಎಲ್ಲ ಪ್ರಯತ್ನವನ್ನು ಮಿನಿ ಮೇಲೆ ಶತಯಗತಾಯವಾಗಿ ಮಾಡಿದೆವು.”ಮಿನಿ, ಆ ನಿನ್ನ ಹುಚ್ಚು ಪ್ರೇಮಿ ಫಾಲೋ ಮಾಡ್ತಿದ್ದಾನೆ ನೋಡೇ”..ಒಮ್ಮೆ ಹೇಳಿದರೆ, ಇನ್ನೊಮ್ಮೆ “ಮಿನಿ, ನೋಡೇ…ಅಲ್ಲಿ ದೂರದಲ್ಲಿ ಕಾಣ್ತಿದ್ದಾನೆ. ಆ ಕಡೆಯಿಂದ ಬರತ್ತಿದ್ದಾನೆ, ಈ ಕಡೆ ಬರತ್ತಿದ್ದಾನೆ “… ಅಂತೇಲ್ಲಾ ತಮಾಷೆ ಮಾಡಿ ಮಿನಿಗೆ ಹೆದರಿಸಿದೆವು. ಆರಂಭದಲ್ಲಿ ಬೆಚ್ಚಿ ಬಿಳುತ್ತಿದ್ದ ಮಿನಿ ಆಮೇಲೆ ಆಮೇಲೆ ಅವಳಿಗೆ ನಮ್ಮ ತಮಾಷೆ ಅರ್ಥವಾಗಿ ಡೋಂಟ್ ಕೇರ್ ಅನ್ನತೊಡಗಿದಳು. ಆದರೆ ಆ ದಿನ ಮಿನಿ ಯಾವ ಕಡೆಯಿಂದ ಎದ್ದಿದ್ದಳೋ…ಆ ಹುಚ್ಚು ಪ್ರೇಮಿ ಮಿನಿ ಹಿಂದೆಯೇ ಪ್ರತ್ಯಕ್ಷವಾಗಿಯೇ ಬಿಟ್ಟ. ಅವನನ್ನು ನೋಡಿದ ನಾವೆಲ್ಲ ಮಿನಿ… ಬಂದಾ… ಬಂದಾ… ಮೇಘ ರಾಜ ನಿನ್ನ ಕಡೆಗೆ… ಅಂತ ರಾಗ ತೆಗೆದು ಮಿನಿಗೆ ಹೇಳಿದ್ರೆ, ತೋಳ ಬಂತು… ತೋಳ… ಕತೆಯಂತೆ ಈ ಹಿಂದೆ ಆಗಿದ್ದರಿಂದ ಆಕೆ ನಮ್ಮನ್ನು ನಂಬಲೇ ಇಲ್ಲಾ. “ನಿಮ್ಮ ತಮಾಷೆ ಜಾಸ್ತಿ ಆಗ್ತಿದೆ… ಹೀಗೆ ಪದೆ ಪದೆ ಅವನ ಹೆಸರಲ್ಲಿ ಕಾಡಿಸಿದ್ರೆ ನಮ್ಮ ಅಪ್ಪನಿಗೆ, ಕಾಲೇಜ್ ಪ್ರಿನ್ಸಿಪಾಲರಿಗೆ ಕಂಪ್ಲೇಂಟ್ ಮಾಡ್ತೀನಿ ನೋಡಿ”… ಅಂತ ನಮಗೆ ಭಯ ಪಡಿಸಲು ಹೋದಳು. ಆದರೆ ಮಿನಿ ಜಾತಕದಲ್ಲಿ ಕುಜ ದೋಷ, ರಾಹು ದೋಷ, ಎಲ್ಲ ದೋಷಗಳು ಒಂದೇ ಸಮ ಒಕ್ಕರಿಸಿಕೊಂಡಿತ್ತೇನೋ…ಆ ದಿನ 6ಆರಡಿ, 80 ಕೆಜಿಯ ಆಸುಪಾಸಿನ ದೇಹ, 5 ಆಡಿ 45 ಕೆಜಿ ಮಿನಿಗಾಗಿ ಕಾಯುತ್ತಿದ್ದದ್ದು ನೋಡಿ ನಾವೆಲ್ಲ ಕಂಗಾಲಾಗಿ ಹೋಗಿದ್ದೆವು. ಅದರಲ್ಲಿಯೂ ಮಿನಿಯಂತೂ ಲಕ್ವ ಹೊಡೆದಂತೆ ಸಟೇದು ನಿಂತಳು. ಅವನು ಬಂದವನೇ “ಮಿನಿ, ನಿನ್ನ ಉತ್ತರ ಏನು?…ಪ್ರೀತಿ ಮಾಡ್ತೀಯೋ ಇಲ್ವೋ” ಎಂದು ಪ್ರೀತಿಯಿಂದ ಕೇಳಲಿಲ್ಲ, ಗದರಿಸಿಯೇ ಕೇಳಿದ. ಅವನ ಧ್ವನಿಗೆ ಮಿನಿ ಕೈ ಕಾಲುಗಳು ಗಡ ಗಡನೇ ನಡುಗ ತೊಡಗಿತು. ಅವನು “ನಿನ್ನ ಉತ್ತರ ಈಗ್ಲೇ ಬೇಕು… ಉತ್ತರ ಕೊಡ್ತಿಯೋ ಇಲ್ವೋ”… ಎಂದು ಕೈ ಎತ್ತಿದ. ಆಕೆ ಅವನು ನನಗೆ ಬಾರಿಸಿಯೇ ಬಿಡುತ್ತಾನೆ ಅನ್ನೋ ಭಯದಲ್ಲಿ “ನನಗೆ ನೀನು ಇಷ್ಟಾ ಇಲ್ಲಾ…ನನ್ನ ಅಪ್ಪ ಅಮ್ಮ ತೋರಸಿದ ಹುಡುಗನನ್ನೇ ನಾನು ಮದುವೆ ಆಗ್ತೀನಿ…” ಎನ್ನುವ ಮಾತು ಇನ್ನೂ ಅವಳ ಬಾಯಲ್ಲಿಯೇ ಇತ್ತು ಅವನು ಅವಳ ಉತ್ತರ ಕೇಳಿದ್ದೇ ತಡ ತನ್ನ ಜೇಬಿನಲ್ಲಿದ್ದ ಚೂಪಾದ ಬ್ಲೆಡ್ ತೆಗೆದು ತನ್ನ ಮುಂಗೈಯನ್ನು ಕೊಯ್ದುಕೊಂಡ. ಅದನ್ನು ನೋಡಿ ಮಿನಿ ಭಯ ಬೀಳೋದಷ್ಟೇ ಅಲ್ಲ, ಕಿಟ್ಟಾರನೆ ಚೀರಿದಳು. ಅದನ್ನು ನೋಡಿ ನಾವು ಕೂಡಾ ಭಯ ಬಿದ್ದು ಅಲ್ಲಿಂದ ಎದ್ದು ಬಿದ್ದೋ ಅಂತ ಮಿನಿಯನ್ನ ಅಲ್ಲಿಯೇ ಬಿಟ್ಟು ಎಸ್ಕೇಪ್ ಆದೇವು.
ಮಿನಿ ಕೂಡಾ ಆಮೇಲೆ ಭಯದಲ್ಲಿ ಅಲ್ಲಿಂದ ಓಡಿ ಬಂದಳು. ಆ ವಿಷಯ ಇಡೀ ಕಾಲೇಜ್ ಗೆ ಕಾಳ್ಗಿಚ್ಚಿನಂತೆ ಹರಡಿತು. ಮಿನಿ ಕಾಲೇಜ್, ಊರಲ್ಲಿ ರಾತ್ರೋ ರಾತ್ರಿ ಫೇಮಸ್ ಆಗಿ ಹೋದಳು. ಮಿನಿ ಆ ಹುಡುಗನ ಪ್ರೀತಿ ಸ್ವೀಕರಿಸದೇ ಇದ್ದರೂ ಕೈ ಕಟ್ ಮಾಡಿಕೊಂಡ ಹುಡುಗನ ಹುಡುಗಿ ಅಂತಾಳೆ ಊರಲ್ಲಿ ಗುರುತಿಸಿಕೊಂಡಳು.
ಮುಂದೆ ಮಿನಿಗಷ್ಟೇ ಅಲ್ಲ,ಅವಳ ಅಪ್ಪ ಅಮ್ಮ ಎಲ್ಲೇ ಹೋಗಲಿ ಆ ಹುಡುಗ ಹಿಂಬಾಲಿಸ ತೊಡಗಿದ. ಅವನ ವರ್ತನೆಗೆ ಬೇಸತ್ತು ಪೊಲೀಸ್ ಕಂಪ್ಲೇಂಟ್ ಕೂಡಾ ಮಾಡಿದ್ದರು ಮಿನಿ ಪಾಲಕರು. ಮಿನಿ ಅವನ ಭಯಕ್ಕೆ ಕಾಲೇಜ್ ಗೆ ಬರುವುದನ್ನೇ ಕಮ್ಮಿ ಮಾಡಿ ಬಿಟ್ಟಳು. ಅವಳು ಕಾಲೇಜ್ ಗೆ ಬಾರದೇ ಇದ್ದಾಗ ಆ ಹುಚ್ಚು ಪ್ರೇಮಿ ಶನಿ ತರ ನಮ್ಮ ಹಿಂದೇನೂ ಬಿದ್ದ “ಮಿನಿ ಎಲ್ಲಿ?… ಈ ಲೇಟರ್ ಅವಳಿಗೆ ಕೊಡು, ಇಲ್ಲಾದ್ರೆ ನೋಡು”…ಅಂತ ಉದ್ದೂದ್ಧ ಲೇಟರ್ ಕೊಟ್ಟು ನಮಗೂ ಹೆದರಿಸಿದ. ಒಂದು ವೇಳೆ ನಾವು ಲೇಟರ್ ಕೊಡೋಲ್ಲ ಅಂತ ಹೇಳಿದ್ರೆ, ಈ ಬಾರಿ ತನ್ನ ಕೈ ಅಲ್ಲ ನಮ್ಮ ಕೈ ಕಟ್ ಮಾಡಿಯೇ ತಿರುತ್ತಾನೆ …ಅನ್ನೋ ಭಯದಲ್ಲಿ ಅವನು ಕೊಟ್ಟ ಲೇಟರನ್ನು ತೆಪ್ಪಗೆ ಇಸ್ಕೊಂಡು ಆ ಲೇಟರ್ ಕೊಡೋಕೆ ಮಿನಿ ಮನೆಯತ್ತ ಹೋದ್ರೆ ಅಲ್ಲೊಂದು ತಲೆ ಬಿಸಿ, ಮಿನಿಗೆ ಲೇಟರ್ ಕೊಡುವುದಿರಲಿ ಅವಳ ಅಪ್ಪ ಅಮ್ಮ ನಮ್ಮನ್ನೇ ಮನೆಯೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಅವಳಿಗೇನೋ ಫುಲ್ ಟೈಟ್ ಸೆಕ್ಯೂರಿಟಿ ಏನೋ ಇತ್ತು. ಆದ್ರೆ ನಮಗೆ…ಲೇಟರ್ ಕೊಟ್ಟಿಲ್ಲ ಅಂದ್ರೆ ಆ ಹುಚ್ಚು ಪ್ರೇಮಿ ನಮ್ಮನ್ನ ಬಿಡೋಲ್ಲ. ಹೋಗ್ಲಿ ಮಿನಿಗೆ ಆ ಲೇಟರ್ ಕೊಟ್ಟು ಮುಗಿಸೋಣ ಅಂದ್ರೆ ಅವರಪ್ಪ ಅಮ್ಮ ಬಿಡೋಲ್ಲ. ಇಬ್ಬರ ಮಧ್ಯೆ ತ್ರಿಶoಕು ಸ್ಥಿತಿ ನಮ್ಮದಾಗಿತ್ತು.
ಆ ಹುಚ್ಚು ಪ್ರೇಮಿಯ ಹುಚ್ಚಾಟ ಹೆಚ್ಚಾದಾಗ ಮಿನಿ ಅಪ್ಪ ಅಮ್ಮ ಒಂದು ನಿರ್ಧಾರಕ್ಕೆ ಬಂದರು. ಮಿನಿಗೆ ಮದುವೆ ಮಾಡಿ ಕಳಿಸಿದ್ರೆ ಈ ಸಮಸ್ಯೆಯಿಂದ ಪಾರಾಗಬಹುದು ಎಂದು ನಿರ್ಧಾರ ಮಾಡಿದರು. ಆದರೆ ಮಿನಿ ಹಿಂದೆ ಆ ಹುಚ್ಚು ಪ್ರೇಮಿಯ ಕತೆ ಊರಲ್ಲಿ ಫೇಮಸ್ ಆಗಿದ್ದರಿಂದ ಮಿನಿಗೆ ಮದುವೆಯಾಗಲೂ ಯಾರು ಮುಂದೆ ಬರಲಿಲ್ಲ. ಆಗ ಮಿನಿಗಿಂತ ಹದಿನಾಲ್ಕು ವರ್ಷ ದೊಡ್ಡವನಾಗಿದ್ದ ಅವಳ ಸೋದರ ಮಾವನಿಗೆ ಗಂಟು ಹಾಕಿದರು. ಓದಿನಲ್ಲಿ ಮುಂದಿದ್ದ ಮಿನಿ ವಕೀಲೆ ಆಗಬೇಕೆಂದೆಲ್ಲ ಕನಸ್ಸು ಕಟ್ಟುಕೊಂಡಿದ್ದಳು. ಆದರೆ ಅವಳ ರೂಪವೇ ಆಕೆಯ ಭವಿಷ್ಯಕ್ಕೆ ಮುಳುವಾಯಿತು.
ಮಿನಿ ಪರಿಸ್ಥಿತಿ ನೋಡಿದ್ಮೇಲೆ ಹುಡುಗೀರು ರೂಪದಲ್ಲಿ ಆಡಿ, ಬೆಂಜ್ ರೇಂಜ್ ಗೇ ಇರಲೇಬಾರದು. 800 ರೇಂಜ್ ಗೆ ಇದ್ರೆ ಅಷ್ಟೇ ಸಾಕಪ್ಪಾ ಸಾಕು ಅನ್ನಿಸಿ ಹೋಯಿತು.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಪತ್ರಿಕೆಯ ಸಂಪಾದಕಿ
