ಹರಿದ ಹವಾಯಿ ಚಪ್ಪಲಿ, ಪಿನ್ನು ಚುಚ್ಚಿ ಮೆಟ್ಟಿಕೊಳ್ಳಬೇಕು. ಕಾಯಕವೇ ಕೈಲಾಸ ತಿಂಗಳ ಸಂಬಳಕೆ ಜೀವನವಿಡೀ ಪ್ರಯಾಸ…ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಓದಿ….
ಇದ್ದ ನಾಲ್ಕು ಕಂಬಗಳಲ್ಲೀಗ
ಒಂದು ಕುಸಿದು
ನಿಂತ ಮೂರು ಕಂಬಗಳೇ ಆಧಾರ ಮನೆಗೆ
ಜೀವ ಬಿಗಿಹಿಡಿದು ರಾತ್ರಿಗಳನ್ನು ದೂಡುತ್ತಾ
ಹಗಲಿಗಾಗಿ ಕಾಯುತ್ತ
ದಿನಗಳನ್ನು ಎಣಿಸಬೇಕಿದೆ ಭಯದಲಿ!
ಬೆಳಗಾನೆದ್ದರೆ ಬೆಳೆದು ನಿಂತ
ಮಗಳ ಕಾಲಿ ಕೊರಳ ಚಿತ್ರ
ಅರಿಶಿನ ದಾರ ಭಾಗ್ಯಕೆ ಬೇಕು
ಲಕ್ಷ ಲಕ್ಷ ಹಣ್ಣ
ಎಲ್ಲಿದೆ ನಮ್ಮತ್ರ!?
ಎದೆಯೆತ್ತರ ಬೆಳೆದ ಮಗನಿಗೆ ಕೆಲಸವಿಲ್ಲದೆ
ಅಂಡಲೆವ ಪಾತ್ರ
ಕಪಾಟಿನ ತುಂಬ ಅವನದೇ
ಮಾರ್ಕ್ಸ್ ಕಾರ್ಡುಗಳ ಪತ್ರ
ಮೀಸಲಾತಿಯ ವಕ್ರ ಕುಣಿತಕೆ ಸಿಲುಕಿ
ನಲುಗಿ ಮಲಗಿವೆ ಧೂಳು ಹಿಡಿದು
ಹೆತ್ತೊಡಲು ನರಳಿದೆ ಎದೆಯೊಡೆದು
ಬೆಳಗಿನ ತಿಂಡಿಗೆ ಬರಿಯ
ಉದ್ದಿನಬೇಳೆ, ಸಾಸಿವೆ ಉಪ್ಪಿಟ್ಟು
ಒಗ್ಗರಣೆಗೆ ಇಲ್ಲ ಎಣ್ಣೆ; ನೀರಲ್ಲೇ ಒಗ್ಗರಣೆ
ಇದು ತಿಂಗಳ ಕೊನೆ!
ಹರಿದ ಹವಾಯಿ ಚಪ್ಪಲಿ
ಪಿನ್ನು ಚುಚ್ಚಿ ಮೆಟ್ಟಿಕೊಳ್ಳಬೇಕು
ಕಾಯಕವೇ ಕೈಲಾಸ
ತಿಂಗಳ ಸಂಬಳಕೆ ಜೀವನವಿಡೀ ಪ್ರಯಾಸ
ಉಳ್ಳವರಿಗೆ ನಾವು ಬಡವರು
ನಿರ್ಗತಿಕರಿಗೆ ಸಿರಿವಂತರು
ಸ್ವಾಭಿಮಾನದಲಿ ಮಾತ್ರ ಸ್ಥಿತಿವಂತರು
ಇದ್ದ ದಿನ ಪಾರಣೆ, ಇಲ್ಲದ ದಿನ ಏಕಾದಶಿ
ಹೋದ ಇತಿಹಾಸವಿಲ್ಲ ಮತ್ತೊಬ್ಬರ ಅರಸಿ
ದನಿ ಎತ್ತಿ ಬೇಡಿದವರಲ್ಲ ನಾವು ಈ ವರೆಗೂ
ನಮಗೂ ಬೇಕೆಂದು ಮೀಸಲಾತಿ
ನಾವು ಮಧ್ಯಮ ವರ್ಗದವರು
ನಮಗೆ ನಮ್ಮ ಸ್ವಾಭಿಮಾನವೇ ಆಸ್ತಿ
ನಂಬಿರುವುದು ಸ್ವ-ಬುದ್ಧಿ ಶಕ್ತಿ!
ಹೀಗಿದ್ದರೂ ನಮ್ಮ ವಸ್ತು ಸ್ಥಿತಿ
ಕೆಲವರಿಗ್ಯಾಕೋ ನಮ್ಮನ್ನು ಕಂಡರೆ
ಇನ್ನಿಲ್ಲದ ಕಕ್ಕುಲಾತಿ
ಹೇಳಬೇಕೆನಿಸುತ್ತದೆ ಅವರಿಗೆ
‘ ನಾವೂ ನಿಮ್ಮಂತೆ ಬಡವರು ಸ್ವಾಮಿ’ ಎಂದು
ಗಂಟಲು ಹರಕೊಂಡು!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು.
