ಜೋಗಿ ಅವರು ‘ಮಗಳಿಗೆ ಬರೆ(ಯ)ದ ಪತ್ರಗಳು’ ಕೃತಿಯಲ್ಲಿ 25 ಪತ್ರಗಳಿದ್ದು, ಪತ್ರಗಳು ಎರಡು ಮೂರು ಪುಟಗಳಷ್ಟು ದೀರ್ಘವಿದ್ದರೆ ಮತ್ತೆ ಹಲವು ಅರ್ಧ ಪುಟದಷ್ಟು ಚಿಕ್ಕವು. ಈ ಕೃತಿಯ ಕುರಿತು ಸುಜಾತಾ ರವೀಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮಗಳಿಗೆ ಬರೆ(ಯ)ದ ಪತ್ರಗಳು
ಲೇಖಕರು : ಜೋಗಿ
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಮೊದಲ ಮುದ್ರಣ : ಏಪ್ರಿಲ್ ೨೦೨೪
ಪತ್ರಗಳು ವೈಯುಕ್ತಿಕವೇ ಆದರೂ ಕೆಲವೊಮ್ಮೆ ಸಾರ್ವತ್ರಿಕತೆ ಪಡೆದು ಪ್ರಸಿದ್ಧವೂ ಪ್ರಕಟವಾಗಿ ಪುಸ್ತಕಗಳೂ ಆದ ಉದಾಹರಣೆಗಳು ಎಷ್ಟೋ. ಅಬ್ರಹಾಮ್ ಲಿಂಕನ್ ತನ್ನ ಮಗನ ಶಿಕ್ಷಕರಿಗೆ ಬರೆದ ಪತ್ರ ಅದರಲ್ಲಿಯ ವಸ್ತು ವಿಶೇಷ ವೈಚಾರಿಕತೆಯ ಮೌಲ್ಯದಿಂದಾಗಿ ಗಮನೀಯವಾಗುತ್ತದೆ . ಜವಹರ್ ಲಾಲ್ ನೆಹರೂ ಅವರ “Letters from a father to his daughter “(ಕನ್ನಡಕ್ಕೆ ಕಪಟರಾಳ ಕೃಷ್ಣರಾಯರು) ತನ್ನ ವಿಷಯ ವಸ್ತು ವೈವಿಧ್ಯದಿಂದಾಗಿ ಮೌಲ್ಯಯುತವಾಗಿದೆ . ಕನ್ನಡದ ಪ್ರಸಿದ್ಧ ಲೇಖಕರಾದ ಕೃಷ್ಣಾನಂದ ಕಾಮತರು ತಮ್ಮ ಪತ್ನಿ ಜ್ಯೋತ್ಸ್ನಾ ಕಾಮತ್ ರವರಿಗೆ ಮದುವೆಗೆ ಮುಂಚೆ ಮತ್ತು ನಂತರ ಬರೆದ ಪತ್ರಗಳ ಸಂಗ್ರಹ ಪ್ರೇಯಸಿಗೆ ಬರೆದ ಪತ್ರಗಳು ಉಲ್ಲೇಖನೀಯ. ಎಷ್ಟೇ ಮೊಬೈಲು ಮೇಯಿಲ್ ಟೆಲಿಫೋನ್ ಮುಂತಾದ ಆಧುನಿಕ ಮಾಧ್ಯಮಗಳಿದ್ದರೂ ಖ್ಯಾತ ಪತ್ರಕರ್ತೆ ಹಾಗೂ ಲೇಖಕಿ ಶೋಭಾ ಡೇ ತಮ್ಮ ಆರೂ ಮಕ್ಕಳಿಗೆ ತಮ್ಮ ವೃತ್ತಿ ನಿಮಿತ್ತದ ಓಡಾಟದ ಪ್ರಯುಕ್ತ ಪ್ರಪಂಚದ ವಿವಿಧೆಡೆಗಳಿಂದ ಪತ್ರಗಳನ್ನು ಬರೆದು ಕಳುಹಿಸುತ್ತಿದ್ದರಂತೆ . ಅವುಗಳ ಸಂಗ್ರಹವೇ “ಸ್ಪೀಡ್ ಪೋಸ್ಟ್” ಪುಸ್ತಕ. ಇದರಿಂದ ಪತ್ರಮುಖೇನ ಸಂವಹನ ಎಷ್ಟು ಮುಖ್ಯ ಹಾಗೂ ಅನಿವಾರ್ಯವೆಂಬುದು ಸಾಬೀತಾಗಿದೆ.
ಇಂತಹ ಉತ್ತಮ ಪತ್ರ ಪುಸ್ತಕಗಳ ಸಾಲಿಗೆ ನವೀನ ಸೇರ್ಪಡೆ ಈ ಪುಸ್ತಕ. ಜೋಗಿ ಅವರ ಪುಸ್ತಕಗಳೆಂದರೆ ಒಂದು ಮಟ್ಟದ ನಿರೀಕ್ಷೆ ಸಹಜ. ಈ ಪುಸ್ತಕ ಖಂಡಿತಾ ಅದನ್ನು
ಹುಸಿಗೊಳಿಸುವುದಿಲ್ಲ.
ಮೊದಲಿಗೆ ಈ ಮುದ್ದಾದ ಮುಖಪುಟ. ಅಪ್ಪ ಮಗಳು ಸೈಕಲ್ಲ್ನಲ್ಲಿ ಪಕ್ಕದಲ್ಲಿ ನಾಯಿಮರಿ. ಒಂದು ಮುದ್ದಾದ ಆತ್ಮೀಯ ವಲಯ…..ಓದುಗನಿಗೆ ಪುಸ್ತಕ ಓದಲು ಆರಂಭಿಸುವ ಮೊದಲಿಗೆ. ಇನ್ನು ಶೀರ್ಷಿಕೆ ಅರ್ಥಗರ್ಭಿತ ಬರೆಯದ ಪದದಲ್ಲಿಯ ಹೊಡೆದು ಹಾಕಿರುವುದು, ಬರೆದರೂ ಬರೆಯದ ಹಾಗೂ ಬರೆಯದಿದ್ದರೂ ಬರೆದ ಎಂಬ ಅರ್ಥದೊಂದಿಗೆ ಪುಸ್ತಕದ ಉದ್ದೇಶವನ್ನು ಬಿಂಬಿಸುವಲ್ಲಿ ಸಮರ್ಥವಾಗಿದೆ, ಸಫಲವಾಗಿದೆ. ಇಡೀ ಪುಸ್ತಕದಲ್ಲಿನ ರೇಖಾ ಚಿತ್ರಗಳು ಮಧುರ ಗಾಯನಕ್ಕೆ ಹಿಡಿದ ಶ್ರುತಿಯಂತೆ ಪೂರಕವಾಗಿ ಸಾಗುತ್ತಾ ಒಳ್ಳೆಯ ಸಾಥ್ ನೀಡುತ್ತವೆ. ಓದಿನ ಕ್ಷೀರಕ್ಕೆ ಜೊತೆಯಾಗುವ ನೋಟದ ಜೇನಿನಂತೆ.
ಲಾಲಯೇತ್ ಪಂಚ ವರ್ಷಾಣಿ
ದಶವರ್ಷಾಣಿ ತಾಡಯೇತ್
ಪ್ರಾಪ್ತೇತು ಷೋಡಷೇ ವರ್ಷೇ
ಪುತ್ರಮ್ ಮಿತ್ರ ವದಾಚರೇತ್
ಅನ್ನುತ್ತದೆ ಸಂಸ್ಕೃತ ಸುಭಾಷಿತವೊಂದು. ಆದರೆ ಇಂದಿನ ಮಕ್ಕಳನ್ನು ಹುಟ್ಟಿದಾಗಲಿಂದಲೇ ಮಿತ್ರರ ಹಾಗೆ ಕಾಣಬೇಕೋ ಏನೋ…..ಯಾರಿಗೂ ಬೋಧನೆ ಸಹ್ಯವಿಲ್ಲ……dont preach papa or mama ಎಂಬುದೇ ಧ್ಯೇಯ ವಾಕ್ಯ. ಹಾಗಾಗಿ ಮಿತ್ರರೊಡಗಿನ ಮಾತುಕಥೆಯಂತಿರುವ ಇಂತಹ ಪತ್ರಗಳು ಅವರಿಗೆ ರುಚಿಸಲೂ ಬಹುದು.

ನನ್ನ ತಪ್ಪುಗಳು ಬೇರೆಯವರ ಕಣ್ಣಿಗೆ ತಪ್ಪುಗಳಾದರೂ ನನ್ನ ಪಾಲಿಗೆ ಪ್ರಯೋಗಗಳೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳುತ್ತಾ ತಮ್ಮ ಬಾಲ್ಯದ ಬಗ್ಗೆ ಹೇಳುವ ಲೇಖಕರು old is gold ಎನ್ನುವ ಆಲಕ್ಕೆ ಜೋತು ಬೀಳುವರಲ್ಲ. ನೆನಪು ಮತ್ತು ರುಚಿ ಎರಡನ್ನೂ ನಾವೇ ಕಂಡುಕೊಳ್ಳಬೇಕು ಎಂಬ ನಿತ್ಯಸತ್ಯದ ಅನಾವರಣಗೊಳಿಸುತ್ತಾರೆ. ಎಲ್ಲರ ಜೊತೆ ಬೆರೆಯಬೇಕು ಎಂದು ಹೇಳುವುದರ ಜೊತೆಗೆ ಏಕಾಂತವನ್ನು ಅನುಭವಿಸುವ ಆನಂದಿಸುವ ಮನೋಭಾವ ಬೆಳೆಸಿಕೊಳ್ಳಲು ಹೇಳುತ್ತಾರೆ.
25 ಪತ್ರಗಳಿರುವ ಈ ಪುಸ್ತಕದಲ್ಲಿ ಕೆಲವು ಪತ್ರಗಳು ಎರಡು ಮೂರು ಪುಟಗಳಷ್ಟು ದೀರ್ಘವಿದ್ದರೆ ಮತ್ತೆ ಹಲವು ಅರ್ಧ ಪುಟದಷ್ಟು ಚಿಕ್ಕವು. ತಮ್ಮ ಮನಸ್ಸಿನ ಭಾವನೆಗಳನ್ನು ತಾಕಲಾಟಗಳನ್ನು ಹೇಳುತ್ತಲೇ ಮಗಳಿಗೆ ತನ್ನದೇ ಆದ ದೃಷ್ಟಿಕೋನವನ್ನು ಆಯ್ಕೆಯ ಸ್ವಾತಂತ್ರ್ಯವನ್ನು ಬೆಳೆಸಿಕೊಳ್ಳುವ ಉಳಿಸಿಕೊಳ್ಳುವ ಅಗತ್ಯತೆಯನ್ನು ಹೇಳುತ್ತಾರೆ .ಯಾವುದೂ ಬೋಧನೆಯ ರೂಪದಲ್ಲಿರದೆ ತಮ್ಮದೇ ಮನಸ್ಸಿನ ಸ್ವಗತ ಎನ್ನುವಂತೆ ಭಾಸವಾಗುವುದು ಇಲ್ಲಿನ ಬರಹಗಳ ವೈಶಿಷ್ಟ್ಯ. ಒಮ್ಮೆ ಕೈಗೆ ಪುಸ್ತಕ ತೆಗೆದುಕೊಂಡರೆ ಕೆಳಗಿಡಲು ಮನಸೇ ಬಾರದೆ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ ಥೇಟ್ ಜೋಗಿಯವರ ಮಿಕ್ಕೆಲ್ಲಾ ಪುಸ್ತಕಗಳಂತೆ.
ಎಲ್ಲಿಯೂ ಅತಿರಂಜಿತ ಅತಿ ಭಾವುಕ ಎಂದೆನಿಸದೆ ವಾಸ್ತವತೆಯ ಅಂಶಗಳು ಯಥಾವತ್ತಾಗಿ ಹಾಗೆಯೇ ನಿರೂಪಿತವಾಗಿರುವುದು ಖುಷಿಕೊಡುತ್ತದೆ. ಇಂದಿನ ಈ ವ್ಯಾಪಾರಿ ಮನೋಭಾವದ ಜಗತ್ತಿನಲ್ಲಿ ಸಿನಿಕರಾಗದೆ ಬಾಳಬೇಕಾದರೆ ಮನಸ್ಸಿನ ಸಮತೋಲನ ಕಾಯ್ದುಕೊಳ್ಳಬೇಕಾದರೆ ಅನುಸರಿಸಬೇಕಾದ ಕ್ರಮಗಳ ಒಂದು ಚಿತ್ರಣ ಇಲ್ಲಿ ಸಿಗುತ್ತದೆಯೇ ಹೊರತು ಹೀಗೆ ಮಾಡಬೇಕು ಹಾಗೆಯೇ ಇರಬೇಕು ಎಂಬ ನಿಯಮಗಳ ಚೌಕಟ್ಟಿನ ಕಟ್ಟುಪಾಡು ಇರುವುದಿಲ್ಲ. ಹಾಗೆಯೇ ವಿಷಯಗಳು ಮನಸ್ಸಿನ ಭಾವನೆಗಳ ವಿನಿಮಯದಂತೆ ತೋರುತ್ತದೆಯೇ ವಿನಹ ಸಿದ್ದಾಂತಗಳಂತೆ ಹೇರುವಿಕೆ ಆಗದಿರುವುದರಿಂದ ಇದು ಇತರ ವ್ಯಕ್ತಿತ್ವ ವಿಕಸನ ಪುಸ್ತಕಗಳಿಗಿಂತ ಬೇರೆಯೇ ಆಗಿ ನಿಲ್ಲುತ್ತದೆ.
ಪ್ರತಿ ತಂದೆಯಾಗಲೀ ತಾಯಿಯಾಗಲಿ ಮಗನಾಗಲಿ ಮಗಳಾಗಲಿ ಓದಲೇಬೇಕಾದ ಪುಸ್ತಕ . ಉದ್ದೇಶಪೂರ್ವಕವಾಗಿಯೇ ನಾನು ಪುಸ್ತಕದಲ್ಲಿನ ವಿಷಯಗಳನ್ನು ವಿವರಿಸಿಲ್ಲ ಅದರ ಸ್ವಾರಸ್ಯ ಜೋಗಿಯವರ ಮಾತುಗಳಲ್ಲಿಯೇ ಹೆಚ್ಚು.
ಜೋಗಿಯವರ ಪುಸ್ತಕಗಳಿಂದ ಕೋಟ್ ಮಾಡದಿದ್ದರೆ ಪುಸ್ತಕ ಪರಿಚಯ ಅಪೂರ್ಣ. ಹಾಗಾಗಿ ಕೆಲವೇ ಕೋಟ್ಸ್. ಎಲ್ಲವೂ ನನ್ನ ಬಳಿಯಲ್ಲೇ ಇದೆ ಎನ್ನುವ ಸಂತೃಪ್ತಿ ,ಎಲ್ಲವೂ ನನ್ನ ಬಳಿಗೆ ಬರಬೇಕು ಎನ್ನುವ ಅಹಂಕಾರ, ನನ್ನ ಬಳಿ ಇರುವುದಷ್ಟೇ ನನಗೆ ಸಾಕು ಎನ್ನುವ ವಿರಕ್ತಿ _ಈ ಮೂರೂ ನಮ್ಮ ಅನುಭವವನ್ನು ಸೀಮಿತಗೊಳಿಸುತ್ತದೆ. ಬದುಕು ಎಂದರೆ ಆಯಸ್ಸಿನ ಲೆಕ್ಕವಲ್ಲ ಅನುಭವಗಳ ಮೊತ್ತ.

ನಿಜವಾಗಿಯೂ ಜಿಮ್ ಬೇಕಾಗಿರುವುದು ಮನಸ್ಸಿಗೇ ಹೊರತು ದೇಹಕ್ಕಲ್ಲ. ಮನಸ್ಸಿನ ಕೊಬ್ಬನ್ನು ಕಡಿಮೆ ಮಾಡುವ ಮನಸ್ಸನ್ನು ಚುರುಕಾಗಿ ಇಟ್ಟುಕೊಳ್ಳುವ ಮನಸ್ಸು ಬೆವರುವಂತೆ ಮಾಡುವ ಜಿಮ್ ಎಲ್ಲಿದೆ ಅನ್ನುವುದನ್ನು ನೀನೇ ಹುಡುಕಿಕೊಳ್ಳಬೇಕು.
ನೀನು ಅಷ್ಟೇ ಹೊರಗೆ ಹುಡುಕ ಬೇಡ ಮನಸ್ಸಿನ ಒಳಗೇ ಹುಡುಕು. ಹಡಗು ಕಟ್ಟುವುದರಲ್ಲೇ ಆಯಸ್ಸು ಕಳೆದರೆ ಸಮುದ್ರಯಾನ ಮಾಡುವುದಕ್ಕೆ ಸಮಯ ಸಿಗುವುದಿಲ್ಲ. ಮನೆ ಕಟ್ಟುತ್ತಲೇ ಇದ್ದರೆ ಅದರಲ್ಲಿ ನೆಮ್ಮದಿಯಾಗಿ ಕಾಲ ಕಳೆಯುವುದಾದರೂ ಯಾವಾಗ?.
ನಿನ್ನ ಮನಸ್ಸಿನಲ್ಲೂ ನೀನು ಯಾವತ್ತೂ ಅನುಭವಿಸಿಯೇ ಇರದ ಭಾವಗಳಿರುತ್ತವೆ. ನಿನ್ನ ಜಗತ್ತು ನಿನ್ನೊಳಗಿರುವ ಕೆಲವೇ ಕೆಲವು ಭಾವನೆಗಳಿಗೆ ಮಾತ್ರ ಅರಳಲು ಅವಕಾಶ ಕೊಟ್ಟಿರುತ್ತದೆ ನೀನು ನಿನ್ನ ಲೋಕವನ್ನು ವಿಸ್ತಾರ ಮಾಡಿಕೊಂಡರೆ ಭಾವ ಲೋಕ ಕೂಡ ವಿಸ್ತಾರಗೊಳ್ಳುತ್ತದೆ.
ಕಟ್ಟಕಡೆಯಲ್ಲಿ ಅವರು ಕೊಡುವ ಗ್ಲೋಬ್ ರೈಡಿಂಗ್ ಉದಾಹರಣೆ ನಿಜಕ್ಕೂ ಎಷ್ಟು ಸಮಂಜಸ ನೋಡಿ. ಒಬ್ಬರು ಬಲೂನಿನ ಒಳಗಿರುತ್ತಾರೆ. ಅವರ ಉಲ್ಲಾಸ ಆತಂಕ ಹೊರಗಿನವರಿಗೆ ಕಾಣುತ್ತಿರುತ್ತದೆ. ಆದರೆ ಅವರು ಏನು ಮಾಡುವ ಹಾಗಿರುವುದಿಲ್ಲ ಬಲೂನಿನನ ಒಳಗಿರುವವರಿಗೂ ಹೊರಗಿನವರು ಕಾಣಿಸುತ್ತಾರೆ ಆದರೆ ಏನು ಹೇಳಿಕೊಳ್ಳುವಂತಿರುವುದಿಲ್ಲ. ಒಂದು ರೀತಿ ಅವರವರದೇ ಪ್ರತ್ಯೇಕ ಲೋಕವಿದ್ದಂತೆ.
ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಸಾಲುಗಳು ನೆನಪಾದವು. ಈ ಸಂದರ್ಭಕ್ಕೆ ಹೊಂದಿಕೆಯಾಗುವುದೋ ಇಲ್ಲವೋ ತಿಳಿಯದು.
ಆ ಲೋಕಗಳನ್ನು ಒಂದಾಗಿಸಬೇಕೆಂದರೆ ಝಾರ್ಬಿಂಗ್ ವಲಯದಿಂದ ಹೊರಬರಬೇಕು. ಪ್ರಾಯಶಃ ಇದು ನಾವೀಗ ಬದುಕುತ್ತಿರುವ ಜೀವನವೇ ಅಲ್ಲವೇ?
ಬಿಸಿ ಅನ್ನಕ್ಕೆ ಉಪ್ಪು ತುಪ್ಪ ಕಲಸಿ ಚೆನ್ನಾಗಿ ಮೆದ್ದು ಬಾಯಿಗೆ ಇಡುವ ಪುಟ್ಟ ಪುಟ್ಟ ಕೈತುತ್ತುಗಳಂತೆ ಈ ಲೇಖನಗಳು. ಇಲ್ಲಿನ ತಂದೆ ದ ಫಾದರ್ ಚಿತ್ರದಲ್ಲಿನ ತಂದೆಯಂತೆ ಭಾವನಾತ್ಮಕವಾಗಿ ಪೂರ ಮಗಳ ಮೇಲೆ ಅವಲಂಬಿಸಿಲ್ಲ ಅಥವಾ ನಾನು ನನ್ನ ಕನಸು ಪ್ರಕಾಶ್ ರೈ ರಂತೆ ಪೊಸೆಸ್ಸಿವ್ ಅಲ್ಲ. ಸ್ವಲ್ಪಮಟ್ಟಿಗೆ ದೃಶ್ಯದ ರವಿಚಂದ್ರನ್ ರಂತೆ ಪೂರ ಪೂರ ಪ್ರಾಕ್ಟಿಕಲ್ ಅಂತಲೂ ಅನ್ನಿಸುತ್ತಾರೆ. ಆದರೆ ಅದೆಲ್ಲ ಈ ಕಮರ್ಷಿಯಲ್ ಪ್ರಪಂಚದಲ್ಲಿ ಬದುಕಲು ಬೇಕಾದ ಅವಶ್ಯಕತೆಯೇ ಸರಿ .”ನಿನಗೆ ಆಕಾಶವನ್ನು ತೋರಿಸಿದ್ದೇನೆ ಹಾರುವ ಧೈರ್ಯ ನೀನು ಮಾಡಬೇಕು ನನಗೆ ನನ್ನ ವೃದ್ಧಾಪ್ಯವನ್ನು ಆನಂದಿಸಬೇಕಾಗಿದೆ” ಎಂದು ಇಬ್ಬರ ಮಧ್ಯೆ ಸ್ಪೇಸ್ ಕಾಪಾಡಿಕೊಳ್ಳುವ ರೀತಿ ತುಂಬಾ ಇಷ್ಟವಾಯಿತು. ಇಂತೊಳ್ಳೆ ಪುಸ್ತಕವನ್ನು ನಮಗೆ ನೀಡಿದ್ದಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು ಜೋಗಿ ಸರ್…
- ಸುಜಾತಾ ರವೀಶ್ – ಮೈಸೂರು
