ಗಣಪನ ನಿಧಾನ ಗತಿಯನು ಕಂಡು, ಮರುಕಗೊಂಡನಾ ಮಹದೇವಾ! … ಕವಿಯತ್ರಿ ರೂಪ ಮಂಜುನಾಥ ಅವರ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕೈಲಾಸದೊಡತಿ
ಸತಿ ಪಾರ್ವತಿಯು,
ಹೊರಟಳು ಸಂಜೆಯ
ವಾಯುವಿಹಾರಕೆ!
ಸತಿಗೆ ಜೊತೆಯಾದ
ಮೂಜಗದಾ ಪತಿ,
ನಾನೂ ಬರುವೆನು,
ಎಂದನು ಗಣಪತಿ!
ಚುರುಕಿನ ಷಣ್ಮುಖ
ರೊಯ್ಯೆಂದು ಹೊರಟ,
ಏರುತ ತನ್ನಯ
ಖಗವಾಹನ!
ಭಾರದಿ ಹೆಜ್ಜೆಯ
ಹಾಕಿದ ಶ್ರೀಕರ,
ಹೊರಲಾರದೆಯೇ,
ಡೊಳ್ಳೊಟ್ಟೆನಾ!
ಗಣಪನ ನಿಧಾನ
ಗತಿಯನು ಕಂಡು,
ಮರುಕಗೊಂಡನಾ
ಮಹದೇವಾ!
ಎತ್ತಿ ಗಣಪನಾ
ಭುಜಕೆ ಕೂರಿಸಿದ,
ಭಕ್ತರ ಕಾಯುವ
ಸದಾಶಿವಾ!
ಲೋಕದ ಭಾರವ
ಹೊತ್ತ ಪಶುಪತಿ,
ಹೊತ್ತನು ಸುತನ
ಮುದದಿಂದ!
ಮುದ್ದು ಕುಮಾರ
ಶ್ರೀಷ ವೃಕೋದರ,
ಗೈದನು ಸಂಚಾರ,
ಸೊಬಗಿಂದ!
ಈಶನ ಕೂಡೆ, ಶರ್ವಾಣಿ,
ಸಕಲ ಸನ್ನುತೆ, ಭವಹಾರಿಣಿ!
ಭುಜಬಲವಾದ,ಹರಸುತ,
ಶುಭಕರತ ಗಜಮುಖ!
ಎಲ್ಲರ ಸಲಹಲು ಮುನ್ನಡೆಯುತಿರುವನು,
ಮಹಾಪ್ರಜ್ಞ ಆರ್ಮುಗ!
ಶಿವ ಪರಿವಾರವ ಸತತ
ನೆನೆಯಲು,
ದೂರವಾಗುವುದು
ಭವರೋಗ!
ಯಶಕಾರಕ, ಜಗವ್ಯಾಪಕ,
ಶಿವನಿಂದಲೆ ಸಕಲ ಕಾಯಕ!
ಶಿವಪಂಚಾಕ್ಷರಿ ಪಾಪಹಾರಕ
ಶಿವಪರಿವಾರ ಮುಕ್ತಿದಾಯಕ!
- ರೂಪ ಮಂಜುನಾಥ – ಹೊಳೆನರಸೀಪುರ
