ಧಾನ್ಯದೈಸಿರಿಯೊಡಲು ಈ ರಸೆ, ರೈತನಿಗೆ ಸುಫಲ ಸುರುಚಿ ಫಲದಾತೆ, ಜಗದ ಜೀವಿಗಳ ಪೊರೆವಾಕೆ ಮಾತೆ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ….
ಧರೆಯು ಆರತಿಯೆತ್ತಿ ನಿಂತಿದೆ
ತಿಮಿರ ಸರಿಸುವ ಸೂರ್ಯದೇವಗೆ
ಅರುಣ ಸಾರಥಿಯಾಗಿ ಬಹನು
ಸಪ್ತಾಶ್ವಗಳ ಸ್ವರ್ಣರಥವೇರಿ
ತಿರೆಯು ಸುಗ್ಗಿಲಿ ಹಿಗ್ಗಿ ನಿಂತಿದೆ
‘ಕಣ’ವು ಕಣಜವು ತುಂಬಿ ನಿಂತಿದೆ
ಎಳ್ಳು,ನೆಲಗಡಲೆ,ಕಬ್ಬು ,ಕಡಲೆ,ಅವರೆ
ಹದಗೊಂಡು ಪಾಕವಾಗಿವೆ ಜಿಹ್ವೆಗೆ
ಧಾನ್ಯದೈಸಿರಿಯೊಡಲು ಈ ರಸೆ
ರೈತನಿಗೆ ಸುಫಲ ಸುರುಚಿ ಫಲದಾತೆ
ದೇಹ ಸ್ವಾಸ್ಥ್ಯದ ಮಂತ್ರದೀಕ್ಷಿತೆ
ಜಗದ ಜೀವಿಗಳ ಪೊರೆವಾಕೆ ಮಾತೆ
ಉತ್ತರಾಯಣದ ಪುಣ್ಯಕಾಲದಲಿ
ಚೈತ್ರ ಋತುವಿನ ಹೊಸ ಚಿಗುರ ಮೇಳದಲಿ
ಮಾಮರದ ತೆಕ್ಕೆಯಲಿ ಕುಕಿಲುತಿಹ
ಕೋಕಿಲದ
ಮಂಗಳ ನಿನದದಲಿ ಬಂದ ನೇಸರ
ಪಥವ ಬದಲಿಸಿ ಇಳೆಯ ಅರಮನೆಗೆ
ಭೋಗಿ ಹುಣ್ಣಿಮೆಯಲಿ ನೇಗಿಲು ಹಿಡಿದು ಸಂಭ್ರಮಿಸಲು
ಭೂಮಿತಾಯಿಯ ಚೊಚ್ಚಿಲು
ಕಂದಮ್ಮಗಳು
ತಮ್ಮ ಗೋಸಂಪದವ ಪೂಜಿಸುತಲಿ
ಅನ್ನದಾತೆಗೆ ಮಣಿದು ನಲಿದರು
ಹಬ್ಬಮಾಡುತಲಿ
ಎಳೆಯ ಬಾಲೆಯರು ಹೊಸಲಂಗ
ಧರಿಸುತ
ಚಿತ್ತಾರದ ತಟ್ಟೆಯಲಿ ಕೊಬರಿ ಬೆಲ್ಲ
ಎಳ್ಳು ಕಡಲೆಯ ಮಿಶ್ರಣವ ತುಂಬಿ
ಮನೆಮನೆಗೆ ಹಂಚುತ ನಗೆಯ ಮೊಗದೋರಿ
ಸಡಗರದಿ ‘ಒಳ್ಳೆ’ ಮಾತನಾಡುತ
ಬಂಧ ಬೆಸೆಯುತ ವಿರಸ ಮರೆಯುತ
ಖುಷಿಯ ಮನದಲಿ ಆಟವಿನೋದಗಳಲಿ ತೊಡಗಿಕೊಂಡರು
ಹೆಸರು,ಅಕ್ಕಿಯಲಿ ಮಾಡಿದ
ಖಾದ್ಯವಿಶೇಷಗಳ ಚಪ್ಪರಿಸುತ
ಜಗವ ಕಾಯುವ ದೇವ
ಲೋಕಕೊಳ್ಳೆಯದನ್ನೆ ಮಾಡೆನುತ
ಒಂದೇ ಮನದಲಿ ಭಕ್ತಿಭಾವದಿ
ಕೊಂಡಾಡಿದರು ಬಕುತಜನ ಪರಿಪಾಲಕ ಶ್ರೀಪತಿಯ….
- ಶಿವದೇವಿ ಅವನೀಶಚಂದ್ರ – ಅಂಕಣಕಾರ್ತಿ, ಕವಿಯತ್ರಿ, ಕೊಡಗು.
