ಪ್ರೇಮದ ಜೋಗುಳವ ಹಾಡುವೆ ನಿನಗೆ ಎಂದು ಬರುವೆ ನನ್ನೆದೆಯ ಅರಮನೆಗೆ?… ಕವಿ ಜ್ಯೋತಿ ಕುಮಾರ್.ಎಂ ಅವರ ಸುಂದರ ಕವಿತೆಯ ಸಾಲುಗಳನ್ನು ಪೂರ್ತಿಯಾಗಿ ಓದಿ…
ಅಂಜು ಬುರುಕಿಯಂತಿರುವ ದುಂಡು ಮಲ್ಲಿಗೆ
ನಿನ್ನ ಮನದೊಳಗಿನ ದುಗುಡವನ್ನು ಹೇಳು ಮೆಲ್ಲಗೆ
ಗಾಳಿ ಬಂದರೂ ಮಿಸುಕುತಿಲ್ಲ,ಹೊಯ್ದಾಟವೆ ತುಂಬಿದೆಯಲ್ಲ
ಘಮ ಘಮದ ಗಮನ ಎಲ್ಲಿ ಹೋಯಿತು?||1||
ಕಾಡು ಮೇಡಿನ ಮಲ್ಲಿಗೆಯಲ್ಲ ನೀನು
ನನ್ನ ಕಾಡುತ್ತಿರುವ ಮಿಂಚುಳ್ಳಿಯ ಕಾನು
ಮನದ ಮಂದಾರವಲ್ಲಿಯ ಚೆಲ್ವಿ ಮೀನು
ಹೃದಯ ತುಂಬಿಸಿಕೊಂಡಿರುವ ಜಠಿಲ ರಂಗೋಲಿಯ ಅರ್ಥವೇನು?||2||
ಗೆರೆ ಗೆರೆಗಳು ಕೈಹಿಡಿದು ಮೈಬಳಸಿ ಬೆಸೆದಿವೆ ಕಲಿಲ
ನೋಡಿದ ಕೂಡಲೇ ಬಿಡಿಸಲಾರೆನಲ್ಲ ನಾನು ಸರಳ
ಬಿಂದುಗಳು ಗೆರೆಗಳ ನಡುವಿನ ಅರ್ಥ,ಇಲ್ಲದ ತರ್ಕ
ಪ್ರಮೇಯಗಳ ಬಿಡಿಸಿ ಹೇಳುವೆಯಾ?ಪ್ರೇಮಿ ಗಣಿತಜ್ಞೆ||3||
ನೀನು ಬಿಟ್ಟರೂ, ನಿನ್ನ ಬಿಡಲಾರೇನು ನಾನು
ಮನದೊಳಗಿನ ಅಂಜಿಕೆಯ ತಿಳಿಸಿ ಹೇಳೆಯಾ ನೀನು
ಮರೆತು ಬಿಟ್ಟು ಇರಬಲ್ಲೆಯಾ ನೀನು ನನ್ನ?
ಮರೆತಂತೆ ನಟಿಸುತ್ತಿರುವ ನನ್ನೊಲುಮೆಯ ಚಿನ್ನ ||4||
ಪ್ರೇಮದ ಜೋಗುಳವ ಹಾಡುವೆ ನಿನಗೆ
ಎಂದು ಬರುವೆ ನನ್ನೆದೆಯ ಅರಮನೆಗೆ?
ಕಾಯುತಿದೆ ನಿನ್ನ ಅಪ್ಪುಗೆಯನ್ನು ಮಂಚದ ಮೇಲಿನ ಮಲ್ಲಿಗೆ
ಗಲ ಗಲ ಬಳೆಯ ಸಪ್ಪಳವು ಅಡುಗೆ ಮನೆಗೆ||5||
ನಮ್ಮಂತಃಪುರದಲಿ, ನನ್ನೀ ಪ್ರೀತಿ ಹೆಚ್ಚಾಗಿ, ಹುಚ್ಚಾಗಿ
ನಿನ್ನ ಎದೆಯು ಉಬ್ಬಲಿ,ಉಬ್ಬುತ್ತಲೆ ಇರಲಿ
ನನ್ನ ಉಸಿರುಗಟ್ಟಿಸುವ ಬಿಗಿದಪ್ಪುಗೆಗೆ
ನಿನ್ನ ಸೊಂಟ ಇನ್ನಷ್ಟು ಕಿರಿದಾಗಲಿ||6||
ಹೆದರದಿರು ಪ್ರತೀ ತಿಂಗಳ ಆ ನರಕ ಯಾತನೆಗೆ
ಮೂರು ದಿನಗಳವರೆಗೂ ಪಾತ್ರಗಳು ಅದಲು ಬದಲು
ತಲೆ ಮೈಗೆ ಬಿಸಿ ಬಿಸಿ ನೀರಿನ ಅಭ್ಯಂಜನ
ಕರಿದ ಹಪ್ಪಳ ಸಂಡಿಗೆ ಪಾಯಸದ ಭೋಜನ||7||
ಋತು ಬಂಧದ ದಿನಗಳಲಿ ನೀನು ಮನೆಯಿಂದ ಹೊರಗೆ
ನನ್ನ ಪ್ರೀತಿ ತುಂಬಿದ ಹೃದಯದಲ್ಲಿ ಬೆಚ್ಚಗಿರು ಒಳಗೆ
ಮೂರು ದಿನಗಳು ಮಾತ್ರ ನೀನು ಪಟ್ಟದ ರಾಣಿ
ನಾಲ್ಕನೆಯ ದಿನಕ್ಕೆ ನಾನು ಅದೇ ಮುನಿಸಿನ ನಾಣಿ||8||
ಮಲ್ಲಿಗೆ,ಅಂಜದೆ ಮಡದಿಯಾಗು ಮೆಲ್ಲಗೆ!
ಉಸಿರುಗಟ್ಟಿಸಿ ಪ್ರೀತಿಸುವೆನು ಮರಣಿಸುವವರೆಗೆ
ಪಲ್ಲಂಗದ ಮೇಲಾಸು ದಿನವೂ ನಲುಗುತಲಿರಲಿ
ನಿನ್ನ ನನ್ನ ಬಾಳಲಿ ನಗು ತುಂಬಿ ತುಳುಕತಲಿರಲಿ||9||.
- ಜ್ಯೋತಿ ಕುಮಾರ್.ಎಂ(ಜೆ.ಕೆ.) – ಕವಿಗಳು ಓದಿದ್ದು ಎಮ್ಎಸ್ಸಿಎಮ್ ಇಡಿ. ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಶಿಕ್ಷಕರು. ಮೂಲತಃ ದಾವಣಗೆರೆ ತಾಲ್ಲೂಕು ಮುದಹದಡಿ ಗ್ರಾಮದವರು. ಸದ್ಯ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗುತ್ತಿದುರ್ಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಹವ್ಯಾಸಿ ಬರಹಗಾರರಾಗಿದ್ದಾರೆ
