ಮಾನಸ….ಇದು ಮನಸಿನ ಮಾತು (ಭಾಗ-೩೬)

ಮದುವೆ ಮುಂಚೆಯೇ ಅನುಮಾನ ಪಡುವ ಸಂಗಾತಿಯೊಂದಿಗೆ ಜೀವನ ಪೂರ್ತಿ ಕಳೆಯಬೇಕು ಎಂದಾಗ ಒಂದು ಕ್ಷಣ ಯೋಚಿಸಿ, ಸಮಾಜಕ್ಕೆ, ಯಾರದೇ ಬಲವಂತಕ್ಕೆ ಮದುವೆ ಆದರೂ ಆ ಸಂಬಂಧ ಗಟ್ಟಿಯಾಗಿರುವುದಿಲ್ಲ. ಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಒಬ್ಬ ಹುಡುಗ ಸುಮಾರು 25 ರಿಂದ 26 ರ ವಯಸ್ಸಿರಬಹುದು. ಬಹಳ ಶಿಸ್ತಾಗಿ ರೆಡಿಯಾಗಿ ಚೆಂದದ ಶರ್ಟ್ ತೊಟ್ಟು, ಭುಜಕ್ಕೆ ಬ್ಯಾಗ್ ಪ್ಯಾಕ್ ಹಾಕಿಕೊಂಡು ಮನೆಯಿಂದ ಗೇಟಿನ ಬಳಿ ಬಂದು, ಗೇಟ್ ತೆರೆದು ಹೊರಗೆ ಬಂದ ಕೈಯಲ್ಲಿ ಮೊಬೈಲಿತ್ತು. ನೋಡುತ್ತಿದ್ದಂತೆ ಹೊರಗೆ ರೋಡಿಗೆ ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ವಿಶೇಷವೆಂದರೆ ಪ್ಯಾಂಟ್ ಬದಲು ಶರ್ಟ್ ಕೆಳಗೆ ಟವಲ್ ಸುತ್ತಿಕೊಂಡಿದ್ದು. ನಾನು ನೋಡುತ್ತಲೇ ಇದ್ದೆ, ಏನಾಗುತ್ತಿದೆ ಎಂದು ನನ್ನ ಮನಸಿಗೆ ಅರ್ಥವಾಗಿತ್ತು. ನನಗೆ ತುಂಬಾ ನಗು ಬಂದಿತು, ಅವನೂ ಸಹ ನನ್ನ ನೋಡಿ ಬಹಳ ಸಂಕೋಚ ಪಟ್ಟಹಾಗಿತ್ತು ಸುತ್ತ ಜನರೂ ಅವನನ್ನು ನೋಡುತ್ತಿದ್ದರು.

ಸೆಲ್ಫಿ ತೆಗೆದುಕೊಂಡ ತಕ್ಷಣ ಅದನ್ನು ಯಾರಿಗೋ ಕಳಿಸಿದ್ದು ನಂತರ ಆ ಕಡೆಯಿಂದ ಕರೆ ಬಂದಿದ್ದು, ಇದಿಷ್ಟೂ ಐದು ನಿಮಿಷದಲ್ಲಿ ಆಗಿತ್ತು. ನಂತರ ಕೋಪದಿಂದ ಮಾತಾನಾಡುವುದು ಅವನ ಮುಖ ಚರ್ಯೆಯಿಂದ ತಿಳಿಯಿತು. ಸ್ವಲ್ಪ ಹತ್ತಿರ ಹೋಗುತ್ತಿದ್ದಂತೆ ಅವನ ಮಾತುಗಳು ನನ್ನ ಕಿವಿಗೆ ಬಿದ್ದದ್ದು ಹೀಗೆ……ನೋಡು ನಂಬಿಕೆ ಇದ್ರೆ ಇರು ಇಲ್ಲಾ ಅಂದ್ರೆ ಇರಬೇಡಾ ಅಷ್ಟೆ. ಪ್ರತೀ ದಿನ ನಾನು ಎಲ್ಲಿ ಇದೀನಿ, ಎಲ್ಲಿಗೆ ಹೋಗ್ತೀನಿ ಅಂತ ನಿನಗೆ ಪ್ರೂವ್ ಮಾಡಿಕೊಂಡು ಬದುಕಬೇಕಿಲ್ಲ. ನಿಮ್ಮ ಅಪ್ಪನಿಗೆ ಹೇಳಿ ಮದುವೆ ಕ್ಯಾನ್ಸಲ್ ಮಾಡಿಸು ಎಂದು ಹೇಳಿ ನಂತರ ತನ್ನ ಪಾಡಿಗೆ ತಾನು ಮನೆಯ ಒಳಗೆ ಹೊರಟು ಹೋದ.

ಈ ಘಟನೆಯಿಂದ ತಿಳಿಯುವುದು ಬಹಳ ಇದೆ. ನಂಬಿಕೆ ಅಷ್ಟೆ. ಯಾವುದೇ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವಾಗ, ಮದುವೆ ಆಗಲು ಹೊರಟಿರುವಾಗ ನಂಬಿಕೆ ಇಡಬೇಕು, ಇಲ್ಲದಿದ್ದರೆ ಮುಂದುವರಿಯಲು ಹೋಗಲೇ ಬಾರದು. ಇಬ್ಬರ ಜೀವನವೂ ಹಾಳಾಗುತ್ತದೆ.

ಫೋಟೋ ಕೃಪೆ : google

ತಂದೆ ತಾಯಿಯ ಬಲವಂತಕ್ಕೂ ಸಹ ಮದುವೆ ಆಗಬಾರದು. ಮದುವೆ ಮಾತುಕತೆಯ ಸಂದರ್ಭದಲ್ಲಿ ಹೆಣ್ಣು, ಗಂಡಿನ ಅನ್ವೇಷಣೆಯಲ್ಲಿ ಇದ್ದಾಗ ಬೇರೆ ಯಾರನ್ನಾದರೂ ಪ್ರೀತಿ ಮಾಡುತ್ತಿದ್ದರೆ, ಮುಕ್ತವಾಗಿ ತಂದೆ ತಾಯಿಯ ಬಳಿ ಅಥವಾ ಮನೆಯ ಸದಸ್ಯರ ಬಳಿ ಹೇಳಿಬಿಡಬೇಕು. ಇಲ್ಲಿ ಇಬ್ಬರ ಜೀವನವಲ್ಲದೆ ಎರಡು ಕುಟುಂಬಗಳ ಮರ್ಯಾದೆ ಹಾಗು ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆ ಹೆಚ್ಚು. ನೆಂಟರಿಷ್ಟರ ಬಳಿ ಉತ್ತರ ಹೇಳಲು ಬಹಳ ಕಷ್ಟವಾಗುತ್ತದೆ. ಜನರ ಅಭಿಪ್ರಾಯಗಳು ಬೇರೆ ಬೇರೆ ರೀತಿ ಇರುತ್ತದೆ.

ಸಮಾಜದ ಸುತ್ತಾ ಮುತ್ತಾ ಬದುಕುತ್ತಿರುವ ಜನರಲ್ಲಿ ಅವರ ಘನತೆ, ಮರ್ಯಾದೆ ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ಅನಿಸಬಹುದು ಸಮಾಜ ಬಂದು ನಮ್ಮ ತೊಂದರೆಗಳನ್ನು ನಿವಾರಿಸುತ್ತದೆಯೇ, ಪರಿಹಾರ ಕಂಡುಕೊಡುತ್ತದೆಯೇ ಎಂದು. ಆದರೆ ನಾವೇ ಕಟ್ಟಿಕೊಂಡಿರುವ ಸಮಾಜದಲ್ಲಿ ನಾವೇ ಉತ್ತರಿಸಬೇಕು, ನಾವೇ ಎದುರಿಸಬೇಕು.

ಸಾಮಾನ್ಯವಾಗಿ ಎಲ್ಲರಿಗೂ ಜೀವನದಲ್ಲಿ ಅನೇಕ ಬಗೆಯ ಅನುಭವಗಳು ಆಗುತ್ತಿರುತ್ತದೆ. ಸಂಬಂಧದಲ್ಲಿ ಎಲ್ಲರನ್ನೂ ಬ್ಯಾಲೆನ್ಸ್ ಮಾಡುವುದರಲ್ಲಿಯೇ ಜೀವನ ಕಳೆದು ಹೋಗುತ್ತದೆ. ತಾಯಿ ಹಾಗು ಹೆಂಡತಿಯ ಮಧ್ಯೆ, ಹೆಂಡತಿ ಹಾಗು ಒಡಹುಟ್ಟಿದವರ ಮಧ್ಯೆ ಹೀಗೆ ಅನೇಕ ಜನರ ನಡುವೆ ಒಗ್ಗಿಕೊಂಡು ಹೋಗುವ ರೀತಿ ಜನಸಾಮಾನ್ಯರದ್ದು.

ಇದಕ್ಕೆಲ್ಲ ಕಾರಣ ನಂಬಿಕೆಗಿಂತ, ಪ್ರೀತಿಗಿಂತ ಅಭದ್ರತೆ. ಇದು ಮಕ್ಕಳಿಂದ ಹಿಡಿದು ಮುದುಕರವರೆಗೂ ಕಾಡುವ ಅಂಶ. ಅಭದ್ರತೆ ಮನುಷ್ಯನನ್ನು ಖಿನ್ನತೆವರೆಗೂ ಕರೆದುಕೊಂಡು ಹೋಗುತ್ತದೆ. ಎಲ್ಲಿ ನಿಜವಾದ ಪ್ರೀತಿ ವಿಶ್ವಾಸ ಇರುತ್ತದೋ ಅಲ್ಲಿ ಅಭದ್ರತೆ ಕಾಡುವುದಿಲ್ಲ. ಅಭದ್ರತೆಯಿಂದಲೇ ಸುಳ್ಳು, ಮೋಸ ನಡೆಯುವುದು. ಸತ್ಯ ಗೊತ್ತಾದರೆ ಎಲ್ಲಿ ತಮ್ಮನ್ನು ಬಿಟ್ಟು ಹೋಗುತ್ತಾರೋ ಎಂಬ ಅಭದ್ರತೆಯಿಂದಲೇ ಜೀವನ ನಡೆಸುವ ಎಷ್ಟೋ ಜನರ ಮನಸ್ಥಿತಿ, ಪರಿಸ್ಥಿತಿ ಮಿತಿ ಮೀರಿರುತ್ತದೆ. ಆಪ್ತಸಲಹೆ ಅತ್ಯವಶ್ಯಕವಾಗಿ ಬೇಕಾಗುತ್ತದೆ.

ಫೋಟೋ ಕೃಪೆ : google

ನಿಜವಾದ ಪ್ರೀತಿ ಇದ್ದಲ್ಲಿ ಅಭದ್ರತೆ ಇರುವುದಿಲ್ಲ. ಆ ಪ್ರೀತಿ ಎಂದಿಗೂ ದೂರವಾಗದು. ಒಬ್ಬೊಬ್ಬರಿಗೆ ಒಂದೊಂದು ಥರ ಒತ್ತಡಗಳಿರುತ್ತದೆ. ಯಾವಾಗಲೂ ಒಬ್ಬರಿಗೇ ಸಮಯ ಕೊಡಲು ಸಾಧ್ಯವಿಲ್ಲ ಇದನ್ನು ಅರ್ಥ ಮಾಡಿಕೊಂಡು ಪ್ರೀತಿಸಿದಾಗ ಪ್ರೀತಿಯ ತೂಕ ಹೆಚ್ಚುತ್ತದೆ. ಆದರೆ ಪ್ರೀತಿ ಅನ್ನುವುದು ಆಕರ್ಷಣೆಗೆ ಮಾತ್ರ ಸೀಮಿತವಾಗದೆ ಒಂದು ಸುಂದರ ಸ್ನೇಹ ಸಂಬಂಧಕ್ಕೂ ಅರ್ಥವಿದೆ, ಪ್ರೀತಿಯಿದೆ. ಪ್ರೀತಿಯೊಂದೆ ಆದರೆ ಭಾವನೆ ಬೇರೆ ಬೇರೆ.

ಈ ವಿಚಾರಗಳನ್ನು ತಿಳಿದು ಅಭದ್ರತೆಯ ಮನಸ್ಥಿತಿ ಇರುವವರು, ಅನುಮಾನ ಸ್ವಭಾವದವರು, ನಂಬಿಕೆ ಇರದವರು ಜೀವನ ನಡೆಸುವುದು ಬಹಳ ಕಷ್ಟವಾಗುತ್ತದೆ. ಯಾವುದನ್ನೂ ಸಹ, ಯಾರನ್ನೂ ಸಹ ನಂಬದವರು ಉತ್ತಮರಾಗಿ ಬಾಳುವುದು ಬಹಳ ಕಷ್ಟ. ಮನಸ್ಥಿತಿ ಬದಲಾಗಬೇಕೆಂದರೆ ಆಪ್ತಸಮಾಲೋಚನೆ ನಡೆಸಿಕೊಳ್ಳಬೇಕು ಅಥವಾ ಆತ್ಮೀಯರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳಬಹುದು.

ಜೀವನದಲ್ಲಿ ಧ್ಯೇಯ ಮುಖ್ಯ. ಯಾವುದೇ ಕೆಲಸ ಮಾಡುವಾಗ ಶ್ರದ್ಧೆ ಹಾಗು ನಂಬಿಕೆ ಇರಬೇಕು. ಅಭದ್ರತೆಯ ಜೀವನ ಮನೋಬಲವನ್ನು ಕುಗ್ಗಿಸುತ್ತದೆ.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW