ಮಾನಸ….ಇದು ಮನಸಿನ ಮಾತು (ಭಾಗ-೩೭)

ಶಾಲೆ ಮುಗಿಸಿಕೊಂಡು ಮಗಳು ಮನೆಗೆ ಬಂದಳು, ಬರುತ್ತಿದ್ದ ಹಾಗೆ ಬ್ಯಾಗ್ ಬಿಸಾಕಿ, ಬಾತ್ ರೂಮ್ ಗೆ ಓಡಿದಳು. ಅವಳ ಕಾಲು ರಕ್ತವಾಗಿತ್ತು, ಯೂನಿಫಾರ್ಮ್ ರಕ್ತವಾಗಿತ್ತು. ತಾಯಿಗೆ ಗಾಬರಿಯಾಗಿತ್ತು, ಕಳೆದ ವಾರವಷ್ಟೇ ಅವಳು ತಿಂಗಳ ಮುಟ್ಟು ಕಳೆದಿತ್ತು. ಆದರೂ ತಾಯಿಗೆ ಆತಂಕವಾಯಿತು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಮಗಳು ಆಚೆ ಬರುವುದನ್ನೇ ಕಾಯುತ್ತಾ ನಿಂತಳು, ಮಗಳು ಸ್ವಲ್ಪ ಹೊತ್ತಿನ ನಂತರ ಬಾತ್ ರೂಂ ನಿಂದ ಹೊರಗೆ ಬಂದಳು. ಬಹಳವಾಗಿ ಅತ್ತಿದ್ದಳು, ಏನಾಯಿತು ಎಂದು ಅವಳ ತಾಯಿ ಕೇಳಿದಾಗ ಬರೀ ಅಳುವುದೊಂದೇ ಉತ್ತರವಾಗಿತ್ತು. ಸಂಜೆ ಅವಳ ತಂದೆ ಮನೆಗೆ ಬರುತ್ತಿದ್ದಂತೆ, ತಾಯಿ ವಿಷಯವನ್ನು ಹೇಳಿದಾಗ ಅವನಿಗೂ ಗಾಬರಿ ಆಯಿತು. ಇಬ್ಬರೂ ಏನು ಕೇಳಿದರೂ ಹೇಳದೆ ಅಳುತ್ತಾ ಕುಳಿತಿದ್ದಳು ಮಗಳು. ರಾತ್ರಿ ಆಗುತಿದ್ದಂತೆ, ರಕ್ತಸ್ರಾವ ಹೆಚ್ಚಾಗಿ ಹೊಟ್ಟೆ ನೋವೆಂದು ಜೋರಾಗಿ ಅಳಲು ಶುರು ಮಾಡಿದಳು. ತಂದೆ ತಾಯಿ ಇಬ್ಬರೂ ಅವಳನ್ನು ವೈದ್ಯರ ಬಳಿ ಕರೆದುಕೊಂಡು ಹೋದರು.

ಗೈನೆಕಾಲಜಿಸ್ಟ್ ಆದ ಅವರು ಪರೀಕ್ಷೆ ಮಾಡಿ ಅವಳನ್ನು ಹೊರಗೆ ಕೂರಲು ಹೇಳಿ, ತಂದೆ ತಾಯಿ ಇಬ್ಬರನ್ನೂ ಒಳಗೆ ಕರೆದು, ಅವಳ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದರು. ಈ ವಿಷಯ ಕೇಳಿ ಇಬ್ಬರಿಗೂ ಭಯ, ದುಃಖ ಎರಡೂ ಒಟ್ಟಿಗೆ ಆಯಿತು. ಯಾರೆಂದು, ಹೇಗೆ ಕೇಳುವುದು ಮಗಳನ್ನು ಎಂದು ವೈದ್ಯರ ಬಳಿ ಕೇಳಿದಾಗ, ಇವತ್ತು ಏನೂ ಕೇಳಬೇಡಿ, ನಿದ್ದೆ ಬರುವ ಹಾಗೆ ಇಂಜೆಕ್ಷನ್ ಕೊಟ್ಟಿರುವೆ, ನೋವು ಸಹ ಕಡಿಮೆಯಾಗುತ್ತದೆ, ನಾಳೆ ಕರೆದುಕೊಂಡು ಬನ್ನಿ, ಶಾಲೆಗೆ ಕಳುಹಿಸಬೇಡಿ ಎಂದು ಹೇಳಿ ಕಳುಹಿಸಿದರು. ಮಾರನೆ ದಿನ ವೈದ್ಯರ ಬಳಿ ಮತ್ತೆ ಕರೆದುಕೊಂಡು ಹೋದಾಗ ತಂದೆ ತಾಯಿಯನ್ನು ಹೊರಗಡೆ ಕೂರಲು ಹೇಳಿ ಮಗಳನ್ನು ಮಾತ್ರ ಒಳಗೆ ಕೂರಲು ಹೇಳಿ, ನಡೆದ ವಿಷಯವೇನೆಂದು ಕೇಳಿದಾಗ, ಬಿಕ್ಕೀ ಬಿಕ್ಕೀ ಅಳಲು ಶುರು ಮಾಡಿದಳು. ಅವಳಿಗೆ ಸಮಾಧಾನ ಮಾಡಿದ ವೈದ್ಯರಿಗೆ ಎಲ್ಲಾ ಹೇಳಿದಳು.

ತಾನು ಶಾಲೆಗೆ ಹೋಗುವ ವ್ಯಾನ್ ಡ್ರೈವರ್ ನಿಂದ ಹೀಗಾಯ್ತು ಎಂದು. ಇವಳು ಇಳಿಯುತ್ತಿದ್ದದ್ದು ಕೊನೆಯಲ್ಲಿ. ಒಬ್ಬಳೇ ವ್ಯಾನ್ ನಲ್ಲಿ ಇರುತ್ತಿದ್ದಳು. ಅಂದು, ಶಾಲೆಯ ಆಯಮ್ಮ ರಜೆ ಹಾಕಿದ್ದರಿಂದ ವ್ಯಾನಿನಲ್ಲಿ ಬರದಿದ್ದ ಕಾರಣ ಈ ಘಟನೆ ನಡೆದಿತ್ತು. ಇವಳ ಮನೆಯ ಕಡೆಗೆ ತಿರುಗಿಸುವ ಬದಲು, ನಿರ್ಜನ ಪ್ರದೇಶಕ್ಕೆ ವ್ಯಾನ್ ತೆಗೆದುಕೊಂಡು ಹೋಗಿ, ವ್ಯಾನಿನಲ್ಲಿಯೇ ಅತ್ಯಾಚಾರ ಮಾಡಿದ್ದ.

ಫೋಟೋ ಕೃಪೆ :google

ವೈದ್ಯರು ಈ ವಿಷಯ ಅವಳ ತಂದೆ ತಾಯಿಗೆ ತಿಳಿಸಿದರು. ಮರು ದಿನ ಶಾಲೆಯಿಂದ ಟಿ ಸಿ ತರಲು ಹೊರಟರು. ಶಾಲೆ ತಲುಪುತ್ತಿದ್ದಂತೆ ಆ ಡ್ರೈವರ್ ಇವರನ್ನು ಕಂಡು, ವಿಕಾರವಾಗಿ ನಗುತ್ತಾ ತನಗೇ ಏನೂ ಸಂಬಂಧವೇ ಇಲ್ಲದಂತೆ ನಿಂತಿದ್ದ. ಇದನ್ನು ಕಂಡು ಅವರಿಗೆ ಹೊಟ್ಟೆ ಉರಿದು ಸಂಕಟ ಅನುಭವಿಸಿಕೊಂಡು ಬಂದಿದ್ದಷ್ಟೇ. ಅವರು ಪೋಲೀಸ್ ಕಂಪ್ಲೇಂಟ್ ಕೊಡಬಹುದಿತ್ತು ಆದರೆ ಮಗಳ ಮರ್ಯಾದೆ ಹೋಗುತ್ತದೆ, ಅವಳ ಮುಂದಿನ ಭವಿಷ್ಯ ನೆನೆಸಿಕೊಂಡು ಅಸಹಾಯಕರಾಗಿ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಕೊಡಲಿಲ್ಲ. ನಂತರ ಆ ಹುಡುಗಿಗೆ ಕೌನ್ಸಲಿಂಗ್ ನೀಡಿ, ಹೊಸ ಬದುಕು ರೂಪಿಸಿಕೊಳ್ಳುವಂತೆ ಮಾಡಲಾಯಿತು.

ಶಾಲೆಯ ವಾಹನದಲ್ಲಿ ಕಳಿಸುವ ಪೋಷಕರಿಗೆ ಕಿವಿ ಮಾತೆಂದರೆ. ಯಾರನ್ನೂ ಅತಿಯಾಗಿ ನಂಬಿ ನಿಮ್ಮ ಮಕ್ಕಳನ್ನು ಬಿಡಬೇಡಿ. ಮಕ್ಕಳು ಸಪ್ಪಗಿದ್ದಾಗ, ಭಯದಿಂದ ಶಾಲೆಗೆ ಹೋಗಲು ನಿರಾಕರಿಸಿದಾಗ, ಮಕ್ಕಳನ್ನು ಕೂರಿಸಿಕೊಂಡು ನಿಧಾನವಾಗಿ ಅವರ ಜೊತೆ ಮಾತನಾಡಬೇಕು. ನಾವು ನಿನ್ನ ಪರವಾಗಿ ಇದ್ದೇವೆ ಏನೇ ತೊಂದರೆ ಇದ್ದರೂ ಬಗೆಹರಿಸೋಣ ಎಂದು ಅವರಿಗೆ ಆತ್ಮವಿಶ್ವಾಸ ತುಂಬಿದಾಗ ಮಕ್ಕಳು ಅವರ ಸಮಸ್ಯೆಯನ್ನು ತಿಳಿಸಲು ಪ್ರಯತ್ನ ಪಡುತ್ತಾರೆ.

ಪೋಷಕರು ಮುಂದಿನ ನಿರ್ಧಾರಗಳನ್ನು ತೆಗೆದುಕೊಂಡು ಮಕ್ಕಳ ಮನಸ್ಸನ್ನು ಸಂತೋಷವಾಗಿ ಇಡಲು ಹೆಚ್ಚು ಪ್ರಯತ್ನ ಮಾಡಬೇಕು. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಮನೆಗಳಲ್ಲಿ ಯಾರಾದರೂ ಒಬ್ಬರು ಸಮಯ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳಲೇ ಬೇಕು. ಇಲ್ಲದಿದ್ದಲ್ಲಿ ಈ ಸಮಸ್ಯೆಗಳು ಉಲ್ಬಣಗೊಂಡು ಮಕ್ಕಳು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಶಾಲಾ ವಾಹನದ ಚಾಲಕನ ವಿಳಾಸ, ದೂರವಾಣಿ ಸಂಖ್ಯೆ ಇಟ್ಟುಕೊಳ್ಳಲೇ ಬೇಕು. ನಿಗದಿತ ಸಮಯಕ್ಕೆ ಬರದಿದ್ದಲ್ಲಿ ಕರೆ ಮಾಡಿ ವಿಚಾರಿಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ, ಚಾಲಕನಾಗಲಿ, ನಿರ್ವಾಕನಾಗಲಿ ಕರೆದು ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳಿದರೆ, ನಿರಾಕರಿಸಬೇಕೆಂದು ತಿಳಿ ಹೇಳಬೇಕು. ಗುಡ್ ಟಚ್ ಬ್ಯಾಡ್ ಟಚ್ ಅಂದರೆ ಹೆಣ್ಣು ಮಕ್ಕಳನ್ನು ಮುಟ್ಟಿ ಮಾತನಾಡಿಸುವ ಕ್ರಿಯೆ ಏನು ಎಂದು ಹೇಳಿಕೊಡಬೇಕು. ವಾಹನದಲ್ಲಿ ಯಾವುದೇ ರೀತಿಯಲ್ಲಿ ಚಾಲಕ, ನಿರ್ವಾಹಕ, ಇತರ ಗಂಡು ಮಕ್ಕಳು ಅಹಿತಕರವಾಗಿ ನಡೆದುಕೊಂಡಾಗ ಕೂಡಲೆ ಪೋಷಕರಿಗೆ ಅಥವಾ ಶಾಲಾ ಶಿಕ್ಷಕರಿಗೆ ಭಯಪಡದೆ ತಿಳಿಸಬೇಕು ಎಂದು ಅವರಿಗೆ ತಿಳಿಸಿಕೊಡಬೇಕು.

ಫೋಟೋ ಕೃಪೆ :google

ಚಿಕ್ಕ ಹುಡುಗರಲ್ಲಿಯೂ ಅಂದರೆ ಸಮಸ್ಯೆಗಳು ಕಂಡು ಬಂದರೆ ಅವರಿಗೆ ಬೈಯ್ಯದೇ, ಹೊಡೆಯದೇ ನಿಧಾನವಾಗಿ ಅವರ ಸಮಸ್ಯೆಗಳನ್ನು ಕೇಳಿ ಅವರಿಗೆ ಹೇಗೆ ಸಾಂತ್ವಾನ ಮಾಡಬೇಕು, ಹೇಗೆ ಅದರಿಂದ ಹೊರಬರಬೇಕು ಎಂದು ತಿಳಿಸಬೇಕು. ಅಕಸ್ಮಾತ್ತಾಗಿ ಯಾವುದೇ ಹೆಣ್ಣು ಮಕ್ಕಳು ಒಬ್ಬರೇ ಬರುವ/ಹೋಗುವ ಸಂದರ್ಭ ಬಂದಾಗ ಅದರಲ್ಲಿ ಹೋಗದೆ ಬೇರೆ ವ್ಯವಸ್ಥೆ ಕಡ್ಡಾಯವಾಗಿ ಮಾಡಲೇ ಬೇಕಾದ ಕೆಲಸ ಪೋಷಕರು ಅಥವಾ ಶಾಲಾ ಸಿಬ್ಬಂದಿ ವರ್ಗದವರದು. ಅನಿವಾರ್ಯ ಸಂದರ್ಭದಲ್ಲಿ ವಾಹನ ಚಾಲಕನಿಗೆ ತಾನಿರುವ ಜಾಗದ ಲೊಕೇಷನ್ ಕಳಿಸಲು ಹೇಳಿ ಪೋಷಕರು, ಶಾಲೆಯ ಸಿಬ್ಬಂದಿ ವರ್ಗದವರು ಟ್ರ್ಯಾಕ್ ಮಾಡುತ್ತಿರಬೇಕು.

ಎಳೆಯ ಮಕ್ಕಳ ಮನಸು ಬಹಳ ಮೃದು ಅದನ್ನು ಹೊಸಕಿ ಹಾಕದೆ ಹೂವಿನಂತೆ ಅರಳಿಸುವ ಹಾಗು ಅವರ ಉಜ್ವಲ ಭವಿಷ್ಯಕ್ಕೆ ಅವರ ಜೊತೆಯಲ್ಲಿಯೇ ಇರುತ್ತೇವೆ ಎಂಬ ಭರವಸೆ ನೀಡುವ ಜವಾಬ್ದಾರಿ ಸಮಾಜದಲ್ಲಿ ಪ್ರತಿಯೊಬ್ಬರ ಹೊಣೆ ಹಾಗು ಕರ್ತವ್ಯವಾಗಬೇಕು. ತಮ್ಮ ಮನೆಯ ಮಕ್ಕಳಿಗಷ್ಟೇ ಪ್ರಾಧಾನ್ಯತೆ ಕೊಡದೆ ನಮ್ಮ ಸುತ್ತಮುತ್ತ ಮನೆಯ ಮಕ್ಕಳ ಕಾಳಜಿ ವಹಿಸುವುದು ಹಿರಿಯ, ಕಿರಿಯ ನಾಗರೀಕರ ಆದ್ಯ ಕರ್ತವ್ಯವಾಗಿದೆ.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW