ಕೃಷ್ಣದೇವರಾಯರಂತಹ ಪರಾಕ್ರಮಿ, ಧರ್ಮಭೀರು, ಸಾಹಿತ್ಯ ಪ್ರೇಮ, ದಕ್ಷ ಆಡಳಿತ ಮತ್ತು ಮಹಾನವಮಿ ಮಂಟಪ ಕುರಿತು ಲೇಖಕರಾದ ವಿಂಗ್ ಕಮಾಂಡರ್ ಸುದರ್ಶನ ಅವರು ಬರೆದ ಲೇಖನವಿದು. ಮುಂದೆ ಓದಿ..
ಕೃಷ್ಣದೇವರಾಯರು ನಮ್ಮ ಅಕ್ಕ ತಿರುಮಲಾದೇವಿಯನ್ನು ಮದುವೆಯಾದ ಮೇಲೆ ನಾನು ಶ್ರೀರಂಗಪಟ್ಟಣದಿಂದ ವಿಜಯನಗರಕ್ಕೆ ಬರುತ್ತಿರುವುದು ಇದು ಎರಡನೇ ಸಲ. ಮಹಾನವಮಿ ಮಂಟಪದ ಉಧ್ಘಾಟನೆಗೆಂದು ನಮ್ಮ ತಂದೆಯವರಾದ ಸಾಮಂತರಾಜ ಕುಮಾರ ವೀರಯ್ಯನವರಿಗೆ ವಿಷೇಶ ಆಹ್ವಾನ ಬಂದಿತ್ತು,ಆದರೆ ಅವರ ಆರೋಗ್ಯ ಸರಿಯಿರಲಿಲ್ಲ, ಇಷ್ಟು ದೂರದ ಪ್ರಯಾಣ ಮಾಡುವುದು ಅಸಾಧ್ಯ..’ನೀನೇ ಹೋಗಿ ಬಾ..ಚಿಕ್ಕ ವೀರಯ್ಯ’ ಎಂದಾಗ ನನಗೂ ನನ್ನ ಪ್ರೀತಿಯ ಅಕ್ಕನನ್ನು ಮತ್ತು ವಿಜಯ ನಗರದ ವೈಭವವನ್ನು ನೋಡುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಷದಿಂದಲೇ ಹೊರಟೆ.

(ಈಗಿನ ದಸರಾ ದಿಬ್ಬ…ಅಂದಿನ ‘ ಭುವನ ವಿಜಯ ಸಭಾಂಗಣ’ವಾಗಿ ಹೀಗಿದ್ದಿರಬಹುದೇ ಎಂದು ಊಹಿಸಿ ಚಿತ್ರಿಸಿದವರು..ಶ್ರೀಮತಿ ಸುನಯನಾ ಸುದರ್ಶನ.)
ಕೃಷ್ಣದೇವರಾಯರಂತಹ ಪರಾಕ್ರಮಿ, ಧರ್ಮಭೀರು, ಸಾಹಿತ್ಯ ಪ್ರೇಮಿ ಮತ್ತು ದಕ್ಷ ಆಡಳಿತಗಾರರ ಸಂಗ ಕೆಲವು ದಿನಗಳು ಇದ್ದು ಅವರಿಂದ ಕೆಲವು ಆಡಳಿತ ಸೂತ್ರಗಳನ್ನಾದರೂ ಕಲಿಯ ಬೇಕೆಂಬ ಉತ್ಸಾಹ ನನಗೂ ಇತ್ತು. ಇನ್ನೂ ಒಂದು ಕಾರಣವೆಂದರೆ ನಮ್ಮ ಸೀಮೆಯ ರಕ್ಷಣೆಯೂ ಆಗಿತ್ತು. ಮೈಸೂರಿನ ಸಾಮಂತರು ಸೇರಿದಂತೆ ಸುತ್ತಲಿನ ರಾಜರುಗಳು ಶ್ರೀರಂಗಪಟ್ಟಣದ ಮೇಲೆ ಯಾವಾಗಲೂ ಒಂದು ವಕ್ರದೃಷ್ಟಿಯಿಟ್ಟಿರುತ್ತಾರೆ. ವಿಜಯನಗರದ ಶ್ರೀರಕ್ಷೆ ಇರುವುದರಿಂದ ಇವರಾರೂ ಸದ್ಯಕ್ಕೇನು ದುಸ್ಸಾಹಸ ಮಾಡುತ್ತಿಲ್ಲ. ಈ ಸಮಾರಂಭಕ್ಕೆ ನಾನು ವಿಷೇಶ ಅಥಿತಿಯಾಗಿ ಹೋಗಿದ್ದೆ ಎಂಬ ವಿಷಯ ಇವರಿಗೂ ಗೊತ್ತಾಗಲಿ ಎಂಬುದೂ ಉದ್ದೇಶವಾಗಿತ್ತು.
ಒಂದು ವಾರಕ್ಕೂ ಮುಂಚೆಯೇ ನಮ್ಮ ಕರಣೀಕರು, ಲೆಕ್ಕಾಧಿಕಾರಿಗಳು ವಿಜಯನಗರ ತಲುಪಿ ಆದಾಯ, ತೆರಿಗೆ, ಕಪ್ಪ ಕಾಣಿಕೆಗಳ ವಿವರಗಳನ್ನು ಒಪ್ಪಿಸಿದ್ದರು. ದಸರಾದೊಂದಿಗೆ ಕರ್ನಾಟಕ ಸಾಮ್ರಾಜ್ಯದ ಹೊಸ ವಾಣಿಜ್ಯ ವರ್ಷದ ಪ್ರಾರಂಭ, ಹಾಗೆಯೇ ಇದು ಹಳೆಯ ಬಾಬತ್ತುಗಳನ್ನೆಲ್ಲಾ ಚುಕ್ತಾ ಮಾಡುವ ಸಂದರ್ಭವೂ ಕೂಡ. ತಪ್ಪಿತಸ್ಥರಿಗೆ ಯಾವ ಕರುಣೆಯನ್ನೂ ತೋರಿಸುವುದಿಲ್ಲವೆಂದು ಬಹುತೇಕ ಎಲ್ಲಾ ಸಾಮಂತರಾಜರಿಗೂ ಮನವರಿಕೆಯಾಗಿತ್ತು.
ವಿಜಯನಗರ ತಲುಪಿ, ನಮ್ಮಕ್ಕ ತಿರುಮಲಾಂಬೆಯನ್ನು ನೋಡುತ್ತಿದ್ದಂತೇ ಪ್ರಯಾಣದ ಆಯಾಸವೆಲ್ಲಾ ಪರಿಹಾರವಾಯಿತು. ಚಿಕ್ಕ ತಮ್ಮನಾದ್ದರಿಂದ ನನ್ನ ಬಗ್ಗೆ ವಿಶೇಷವಾದ ಅಕ್ಕರೆ. ನನಗಿಷ್ಟವಾದ ಖಾದ್ಯಗಳನ್ನು ತಾನೇ ತಯಾರಿಸಿ ಬಡಿಸಿದಳು. ಭವ್ಯ ಸಾಮ್ರಾಜ್ಯದ ಪಟ್ಟದರಾಣಿ ಸ್ವತಃ ಅಡುಗೆ ಮಾಡುವುದೇ! ಅಷ್ಟು ಕುಕ್ಕುಲಾತಿ ನಮ್ಮಕ್ಕನಿಗೆ ನನ್ನನ್ನು ಕಂಡರೆ.
ಪ್ರತಿಸಲ ವಿಜಯೋತ್ಸವದಿಂದ ಮರಳಿದ ರಾಯರು ತಮ್ಮ ರಾಣಿಯರ ವೈಯಕ್ತಿಕ ಬೊಕ್ಕಸವನ್ನು ಮುತ್ತು ರತ್ನ, ವಜ್ರ ವೈಢೂರ್ಯವನ್ನು ತುಂಬಿ ಬಿಡುತ್ತಾರಂತೆ. ಅದನ್ನೆಲ್ಲಾ ತೋರಿಸುತ್ತಲೇ ನಮ್ಮಕ್ಕ, ನನ್ನ ಕೊರಳು ಭಾರವಾಗುವಂತೆ ಕಂಠಹಾರಗಳನ್ನು ಬಲವಂತವಾಗಿ ಹಾಕೇಬಿಟ್ಟಳು.
ನಮ್ಮ ಸೀಮೆ ಶ್ರೀರಂಗಪಟ್ಟಣವೂ ವಿಜಯನಗರ ಸಾಮ್ರಾಜ್ಯದ ಸಾಮಂತಿಕೆಗೆ ಸೇರಿದ್ದು. ನಾವೂ ವಿಧೇಯರಾಗಿ ಕಪ್ಪ ಕಾಣಿಕೆಗಳನ್ನು ಸಲ್ಲಿಸುತ್ತೇವೆ. ಇಲ್ಲಿಂದ ಆದೇಶ ಬಂದಾಗ ನಮ್ಮ ಸೈನಿಕರನ್ನು, ಕುದುರೆಗಳನ್ನು ಆನೆಗಳನ್ನು ಕಳುಹಿಸಿಕೊಡುತ್ತೇವೆ. ಕೆಲವೊಮ್ಮೆ ಅತಿಯಾದ ತೆರಿಗೆ ಹೇರಿಕೆಯ ಕುರಿತು ನಮ್ಮ ಕುಟುಂಬದಲ್ಲಿ ಇದರ ಬಗ್ಗೆ ಅಸಮಧಾನದ ಮಾತುಗಳು ನಡೆಯುತ್ತದೆ. ಆದರೆ ಸಾಮ್ರಾಜ್ಯದ ರಕ್ಷಣೆಗೆ ಒಂದು ಬೃಹತ್ ಸೇನೆಯ ಅನಿವಾರ್ಯತೆ ಇರಲೇ ಬೇಕು ಎನ್ನುವ ಸತ್ಯತೆಯ ಅರಿವೂ ಇದೆ.
ಮೇಲಾಗಿ ಶ್ರೀರಂಗಪಟ್ಟಣದ ರಾಜಕುಮಾರಿ ಈ ಕರ್ನಾಟಕ ಸಾಮ್ರಾಜ್ಯದ ಪಟ್ಟಮಹಿಷಿಯಲ್ಲವೇ? ವಿಷಯ ಅಲ್ಲಿಗೆ ನಿಂತು ಬಿಡುತ್ತದೆ. ಏನೋ, ನಮ್ಮಕ್ಕನ ಐಶ್ವರ್ಯವನ್ನು ನೋಡಿ ಇದೆಲ್ಲಾ ನೆನಪಿಗೆ ಬಂತು.

ಫೋಟೋ ಕೃಪೆ : dharmadispatch
ಸಾಯಂಕಾಲ ಕೃಷ್ಣದೇವರಾಯರ ಭೇಟಿಯೂ ಆಯಿತು. ಆಗ ತಾನೇ ಗಜಪತಿ ರಾಜ ಪ್ರತಾಪ ರುದ್ರರನ್ನು ಯುದ್ದದಲ್ಲಿ ಸೋಲಿಸಿ ಉದಯಗಿರಿಯನ್ನು ಜಯಿಸಿ ಬಂದ ವಿಜಯದ ಕಳೆ ಮುಖದಲ್ಲಿ ರಾರಾಜಿಸುತ್ತಿತ್ತು. ಇವರ ಪ್ರತಿಸಲದ ವಿಜಯ ಮಹೋತ್ಸವವನ್ನು ಒಂದು ಹೊಸ ದೇವಾಲಯ, ಇನ್ನೊಂದು ಅರಮನೆ, ಮತ್ತೊಂದು ಮಹಲನ್ನು ಕಟ್ಟಿಸುವ ಮೂಲಕ ಆಚರಿಸುತ್ತಾರಂತೆ. ಅಂತೆಯೇ ಈ ಸಲದ ವಿಜಯೋತ್ಸವ “#ಭುವನ_ವಿಜಯ_ಸಭಾಭವನ” ಎನ್ನುವ ಭವ್ಯ ಮಂಟಪದ ಉಧ್ಘಾಟನೆಯಿಂದ ನಡೆಯಲಿದೆ. ಇದನ್ನು ದಸರಾ ಮಂಟಪ, ಮಹಾನವಮಿ ಮಂಟಪ ಅಂತಲೂ ಕರೆಯುತ್ತಾರೆ. ಈ ಬಾರಿಯ ಒಂಭತ್ತು ದಿನಗಳ ದಸರಾ ಮಹೋತ್ಸವವೂ ಸಂಭ್ರಮಾಚರಣೆಗಳು ಅಲ್ಲೇ ನಡೆಯುತ್ತಂತೆ.
ಇವತ್ತು ರಾತ್ರಿಯ ವಿಷೇಶ ಭೋಜನವನ್ನು ಅರಮನೆಯ ಪಕ್ಕದಲ್ಲಿ ವಿಶಾಲವಾದ ಢೇರೆಯಲ್ಲಿ ಆಯೋಜಿಸಲಾಗಿತ್ತು. ಹದಿನೆಂಟು ಸಾವಿರ ಚಿನ್ನದ ತಟ್ಟೆಗಳನ್ನು ಢೇರೆಯೊಳಗೆ ಒಂದು ಬದಿಗೆ ಪೇರಿಸಲಾಗಿತ್ತು. ಇವತ್ತು ಕೃಷ್ಣದೇವರಾಯರು ಮತ್ತು ರಾಣಿಯರು ಖುದ್ದಾಗಿ ಅತಿಥಿಗಳಿಗೆ ಪಾಯಸ ಬಡಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆಯಂತೆ. ನಂತರ ಅವರೂ ಸಾಮಂತರೊಂದಿಗೆ ಸಹಭೋಜನ ಮಾಡುತ್ತಾರೆ. ಸಾಮ್ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆಗಳು, ಕಂದಾಯ, ಕಪ್ಪಕಾಣಿಕೆಗಳನ್ನು ಸಲ್ಲಿಸದ ತಪ್ಪಿತಸ್ಥ ಸಾಮಂತರಿಗೆ ಈ ಭೋಜನ ಕೂಟಕ್ಕೆ ಆಮಂತ್ರಣ ಇರುತ್ತಿರಲಿಲ್ಲ. ಬದಲಾಗಿ ಅವರಿಗೆ ಒಂದು ತಿಂಗಳಲ್ಲಿ ಎಲ್ಲಾ ಲೆಕ್ಕಗಳನ್ನು ತೀರಿಸಲು ಗಡುವು ಕೊಡುತ್ತಿದ್ದರು.
ಭೋಜನಾನಂತರ ರಹಸ್ಯ ಮಾಳಿಗೆಯಲ್ಲಿ ಬೇಹುಗಾರರ ವಾರ್ಷಿಕ ವರದಿಯ ಕಾರ್ಯಕ್ರಮ ನಡೆಯುತ್ತದಂತೆ. ಇದರಲ್ಲಿ ರಾಯರೊಂದಿಗೆ ಪ್ರಧಾನಿ ತಿಮ್ಮರಸರು ಮತ್ತು ಕೆಲವೇ ಆಯ್ದ ಮಂತ್ರಿಗಳಷ್ಟೇ ಭಾಗವಹಿಸುತ್ತಿದ್ದರು. ನಮಗೆಲ್ಲಾ ಅಲ್ಲಿ ಪ್ರವೇಶವಿರಲಿಲ್ಲ. ರಾತ್ರಿಯ ಭೋಜನದ ನಂತರ ಹಾಗೇ ಒಂದು ಸುತ್ತು ನಗರದ ಕಡೆ ಹೊರಟೆ. ದೂರದ ಊರುಗಳಿಂದ ಈ ಸಮಾರಂಭಕ್ಕೆಂದು ಜನಸಾಗರವೇ ಹರಿದು ಬಂದಿತ್ತು.
ಕಲಾವಿದರಿಗೆಂದು ಏರ್ಪಡಿಸಿದ್ದ ಪ್ರತ್ಯೇಕವಾದ ಬಿಡಾರ ವ್ಯವಸ್ಥೆಯಲ್ಲಿ ಆಗಲೇ ತೆನಾಲಿ ರಾಮಕೃಷ್ಣರು ಓಡಾಡಿಕೊಂಡು ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿದ್ದರು. ನನ್ನ ಜೊತೆ ಬಂದಿದ್ದ ಸೇನಾಧಿಕಾರಿಗಳು ನನ್ನ ಪರಿಚಯವನ್ನು ಮಾಡಿಕೊಟ್ಟ ಮೇಲೆ ಆದರದಿಂದ ನನ್ನನ್ನು ಸ್ವಾಗತಿಸಿದರು. ಎಲ್ಲೆಲ್ಲೂ ಕಲಾವಿದರ ಕಲರವ. ಕನ್ನಡ ಮತ್ತು ತೆಲುಗು ಭಾಷೆಗಳ ಸಮ್ಮಿಶ್ರಣದ ಮಾತುಕತೆಗಳು. ಈ ಎರಡೂ ಭಾಷೆಗಳ, ಸಂಸ್ಕೃತಿ ಮತ್ತು ಸಾಹಿತ್ಯಗಳ ನೈಸರ್ಗಿಕವಾದ ಮಿಶ್ರಣವೇ ವಿಜಯನಗರದ ವೈಶಿಷ್ಟ್ಯವೆನಿಸಿತು.
ಅಷ್ಟರಲ್ಲೇ ಅಷ್ಟದಿಗ್ಗಜರಲ್ಲಿ ಒಬ್ಬರಾದ ನಂದಿ ತಿಮ್ಮಣ್ಣನವರು ಇತರೆ ಕೆಲವು ಯುವಕರೊಂದಿಗೆ ಸಂಭಾಷಿಸುತ್ತಿದ್ದುದ್ದನ್ನು ಕಂಡು ಅವರ ಬಳಿ ಬಂದುನಿಂತೆ. ಕುಮಾರವ್ಯಾಸರ ಮಹಾಭಾರತದ ಬಗ್ಗೆ ಚರ್ಚೆ ನಡೆಯುತ್ತಿದೆ. ಇವರು ನಮ್ಮಕ್ಕ ತಿರುಮಲಾಂಬೆಯ ಸಾಹಿತ್ಯ ಗುರುಗಳು. ನಮ್ಮ ಸೀಮೆಯವರೇ, ಕೃಷ್ಣದೇವರಾಯರು ನೀಡಿದ ಆಮಂತ್ರಣದ ಮೇರೆಗೆ ಇಲ್ಲೇ ಬಂದು ನೆರಸಿದ್ದಾರೆ. ‘ನಾನು ರಾಣಿ ತಿರುಮಲಾಂಬೆಯ ವರದಕ್ಷಿಣೆಯ ಭಾಗವಾಗಿ ಬಂದವನು’ ಎಂದು ಕೆಲವೊಮ್ಮೆ ಹಾಸ್ಯಮಾಡುತ್ತಿರುತ್ತಾರೆ. ಮಧ್ಯಕ್ಕೇ ನಿಂತು ಹೋಗಿದ್ದ ಕುಮಾರವ್ಯಾಸರ ಮಹಾಭಾರತವನ್ನು
“ #ಕರ್ನಾಟ_ಭಾರತ_ಕಥಾಮಂಜರಿ” ಎನ್ನುವ ಹೆಸರಿನಲ್ಲಿ ಇನ್ನುಳಿದ ಎಂಟು ಅಧ್ಯಾಯಗಳನ್ನು ಪೂರ್ಣಗೊಳಿಸುತ್ತಿದ್ದಾರಂತೆ. ಮಾತುಕತೆಯ ಮಧ್ಯದಲ್ಲಿ ನನ್ನನ್ನು ನೋಡಿ ಆನಂದದಿಂದ ಸ್ವಾಗತಿಸಿದರು.

ಫೋಟೋ ಕೃಪೆ : ಪುಸ್ತಕ ಪ್ರೇಮಿ
ಅಲ್ಲಿಯ ಭೋಜನ ಮತ್ತು ವಸತಿ ಸೌಕರ್ಯಗಳನ್ನು ನೋಡಿದೆ, ಎಷ್ಟು ಅಚ್ಚುಕಟ್ಟಾಗಿದೆ ಎಲ್ಲವೂ ಎನಿಸಿತು. ಕಲಾವಿದರ ಆವಶ್ಯತೆಗಳು, ಕುಂದುಕೊರತೆಗಳನ್ನು ಪರಿಶೀಲಿಸಲು ನಿಯಮಿಸಿದ್ದ ಅಧಿಕಾರಿಗಳು ಕಲಾವಿದರ ನಡುವೆಯೇ ಓಡಾಡಿಕೊಂಡು ಆಗಿಂದ್ದಾಗ್ಗೆ ಪರಿಹರಿಸುತ್ತಿದ್ದುದು ಕಂಡುಬಂತು. ಪಕ್ಕದಲ್ಲೇ ಮಲ್ಲಯುಧ್ಧದ ಸ್ಪರ್ಧೆಗೆ ಬಂದಿದ್ದ ಕುಸ್ತಿಪಟುಗಳ ಬಿಡಾರ. ಇದು ಕೃಷ್ಣದೇವರಾಯರ ಅಚ್ಚುಮೆಚ್ಚಿನ ಸ್ಪರ್ಧೆ. ಅದರ ಪಕ್ಕದಲ್ಲಿ ಹೊರದೇಶದಿಂದ ಬಂದಿದ್ದ ಅತಿಥಿಗಳ ಬಿಡಾರ. ಇವರಲ್ಲಿ ಬಹುತೇಕರು ಪೋರ್ಚುಗೀಸರಂತೆ. ವಿಜಯನಗರದ ಸೈನ್ಯಕ್ಕೆ ಹಲವಾರು ವರ್ಷಗಳಿಂದಲೂ ಅರಬ್ಬೀ ಕುದುರೆಗಳ ಸರಬರಾಜು ಮಾಡುತ್ತಿದ್ದುದು ಇವರಂತೆ. ನದಿ ಮತ್ತು ಕೆರೆಗಳ ನೀರನ್ನು ನಾಗರೀಕರಿಗೆ, ದೇವಸ್ಥಾನಗಳಿಗೆ ಮತ್ತು ಅರಮನೆಗಳಿಗೆ ತೂಬುಗಳ ಮುಖಾಂತರ ಹರಿಸುವ ವ್ಯವಸ್ಥೆಯನ್ನು ಈ ಪೋರ್ಚುಗೀಸಿನ ತಂತ್ರಜ್ಞರೇ ಮಾಡಿಕೊಟ್ಟದ್ದಂತೆ.
ಇದರ ಪಕ್ಕದಲ್ಲೇ ಸಾಮಾನ್ಯ ನಾಗರೀಕರ ಬಿಡಾರ. ಇಲ್ಲಿಯ ಶಿಸ್ತನ್ನು ಕಾಪಾಡಲು ಮತ್ತು ಸೌಲಭ್ಯಗಳನ್ನು ಪರಿಭಾರಿಸಲು ಸೈನಿಕರನ್ನು ನಿಯಮಿಸಿದ್ದರು. ಗಂಡಸರು ಮತ್ತು ಹೆಂಗಸರಿಗೆ ಪ್ರತ್ಯೇಕ ವ್ಯವಸ್ಥೆ. ಪ್ರತಿ ನೂರು ಅಡಿಗೊಂದರಂತೆ ನೀರು, ಮಜ್ಜಿಗೆ ಮತ್ತು ಪಾನಕಗಳ ವ್ಯವಸ್ಥೆ. ವಿಶಾಲವಾದ ಭೋಜನಾಲಯದಲ್ಲಿ ಊಟದ ಸಂಭ್ರಮ ನಡೆಯುತ್ತಿತ್ತು. ಇಂತಹ ಸಂಧರ್ಭಗಳಲ್ಲಿ ಕಳ್ಳಕಾಕರ ಸಂಚಾರವಿರುವುದು ಸಹಜ , ಅದಕ್ಕೇನು ವ್ಯವಸ್ಥೆ ಮಾಡಿದ್ದಾರೆ ಎಂದು ಸೈನ್ಯಾಧಿಕಾರಿಗಳನ್ನು ಕೇಳಿದೆ… ಅವರ ಕೊಟ್ಟ ಉತ್ತರಕ್ಕೆ ದಂಗಾಗಿ ಹೋದೆ. ಈಗಾಗಲೇ ಸಿಕ್ಕ ಹತ್ತು ಹನ್ನೆರಡು ಕಳ್ಳರ ಕೈಗಳನ್ನು ಎಲ್ಲರ ಮುಂದೆಯೇ ಕತ್ತರಿಸಲಾಗಿದೆಯಂತೆ.

ಒಂದು ಸುಭಿಕ್ಷ, ಸಮೃಧ್ಧ ಸಮಾಜದಲ್ಲಿ ಶಿಸ್ತು ಕಾಪಾಡಲು ಅಪರಾಧಿಗಳಿಗೆ ಇಂತಹ ಮಟ್ಟದ ಕಠಿಣ ಶಿಕ್ಷೆಯ ಅವಶ್ಯಕತೆ ಇದೆ, ನಮ್ಮ ಪ್ರಾಂತ್ಯದಲ್ಲೂ ಇದನ್ನು ಅಳವಡಿಸಬೇಕು ಎಂದು ಯೋಚಿಸುತ್ತಾ ನನ್ನ ಅತಿಥಿ ಗೃಹಕ್ಕೆ ಮರಳಿದೆ. ನನಗೆ ರಾಯರ ದಿನಚರಿಯನ್ನು ಅದೂ ದಿನದ ಪ್ರಾರಂಭ ಹೇಗೆ ನಡೆಯುತ್ತದೆ ಎನ್ನುವುದನ್ನು ನೋಡಬೇಕು ಎನ್ನುವ ಕುತೂಹಲ, ಅಂತೆಯೇ ನನ್ನ ಅಕ್ಕನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದೆ. ಅವರನ್ನೇ ಕೇಳಿಕೊಂಡು ನಿನಗೆ ತಿಳಿಸುತ್ತೇನೆ ಎಂದರು. ಹಾಗೇ ಅನುಮತಿಯೂ ದೊರೆಯಿತು.
ಮರುದಿನ ಬೆಳಗ್ಗೆ ಸಮೀಪದ ದೇವಾಲಯದಿಂದ ಬರುತ್ತಿದ್ದ ವೇದಘೋಷಗಳ ತರಂಗಗಳಿಂದ ಎಚ್ಚರವಾಯಿತು. ಇನ್ನೂ ಬ್ರಾಂಹೀ ಮಹೂರ್ತ, ರಾಯರು ಆಗಲೇ ಎದ್ದು ಮುಚಕುಂದ ಸ್ತೋತ್ರವನ್ನು ಪಠಿಸುತ್ತಿದ್ದರು. ನಾನು ಅವರ ಆಚರಣಗಳಿಗೆ ಭಂಗವಾಗದಂತೆ ಅನತಿ ದೂರದಿಂದಲೇ ಅವರ ಚಟುವಟಿಕೆಗಳನ್ನು ಗಮನಿಸುತ್ತಿದ್ದೆ. ಹೊರಗೆ ಬಂದು ಕಪಿಲಧೇನುವನ್ನು ಮೈದಡವಿ, ಪಕ್ಕದಲ್ಲೇ ನಿಂತಿದ್ದ ಜೋಡಿ ಬ್ರಾಹ್ಮಣರಿಗೆ ವಂದಿಸಿದರು. ಏಕಾಂಬರನಾಥ, ಜಂಬುಲಿಂಗೇಶ್ವರ, ಅರುಣಾಚಲೇಶ್ವರ, ಕಾಳಹಸ್ತೇಶ್ವರ ಹೀಗೆ ಇಪ್ಪತ್ತೇಳು ಶಿವಸ್ಥಾನಗಳಿಂದಲೂ, ಹದಿನೆಂಟು ಶಕ್ತಿಸ್ಥಾನಗಳಿಂದಲೂ ಬಂದ ಪ್ರಸಾದವನ್ನು ಶ್ರಧ್ಧೆ, ಭಕ್ತಿ ಯಿಂದ ಸ್ವೀಕರಿಸಿ, ಪೂಜೆಗೆ ಎಲ್ಲಾ ಅಣಿಯಾಗಿದೆ ಎಂದು ಹೇಳಿದ ಪುರೋಹಿತರನ್ನು ಅನುಸರಿಸಿ ಪೂಜಾಗೃಹವನ್ನು ಪ್ರವೇಶಿಸಿದರು.
ನಾನೂ ತುಂಗಭದ್ರೆಯಲ್ಲಿ ಮಿಂದು ಬರಲು ಇದೇ ಪ್ರಶಸ್ತ ಸಮಯ ಎಂದು, ನನ್ನ ರಕ್ಷಣೆಗೆಂದು ನಿಯಮಿಸಿದ್ದ ಸೇನಾಧಿಕಾರಿಯ ಜೊತೆ ನದಿಯ ಕಡೆ ಹೊರಟೆವು. ನದಿಯ ಶುಚಿತ್ವವನ್ನು ಕಾಪಾಡಲು ನಾಗರೀಕರಿಗೆ ಪ್ರವೇಶವನ್ನು ನಿರ್ಭಂದಿಸಲಾಗಿತ್ತು. ಪರ್ಯಾಯವಾಗಿ ಅವರಿಗೆ ರಾಯ ಕಾಲುವೆ ಮತ್ತು ಬಸವ ಕಾಲುವೆಯಲ್ಲಿ ಮೀಯುವ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಪುರೋಹಿತರಿಗೆ ಮತ್ತು ರಾಜ ಮನೆತನದವರಿಗೆ ಮಾತ್ರ ಪುರಂದರ ಮಂಟಪದವರೆಗೆ ಪ್ರವೇಶ ಸೀಮಿತವಾಗಿತ್ತು. ಪುರಂದರದಾಸರು ಆಗಲೇ ಹೊಳೆಯಲ್ಲಿ ಮಿಂದು ಪೂಜೆಗೆ ಕುಳಿತಿದ್ದರು. ಅವರ ಧರ್ಮಪತ್ನಿ ಸರಸ್ವತಮ್ಮ ಮಕ್ಕಳೊಂದಿಗೆ ಪೂಜಾ ಪರಿಕರಗಳನ್ನು ಜೋಡಿಸುತ್ತಿದ್ದರು. ವ್ಯಾಸತೀರ್ಥರೂ ಸಹ ಆಗಮಿಸಿದರು. ಪೂಜೆಯ ಜೊತೆಗೇ ಸ್ತೋತ್ರಗಳನ್ನು ಸಾಮೂಹಿಕವಾಗಿ ಹಾಡಲು ಪ್ರಾರಂಭಿಸಿದರು. ನದಿಯಲ್ಲಿ ಮಿಂದ ನಂತರ ನಾವೂ ಅನತಿದೂರದಲ್ಲೇ ಕುಳಿತು ಕೀರ್ತನೆಗಳನ್ನು ಕೇಳುತ್ತಾ ಕುಳಿತೆವು. ದಾಸರು ತಮ್ಮ ಗಾಯನದಲ್ಲಿ ತಲ್ಲೀನರಾಗಿದ್ದರು.
“ಏನು ಮಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ ||
ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ
ಬೆರಳೆಣಿಸದೆ ಅದರ ನಿಜವರಿಯದೆ
ಸಾಷ್ಟಾಂಗವನು ಮಾಡಿ ನಾ ದಣಿದೆನೊ||
ಹರಿ ನಿನ್ನ ಕರುಣಕಟಾಕ್ಷವಾಗದನಕ…”
ಅಷ್ಟರಲ್ಲೇ ಕೃಷ್ಣದೇವರಾಯರೂ ನಮ್ಮಕ್ಕನವರೊಂದಿಗೆ ಪುರಂದರ ಮಂಟಪಕ್ಕೆ ಆಗಮಿಸಿದರು. ಪುರಂದರದಾಸರಂತೂ ಸ್ವಲ್ಪವೂ ವಿಚಲಿತರಾಗದೆ ಗಾನಸುಧೆಯಲ್ಲಿ ಮುಳುಗಿದ್ದರು. ರಾಯರೂ ಸಹ ಅವರನ್ನು ದೂರದಿಂದಲೇ ವಂದಿಸಿ ಒಂದೆಡೆ ಕುಳಿತುಕೊಂಡರು. ಇದೊಂದು ಪೂರ್ವ ನಿಯೋಜಿತ ಕಾರ್ಯಕ್ರಮವೆಂದು ಗೊತ್ತಿಲ್ಲದೇ ಬಂದ ನನಗೆ ಎಂತಹ ಅದೃಷ್ಟ. ಕೀರ್ತನೆಯ ಸುಶ್ರಾವ್ಯತೆಯೊಂದಿಗೇ ಸುತ್ತಲಿನ ಎಲ್ಲಾ ದೃಶ್ಯವನ್ನೂ ಕಣ್ತುಂಬಿಕೊಂಡೆ.

ಫೋಟೋ ಕೃಪೆ : deccanchronicle
ಈ ಕಾರ್ಯಕ್ರಮ ಇನ್ನೂ ಮುಂದುವರೆಯುತ್ತೆ ನೀವು ವಿಜಯ ವಿಠ್ಠಲನ ದರ್ಶನ ಮಾಡುವುದಾದರೆ ಇದೇ ಸೂಕ್ತ ಸಮಯ ಎಂದು ಸೇನಾಧಿಕಾರಾಯವರು ತಿಳಿಸಿದ ಮೇಲೆ ಅಲ್ಲಿಂದ ಹೊರಟೆವು.
ದಸರಾ ಮಹೋತ್ಸವಕ್ಕೆ ಬಂದ ಜನಸಾಗರವಾಗಲೇ ದೇವಸ್ಥಾನದ ಪ್ರಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದರು. ನದಿಯ ಕಡೆಯ ದ್ವಾರದಿಂದ ಬಂದಿದ್ದರಿಂದ ಮಹಾಮಂಗಳಾರತಿಯ ಸಮಯಕ್ಕೆ ಸರಿಯಾಗಿ ಗರ್ಭ ಗುಡಿಯ ಸಮೀಪ ತಲುಪಿದೆವು. ಪೂಜೆ ಮುಗಿಸಿಕೊಂಡು ಅಥಿತಿಗೃಹಕ್ಕೆ ಮರಳುವಷ್ಟತ್ತಿಗಾಗಲೇ ನಮ್ಮಕ್ಕ ತಿರುಮಲಾಂಬೆ, ರಾಣಿ ಚಿನ್ನಮ್ಮನ ಜೊತೆ ನನಗಾಗಿ ಕಾಯುತ್ತಿದ್ದರು.
ಜೊತೆಗೆ ಇಬ್ಬರು ದರ್ಜಿಗಳು ಹಲವಾರು ರಾಜ ದಿರಿಸುಗಳನ್ನು ತೆಗೆದುಕೊಂಡು ಬಂದಿದ್ದರು. ನನ್ನ ಅನುಮತಿ ಪಡೆದು ಒಂದೊಂದನ್ನೇ ಅಳತೆ ಸರಿಯಾಗಿದೆಯೇ ಎಂದು ಪರಿಶಶೀಲಿಸಿದರು. ಬಿಳಿ ಮಕಮಲ್ಲಿನ ನಿಲುವಂಗಿಗಳಿಗೆ ಮುತ್ತಿನ ಹಾರಗಳನ್ನು ಅಳವಡಿಸಲಾಗಿದೆ, ಕಂಠದ ಸುತ್ತಲೂ ವಜ್ರಗಳು… ಅಧ್ಭುತವಾಗಿ ಕಾಣುತ್ತಿತ್ತು. ನಾವೂ ರಾಜಮನೆತನದವರೇ…ಆದರೆ ಈ ಹಂತದ ಶ್ರೀಮಂತಿಕೆ…ಉಹುಂ…ನೋಡಿರಲಿಲ್ಲ..ಕೇಳಿರಲಿಲ್ಲ.
ಮುಜುಗರಪಡುತ್ತಲೇ ಎರಡನ್ನು ಆರಿಸಿಕೊಂಡೆ. ಇವತ್ತಿನ ಸಮಾರಂಭಕ್ಕೆ ಧರಿಸಿಕೊಂಡು ಬಾ ಎಂದು ಅವಸರದಿಂದ ಇಬ್ಬರೂ ಹೊರಟು ಹೋದರು.
ಮಧ್ಯಾಹ್ನ ನಡೆಯುವ ಸಮಾರಂಭ ಪ್ರಾರಂಭವಾಗುವ ಮೊದಲೇ ಹೋಗಿ ಅಲ್ಲಿಯ ವ್ಯವಸ್ಥೆಯನ್ನು ಹೇಗೆ ನಿಭಾಯಿಸುತ್ತಾರೆ ನೋಡೋಣ ಎಂದು ಹೊರಟೆ. ಜೊತೆಗಿದ್ದ ಸೈನ್ಯಾಧಿಕಾರಿಯ ಉಡುಪನ್ನೂ ನೋಡಿ ಚಕಿತನಾದೆ.ಅವರ ದಿರುಸಿನಲ್ಲೂ ಮುತ್ತು ರತ್ನಗಳನ್ನು ಅಳವಡಿಸಲಾಗಿತ್ತು. ಶ್ರೀರಂಗಪಟ್ಟಣದ ಸಾಮಂತರುಗಳು ಧರಿಸುವ ಉಡುಪು ಇಲ್ಲಿನ ಸೇನಾಧಿಕಾರಿಗಳು ಧರಿಸುತ್ತಾರೆ! ವಿಜಯನಗರದಲ್ಲಿ ಮುತ್ತು, ರತ್ನ, ವಜ್ರ ವೈಡೂರ್ಯಗಳೆಂದರೆ ನಮ್ಮಲ್ಲಿ ದವಸ ಧಾನ್ಯಗಳನ್ನು ಮಾರಿದಂತೆ ಇಲ್ಲಿಯ ಮಾರುಕಟ್ಟೆಯಲ್ಲಿ ಮಾರುತ್ತಾರಂತೆ.!

ಫೋಟೋ ಕೃಪೆ : karnataka
ನೂತನವಾಗಿ ನಿರ್ಮಿಸಿದ #ಮಹಾನವಮಿ_ಮಂಟಪದ ಬಳಿ ಆಗಲೇ ಹೋಮ ಹವನಗಳು ನಡೆಯುತ್ತಿದ್ದವು. ಸುಮಾರು ಇಪ್ಪತೈದು ಅಡಿ ಎತ್ತರದ ಎಂಭತ್ತು ಅಡಿ ವಿಸ್ತಾರದ ಭವ್ಯ ಮಂಟಪ. ಮಧ್ಯದಲ್ಲಿ ಹಸಿರು ಬೆಣಚುಕಲ್ಲಿನ ಕಲಾಕೃತಿಗಳನ್ನು ವಿದೇಶೀಯ ಅಥಿತಿಗಳು ಬೆರಗುಗಣ್ಣುಗಳಿಂದ ನೋಡುತ್ತಿದ್ದರು. ಪ್ರವೇಶದ್ವಾರದಲ್ಲೇ ತೆನಾಲಿ ರಾಮಕೃಷ್ಣರು ನಮ್ಮನ್ನು ಸ್ವಾಗತಿಸಿ ನನಗೆ ಇತರೆ ಅಷ್ಟ ದಿಗ್ಗಜರಿಗೆ ಪರಿಚಯಿಸಿದರು. ಅಷ್ಟೊತ್ತಿಗೆ ಪ್ರಧಾನಿ ತಿಮ್ಮರಸರೂ ಬಂದಿಳಿದರು. ಎಲ್ಲರ ಕಣ್ಣುಗಳೂ ಈಗ ಮಹಾದ್ವಾರದ ಕಡೆಗೆ..
ಒಂದೇ ಸಲಕ್ಕೆ ಹತ್ತಾರು ಕಹಳೆಯ ಧ್ವನಿ..ಕೃಷ್ಣದೇವರಾಯರ ಆಗಮನವನ್ನು ಸೂಚಿಸಿತು. ಅವರು ಆಸೀನರಾಗಿದ್ದ ಆಂಬಾರಿ ನಿಧಾನವಾಗಿ ದ್ವಾರಪ್ರವೇಶ ಮಾಡುತ್ತಿದ್ದಂತೇ..
‘ಮಹಾ ರಾಜಾಧಿರಾಜ’
‘ಕನ್ನಡ ರಾಜ್ಯ ರಮಾರಮಣ’
‘ಕರ್ನಾಟಕ ಕುಲತಿಲಕ’
‘ಮೂರು ರಾಯರಗಂಡ’
‘ಪರರಾಯ ಭಯಂಕರ’….
ಬಹುಪರಾಕಿನ ಘೋಷಣೆಗಳು ದಶದಿಕ್ಕುಗಳಲ್ಲಿ ಹರಡಿತ್ತು. ನೆರೆದಿದ್ದ ಸಹಸ್ರಾರು ಜನಗಳಲ್ಲಿ ಇಂತಹ ಒಂದು ದೃಶ್ಯ ಜೀವನದಲ್ಲಿ ಒಮ್ಮೆ ಮಾತ್ರ ಕಾಣುವಂತಹ ಅವಕಾಶ, ಎವೆಯಿಕ್ಕಿದರೆ ಎಲ್ಲಿ ಇದೆಲ್ಲಾ ಮರೆಯಾಗಿ ಹೋಗುತ್ತೋ ಎನ್ನುವಂತೆ ಬಿಟ್ಟಕಣ್ಣು ಬಿಟ್ಟಹಾಗೇ ನೋಡುತ್ತಿದ್ದರು. ಅದೇನು ರಾಜ ಗಾಂಭೀರ್ಯ, ಉತ್ಸಾಹ, ರಾಯರ ಮುಖದಲ್ಲಿ. ರಾಯರ ಪಕ್ಕದಲ್ಲಿ ಆಸೀನಳಾದ ನಮ್ಮಕ್ಕ ತಿರುಮಲಾಂಬೆಯನ್ ಮುಖದಲ್ಲಿ ಒಂದು ಧನ್ಯತಾ ಭಾವ…ಇದನ್ನೆಲ್ಲಾ ನೋಡಿ ಹೆಮ್ಮೆಯಿಂದ ಗದ್ಗದನಾದೆ.
- ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).
