ಆಧುನಿಕ ಬದುಕಿನಲ್ಲಿ ಮಾನವೀಯತೆ ಕಳೆದು ಹೋಗಿದೆ ಎಂದುಕೊಳ್ಳುವ ಕಾಲದಲ್ಲಿ ಅಲ್ಲಲ್ಲಿ ಮಾನವೀಯತೆ ಜೀವಂತವಾಗಿದೆ ಎನ್ನುವಂತ ಕೆಲವು ಘಟನೆಗಳು ಕಣ್ಣು ಮುಂದೆ ನಡೆಯುತ್ತವೆ. ಅದಕ್ಕೆ ಸುಮಾ ಕಿರಣ್ ಅವರ ಲೇಖನವನ್ನು ಒಮ್ಮೆ ಓದಿ…
ಈ ಬಸ್ಸಿನ ಓಡಾಟ ನನ್ನ ಅಚ್ಚುಮೆಚ್ಚಿನ ಹವ್ಯಾಸಗಳಲ್ಲಿ ಒಂದು. ಸರಿಸುಮಾರು ಇಪ್ಪತ್ತು ವರ್ಷಗಳಿಂದಲೂ ನಿರಂತರವಾಗಿ ಬಸ್ಸಿನ ಪ್ರಯಾಣದ ಆನಂದವನ್ನು ಅನುಭವಿಸುತ್ತಾ ಬಂದಿದ್ದೇನೆ. ಬಸ್ಸಿನಲ್ಲಿ ಹತ್ತು ಹಲವಾರು ರೀತಿಯ ಅನುಭವಗಳು, ವಿಭಿನ್ನ ಕಥನಗಳು ನನ್ನನ್ನು ಬಂದು ತಟ್ಟಿದ್ದು ಇದೆ. ಆದರೆ ತೀರ ಕಳೆದ ಕೆಲವು ವರ್ಷಗಳಿಂದ ಈ ಬಸ್ಸಿನ ಪ್ರಯಾಣ ಸಪ್ಪೆ ಅನ್ನಿಸುತ್ತಿರುವುದು ಮಾತ್ರ ಸುಳ್ಳಲ್ಲ. ಅದಕ್ಕೆ ಮುಖ್ಯ ಕಾರಣ ಈ ಮೊಬೈಲ್ ಮಹಾರಾಜರು. ಅದನ್ನು ನೋಡುವುದರಲ್ಲೇ ಪ್ರಯಾಣದ ಹೆಚ್ಚಿನ ಅವಧಿ ಮುಗಿದು ಹೋಗಿರುತ್ತದೆ. ಹಾಗಾಗಿ ಅಕ್ಕಪಕ್ಕದವರನ್ನು ನೋಡುವ, ಮಾತನಾಡಿಸುವ ಪ್ರಶ್ನೆಯೇ ಇಲ್ಲ. ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ… ಕಂಡಕ್ಟರ್ ಕೂಗದೆ ಸುಮ್ಮನೆ ಇದ್ದರೆ ತಮ್ಮ ತಮ್ಮ ನಿಲ್ದಾಣದಲ್ಲಿ ಇಳಿಯುವುದನ್ನೂ ಮರೆತು ಬಿಡುತ್ತಾರೆ!
ನಿನ್ನೆ ಸಂಜೆ ಅಮ್ಮನ ಮನೆಯಿಂದ ಮರಳುತ್ತಿದ್ದೆ. ಹೆಚ್ಚಾಗಿ ನಾನು ಭಾನುವಾರವೇ ಪ್ರಯಾಣಿಸುವುದರಿಂದ ಶಾಲಾ ವಿದ್ಯಾರ್ಥಿಗಳು ನನಗೆ ಸಿಗುವುದು ಅಪರೂಪ. ಆದರೆ ಈಗ ನಮಗೆ ಬೇಸಿಗೆಯ ರಜೆಯ ಕಾರಣ ವಾರದ ಮಧ್ಯದಲ್ಲಿ ನನ್ನ ಸವಾರಿ ಅಮ್ಮನ ಮನೆಯತ್ತ ಹೋಗಿ, ಬಂದಿತ್ತು. ಶಾಲೆಗೆ ರಜೆ ಇದ್ದರೂ ಈ ಕಾಲೇಜು ತೆರೆದಿರುವ ಕಾರಣ ಹಿಂದಿರುಗಿ ಬರುವಾಗ ಅಲ್ಲಲ್ಲಿ ಇರುವ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕಲರವದಿಂದ ಬಸ್ಸು ತುಂಬಿತ್ತು.
ಕುಂದಾಪುರದಲ್ಲಿ ನಾನು ಹತ್ತಿದ್ದು ಕುಂದಾಪುರ – ಉಡುಪಿ – ಮಂಗಳೂರಿನ “ಮಹೇಶ್ ಎಕ್ಸ್ಪ್ರೆಸ್” ಬಸ್ ಅನ್ನು. ಕೋಟದ ಕಾಲೇಜಿನ ಬಳಿಯಲ್ಲಿ ಹತ್ತಾರು ಹುಡುಗಿಯರು ಬಸ್ಸನ್ನೇರಿದರು. ನನ್ನ ಸೀಟಿನ ಪಕ್ಕದ ಇನ್ನೊಂದು ಜಾಗ ಖಾಲಿ ಇತ್ತು. ಅಲ್ಲಿ ಒಬ್ಬಳು ಬಂದು ಕುಳಿತುಕೊಂಡಳು. ಅವಳು ಬ್ರಹ್ಮಾವರಕ್ಕೆ ಟಿಕೆಟ್ ತೆಗೆದುಕೊಂಡದ್ದು. ನಾನು ನನ್ನದೇ ಆಲೋಚನೆಯಲ್ಲಿ ಇದ್ದ ಕಾರಣ ಅವಳು ಎಲ್ಲಿಗೆ ಟಿಕೆಟ್ ತೆಗೆದುಕೊಂಡದ್ದು ಎಂದು ಗಮನಿಸಲಿಲ್ಲ. ಹಾಗೆ ಬ್ರಹ್ಮಾವರದಲ್ಲಿ ಬಸ್ ನಿಲ್ದಾಣದ ಒಳಗೆ ಹೋಗದೆ… ಹೊರಗಡೆಯೇ ನಿಲ್ಲಿಸಿ ಆನಂತರ ಮುಂದೆ ಚಲಿಸಿತು.
ಈ ಹುಡುಗಿಗೆ ಬ್ರಹ್ಮಾವರದ ನಂತರ ಸಿಗುವ ಎಸ್.ಎಂ.ಎಸ್ ಕಾಲೇಜನ್ನು ದಾಟುವಾಗ ಬ್ರಹ್ಮಾವರ ಬಂದ ಅರಿವಾಯಿತು. ಬಸ್ ನಿಲ್ಲಿಸಲು ಹೇಳಲು ಎದ್ದು ನಿಂತು ಕಂಡಕ್ಟರ್ ಕಡೆಗೆ ನೋಡಿದಳು. ಅವನು ಹಿಂದೆ ಇದ್ದ ಕಾರಣ ಎದ್ದು ಚಾಲಕನ ಬಳಿ ಹೋಗಿ ನಿಲ್ಲಿಸಲು ಕೇಳಿಕೊಂಡಳು. ಆದರೆ ಚಾಲಕ ಬಸ್ ನಿಲ್ಲಿಸಲು ನಿರಾಕರಿಸಿದ. ಎಕ್ಸ್ಪ್ರೆಸ್ ಆದಕಾರಣ ನಿಲ್ಲಿಸಲು ಸಾಧ್ಯವೇ ಇಲ್ಲ ಎಂದು ವಾದಿಸಿದ. ಕೊನೆಗೆ ಗಾಬರಿಗೊಂಡ ಹುಡುಗಿ ಬಹಳ ದಿನತೆಯಿಂದ “ಅಣ್ಣ… ಪ್ಲೀಸ್ ಬಸ್ ಸ್ವಲ್ಪ ನಿಲ್ಲಿಸುತ್ತೀರಾ?” ಎಂದು ಕೇಳಿಕೊಂಡಳು. ಈ “ಅಣ್ಣ” ಅನ್ನುವ ಕರೆ ಬಹಳ ಮೋಡಿಯನ್ನು ಮಾಡುತ್ತದೆ. ಆ ಕರೆಯನ್ನು ಕೇಳಿದ ಚಾಲಕನಿಗೂ ಕರುಣೆ ಉಕ್ಕಿರಬೇಕು. ಜೊತೆಗೆ ಆ ಹುಡುಗಿಯ ಗಾಬರಿ ತುಂಬಿದ ಮುಖ ನೋಡಿ ಕನಿಕರ ಉಂಟಾಗಿರಬೇಕು. ಇದುವರೆಗೂ ಬಹಳ ಬಿರುಸಾಗಿ ಮಾತನಾಡುತ್ತಿದ್ದವನು “ಸಂತೆಕಟ್ಟೆಯಲ್ಲಿ ನಿಲ್ಲಿಸುತ್ತೇನೆ. ಅಲ್ಲಿ ಬೇರೆ ಬಸ್ ಹಿಡಿದು ಬ್ರಹ್ಮಾವರಕ್ಕೆ ಹೋಗಿ” ಎಂದು ತಿಳಿಸಿದ.
ಚಾಲಕನ ಈ ಮಾತಿನಿಂದ ಹುಡುಗಿಯ ಮುಖದಲ್ಲಿ ಸ್ವಲ್ಪ ನಿರಾಳತೆ ಮೂಡಿತು. ಆದರೂ ಆತಂಕ ಇನ್ನೂ ಇದ್ದೇ ಇತ್ತು. ಕೊನೆಗೆ ಒಂದೆರಡು ನಿಮಿಷ ಬಿಟ್ಟು “ವಾಪಸ್ ಹೋಗಲು ದುಡ್ಡು ಇದೆಯಾ?” ಎಂದು ತನ್ನ ಸ್ವಂತ ತಂಗಿಯನ್ನೇ ಕೇಳುವಂತೆ ವಿಚಾರಿಸಿದಾಗ… ಆ ಹುಡುಗಿಯ ಮೊಗದಲ್ಲಿ ಮಿಂಚಿದ ನಗು ಕೋಟಿ ರೂಪಾಯಿಗೂ ಮಿಗಿಲಾಗಿತ್ತು. ಅವಳು ಅಷ್ಟೇ ಪ್ರೀತಿಯಿಂದ “ಇದೆ ಅಣ್ಣಾ” ಎಂದು ನಗುತ್ತಲೇ ಉತ್ತರ ನೀಡಿದಳು.
ಕೊನೆಗೆ ಸಂತೆಕಟ್ಟೆಯಲ್ಲಿ ನಿಲ್ಲಿಸಿ, ಬ್ರಹ್ಮಾವರದತ್ತ ಹೊರಟ ಭಾರತಿ ಬಸ್ಸಿಗೆ ಹೋಗಲು ಸೂಚಿಸಿದ. ಅವಳು ಅದನ್ನು ಹತ್ತಿದಳ ಎಂದು ಗಮನಿಸಿಯೇ ಮುಂದೆ ಸಾಗಿದ್ದು ನಮ್ಮ ಬಸ್ಸಿನ ಚಾಲಕ. ಬಹುಶಃ ಇಂತಹ “ಮಾನವೀಯತೆ” ನಮ್ಮಲ್ಲಿ ಇನ್ನೂ ಇದೆ ಎಂಬುದಕ್ಕೆ ಇದೊಂದು ನಿದರ್ಶನವಾದರೆ… “ಅಣ್ಣ” ಎಂಬ ಕರೆಗೆ ಅದ್ಭುತವಾದ ಶಕ್ತಿ ಇರುವುದಕ್ಕೂ ಇದೊಂದು ಸಾಕ್ಷಿ. ನೀವೇನಂತೀರಾ?
ಸರ್ವೇ ಜನಾಃ ಸುಖಿನೋ ಭವಂತು…
- ಸುಮಾ ಕಿರಣ್
