ಮಲ್ಲಿಗೆ…ಮಲ್ಲಿಗೆ…ಮಂಗಳೂರ ಚಿಕ್ಕ ಮಲ್ಲಿಗೆ…



ಮಲ್ಲಿಕಾ, ಮೋಗ್ರಾ …ಇತ್ಯಾದಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಮಲ್ಲಿಗೆಯೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ನೋಡಿ, ಹೆಂಗಳೆಯರಿಗೆಲ್ಲಾ ‘ಮಲ್ಲಿಗೆ’ ಎಂದ ಕೂಡಲೇ ಮನಃಪಟಲದಲ್ಲಿ ಮಲ್ಲಿಗೆಯ ಚಿತ್ರ ಮೂಡಿಯಾಯ್ತು. ಅದರ ಘಮಲು ನಿಮ್ಮ ನೆನಪಿನಲ್ಲಿ ಹಾದುಹೊಯ್ತು. ಅಲ್ಲವೇ !?

ಮಲ್ಲಿಗೆಯಲ್ಲಿ ಹಲವು ಬಗೆಯ ಪ್ರಬೇಧವಿದ್ದರೂ, ಎಲ್ಲರಿಗೂ ಅವರವರ ಪ್ರಾಂತ್ಯದಲ್ಲಿ ಬೆಳೆಯುವ ಮಲ್ಲಿಗೆಯೇ ಅತೀ ಪ್ರಿಯ. ಮೈಸೂರು ಮಲ್ಲಿಗೆ, ದುಂಡು ಮಲ್ಲಿಗೆ ಎಲ್ಲವೂ ಮನಕ್ಕೆ ಅಹ್ಲಾದ ನೀಡುವ ಸುವಾಸನೆ ಹೊಂದಿರುವಂತಹವೇ.!ಆದರೆ ಎಲ್ಲಾ ತುಳುನಾಡಿಗರಿಗೆ ತುಳುಮಣ್ಣಿನಲ್ಲಿ ಬೆಳೆಯುವ ಮಂಗಳೂರು ಮಲ್ಲಿಗೆ ಅತ್ಯಂತ ಪ್ರೀತಿ. ಉಡುಪಿ ಸಮೀಪದ ಶಂಕರಪುರ ಎಂಬಲ್ಲಿ ಬೆಳೆಯುವ ಮಲ್ಲಿಗೆ ಅತ್ಯಂತ ಸುಗಂಧಭರಿತವಾಗಿದ್ದು ಇದಕ್ಕೆ ಭೌಗೋಳಿಕ ಚಿಹ್ನೆಯ ಮಾನ್ಯತೆಯೂ ದೊರೆತಿದೆ.

ತುಳುನಾಡಿನಾದ್ಯಂತ ದೇವಸ್ಥಾನಗಳಲ್ಲಿ ದೇವರ ಅಲಂಕಾರಕ್ಕೆ ಕುಡ್ಲ ಮಲ್ಲಿಗೆಯೇ ಬಳಸುತ್ತಾರೆ. ದೇವರ ಜಾತ್ರಾ ಮಹೋತ್ಸವಗಳಲ್ಲಿ ಮಲ್ಲಿಗೆಯಿಂದ ಅಲಂಕೃತಗೊಂಡ ದೇವರನ್ನು ನೋಡುತಿದ್ದರೆ ಭಕ್ತಿಯ ಭಾವ ಸ್ಪುರಿಸುತ್ತದೆ.ಒಂದು ತುಂಡು ಮಲ್ಲಿಗೆಯ ಪ್ರಸಾದಕ್ಕಾಗಿ ಮನ ಹಾತೊರೆಯುತ್ತದೆ.ಗಂಧದೊಂದಿಗೆ ಮಲ್ಲಿಗೆಯ ಪ್ರಸಾದ ಸಿಕ್ಕರೆ ಹೆಂಗಸರಿಗೆ ಸಂತೃಪ್ತ ಭಾವ.

ಫೋಟೋ ಕೃಪೆ : Kirehalli

ಮನೆಯಲ್ಲಿ ನಡೆಯುವ ಯಾವುದೇ ಶುಭಕಾರ್ಯವಿರಲಿ , ಮಂಗಳೂರು ಮಲ್ಲಿಗೆಯಿರದೇ ಕಾರ್ಯಕ್ರಮ ಸಂಪೂರ್ಣವಾಗುವುದೇ ಇಲ್ಲ ! ಅದರಲ್ಲೂ ಮದುವೆಗಳಲ್ಲಿ ಮದುಮಗಳಿಗೆ ಹಾಕುವ ಮಲ್ಲಿಗೆಯ ಜಲ್ಲಿ ವಿಶೇಷವಾಗಿರುತ್ತದೆ. ಪ್ರತಿಯೊಬ್ಬ ತುಳುವ ಹೆಣ್ಣುಮಗಳು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ , ತನಗೆ ಮಂಗಳೂರು ಮಲ್ಲಿಗೆಯ ಜಲ್ಲಿಯೇ ಆಗಬೇಕೆಂದು ಬಯಸುತ್ತಾಳೆ . ಅದಕ್ಕೆಂದೇ ಪ್ರತಿನಿತ್ಯ ವಿಮಾನಗಳಲ್ಲಿ ಮುಂಬೈ , ಬೆಂಗಳೂರು , ಚೆನ್ನೈ ಗಳಂತಹ ಮಹಾನಗರಗಳಿಗೆ ಮಲ್ಲಿಗೆಯನ್ನು ರವಾನಿಸಲಾಗುತ್ತದೆ. ವಿದೇಶಗಳಲ್ಲೂ ಬೇಡಿಕೆಯಿರುವುದರಿಂದ ಶ್ರೀಲಂಕಾ, ಮಲೇಶಿಯಾ , ಅರಬ್ ದೇಶಗಳಿಗೂ ಮಲ್ಲಿಗೆಯ ರಫ್ತಾಗುತ್ತದೆ.

ಮಂಗಳೂರು ಮಲ್ಲಿಗೆಯನ್ನು ಹೋಲುವ ಬೇರೆ ಮಲ್ಲಿಗೆ ಮಾರ್ಕೆಟ್ಟಿಗೆ ಈಗೀಗ ಬರುತ್ತಿದೆ .ಆದರೆ ಇದಕ್ಕಿರುವ ಸುವಾಸನೆ ಅವುಗಳಿಗಿಲ್ಲ. ಕೆಲವು ತುಳುನಾಡಿನ ದೇವಿ ದೇವಾಲಯಗಳಲ್ಲಿ ದೇವಿಯನ್ನು ಅಲಂಕರಿಸಲು ಮಂಗಳೂರು ಮಲ್ಲಿಗೆಯಲ್ಲದೆ ಬೇರೆ ಯಾವ ಮಲ್ಲಿಗೆಯನ್ನೂ ಸ್ವೀಕರಿಸುವುದಿಲ್ಲವಂತೆ.!

ಫೋಟೋ ಕೃಪೆ : indiaMart

ಬಾಳೆ ಗಿಡದ ನಾರಿನಿಂದಲೇ ಕಟ್ಟುವ ಮಂಗಳೂರು ಮಲ್ಲಿಗೆ ಅತೀ ಮೃದು.ಮೊಗ್ಗು ಮಲ್ಲಿಗೆ ರಾತ್ರಿ ಅರಳುವಾಗ ಪರಿಸರವೆಲ್ಲ ಘಮಘಮ. ನಸುಕಿನಲ್ಲೆ ಎದ್ದು ಪ್ರತೀ ಮೊಗ್ಗನ್ನೂ, ಅರ್ತಿಯಿಂದ ಆರಿಸಿ , ನಾಜೂಕಾಗಿ ನಾರಿನಿಂದ ಬಂಧಿಸಿ ಮಾಡುವ ಮಾಲೆಗೂ ಪರಿಣಿತರು ಬೇಕು. ಮಲ್ಲಿಗೆಯ ಮಾಲೆ ಮಾಡುವುದೂ ಒಂದು ಕಲೆ .ಸರಿಯಾಗಿ ಕಟ್ಟಿರದಿದ್ದರೆ, ಕಟ್ಟೆಯಲ್ಲಿ ವ್ಯಾಪಾರಿಗಳು ಸ್ವೀಕರಿಸುವುದೂ ಇಲ್ಲ. ಮೊಗ್ಗಿನ ಮಾಲೆಗೆ ಬೆಲೆ ಹೆಚ್ಚು.

ಇನ್ನು, ಮಂಗಳೂರು ಮಲ್ಲಿಗೆಯ ಬೆಲೆ ಕೇಳಿದರೆ ಹೊಸಬರು ಬೆಚ್ಚಿ ಬೀಳುವುದು ಖಚಿತ.ಅತೀ ಬೇಡಿಕೆಯ ದಿನಗಳಾದ ನವರಾತ್ರಿ ಉತ್ಸವ ,ಹಬ್ಬ ಹರಿದಿನಗಳ ಶ್ರಾವಣ ಮಾಸ ,ಉತ್ಸವದ ದಿನಗಳು ಹಾಗೂ ಶುಭ ಕಾರ್ಯಗಳು ಹೆಚ್ಚಾಗಿ ನಡೆಯುವ ಸಂದರ್ಭಗಳಲ್ಲಿ ಒಂದು ಅಟ್ಟಿಗೆ(ಚೆಂಡು ಹೂವು ) 3200 ರೂಪಾಯಿಯವರೆಗೂ ಮಾರಾಟವಾದ ನಿದರ್ಶನಗಳಿವೆ.. ಬೇಡಿಕೆ ಇರದ ಋತುಗಳಲ್ಲಿ, ಹೂವು ಕಡಿಮೆ ಬೆಲೆಗೆ ಸಿಗುವುದು. ಮಲ್ಲಿಗೆಯ ಧಾರಣೆ ಉಡುಪಿ ಜಿಲ್ಲೆಯ ಶಂಕರಪುರದ ಕಟ್ಟೆಯಲ್ಲಿ ನಿಗದಿಪಡಿಸಲಾಗುವುದಂತೆ . ಇಲ್ಲಿ ಬೆಳೆಯುವ ಶಂಕರಪುರ ತಳಿ ಪ್ರಸಿದ್ಧ.

ಫೋಟೋ ಕೃಪೆ : interest

ಮಲ್ಲಿಗೆಯನ್ನು, ಮರಳು ಮಿಶ್ರಿತ ಕೆಂಪುಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಮಸಾರ್ರ್ (ಕಲ್ಲು ಮಿಶ್ರಿತ ಭೂಮಿ) ಯಲ್ಲಿ ಒಳ್ಳೆಯ ಇಳುವರಿ ನೀಡುತ್ತದೆ. ಬಿಸಿಲು, ಮಳೆ ಎರಡೂ ಇರುವ ಜಾಗದಲ್ಲಿ ಮಲ್ಲಿಗೆ ಚೆನ್ನಾಗಿ ಬೆಳೆಯುವುದು. ಮಲ್ಲಿಗೆಯ ಬೇರು, ಹೂವು , ಎಲೆಗಳನ್ನು ಉಪಯೋಗಿಸಿ ಸುಗಂಧ ದ್ರವ್ಯ, ತೈಲ, ಸಾಬೂನು ಇತ್ಯಾದಿ ತಯಾರಿಸಲಾಗುತ್ತದೆ. ವಿವಿಧ ರೀತಿಯ ಔಷಧವಾಗಿಯೂ ಉಪಯೊಗಿಸಲ್ಪಡುತ್ತದೆ .



ಮಲ್ಲಿಗೆ ಒಂದು ದೀರ್ಘಕಾಲಿಕ ಬೆಳೆ.ಪೊದೆಪೊದೆಯಾಗಿ ಬೆಳೆಯುವ ಮಲ್ಲಿಗೆ ಗಿಡಗಳಿಂದ ಇಪ್ಪತ್ತು ವರ್ಷಗಳವರೆಗೂ ಇಳುವರಿ ಪಡೆಯಬಹುದು . ಕಾಲಕಾಲಕ್ಕೆ ಕಟಾವು ಮಾಡಿ , ಕೀಟಗಳಿಂದ ರಕ್ಷಿಸಿ , ಮಲ್ಲಿಗೆಯ ಗಿಡಗಳ ಆರೈಕೆ ಮಾಡಬೇಕು.ಇತ್ತೀಚೆಗೆ ಅನೇಕ ರೈತರು ಮಲ್ಲಿಗೆ ಕೃಷಿಯನ್ನು ಉದ್ಯಮವಾಗಿ ಮಾಡಿಕೊಂಡಿದ್ದಾರೆ. ಮಲ್ಲಿಗೆ ಕೃಷಿಯನ್ನೇ ನಂಬಿ ಬದುಕು ಬಂಗಾರ ಮಾಡಿಕೊಂಡ ಅದೆಷ್ಟೋ ಕುಟುಂಬಗಳೂ ಇಲ್ಲದಿಲ್ಲ.


  • ಸವಿತಾ ಅರುಣ್ ಶೆಟ್ಟಿ.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading