ಊಟಕ್ಕೆ ಉಪ್ಪಿನಕಾಯಿ ಇರಲೇಬೇಕು. ಆ ಉಪ್ಪಿನಕಾಯಿಯ ಹಿಂದೆ ಇದ್ದ ಅಮ್ಮನ ಕೈ ನೆನಪು ಬೇಸಿಗೆಯ ಕಾಲದಲ್ಲಿ ನೆನಪಾಗದೆ ಇರದು.ಉಪ್ಪಿನಕಾಯಿಯ ಸುತ್ತ ಇರುವ ಹಳೆಯ ನೆನಪನ್ನು ಮಾಡಿಸುತ್ತಾ,ಬಾಯಲ್ಲಿ ನೀರು ತರಿಸುತ್ತಾರೆ ಲೇಖಕ ರಘುರಾಂ ಅವರು. ಲೇಖನ ಓದಿ, ಹಳೆಯ ನೆನಪನ್ನು ಮಾಡಿಕೊಳ್ಳಿ.
ಬೇಸಿಗೆ ಜೋರಾಗಿಯೇ ಇದೆ ಅಲ್ಲವೇ? ಪ್ರತಿ ವರ್ಷ ಈ ಸಾರಿ ಸೆಖೆ ಜಾಸ್ತಿ ಎಂದು ಹೇಳುವ ಅಭ್ಯಾಸ ಆಗಿದೆ. ಆದರೆ ನೋಡಿ… ಈ ಬೇಸಿಗೆ ಸಮಯದಲ್ಲೇ ಸಮಾರಂಭಗಳು ಜಾಸ್ತಿ. ಮದುವೆ, ಉಪನಯನ, ಗೃಹ ಪ್ರವೇಶ ಯಾವುದೇ ಸಮಾರಂಭ ಇರಲಿ ಮೃಷ್ಟಾನ್ನ ಭೋಜನ ಸಿಗುವುದು ಈ ಸಮಯದಲ್ಲೇ. ಎರಡು ಪಲ್ಯ, ಎರಡು ಕೋಸಂಬರಿ, ರಾಯತ, ಎಲೆ ತುದಿಗೆ ಪಾಯಸ, ತರಹಾವರಿ ಸಿಹಿಗಳು…. ಇಷ್ಟು ಸಾಕಲ್ಲವೇ ಬಾಯಲ್ಲಿ ನೀರೂರಲು! ಏನೇ ಅಡಿಗೆ ಮಾಡಿದ್ದರೂ ಕೊನೆಯಲ್ಲಿ ಮೊಸರನ್ನ ಬಂದಾಗ ಕೈ ತಾನಾಗಿಯೇ ಹೋಗುವುದು ಎಲೆಯ ಎಡಗಡೆಯ ಮೂಲೆಗೆ! ಅಲ್ಲೇ ಇರುವುದು ಮೊದಲೇ ಬಡಿಸಿದ ಒಂದು ಸಣ್ಣ ಉಪ್ಪಿನಕಾಯಿ ಚೂರು. ಮೊದಲೇ ಇದನ್ನು ಬಡಿಸಿದ್ದರೂ ತಿನ್ನುವ ಸರಧಿಯಲ್ಲಿ ಮಾತ್ರ ಕೊನೆಗೆ. ಏನೆಲ್ಲಾ ತಿಂದರೂ ಕೂಡ ಬಾಯಲ್ಲಿ ಅಂತಿಮವಾಗಿ ಉಳಿಯುವುದು ಈ ಉಪ್ಪಿನಕಾಯಿ ರುಚಿ ಮಾತ್ರ!

ಫೋಟೋ ಕೃಪೆ : Gulf news
ಆದರೂ ನೋಡಿ ಈ ಉಪ್ಪಿನಕಾಯಿಗೆ ಅದಕ್ಕೆ ಸಿಗಬೇಕಾದ ಮರ್ಯಾದೆ ಸಿಕ್ಕಿಲ್ಲ. ಯಾರಾದ್ರು ಸಮಾರಂಭದಲ್ಲಿ ಯಾವ ಅಡಿಗೆ ಮಾಡಿಸುವುದು ಎಂದು ಯೋಚಿಸುವಾಗ ಸಿಹಿ, ಕಾರ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಯಾವ ಉಪ್ಪಿನಕಾಯಿ ಎಂದು ಯಾರದ್ರು ತಲೆಕೆಡಿಸಿಕೊಳ್ಳುವುದು ನಾನಂತು ನೋಡಿಲ್ಲ! ಯಾರು ಹೇಳಲಿ, ಬಿಡಲಿ ಊಟದಲ್ಲಿ ಒಂದು ಉಪ್ಪಿನಕಾಯಿ ಇರುವುದು ಮಾತ್ರ ಖಂಡಿತ. ಮದುವೆ ಮನೆಗಳಂತೂ ಟೊಮೇಟೊ, ಕ್ಯಾರೆಟ್, ಇತರ ತರಕಾರಿಗಳನ್ನು ಹಾಕಿ ಧಿಡೀರ್ ಉಪ್ಪಿನಕಾಯಿ ಕೂಡ ತಯಾರು ಮಾಡುತ್ತಾರೆ.
ನಾನು ಬೇಕಾದಷ್ಟು ತರಹದ ಉಪ್ಪಿನಕಾಯಿ ತಿಂದಿದ್ದೇನೆ. ಅದೇನು ಬಾರಿ ವಿಷಯವೇ? ಎಲ್ಲರೂ ತಿಂದೇ ಇರುತ್ತಾರೆ! ನಿಂಬೆ ಕಾಯಿ ಉಪ್ಪಿನಕಾಯಿ ಸಾರ್ವತ್ರಿಕ ಬಿಡಿ. ಇದರ ಜೊತೆಗೆ ಮೆಣಸಿನ ಕಾಳಿನ ತೆನೆ, ಮಾವಿನಕಾಯಿ ಶುಂಠಿ ಎಲ್ಲಾ ಸೇರಿಸಿದರೆ ಇನ್ನೂ ರುಚಿ ಜಾಸ್ತಿ. ಅಮಟೆಕಾಯಿ, ನೆಲ್ಲಿಕಾಯಿ, ಹೇರಳೆಕಾಯಿ ಉಪ್ಪಿನಕಾಯಿಗಳು ಇದ್ದರೂ ಮಲೆನಾಡಿನ ಅಪ್ಪೆ ಮಿಡಿ ಉಪ್ಪಿನಕಾಯಿ ಮುಂದೆ ಯಾವುದೇ ಉಪ್ಪಿನಕಾಯಿ ಇಲ್ಲ ಬಿಡಿ!
ಎಷ್ಟೋ ಸಾರಿ ಸುಸ್ತಾಗಿ ಮನೆಗೆ ಬಂದಾಗ ಬರೀ ಮೊಸರನ್ನ ತಿಂದು ಬಿದ್ದುಕೊಳ್ಳೋಣ ಅನಿಸುವುದು ಸಾಮಾನ್ಯ. ಆ ಸಮಯದಲ್ಲೂ ಆ ಊಟಕ್ಕೆ ರುಚಿ ತರುವುದು ಈ ಒಂದು ಸಣ್ಣ ಉಪ್ಪಿನಕಾಯಿ ಚೂರು. ಅದರಲ್ಲೂ ಜ್ವರ ಬಂದಾಗ ಬರೀ ಬ್ರೆಡ್ ತಿನ್ನಲು ಆಗುತ್ತದೆಯೇ? ಆಗಲೂ ಬೇಕು ಈ ಉಪ್ಪಿನಕಾಯಿ ಚೂರು. ಜ್ವರ ಬಿಟ್ಟ ಮೇಲೆ ಕೆಟ್ಟಿರುವ ನಾಲಗೆ ಸರಿಮಾಡಿಕೊಳ್ಳಲು ಮತ್ತೆ ಈ ಉಪ್ಪಿನಕಾಯಿ ಚೂರೇ ಗತಿ! ಸೋಮರಸದ ಜೊತೆಗೊ ಇದು ಬೇಕಂತೆ ಎಂದು ಹೇಳುತ್ತಾರೆ!
ಆದರೆ ಅಮ್ಮ ಮಾಡುವ ಉಪ್ಪಿನಕಾಯಿ ರುಚಿ ಮುಂದೆ ಇನ್ಯಾವುದೂ ಇಲ್ಲ ಬಿಡಿ! ಯಾರ ಅಮ್ಮನೂ ಅಡಿಗೆ ಮನೆಯಲ್ಲಿ ಕೆಲಸ ಮಾಡುವುದಿಲ್ಲ! ಅವರಿಗೆಲ್ಲ ಅಡಿಗೆ ಮನೆ ಜೀವನದ ಪ್ರೀತಿಯನ್ನು ರುಚಿಯಾದ ಅಡಿಗೆಯಲ್ಲಿ ಬೆರೆಸಿ ಮನೆ ಮಂದಿಗೆಲ್ಲಾ ಹಂಚುವ ಕಾರ್ಯಸ್ಥಾನ. ನನ್ನ ಅಮ್ಮನೂ ಹಾಗೆಯೇ. ಅದರಲ್ಲೂ ನನ್ನ ಅಮ್ಮ ಬೇಸಿಗೆಯಲ್ಲಿ ಉಪ್ಪಿನಕಾಯಿ ಹಾಕುವಾಗ ಪಡುವ ಸಂಭ್ರಮ ಬಹಳವೇ ವಿಶೇಷ!
ಈ ಬೇಸಿಗೆ ಕಾಲದಲ್ಲಿ ಬೆಳಿಗ್ಗೆ ಎದ್ದು ಕರದೆಮ್ಮ ಹಾಲಿನ ಬೆಲ್ಲದ ಕಾಫೀ ಕುಡಿದು, ಸೌದೆ ಒಲೆಯ ಮುಂದೆ ಕೂತು ತಿಂಡಿ ಮಾಡುತ್ತಿದ್ದಾಗ ಕೂಡ ಅಮ್ಮನ ಕಿವಿ ಹೊರಗಡೆ ಇರುತ್ತಿತ್ತು. ಮಾವಿನ ಮಿಡಿಗಳ ಗೋಣಿ ಚೀಲವನ್ನು ತಲೆ ಮೇಲೆ ಹೊತ್ತು ಕೊಂಡು “ಅಪ್ಪೇsss ಮಿಡಿ, ಮಾವಿನ್sss ಮಿಡಿ” ಎಂದು ಜೋರಾಗಿ ಕೂಗಿಕೊಂಡು ಬರುವ ಶಬ್ದ ಕಿವಿಗೆ ಬಿದ್ದಾಗ, ಅಮ್ಮನ ಮುಖ ಅರಳುತ್ತಿತ್ತು. ನಾನು ಹೊರಗಡೆ ಓಡಿ ಹೋಗಿ “ಮಾವಿನ ಕಾಯಿ” ಇಲ್ಲಿ ಬಾರಪ್ಪ ಎಂದು ಕರೆಯುತ್ತಿದ್ದೆ. ಅವನು ಹೊರಗಡೆ ಕಲ್ಲು ಬೆಂಚಿನ ಹತ್ತಿರ ಬಂದು ನಿಂತುಕೊಂಡ ಮೇಲೆ, ನಾನು ಅವನ ತಲೆ ಮೇಲೆ ಇಟ್ಟು ಕೊಂಡಿದ್ದ ಮೂಟೆ ಇಳಿಸಲು ಕೈ ಜೊಡಿಸಿದರೆ ಮೂಟೆ ಕೆಳಗೆ ಬರುತ್ತಿತ್ತು.
ಮೂಟೆ ಇಳಿಸಿದ ತಾತ ಗಂಟು ಬಿಚ್ಚಿ ಮಾವಿನ ಮಿಡಿ ಗೊಂಚಲು ಕಾಣುವ ಹಾಗೆ ಮಾಡುತ್ತಿದ್ದ. ಸರಿ ಮಾವಿನ ಮಿಡಿಗಳ ಪರೀಕ್ಷೆ ಪ್ರಾರಂಭ ಆಗುತ್ತಿತ್ತು. ನಾಲ್ಕು ಮಿಡಿ ತೆಗೆದು ಅಮ್ಮನಿಗೆ ತೋರಿಸುತ್ತಿದ್ದ. “ನಿನ್ನೆ ರಾತ್ರಿ ಕೊಯ್ದು ಈಗ ತಂದಿರುವುದು, ನೋಡಿ” ಎನ್ನುತ್ತಾ ಒಂದು ಮಿಡಿ ತೊಟ್ಟನ್ನು ಮುರಿಯುತ್ತಿದ್ದ. ಆಗ ಸೊನೆ ತೊಟ್ಟಿನಿಂದ ಒಂದೆರೆಡು ಅಡಿಗಳಷ್ಟು ಹಾರಬೇಕು. ಆಗ ಅದು ಮೊದಲನೇಯ ಪರೀಕ್ಷೆ ಪಾಸಾಯಿತು ಎಂದು ಅರ್ಥ! ಒಂದು ಮಿಡಿ ತೆಗೆದುಕೊಂಡು ಅಪ್ಪೆ ಮಿಡಿ ಇದು ನೋಡಿ ಎಂದು ಕಲ್ಲಿನ ಬೆಂಚಿನ ಮೇಲೆ ಇಟ್ಟು ಕೈಯಿಂದ ಒಂದು ಸಣ್ಣ ಪೆಟ್ಟು ಕೊಟ್ಟರೆ, ಮಿಡಿ ಸರಿಯಾಗಿ ಮಧ್ಯಕ್ಕೆ ಎರಡು ಭಾಗ ಆಗುತ್ತಿತ್ತು! “ನೋಡಿ ಕೊಬ್ಬರಿ ತರಹ ಇದೆ” ಎನ್ನುತ್ತಿದ್ದ! ಅಗ ಅದು ಎರಡನೇಯ ಪರೀಕ್ಷೆ ಪಾಸಾಗುತ್ತಿತ್ತು. ನಾವು ಹಾಗೆಯೇ ಅಲ್ಲವೇ. ನೆಂಟರೇ ಇರಲಿ, ಸ್ನೇಹಿತರೇ ಇರಲಿ ಸರಿಯಾದವರ ಜೊತೆ ಪರೀಕ್ಷೆ ಮಾಡಿಯೇ ಸೇರುವುದು!
ಹೋಗಲಿ ಬಿಡಿ. ಈಗ ನಿಜವಾದ ಮಿಡಿಗಳ ವ್ಯಾಪಾರ ಪ್ರಾರಂಭ ಆಗುತ್ತಿತ್ತು! “ಈ ಸಾರಿ ಬೆಳೆನೇ ಇಲ್ಲಮ್ಮ. ಮೂಟೆಗೆ ಎಂಟು ರೂಪಾಯಿ” ಎನ್ನುತ್ತಿದ್ದ ತಾತ. “ಸಣ್ಣ ಮೂಟೆಗೆ ಎಂಟು ರೂಪಾಯಿನ! ಹಾಗಾದರೆ ಬೇಡವೇ ಬೇಡ” ಎನ್ನುತ್ತಿದ್ದರು ಅಮ್ಮ. ಸರಿ ಆಕಡೆ, ಈ ಕಡೆ ಎಳದಾಡಿ ಮೂರು ರೂಪಾಯಿಗೆ ಒಂದು ಮೂಟೆ ಕೊಟ್ಟು ಭೋಣಿ ಮಾಡಿ ಎನ್ನುತ್ತಿದ್ದ. ಅಮ್ಮ ಬುಟ್ಟಿ ತೆಗೆದುಕೊಂಡು ಬಾ ಎಂದು ಹೇಳಿದಾಗ ನಾನು ಒಳಗಡೆಯಿಂದ ಬೆತ್ತದ ಬುಟ್ಟಿ ತರುತ್ತಿದ್ದೆ. ಮಿಡಿಗಳನ್ನು ತಾತ ಅದರಲ್ಲಿ ಸುರಿಯುತ್ತಿದ್ದ. ಆಗ ಮಿಡಿಗಳ ನಿಜವಾದ ಬಣ್ಣ ಬಯಲಾಗುತ್ತಿತ್ತು! ನೆಂಟರ ಬಣ್ಣ ಕೂಡ ಪೂರ್ತಿ ನೋಡಿದ ಮೇಲೆ ತಾನೆ ಬಯಲಾಗುವುಧು!

ಫೋಟೋ ಕೃಪೆ : Gulf news
ಕೆಲವೊಮ್ಮೆ ಮೇಲುಗಡೆ ತೋರಿಸಿದ ಅಪ್ಪೆ ಮಿಡಿ ಮೂಟೆಯ ಕೆಳಗಡೆ ಇರುತ್ತಿರಲಿಲ್ಲ!. ಅದರ ಬದಲು ಬೇರೆ ದುಂಡನೇ ಮಿಡಿ ಇರುತ್ತಿತ್ತು. ಇನ್ನೊಮ್ಮೆ ಕೆಳಗಡೆ ಮಾವಿನ ಸೊಪ್ಪು ಹಾಕಿ ದೊಡ್ಡ ಮೂಟೆಯ ತರಹ ಕಾಣುವ ಹಾಗೆ ಮಾಡಿರುತ್ತಿದ್ದರು! ಅಮ್ಮ ಇವೆಲ್ಲ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಬಿಡಿ! ಕೊನೆಗೆ ಇನ್ನೊಂದು ರೂಪಾಯಿ ಕಡಿಮೆ ಮಾಡಿ ಕೊಟ್ಟು ಹೋಗುತ್ತಿದ್ದ!
ಆದರೆ 11ಗಂಟೆಯ ಹೊತ್ತಿಗೆ ಬರುತ್ತಿದ್ದ ಒಬ್ಬ ತಾತ ಮಾತ್ರ ಒಳ್ಳೆಯ ಮಿಡಿ ತರುತ್ತಿದ್ದ. ಅವನಿಗೆ ಮಾತ್ರ ಮನೆಯೊಳಗೆ ಪ್ರವೇಶ ಇತ್ತು! ಈ ತಾತ ಮೋಸ ಇಲ್ಲ. ಬೆಲೆ ಚೌಕಾಸಿ ಇಲ್ಲ! ಮೂಟೆಗೆ ನಾಲ್ಕು ರೂಪಾಯಿ ಕಡಿಮೆ ಇಲ್ಲ. ಅದರಲ್ಲೂ ಇವನು ತರುವ ಜೀರಿಗೆ ಮಾವಿನ ಮಿಡಿ ಅಮ್ಮನಿಗೆ ಇಷ್ಟ! ಈ ತಾತನಿಗೆ ಮಾತ್ರ ದುಡ್ಡಿನ ಜೊತೆಗೆ ಬೆಲ್ಲ, ನೀರು ಕೂಡ ಕೊಡುತ್ತಿದ್ದರು.
ಈಗ ಬಟ್ಟಿಯಲ್ಲಿ ಇರುವ ಮಿಡಿಗಳಿಗೆ ನೀರಿನಲ್ಲಿ ಸ್ನಾನ ಮಾಡಿಸುವ ಕೆಲಸ. ಬೆತ್ತದ ಬುಟ್ಟಿಯಲ್ಲಿ ನೀರು ಬಸಿ ಇಳಿದ ಮೇಲೆ ಒಂದೊಂದೇ ಮಿಡಿಯನ್ನು ತೊಟ್ಟಿರುವ ಹಾಗೆ ಮುರಿದು, ಅದನ್ನು ಒಂದು ಒಳ್ಳೆಯ ಟವಲ್ ನಲ್ಲಿ ಒರೆಸಿ ಹಿತ್ತಾಳೆ ಪರಾತದ ಮೇಲೆ ಹಾಕುತ್ತಿದ್ದರು. ಬಹುಶಃ ಸಣ್ಣ ಮಗುವಿಗೆ ಸ್ನಾನ ಮಾಡಿಸಿ ನಿಧಾನವಾಗಿ ಮೈ ಒರೆಸಿ, ತೊಟ್ಟಿಲಿಗೆ ಹಾಕುವಾಗ ಇರುವ ತನ್ಮಯತೆ ಈ ಮಿಡಿ ಒರೆಸುವಾಗಲು ಇರುತ್ತಿತ್ತು! ಮಧ್ಯದಲ್ಲಿ ಅಪ್ಪ ಬಂದು ಇನ್ನು ಇವಳ ಫ್ಯಾಕ್ಟರಿ ಮುಗಿದಿಲ್ಲ ಎಂದು ಹೇಳಿದರೆ ಅವರು ಎರಡನೇ ಸಾರಿ ಕಾಫೀ ಕುಡಿಯುವ ಸಮಯ ಆಯಿತು ಎಂದು ಅರ್ಥ! ಎಲ್ಲರಿಗೂ ಕಾಫೀ ಕೊಟ್ಟು ಅಮ್ಮ ಉಪ್ಪಿನಕಾಯಿ ಕೆಲಸ ಮುಂದುವರೆಸುತ್ತಿದ್ದರು.

ಫೋಟೋ ಕೃಪೆ : business line
ಈ ಕಡೆ ಉಪ್ಪನ್ನು ಕೂಡ ದೊಡ್ಡ ಬಾಣಲೆಯಲ್ಲಿ ಹಾಕಿ ಬಿಸಿ ಮಾಡುತ್ತಿದ್ದರು. ಆ ಕಡೆ ಮಹಡಿ ಮೇಲಿನಿಂದ ಪಿಂಗಾಣಿಯ ದೊಡ್ಡ, ದೊಡ್ಡ ಜಾಡಿಗಳು ಕೆಳಗಡೆ ಬರುತ್ತಿತ್ತು. ಎಲ್ಲದನ್ನು ಚೆನ್ನಾಗಿ ಒರೆಸಿ, ಮಾವಿನ ಮಿಡಿ ಸ್ವಲ್ಪ ಹರಡಿ, ಅದರ ಮೇಲೆ ಉಪ್ಪು ಹಾಕಿ, ಮತ್ತೆ ಮಿಡಿ ಹಾಕಿ, ಮತ್ತೆ ಉಪ್ಪು ಹರಡಿ ಜಾಡಿ ತುಂಬಿಸುತ್ತಿದ್ದರು. ಮಾರನೇಯ ದಿನದಿಂದ ದೊಡ್ಡ ಸೌಟನ್ನು ಚೆನ್ನಾಗಿ ಒರೆಸಿಕೊಂಡು ಅದನ್ನು ಎರಡು, ಮೂರು ಸಾರಿ ದಿನ ಬಿಟ್ಟು ದಿನ ತಿರುಗಿಸಿ ಹಾಕುತ್ತಿದ್ದರು. ಒಂದು ವಾರಕ್ಕೆ ಅದು ಚೆನ್ನಾಗಿ ಕಳೆತಿರುತ್ತಿತ್ತು. ನಂತರ ಒಣ ಮೆಣಸಿನಕಾಯಿ ತೊಟ್ಟು ಬಿಡಿಸಿ, ಬಿಸಿ ಮಾಡಿ, ಒನಕೆಯಲ್ಲಿ ಕುಟ್ಟಿ ಪುಡಿ ಮಾಡಿ ಬೆರಸಬೇಕು. ನಂತರ ಒಗ್ಗರಣೆ! ಮತ್ತೆ ಎರಡು ದಿನ ಸೌಟಿನಲ್ಲಿ ಕೈ ಆಡಿಸಬೇಕು. ಮನಸ್ಸುಗಳು ಕೂಡ ಹಾಗೆ ಒಂದರಲ್ಲಿ ಇನ್ನೊಂದು ಬೆರೆಯಬೇಕು. ಆಗಾಗ ಭೇಟಿಯಾಗಿ ಸಂಭಂದಗಳನ್ನು ತಿರುವಿ ನೋಡುತ್ತಿರಬೇಕು!
ಅಷ್ಟಕ್ಕೇ ಮುಗಿಯಲಿಲ್ಲ ಉಪ್ಪಿನಕಾಯಿ ಕೆಲಸ! ಮಿಡಿ ತುಂಬಿಸಿರುವ ಜಾಡಿಯ ಮೇಲೆ ಮತ್ತೊಮ್ಮೆ ಉಪ್ಪಿನ ಪದರ ಹರಡಿ, ಮುಚ್ಚಲ ಮುಚ್ಚಿ, ಅದರ ಮೇಲೆ ಕೆಂಪು ಮಣ್ಣು ಹಚ್ಚಿ ಗಾಳಿ ಆಡದ ಹಾಗೆ ಇಡುತ್ತಿದ್ದರು. ಈಗ ಮೂರು ವರ್ಷದ ಹಿಂದೆ ಹಾಕಿದ ಒಂದೆರಡು ಜಾಡಿಗಳು ಮುಂದಕ್ಕೆ ಬರುತ್ತಿತ್ತು. ಈ ಸಾರಿಯ ಜಾಡಿಗಳು ಹಿಂದಕ್ಕೆ ಹೋಗುತ್ತಿತ್ತು. ನಮ್ಮ ಮನೆಯಲ್ಲಿ ಹದಿನಾಲ್ಕು ಈ ತರಹ ಉಪ್ಪಿನಕಾಯಿ ಜಾಡಿಗಳು ಯಾವಾಗಲೂ ಇರುತ್ತಿತ್ತು! ಮನೆಗಳಲ್ಲಿ ಜನ ಕೂಡ ತುಂಬ ಇರುತ್ತಿದ್ದರಲ್ಲ. ಮನಸ್ಸು ಕೂಡ ಜಾಡಿಗಳ ತರಹ ದೊಡ್ಡದಾಗಿ ಇರುತ್ತಿತ್ತು.

ಫೋಟೋ ಕೃಪೆ : cooking simplified
ಹಾಗೆ ನೋಡಿದರೆ ಉಪ್ಪಿನಕಾಯಿ ಹಾಕುವುದು ದೊಡ್ಡ ವಿಷಯವೇ ಅಲ್ಲ ಬಿಡಿ. ಆದರೆ ಮಲೆನಾಡಿನಲ್ಲಿ ಉಪ್ಪಿನಕಾಯಿ ಕೆಡದೇ ಇಡುವುದೇ ಒಂದು ದೊಡ್ಡ ವಿಷಯ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಮುಚ್ಚಲ ತೆಗೆದು ನೋಡಿದಾಗ, ಅದರಲ್ಲಿ ಕುರುಚಲು ಬಿಳಿ ಗಡ್ಡ ಬೆಳೆದಿರುತ್ತಿತ್ತು! ಅಂದರೆ ಬೂಸಲು (ಫಂಗಸ್) ಬಂದು, ಉಪ್ಪಿನಕಾಯಿ ತಿಪ್ಪೆ ಸೇರ ಬೇಕಾಗುತ್ತಿತ್ತು. ಆದರೆ ನಮ್ಮ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಕೆಟ್ಟಿಲ್ಲ. ಅಮ್ಮ ಆ ಕಾಲದಲ್ಲಿ ಮೂರನೇ ತರಗತಿ ಒದಿದ್ದರಂತೆ. ಆದರೂ ನೋಡಿ ಅವರಿಗೆ ಗೊತ್ತಿಲ್ಲದ ಹಾಗೆ ” ಪಾಶ್ಚರೈಜೇಷನ್” ( pasteurization) ನಿಯಮಗಳ ಪ್ರಕಾರ ಉಪ್ಪಿನಕಾಯಿ ಮಾಡುತ್ತಿದ್ದರು! . ಈಗ ನೆನಪಾಯಿತಾ ಸ್ಕೂಲ್ ನಲ್ಲಿ ಓದಿದ್ದು “ಥಿಯರಿ ಆಫ್ ಸ್ಪಾಂನ್ಟೇನಿಯಸ್ ಜನರೇಷನ್ ಮತ್ತು ಪಾಶ್ಚರೈಜೇಶನ್” ( Theory of spanteneous generation and pasteurization ). ಈಗ ಗೊತ್ತಾಯಿತಾ ಅಮ್ಮನ ಉಪ್ಪಿನಕಾಯಿ ಕೆಡದೇ ಇರುವ “ಟೆಕ್ನಾಲಜಿ”! ಸಂಬಂಧಗಳು ಕೂಡ ಹಾಗೆ ಅಲ್ಲವೇ? ಮನಸ್ಸಿನ ಕಲ್ಮಷಗಳನ್ನು ತೆಗೆದು ಹಾಕಿದರೆ ಸಂಭಂಧಗಳು ಕೆಡುವುದಿಲ್ಲ! ಅಮ್ಮ ಹಾಕಿದ ಉಪ್ಪಿನಕಾಯಿ ತರಹ ತಿನ್ನಲು ಚೆನ್ನಾಗಿರುವುದರ ಜೊತೆಗೆ ಬಹಳಷ್ಟು ವರ್ಷ ಕೆಡದೇ ಇರುತ್ತದೆ!
ಆದರೆ ಈಗ ನೋಡಿ. ನಾಲ್ಕು ರೂಪಾಯಿ ಮೂಟೆಯ ಕಾಲದಿಂದ ಒಂದು ಮಿಡಿಗೆ ನಾಲ್ಕು ರೂಪಾಯಿ ಕಾಲ ಬಂದಿದೆ. ಮನೆಯಲ್ಲಿ ದೊಡ್ಡ ಉಪ್ಪಿನಕಾಯಿ ಜಾಡಿಗಳ ಜಾಗದಲ್ಲಿ ಸಣ್ಣ ಬಾಟಲಿ ಬಂದಿದೆ. ತಿನ್ನುವುದು ವಾರಕ್ಕೆ ಒಮ್ಮೆ ರೇಷನ್ ತರಹ ಒಂದು ಹೋಳು ಮಾತ್ರ! ಉಪ್ಪಿನಕಾಯಿ ರುಚಿ ಪ್ರತಿದಿನ ಉಳಿಸಿಕೊಳ್ಳಲು ಆಗದೆ ಇರಬಹುದು. ಆದರೆ ಸಂಬಂಧಗಳ ರುಚಿ ಉಳಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ನಾನಂತೂ ದಿನಾ ಉಪ್ಪಿನಕಾಯಿ ರುಚಿ ಚಪ್ಪರಿಸುವವನೆ!… ನೀವು?
- ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು)
