ಮನಿಪ್ಲಾಂಟ್ ನೆನಪಿಸಿತು ಅಪ್ಪನ ನೆನಪು, ಮೃತ್ಯುಂಜಯ ಎಂ ಸಾಲಿಮಠ ಅವರು ಬರೆದ ಒಂದು ಪುಟ್ಟ ಭಾವನಾತ್ಮಕ ಕವಿತೆ, ಮುಂದೆ ಓದಿ…
ಅಪ್ಪ ರೈತ
ಬೆಳೆಯುತ್ತಾನೆ
ಮಾವು ಬಾಳೆ ಭತ್ತ
ಮನೆಯ ಹಿಂದಿನ
ಮಾವಿನ ಮರದ ಬುಡಕ್ಕೊಂದು
ಮನಿ ಪ್ಲಾಂಟ್ ಹಚ್ಚಿದ್ದಾನೆ
ಬಳ್ಳಿ ಚಿಗುರಿ ಎಲೆ ಎರಡು ಮೂರಾಗಿ
ಮೂರು ನೂರಾಗಿ
ಮರವನ್ನೇ ತಬ್ಬಿ ಮರಕ್ಕೆಲ್ಲ ಹಬ್ಬಿ
ಹಸಿರಾಗಿ ಹರಡುತ್ತೆ; ಅದೃಷ್ಟ
ತಿರುಗುತ್ತೆ
ಬಂದು ಹೋಗುವವರ ಬಳಿಯೆಲ್ಲ
ಹೇಳುತ್ತಾನೆ
ಹಚ್ಚಿದ್ದಾಗಿದ್ದ
ಎಲೆ ಎರಡು
ವರುಷಗಳುರುಳಿದ ಮೇಲೆ
ಮೊನ್ನೆ ಮೂರಾಗಿವೆ
ಅಪ್ಪ ಹಾಕಿದ ನೀರು ಗೊಬ್ಬರ
ರುಚ್ಚಸಲಿಲ್ಲವಿರಬೇಕು ; ಏಕೋ
ಬಾಡಿವೆ
ಬಿಡುವಾದಾಗಲೆಲ್ಲ
ಬುಡ ಕೊಚ್ಚಿ ಮಾಡಿ
ನೀರು ಸುರಿಯುತ್ತಾನೆ; ಬಳ್ಳಿಯನೊಮ್ಮೆ
ದಿಟ್ಟಿಸುತ್ತಾನೆ
ಬಳ್ಳಿ ಚಿಗುರಿ ಬೆಳೆಯುತ್ತಾ ಹೋದಂತೆ
ಆ ತುದಿಯ ಮುಟ್ಟಬಹುದು
ಮಾವಿನ ಮರದ
ತುತ್ತ ತುದಿಯವರೆಗೂ ದೃಷ್ಟಿ
ಹಾಯಿಸುತ್ತಾನೆ
ಗ್ರೀಷ್ಮ ವಸಂತ ಹೇಮಂತ
ಯುಗಾದಿ ಚೌತಿ ದೀಪಾವಳಿ
ಎಷ್ಟೋ ಬಾರಿ ಬಂದು ಹೇಗಿದ್ದಾವೆ
ಅಪ್ಪನ ಕಪ್ಪನೆ ತಲೆ ಮೇಸೆ ಬೆಳ್ಳಗಾಗುತ್ತಿದ್ದಾವೆ
ಆದರೂ ಮನಿಪ್ಲಾಂಟ್
ಮಾವಿನ ಬುಡ ಬಿಟ್ಟು ಎದ್ದೆಯಿಲ್ಲ
ಕುಟುಂಬ ಯೋಜನೆಯೋ ಏನೋ
ಮೂರಿದ್ದ ಎಲೆಗಳು ನಾಲ್ಕಗಲಿಲ್ಲ
ಮನಿಪ್ಲಾಂಟ್ ಚಿಗುರಿ
ಮಾವಿನ ಮರ ತಬ್ಬಿ ಹಬ್ಬಿ
ಅದೃಷ್ಟ ತಿರುಗುವ ಅಪ್ಪನ
ಕನಸಿನ ಬಣ್ಣ ಕೊಂಚವೂ ಮಾಸಿಲ್ಲ
ದೇವರ ಕೋಣೆಯ ಟ್ರಿಜೋರಿಯೊಳಗೊಂದು
ಜೇಡ ಸೇರಿ ಮರಿ ಹಾಕಿ
ಆ ಮರಿ ಮತ್ತು ಮರಿ ಹಾಕಿ ಬಲೆ
ನೇಯುತ್ತಲೇಯಿದೆ
ಯಾಕೋ ಗೊತ್ತಿಲ್ಲ
ಅಪ್ಪನ ಮನಿಪ್ಲಾಂಟ್ ನೋಡಿದಾಗಲೆಲ್ಲ
ಟ್ರೆಜರಿಯೊಳಗಣ ಜೇಡ ನೆನಪಾಗುತ್ತದೆ
- ಮೃತ್ಯುಂಜಯ ಎಂ ಸಾಲಿಮಠ