ಪ್ರಕಾಶ್ ರಾಜ್ ರ ದೈತ್ಯ ಪ್ರತಿಭೆಗೆ ಸಿಕ್ಕ ಜಯ “ರಂಗಮಾರ್ತಾಂಡ “

ಕನ್ನಡಿಗ ಪ್ರಕಾಶ್ ರೈ ಅಭಿನಯದ “ರಂಗ ಮಾರ್ತಾಂಡ” ಎಂಬ ಸುಂದರ ಚಿತ್ರವನ್ನು ನೋಡಿದ ಮೇಲೆ ಲೇಖಕ ಹಿರಿಯೂರು ಪ್ರಕಾಶ್ ಅವರು ಅದರ ಕುರಿತು ಬರೆದಿರುವ ಅನಿಸಿಕೆಯನ್ನು ತಪ್ಪದೆ ಮುಂದೆ ಓದಿ…

ನಮ್ಮ ಕಸ್ತೂರಿ ಕನ್ನಡ ಹೊರತಾಗಿ ಯಾವುದಾದರೂ ಭಾಷೆ ನನ್ನ ಮನಸಿಗೆ ಹತ್ತಿರವಾಗುತ್ತದೆಯೆಂದರೆ ಅದು ನಮ್ಮ ಸೋದರ ಭಾಷೆಯಾದ ತೆಲುಗು. ಹೀಗಾಗಿ ಆಗಾಗ್ಗೆ ತೆಲುಗು ಸಿನಿಮಾಗಳನ್ನು‌ ನೋಡುವ ಅಭ್ಯಾಸ ಮೊದಲಿನಿಂದಲೂ ಇದೆ. ಮೊನ್ನೆಯಷ್ಟೇ “ಸೀತಾರಾಮಂ” ಎಂಬ ಅದ್ಭುತ ಪ್ರೇಮ್ ಕಹಾನಿಯ ಸಿನಿಮಾ ನೋಡಿದ ಮೇಲೆ ಇಂದು‌ ಬಿಡುವಿನ ವೇಳೆಯಲ್ಲಿ ನಮ್ಮ‌ ಕನ್ನಡಿಗ ಪ್ರಕಾಶ್ ರೈ ( ಅನ್ಯ ಭಾಷೆಯಲ್ಲಿ ಪ್ರಕಾಶ್ ರಾಜ್) ಹಾಗೂ ಹಿರಿಯ ನಟ ಬ್ರಹ್ಮಾನಂದಂ ನಟಿಸಿರುವ “ರಂಗ ಮಾರ್ತಾಂಡ” ಎಂಬ ಸುಂದರ ಚಿತ್ರವನ್ನು ನೋಡಿ ಇನ್ನೂ ಅದರ ಗುಂಗಿನಿಂದ ಹೊರಬಂದಿಲ್ಲವಾಗಿ ಈ ವಿಮರ್ಶಾತ್ಮಕ ಕೊರೆತವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಎಂತಹಾ ಸುಂದರ ಚಿತ್ರವಿದು !

ಇಡೀ‌ ಚಿತ್ರದುದ್ದಕ್ಕೂ ಮಾಗಿದ ಕಲಾವಿದರಾದ ಪ್ರಕಾಶ್ ರಾಜ್, ಬ್ರಹ್ಮಾನಂದಂ ಹಾಗೂ ರಮ್ಯಕೃಷ್ಣ ರವರ ಜೀವಮಾನದ ಶ್ರೇಷ್ಠ ಅಭಿನಯವನ್ನು ಕಾಣಬಹುದಾಗಿದೆ. ಅವರಿಂದ ಇಂತಹಾ ಅಭಿನಯವನ್ನು ದುಡಿಸಿಕೊಂಡ ಶ್ರೇಷ್ಠ ನಿರ್ದೇಶಕ ಕೃಷ್ಣ ವಂಶಿಯವರಿಗೂ ಈ ಚಿತ್ರದ ಯಶಸ್ಸಿನ ಕ್ರೆಡಿಟ್ ಸಿಗಲೇ ಬೇಕು. ನಾನಾ ಪಾಟೆಕರ್ ನಟನೆಯ ಮರಾಠಿಯ ಯಶಸ್ವೀ “ನಟಸಾಮ್ರಾಟ್” ಚಿತ್ರದ ಎಳೆಯನ್ನು ಹಿಡಿದು ಅದನ್ನು ತೆಲುಗು ಸೊಗಡಿಗೆ ಪರಿವರ್ತಿಸಿ ತರುವಲ್ಲಿ ಸ್ಟಾರ್ ನಿರ್ದೇಶಕ ಕೃಷ್ಣ ವಂಶಿ ಉತ್ತಮವಾಗಿ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.

ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿ ರಂಗಮಾರ್ತಾಂಡ ಎಂಬ‌ ಬಿರುದನ್ನು ಪಡೆದು ಬಂಗಾರದ ಕಡಗವನ್ನು ತೊಡಿಸಿ ಸನ್ಮಾನಿಸಿದ ವೇಳೆಯಲ್ಲಿಯೇ ನಟನೆಗೆ‌ ನಿವೃತ್ತಿ ಘೋಷಿಸಿ ಮಿಕ್ಕ ಸಮಯವನ್ನು ಕುಟುಂಬದ ಜೊತೆ ಕಳೆಯಲು ನಿರ್ಧರಿಸಿದ ರಾಘವರಾವ್ ( ಪ್ರಕಾಶ್ ರಾಜ್ ) , ತನ್ನ‌ ಕೋಟ್ಯಾಂತರ ರೂಪಾಯಿಯ ಆಸ್ತಿಯನ್ನು , ತಾನು ಸಂಪಾದಿಸಿದ‌ ಹಣವನ್ನು ಇಬ್ಬರು ಮಕ್ಕಳಿಗೆ ಹಂಚಿ, ಕೊನೆಗೆ ಅವರಿಂದ ಹೆಜ್ಜೆ‌ಹೆಜ್ಜೆಗೂ ನೋವು ಅನುಭವಿಸುತ್ತಲೇ , ಕೊನೆಗೆ ತನ್ನ ಪ್ರಾಣ ಸ್ನೇಹಿತ ಚಕ್ರಿ ( ಬ್ರಹ್ಮಾನಂದಂ) ಯನ್ನೂ ಕಳೆದುಕೊಂಡು ಆನಂತರ ಇಬ್ಬರು ಮಕ್ಕಳ ಮನೆಯಿಂದಲೂ ಹೊರಗೆ ಬಂದು ತನ್ನ ಹೆಂಡತಿ ರಾಜು ( ರಮ್ಯ ಕೃಷ್ಣ) ಜೊತೆಗೆ ರಾತ್ರೋರಾತ್ರಿ ಹಳ್ಳಿಯೆಡೆಗೆ ಪಯಣಿಸುವ ಆತ್ಮಾಭಿಮಾನದ ಸ್ವಾಭಿಮಾನದ ಕಥೆಯಲ್ಲಿನ ಅಂತ್ಯ ನೀವೇ ನೋಡಿ ಅನುಭವಿಸಿ.

ತಂದೆಯ ತ್ಯಾಗ, ಮಕ್ಕಳ ಸ್ವಾರ್ಥ, ಗಂಡಹೆಂಡಿರ ಪ್ರೀತಿ, ಹಣದ ಹಿಂದೆ ಬೀಳುವ ವ್ಯಾಮೋಹ, ಭಾಷಾ ಪ್ರೇಮ, ಸಂಸ್ಕೃತಿ ಸಂಸ್ಕಾರಗಳ ಮನನ, ಪವಿತ್ರ ಸ್ನೇಹ, ರಂಗಕಲೆಯ ಅಭಿವ್ಯಕ್ತಿ….ಇತ್ಯಾದಿಗಳ ಎಮೋಷನಲ್ ಎಳೆಗಳು ನಿಮ್ಮನ್ನು ಎಡಬಿಡದೇ ಕಾಡುತ್ತವೆ. ಕೆಲವೊಮ್ಮೆ ಆ ಪಾತ್ರದೊಳಗಿನ ಒಬ್ಬರಾಗಿ ಅದರ ಫ಼ೀಲಿಂಗನ್ನು ನೀವು ಅನುಭವಿಸುತ್ತೀರ.

ಈ‌ ಎಲ್ಲದರ ನಡುವೆ ನಿಜ ಜೀವನಕ್ಕೂ ರಂಗಭೂಮಿಯ ಮೇಲಿನ ಪಾತ್ರಗಳಿಗೂ ಹೋಲಿಸಿ ಹೇಳಿಸಿರುವ ಅದ್ಭುತ ಸಂಭಾಷಣೆಗಳು, ಪಂಚಿಂಗ್ ಡೈಲಾಗುಗಳು, ತೆಲುಗು ಭಾಷೆ- ಮಾತೃ ಭಾಷೆಯ ಮಹತ್ವದ ಕುರಿತಾದ ಹಾಗೂ ನಮ್ಮ ಕಲೆ ಸಂಸ್ಕೃತಿಗಳ ಕುರಿತಾದ ಹೆಮ್ಮೆಯ ಡೈಲಾಗುಗಳೂ ಪ್ರಕಾಶ್ ರಾಜ್ ರಿಂದ ಹೈ ಲೈಟ್ ಆಗಿವೆ. ಅಷ್ಟೇ ಅಲ್ಲ ನಮ್ಮ ಅಣ್ಣಾವ್ರ‌” ಯಾರು ತಿಳಿಯರು ನಿನ್ನ‌ ಭುಜಬಲದ ಪರಾಕ್ರಮ” ದ ಕಂದವೂ ಒಂದು ದೃಶ್ಯದಲ್ಲಿ ಬಂದಿದೆ.

ಚಿತ್ರದುದ್ದಕ್ಕೂ ಭಾವನಾತ್ಮಕ ಸನ್ನಿವೇಶಗಳು ನಿಮ್ಮ ಕಣ್ಣಂಚನ್ನು ಒದ್ದೆ ಮಾಡುವಲ್ಲಿ ಯಶಸ್ವಿಯಾಗಿವೆ. ಅದರಲ್ಲೂ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಬ್ರಹ್ಮಾನಂದಂ ಹಾಗೂ ಅವರನ್ನು ಕಾಣಲು ಬಂದ ಸ್ನೇಹಿತ ಪ್ರಕಾಶ್ ರಾಜ್ ತಮ್ಮ ರಂಗಭೂಮಿಯ ಹಳೆಯ ದಿನಗಳ ದುರ್ಯೋಧನ ಹಾಗೂ ಕರ್ಣನ ಪಾತ್ರಗಳ ಡೈಲಾಗುಗಳನ್ನು ಆಂಗಿಕ‌ ಅಭಿನಯವನ್ನು ಜುಗಲ್ ಬಂದಿಯಂತೆ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರಂತೆ ಹೇಳುತ್ತಾ ಕಣ್ಣುಗಳಲ್ಲೇ ನವರಸವನ್ನೂ ಸೂಸುತ್ತಾ ಜೀವಮಾನದ ಶ್ರೇಷ್ಠ ಅಭಿನಯದ ಅಭಿವ್ಯಕ್ತಿಯ ಮೂಲಕ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುತ್ತಾರೆ.

ಶ್ರೇಷ್ಠ ನಾಟಕಕಾರ ಶೇಕ್ಸ್ ಪಿಯರ್ ನ ” ಈ ಜಗವೇ ಒಂದು ನಾಟಕ ರಂಗ , ನಾವೆಲ್ಲಾ ಪಾತ್ರಧಾರಿಗಳು ” ಹಾಗೂ ” To be or not to be” ಎನ್ನುವ ಸಾಲುಗಳ ಆಧಾರದಲ್ಲಿ ಕಟ್ಟಿ ಕೊಟ್ಟಿರುವ ತೆಲುಗಿನ ಹಾಗೂ ಆಂಗ್ಲಭಾಷೆಯ ಅನೇಕಾನೇಕ ಡೈಲಾಗುಗಳು ಸನ್ನಿವೇಶ ಪೂರಕವಾಗಿವೆ- ಹೃದಯಸ್ಪರ್ಶಿಯಾಗಿವೆ. ಹಿರಿಯ ಸಂಗೀತ ನಿರ್ದೇಶಕ ಇಳಯರಾಜಾರ ಮನಮುಟ್ಟುವ ಮ್ಯೂಸಿಕ್, ಸಿರಿವೆನ್ನೆಲ ಸೀತಾರಾಮಶಾಸ್ತ್ರಿಯವರ ಅದ್ಭುತ ಸಾಹಿತ್ಯ ಚಿತ್ರವನ್ನು ಶ್ರೀಮಂತ ವಾಗಿಸುವುದರ ಜೊತೆಗೆ ಅರ್ಥಪೂರ್ಣ ವಾಗಿಸಿದೆ.

ಒಂದೇ ಮಾತಿನಲ್ಲಿ‌ ಹೇಳುವುದಾದರೆ ಪ್ರಕಾಶ್ ರಾಜ್ ತಮ್ಮ ಚಿತ್ರ ಜೀವನದ ಅತ್ಯಂತ ಅದ್ಭುತವಾದ ಪಾತ್ರವೊಂದನ್ನು‌ ಇಲ್ಲಿ ಪೋಷಿಸಿದ್ದಾರೆ. ತಮ್ಮ ಅಭಿನಯ ಚಾತುರ್ಯವನ್ನೆಲ್ಲಾ ಧಾರೆ ಎರೆದಂತೆ, ತಮ್ಮೊಳಗಿನ ಕಲಾವಿದನ‌ ಇಷ್ಟು ವರ್ಷಗಳ ನಟನಾ ಹಸಿವನ್ನು ಇಂಗಿಸುವಂತೆ ಅತ್ಯಂತ ಉತ್ಕೃಷ್ಟ ಅಭಿನಯವನ್ನು ‌ರಂಗಮಾರ್ತಾಂಡ ರಾಘವರಾವ್ ಪಾತ್ರದಲ್ಲಿ ಎರಕ ಒಯ್ದಿದ್ದಾರೆ. ಬಹುಶಃ ಅವರ ಈ ಪಾತ್ರದಲ್ಲಿ ಚಿತ್ರದ ಆರಂಭದಿಂದ ಅಂತ್ಯದವರೆಗೂ ನವರಸಾಭಿನಯವನ್ನೂ ಆಸ್ವಾದಿಸಬಹುದು. ಈ ಚಿತ್ರಕ್ಕಾಗಿ ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬರುವುದು ಗ್ಯಾರಂಟಿ.

ಎಂತಹಾ ಅದ್ಭುತ ಕಲಾವಿದ ನಮ್ಮ ಪ್ರಕಾಶ್ ರಾಜ್. ಅನ್ಯ ಭಾಷೆಗಳಲ್ಲಿ ಕೇವಲ ಖಳನಾಯಕನ ಪಾತ್ರಗಳಲ್ಲೇ ವಿಜೃಂಭಿಸಿದ್ದರೂ ಅಲ್ಲಲ್ಲಿ ಈ ತರಹದ ಅಪರೂಪದ ಪಾತ್ರಗಳು ಅವರಲ್ಲಿನ ನೈಜ ಕಲಾವಿದನ ಪರಿಚಯ ಮಾಡಿಕೊಡುತ್ತವೆ. ಹಿ ಈಸ್ ಸಿಂಪ್ಲೀ ಗ್ರೇಟ್ !

ಪ್ರಕಾಶ್ ರಾಜ್‌ರವರಿಗೆ ಸರಿಸಾಟಿಯಾಗಿ ಸಿಕ್ಕ ಅವಕಾಶದಲ್ಲೇ ಮಿಂಚಿರುವುದು ಹಿರಿಯ ಹಾಸ್ಯನಟ ಬ್ರಹ್ಮಾನಂದಂ. ಇಲ್ಲಿ ಅವರಿಗೆ ಬೇರೆಯದೇ ಆದ ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಸ್ನೇಹಿತನ ರೋಲು. ಬ್ರಹ್ಮಾನಂದಂ ರವರ ಚಿತ್ರ ಜೀವನದ ಮೈಲುಗಲ್ಲಿನ ಪಾತ್ರವಿದು. ಅವರೊಳಗಿನ ಮಾಗಿದ ಕಲಾವಿದನ ಅಭಿನಯ ಔನ್ನತ್ಯದ ಅನಾವರಣಕ್ಕೆ ಸಿಕ್ಕ ಸುಂದರ ಅವಕಾಶವನ್ನು ಅವರು ಅದ್ಭುತವಾಗಿ ಉಪಯೋಗಿಸಿಕೊಂಡಿದ್ದಾರೆ .

ರಮ್ಯಕೃಷ್ಣರ ಬಗೆಗೆ ಹೇಳುವುದೇನಿದೆ ? ಎಂತಹಾ ಪಾತ್ರಕ್ಕೂ ಜೀವ ತುಂಬಬಲ್ಲ ಕಲಾವಿದೆ. ಪ್ರಕಾಶ್ ರಾಜ್ ರ ಪತ್ನಿ ರಾಜುಗಾರು ಆಗಿ ಪ್ರೌಢ ಅಭಿನಯ ನೀಡಿ ಪಾತ್ರದ ಘನತೆ ಹೆಚ್ಚಿಸಿದ್ದಾರೆ. ಎಂತಹಾ ಸಂಧರ್ಭದಲ್ಲೂ ಗಂಡನನ್ನು‌ ಬಿಟ್ಟುಕೊಡದ ಹೆಂಡತಿಯಾಗಿ ರಮ್ಯರವರದ್ದು ಭಾವನಾತ್ಮಕ ಅಭಿನಯ. ಇದರ ಜೊತೆಗೆ ಇನ್ನಿತರ ಸಹ ಕಲಾವಿದರ ಅಭಿನಯವೂ ಚಿತ್ರದ ಭಾವಸ್ಪರ್ಶಿ ಓಘಕ್ಕೆ ಪೂರಕವಾಗಿವೆ.

ನನ್ನ ಮನದಲ್ಲುಳಿದ ಪ್ರಕಾಶ್ ರಾಜ್ ರ ಕೆಲ ಡೈಲಾಗುಗಳು….

“ಈ ಸಣ್ಣ‌ಮಾತ್ರೆ ಮೇಲಿರುವ ನಂಬಿಕೆ ಮಕ್ಕಳ ಮೇಲಿಲ್ಲವಾ..?

“ನಮಗೆ ಅವಾರ್ಡ್ಸ್ ಗಿಂತ ಅಫ಼ೇರ್ಸ್ ಗಳೇ ಹೆಚ್ಚು !

” Life is a sad play to be lived happily
You play your part, I will play mine ”

“Man is infected by the decease called MONEY ”

* ಮರೆಯುವ ಮುನ್ನ *

ನಟನಾ ಹಸಿವಿರುವ ಯಾವೊಬ್ಬ ಕಲಾವಿದನಿಗೂ ಸವಾಲೆನಿಸುವ ಪಾತ್ರ “ರಂಗಮಾರ್ತಾಂಡ” ನಲ್ಲಿ ಪ್ರಕಾಶ್ ರಾಜ್‌ ರಿಗೆ‌ ದಕ್ಕಿದೆ. ಅದಷ್ಟೇ ಅಲ್ಲ, ಅದನ್ನವರು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ ಕೂಡ. ಚಿತ್ರದ ಆರಂಭದಲ್ಲಿ ತೆಲುಗು ಚಿತ್ರರಂಗದ ಲೆಜೆಂಡ್ ಗಳಾದ ಎನ್.ಟಿ. ರಾಮಾರಾವ್, ನಾಗೇಶ್ವರರಾವ್, ರಂಗಾರಾವ್, ಕಾಂತಾರಾವ್, ಕೃಷ್ಣ, ಕೃಷ್ಣಂರಾಜು, ಶೋಭನ್ ಬಾಬು, ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಬಾಲಕೃಷ್ಣ, ಸತ್ಯನಾರಾಯಣ, ಗುಮ್ಮಡಿ, ನಾಗಭೂಷಣಮ್, ರಾಜಬಾಬು, ಚಂದ್ರಮೋಹನ್, ಗೊಲ್ಲಪುಡಿ, ರಾಜಶೇಖರ್…..ಮುಂತಾದವರನ್ನು ಚಿತ್ರದ ಆರಂಭದಲ್ಲಿ ತೆರೆಯ ಮೇಲೆ ತೋರಿಸುತ್ತಲೇ ಮೆಗಾಸ್ಟಾರ್ ಚಿರಂಜೀವಿಯವರಿಂದ ವಾಯ್ಸ್ ಓವರ್ ಕೊಡಿಸಿ ” ನಾನೊಬ್ಬ ನಟ ” ಎಂದು ಹೇಳುತ್ತಾ ಸಾಗಿರುವ ಡೈಲಾಗುಗಳು ಕುತೂಹಲ ಕೆರಳಿಸುವ ಜೊತೆಗೆ ತೆಲುಗು ಸಿನಿಮಾರಂಗದ ಶ್ರೀಮಂತಿಕೆಗೆ ಕಾಣಿಕೆ‌ ನೀಡಿದ ದಿಗ್ಗಜರನ್ನು ಸ್ಮರಿಸುವ‌ ವಿನೂತನ‌ ಪ್ರಯೋಗವಾಗಿ ಗಮನ ಸೆಳೆಯುತ್ತದೆ.

ಬರೀ ಮಚ್ಚು ಲಾಂಗು, ಹೊಡಿ, ಬಡಿ , ಕಡಿ ಸಿನಿಮಾಗಳೇ ಹೆಚ್ಚಿಗೆ ಇರುವ ತೆಲುಗು ಚಿತ್ರಗಳಲ್ಲಿ ಆಗಾಗ್ಗೆ ಬರುವ ಇಂತಹಾ ಸಿನಿಮಾಗಳು ಅಲ್ಲಿನ ಕಲಾ ಶ್ರೀಮಂತಿಕೆಯನ್ನು ಹೆಚ್ಚಿಸುತ್ತವೆ. ಶಂಕರಾಭರಣಂ, ಸಿರಿಸಿರಿಮುವ್ವ, ಸಾಗರ ಸಂಗಮಂ, ಸ್ವಾತಿಮುತ್ಯಂ, ಸಿರಿವೆನ್ನೆಲ, ಗೀತಾಂಜಲಿ, ಸ್ವಯಂ ಕೃಷಿ, ಹಾಗೂ ಇತ್ತೀಚಿನ ” ಸೀತಮ್ಮ‌ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು” ಮುಂತಾದ ಕಮರ್ಷಿಯಲ್ ಆಗಿದ್ದೂ ಎಮೋಷನಲ್ ಆಗಿ ಗೆದ್ದ ಚಿತ್ರಗಳ ಸಾಲಿಗೆ ರಂಗಮಾರ್ತಾಂಡ ಸೇರುತ್ತದೆ. ಅಭಿನಯದ ದೃಷ್ಟಿಯಿಂದ ಹಿಂದಿನ ಎಲ್ಲಾ ಸಿನಿಮಾಗಳನ್ನೂ ಇದು ಹಿಂದಿಕ್ಕುತ್ತದೆ.

ಕೆಲವೊಂದು ಸನ್ನಿವೇಶಗಳಲ್ಲಿ ಎಡಿಟಿಂಗ್ ಸ್ವಲ್ಪ ಚುರುಕಾಗಿದ್ದಲ್ಲಿ, ಹಿನ್ನೆಲೆ ಸಂಗೀತ ಮತ್ತು ಹಾಡುಗಳಲ್ಲಿ ಭಾವನಾತ್ಮಕ ಟಚ್ ಇನ್ನೂ ಹೆಚ್ಚಿಗೆ ಕೊಟ್ಟಿದ್ದಲ್ಲಿ, ಕೆಲವೊಂದು ಕಚಗುಳಿಯಿಡುವ ನವಿರಾದ ಹಾಸ್ಯ ಅಲ್ಲಲ್ಲಿ ತುಂಬಿದ್ದಲ್ಲಿ ಈ‌ಚಿತ್ರ ಮತ್ತಷ್ಟು ಸೊಗಸಾಗಿರುತ್ತಿತ್ತು.

ಆದರೂ….ನಿಮಗೆ ಬಿಡುವು ಸಿಕ್ಕರೆ, ಒಬ್ಬ‌ ಸಿನಿಮಾ ನಟನ ಪರಿಪಕ್ವ ನಟನೆ ಹೇಗಿರಬೇಕೆಂಬ ಕುತೂಹಲ ನಿಮಗಿದ್ದರೆ, ಕನ್ನಡಿಗನ ಅಮೋಘ ನಟನೆಯ ರಸಾಸ್ವಾದ ಮಾಡುವ ಮನಸಿದ್ದರೆ, ಎಲ್ಲಕ್ಕಿಂತ ಮುಖ್ಯವಾಗಿ ಒಂದು ಒಳ್ಳೆಯ ಸಿನಿಮಾ ನೋಡುವ ಬಯಕೆಯಿದ್ದರೆ…. “ರಂಗಮಾರ್ತಾಂಡ” ಒಮ್ಮೆ‌ ಆಸ್ವಾದಿಸಿ.

ಒಂದೊಮ್ಮೆ ಈ‌ ಚಿತ್ರದ ಪಾತ್ರವಾದ ರಾಘವರಾವ್ ರಂತೆಯೇ ಪ್ರಕಾಶ್ ರಾಜ್‌ ಕೂಡ ಈ‌ ಸಿನಿಮಾ ದೊಂದಿಗೇ‌ ಚಿತ್ರರಂಗದಿಂದ ನಿವೃತ್ತರಾದರೂ ಅದು ಸಿನಿಪ್ರೇಕ್ಷಕರ ಮನಸಿನಲ್ಲಿ ಕೊನೆಯವರೆಗೂ ನೆನಪಿನಲ್ಲುಳಿಯು ವಂತಾಗುತ್ತದೆ. ಏಕೆಂದರೆ ಅವರದೇ ಒಂದು ಡೈಲಾಗನ್ನು ಉಲ್ಲೇಖಿಸುವುದಾದರೆ…

“ನಿಷ್ಕ್ರಮಣಮು‌ ಕೂಡಾ ಪಟ್ಟಾಭಿಷೇಕಲಗಾ ಉನ್ನಾಲಿ….”!

ಪ್ರೀತಿಯಿಂದ…..


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW