ಪ್ರತಿಭಾ ರೇ ಅವರ “ಯಾಜ್ಞಸೇನಿ” ಒಂದು ಅವಲೋಕನ

ವಿಶ್ವನಾಥ ಕಾರ್ನಾಡರು ಕನ್ನಡಿಸಿದ ಪ್ರತಿಭಾ ರೇ ಅವರ “ಯಾಜ್ಞಸೇನಿ” ಕುರಿತು ಲೇಖಕ ರಘುನಾಥ್ ಕೃಷ್ಣಮಾಚಾರ್ ಅವರ ಒಂದು ಅವಲೋಕನ, ತಪ್ಪದೆ ಮುಂದೆ ಓದಿ…

ಪುಸ್ತಕ : ಯಾಜ್ಞಸೇನಿ
ಮೂಲ : ಪ್ರತಿಭಾ ರೇ
ಅನುವಾದ :ವಿಶ್ವನಾಥ ಕಾರ್ನಾಡರು
ಪುಸ್ತಕ ಪರಿಚಯ : ರಘುನಾಥ್ ಕೃಷ್ಣಮಾಚಾರ್

ಪುಟ: ೩೭೦
ಬೆಲೆ: ರೂ.೨೦೦
ದೂರವಾಣಿ: 8108491647

ಪ್ರತಿಭಾ ರೇ ಉಡಿಯಾ (ಒರಿಯಾ) ಭಾಷೆಯ ಪ್ರಸಿದ್ಧ ಲೇಖಕಿ ಈಚೆಗೆ ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಸಂದಿದೆ. ಆ ಭಾಗ್ಯ ಇನ್ನೂ ಕನ್ನಡ ಲೇಖಕಿಯರಿಗೆ ದೊರೆತಿಲ್ಲ. ನಮ್ಮ ನಡುವಿನ ಹಿರಿಯ ಲೇಖಕರಲ್ಲಿ ಒಬ್ಬರಾದ ಡಾ ವಿಶ್ವನಾಥ್ ಕಾರ್ನಾಡರು ಅದನ್ನು ಕನ್ನಡಕ್ಕೆ ತಂದು, ಅದನ್ನು ಭಾವಾನುವಾದ ಎಂದು ಕರೆದಿದ್ದಾರೆ. ಆದ್ದರಿಂದ ಯಥಾವತ್ತಾದ ಅನುವಾದವಲ್ಲ ಎಂದು ತಾನಾಗಿಯೇ ವ್ಯಕ್ತವಾಗುತ್ತದೆ. ಮೂಲ ಕೃತಿಯ ಭಾವ ಎಷ್ಟರ ಮಟ್ಟಿಗೆ ಕನ್ನಡಕ್ಕೆ ಬಂದಿದೆ ಅಥವ ತರಲಾಗಿದೆ ಎನ್ನುವುದೇ ಅದರ ಯಶಸ್ಸಿನ ಅಳತೆಗೋಲು. ನಮ್ಮಲ್ಲಿ ಉಳಿದ ಭಾರತೀಯ ಭಾಷೆಗಳಾದ ಬಂಗಾಳಿ, ಮರಾಠಿ, ಹಿಂದಿ, ತಮಿಳು, ತೆಲಗು ಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಕೃತಿಗಳ ಸಂಖ್ಯೆಯನ್ನು ಗಮನಿಸಿದರೂ, ಉಡಿಯಾದ ಈ ಕೃತಿಯ ಭಾವಾನುವಾದ ಎಷ್ಟು ಅಪರೂಪದ್ದು ಎನ್ನುವುದು ಅರ್ಥವಾಗುತ್ತದೆ. ನಾನು ಉಡಿಯಾ ಭಾಷೆಯಲ್ಲಿಯೇ ಆಗಲೀ ಅಥವಾ ಇಂಗ್ಲಿಷ್ ಭಾಷಾಂತರವನ್ನಾಗಲೀ ಓದಿಲ್ಲ. ಆದ್ದರಿಂದ ಕಾರ್ನಾಡರ ಕೃತಿಯನ್ನಷ್ಟೇ ಈ ನನ್ನ ಬರಹ ಆಧರಿಸಿದೆ. ಅದು ಇದರ ಮಿತಿಯೂ ಹೌದು.

ದಿ. ಡಾ. ಮಣಿಮಾಲಿನಿ ತಮ್ಮ ಮಹಾಪ್ರಬಂಧ ‘ದ್ರೌಪದಿ ಸಮೀಕ್ಷೆ’ಯಲ್ಲಿ ಇದರ ಮೊದಲನೆಯ ಆವೃತ್ತಿಯನ್ನು ತಮ್ಮ ತೌಲನಿಕ ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಆದ್ದರಿಂದ ಇದು ಆ ಕೃತಿಯ ಎರಡನೇ ಆವೃತ್ತಿಯಾಗಿದೆ. ಎಷ್ಟೋ ಸ್ವತಂತ್ರ ಕೃತಿಗಳೇ ದ್ವಿತೀಯ ಆವೃತ್ತಿಯನ್ನು ಕಾಣದ ಈ ಸಂದರ್ಭದಲ್ಲಿ ಇದರ ಎರಡನೆಯ ಆವೃತ್ತಿ ಬಂದಿರುವುದು ಆಶ್ಚರ್ಯದ ಸಂಗತಿಯೇ ಸರಿ. ಇದು ಬಹುಶಃ ಕಾರ್ನಾಡರ ಭಾವಾನುವಾದದ ಯಶಸ್ಸನ್ನು ಆಧರಿಸಿದೆ ಎಂದರೆ ತಪ್ಪಾಗಲಾರದು.

ನಮಗೆ ಮಹಾಭಾರತದ ದ್ರೌಪದಿಯ ಪರಿಚಯವಿರುವಷ್ಟು ಯಾಜ್ಞಸೇನಿಯ ಪರಿಚಯವಿಲ್ಲ. ಭಾರತ ಬಹು ಭಾಷಿಕ ಸಂಸ್ಕೃತಿಗಳ ನಾಡು ಎಂಬುದಕ್ಕೆ ಇದೂ ಒಂದು ಆಧಾರ. ಆಯಾ ಭಾಷಾ ಸಂಸ್ಕೃತಿಯ ಗರ್ಭದಿಂದ ಮೂಡಿಬಂದಾಗ ತನ್ನದೇ ಆದ ಚಹರೆಯನ್ನು ಹೊಂದಿರುತ್ತದೆ ಎನ್ನುವುದಕ್ಕೆ ‘ಯಾಜ್ಞಸೇನಿ’ ಎನ್ನುವ ಶೀರ್ಷಿಕೆಯೇ ಒಂದು ನಿದರ್ಶನ.

ಈ ಯಾಜ್ಞಸೇನಿಯ ವೈಶಿಷ್ಟ್ಯವನ್ನು ಪರಿಚಯಿಸುವುದಕ್ಕಷ್ಟೇ ಈ ಬರಹ ಸೀಮಿತವಾಗಿದೆ. ಆದ್ದರಿಂದ ಈ ಕೃತಿಯ ವಿವರವಾದ ವಿಶ್ಲೇಷಣೆ ಇದರ ವ್ಯಾಪ್ತಿಗೆ ಹೊರತು. ದ್ರುಪದ ಮಾಡಿದ ಯಜ್ಞದಿಂದ ಮೂಡಿಬಂದ ಇವಳು ಯಾಜ್ಞಸೇನಿಯಾಗುತ್ತಾಳೆ. ಕೃಷ್ಣೆ ಎನ್ನುವ ಹೆಸರನ್ನು ಇಟ್ಟು ಕೃಷ್ಣನ ಹೆಸರಿನೊಂದಿಗೆ ಜೋಡಿಸುತ್ತಾರೆ. ಇದು ಅವರ ನಡುವಣ ದೇಹಾತೀತವಾದ ಸಂಬಂಧಕ್ಕೆ ನಾಂದಿಹಾಡುತ್ತದೆ.

ಅಗ್ನಿಕುಂಡದಿಂದ ಮೂಡಿಬಂದ ಅವಳ ವ್ಯಕ್ತಿತ್ವದ ವಿಕಾಸದಲ್ಲಿ ಮೂರು ಹಂತಗಳಿವೆ. ಮೊದಲನೆಯದರಲ್ಲಿ ಅವಳಿಗಿದ್ದ ಆದರ್ಶವೆಂದರೆ ಬೆಂಕಿಯಲ್ಲಿ ಹಾದು ಬಂದ ಜಾನಕಿಯದು. ಅವಳಂತೆ ತಾನಾಗಬೇಕೆಂಬುದೇ ಅವಳ ಗುರಿ. ಆದ್ದರಿಂದ ಅವಳಷ್ಟು ಸಹನೆಯನ್ನು ತನಗೆ ಕೊಡು ಎಂಬುದು ಅವಳ ಪ್ರಾರ್ಥನೆ.

ಎರಡನೆಯ ಹಂತದಲ್ಲಿ ಅವಳು ಅನಿವಾರ್ಯವಾಗಿ ಪಂಚಪಾಂಡವರ ಕೈಹಿಡಿದು ದುಶ್ಯಾಸನ ಮುಂತಾದವರಿಂದ ಪಟ್ಟ ಅವಮಾನದಿಂದ ಸೇಡು ತೀರಿಸಿಕೊಳ್ಳಲೆಳಿಸಿ ಅವಳು ‘ಜಾನಕಿಯಷ್ಟು ಸಹನೆ ತನಗಿಲ್ಲವೆಂದೂ, ಅವಶ್ಯವಾದರೆ ತಾನು ಪ್ರತಿ ಹಿಂಸೆಯನ್ನೂ ಮಾಡಬಲ್ಲೆ’ ಎಂದೂ ಘೋಷಿಸುತ್ತಾಳೆ, ಮತ್ತು ಅದರಂತೆ ನಡೆಯುತ್ತಾಳೆ.

ಮೂರನೆಯ ಹಂತದಲ್ಲಿ ಅವಳ ವ್ಯಕ್ತಿತ್ವದ ಮಾಗುವಿಕೆ ಪ್ರಾರಂಭವಾಗುತ್ತದೆ ಪಾಂಡವರ ಅರಣ್ಯವಾಸದ ಮುಖಾಂತರ. ಹಾಲು ಕುಡಿಯುವ ಎಳೆಯ ಕಂದನನ್ನು ಬಿಟ್ಟು ಹೋಗುವ ಅವಳ ಎದೆಯ ಹಾಲಿನ್ನೂ ಬತ್ತಿರುವುದಿಲ್ಲ. ಕಾಮ್ಯಕವನಕ್ಕೆ ಬಂದಾಗ ಅಲ್ಲಿ ತಾಯಿಯನ್ನು ಕಳೆದುಕೊಂಡ ಇಬ್ಬರು ಎಳೆಯ ನಿಶಾದ ಮಕ್ಕಳಿಗೆ ಹಾಲೂಡಿಸುವ ಅವಕಾಶವನ್ನು ಬಳಸಿಕೊಳ್ಳುತ್ತಾಳೆ. ಇದರಿಂದ ಅವಳ ತಾಯ್ತನದ ವಿಸ್ತಾರ ಸಾಧ್ಯವಾಗುತ್ತದೆ. ಕಿರಾತರು ಮತ್ತು ಪಾಂಡವರ ನಡುವಿನ ದ್ವೇಷದ ಉರಿಯನ್ನು ನಂದಿಸಿ, ಅವರ ನಡುವಿನ ಬೆಸುಗೆಗೆ ಇದು ನಾಂದಿ ಹಾಡುತ್ತದೆ. ಅಕ್ಷಯ ಪಾತ್ರೆಯಿಂದ ಮೊಗೆ ಮೊಗೆದು ಎಲ್ಲರಿಗೂ ಅವಳು ತನ್ನ ಅಮೃತದ ಧಾರೆಯನ್ನು ಹರಿಸುತ್ತಾಳೆ. ಅವರ ಬೆಸುಗೆಯನ್ನು ಸುಗಮಗೊಳಿಸಲು ಅವಳು ಬದರಿಕಾಶ್ರಮದಲ್ಲಿ ನೆಲೆನಿಂತಾಗ ಅಲ್ಲಿ ಬೀಸಿಬಂದ ಸ್ವರ್ಣಕಮಲದ ಸುಗಂಧಕ್ಕೆ ಮಾರುಹೋಗಿ, ಅದನ್ನು ಪಡೆಯಲು ಬಯಸಿದಾಗ ಭೀಮ ಅದನ್ನು ತರಲು ಹೋಗುತ್ತಾನೆ. ಆಗ ಅದನ್ನು ಕಾವಲು ಕಾಯುತ್ತಿದ್ದ ಕುಬೇರನ ಕಾವಲುಗಾರರಿಗೂ ಭೀಮನಿಗೂ ಘರ್ಷಣೆ ಆರಂಭವಾಗುತ್ತದೆ. ಅಲ್ಲಿಗೆ ಬಂದ ಕುಬೇರ ಅವಳು ಬಯಸಿದಷ್ಟು ಸ್ವರ್ಣಕಮಲಗಳನ್ನು ತಾನು ಉಡುಗೊರೆಯಾಗಿ ಅವಳಿಗೆ ಕೊಡಲು ಮುಂದೆ ಬರುತ್ತಾನೆ. ಅವಳು ನಿರಾಕರಿಸಿದಾಗ ಅವನು ತೆಗೆದುಕೊಳ್ಳಲೇ ಬೇಕೆಂದು ಒತ್ತಾಯಿಸುತ್ತಾನೆ. ಅವಳು ಆಗ ಅದನ್ನು ಆರ್ಯ ಮತ್ತು ಆರ್ಯೇತರರನ್ನು ಬೆಸೆಯಲು ಅರಣ್ಯದ ಮಧ್ಯೆ ಮಾರ್ಗಗಳನ್ನು ಮತ್ತು ವಿಶ್ರಾಂತಿ ಗೃಹಗಳನ್ನು ನಿರ್ಮಿಸಲು ಬಳಸುವುದಾಗಿ ಹೇಳಿದಾಗಾಗಲೇ ಆ ಕಾರ್ಯ ಪ್ರಾರಂಭವಾಗುತ್ತದೆ.
ಅವಳ ವ್ಯಕ್ತಿತ್ವ ವಿಕಸನದ ಈ ಮೂರನೇ ಹಂತದಲ್ಲಿ ಅವಳ ತಾಯ್ತನ ವಿಸ್ತಾರಗೊಂಡು ಎಲ್ಲರನ್ನೂ ತಬ್ಬಿಕೊಳ್ಳುವ ವಿಶಾಲ ವಕ್ಷವಾಗುತ್ತದೆ. ಇದರ ಅಂತಿಮ ಪರಿಣಾಮವೆಂದರೆ, ತನ್ನ ಮಕ್ಕಳನ್ನು ಕೊಂದ ಅಶ್ವತ್ಥಾಮನಿಗೂ ಅವಳು ಕ್ಷಮಾದಾನ ಮಾಡುವುದು ಇದರಿಂದಾಗಿ ಮೂಲಭಾರತದಲ್ಲಿ ಇಲ್ಲದ ಅವಳ ವ್ಯಕ್ತಿತ್ವದ ಈ ಆಯಾಮವನ್ನು ಗುರುತಿಸಿ ಅದನ್ನು ಪುನಾರಚಿಸಿದ ಶ್ರೇಯಸ್ಸು ಲೇಖಕಿಗೆ ಸಲ್ಲುತ್ತದೆ.

ಅವಳ ವ್ಯಕ್ತಿತ್ವದ ಸಮಕಾಲೀನತೆ ಪ್ರಕಟವಾಗುವುದು- ಕೊನೆಯಲ್ಲಿ ಅವಳು ಕೃಷ್ಣನಿಗೆ ಸಲ್ಲಿಸುವ ಐದು ಬೇಡಿಕೆಗಳ ಮೂಲಕ. ಮೊದಲನೆಯದೆಂದರೆ, ತನ್ನ ವ್ಯಕ್ತಿತ್ವವನ್ನೇ ಪಂಚಪಾಂಡವರಿಗೆ ಮೀಸಲಾಗಿರಿಸಿದ ಅವಳನ್ನು ತಿರುಗಿಯೂ ನೋಡದೇ  ಹೇಳಿದಾಗ ಅವಳ ವ್ಯಕ್ತಿತ್ವಕ್ಕಾದ ಆಘಾತ. ಅವಳು ಚೇತರಿಸಿಕೊಳ್ಳುವುದು ಸ್ವರ್ಗಕ್ಕೆ ತನ್ನನ್ನು ಬಿಟ್ಟುಹೋದ ಅವರನ್ನು ಮಾತ್ರವಲ್ಲ, ಆ ಸ್ವರ್ಗವನ್ನೇ ನಿರಾಕರಿಸುವುದರ ಮೂಲಕ. ಭರತಖಂಡದಲ್ಲೇ ತನ್ನ ಪುನರ್ಜನ್ಮವಾಗಬೇಕು ಎಂದು ಬಯಸುತ್ತಾಳೆ.

ಅವಳ ಎರಡನೆಯ ಬೇಡಿಕೆಯೆಂದರೆ, ಪಂಚಪತಿಯರನ್ನು ಹೊಂದುವ ದೌರ್ಭಾಗ್ಯ ಯಾವ ನಾರಿಗೂ ಬಾರದೇ ಇರಲಿ ಎಂಬುದು. ಮೂರನೆಯದೆಂದರೆ, ತನಗಾದ ಅಪಮಾನ ಯಾವ ನಾರಿಗೂ ಒದಗದಿರಲಿ ಎಂಬುದು. ನಾಲ್ಕನೆಯದು, ಕರ್ಣನಿಗೆ ಜಾತಿ ಆಧಾರದಿಂದ ಆದ ಅಪಮಾನವನ್ನು ಕಂಡು ನೊಂದ ಅವಳು, ವ್ಯಕ್ತಿಯ ಗುಣಕ್ಕೆ, ಕರ್ಮಕ್ಕೆ ಮಣೆ ಹಾಕಬೇಕೆಂಬುದು. ಕೊನೆಯ ಮತ್ತು ಅವಳ ಮಹತ್ವದ ಬೇಡಿಕೆಯೆಂದರೆ, ಜಗತ್ತಿನಲ್ಲಿ ಘರ್ಷಣೆ ನಿಂತು ಶಾಂತಿ ನೆಲೆಸಬೇಕೆಂಬುದು.

ಯಾಜ್ಞಸೇನಿಯ ಈ ಬೇಡಿಕೆಗಳು, ಅವಳು ವ್ಯಕ್ತಿತ್ವವನ್ನು ಇಂದಿಗೂ ನಮಗೆ ಸಮಕಾಲೀನವಾಗಿಸುತ್ತದೆ. ಈ ಕೃತಿ ಕನ್ನಡಕ್ಕೆ ಬಂದದ್ದು ಕನ್ನಡ ಸಾರಸ್ವತ ಲೋಕಕ್ಕೆ ಸಂದ ಒಂದು ಕಾಣಿಕೆಯೆಂದರೆ ತಪ್ಪಾಗಲಾರದು. ಅದಕ್ಕೆ ನಮ್ಮ ವಿಶ್ವನಾಥ ಕಾರ್ನಾಡರು ಮಾಧ್ಯಮವಾದ್ದರಿಂದ ಅವರು ಅಭಿನಂದನಾರ್ಹರು.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW