ಶ್ರೀಮತಿ ಗೀತಾ ನಾಗಭೂಷಣ ಅವರು ಕನ್ನಡ ಮಹಿಳಾ ಸಾಹಿತ್ಯದಲ್ಲಿ ಅಪರೂಪದ, ದಿಟ್ಟ ಹಾಗೂ ಮೇರು ವ್ಯಕ್ತಿತ್ವದ ವಿಶಿಷ್ಟ ಹೆಸರಿನ ಸಾಹಿತಿ ಎಂದೇ ಹೇಳಬಹುದು.
ಅವರ ಕಾದಂಬರಿ “ಮಾಪುರ ತಾಯಿಯ ಮಕ್ಕಳು ” ಸುಮಾರು ನಲವತ್ತು ವರ್ಷಗಳ ಹಿಂದೆ ಅಂದರೆ ಎಂಬತ್ತರ ದಶಕದಲ್ಲಿ ಪ್ರಕಟವಾದ ಈ ಕೃತಿ ಆ ಕಾಲಕ್ಕೆ ಕನ್ನಡ ಸಾಹಿತ್ಯ ಲೋಕದಲ್ಲಿ ಹಲ್ ಚಲ್ ಹುಟ್ಟಿಸಿತ್ತು. ಈ ಕೃತಿಯ ಕುರಿತು ಲೇಖಕಿ ಸರ್ವಮಂಗಳ ಜಯರಾಂ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕಾದಂಬರಿ : ಮಾಪುರ ತಾಯಿಯ ಮಕ್ಕಳು.
ರಚನೆ : ಗೀತಾ ನಾಗಭೂಷಣ.
ಬೆಲೆ : 30.00
ಪುಟಗಳು : 90
ಇದ್ದುದನ್ನು ಇದ್ದಂತೆಯೇ ನೇರವಾಗಿ ಬರೆಯುವ ಛಾತಿವಂತಿಕೆ ಗೀತಾ ಅವರ ಕೃತಿಗಳಲ್ಲಿ ಎದ್ದು ಕಾಣುತ್ತದೆ. ದಲಿತ, ಶೂದ್ರ ಜಗತ್ತಿನ ಅಮಾಯಕ, ಅನಕ್ಷರಸ್ಥ ಹೆಣ್ಣು ಮಕ್ಕಳ ಶೋಷಣೆ, ದೌರ್ಜನ್ಯ, ನೋವು, ಬಂಡಾಯಗಳೇ ಈಕೆಯ ಕಾದಂಬರಿಯ ತಿರುಳು.
ಉತ್ತರ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದ್ದ ಸಾಮಾಜಿಕ ಅನಿಷ್ಟ ಪದ್ಧತಿಗಳಲ್ಲಿ ಒಂದಾದ ದೇವದಾಸಿ ಪದ್ಧತಿ ( ಹರೆಯದ ಹೆಣ್ಣು ಮಕ್ಕಳನ್ನು ದೇವಿಯ ಸೇವೆಯ ಹೆಸರಿನಲ್ಲಿ ಜೋಗಿಣಿಯನ್ನಾಗಿ ಮಾಡುವುದು.) ಯ ನೆಪದಲ್ಲಿ ಅಮಾಯಕ ಹೆಣ್ಣು ಮಕ್ಕಳ ಅಸಹಾಯಕತೆ ಹಾಗೂ ಅದರಿಂದ ತಪ್ಪಿಸಿಕೊಳ್ಳಲು ಹೆಣಗಾಡುವ ಮುಗ್ಧ ಮನಗಳ ಕಥೆ ಇಲ್ಲಿ ಮನಮಿಡಿಯುವಂತೆ ಚಿತ್ರಿತವಾಗಿದೆ.
ಹೈದ್ರಾಬಾದ್ ಕರ್ನಾಟಕದ ಜವಾರಿ ಭಾಷೆಯಲ್ಲೇ ಲೇಖಕಿ ಅಂದಿನ ಕಾಲದ ಮೇಲ್ಜಾತಿಯ ಕುಲಕರ್ಣಿ, ಶಾನುಭೋಗ ,ಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರ ಮರ್ಜಿಗೂ, ಮುಲಾಜಿಗೂ ಮಣಿಯದೆ ತಮ್ಮತನವನ್ನು ಕಾಯ್ದುಕೊಂಡಿದ್ದಾರೆ.
ಈ ಕಾದಂಬರಿಯಲ್ಲಿ ಬರುವ ನಾಯಕಿ ಹೆಸರು ಸಿಂಗಾರಿ. ಕಲ್ಬುರ್ಗಿ ಜಿಲ್ಲೆಯ ಚಿಂಚನಸೂರು ಗ್ರಾಮದ ಹೊಲಗೇರಿಯ ಸ್ವಲ್ಪ ಗಟ್ಟಿ ಆಸಾಮಿ, ಹೊಲಗೇರಿಯಲ್ಲೇ ಸಾಹುಕಾರ ಚಂದಪ್ಪನ ಮಗಳು. ಸ್ವಂತ ತೋಟ, ಮನೆ ಉಳ್ಳ, ಇದ್ದುದರಲ್ಲೇ ಅನುಕೂಲಸ್ಥ ಹೊಲೆಯ ಚಂದಪ್ಪ. ಹೊಲಗೇರಿಯಲ್ಲಿ ಗುಡಿಸಲುಗಳದ್ದೇ ಸಾಮ್ರಾಜ್ಯ.ಚಂದಪ್ಪನದೊಂದೇ ಮೂರಂಕಣದ ಮನೆ.
ಕುಂತರೆ ಕರಗುತ್ತಾಳೆ, ನಿಂತರೆ ನಲುಗುತ್ತಾಳೆ, ನಡೆದರೆ ಸವೆಯುತ್ತಾಳೆ ಎಂಬಂತೆ ಬಹಳ ನಾಜೂಕಿನಿಂದ ಚಂದಪ್ಪ, ದುರ್ಗವ್ಪ ದಂಪತಿ ಸಿಂಗಾರಿಯನ್ನು ಸಾಕಿರುತ್ತಾರೆ. ಸಿಂಗಾರಿಯೂ ಅಷ್ಟೇ ನಾಜೂಕಾಗಿ ಸಕ್ಕರೆ ಬೊಂಬೆಯಂತಿದ್ದಳು. ಬಹಳ ಮುದ್ದಿನಿಂದ ಬೆಳೆದು ಬಂದು ಹರೆಯದ ಹೊಸ್ತಿಲಲ್ಲಿ ನಿಂತು ಹೊಂಗನಸು ಕಾಣುವ ಬೆಡಗಿಯಾಗಿದ್ದಳು. ಅವಳ ಚೆಲುವು, ಮಾದಕತೆಗೆ ಮಾರು ಹೋಗದವರೇ ಇಲ್ಲ. ಅವಳು ಬೀದಿಯಲ್ಲಿ ನಡೆದು ಹೋಗುತ್ತಿದ್ದರೆ ಊರಿನ ಯುವಕರು ಡವಗುಡುತ್ತಿದ್ದ ತಮ್ಮ ಎದೆಯನ್ನು ಒತ್ತಿ ಹಿಡಿದುಕೊಂಡು ನಿಲ್ಲುತ್ತಿದ್ದರು.
ಅವಳ ವೈಯಾರ, ಲಾವಣ್ಯಕ್ಕೆ ಹೃದಯಬಡಿತ ಕಳೆದುಕೊಳ್ಳದ ಹರೆಯದ ಗಂಡುಗಳೇ ಇರಲಿಲ್ಲ. ಆದರೆ ಸಿಂಗಾರಿ ಬೆಂಕಿಯ ಜ್ವಾಲೆ, ಸದ್ಗುಣಗಳ ಖನಿ, ಪಾವಿತ್ರ್ಯತೆ, ಮುಗ್ಧತೆಗಳ ಅನುಪಮ ಸಂಗಮವೇ ಸಿಂಗಾರಿ.ತಿದ್ದಿ ತೀಡಿದ ಬೊಂಬೆಯಂತಿದ್ದ ಸಿಂಗಾರಿಯ ಚೆಲುವಿಗೆ ಅವಳ ಸೋದರ ಮಾವ ಶಿವರುದ್ರ ಮನಸೋತಿದ್ದ. ಅಕ್ಕನ ಮಗಳೆಂಬ ಸಲುಗೆಯಿಂದ ಹೆಚ್ಚಾಗಿಯೇ ಗೋಳು ಹುಯ್ದುಕೊಳ್ಳುತ್ತಿದ್ದ. ಹುಸಿ ಕೋಪ, ಮುನಿಸು ತೋರುತ್ತಿದ್ದ ಸಿಂಗಾರಿ ಮೊದಮೊದಲು ಅವನೊಂದಿಗೆ ಮಾತು ಮಾತಿಗೂ ಜಗಳಕ್ಕಿಳಿಯುತ್ತಿದ್ದಳು. ಬರುಬರುತ್ತಾ ಹರೆಯದ ವಯೋಸಹಜ ಆಸೆಗೆ ದಾಸರಾದ ಸಿಂಗಾರಿ ಶಿವರುದ್ರ ಪರಸ್ಪರ ಆಕರ್ಷಿತರಾಗಿ ಪ್ರೇಮ ಪ್ರಪಾತದಲ್ಲಿ ಮುಳುಗಿ ಹೋಗುತ್ತಾರೆ. ಮುಂದೊಂದು ದಿನ ಗಂಡ ಹೆಂಡತಿಯಾಗುವವರು ಸಲುಗೆಯಿಂದ ಇರುವುದರಲ್ಲಿ ತಪ್ಪೇನಿಲ್ಲ ಎಂದು ಅವರ ಪೋಷಕರು ಇವರ ತಂಟೆಗೆ ಬರುತ್ತಿರಲಿಲ್ಲ.

ಸಿಂಗಾರಿ ಶಿವರುದ್ರರ ನಡುವೆ ಚಿಗುರಿದ ಪ್ರೇಮ ಬೆಳೆದು ಹೆಮ್ಮರವಾಗತೊಡಗಿತು. ಹೊಲದಲ್ಲಿ, ತೋಟದಲ್ಲಿ, ಬಾವಿ ಕಟ್ಟೆಯ ಬದಿಯ ಮರಗಳಡಿಯಲ್ಲಿ, ಕಬ್ಬಿನ ಗದ್ದೆಯ ನಡುವೆ ಅವರ ಜೋಡಿ ನಿರಾತಂಕವಾಗಿ ಮೆರೆಯಿತು. ಅಷ್ಟರಲ್ಲೇ ಆ ಊರಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಾಪುರ ತಾಯಿಯ ಜಾತ್ರೆಯ ಹವಾ ಶುರುವಾಯಿತು.
ಅಲ್ಪಸ್ವಲ್ಪ ವಿದ್ಯಾವಂತನಾದ, ಅನುಕೂಲಸ್ಥ ಹೊಲೆಯ ಚಂದಪ್ಪನದೇ ಜಾತ್ರೆಯ ಉಸ್ತುವಾರಿಕೆ. ಆ ಊರಿನ ಕುಲದೇವತೆಯಾದ ಮಾಪುರ ತಾಯಿಯ ಜಾತ್ರೆ ಸುತ್ತಮುತ್ತಲಿನ ಹನ್ನೆರಡು ಹಳ್ಳಿಗಳೇ ಅಲ್ಲದೆ ಪೂನ, ಬಾಂಬೆಗಳಲ್ಲೂ ಪ್ರಸಿದ್ಧ ವಾಗಿತ್ತು. ಸಾವಿರಾರು ಜನರು ನೈವೇದ್ಯ ಹೊತ್ತು ಸಂಬ್ರಮದಿಂದ ಸೇರುವ ಜಾತ್ರೆ ಅದಾಗಿತ್ತು.
ಗಂಧದ ಹುಟುಗಿ, ಬೇವಿನ ಹುಟುಗಿ ( ದೇವಿಯ ಸೇವೆ ಹೆಸರಲ್ಲಿ ಬೆತ್ತಲೆ ಸೇವೆ) ಹಾಗೂ ಹರೆಯದ ಹೆಣ್ಣು ಮಕ್ಕಳನ್ನು ಜೋಗಿಣಿ ಬಿಡುವುದು ಈ ಜಾತ್ರೆಯ ವೈಶಿಷ್ಟ್ಯ ವಾಗಿರುತ್ತದೆ. ತಲತಲಾಂತರಗಳಿಂದಲೂ ನಡೆದುಕೊಂಡು ಬಂದಂತಹ ಒಂದು ಸಾಮಾಜಿಕ ಅನಿಷ್ಟ ಪದ್ಧತಿ ಇದಾಗಿದ್ದು ಮಾಪುರ ತಾಯಿಯ ಸೇವೆಯ ಹೆಸರಿನಲ್ಲಿ ಒಂದು ವರ್ಷ, ಆರು ತಿಂಗಳ ಹಿಂದೆ ಮೈನೆರೆದ ಎಳೆ ನಿಂಬೆಯಂತಹ ಹೆಣ್ಣು ಮಕ್ಕಳನ್ನು ಮೇಲ್ಜಾತಿಯ ಗೌಡ, ಕುಲಕರ್ಣಿ ಯರು ಪಟ್ಟಕ್ಕೆ ಹಾಕಿಕೊಂಡು ತಮ್ಮ ಹಾಸಿಗೆಯನ್ನು ದಿನಕ್ಕೊಬ್ಭರಂತೆ ಬೆಚ್ಚಗೆ ಮಾಡಿಕೊಳ್ಳುವ ಅನಿಷ್ಟ ಪದ್ಧತಿ ಇದಾಗಿದ್ದು ಆ ಹೆಣ್ಣು ಮಕ್ಕಳ ಪೋಷಕರಿಗೆ ಇಂತಿಷ್ಟು ಹಣ, ಬಂಗಾರ ಕೊಟ್ಟು ಕೈ ತೊಳೆದುಕೊಳ್ಳತ್ತಿದ್ದರು.
ಊರಿನ ಪ್ರಮುಖ ಮುಖಂಡರೆನಿಸಿಕೊಂಡ ಗೌಡ, ಕುಲಕರ್ಣಿ ಯರು ಆ ಊರಿನಲ್ಲಿ ಹರೆಯಕ್ಕೆ ಬಂದ ಹೆಣ್ಣು ಮಕ್ಕಳ ಪಟ್ಟಿ ತರಿಸಿಕೊಂಡು ತಮಗೆ ಬೇಕಾದವರನ್ನು ಆರಿಸಿಕೊಂಡು ಇಂತಿಷ್ಟು ಬೆಲೆ ಎಂದು ಸೂಚಿಸಿ ಅವರ ಹೆತ್ತವರಿಗೆ ತಮ್ಮ ಚೇಲಾಗಳ ಮೂಲಕ ರಹಸ್ಯವಾಗಿ ಮುಟ್ಟಸುತ್ತಿದ್ದರು. ಮಾರುಕಟ್ಟೆಯಲ್ಲಿ ಹರಾಜಿಗಿಟ್ಟ ನಿರ್ಜೀವ ಸರಕುಗಳಂತೆ ಹೆಣ್ಣುಗಳ ಮಾರಾಟ ನಡೆಯುತ್ತಿತ್ತು. ಮಾತು ಬಂದರೂ ಮಾತನಾಡಲಾಗದೆ ಮೂಕ ಹಸುಗಳಂತೆ ಅಮಾಯಕ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದರು. ಈ ಅನಿಷ್ಟ ಪದ್ಧತಿ ಮೇಲ್ಜಾತಿಯ
ಹೆಣ್ಣು ಮಕ್ಕಳಿಗೆ ಅನ್ವಯಿಸುತ್ತಿರಲಿಲ್ಲ. ಇಂತಹ ಕೀಳು ಕೆಲಸಗಳಿಗೆಲ್ಲಾ ಹೊಲೆಯರ ಹೆಣ್ಣು ಮಕ್ಕಳೇ ಬೇಕಾಗಿತ್ತು ಅವರಿಗೆ.
ರಾತ್ರಿ ಹೊಲೆಯರ ಹೆಣ್ಣು ಮಕ್ಕಳ ಹಸಿ ಮಾಂಸಕ್ಕೆ ನಾಲಿಗೆ ಚಾಚುತ್ತಿದ್ದ ಗಂಡಸರು ಹಗಲು ಮಾತ್ರ ದೂರ ದೂರ. ಅಸ್ಪ್ರೃಶ್ಯತೆಯ ನೆಪವೊಡ್ಡಿ ಊರಿನಿಂದ ಹೊರಗೆ ಇಟ್ಟಿದ್ದ ಹೊಲೆಯರನ್ನು ಪಶುಗಳಂತೆ ಕಾಣುತ್ತಿದ್ದರು. ತಮ್ಮ ಮಕ್ಕಳ ವಾರಿಗೆಯ ಸಣ್ಣ ಪ್ರಾಯದ ಹೆಣ್ಣು ಮಕ್ಕಳನ್ನು ಪಟ್ಟಕ್ಕೆ ಹಾಕಿಕೊಂಡು ಸುಖ ಅನುಭವಿಸುವ ದೊಡ್ದ ಜಾತಿಯ ದೊಡ್ಡ ಗಂಡಸರಾದರೂ ಎಂತಹವರು….ಆ ಹರೆಯದ ಹೆಣ್ಣು ಮಕ್ಕಳ ತುಂಬಿದ ಎದೆಗಳಲ್ಲಿ ಹಾಲು ಒಸರುವಂತೆ ಮಾಡಲೂ ತಾಕತ್ತಿಲ್ಲದ ನಾಲಾಯಕ್ ಮುದಿ ಗೊಡ್ಡುಗಳು. ಆ ಕನ್ಯೆಯರ ಮೈ ಕಾವಿಗೇ ಸೋರಿ ಹೋಗಿ ಸುಸ್ತಾಗಿ ಬೀಳುವ ನಿರ್ವೀರ್ಯ ಮುದುಕರು ಎಂದು ವಿವರಿಸಿರುವ ಲೇಖಕಿ ಬಹಳ ನಿರ್ಭಿಡೆಯಿಂದ ಅಂದಿನ ವಾಸ್ತವ ಜೀವನವನ್ನು ನೈಜವಾಗಿ ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಗೀತಾ ಮೇಡಂ ಅವರದು ಜವಾರಿ ಶೈಲಿಯ ಗಂಡು ಭಾಷೆ. ಇಂತಹ ಭಾಷೆಯನ್ನು ಬಳಸಿದ ಆಕೆಯ ಎದೆಗಾರಿಕೆಯನ್ನು ಮೆಚ್ಚಲೇ ಬೇಕು.
ಇಂತಹ ದಿಟ್ಟ ನಿಲುವುಗಳಿಂದ ಸಮಾಜದ ಕಣ್ತೆರೆಸುವ ಪ್ರಯತ್ನ ಹಾಗೂ ಅನಿಷ್ಟ ಪದ್ಧತಿಯೊಂದರ ವಿರುದ್ಧ ಜಾಗೃತಿ ಮೂಡಿಸುವ ಮಹಾತ್ಕಾರ್ಯವನ್ನು ಮಾಡಿದ್ದಾರೆ. ನೇರ, ನಿಷ್ಠುರ ನುಡಿಗಳಿಂದ ಮೇಲ್ಜಾತಿ ಗಂಡಸರ ಮಾನ ಹರಾಜು ಹಾಕಿದ್ದಾರೆ. ಇದರಲ್ಲಿ ಉತ್ಪ್ರೇಕ್ಷೆ ಯೇನೂ ಇಲ್ಲ. ಇರುವುದನ್ನು ಇದ್ದಂತೆಯೇ ಹೇಳಿದ್ದಾರೆ. ಝೋಪಡಿ ಪಟ್ಟಿಯ ಜನರ ಜೀವನವನ್ನು ಬಹಳ ಹತ್ತಿರದಿಂದ ಕಂಡಿರುವ ಇವರು ತನ್ನದೇ ನೋವೆಂಬಂತೆ ಚಿತ್ರಿಸಿ ಅವರ ನೋವಿಗೆ ದನಿಯಾಗಿದ್ದಾರೆ.
ಹರೆಯಕ್ಕೆ ಬಂದ ಎಲ್ಲಾ ಹೆಣ್ಣು ಮಕ್ಕಳನ್ನು ಜೋಗಿಣಿ ಬಿಡುವುದು ಕಡ್ಡಾಯವಲ್ಲದಿದ್ದರೂ ಬಡತನ ,ಹಸಿವಿನಿಂದ ಕಂಗೆಟ್ಟಿದ್ದ ಹೊಲಗೇರಿಯ ಜನರು ತಮ್ಮ ಅಮಾಯಕ ಹೆಣ್ಣು ಮಕ್ಕಳನ್ನು ಪಶುಗಳಂತೆ ಮಾರಾಟ ಮಾಡುತ್ತಿದ್ದರು. ಬಂದಷ್ಟು ಬರಲಿ ಎಂದು ಸಿಕ್ಕಷ್ಟು ಬಾಚಿಕೊಳ್ಳುತ್ತಿದ್ದರು. ಅಲ್ಲದೆ ಮಾಪುರ ತಾಯಿಯ ಸೇವೆ ಮಾಡುವುದು ಬಹಳ ಪುಣ್ಯದ ಕೆಲಸ ,ಅದು ಎಲ್ಲರಿಗೂ ಸಿಗುವ ಅದೃಷ್ಟವಲ್ಲ ಎಂದೂ ಮೇಲ್ಜಾತಿಯವರು ಹೊಲಗೇರಿಯ ಅಸ್ಪೃಶ್ಯರನ್ನು ನಂಬಿಸಿ ದೇವಿಯ ಹೆಸರಿನ ಪ್ರಭಾ ವಲಯದಲ್ಲಿ ಬಂಧಿಸಿದ್ದರು. ಹರೆಯದ ಹೆಣ್ಣು ಮಕ್ಕಳಿಗೆ ಯಾವುದಾದರೂ ಸಣ್ಣ ಖಾಯಿಲೆ ಬಂದರೂ ಅದು ಮಾಪುರ ತಾಯಿಯ ಶಾಪ, ನೀವು ಆ ತಾಯಿಯ ಸೇವೆಗೆ ನಿಮ್ಮ ಮಗಳನ್ನು ಬಿಡಬೇಕು, ಇಲ್ಲವಾದರೆ ಹೊಲಗೇರಿಯನ್ನು ಸುಟ್ಟು ಭಸ್ಮ ಮಾಡುತ್ತಾಳೆ ಎಂಬಂತಹ ಮೂಢ ಸಂದೇಶಗಳನ್ನು ಮಾಪುರ ದೇವಿಯ ಪೂಜಾರಿಯ ಬಾಯಿಂದ ಗೌಡ, ಕುಲಕರ್ಣಿಯವರು ಹೇಳಿಸುತ್ತಿದ್ದರು. ಇದನ್ನೇ ವೇದ ವಾಕ್ಯ ಎಂದು ನಂಬಿದ್ದ ಹೊಲಗೇರಿಯ ಜನರು ಮೌಢ್ಯದ ಪಾತಾಳದಲ್ಲಿ ಸಿಲುಕಿದ್ದರು. ಪೂಜಾರಿಯ ಮಾತಿಗೆ ಯಾರೂ ಏನನ್ನೂ ಎದುರಾಡುತ್ತಿರಲಿಲ್ಲ. ಅವರು ಯಾರಾದರೂ ಸರಿ. ಇಂತಹುದೇ ಒಂದು ಕುಂಟು ನೆಪಕ್ಕೆ ಸಿಂಗಾರಿಯ ಜೀವನವು ಬಲಿಯಾಯಿತು.

ಜಾತ್ರೆಯ ಉಸ್ತುವಾರಿಕೆಯನ್ನು ವಹಿಸಿದ್ದ ಚಂದಪ್ಪ ಜೋಗಿಣಿ ಬಿಡುವ ಹೆಣ್ಣು ಮಕ್ಕಳ ಹೆತ್ತವರಿಗೆ ಸೂಚಿಸಬೇಕಾದ ನೀತಿ, ನಿಯಮ, ಹರಕೆಯ ಬಗ್ಗೆ ವಿವರಿಸುತ್ತಿದ್ದ. ದೇವಿಗೆ ಅರ್ಪಿಸುವ ಹಣ್ಣಾಗಲೀ, ಹೆಣ್ಣಾಗಲೀ ಪರಿಶುದ್ಧವಾಗಿರಬೇಕು ಎಂಬುದು ಚಂದಪ್ಪನ ಮೂಢ ನಂಬಿಕೆ. ಅದನ್ನೇ ಹೆತ್ತವರಿಗೆ ವಿವರಿಸುತ್ತಿದ್ದ. ಅಷ್ಟರಲ್ಲಿ ಚಂದಪ್ಪನ ಆಳು ಮಗನೊಬ್ಬ ಓಡಿ ಬಂದು ” ಯಪ್ಪಾ… ಸಿಂಗಾರೆವ್ವ ಗಾ ದೆವ್ವ ಹಿಡದದ್ರೀ… ಹ್ಯಾಂಗ್ಯಾಂಗೋ ಮಾಡ್ಲಕತ್ತಾಳ್ರಿ ಎಂದು ಒಂದೇ ಉಸಿರಿನಲ್ಲಿ ಉಸುರುತ್ತಾನೆ.
ಅಷ್ಟರಲ್ಲಿ ಚಂದಪ್ಪನ ಮನೆ ಮುಂದೆ ಜಾತ್ರೆಯಲ್ಲಿ ಜನ ಸೇರುವಂತೆ ನೆರೆದಿದ್ದಾರೆ. ಪೂಜಾರಿಗೆ ಯಾರೋ ಸುದ್ದಿ ಮುಟ್ಟಿಸಿರುತ್ತಾರೆ. ಅಷ್ಟರಲ್ಲಾಗಲೇ ಮಾಪುರ ತಾಯಿಯು ಪೂಜಾರಿಯ ಮೈಮೇಲೆ ಆವರಿಸಿ ಬಿಟ್ಟಿರುತ್ತಾಳೆ. ದುರ್ಗವ್ವ ತನ್ನ ಮಗಳಿಗಾದ ಗತಿಯನ್ನು ನೋಡಿ ಎದೆ ಬಿರಿಯುವಂತೆ ರೋಧಿಸುತ್ತಿದ್ದಾಳೆ. ಸಿಂಗಾರಿ ಅರೆ ಎಚ್ಚರದ ಸ್ಥಿತಿಯಲ್ಲಿ ನರಳುತ್ತಿದ್ದಾಳೆ.ಅಲ್ಲಿ ನೆರೆದಿದ್ದವರಲ್ಲಿ ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕೆಲವರು ಸೂಚಿಸಿದರೆ, ಇನ್ನೂ ಕೆಲವರು ಇದೆಲ್ಲಾ ಮಾಪುರ ತಾಯಿಯ ಶಾಪವೆಂದೂ, ಅಷ್ಟರಲ್ಲಿ ಅಲ್ಲಿಗೆ ಬಂದ ಪೂಜಾರಿಯು ಸಿಂಗಾರಿಯನ್ನು ದೇವಿಯ ಸೇವೆಗೆ ಬಿಡಬೇಕೆಂದು, ಚಂದಪ್ಪನಿಗೆ ನೀನು ಹರಕೆ ಮರೆತಿದ್ದೀಯ ಎಂದೂ ಎಚ್ಚರಿಸಿ ಏನೇನೋ ಹೇಳಿ ಆಜ್ಞಾಪಿಸಿ ಹೊರಟುಹೋಗುತ್ತಾನೆ. ಚಂದಪ್ಪ, ದುರ್ಗವ್ವ ದಿಕ್ಕೇ ತೋಚದಂತಾಗಿ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ. ವಿಷಯ ತಿಳಿದ ಶಿವರುದ್ರ ಹೌಹಾರುತ್ತಾನೆ. ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಒದ್ದಾಡುತ್ತಾನೆ. ತಕ್ಷಣವೇ ಸಿಂಗಾರಿಯ ಮನೆಗೆ ಬಂದು ಸಿಂಗಾರಿಯನ್ನು ತಬ್ಬಿ ಹಿಡಿದು ನಾನು ಜೀವಂತವಾಗಿ ಇರುವವರೆಗೂ ನಿನ್ನನ್ನು ಜೋಗಿಣಿಯನ್ನಾಗಿಸಲು ಬಿಡುವುದಿಲ್ಲ ಎಂಬ ಆಶ್ವಾಸನೆ ನೀಡುತ್ತಾನೆ. ಚಂದಪ್ಪ ದುರ್ಗವ್ವ ತೀರಾ ಇಕ್ಕಟ್ಟಿನ ಪರಿಸ್ಥಿತಿ ಯಲ್ಲಿ ಸಿಲುಕುತ್ತಾರೆ. ಮಗಳ ಬಾಳು ಜೋಗಿಣಿಯ ರೂಪದಲ್ಲಿ ಹಾಳಾಗುವುದನ್ನು ತಪ್ಪಿಸಲೂ ಆಗದೆ, ನೋಡಲೂ ಆಗದೆ ಮಮ್ಮಲ ಮರುಗುತ್ತಾರೆ. ತಲೆತಲಾಂತರದಿಂದ ನಡೆದು ಬಂದಂತಹ ನಿಯಮಗಳನ್ನು ಗಾಳಿಗೆ ತೂರಲು ಆ ದಂಪತಿಗಳಿಗೆ ಧೈರ್ಯ ಇರಲಿಲ್ಲ. ಮೇಲ್ಜಾತಿಯವರನ್ನು ಹಾಗೂ ಪೂಜಾರಿಯನ್ನು ಎದುರು ಹಾಕಿಕೊಳ್ಳುವಂತಿರಲಿಲ್ಲ. ಹಾಗಾಗಿ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ಸುಮ್ಮನಾಗಿದ್ದರು. ಆದರೆ ಶಿವರುದ್ರ ಮಾತ್ರ ಇಂತಹ ಹೀನ ಕೃತ್ಯವನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದ. ನಮ್ಮ ಹೆಣ್ಣು ಮಕ್ಕಳನ್ನೇ ಏಕೆ ಜೋಗಿಣಿ ಬಿಡಬೇಕು. ಮೇಲ್ಜಾತಿ ಹೆಣ್ಣು ಮಕ್ಕಳನ್ನೂ ಬಿಡಲಿ…. ದೇವಿ ಸೇವೆಗೆ. ನಮ್ಮ ಹೆಣ್ಣು ಮಕ್ಕಳನ್ನು ಅವರು ಅನುಭವಿಸುವುದಾದರೆ ಅವರ ಹೆಣ್ಣು ಮಕ್ಕಳನ್ನು ನಾವೂ ಅನುಭವಿಸಬೇಕು. ನಮಗೂ ಆ ಹಕ್ಕಿದೆ. ಇಂತಹ ಕಾನೂನು ಮಾಡಿದಾಗ ಮಾತ್ರ ಇವರು ಇಂತಹ ನೀಚ ಕೃತ್ಯ ( ಆಚರಣೆ) ನಿಲ್ಲಿಸುತ್ತಾರೆ ಎಂದು ಹೊಲಗೇರಿಯ ಜನರಲ್ಲಿ ಜಾಗೃತಿ ಉಂಟುಮಾಡಲು ಪ್ರಯತ್ನಿಸುತ್ತಿದ್ದ.
ಹಾಗೂ ಹೀಗೂ ಜಾತ್ರೆಯ ದಿನ ಸಮೀಪಿಸಿಯೇ ಬಿಟ್ಟಿತು. ಪೂಜಾರಿಯೊಂದಿಗೆ ಮಾಪುರ ತಾಯಿಯ ಭಕ್ತರು ಉಧೋ ಉಧೋ ಎಂದು ಘೋಷಣೆ ಕೂಗುತ್ತ ಡೊಳ್ಳು ,ತಮಟೆ ಬಾರಿಸುತ್ತ ಜೋಗಿಣಿ ಬಿಡುವ ಹೆಣ್ಣು ಮಕ್ಕಳ ಮನೆ ಮುಂದೆ ಹೋಗಿ ಅವರನ್ನು ದೇವಸ್ಥಾನದ ಬಳಿ ಕರೆದೊಯ್ಯುತ್ತಿದ್ದ. ಹಾಗೆಯೇ ಸಿಂಗಾರಿಯ ಮನೆಯ ಸಮೀಪ ಬರುವಷ್ಟರಲ್ಲಿ ಶಿವರುದ್ರ ಪ್ರತ್ಯಕ್ಷ ವಾಗಿ ಪ್ರತಿರೋಧ ತೋರಿದ. ಬೇಲಿಯಲ್ಲಿ ಅಡಗಿದ್ದ ಕುಲಕರ್ಣಿಯ ಚೇಲಾಗಳು ಹಿಂದಿನಿಂದ ಬಂದು ಶಿವರುದ್ರನ ಮೇಲೆ ಆಕ್ರಮಣ ಮಾಡಿ ಕೊಡಲಿಯಿಂದ ಬಲವಾಗಿ ಬೀಸಿದ ಹೊಡೆತಕ್ಕೆ ಶಿವರುದ್ರನ ರುಂಡ ಉರುಳಿ ಬೀಳುತ್ತದೆ. ನೋಡು ನೋಡುತ್ತಿದ್ದಂತೆ ಶಿವರುದ್ರನ ಹತ್ಯೆ ನಡೆದೇ ಹೋಗುತ್ತದೆ. ಇತ್ತ ಕಡೆ ಸಿಂಗಾರಿಯ ಮನೆಯ ಮುಂದೆ ಡೊಳ್ಳು, ಹಲಗೆ, ಬಾಜಿಗಳು ಜೋರಾದ ದನಿಯಲ್ಲಿ ಅಬ್ಬರಿಸುತ್ತವೆ. ಆ ಜೋರು ದನಿಗೆ ಅಲ್ಲಿ ನೆರೆದಿದ್ದ ಭಕ್ತರೆಲ್ಲರೂ ಮೂಕವಿಸ್ಮಿತರಾಗಿ ನೋಡುತ್ತಿದ್ದಾರೆ. ಶಿವರುದ್ರನ ಶವವನ್ನು ಯಾರೂ ಗಮನಿಸುತ್ತಿಲ್ಲ.
ಇದ್ದಕ್ಕಿದ್ದಂತೆ ನಡೆದು ಹೋದ ಘಟನೆಗೆ ಸಿಂಗಾರಿ ತಲೆ ಸುತ್ತಿ ಬಂದಂತಾಗಿ ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಆಕೆಯನ್ನು ಯಾರೋ ಒಬ್ಬರು ಎತ್ತಿಕೊಂಡು ಒಳಗೆ ಹೋಗಿ ಮುಖಕ್ಕೆ ನೀರು ಚಿಮುಕಿಸಿ ಎಚ್ಚರಗೊಳಿಸಿ ಸಿದ್ಧಗೊಳಿಸುತ್ತಾರೆ.ಏನೇ ಆದರೂ ಜಾತ್ರೆ ನಿಲ್ಲುವಂತಿಲ್ಲ. ಇದು ಪೂಜಾರಿ ರೂಪದ ದೇವಿಯ ಆಜ್ಞೆ. ಯಾವ ಬದಲಾವಣೆಯೂ ಇಲ್ಲದೆ ಜೋಗಿಣಿ ಬಿಡುವ ಹೆಣ್ಣು ಮಕ್ಕಳನ್ನೆಲ್ಲಾ ಒಂದೆಡೆ ಕುಳ್ಳಿರಿಸಿ ಕೊರಳಿಗೆ ಕವಡೆ ಸರ ಬಗಲಿಗೆ ಚೌಡಕಿ ನೀಡಿ ಶಾಸ್ತ್ರ ಮುಗಿಸುತ್ತಾರೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಸಿಂಗಾರಿಗೆ ಇದೆಲ್ಲಾ ಕನಸಿನಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತದೆ. ಆದರೂ ಅದು ನಂಬಲಾಗದ ನಿಜವಾಗಿರುತ್ತದೆ.
ಅಂದಿನಿಂದ ಸಿಂಗಾರಿ ಶಾಸ್ತ್ರೋಕ್ತವಾಗಿ ಜೋಗಿಣಿಯಾಗುತ್ತಾಳೆ. ಮೊದಲ ರಾತ್ರಿ ಕುಲಕರ್ಣಿ ನಂತರ ಶೆಟ್ಟಿ, ಸಾಹುಕಾರ, ಗೌಡ, ಪಟೇಲ ತದನಂತರ ಅವನ ಸಂಬಂಧಿಕರು…. ಹೀಗೆ ಸಿಂಗಾರಿಗೆ ಪ್ರತಿ ರಾತ್ರಿಯೂ ಹಾಸಿಗೆಗಳು ಬದಲಾಗುತ್ತಾ ಹೋಗುತ್ತವೆ. ಅಷ್ಟರಲ್ಲಿ ಸಿಂಗಾರಿಯು ಈ ನರಕದಿಂದ ತಪ್ಪಿಸಿಕೊಂಡು ಹೊರ ಜಗತ್ತಿಗೆ ಕಾಲಿಡುವ ಪ್ರಯತ್ನದಲ್ಲಿದ್ದಾಗ ಯಾರೋ ದಲ್ಲಾಳಿ ( ಬ್ರೋಕರ್ ) ಈಕೆಗೆ ಬಾಂಬೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ನಂಬಿಸಿ ಕರೆದುಕೊಂಡು ಹೋಗಿ ಬಾಂಬೆಯ ಕಾಮಾಟಿಪುರದ ಮಂಜರಾ ಕೋಠಿಗೆ ರವಾನಿಸುತ್ತಾನೆ. ಮಂಜರಾ ಕೋಠಿಯ ಒಡತಿ ಬಾಯೀಜಿಯಿಂದ ನೋಟಿನ ಕಂತೆಯನ್ನು ಪಡೆದು ಜೇಬಿಗಿಳಿಸುತ್ತಾ ಇವರು ನಿನಗೆ ಕೆಲಸ ಕೊಡುತ್ತಾರೆ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಸಿಂಗಾರಿಯ ಬದುಕು ಈಗ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗುತ್ತದೆ.ಹೀಗೆ ಬದುಕು ಅವಳನ್ನು ಬೊಂಬಾಯಿಗೆ ತಂದು ಬಿಸಾಡಿತ್ತು. ಬದುಕಿನ ಮೇಲೆಯೇ ಸೇಡು ತೀರಿಸಿಕೊಳ್ಳಲು ಸಿಂಗಾರಿ ಸಿದ್ಧವಾಗಿದ್ದಳು.
- ಸರ್ವಮಂಗಳ ಜಯರಾಂ – ಗೌರಿಬಿದನೂರು.
