ಯಾರದೋ ಪುಟ್ಟ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಸಹಿಸಲಾಗದು ದೇವನೇ ವಿಧಿಯ ಘೋರ ಪರೀಕ್ಷೆ… ಕವಿ ನಾಗರಾಜ ಜಿ. ಎನ್. ಬಾಡ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ಧಗ ಧಗನೆ ಹೊತ್ತುರಿಯಿತು ಎಸಿ ಬಸ್ಸು
ಸಜೀವ ದಹನವಾಯಿತು ಮುಗ್ಧ ಜೀವಗಳು
ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾದ ಮನಸುಗಳು
ನನಸಾಗುವ ಮುನ್ನವೇ ಬೂದಿಯಾದ ಕನಸುಗಳು
ಯಾರದೋ ಪುಟ್ಟ ತಪ್ಪಿಗೆ ಇನ್ಯಾರಿಗೋ ಶಿಕ್ಷೆ
ಸಹಿಸಲಾಗದು ದೇವನೇ ವಿಧಿಯ ಘೋರ ಪರೀಕ್ಷೆ
ಹುಸಿಯಾಯಿತು ಅದೆಷ್ಟೋ ಜನರು ಮನದ ನಿರೀಕ್ಷೆ
ಫಲಿಸದಾಯಿತು ಅದೆಷ್ಟೋ ಮೌನದ ಪ್ರಾರ್ಥನೆ
ಆಹುತಿ ತೆಗೆದುಕೊಂಡಿತು ಬೆಂಕಿಯ ಕೆನ್ನಾಲಿಗೆ
ಕಣ್ಣೀರೆ ಗತಿಯಾಯ್ತು ಕುಟುಂಬದವರ ಪಾಲಿಗೆ
ಚಾಲಕನ ನಿರ್ಲಕ್ಷವೇ ಕಾರಣ ಅದೆಷ್ಟೋ ಸಾವಿಗೆ
ತಿಳಿದೋ ತಿಳಿಯದೆಯೋ ತಳ್ಳಿದ ಘೋರಿಗೆ
ಐಷಾರಾಮಿ ಬಸ್ಸು ಬಾರಿಸಿತು ಮರಣ ಮೃದಂಗ
ಯಾರಿಗೂ ಬೇಡವೇ ಬೇಡ ಈ ಯಮನ ಸಂಗ
ಹೊತ್ತ ನೂರೆಂಟು ಕನಸುಗಳಿಗೆ ತಂದಿತು ಭಂಗ
ಇದ್ದೂ ಇಲ್ಲದಂತಾಯ್ತು ಅದೆಷ್ಟೋ ಜನರ ಅಂಗ
ತರವಲ್ಲ ಪರಶಿವನೆ ಈ ರೀತಿಯ ಸಾವು ನೋವು
ನರಳಿ ನರಳಿ ಬದುಕುವಂತಾಯ್ತು ದಿನದಿನವು
ಕೇಳಿಸಿಕೊಳ್ಳಲು ಆಗದು ಸಂಬಂಧಿಕರ ಚೀರಾಟ
ಹೇಗೆ ಸಹಿಸುವುದು ಮನಸಿನೊಳಗಿನ ನರಳಾಟ
- ನಾಗರಾಜ ಜಿ. ಎನ್. ಬಾಡ, ಕುಮಟ
