ಹಿಂಸಾತ್ಮಕ ಚಿತ್ರಗಳನ್ನು ಪ್ರೋತ್ಸಾಹಿಸುತ್ತಿದ್ದೀರಿ ಎಂದು ನೀವು ಹೇಳಬಹುದು. ನಾನು ಏನೇ ಹೇಳಿದರೂ ಇಂತಹ ಸಿನಿಮಾಗಳು ಬರುವುದು ನಿಲ್ಲುವುದಿಲ್ಲ ಜನ ಅವುಗಳನ್ನು ನೋಡುವುದು ಬಿಡುವುದಿಲ್ಲ. ‘ಮಾರ್ಕೋ’ ಸಿನಿಮಾ ಕುರಿತು ಲೇಖಕ ಜಗದೀಶ ನಡನಳ್ಳಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮಾರ್ಕೋ ಸಿನಿಮಾದ ಬಗ್ಗೆ ಈಗಾಗಲೇ ಹಲವಾರು ಕನ್ನಡಿಗ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ವಿಮರ್ಶೆಗಳನ್ನ ಬರೆದಿದ್ದಾರೆ. ನನಗೆ ಆಶ್ಚರ್ಯವಾಗಿದ್ದೇನೆಂದರೆ ಆ ಸಿನಿಮಾ ಮಾಡಿದವರು ಈ ಸಿನಿಮಾವನ್ನ ಮೊದಲಿಂದ ಭಾರತದಲ್ಲಿ ಮಾಡಿದ ಅತಿ ಹಿಂಸಾತ್ಮಕ ಚಿತ್ರವೆಂದೆ ಪ್ರಸ್ತುತ ಪಡಿಸುತ್ತ ಬಂದಿದ್ದಾರೆ. ಅಷ್ಟಾಗೂ ಅದನ್ನ ನೋಡಿ ಅದೊಂದು ಕೆಟ್ಟ, ದರಿದ್ರ, ಅಸಹ್ಯ ಚಿತ್ರವೆಂದು ವಿಮರ್ಶಿಸಿರುವುದು. ಅಲ್ಲ ಅದೊಂದು ಹಿಂಸಾತ್ಮಕ ಚಿತ್ರವೆಂಬ ಹಣೆ ಪಟ್ಟಿಯೇ ತಾನೆ ನಿಮ್ಮಲ್ಲಿ ನೋಡಲು ಕುತೂಹಲ ಹುಟ್ಟಿಸಿದ್ದು? ಹಾಗಾಗಿಯೇ ತಾನೆ ನೀವು ಅದನ್ನ ನೋಡಿದ್ದು? ನೋಡಿದ ಮೇಲೆ ಅದರ ಬಗ್ಗೆ ಸಿನಿಮಾದಲ್ಲಿ ಇರುವುದಕ್ಕಿಂತ ಹೆಚ್ಚಿನ graphic detail ನಲ್ಲಿ ಅದರ ಬಗ್ಗೆ ವಿವರಣೆ ಕೊಟ್ಟು ಮತ್ತೆ ಬೇರೆಯವರನ್ನು ನೋಡುವಂತೆ ಕೆರಳಿಸಿದ್ದು?
ಒಂದು ಮಾತು ತಿಳಿದುಕೊಳ್ಳಿ… ನಿಮಗೆ ಕೆಟ್ಟದ್ದು ಅನಿಸಿದ್ದಕ್ಕೆ ಯಾವತ್ತೂ ಪ್ರಚಾರ ಕೊಡುವುದಕ್ಕೆ ಹೋಗಬೇಡಿ. ಕೆಟ್ಟ ವಿಷಯಗಳಿಗೆ ಪ್ರಚಾರವೇ ಆಹಾರ, ಅಂತಹ ಆಹಾರ ಹೆಚ್ಚಿಗೆ ಕೊಟ್ಟಷ್ಟು ಅದು ಬೆಳೆಯುತ್ತ ಹೋಗುತ್ತದೆ ಹೊರತು ಕುಗ್ಗುವುದಿಲ್ಲ.
ನಾನು ಸಿನಿಮಾ ನೋಡಿದೆ. ನನಗೆ ಮುಂಚೆಯೇ ಇದಕ್ಕಿಂತ ಅಪ್ಪನ ಹಾಗೆ ಇರುವ ಹಿಂಸಾತ್ಮಕ ಚಿತ್ರಗಳನ್ನು ನೋಡಿ ಅಭ್ಯಾಸ ಇರುವುದರಿಂದ ಇದನ್ನು ನೋಡಲು ಅಷ್ಟು ಕಷ್ಟವಾಗಲಿಲ್ಲ. ಕೊನೆಯಲ್ಲಿ ಬಾರತೀಯ ಪ್ರೇಕ್ಷಕರ ಮಟ್ಟಿಗೆ ಹಿಂಸಾಚಾರ ಹೆಚ್ಚಾಯಿತು ಅನಿಸಿದರೂ ಅಂತಾರಾಷ್ಟ್ರೀಯ, ಅದರಲ್ಲೂ ಕೋರಿಯನ್ ಹಾಗೂ ಹಾಲಿವುಡ್, ಮಟ್ಟದಲ್ಲಿ ಇದು ಏನೇನೂ ಅಲ್ಲ.

ಫೋಟೋ ಕೃಪೆ : google
ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಸಿನಿಮಾ ನೋಡಿ ವಿಮರ್ಶೇ ಮಾಡಿದವರೆಲ್ಲರೂ ಬರಿ ಸಿನಿಮಾದಲ್ಲಿರುವ ಹಿಂಸೆಯ ಬಗ್ಗೆ ಬರೆದಿದ್ದಾರೆ ಹೊರತು ಅದರ ಬೇರೆ ಆಯಾಮಗಳ ಬಗ್ಗೆ ಬರೆದಿಲ್ಲ. ಮಾರ್ಕೋ ಸಿನಿಮಾ ಕೆಜಿಎಫ್ ನಿಂದ ಕೆಲವು ಕಡೆ ಸ್ಪೂರ್ತಿ ಪಡೆದಿರುವುದು ಸುಲಭವಾಗಿ ಗೊತ್ತಾಗುತ್ತದೆ. ಆದರೆ ಹಲಾವರು ಕಡೆ ಅದನ್ನು ಮೀರಿ ಚಿತ್ರ ಮೂಡಿ ಬಂದಿದೆ ಎಂದರೆ ತಪ್ಪಗಲಾರದು. ಮೇಕಿಂಗ್ ಅಂತೂ ಅದ್ಭುತವಾಗಿದೆ. ಬೇರೆ ಆಕ್ಷನ್ ಸಿನಿಮಾಗಳಲ್ಲಿ ಗಿವಿಗಡಚಿಕ್ಕುವ ಸಂಗೀತ ಕೊಡುವ ರವಿ ಬಸ್ರೂರ ಇಲ್ಲಿ ತುಂಬ ಕಂಟ್ರೋಲ್ ಆಗಿ ಸಂಗೀತ ಕೊಟ್ಟು ಚಿತ್ರಕ್ಕೆ ಬೇರೆಯದೆ ಮೆರಗನ್ನು ಕೊಟ್ಟಿದ್ದಾರೆ. ಇನ್ನೂ ಸ್ಟಂಟ್ಸ್‌ಗಳಂತೂ ಯಾವ ಕೋರಿಯನ್ ಹಾಗೂ ಹಾಲಿವುಡ್ ಸಿನಿಮಾಗಳಿಗೆ ಕಮ್ಮಿ ಇಲ್ಲ. ಪ್ರತಿ ಸಾಹಸ ದೃಶ್ಯಗಳನ್ನು ತುಂಬ ಸೂಕ್ಷ್ಮತೆಯಿಂದ ಡಿಸೈನ್ ಮಾಡಿದ್ದಾರೆ ಹೀಗಾಗಿ ಅವು ಶುರುವಾಗಿ ಮುಗಿಯುವವರೆಗೆ ನೀವು ಉಸಿರು ಗಟ್ಟಿ ಹಿಡಿದುಕೊಂಡು ನೋಡುತ್ತೀರಿ.
ಇನ್ನು ನಟನೆಗೆ ಬಂದರೆ ಉನ್ನಿ ಮುಕುಂದನ್ ಇಡಿ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ತಮ್ಮ ದೇಹದಾರ್ಢ್ಯವನ್ನು ಸದೃಢಗೊಳಿಸಿರುವುದಲ್ಲದೆ ತುಂಬ intense ಆಗಿ ನಟಿಸಿದ್ದಾರೆ. ಬೇರೆ ನಟ ನಟಿಯರು ಇಲ್ಲಿ ನೇಮ ಮಾತ್ರಕ್ಕೆ ಇದ್ದರೂ ಅವರ್ಯಾರು ತಮ್ಮ ನಟನೆಯಿಂದ ನಿರಾಶೆಗೊಳಿಸುವುದಿಲ್ಲ. ಒಟ್ಟಿನಲ್ಲಿ ಇದು ಆಕ್ಷನ್ ಪ್ರೀಯರಿಗೆ ಹೇಳಿ ಮಾಡಿಸಿದ ಸಿನಿಮಾ ಬೇರೆಯವರು ಇದರಿಂದ ದೂರ ಇರುವುದೆ ಒಳಿತು.
PS: ನೀವು ಇಂತ ವಿಮರ್ಶೇಯನ್ನು ಬರೆದು ಹಿಂಸಾತ್ಮಕ ಚಿತ್ರಗಳನ್ನು ಪ್ರೋತ್ಸಾಹಿಸುತ್ತಿದ್ದೀರಿ ಎಂದು ನೀವು ಹೇಳಬಹುದು. ಹೇಗೆ ಹಿಂಸೆ ಎನ್ನುವುದು ಮನುಷ್ಯನಿಗೆ ಹೊಸತಲ್ಲವೋ, ಇಂತಹ ಹಿಂಸಾತ್ಮಕ ಚಿತ್ರಗಳು ಬಾರತಕ್ಕೆ ಹೊಸತಾಗಿರಬಹುದು ಆದರೆ ಪ್ರಪಂಚಕ್ಕೆ ಹೊಸತಲ್ಲ. ಹೀಗಾಗಿ ನಾನು ಏನೇ ಹೇಳಿದರೂ ಇಂತಹ ಸಿನಿಮಾಗಳು ಬರುವುದು ನಿಲ್ಲುವುದಿಲ್ಲ ಜನ ಅವುಗಳನ್ನು ನೋಡುವುದು ಬಿಡುವುದಿಲ್ಲ. ಅಲ್ಲದೆ ಇದು ಹಿಂಸಾತ್ಮಕ ಚಿತ್ರವಾಗಿರಬಹುದು ಆದರೆ ಕೆಟ್ಟ ಚಿತ್ರವಂತೂ ಅಲ್ಲವೇ ಅಲ್ಲ.
- ಜಗದೀಶ ನಡನಳ್ಳಿ
