ಕವಿಯತ್ರಿ, ಲೇಖಕಿ ಬಿವಸು ಭಾಗ್ಯ ಕೆ ಯು ಅವರ ಸುಂದರ ಕವನದ ಸಾಲುಗಳು ಓದುಗರ ಮುಂದೆ, ತಪ್ಪದೆ ಮುಂದೆ ಓದಿ…
ಮರೆತ ತಿರುವಿನ ಗಮ್ಯ
ಕೆಲವೊಮ್ಮೆ ಈ ದಾರಿಗಳು
ತಾವು ಕರಗಿಸಿಕೊಂಡ
ಹೆಜ್ಜೆಗಳನ್ನು ಮರೆಸಿಬಿಡುತ್ತವೆ
ನಡಿಗೆ ನೂರು ನೆನಪಿನಿಂದ
ಜಾರಿ ಮರೆವಿನೊಳಗೆ
ಮರೆಯಾಗಿಬಿಡುತ್ತದೆ
ಕಲ್ಲುಮಣ್ಣಿನ ಉಡಿಗುಡಿಯಲಿ
ನಿದ್ರಿಸುವ ಹುದಿಲೂ
ರಸ್ತೆಯ ಕಣ್ಣಂಗಳದಲಿ
ಪುಟಿದಾಡುವ ಬೆಳಕು ಮತ್ತು
ಕತ್ತಲಿನ ಹುಡಿಯೂ
ಗತದ ಬೇರನ್ನು ಒಲೆಯಲಿಟ್ಟು
ಉರಿಸಿಬಿಡುತ್ತವೆ
ಹಸಿವುಂಡ ನೆಲವೂ
ದಣಿವುಟ್ಟ ತಿರುವೂ
ನೆಲೆಗೊಂಡ ತನ್ನ ನೆನೆದು
ನಿನ್ನೆಗಳ ಕಟ್ಟಿಟ್ಟು ನಾಳೆಯನು
ತನ್ನ ಕಟ್ಟಾಳೆಂದು ಭಾವಿಸಿಬಿಡುತ್ತವೆ
ಚರಣಗಳಿಗೆ ಚಿರಪರಿತತೆಯೂ
ಅಪರಿಚಿತವಾಗುತ್ತಾ ಹೋಗುತ್ತದೆ
ಹೊಸ ನೀರು
ಹೊಳೆಯ ಹಳೆ ನೀರನ್ನು
ಹೊಳೆಯಿಸುವ ಹಾಗೆ
ಹೊಸದಾರಿ ಹೊಸತಿರುವು
ಕವಲೊಡೆಯುತ್ತವೆ
ನಡೆವ ತುರ್ತು ನಮ್ಮದಾಗುತ್ತದೆ
ಸಾಗದಿರೆ
ಜೋಮುಹಿಡಿವ ತೊಡೆ
ವಿಸ್ಮೃತಿಗೆ ಬೀಳುವ ಚಿತ್ತ
ಬೆಚ್ಚಬಹುದು ನಿಶ್ಚಲವೂ ಆಗಬಹುದು
ದಾರಿಗುಂಟ ಹಸಿರೊ ಹಸಿವೊ
ಹುಸಿಯೊ ಕಸಿಯೊ
ಇರುಳಿಗೆ ಕದವಿಕ್ಕಿ ಬೆಳಕ ಮುಗುಳಿಗೆ
ಮೊಳೆತ ಹೊಸದಾರಿ
ಕಾಡಿಗೆ ಹರಿಯುವುದೊ
ನಾಡಿಗೆ ಬೀಳುವುದೊ
ನದಿಗೆ ಜಾರುವುದೊ
ಬೆಟ್ಟಗುಡ್ಡಗಳ ಏರುವುದೊ
ಸರಿಯಬೇಕು ಉಸಿರ ಕಿರಣ
ನಿಂತಲ್ಲೆ ನಿಂತುಬಿಟ್ಟ ರಸ್ತೆಯೂ
ಎಳೆದುಹೋಗುತ್ತದೆ ಕಾಲವನು
ಬದುಗಳೆರಡು ಬಿರಿದುನಿಂತು
ಬರಿದಾದ ಇಂದಿಗೆ ನಾಳೆಯ
ತೆರೆಯೆಳೆಯುತ್ತವೆ
ಹೊರಟರಷ್ಟೇ ಗಮ್ಯ
ಅರ್ಥವಾಗಬೇಕೆಂದಿಲ್ಲ
ಮರೆವಿಗೆ ಕಾರಣ
ಈ ಯಾನ ಬಚ್ಚಿಡುವುದೆಷ್ಟೊ
ಬಯಲಿಗಿಡುವುದೆಷ್ಟೊ
ಬೀದಿಗಿಳಿದ ಗಾಳಿಯೊ
ತಗ್ಗಿಗಿಳಿದ ನೀರೊ
ಗತಿ ಮಾತ್ರ ನಿರ್ಧರಿತ
ಗಮ್ಯ ಅದೇ ಪ್ರಶ್ನೆ..
- ಬಿವಸು ಭಾಗ್ಯ ಕೆ ಯು
