ವಿಜಯ್ ಆಂಟನಿ ರಾಸಾಯನಿಕ ಶಾಸ್ತ್ರದಲ್ಲಿ ಪ್ರವೀಣನಾಗಿದ್ದ, ಬುದ್ಧಿವಂತನಾದ ಆಂಟನಿ ಒಂದು ದಿನ ಇದ್ದಕ್ಕಿಂದಂತೆ ಮನೆಯಿಂದ ಕಾಣೆಯಾಗಿ ಹೋದ, ಅವನನ್ನು ಹುಡುಕುತ್ತ ಮನೆಗೆ ಹೋದಾಗ ತಿಳಿದದ್ದು…ಮುಂದೆ ಓದಿ ಪ್ರೊ.ರೂಪೇಶ ಪುತ್ತೂರು ಅವರ ಲೇಖನಿಯಲ್ಲಿ…
MSc ಮಾಡುವಾಗ , ಅಂತಾರಾಷ್ಟ್ರೀಯ ಪ್ರಸಿದ್ದ ಪ್ರೊಫೆಸರ್ ಶಿವರಾಂ ಹೊಳ್ಳ ಸಾರ್, ಒಳ್ಳೆಯ ದೊಡ್ಡ ದುಂಡು ದುಂಡು ಮನುಷ್ಯ, ಅವರ ಪಾಠ ಅವರಿಗೆ ಮಾತ್ರ ಅರ್ಥ ಆಗುತ್ತಿತ್ತು. ಅವರು ನಕ್ಕರೆ ಜೋರಾಗಿ ನಗುವುದೇ ನಮ್ಮ ಕೆಲಸವಾಗಿತ್ತು. ಆದರೆ ಅವರು ಅತಿಥಿ ಉಪನ್ಯಾಸಕನಾಗಿ ಭೇಟಿಕೊಟ್ಟ ಜರ್ಮನಿ, ಜಪಾನ್, ಸ್ವಿಟ್ಜರ್ಲೆಂಡ್…. ಈ ಊರಿನ ಬಗ್ಗೆ ಎಷ್ಟು ಚೆನ್ನಾಗಿ ವಿವರಿಸುತ್ತಿದ್ದರೆಂದರೆ , ನಾವ್ಯಾರೂ ಆ ದೇಶ ನೋಡದಿದ್ದರೂ ಅಲ್ಲಿನ ಎರಡನೇ ಮುಖ್ಯ ರಸ್ತೆಯ ಮೂರನೇ ಕ್ರಾಸಿನಲ್ಲಿ ಏನಿದೆಯೆಂದು ಇಂದೂ ಗೊತ್ತಿದೆ ಅನ್ನುವ ರೀತಿಯ ಅವರ ವರ್ಣನೆ ವರ್ಣಿಸಲು ಅಸಾಧ್ಯ.
“When I was in New Jersey ……..” ಹೊಳ್ಳ ಸಾರ್ ಕ್ಲಾಸು ಮುಂದುವರಿಯುತ್ತಿತ್ತು….

(ಅಂತಾರಾಷ್ಟ್ರೀಯ ಪ್ರಸಿದ್ದ ಪ್ರೊಫೆಸರ್ ಶಿವರಾಂ ಹೊಳ್ಳ)
ನಮ್ಮ ಸಹಪಾಠಿಯಾಗಿದ್ದ ವಿಜಯ್ ಆಂಟನಿ. ಯಾರದೇ ಯಾವುದೇ ನುರಿತ ಪ್ರೋಫೆಸರ್ ತರಗತಿಯಾಗಲೀ ಅವನು ಕಿಟಕಿಯ ಪಕ್ಕ ಕೂರುತ್ತಿದ್ದ, ಕನ್ನಡಕ ಹಾಕಿ ಅಲ್ಲೇ ಸುಗಮವಾಗಿ ನಿದ್ರೆ ಮಾಡುತ್ತಿದ್ದ. ಕಿಟಕಿಯಿಂದ ಬಂದು, ಕನ್ನಡಕಕ್ಕೆ ಬಿದ್ದ ಬೆಳಕಿನ ಪ್ರತಿಫಲನ(reflection) ದಿಂದ ಅದ(lense)ರೊಳಗೆ ಅವನ ಮುಚ್ಚಿದ ಕಣ್ಣು ಯಾರಿಗೂ ಕಾಣಿಸುತ್ತಿರಲಿಲ್ಲ. ಅಂದು ನಾವೆಲ್ಲಾ ನ್ಯೂ ಜರ್ಸಿಯಲ್ಲಿ…. ಅವನು ಸಿಕ್ಕಾಪಟ್ಟೆ ನಿದ್ರೆ ಮಾಡುತ್ತಾ ಕುರ್ಸಿಯಲ್ಲಿ….
ಕನ್ನಡಕ ಹಾಕಿ, ಸುಮ್ ಸುಮ್ಮನೆ ತಲೆ ಆಡಿಸುತ್ತಿರುವ ವಿಜಯ್ ಆಂಟನಿ ನಿದ್ರೆ ಮಾಡುತಿದ್ದಾನೆ ಎಂದು ಗೊತ್ತಾಗಿ, ಅವನ ಕಡೆ ಹೊಳ್ಳ ಸಾರ್ ಚಾಕ್ ಪೀಸನ್ನು ಅವನಿಗೆ ಗುರಿಯಾಗಿ ಎಸೆದರು. ಅವನ ಮೈಗೆ ಅದು ಬಿತ್ತು. ಎಚ್ಚರಗೊಂಡ ಆಂಟನಿ ಏನು ತನ್ನ ಮೈಮೇಲೆ ಬಿದ್ದಿದ್ದು ಎಂದು ಕ್ಷಣಾರ್ಧದಲ್ಲಿ ಹುಡುಕಿ, ಆ ಚಾಕ್ ಪೀಸನ್ನು ಹೆಕ್ಕಿ ಕಿಟಕಿಯಿಂದ ಹೊರಗೆ ಎಸೆದು ಮತ್ತೆ ತಕ್ಷಣ ಹಠಾತ್ ನಿದ್ದೆ ಮಾಡುವುದು ನೋಡಿ ಹೊಳ್ಳ ಸಾರ್ ನಕ್ಕಿದ್ದು , ಅವರ ದೊಡ್ಡ ಹೊಟ್ಟೆಯ ಮೇಲೆ ಇಟ್ಟ ಅವರ ಪುಸ್ತಕ ಕೆಳಗೆ ಬಿದ್ದಿದ್ದು……
Organic lab ನಲ್ಲಿ ನಮಗೆ ನಾಲ್ಕು ಬೇರೆ ಬೇರೆ ರಾಸಾಯನಿಕ(Chemical) ಮಿಶ್ರಣ ಮಾಡಿದ ಪುಡಿ ಕೊಟ್ಟು ಅದನ್ನು ನಾವೇ ರಾಸಾಯಿನಿಕ ಕ್ರೀಯೆಯಿಂದ ಬೇರ್ಪಡಿಸಿ, ಪ್ರಯೋಗಾತ್ಮಕ ಪರೀಕ್ಷೆ ಮಾಡಿ ಅದು ಯಾವುವು? ಎಂದು ಹೇಳಬೇಕು, ಅದರ formula structure ಬಿಡಿಸಬೇಕು. ವಿಜಯ್ ಆಂಟನಿ ಬರಿಗೈಯಲ್ಲಿ ಮುಟ್ಟಿ ಆ ಮಿಶ್ರಣದೊಳಗಿನ ರಾಸಾಯನಿಕಗಳು ಏನು ಎಂದು ಹೇಳುತ್ತಿದ್ದ. ಆದರೆ…ಇಂದಿನವರೆಗೂ ನಮಗ್ಯಾರಿಗೂ ಆ ಒಂದು ಕೈಚಳಕ ಕಲಿಯಲಾಗಲಿಲ್ಲ. ಅಷ್ಟೊಂದು ಅದ್ಭುತ ರಾಸಾಯನ ಶಾಸ್ತ್ರ ಪ್ರವೀಣನಾಗಿದ್ದ ವಿಜಯ್ ಆಂಟನಿ.
” ನಮಗೂ ಹೇಳಿಕೊಡು ಮಾರಾಯ” ಅಂದರೆ , ಕನ್ನಡಕವನ್ನು ಮೂಗಿನ ಮೇಲೆ ಸರಿಪಡಿಸುತ್ತಾ ನಕ್ಕು
” MSc course ಆದ ಮೇಲೆ ಘಟಿಕೋತ್ಸವ ದಿನ ಹೇಳಿಕೊಡುತ್ತೇನೆ ” ಎಂದಿದ್ದ
…..
MSc 2ನೇ ವರುಷ ನಮಗೆ ವಿಶ್ವವಿದ್ಯಾಲಯದಿಂದ ಹೊರಗಡೆ ಪ್ರೊಜೆಕ್ಟ್ ವರ್ಕ್ ಇದ್ದು, ನಾನು ಹಾಸ್ಟೆಲ್ ಬಿಟ್ಟಿದ್ದೆ. ಯಾಕೋ ಅಂದು ನನ್ನ ಗೈಡನ್ನು ಭೇಟಿಯಾಗಲು ವಿಶ್ವವಿದ್ಯಾಲಯಕ್ಕೆ ಬಂದಾಗ, ವಿಜಯ್ ಆಂಟನಿಯನ್ನು ಹುಡುಕಿ ಒಂದು ಗುಂಪು ಜನರ ಪಡೆ ಓಡಾಡುತ್ತಿತ್ತು. “ಅವನು ವಿಶ್ವವಿದ್ಯಾಲಯ ಕಾಲಿಟ್ಟರೆ ಸರಿ ಇರಲ್ಲ” ಎಂದು ಹೇಳುತ್ತಿದ್ದರು. ನಾನು ಎರಡು ವರುಷ MSc-Maths ಮಾಡಿ ನಂತರ ಕೆಲಸ ಸಿಗದೆ MSc – Chemistry ಮಾಡುತ್ತಿದ್ದುದ್ದರಿಂದ ಒಬ್ಬ ಹಿರಿಯ ಎಂದು ನನ್ನ ಬಾಹ್ಯವಾಗಿ ಗೌರವಿಸುತ್ತಿದ್ದರು. ಅಂದು ನನ್ನ ರಾಸಾಯನ ಶಾಸ್ತ್ರ ಸಹಪಾಠಿಗಳಾದ ಸುಮೋದ (2010ದಲ್ಲಿ ದಿವಂಗತನಾದ) ಹಾಗೂ ಉತ್ತಮ ಮೆನೆಜಸ್ ನನ್ನ ಹುಡುಕಿ ಬಂದು ” ನಮ್ಮ ವಿಜಯ್ ಆಂಟನಿ ಮತಾಂತರ ಮಾಡ್ತಾನಂತೆ ಮಾರೆಯಾ, ನಿಮ್ಮ ಹಾಸ್ಟೆಲಿನ ವೆಂಕಟೇಶ್ ಎಂಬ ಎಕನೋಮಿಕ್ಸ್ ವಿಭಾಗದವನನ್ನು ಮತಾಂತರ ಮಾಡಿದ್ದಾನೆ ಹಾಗೂ ಆಂಟನಿ ಅಡಗಿಕೊಂಡಿದ್ದಾನೆ. ಏನ್ಮಾಡೋದು?” .
ನಾವು ಹಾಸ್ಟೆಲ್ ಹೋದರೆ ವೆಂಕಟೇಶನ ತಂದೆ, ತಾಯಿ, ತಂಗಿ ಅಳುತ್ತಿದ್ದರು. ಯಾವ ರೀತಿ ಸಮಾಧಾನ ಪಡಿಸಬೇಕು ಎಂದು ನಮಗ್ಯಾರಿಗೂ ಗೊತ್ತಾಗಲಿಲ್ಲ. ರೂಂನಲ್ಲಿ ವೆಂಕಟೇಶ “+” ಚಿಹ್ನೆ ಇರುವ ಮಾಲೆ ಹಾಕಿದ್ದಾನೆ, ಏಸುವಿನ ಫೋಟೋ ಇಟ್ಟಿದ್ದಾನೆ, ಅದರ ಮುಂದೆ ಬೆಳಿಗ್ಗೆ ಉರಿಸಿದ ಮೇಣದ ಬತ್ತಿ ನಂದಿ ಕರಗಿದ್ದೂ ಕಂಡೆವು.

( ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾಕ್ಟರ್ ತಿಮ್ಮೇಗೌಡರು)
ನಾವು ಬೇಗ ರಾಸಾಯನ ಶಾಸ್ತ್ರ ವಿಭಾಗಧ್ಯಕ್ಷರಾದ ಪ್ರೋಫೆಸರ್ ಡಾಕ್ಟರ್ ತಿಮ್ಮೇಗೌಡ (ಇಂದು ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ) ರನ್ನು ಭೇಟಿಯಾಗಿ ವಿಷಯ ತಿಳಿಸಿದೆವು. ಅವನು ಹೇಗಾದರೂ ಪರೀಕ್ಷೆ ಬರೆದು ಹೋಗುವ ವ್ಯವಸ್ಥೆ ಮಾಡುವಂತೆ ಹಾಗೂ ಇಂತಹಾ ಕೆಲಸವನ್ನು ಬಿಟ್ಟುಬಿಡಲು ಮಾರ್ಗದರ್ಶನ ಮಾಡಿ ಎಂದು ಕೇಳಿಕೊಂಡೆವು. ಗುರುಗಳು ಅದನ್ನು ಒಪ್ಪಿದರು. ನಂತರ ಕೆಲ ದಿನಗಳೊಳಗೆ ಅವನನ್ನು ಹೇಗೋ ಕರೆದು ಮಾತನಾಡಿ ನಮ್ಮ ಭಿನ್ನಹ ನೆರವೇರಿಸಿದರು. ಅವನನ್ನು ಗುರುಗಳು ಸರಿ ದಾರಿಗೆ ತರುವುದರಲ್ಲಿ ಸಫಲರಾದರು.
ಆ ದಿನ ಅದೇ ಸಮಯ ಇತ್ತ ಅವನನ್ನು ಹುಡುಕಿ ಬಂದ ಗುಂಪಿನೊಂದಿಗೆ ಮಾತುಕತೆ ನಡೆಸಿ, ಸಮಾಧಾನಕರವಾಗಿ ಮರಳಿ ಕಳುಹಿಸಿದೆವು.
ಕೊನೆಯ ಪರೀಕ್ಷೆ ಮುಗಿದು Result ಬಂತು, ವರುಷದ ನಂತರ ಘಟಿಕೋತ್ಸವ ದಿನ , ತಿಮ್ಮೇಗೌಡ ಸಾರ್ ನಮ್ಮ ಮೂವರನ್ನು ಅವರ ಕೋಣೆಗೆ ಕರೆಸಿದರು. ನಾನು, ಸುಮೋದ ಉತ್ತಮ .ಅಲ್ಲಿ ಗುರುಗಳಾದ ಪ್ರೋಫೆಸರ್ ಹೊಳ್ಳ ಸಾರ್, ಪ್ರೊಫೆಸರ್ ಖಾದರ್ ಸಾರ್ ಕೂಡಾ ಕುಳಿತಿದ್ದರು.
” ನೋಡಿ ನಿಮ್ಮ ವಿಜಯ್ ಆಂಟನಿಯ ಅಂಕಪಟ್ಟಿ ಇಲ್ಲೇ ಇದೆ. ಅವನು ಬಂದೇ ಇಲ್ಲ. ಬಂದು ಪಡೆಯಲು ಅಂಚೆ ಕಳುಹಿಸಿದರೂ ಮರಳಿ ಬಂದಿದೆ. ಅವನನ್ನು ಅಥವಾ ಅವನ ಮನೆಯವರನ್ನು ಕರ್ಕೊಂಡು ಬಂದು, ಅಂಕ ಪಟ್ಟಿ ಪಡೆಯಲು ಹೇಳಿ. ಇಲ್ಲಾ ಅದು ಮರಳಿ ವಿಶ್ವವಿದ್ಯಾಲಯ ಕಛೇರಿಗೆ ಕಳುಹಿಸಬೇಕಾಗುತ್ತದೆ”.
ಪ್ರೋಫೆಸರರ ಮಾರ್ಗದರ್ಶನದಂತೆ, ನಾವು ಮೂವರೂ ಅವನ ಮನೆ ಹುಡುಕಿ ಹೋದೆವು..
ಅವನ ತಾಯಿಗೆ ನಮ್ಮನ್ನು ಪರಿಚಯಿಸಿದ ನಂತರ, ಆ ತಾಯಿ ಮರುಮಾತಾಡದೇ ಜೋರಾಗಿ ಅಳುತ್ತಾ ಬಾಗಿಲು ಹಾಕಿ ಒಳಗೆ ಹೋದರು.
ಪಕ್ಕದ ಮನೆ ವಿಚಾರಿಸಿದಾಗ… ವಿಜಯ್ ಆಂಟನಿಯ ಅಣ್ಣ ಕೆಲವು ವರುಷದ ಹಿಂದೆ ಕಾಣೆಯಾದ, ಇಂದು ವಿಜಯ್ ಆಂಟನಿಯೂ ಎಲ್ಲಿದ್ದಾನೆಂದು ಗೊತ್ತಿಲ್ಲ. ಅವನ ತಾಯಿ ಕೆಲವು ಕಾರಣದಿಂದ ಕನ್ವರ್ಟೆಡ್ ಕ್ರಿಶ್ಚಯನ್ ಆಗಿದ್ದೂ ಹೇಳಿದರು. ರಿಜೆಸ್ಟರ್ಡ್ ಅಂಚೆ ಬಂದರೂ ಆ ತಾಯಿ ಏನನ್ನೂ ಸ್ವೀಕರಿಸುತ್ತಿರಲಿಲ್ಲ. ನಮ್ಮಲ್ಲೂ ಮಾತನಾಡಲು ಬರಲೂ ಇಲ್ಲ. ತುಂಬಾ ಹೊತ್ತು ಕಾದು ಅಸಹಾಯಕರಾದ ನಾವು ಮರಳಿದೆವು.
ಸ್ನಾತಕ ಪದವಿ ಪಡೆದ ಮೇಲೆ ವಿಜಯ್ ಏನಾದರೂ ಜೀವನದ busy schedule ನಲ್ಲಿ ಹೊಸ ಜೀವನ ಪ್ರಾರಂಭ ಮಾಡಬಹುದೆಂದು ನಾನು, ಸುಮೋದ್ ಹಾಗೂ ಉತ್ತಮ್ ಮೇನೆಜಸ್ ಮಾಡಿದ ಲೆಕ್ಕಾಚಾರ ಕೈತಪ್ಪಿತ್ತು.
MSc ನಂತರ ನಾವ್ಯಾರೂ ವಿಜಯ್ ಆಂಟನಿಯನ್ನು ಇಂದೂ ನೋಡಿಲ್ಲ. ಅವನನ್ನು ಅವನ ಅಂಕಪಟ್ಟಿ ಮಂಗಳೂರು ವಿಶ್ವವಿದ್ಯಾಲಯ ದಾರಿ ಕಾಯುತ್ತಾ ಮರೆಯಾಗಿರಬಹುದು. ಒಂದು ವೇಳೆ ಅವನು ಎಲ್ಲಾದರೂ ಇರುವುದಾದರೆ , ಸಿಕ್ಕರೆ ಅವನಲ್ಲಿ ಕೇಳುವ ಪ್ರಶ್ನೆ ” ಬರೇ ಕೈಯಲ್ಲಿ ಮುಟ್ಟಿ ಆ ಮಿಶ್ರಣದೊಳಗಿನ ರಾಸಾಯನಿಕಗಳು ಏನು ಎಂದು ಹೇಳುತ್ತಿದ್ದ ಆ ಗುಟ್ಟೇನು?”
ನಿಮ್ಮವ ನಲ್ಲ
*ರೂಪು*
- ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)
