ಸೆಲ್ಫಿ ತೆಗೆಸಿಕೊಳ್ಳುವ ಫ್ಯಾನ್ ಬಗ್ಗೆ ಯೋಚಿಸು ಮಠ…



ಎಂ.ಕೆ.ಮಠ ಒಬ್ಬ ಕನ್ನಡದ ಪ್ರತಿಭಾವಂತ ಕಲಾವಿದರು. ಟಿ ಎಸ್ ನಾಗಾಭರಣ ಅವರ ಅಪ್ಪಟ ಶಿಷ್ಯೆ. ನೋಡಲು ಗಣೇಶ ಕಾಸರಗೋಡು ಅವರಂತೆ ಕಾಣುವ ಮಠ ಅವರ ಬಗ್ಗೆ ಸ್ವತಃ ಗಣೇಶ ಕಾಸರಗೋಡು ಅವರು ಪ್ರೀತಿಯಿಂದ ಬರೆದ ಒಂದು ಪುಟ್ಟ ಲೇಖನ, ಮುಂದೆ ಓದಿ…

ಮಧ್ಯ ರಾತ್ರಿ 12 ಗಂಟೆಗೆ ಸರಿಯಾಗಿ ಮೊಬೈಲ್ ರಿಂಗಾಗುತ್ತದೆ. ಎತ್ತಿದರೆ ಆ ಕಡೆಯಿಂದ ಆತ ಮಾತಾಡುತ್ತಾನೆ : ” #ಅಣ್ಣಾ , ನಾನು ಸಾಯುತ್ತೇನೆ. ಇದೇ ಕೊನೇ ಕಾಲ್. ಕಟ್ ಮಾಡಿದ ನಂತ್ರ ನೇಣು ಹಾಕಿಕೊಳ್ತೇನೆ. ನಂಗೆ ಈ ದರಿದ್ರ ಬದುಕು ಸಾಕಾಯಿತು. ಈ ಮಹಾಸಾಗರದಲ್ಲಿ ಈಜಾಡೋದು ಎಷ್ಟು ಕಷ್ಟ ಅಂತ ಗೊತ್ತಾಯಿತು. ನನ್ನ ಕನಸುಗಳಿಗೆಲ್ಲಾ ತಿಲಾಂಜಲಿಯಿಟ್ಟು ಫ್ಯಾನಿಗೆ ಶರಣಾಗುತ್ತೇನೆ. ಅತ್ತಿಗೆ ಹತ್ರ ಕೇಳಿದ್ದೇನೆ ಅಂತ ಹೇಳಿ…ಗುಡ್ ನೈಟ್ ಅಣ್ಣಾ…” – ಆತನ ಮಾತು ಕೇಳಿ ನಾನು ಜೋರಾಗಿ ನಗುತ್ತೇನೆ! “ಇದು ನಗುವ ಟೈಮಾ..?” – ಅಂತ ಕೇಳುತ್ತಾಳೆ ಪಕ್ಕದಲ್ಲಿ ನಿದ್ದೆ ಬಾರದೇ ಮಲಗಿರುವ ನನ್ನ ಪತ್ನಿ ಗಾಯತ್ರಿ. “ಮತ್ತೇನು ಮಾಡಲಿ? ಇದು ನೂರನೇ ಸಾರಿ ಹೇಳ್ತಿರೋದು ಸಾಯುತ್ತೇನೆ ಅಂತ. ಮೂರ್ಖ ಸಾಯೋದೂ ಇಲ್ಲ, ನನ್ನನ್ನು ಸಾಯಿಸ್ತಾನೆ! ಫ್ಯಾನಿಗೆ ಕುಣಿಕೆ ಹಾಕಿ ಸಾಯ್ತಾನಂತೆ. ಇವ್ನ ಯೋಗ್ಯತೆ ಏನೂಂತ ಇವನಿಗೇ ಗೊತ್ತಿಲ್ಲ ಮುಂಡೇದು! ಆ ಫ್ಯಾನಲ್ಲ, ಬೇರೆ ಫ್ಯಾನ್ (ಅಭಿಮಾನಿಗಳು) ಈಗಾಗಲೇ ನೂರಾರಿದ್ದಾರೆ. ಒಂದು ಬ್ರೇಕ್ ಸಿಕ್ಕಿದ್ರೆ ಸಾಕು, ಅದು ಸಾವಿರಾರು ಆಗ್ತದೆ..” – ನಾನು ಹೀಗೆ ಗೋಣಗುತ್ತಿರುವಂತೆಯೇ ಏಕಕಾಲದಲ್ಲಿ ನಂಗೂ , ನನ್ನ ಪತ್ನಿಗೂ ನಿದ್ದೆ ಬಂದಿರುತ್ತದೆ!

ಮತ್ತೆ ಯಥಾ ಪ್ರಕಾರ ಬೆಳಿಗ್ಗೆ ಫೋನು : ” ಅಣ್ಣಾ, ಬೇಜಾರಾಯಿತಾ? ನಿನ್ನೆ ರಾತ್ರಿ ತಲೆ ತಿಂದುಬಿಟ್ಟೆ. ಸಾರಿ ಕಣಣ್ಣಾ…ಅಂದ ಹಾಗೆ, ನಾನು ತುಂಬಾ ಬಿಜಿ ಇದ್ದೇನೆ. ಕಥೆ ಮಾಡ್ತಿದ್ದೀನಿ. ಸಂಭಾಷಣೆ ಬರೀತಿದ್ದೀನಿ. ತುಳು ಚಿತ್ರವೊಂದನ್ನು ಡೈರೆಕ್ಟ್ ಮಾಡಲು ಕೇಳಿಕೊಂಡಿದ್ದಾರೆ. ಈ ನಡುವೆ ಅಭಿನಯಿಸಲು ನಾಲ್ಕಾರು ಆಫರ್’ಗಳಿವೆ. ಐ ಯಾಮ್ ಬಿಜಿ..ಬೈ ಅಣ್ಣಾ. ಊರಿಗೆ ಹೋಗಿ ಬಂದ ಮೇಲೆ ಮೀನು ಸಾರು ತರ್ತೇನೆ…ಓಕೆ? ಬೈ…” – ಫೋನ್ ಕಟ್! ಈಗ ಬೆಳ್ಳಂಬೆಳಗ್ಗೆಯೇ ನಶೆ ಏರಿಸಬೇಕಾದ ಸರದಿ ನನ್ನದು!!!

This slideshow requires JavaScript.

ಈ ನಟನಾಚತುರನ ಹೆಸರು : #ಎಂ_ಕೆ_ಮಠ ಉರುಫ್ ಮಠ ಬಳ್ಳಾರಿ! ಕನ್ನಡ ಚಿತ್ರರಂಗ ಹೆಮ್ಮೆ ಪಡಬಹುದಾದ ಅದ್ಭುತ ಕಲಾವಿದ. ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಅಪ್ಪಟ ಶಿಷ್ಯ. ನಾಗಿಣಿಭರಣ ಅವರ ಪುತ್ರ ಸಮಾನ ನಟ. ಅದೆಷ್ಟು ಸಾರಿ ಮುನಿಸಿಕೊಂಡು ಆ ತಂಡವನ್ನು ಬಿಟ್ಟು ಹೋಗಿದ್ದಾನೋ, ಮತ್ತೆ ಸೇರಿಕೊಂಡಿದ್ದಾನೋ ಲೆಕ್ಕ ಇಟ್ಟವರ್ಯಾರು?

ಇಂಥಾ ಮಠ ಕೆಲವು ಆಂಗಲ್’ಗಳಲ್ಲಿ ಕಾಣಲು ನನ್ನಂತಿದ್ದಾನೆ! ಯಾರಾದರೂ ” ಗಣೇಶ್ ಕಾಸರಗೋಡು ನಿಮಗೇನಾಗಬೇಕು?” – ಅಂತ ಕೇಳಿದರೆ ಥಟ್ಟಂತ ಹೇಳಿಬಿಟ್ಟಿರುತ್ತಾನೆ : ” ಅವ್ರು ನಮ್ಮಣ್ಣ…”. ನಿಜವಲ್ಲವೇ? ಈ ಎಂ.ಕೆ.ಮಠ ನನ್ನ ತಮ್ಮನೇ! ಈತ ಮಾಡದ ಪಾತ್ರವಿಲ್ಲ. ಭೂತಕೋಲದಿಂದ ಹಿಡಿದು ಯಕ್ಷಗಾನ ಪಾತ್ರಧಾರಿಯ ತನಕ ನಿರಂತರ ಪಯಣ. ನನ್ನ ಮಗ ಅಭಿಷೇಕ್ ಜಿ. ಕಾಸರಗೋಡು ನಿರ್ದೇಶಿಸಿ, ಕ್ಯಾಮೆರಾ ಕೆಲಸ ಮಾಡಿದ “ಕುಕ್ಕ” ಕಿರುಚಿತ್ರದಲ್ಲಿ ಕುಕ್ಕನ ಪಾತ್ರ ಮಾಡಿ ಜನಮನ ಸೂರೆಗೊಂಡಿದ್ದಾನೆ ಮಠ. ಬೆನ್ನಿಗೆ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳ ದೊಡ್ಡ ಮೂಟೆಯನ್ನೇ ಕಟ್ಟಿಕೊಂಡಿರುವ ಮಠನ “#ಗಗ್ಗರ” ಚಿತ್ರದ ಪಾತ್ರವನ್ನು ಯಾರಾದರೂ ಮರೆಯೋದುಂಟಾ?



■ ಇಂಥಾ ತಮ್ಮನಿಗೆ ಕೊನೆಯಲ್ಲಿ ಹೇಳೋದಿಷ್ಟೇ : ” ಕುಣಿಕೆ ಹಾಕುವ ಫ್ಯಾನಿನ ಯೋಚನೆ ಬಿಟ್ಟುಬಿಡು, ಸೆಲ್ಫಿ ತೆಗೆಸಿಕೊಳ್ಳುವ, ಆಟೋಗ್ರಾಫ್ ಹಾಕಿಸಿಕೊಳ್ಳುವ ಫ್ಯಾನ್’ಗಳ ಬಗ್ಗೆ ಯೋಚಿಸು! ಅಂಥವರ ಸಂಖ್ಯೆ ಲಕ್ಷ ಲಕ್ಷವಾಗಲಿ. ALL THE BEST ತಮ್ಮಾ…”


  • ಗಣೇಶ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading