ದಿನಾ ದಿನಾ ಒಂದೇ ಐಟಂ ಹೇಳ್ತಿದ್ರೆ ಏನೆಲ್ಲಾ ಪಜೀತಿ ಆಗುತ್ತೆ ಅಂತ ಲೇಖಕ ನಿತಿನ್ ಕೆ ಪುತ್ತೂರು ಅವರು ಅನುಭವದ ಹಾಸ್ಯ ಲೇಖನದ ಮೂಲಕ ಓದುಗರ ಮುಂದೆ ಹೇಳಿಕೊಂಡಿದ್ದಾರೆ, ಓದಿ ಒಮ್ಮೆ ನಕ್ಕು ಬಿಡಿ…
ನಾನು ಪ್ರತಿದಿನ ಡ್ಯೂಟಿ ಮುಗಿಸಿ ಸಂಜೆ ಹೊತ್ತು ಒಂದು ಹೋಟೆಲ್ಗೆ ಹೋಗಿ ಮಸಾಲದೋಸೆ ಸವಿಯೋದು ನನ್ನ ದಿನಚರಿಯ ಅವಿಭಾಜ್ಯ ಅಂಗವಾಗಿತ್ತು… ದಿನ ಹೋಗುತ್ತಿದ್ದ ಕಾರಣ ಸ್ವಲ್ಪ ಇನ್ಫ್ಲುಯೆನ್ಸ್ ಮಾಡಿದ್ದರಿಂದ ಪಲ್ಯ ಸ್ವಲ್ಪ ಜಾಸ್ತಿ, ಗಟ್ಟಿ ಚಟ್ನಿಯ ಭಾಗ್ಯವೂ ಇತ್ತು….ಅಲ್ಲಿನ ಕೆಲಸಗಾರರು ಆತ್ಮೀಯರೇ ಆಗಿ ಬಿಟ್ಟಿದ್ದರು..ಒಂದು ದಿನ ಮಸಾಲಾ ದೋಸೆ ಬೇಡ ಬೇರೆನಾದ್ರೂ ಟ್ರೈ ಮಾಡುವ ಅನಿಸಿತು….
ಹೋಟೆಲ್ಗೆ ಹೋದೆ ವೇಟರ್ ದೂರದಿಂದಲೇ ನೋಡಿ” ನಿಮಗೆ ಮಸಾಲೆ ಅಲ್ವಾ ” ಅಂದವನೇ ಅಲ್ಲಿಂದಲೇ ” ಹಾ ಸೀಟಿಗೆ ಒಂದು ಮಸ್ಸಾಲೇಯ್ ” ಎಂದು ಕೂಗಿದ.. ಸರಿ ಇವತ್ತ್ ತಿನ್ನುವ ಆರ್ಡರ್ ಮಾಡಿ ಆಯಿತಲ್ಲ ಅನ್ಕೊಂಡೆ…
ಮತ್ತೆ ಮರುದಿನ ಹೋದೆ ಸ್ವಲ್ಪ ಹೊತ್ತು ಬಿಟ್ಟು ವೇಟರ್ ಬಂದ ” ನನಗೇ ” ಅನ್ನೋವಷ್ಟರಲ್ಲೇ… ಅವ ” ಸರ್, ನಿಮಗೆ ಮಸಾಲೆ ಅಲ್ವಾ, ಆರ್ಡರ್ ಮಾಡಿ ಆಯಿತು ಬಿಡಿ ” ಎಂದ… ಮತ್ತೆ ಅದೇ ಮಸಾಲೆ ತಿಂದೆ…

ಫೋಟೋ ಕೃಪೆ : Youtube
ಮತ್ತೆ ಮರುದಿನ ಹೋದೆ ದಾರಿಯಲ್ಲಿಯೇ ವೇಟರ್ ಇದ್ದ ಅಲ್ಲೇ ಹೇಳಿಬಿಟ್ಟ ಇವತ್ತು ಮಸಾಲೆ ಬೇಡ ಅಂತ ಹೋಗಿ ಕೂತೆ ” ಬೇರೆ ಏನಿದೆ ಬಿಸಿ ಬಿಸಿ ” ಎಂದೆ… ” “ಒಂದು ನಿಮಿಷ ಸರ್, ಗೋಳಿಬಜೆ ಬಿಡ್ತಾ ಇದ್ರು,, ಐತಾ ನೋಡಿ ಬರ್ತೇನೆ ” ಎಂದು ಹೋದವ ವಾಪಾಸ್ ಒಂದು ಮಸಾಲೆ ದೋಸೆ ಕೈಯಲ್ಲೇ ಹಿಡಿದುಕೊಂಡು ಬಂದವನೇ ” ಸರ್, ಗೋಳಿಬಜೆ ಆಗಿಲ್ಲ, ಮತ್ತೆ ನಮ್ಮ ಭಟ್ರು ನೀವು ಒಳಗೆ ಬರುವಾಗ ನಿಮ್ಮ ತಲೆ ಕಂಡಾಗಲೇ ದೋಸೆ ಹಾಕಿ ಬಿಟ್ಟಿದ್ರು”… ಅಂದ. ಮತ್ತೆ ಅದೇ ಮಸಾಲೆ ದೋಸೆ ತಿಂದು.. ” ನಾಳೆ ನನಗೇ ಮಸಾಲೆ ಬೇಡ ಮಾರಾಯ ” ಎಂದು ಮೊದಲೇ ಹೇಳಿ ಬಂದೇ..
ಮತ್ತೆ ಮರುದಿನ ಹೋದೆ.. ಸ್ವಲ್ಪ ಹೊತ್ತು ಯಾರು ಬರಲಿಲ್ಲ.. ಮತ್ತೆ ಬೇರೊಬ್ಬ ವೈಟರ್ ದೋಸೆಯೊಂದಿಗೆ ಬರುತ್ತಾ ” ಸರ್, ಅವರು ರಜೆ… ನಿಮಗೆ ಮಸಾಲೆಯೇ ಬೇಕು ಅಂತ ಗೊತ್ತುಂಟು.. ಅದಿಕ್ಕೆ ನಿಮ್ಮನ್ನು ನೋಡಿದಾಗಲೇ ಆರ್ಡರ್ ಮಾಡಿದೆ ” ಎಂದು ಹೆಮ್ಮೆಯಿಂದ ಹೇಳಿದ… ಮತ್ತೆ ಮಸಾಲೆಯೇ ತಿಂದೆ…
ಮತ್ತೆ ಮರುದಿನ ಹೋದೆ ಅದೇ ಹಳೆ ವೇಟರ್ ಸೇಮ್ ಕಥೆ ಸೇಮ್ ದೋಸೆ ಬಂತು.. ” ಬೇಡ ಅಂತ ನಿಮಗೆ ಮೊನ್ನೆ ಹೇಳಿದ್ನಲ್ಲ ಮರ್ರೇ ” ಅಂದೆ,, ಅದಿಕ್ಕೆ ಅವ ” ಸರ್, ನೀವು ಮೊನ್ನೆ ಹೇಳಿದ್ದು ನಿನ್ನೆ ಅಂತ, ನಾನು ನಿನ್ನೆ ರಜಾ ಇದ್ದೇ, ನಿನ್ನೆ ನೀವು ಬೇರೇನಾದ್ರೂ ತಗೊಂಡಿರ ಬಹುದು ಅನ್ಕೊಂಡೆ ” ಅಂದ… ಕಣ್ಣ ಮುಂದೆ ಇದ್ದ ಮಸಾಲಾ ದೋಸೆ ಬಿಡಲು ಮನಸಾಗದೆ ಮತ್ತೆ ತಿಂದೆ…

ಫೋಟೋ ಕೃಪೆ : boldsky
ಮತ್ತೆ ಮರುದಿನ ಹೋದೆ, ಬಾಳೆಕಾಯಿ ಪೋಡಿಯ ಪರಿಮಳ ಘಮ್ಮ ಎಂದು ಮೂಗಿಗೆ ಹೊಡೆಯಿತು… ಇವತ್ತು ಬಾಳೆಕಾಯಿ ಪೋಡಿಯೇ ತಿನ್ನೋದು ಎಂದು ಮನದಲ್ಲೇ ಯೋಚಿಸುತ್ತ..ಎಂದಿನ ಟೇಬಲ್ ನತ್ತ ನಡೆದೇ…..
ನಾನು ಕೂತುಕೊಳ್ಳುತ್ತಿದ್ದ ಟೇಬಲ್ ನಲ್ಲೇ ಹೋಟೆಲ್ ಓನರ್ ಕೂತು ಚಹಾ ಕುಡಿಯುತ್ತಿದ್ದರು… ನಗು ಮುಖದಿಂದಲೇ ಸ್ವಾಗತಿಸಿ” ಬನ್ನೀ ಬನ್ನೀ ಕುತ್ಕೋಳ್ಳಿ “… ಅಂದ್ರು… ಅಷ್ಟರಲ್ಲೇ ವೇಟರ್ ಕೂಡ ಬಂದವನೇ ” ಸರ್, ನಿಮಗೆ ಏನು ಕೊಡ್ಲಿ “.. ಎಂದು ಕೇಳಲು…….
ಓನರ್ : ” ಯೇ… ದಿನ ಬರ್ತಾರೆ ಮರ್ರೆ… ಅದನ್ನೇ ಮತ್ತೆ ಕೇಳ್ತಿಯಲ್ಲ… ಪಲ್ಯ ಜಾಸ್ತಿ, ಗಟ್ಟಿ ಚಟ್ನಿ ಹಾಕಿ ಒಂದು ಮಸಾಲಾ ದೋಸೆ ಕೊಡಲ್ಲ… ಅದನ್ನು ಕೇಳ್ಲಿಕ್ಕೆ ಉಂಟಾ?.. “”…. ಎಂದು ಬಿಟ್ರು…..
ಈಗ ನಾನೇನಾದ್ರೂ ನಿರಾಕರಿಸಿ ಬಿಟ್ರೆ ಅವರಿಗೆ ಇರಿಸು ಮುರುಸು ಆಗೋದು ಖಂಡಿತ…ಮತ್ತೆ ಪಲ್ಯ, ಮತ್ತು ಗಟ್ಟಿ ಚಟ್ನಿಯ ಭಾಗ್ಯಕ್ಕೂ ಕತ್ತರಿ ಬೀಳಬಹುದು…ಈ ವಿಷಯ ಅವರಿಗೇ ಗೊತ್ತಿಲ್ಲ ಎಂದೇ ನಾನು ಮತ್ತು ವೇಟರ್ ನಂಬಿದ್ದೆವು… ಮತ್ತೆ ಮಸಾಲಾ ದೋಸೆಯೇ ತಿಂದೆ… ಈ ಬಾರಿ ಪಲ್ಯ ಮತ್ತು ಚಟ್ನಿಯೂ ಸ್ವಲ್ಪ ಜಾಸ್ತಿಯೇ ಇತ್ತು ಬಿಡಿ…. ಆದ್ರೂ ನನ್ನ ಮನದ ಬಯಕೆ ತೀರದೆ ಮೋಕ್ಷವಿಲ್ಲದ ಆತ್ಮದಂತೆ ಆಗಿ ಬಿಟ್ಟಿದ್ದೆ…
ಮತ್ತೆ ಮರುದಿನ ಹೋಗುವಾಗ ಬೈಕಿಂದ ಇಳಿದವನೇ ಜರ್ಕಿನ್, ಹೆಲ್ಮೆಟ್ ಹಾಕಿಕೊಂಡೆ ಒಳಗೆ ಹೋದೆ ಪರಿಚಯವೇ ಸಿಗಬಾರದು ಎಂದು.. ವೇಟರ್ ಬಂದಮೇಲೆಯೇ ಹೆಲ್ಮೆಟ್ ತೆಗೆದೇ.. ” ದೋಸೆ ಬೇಡ, ಬೇರೆ ಎಂತ ಉಂಟು ” ಅಂದೆ… ಅವ ಅಷ್ಟುದ್ದ ಪಟ್ಟಿ ಹೇಳಿದ.. ಅದರಲ್ಲಿ ಕಿವಿಗೆ ಬಿದ್ದದ್ದು.. ಮಸಾಲಾ ಪುರಿಯ ಮಸಾಲೆಯೇ.. ಸರಿ ಅನ್ಕೊಂಡು ಒಂದು ಪ್ಲೇಟ್ ಮಸಾಲಾ ಪುರಿ ತಿಂದೆ.. ಆದ್ರೂ ಯಾಕೋ ಸಮಾದಾನ ಆಗ್ಲಿಲ್ಲ… ಮತ್ತೆ ” ಒಂದು ಮಸಾಲಾ ದೋಸೆ ಕೊಡಿ “ಅಂದೆ… ವೇಟರ್ ನನ್ನ ಮನಸ್ಸು ಓದಿದವಾನಂತೆ ನಗುತ್ತಾ ಹೋದ… ” ಆ ಸೀಟಿಗೆ ಒಂದು ಮಸಾಲೇಯ್, ” ಎಂದು ಆರ್ಡರ್ ಮಾಡಿದ್ದು ಕಿವಿಗೆ ಬಿದ್ದಾಗ ಏನೋ ಒಂತರ ಖುಷಿ….
- ನಿತಿನ್ ಕೆ ಪುತ್ತೂರು
