ತನ್ನ ತಂದೆ ಊರಿಂದ ತಮ್ಮೊಂದಿಗೆ ಇರಲು ಮನೆಗೆ ಬರುತ್ತಿದ್ದರೆ ಎಂದಾಗ ಮಗ ಅಭಿಷೇಕ ಎಲ್ಲಿಲ್ಲದ ಸಂತೋಷಪಟ್ಟ, ಆದರೆ ಸೊಸೆ ಆರಾಧನಾಳಿಗೆ ಮಾವನ ಬರುವಿಕೆ ಗಲಿಬಿಲಿ ತರಿಸಿತು. ಕಾರಣವಿಷ್ಟೇ ಕತೆಗಾರ ಶೇಖರಗೌಡ ವೀ ಸರನಾಡಗೌಡರ್ ಅವರ ‘ಮಾವಯ್ಯ’ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಆಫೀಸಿನಿಂದ ಮನೆಗೆ ಬರುವಾಗಲೇ ಅಭಿಷೇಕ್ ತುಂಬಾ ಖುಷಿಖುಷಿಯಾಗಿರುವುದನ್ನು ಕಂಡ ಆರಾಧನಾ ಮಂದಸ್ಮಿತೆಯಾಗೇ ಗಂಡನನ್ನು ಸ್ವಾಗತಿಸಿದಳು. ʻಏನೋ ವಿಶೇಷ ಇರಬೇಕು. ಪ್ರೊಮೋಷನ್ ಬರುವುದಿದೆ ಎಂದು ಹೇಳುತ್ತಿದ್ದರು. ಪ್ರೊಮೋಷನ್ ಬಂದಿರಬಹುದೇ…? ಅಥವಾ ಬೇರೇನಾದರೂ ಸಂತಸದ ಸಂಗತಿ ಇರಬಹುದೇ…?ʼ ಎಂದು ಮನದೊಳಗೇ ಅಂದುಕೊಂಡಳಾದರೂ ಸುಮ್ಮನಿರಲು ಮನಸ್ಸು ಒಪ್ಪಲಿಲ್ಲ. ನೇರವಾಗಿ ಪ್ರಶ್ನೆ ಹಾಕಿಯೇ ಬಿಟ್ಟಳು.
“ಸಾಹೇಬರು ತುಂಬಾ ಖುಷಿಯ ಮೂಡಲ್ಲಿ ಇರುವ ಹಾಗಿದೆ…? ಎನಿ ಥಿಂಗ್ ಸ್ಪೆಷಲ್…? ಹೇಳಿದರೆ ನಿನ್ನ ಖುಷಿಯಲ್ಲಿ ನಾನೂ ಪಾಲ್ಗೊಳ್ಳುವೆ” ಎಂದಳು ಆರಾಧನಾ ಒಲವಿನ ನಗೆ ಹರಿಸುತ್ತಾ.
“ಆರೂ, ಖುಷಿಯ ಸಂಗತಿಯೇ ಇದೆ. ಅಪ್ಪಾಜೀ ತುಸು ಹೊತ್ತಿನ ಹಿಂದೆ ಫೋನಾಯಿಸಿದ್ದರು. ಅವರು ನಾಡದು ಇಲ್ಲಿಗೆ ಬರುತ್ತಿರುವಂತೆ. ಇದಕ್ಕಿಂತ ಸಂತಸದ ಸಂಗತಿ ಇನ್ನೇನು ಬೇಕು…?” ಎಂದ ಅಭಿಷೇಕ್. ಆರಾಧನಾಳ ಎದೆ ಧಸಕ್ಕೆಂದಿತು. ಅವಳ ಬಾಯಿಯಿಂದ ಮಾತೇ ಹೊರಡಲಿಲ್ಲ. ಹೇಗೆ ಪ್ರತಿಕ್ರಿಯಿಸಬೇಕೆಂದೇ ತಿಳಿಯಲಿಲ್ಲ. ʻಅರೇ, ಈ ಸಮಯದಲ್ಲಿ ನಾನು ಮೌನಿಯಾಗಿದ್ದರೆ ಅಭಿಷೇಕ್ ತಪ್ಪಾಗಿ ಭಾವಿಸಬಹುದು. ಬರುವವರು ಎಷ್ಟಾದರೂ ನನ್ನ ಮಾವನೇ. ಇವನ ಹೆತ್ತ ತಂದೆ…ʼ ಮನದಲ್ಲೇ ಯೋಚಿಸಿದ ಆರಾಧನಾ ಪ್ರತಿಕ್ರಿಯೆಗೆ ಮುಂದಾದಳು.
“ಹೌದೇನು…? ನಿಜವಾಗಿಯೂ ಸಂತಸದ ಸುದ್ದಿಯೇ…” ಆರಾಧನಾ ಖುಷಿಖುಷಿಯಿಂದಲೇ ಹೇಳಿದಳಾದರೂ ಅವಳೆದೆಯಲ್ಲಿ ದುಗುಡ, ಆತಂಕಗಳು ಮನೆಮಾಡಿದ್ದು ನಿಜ.
“ಅಲ್ಲೋ ಅಭಿ, ಈಗ ಕೊರೋನಾ ವಕ್ಕರಿಸಿಕೊಂಡಿದ್ದು ನೆಪ್ಪು ಐತೋ ಇಲ್ಲೋ…? ಅದೂ ಅಲ್ದೇ ಸರಕಾರ ಮುಂದಿನ ವಾರದಿಂದ ಲಾಕ್ ಮಾಡ್ತಾರಂತ. ಲಾಕ್ ಡೌನ್ ಮಾಡಿದ್ರೆ ಯಾವ್ ಕಡೀಗೂ ಹೋಗಾಕ, ಬರಾಕ ಆಗಂಗಿಲ್ಲ. ಎಲ್ಲಾ ಬಂದ್ ಆಗ್ತದ. ಅದ್ರಾಗ ಬೆಂಗ್ಳೂರಾಗ ಕೊರೋನಾ ಕೇಸಸ್ ಬಾಳ ಅದಾವ. ಈ ಕೊರೋನಾ ಟೈಮ್‌ನ್ಯಾಗ ಮಾವಾರು ಬೆಂಗ್ಳೂರಿಗೆ ಬರೋದು ಸರೀನೋ ಹೆಂಗೋ…? ಅದ್ರಾಗ ಅವ್ರು ವಯಸ್ಸಾದೋರು ಬ್ಯಾರೆ. ಇಂಥಾ ವೇಳ್ಯಾದಾಗ ಸಣ್ಣ ಊರಿನ್ಯಾಗ ಇರೋದು ಚೊಲೋ ಅಂತ ಜನ್ರು ಮಾತಾಡಾಕತ್ಯಾರ. ನಮ್ ಶಾಲೀಗೂ ಸೂಟಿ ಕೊಡ್ತಾರೋ ಏನೋ, ಅದೂ ಗೊತ್ತಿಲ್ಲ. ನಿನ್ಗೆ ವರ್ಕ್ ಫ್ರಮ್ ಹೋಮ್ ಆಗ್ಬೋದು.”
“ನಿನ್ನ ಆತಂಕದ ಪ್ರಶ್ನೆಗಳು ಸರೀನೇ. ಅದೇ ಅಪ್ಪಾಜೀ ಲಾಕ್ ಡೌನ್ ಆಗೋದ್ಕಿಂತ ಮುಂಚೇನೇ ಇಲ್ಲಿಗೆ ಬಂದು ಸೇರ್ಕೊಂಡ್ಬಿಡ್ತಾರ. ಅಲ್ಲಿ ಅವ್ರಿಗೆ ಊಟದ ತ್ರಾಸು ಆಗೇದಂತ. ಅಡುಗಿ ಮಾಡಾಕ ಬರ್ತಿದ್ಳಲ್ಲ, ಆ ಹೆಣ್ಣು ಮಗ್ಳು ಈಗ ಬರಂಗಿಲ್ಲಂತ. ಆಕಿ ಮಗ್ಳದು ಬಾಣಂತನ ಐತೆಂತ. ಮಗ್ಳ ಊರಿಗೆ ಹೋಗ್ಯಾಳಂತ. ಅದೂ ಅಲ್ದೇ ಲಾಕ್ ಡೌನ್ ಆದ್ರೆ ಖಾನಾವಳಿ, ಹೋಟೆಲ್ ಎಲ್ಲಾ ಬಂದ್ ಆಗ್ತವ. ಅದ್ಕೇ ನಾನೇ ಇಲ್ಲಿಗೆ ಬಂದ್ಬಿಡಪ್ಪ, ಹೆಂಗೋ ನಡೀತದೆ ಅಂತ ಒತ್ತಾಯ ಮಾಡ್ದೆ. ಹೇಗೋ ಹೂಂ ಅಂದ್ರು. ಬರ್ತೀನಿ ಅಂತ ಹೇಳಿದ್ರು. ಬರ್ಲಿ, ಬರ್ಲಿ. ಅಪ್ಪಾಜಿ ನಮ್ಮಲ್ಲಿಗೆ ಬಂದಿದ್ದು ಬಾಳಾನೇ ಕಡಿಮಿ. ಬಾಳ ಸ್ವಾಭಿಮಾನದ ಪ್ರಾಣಿ.”
“ಸಮಾಚಾರ ಹೀಂಗ್ ಅದಾ ಏನ್…?ಕೊರೋನಾ ಟೈಮನ್ಯಾಗ ಇಲ್ಲಿ ಬಂದು ಸಿಕ್ಕೋಳ್ಳೋದು ಬ್ಯಾಡ ಅಂತ ನಾ ಅಂದ್ಕೊಂಡಿದ್ದೆ. ಬರ್ಲಿ, ಅವ್ರು ಇಲ್ಲಿಗೆ ಬಂದಿದ್ದೆ ಅಪರೂಪ. ನಾವು ಮನಿ ಮಾಡಿದ್ಮ್ಯಾಲೆ ಎರ್ಡು ಸಾರೇನೋ, ಮೂರು ಸಾರೇನೋ ಬಂದು ಹೋಗ್ಯಾರ ಅಷ್ಟೇ. ಅತ್ತೆ ಇದ್ದಿದ್ರೆ ಅವ್ರಿಗೆ ತ್ರಾಸಿರ್ಲಿಲ್ಲ…”
“ಹೌದು, ಅಮ್ಮ ಹೋದ್ಮ್ಯಾಲೆ ಅವ್ರು ಬಾಳ ಡೌನ್ ಆಗ್ಯಾರ. ನಮ್ಮ ಪುಟ್ಟಾ ಹೃದ್ಭವ್ ಕಾಣುತ್ತಿಲ್ಲವಲ್ಲ…?”
“ಅವ ಇವತ್ತು ಈ ಹೊತ್ತಿನಲ್ಲಿ ಅದ್ಯಾಕೋ ಮಲಗ್ಯಾನ. ಆಗಲೇ ಒಂಚೂರು ಊಟಮಾಡಿದಂಗ ಮಾಡಿ ಯಾಕೋ ನಿದ್ದೆಗೆ ಜಾರಿಬಿಟ್ಟ…”
“ಆರಾಮಿದ್ದಾನ ಹೌದಿಲ್ಲೋ…?”
“ಆರಾಮಾಗೇ ಅದಾನ. ಚಿಂತಿ ಮಾಡ್ಬ್ಯಾಡ ಅಭಿ.”
“ಸರಿ, ಸರಿ. ಮೊದ್ಲು ಒಂಚೂರು ಅವನ ಮುಖ ನೋಡ್ಕೊಂಡ್ಬಂದು ಕೈಕಾಲು ಮುಖ ತೊಳ್ಕೊಳ್ತೀನಿ. ಓಕೇನಾ…?”
“ಹೊರಗಿಂದ ಬಂದೀದಿ. ಮೊದ್ಲು ಕೈ, ಕಾಲು, ಮುಖ ತೊಳ್ಕೊಂಡು ಆಮ್ಯಾಗ ಪುಟ್ಟಾನ್ನ ನೋಡಲ್ಲಾ…? ನಾ ಹೇಳೋದು ಸರಿ ತಾನೇ…?”
“ಹೌದೌದು ಆರೂ, ನೀ ಹೇಳೋದು ವಾಜಿಮಿ ಐತಿ. ನೀ ಹೇಳ್ದಂಗ ಕೈ, ಕಾಲು, ಮುಖ ತೊಳ್ಕೊಂಡು ಹೃದ್ಭವ್‌ನನ್ನು ನೋಡ್ತೀನಿ.”
“ಅಷ್ಟೇ ಮಾಡು. ಎಷ್ಟಾದ್ರೂ ಅವ ನಿನ್ ಮುದ್ದಿನ ಮಗ. ಈಗ ನಾನ್ಯಾವ ಲೆಕ್ಕ ನಿನ್ಗೆ…? ಅವ ಧರೆಗಿಳಿದ ಮ್ಯಾಲೆ ನನ್ನ ಮರ್ತೇಬಿಟ್ಟೀದಿ…” ಆರಾಧನಾ ತುಸು ಕೋಪಿಸಿಕೊಂಡವಳಂತೆ ಅಭಿಷೇಕನೆದೆಗೆ ಬಾಣಬಿಟ್ಟಳು.
“ಅಯ್ಯೋ ಶಿವನೇ, ನೀ ಹೀಂಗ್ ತಿಳ್ಕೊಂಡ್ರೆ ನಾ ಏನ್ ಮಾಡ್ಲಿ…? ರಾಣಿ ಸಾಹೇಬ್ರಿಗೆ ಸಿಟ್ಟು ಬಂದಂಗ ಕಾಣ್ಲಿಕತ್ತೇದ… ಹಂಗೇನಿಲ್ಲ ಪುಟ್ಟಾ. ಹಂಗಾದ್ರೆ ನಿನ್ನೇ ಮೊದ್ಲು ಮುದ್ದುಮಾಡ್ತೀನಿ” ಎಂದೆನ್ನುತ್ತಾ ಅಭಿಷೇಕ್ ಮುದ್ದಿನ ಮಡದಿ ಆರಾಧನಾಳನ್ನು ಬಿಗಿದಪ್ಪಿಕೊಂಡು ಸಮಾಧಾನಿಸಿದ.
“ಈಗ ಅಮ್ಮಾವ್ರಿಗೆ ಸಮಾಧಾನ ಆತಾ…?” ಅಭಿಷೇಕ್ ಆರಾಧನಾಳ ಸೇಬುಗೆನ್ನೆಗಳನ್ನು ನವಿರಾಗಿ ಹಿಂಡಿ ಬಟ್ಟೆ ಬದಲಿಸಿ ಮುದ್ದಿನ ಮಗರಾಯ ಹೃದ್ಭವನ ಹತ್ತಿರ ಹೋದ. ಮೂರು ವರ್ಷದ ಮಗು ಆರಾಮಾಗಿ ಮಲಗಿ ಸೊಂಪಾಗಿ ನಿದ್ದೆ ಮಾಡುತ್ತಿದ್ದ. ತುಂಬಿದ ಕೆನ್ನೆಗಳು ಮುದ್ದಿಸಲು ಆಹ್ವಾನ ನೀಡುವಂತಿದ್ದವು. ಅವನ ಕೆನ್ನೆಗಳ ಮೇಲೆ ನವಿರಾಗಿ ಬೆರಳಾಡಿಸಿ ಮೇಲ್ದುಪ್ಪಟ್ಟಾವನ್ನು ಸರಿಯಾಗಿ ಹೊದಿಸಿ ಹಾಲಿಗೆ ಬಂದ. ಆರಾಧನಾ ಅಡುಗೆ ಮನೆ ಸೇರಿಕೊಂಡಿರಬಹುದು ಎಂದಂದುಕೊಂಡ. ಟೀವಿ ಆನ್‌ಮಾಡಿದ. ಒಂದಿಷ್ಟು ನ್ಯಾಜ್‌ಚಾನಲ್‌ಗಳ ಮೇಲೆ ರಿಮೋಟ್ ಓಡಾಡಿಸಿದ. ಎಲ್ಲಾ ಚಾನಲ್‌ಗಳಲ್ಲಿ ಹೇಳಿದ್ದೇ ಹೇಳೋ ಕಿಸುಬಾಯಿ ದಾಸ ಎಂಬಂತೆ ಯಾವುದೋ ಒಂದು ಅನ್‌ವಾಂಟೆಡ್ ಸುದ್ದಿ ಬಿತ್ತರವಾಗುತ್ತಿತ್ತು. ಬರೀ ಊಹಾ-ಪೋಹಗಳ ಸುದ್ದಿ. ನಿಖರವಾದ ಮಾಹಿತಿಯೇ ಇರಲಿಲ್ಲ. ಎಲ್ಲೋ ಒಂದೆರಡು ಕಡೆಗೆ ಚೂರು ಚೂರು ಅಂದರೆ ಒಂದು ಮಿಮೀ, ನಾಲ್ಕು ಮಿಮೀ ಮಳೆಯಾಗಿದ್ದನ್ನು ದಾಖಲೆಯ ಮಳೆಯೆಂದು ಬಿಂಬಿಸತೊಡಗಿದ್ದರು ಸ್ಕ್ರೋಲಿಂಗ್‌ನಲ್ಲಿ. ಒಂದು, ನಾಲ್ಕು ಮಿಮೀ ಮಳೆ ಇವರಿಗೆ ದಾಖಲೆಯ ಮಳೆಯಂತೆ. ಮಳೆಯ ಬಗ್ಗೆ ಇವರಿಗೆ ಕನಿಷ್ಠ ಜ್ಞಾನವೂ ಇಲ್ಲವಲ್ಲ ಎಂದಂದುಕೊಂಡು ಅಭಿಷೇಕ್ ತುಂಬಾ ನೊಂದುಕೊಂಡ. ಟೀವಿ ನೋಡುವುದು ಬೇಡವೆಂದುಕೊಂಡು ಆಫ್‌ಮಾಡಿದ. ಟೀಪಾಯ್ ಮೇಲಿದ್ದ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದ. ತುಸು ಹೊತ್ತಾಯಿತು. ಆರಾಧನಾ ಹೊರಗೆ ಬರಲಿಲ್ಲ. ʻಯಾಕೋ ಇವಳು ಇವತ್ತು ತುಂಬಾ ಬಿಜಿ ಅಂತ ಕಾಣ್ತಿದೆ…?ʼ ಎಂದಂದುಕೊಂಡ ಮನದಲ್ಲೇ.
*****
ಅಡುಗೆ ಮನೆ ಸೇರಿದ್ದ ಆರಾಧನಾಳ ಮನಸ್ಸು ಅದೇಕೋ ಸ್ಥಿಮಿತ ಕಳೆದುಕೊಂಡಿತ್ತು. ಆತಂಕಕ್ಕೆ ಒಳಗಾಗಿತ್ತು, ಯೋಚನೆಯಲ್ಲಿ ಮುಳುಗಿತ್ತು, ತಾಕಲಾಟದಲ್ಲಿ ಬಿದ್ದಿತ್ತು. ಅದಕ್ಕೆ ಒಂದಿಷ್ಟು ಕಾರಣಗಳೂ ಇದ್ದವು.
“ಈ ಮಲ್ಲಿಕಾರ್ಜುನಪ್ಪ ಅಂದರೆ ನಮ್ಮಾವ, ಅದೇ ಅಭಿಷೇಕನ ತಂದೆ. ರಾಜ್ಯದ ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಅಂತ ನಿವೃತ್ತರಾದವರು. ನಿವೃತ್ತರಾಗಿ ಐದು ವರ್ಷ ಆಗಿವೆ. ಭಾರೀ ಖಡಕ್ ಆಸಾಮಿ. ಶಿಸ್ತಿನ ಸಿಪಾಯಿ, ಒಳ್ಳೇ ಕೆಲಸಗಾರ, ಕಟ್ಟುನಿಟ್ಟಿನ ವ್ಯಕ್ತಿ. ಹಂಗೇ ಗತ್ತಿನ ಮನುಷ್ಯಾನೂ ಹೌದು. ಇವ್ರ ಕೈಕೆಳ್ಗೆ ಕೆಲ್ಸ ಮಾಡಿದ ನೌಕರರು ಇವರೆಂದರೆ ಥರಗುಟ್ಟಿ ನಡುಗುತ್ತಿದ್ದರಂತೆ. ಕೆಲಸದಲ್ಲಿ ಅಷ್ಟೇ ಶ್ರದ್ಧೆ ಇತ್ತು. ಕೈ, ಬಾಯಿ ಶುದ್ದ ಇಟ್ಟುಕೊಂಡಿದ್ದರಿಂದ ಅವರಿವರು ಇವರ ಮುಂದೆ ತಮ್ಮ ಬಾಲ ಬಿಚ್ಚುತ್ತಿದ್ದಿಲ್ಲವಂತೆ. ಬಡಬಗ್ಗರಿಗಾಗಿ ಇವರ ಹೃದಯ ಮಿಡಿಯುತ್ತಿತ್ತಂತೆ. ಸರಕಾರದ ಸುತ್ತೋಲೆಗಳ ಪ್ರಕಾರ ಜನರಿಗೆ ಸಹಾಯ ಮಾಡುತ್ತಿದ್ದರಂತೆ.
ನನಗೆ ಅಭಿಯ ಪರಿಚಯವಾಗಿದ್ದು ಬಿಎಸ್ಸಿ ಓದುತ್ತಿದ್ದಾಗ. ಅವನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ. ನಾನು ಕೆಎಲ್‌ಇಯ ಪಿಸಿಜಾಬಿನ್ ಕಾಲೇಜಿನಲ್ಲಿ ಓದುತ್ತಿದ್ದರೆ ಅಭಿಷೇಕ್ ಬಿವಿಬಿ ಇಂಜನಿಯರಿಂಗ್ ಕಾಲೇಜಿನಲ್ಲಿ ಬಿಇ ಓದುತ್ತಿದ್ದ. ಎರಡೂ ಕಾಲೇಜುಗಳು ಅಕ್ಕಪಕ್ಕಲ್ಲೇ ಇರುವವಲ್ಲವೇ? ನಾನು ಮೊದಲನೆಯ ವರ್ಷ ಬಿಎಸ್ಸಿಯಲ್ಲಿದ್ದಾಗ ಅವನು ಬಿಇ ಎರಡನೇ ವರ್ಷದಲ್ಲಿ ಓದುತ್ತಿದ್ದ. ಆಗ ನನ್ನಪ್ಪ ಹುಬ್ಬಳ್ಳಿಯ ವಿದ್ಯಾನಗರ ಶಾಲೆಯಲ್ಲೇ ಶಿಕ್ಷಕನಾಗಿದ್ದ. ಮನೇನೂ ವಿದ್ಯಾನಗರದ ಸಾವಿತ್ರಿ ಬಡಾವಣೆಯಲ್ಲಿ ಇತ್ತು. ನನ್ನ ಊರೂ ಹುಬ್ಬಳ್ಳಿ ತಾಲೂಕಿನ ಒಂದು ಹಳ್ಳಿಯೇ.
ಕರ್ನಾಟಕ ರಾಜ್ಯೋತ್ಸವ ದಿನದಂದು ಬಿವಿಬಿ ಕಾಲೇಜಿನಲ್ಲಿ ಹುಬ್ಬಳ್ಳಿಯ ಲೋಕಲ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಭಾವಗೀತೆ ಸ್ಪರ್ಧೆ ಇತ್ತು. ನಾನೂ ಭಾಗವಹಿಸಿದ್ದೆ. ಅಭಿಷೇಕನೂ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದ. ಅಭಿಷೇಕ್ ಕುವೆಂಪು ಅವರ, ʻಓ ನನ್ನ ಚೇತನ, ಆಗು ನೀ ಅನಿಕೇತನ…ʼ ಎಂಬ ಅಮೋಘ ಕಾವ್ಯಕೃತಿಗೆ ಭಾವ ತುಂಬಿದ್ದ, ಮಾಧುರ್ಯ ತುಂಬಿದ್ದ. ಹಾಡಿನೊಳಗೆ ತಾನೂ ಹಾಡಾಗಿದ್ದ. ನಾನು ಡಾ.ಜಿ ಎಸ್ ಶಿವರುದ್ರಪ್ಪನವರ, ʻಎದೆ ತುಂಬಿ ಹಾಡಿದೆನು ಅಂದು ನಾನು. ಮನವಿಟ್ಟು ಕೇಳಿದಿರಿ ಅಲ್ಲಿ ನೀವು…ʼ ಎಂಬ ಭಾವಗೀತೆಗೆ ನನ್ನ ಮಧುರ ಕಂಠ ನೀಡಿದ್ದೆ. ನಮ್ಮಂತೆ ಇನ್ನೂ ಹಲವರು ತುಂಬಾ ಮಧುರ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದ್ದರು. ಅಂತಿಮವಾಗಿ ಬಹುಮಾನಗಳನ್ನು ಘೋಷಿಸಿದಾಗ ಅಭಿಷೇಕನಿಗೆ ಪ್ರಥಮ, ನನಗೆ ದ್ವಿತೀಯ ಮತ್ತು ಜಿಎಸ್ ಶಿವರುದ್ರಪ್ಪನವರ, ʻನೀನು ಮುಗಿಲು ನಾನು ನೆಲ, ನಿನ್ನ ಒಲವೇ ನನ್ನ ಬಲ, ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ…ʼ ಎಂಬ ಭಾವಗೀತೆಗೆ ಜೀವ ತುಂಬಿದ್ದ ಅಂಜುಮನ್‌ಕಾಲೇಜಿನ ತಾಹಿರಾ ಎಂಬ ಬೆಡಗಿಗೆ. ವಿಜೇತರಿಗೆ ಚೆಪ್ಪಾಳೆಗಳೊಂದಿಗೆ ಹಷೋದ್ಘಾರವಾಯಿತು. ಪ್ರಶಸ್ತಿ ವಿತರಣೆಯ ಸಮಾರಂಭದ ನಂತರ ನಾನು ಅಭಿಷೇಕ್ ಮತ್ತು ತಾಹಿರಾ ಅವರನ್ನು ಮುದ್ದಾಂ ಭೆಟ್ಟಿಯಾಗಿ ಅಭಿನಂದಿಸಿ ಸಂಭ್ರಮಿಸಿದ್ದೆ. ನನ್ನಂತೆ ಅವರೂ ನನ್ನ ಅಭಿನಂದಿಸಿ ಸಂಭ್ರಮಿಸಿದ್ದರೆನ್ನಿ. ಆಗ ನಾನು ಈ ನನ್ನ ಅಭಿಷೇಕನನ್ನು ಗಮನಿಸಿ ನೋಡಿದ್ದು. ಒಳ್ಳೇ ಕ್ಯೂಟ್ ಅಂಡ್ ಹ್ಯಾಂಡ್ಸಮ್ ಹುಡುಗ ಎಂದೆನಿಸಿತು ನನ್ನ ಹರೆಯದ ಹೃದಯಕ್ಕೆ. ಆಸೆಗಣ್ಣುಗಳಿಂದ ಮೊಬೈಲ್ ನಂಬರ್ ಕೇಳಿದೆ. ಹುಡುಗಿ ಕೇಳುತ್ತಿರುವಾಗ ಇಲ್ಲವೆನ್ನಲಾಗುವುದೇ? ಫೋನ್ ನಂಬರ್ ಕೊಟ್ಟ. ಅಲ್ಲಿಂದ ಶುರುವಾದ ನಮ್ಮ ಮಾತುಕತೆಗಳು ದಿನಗಳೆದಂತೆ ಆತ್ಮೀಯ ಸ್ನೇಹಿತರಾಗಿಬಿಟ್ಟೆವು. ಆತ್ಮೀಯತೆ ಪ್ರೀತಿಗೆ ತಿರುಗಿದ್ದೂ ಆಯಿತು. ಹುಬ್ಬಳ್ಳಿ, ಧಾರವಾಡದ ರಸ್ತೆಗಳಲ್ಲಿ ಜೊತೆಯಾಗಿ ಓಡಾಡಿದ್ದೂ ಆಯಿತು.
ಅಭಿ ಬಿಇ ಮುಗಿಸಿಕೊಳ್ಳುವಷ್ಟರಲ್ಲಿ ಕ್ಯಾಂಪಸ್ ಸಿಲೆಕ್ಷನ್ ಆಗಿ ಪದವಿ ಮುಗಿಯುತ್ತಲೇ ಬೆಂಗಳೂರು ಸೇರಿಕೊಂಡ. ನಾನು ಬಿಎಸ್ಸಿ ಮುಗಿಸಿಕೊಂಡು ಎಂಎಸ್ಸಿಗೆ ಧಾರವಾಡ ಸೇರಿಕೊಂಡೆ. ಇಬ್ಬರ ಮಾತುಗಳು ಫೋನಲ್ಲಿ ಕಳೆಗಟ್ಟುತ್ತಿದ್ದವು. ಎಂಎಸ್ಸಿ ಮುಗಿಯುತ್ತಲೇ ಬಿಎಡ್ ಮಾಡಿಕೊಂಡೆ. ಕೊನೆಗೆ ಹಿರಿಯರ ಒಪ್ಪಿಗೆ, ಆಶೀರ್ವಾದಗಳಿಂದ ಮದುವೆಯ ಬಂಧನದಲ್ಲೂ ಸಿಲುಕಿದ್ದೂ ಆಯಿತು.
ಅಭಿಷೇಕ್ ನಮ್ಮ ಪ್ರೀತಿಯ ಪುರಾಣವನ್ನು ಮನೆಯಲ್ಲಿ ಪ್ರಸ್ತಾಪಿಸಿದಾಗ ಅವನ ತಂದೆ, ʻನೋಡಪ್ಪಾ ಅಭಿ, ನೀನು ಇಂಜಿನಿಯರಿಂಗ್ ಓದಿದವ. ನೌಕರಿ ಅಂತ ಬೆಂಗಳೂರು ಸೇರಿದವ. ಆರಾಧನಾ ಬಿಎಸ್ಸಿ, ಎಂಎಸ್ಸಿ, ಬಿಎಡ್ ಮಾಡಿಕೊಂಡವಳು. ಅವಳು ಇಲ್ಲೇ ಎಲ್ಲಾದರೂ ಟೀಚರ್ ಆಗೋಳು, ಇಲ್ಲಾ ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸರಕಾರಿ ಇಲಾಖೆಯಲ್ಲಿ ನೌಕರಿಗೆ ಸೇರೋಳು. ಯಾಕಂದರೆ ಈಗಿನ ಓದಿದ ಹೆಣ್ಣುಮಕ್ಕಳು ನೌಕರಿ ಮಾಡಬೇಕು ಅನ್ನೋರು. ಹಂಗಾದರೆ ನೀನೊಂದು ತೀರ, ಅವಳೊಂದು ತೀರ ಎಂಬಂತಾಗುತ್ತದೆ. ಸಂಸಾರ ಅಂದರೆ ಗಂಡ-ಹೆಂಡತಿ ಒಂದೇ ಕಡೆಗೆ ಇದ್ದರೆ ಚೆಂದ ಅಂತ ನಾ ಅನ್ನುವವ. ನಿಮ್ಮವ್ವ ಮನೆ ನೋಡಿಕೊಂಡು ಹೋಗುತ್ತಿದ್ದಳು, ನಾನು ನೌಕರಿ ಮಾಡುತ್ತಿದ್ದೆ. ನಾವು ಒಂದೇ ಕಡೆಗೆ ಇದ್ದು ಚೆಂದಾಗಿ ಬಾಳೇವು ಮಾಡಿದಿವಿ. ಆಮ್ಯಾಲೆ ನೀವು ಅದು ಆಯಿತು, ಇದು ಆಯಿತು, ನಮ್ಮಿಬ್ಬರ ನಡುವೆ ಹೊಂದಾಣಿಕೆ ಅಗಲೊಲ್ಲದು ಅಂತ ಪರಸ್ಪರ ಆರೋಪ ಮಾಡೋದು, ಜಟಾಪಟಿ ಅಗೋದು ಸಾಮಾನ್ಯ. ಅದಕ್ಕೇ ಮದುವೆಗೆ ಮುಂಚೇನೇ ಸರಿಯಾಗಿ ಯೋಚಿಸಿ ನಿರ್ಧಾರಕ್ಕೆ ಬಾʼ ಅಂತ ಹಿತೋಪದೇಶ ಮಾಡಿದ್ದರು. ʻಅಪ್ಪಾಜೀ, ನಾನು, ಆರಾಧನಾ ಈ ಎಲ್ಲಾ ಸಾಧಕ-ಬಾಧಕಗಳ ಬಗ್ಗೆ ಕೂಲಂಕಶವಾಗಿ ಚರ್ಚಿಸಿ ಆಮೇಲೆ ಮದುವೆಯ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೇವೆ. ಅವಳಿಗೆ ಬೆಂಗಳೂರಲ್ಲೇ ನೌಕರಿಗೆ ಪ್ರಯತ್ನ ಮಾಡುತ್ತೇವೆ. ಹಾಗೊಂದು ವೇಳೆ ನಮ್ಮ ಕಡೆಗೇ ನೌಕರಿ ಸಿಕ್ಕರೆ ಎಂಎಲ್‌ಎ, ಎಂಪಿ, ಸಚಿವರು ಯಾರದಾದರೂ ಕೈಕಾಲು ಹಿಡಿದು ಬೆಂಗಳೂರಿಗೆ ವರ್ಗ ಮಾಡಿಸಿಕೊಳ್ಳುತ್ತೇವೆ. ನಿಮಗೂ ಸಾಕಷ್ಟು ಜನ ಜನಪ್ರತಿನಿಧಿಗಳ ಪರಿಚಯವೂ ಇದೆ ಎಂಬುದು ನನಗೆ ಗೊತ್ತು. ಹಾಗೊಂದು ವೇಳೆ ಅವಳಿಗೆ ನೌಕರಿಯದು ಬಹಳ ತ್ರಾಸು ಆದರೆ ನೌಕರೀನೇ ಬೇಡ ಅಂತಾನೂ ಅಂದುಕೊಂಡಿದ್ದೇವೆ. ಜೀವನ ಮಾಡಲಿಕ್ಕೆ ಇಬ್ಬರೂ ನೌಕರಿ ಮಾಡಬೇಕಂತ ಏನಿಲ್ಲʼ ಅಂತ ಅಭಿ ಸಮಜಾಯಿಸಿ ನೀಡಿದ್ದ. ಅವರು ತುಂಬು ಹೃದಯದಿಂದ ನಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದರೋ ಇಲ್ಲವೋ? ಏಕೆಂದರೆ ನಮ್ಮ ಮದುವೆಯಾದಾಗಿನಿಂದ ಅವರು ನನ್ನನ್ನು ಆತ್ಮೀಯ ಭಾವದಿಂದ ನೋಡಿಕೊಂಡಿದ್ದು ಅಷ್ಟಕಷ್ಟೇ ಅಂತ ಅನಿಸಿಕೆ. ಯಾವುದನ್ನೂ ಅವರು ಬಾಯಿಬಿಚ್ಚಿ ಹೇಳಿದವರಲ್ಲ. ನನಗೂ, ಅವರಿಗೂ ಮಾತುಗಳು ಕಳೆಗಟ್ಟಿದ್ದು ಅಷ್ಟಕಷ್ಟೇ. ಅಂಥಹ ಅವಶ್ಯಕತೆಯೂ ಬಂದಿಲ್ಲವಾದರೂ ನಮ್ಮಿಬ್ಬರ ನಡುವೆ, ʻಟು ದಿ ಪಾಯಿಂಟ್ʼ ಎಂಬಂತೆ ಅಷ್ಟೇ ಮಾತುಕತೆಗಳು ನಡೆದಿವೆ.
ಖಾಸಗಿ ಪ್ರೌಢಶಾಲೆಯಲ್ಲಿ ಟೀಚರ್ತಿಯಾಗಿ ಆರು ತಿಂಗಳು ಕೆಲಸ ಮಾಡಿದೆ. ಅಷ್ಟರಲ್ಲಿ ಸರಕಾರಿ ಶಾಲೆಯಲ್ಲಿ ಕೆಲಸವೂ ಸಿಕ್ಕಿತು. ಶಿರಸಿಗೆ ಪೋಸ್ಟಿಂಗ್ ಆಗಿತ್ತು. ಸೇರಿಕೊಂಡೆ. ಆ ವರ್ಷದ ತರಗತಿ ಮುಗಿದು ಮುಂದಿನ ವರ್ಷ ಶಾಲೆಗಳು ಪ್ರಾರಂಭವಾಗುವಷ್ಟರಲ್ಲಿ ಅವರಿವರ ಕೈಕಾಲು ಹಿಡಿದು ವರ್ಗಮಾಡಿಸಿಕೊಂಡು ಬೆಂಗಳೂರು ಸೇರಿಕೊಂಡೆ. ಅಭಿ, ನಾನು ಒಂದೇ ಕಡೆಗೆ ಆದೆವು.
ಈಗ ಏಕಾಯೇಕಿ ಮಾವನವರು ನಮ್ಮಲ್ಲಿಗೆ ಬರುತ್ತಾರೆಂಬ ವಿಷಯ ತಿಳಿದು ನಾನು ನಿಜವಾಗಿಯೂ ಒಂದಿಷ್ಟು ಗಾಬರಿಗೇ ಬಿದ್ದಿದ್ದೇನೆ ಎಂದರೆ ತಪ್ಪಲ್ಲ. ನನ್ನ ಮನಸ್ಸು ಆತಂಕದಲ್ಲಿ ಮುಳುಗಿರುವುದೂ ಸತ್ಯ. ಅವರದು ಬಾಗಲಕೋಟೆ ಜಿಲ್ಲೆಯ ಹುನಗುಂದ್. ಅಲ್ಲಿ ಸುಸಜ್ಜಿತವಾದ ಮನೆಯೂ ಇದೆ. ಈಗ್ಗೆ ಮೂರು ವರ್ಷಗಳ ಹಿಂದೆ ನನ್ನತ್ತೆ ಸುಶೀಲಾದೇವಿ ಲೋ ಬಿಪಿ ಅಂತ ಏಕಾಯೇಕಿ ತೀರಿಕೊಂಡರು. ʻನಿಮಗೆ ಊಟಕ್ಕೆ ತೊಂದರೆಯಾಗುತ್ತೆ, ನಮ್ಮ ಜೊತೆಗೆ ಬೆಂಗಳೂರಿಗೆ ಬಂದುಬಿಡಿರಿʼ ಅಂತ ನಾವು ಮಾವನವರಿಗೆ ಪರಿಪರಿಯಾಗಿ ಕೇಳಿಕೊಂಡರೂ ಬರಲೊಪ್ಪಲಿಲ್ಲ. ಒಂದಿಷ್ಟು ಜಮೀನು ಇದೆ ಅವರಿಗೆ. ʻಜಮೀನು ನೋಡಿಕೊಂಡು ಹೇಗೋ ಇರುತ್ತೇನೆ. ಬೆಂಗಳೂರಿನಲ್ಲಿ ನನಗ್ಯಾರೂ ಅಂಥಹ ಗೆಳೆಯರಿಲ್ಲ. ಇಲ್ಲಿ ಹೇಗೋ ಸಮಯ ಸರಿದು ಹೋಗುತ್ತದೆ. ಮನೆಯ ಕಸಮುಸುರೆ, ಅಡುಗೆಗೆ ನಿಯತ್ತಿನ ಒಬ್ಬ ಹೆಣ್ಣುಮಗಳನ್ನು ಗೊತ್ತುಮಾಡಿಕೊಳ್ಳುತ್ತೇನೆ. ನನಗೇನು ತ್ರಾಸಾಗುವುದಿಲ್ಲʼ ಎಂಬುದು ಅವರ ವಾದವಾಗಿತ್ತು. ತಮ್ಮ ಮನದಿಚ್ಛೆಗನುಣವಾಗಿ ಊರಲ್ಲೇ ಉಳಿದುಕೊಂಡರು. ಮನೆಗೆಲಸಕ್ಕೆ ಗೊತ್ತು ಮಾಡಿದ್ದ ಹೆಣ್ಣುಮಗಳು ಮಗಳ ಹೆರಿಗೆಗೆಂದು ಮಗಳ ಮನೆ ಸೇರಿಕೊಂಡಳಂತೆ. ಜೊತೆಗೆ ಕೊರೋನಾದ ಅಟ್ಟಹಾಸ ಬೇರೆ. ಅಲ್ಲಿ ಅವರಿಗೆ ತುಂಬಾ ತೊಂದರೆಯಾಗಲು ಶುರುವಾಗಿದ್ದರಿಂದ ಬೆಂಗಳೂರಿಗೆ ಬರುವ ನಿರ್ಧಾರ ತೆಗೆದುಕೊಂಡಿದ್ದಾರಂತೆ.
ಮಾವನವರು ಬೆಂಗಳೂರಿಗೆ ಬರುವುದನ್ನು ತಿಳಿದು ನನಗೆ ದಿಗಿಲಾಗಿದ್ದೇಕೆಂದರೆ ಅವರು ಮೊದಲೇ ತುಂಬಾ ಕಟ್ಟುನಿಟ್ಟಿನ ವ್ಯಕ್ತಿ. ಹೊತ್ತೊತ್ತಿಗೆ ಸರಿಯಾಗಿ ಟಿಫಿನ್, ಊಟ ಎಲ್ಲವೂ ಆಗಬೇಕು. ಅದೊಂದು ವೇಳೆ ಇಷ್ಟರಲ್ಲೇ ಲಾಕ್‌ಡೌನ್ ಆದರೆ ಮನೆಗೆಲಸ ಮಾಡುವ ಕುಸುಮಾ ಕೆಲಸಕ್ಕೆ ಬರುವುದಿಲ್ಲ. ಆಗ ಕಸ-ಮುಸುರೆ, ಮನೆ ಒರೆಸುವುದು, ಬಟ್ಟೆಬರೆ ತೊಳೆಯುವುದು, ಒಣಗ ಹಾಕುವುದು ಇತ್ಯಾದಿ ಎಲ್ಲವನ್ನೂ ನಾವೇ ಮಾಡಿಕೊಳ್ಳಬೇಕಾಗುತ್ತದೆ. ಮಗು ಹೃದ್ಭವನನ್ನು ನೋಡಿಕೊಳ್ಳುವ ಆಯಾಳೂ ಬರುವುದಿಲ್ಲ. ಅದೊಂದು ವೇಳೆ ಶಾಲೆಯ ಪಾಠಗಳನ್ನು ಆನ್‌ಲೈನಿನಲ್ಲಿ ಮಾಡಬೇಕೆಂದರೆ ನನಗೆ ಮನೆಗೆಲಸ ಮಾಡಿ, ಅಡುಗೆ ಮಾಡುವುದಕ್ಕೆ ಸಮಯವೇ ಸಿಗುವುದಿಲ್ಲ. ಅಭಿ ಅದೂ, ಇದೂ ಅಂತ ನನಗೆ ಕೆಲಸದಲ್ಲಿ ಒಂಚೂರು ಸಹಾಯ ಮಾಡಬಹುದಾದರೂ ಮೇಜರ್ ಕೆಲಸ ನನ್ನ ಮೇಲೆಯೇ ಬೀಳುತ್ತದೆ. ಕೆಲಸಗಳ ಜೊತೆಗೆ ಮಗುವನ್ನು ಹ್ಯಾಂಡಲ್ ಮಾಡುವುದೂ ಕಷ್ಟವೇ. ಹೀಗಾಗಿ ಮಾವನವರ ಬೇಕು-ಬೇಡಗಳನ್ನು ಅಟೆಂಡ್‌ಮಾಡುವುದೂ ಅಷ್ಟು ಸರಳವಾಗುವುದಿಲ್ಲ. ನನಗೇನೇ ತೊಂದರೆಯಾದರೂ ಮಾವನವರಿಗೆ ಎಳ್ಳಷ್ಟೂ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂಬುದೇ ನನ್ನ ಮನದಭೀಷ್ಠೆ. ಅವರು ಅದೆಷ್ಟೇ ಕಠಿಣವಾಗಿ ವರ್ತಿಸಿದರೂ ತಾಳ್ಮೆಯಿಂದ ಸಹಿಸಿಕೊಂಡು ದಿ ಬೆಸ್ಟ್‌ಸೇವೆ ಕೊಡಬೇಕೆಂಬುದು ನನ್ನ ಮನದಭಿಲಾಷೆ.” ಹೀಗೆ ಕೆಲವೊಂದಿಷ್ಟು ಕಳವಳ, ದುಗುಡಗಳಿದ್ದವು ಆರಾಧನಾಳ ಮನದಲ್ಲಿ.
*****
ಮಲ್ಲಿಕಾರ್ಜುನಪ್ಪ ಹೇಳಿದಂತೆ ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ಬಂದಿಳಿದರು. ಬಸ್ಸಿಳಿಯುತ್ತಲೇ ಕ್ಯಾಬ್ ಬುಕ್ ಮಾಡಿ ಅಭಿಷೇಕ್ ತಂದೆ ಮನೆಗೆ ಆರಾಮವಾಗಿ ಬರುವಂತೆ ವ್ಯವಸ್ಥೆ ಮಾಡಿದ. ಅಭಿಷೇಕ್, ಆರಾಧನಾ ಇಬ್ಬರೂ ನಗುಮೊಗದಿಂದಲೇ ಮಲ್ಲಿಕಾರ್ಜುನಪ್ಪನವರಿಗೆ ಸ್ವಾಗತ ಕೋರಿದರು. ಅವರೂ ನಗುಮೊಗದಿಂದಲೇ ಇವರ ಯೋಗಕ್ಷೇಮ ವಿಚಾರಿಸಿದರು. ಮೊಮ್ಮಗನನ್ನು ಎತ್ತಿಕೊಂಡು ಮುದ್ದಾಡಿದ್ದರು. ಆಸಾಮಿ ಒಂದಿಷ್ಟು ಕಳೆಕಳೆಯಾಗಿ ಕಂಡರು. ಮೊದಲಿನಂತೆ ಮಾತಿನಲ್ಲಿ ಬಿಗುಮಾನವಿರಲಿಲ್ಲ. ನಾನು, ಅಭಿ ಅವರನ್ನು ಟು ದಿ ಬೆಸ್ಟ್ ಆಫ್ ಅವರ್ ಕೆಪ್ಯಾಸಿಟಿ ಚೆನ್ನಾಗೇ ನೋಡಿಕೊಳ್ಳಬೇಕೆಂದು ತೀರ್ಮಾನಿಸಿದ್ದೆವು. ಅವರು ಮೊಮ್ಮಗನಿಗಾಗಿ ಒಂದಿಷ್ಟು ಆಟಿಕೆ ಸಾಮಾನುಗಳನ್ನು ತಂದಿದ್ದರು. ನಾವು ಶಾಲೆಗೆ, ಆಫೀಸಿಗೆ ಹೋಗುವಾಗ ಸಾಮಾನ್ಯವಾಗಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಹೋಗುವುದನ್ನು ರೂಢಿಸಿಕೊಂಡಿದ್ದೆವು. ನನ್ನ, ಅಭಿಯ ಅನುಪಸ್ಥಿತಿಯಲ್ಲಿ ಮಾವನವರು ಹೃದ್ಭವನೊಂದಿಗೆ ಸಕತ್ತಾಗಿ ಆಟವಾಡಿಕೊಂಡು ಖುಷಿಖುಷಿಯಿಂದ ಸಮಯವನ್ನು ತಳ್ಳತೊಡಗಿದ್ದರು.
ಸರಕಾರ ಇಂದು ಲಾಕ್‌ಡೌನ್ ಮಾಡಬಹುದು, ನಾಳೆ ಮಾಡಬಹುದು ಎಂಬ ಆತಂಕದ ಊಹಾಪೋಹ ಸುದ್ದಿಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಜನತೆ ಒಂಥರ ಉಸಿರುಗಟ್ಟಿದ ವಾತಾವರಣದಲ್ಲೇ ಜೀವನ ತಳ್ಳತೊಡಗಿದ್ದರು. ಮಾವನವರು ಬೆಂಗಳೂರಿಗೆ ಬಂದು ನಾಲ್ಕೈದು ದಿನಗಳು ಸರಿದು ಹೋಗಿದ್ದೇ ಗೊತ್ತಾಗಲಿಲ್ಲ. ಅದೊಂದು ದಿನ ಸಂಜೆ ಸರಕಾರ ಮರುದಿನದಿಂದ ಲಾಕ್‌ಡೌನ್ ಮಾಡುವ ಕಹಿ ಸುದ್ದಿಯನ್ನು ಘೋಷಿಸಿತ್ತು. ಅಭಿಗೆ ವರ್ಕ್ ಫ್ರಮ್ ಹೋಮ್ ಶುರುವಾಯಿತು. ನಾನೂ ಆನ್‌ಲೈನ್ ತರಗತಿಗಳನ್ನು ನಡೆಸಬೇಕಾಯಿತು. ಸಾರ್ವಜನಿಕರೆಲ್ಲರಿಗೂ ಒಂಥರ ದಿಗ್ಬಂಧನ ಶುರುವಾಯಿತು. ಮನೆಯಿಂದ ಹೊರಗೆ ಹೋಗುವುದಕ್ಕೆ ಭಯವೆನಿಸುವ ವಾತಾವರಣದಲ್ಲಿ ಜೀವನವನ್ನು ನಡೆಸಬೇಕಾಯಿತು. ಅನಿವಾರ್ಯವಾಗಿ ಏನಾದರೂ ಅಗತ್ಯದ ಸಾಮಾನುಗಳನ್ನು ತರಬೇಕೆಂದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಅನುಭವವಾಗತೊಡಗಿತು. ಮನೆಗೆಲಸದ ಕುಸುಮಾ, ಹೃದ್ಭವನನ್ನು ನೋಡಿಕೊಳ್ಳುವ ಸಿಮಾ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದರು. ಹೇಗಪ್ಪಾ, ಎಲ್ಲಾ ಕೆಲಸಗಳನ್ನು ನಿಭಾಯಿಸುವುದು ಎಂಬ ಆತಂಕ ಭುಗಿಲೆದ್ದಿತು ಮನದಲ್ಲಿ. ಅಭಿ ಸಂಗಡ ಚರ್ಚಿಸಿದಾಗ, ʻಎಲ್ಲರಂತೆ ನಾವೂ ಅಷ್ಟೇ. ನಿಭಾಯಿಸೋಣʼ ಎಂದನಾದರೂ ಅವನ ಮನದಲ್ಲಿ ಅಳುಕು ತುಂಬಿಕೊಂಡಿದ್ದು ಢಾಳಾಗಿ ಕಾಣುತ್ತಿತ್ತು.
ನಮ್ಮದೋ ಇಂಡೆಪೆಂಡೆಂಟ್ ಹೌಸ್. ಕಂಪೌಂಡಿನಲ್ಲಿ ಕೈತೋಟವಿದ್ದು ಅಲಂಕಾರಿಕ ಹೂವುಗಳಾದ ಇಕ್ಷೋರಾ, ದಾಸವಾಳ, ಗುಲಾಬಿ ಕಂಟಿಗಳ ಜೊತೆಗೆ ಒಂದಿಷ್ಟು ಹೂವಿನ ಬಳ್ಳಿಗಳೂ, ಕಂಟಿಗಳೂ ಇವೆ. ಮಗುವನ್ನು ನೋಡಿಕೊಳ್ಳುವ ಆಯಾನೇ ಆ ಕಂಟಿ, ಬಳ್ಳಿಗಳಿಗೆ ನೀರುಣಿಸುವ ಕೆಲಸವನ್ನು ಮಾಡುತ್ತಿದ್ದಳು. ಸಂಪಿನಿಂದ ಓವರ್‌ಹೆಡ್ ಟ್ಯಾಂಕಿಗೆ ನೀರು ಏರಿಸುವುದನ್ನು ಕುಸುಮಾ ನೋಡಿಕೊಳ್ಳುತ್ತಿದ್ದಳು. ಈಗ ಕಸ-ಮುಸುರೆ, ಬಟ್ಟೆ ತೊಳೆಯುವುದು, ಗಿಡಗಳಿಗೆ ನೀರುಣಿಸುವುದು, ಪುಟ್ಟಾನನ್ನು ಹಿಡಿಯುವುದು ಎಲ್ಲವನ್ನೂ ನಾನು, ಅಭಿ ನೋಡಕೊಳ್ಳಬೇಕು ಅಷ್ಟೇ. ಜೊತೆಗೆ ತುತ್ತಿನ ಚೀಲ ತುಂಬಿಸುವ ಉದ್ಯೋಗದ ಕೆಲಸ. ಮತ್ತೆ ಅಡುಗೆ ಕೆಲಸವೂ. ಅದಕ್ಕೇ ಕೆಲವು ವರ್ಷಗಳ ಹಿಂದೆ ಗಂಡಸು ಹೊರಗಡೆ ದುಡಿದರೆ ಹೆಂಗಸು ಮನೆಯಲ್ಲಿದ್ದುಕೊಂಡು ಮನೆ, ಮಕ್ಕಳನ್ನು ನಿಭಾಯಿಸುತ್ತಿದ್ದಳು. ಈಗ ಹೆಣ್ಣೂ ಗಂಡಿಗೆ ಸರಿಸಮಾನಳಾಗಿ ಹೊರಗೆ ದುಡಿಯುತ್ತಿದ್ದಾಳೆ. ಹೊರಗಿನ ಉದ್ಯೋಗದ ಜೊತೆಗೆ ಬಹಳಷ್ಟು ಜನ ಹೆಣ್ಣುಮಕ್ಕಳು ಈಗಲೂ ಮನೆಗೆಲಸ, ಮಕ್ಕಳನ್ನೂ ನೋಡಿಕೊಳ್ಳುತ್ತಿದ್ದಾರೆ. ಒತ್ತಡದಲ್ಲಿ ಜೀವನ ಸವೆಸುತ್ತಿದ್ದಾರೆ. ಒಬ್ಬರ ಆದಾಯ ಈಗಿನ ಜೀವನ ಶೈಲಿಗೆ ಸಾಕಾಗುವುದಿಲ್ಲ ಎಂಬ ಸಮರ್ಥನೆ ಹಲವರದು. ಹಾಗೆ ನೋಡಿದರೆ ಮೊದಲಿನ ಪರಿಕಲ್ಪನೆಯೇ ಸರಿ ಇತ್ತೇನೋ ಎಂದು ಕೆಲವೊಂದು ಅನಿಸುತ್ತಿದೆಯಾದರೂ ಐಷಾರಾಮಿ ಜೀವನಕ್ಕೆ ಹಣ ಬೇಕಲ್ಲವೇ? ಹೀಗಾಗಿ ಇಬ್ಬರೂ ದುಡಿಯುವುದು ಅನಿವಾರ್ಯವಾಗಿದೆ. ಹಾಸಿಗೆ ಇದ್ದಷ್ಟು ಕಾಲುಚಾಚಿ, ಇದ್ದುದರಲ್ಲೇ ತೃಪ್ತಿ ಕಂಡುಕೊಂಡರೆ ಎಲ್ಲವೂ ಚೆನ್ನವೇನೋ? ʻಈಗಿನಂತೆ ಬೆಳಗ್ಗೆ ಆರಕ್ಕೋ, ಆರೂವರೆಗೋ ಎದ್ದರೆ ಎಲ್ಲಾ ಕೆಲಸವನ್ನು ನಿಭಾಯಿಸುವುದಾಗುವುದಿಲ್ಲ, ನಾಲ್ಕೂವರೆಗೋ, ಐದಕ್ಕೋ ಏಳಬೇಕು ಅಷ್ಟೇʼ ಎಂದಂದುಕೊಂಡೆ.” ಹೀಗೆ ಒಂದಿಷ್ಟು ರೂಪುರೇಷೆಗಳನ್ನು ಹಾಕಿಕೊಂಡಳು ಆರಾಧನಾ ಹಾಸಿಗೆಗೆ ಬೆನ್ನೊಡ್ಡುವ ಮುಂಚೆ.
*****
ಆರಾಧನಾ ಮರುದಿನ ಬೆಳಗ್ಗೆ ಎದ್ದಾಗ ಆಗಲೇ ಆರೂವರೆ. ಅಭಿ ಇನ್ನೂ ಪವಡಿಸಿದ್ದ. ಗಡಬಡಿಸಿ ಎದ್ದು ಮೊದಲು ಕಂಪೌಂಡಿನಲ್ಲಿನ ಕಸಗೂಡಿಸಿದರಾಯಿತು ಎಂದು ಕಸಬರಿಗೆ ಹಿಡಿದುಕೊಂಡು ದೌಡಾಯಿಸಿದಳು. ಕಂಪೌಂಡಿನ ಪರಿಷೆ ಸ್ವಚ್ಛ ಎಂದೆನಿಸಿತು ಅವಳಿಗೆ. ಅಂಗಳಕ್ಕೆ ನೀರಿಂದ ಚಳ್ಳೇನೂ ಹೊಡೆದಾಗಿತ್ತು. ಆರಾಧನಾ ಹಾಗೇ ಮನೆಯೊಳಗೆ ಬಂದು ಸೂಕ್ಮವಾಗಿ ಗಮನಿಸಿದಳು. ಹಾಲಿನವನು ಬಾಗಿಲ ಮುಂದೆ ಇಡುತ್ತಿದ್ದ ಹಾಲಿನ ಪ್ಯಾಕೆಟ್ ಅಡುಗೆ ಮನೆ ಗ್ಯಾಸ್‌ಕಟ್ಟೆಯ ಮೇಲೆ ನಗುತ್ತಿತ್ತು. ಹಾಲ್, ಅಡುಗೆ ಮನೆ, ಡೈನಿಂಗ್, ಮಾವನವರು ಮಲಗಿದ್ದ ಕೋಣೆಯ ಕಡೆಗೆ ದೃಷ್ಟಿಹಾಕಿದಳು. ಅಲ್ಲೂ ಕಸ ಹೊಡೆದಾಗಿತ್ತು. ಮನೆಗೆಲಸದ ಕುಸುಮಾ ಬಂದಿರುವಳೇನೋ ಎಂದು ಶಂಕಿಸಿದಳು. ಆದರೆ ಆಕೆ ಬಂದಿರುವ ಯಾವ ಕುತುಹೂ ಕಾಣಲಿಲ್ಲ. ಆಕೆ ಪ್ರತಿ ದಿನ ತನ್ನ ಜೊತೆಗೆ ತರುತ್ತಿದ್ದ ಸಾಮಾನುಗಳ್ಯಾವೂ ಕಣ್ಣಿಗೆ ಬೇಳಲಿಲ್ಲ. ಅಂದರೆ…? ʻಮಾವನವರೇ ಈ ಎಲ್ಲಾ ಕೆಲಸ ಮಾಡಿರಬಹುದೇ…?ʼ ಎಂಬ ಅನುಮಾನವೂ ಅವಳೆದೆಯನ್ನು ಕಾಡಿತು ಅರೆಕ್ಷಣ. ಅಷ್ಟರಲ್ಲಿ ಬಾಥ್‌ರೂಮಿಗೆ ಹೋಗಿದ್ದ ಮಾವನವರು ಹೊರಗೆ ಬಂದರು.
“ಮಾವಾ, ಕಂಪೌಂಡ್ ಮತ್ತು ಮನೆಯೊಳಗಿನ ಕಸಗಿಸ ಹೊಡೆದಿದ್ದು ನೀವಾ…?” ಎದೆಯೊಳಗೆ ತುಡಿಯುತ್ತಿದ್ದ ಮಾತುಗಳನ್ನು ಆರಾಧನಾ ಹೊರಗಿಟ್ಟಳು.
“ಹೌದಮ್ಮಾ” ಎಂದರು ಮಲ್ಲಿಕಾರ್ಜುನಪ್ಪ ತಣ್ಣನೆಯ ದನಿಯಲ್ಲಿ.
“ಹೌದಾ…? ನೀವ್ಯಾಕೆ ಆ ಕೆಲಸ ಮಾಡುವುದಕ್ಕೆ ಹೋಗಿದ್ದಿರಿ…? ಇವತ್ತು ನಾನು ಏಳುವುದಕ್ಕೆ ತುಸು ತಡವಾಯಿತು. ನಾಳೆಯಿಂದ ಆ ಕೆಲಸ ನೀವು ಮಾಡಬೇಡಿರಿ ಪ್ಲೀಜ್…” ಮುಜುಗರಕ್ಕೊಳಗಾಗಿದ್ದ ಆರಾಧನಾ ಗೋಗರೆದಳು.
“ಮಗಳೇ, ಇಲ್ಲಿ ನನಗೇನು ಕೆಲಸವಿದೆ? ಆ ಕೆಲಸದಲ್ಲಿ ನನಗೆ ಒಂದಿಷ್ಟು ಸಮಯ ಸರಿದು ಹೋಗುತ್ತದೆ. ಇದರಿಂದ ಗಂಡ-ಹೆಂಡತಿ ನಿಮಗೆ ನಿಮ್ಮ, ನಿಮ್ಮ ಕೆಲಸ ಮಾಡಿಕೊಳ್ಳಲು ಸಮಯ ಸಿಗುತ್ತದೆ. ನೀನೇನು ಬೇಸರ ಮಾಡಿಕೊಳ್ಳಬೇಡ.”
“ಮಾವಾ, ಆದರೂ…?” ಆರಾಧನಾಳ ಮುಖದಲ್ಲಿ ತಪ್ಪಿತಸ್ಥ ಭಾವನೆ ಇತ್ತು.
“ಆರಾಧನಾ, ಈ ಕೊರೋನಾ ಹೆಮ್ಮಾರಿಯ ಸಂದಿಗ್ಧ ಸಮಯದಲ್ಲಿ ನಾನು ನಿಮ್ಮ ಜೊತೆಗಿದ್ದು ತುಸು ಮನೆಗೆಲಸದಲ್ಲಿ ನೆರವಾಗುತ್ತಾ ಮಗು ಹೃದ್ಭವನನ್ನು ಸಂಭಾಳಿಸಿದರೆ ನಿಮಗೆ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಅನುಕೂಲವಾಗಬಹುದು ಎಂದಂದುಕೊಂಡೇ ನಾನಿಲ್ಲಿಗೆ ಬಂದಿರುವುದು. ಕೊರೋನಾ ಕಣ್ಮರೆಯಾಗುವವರೆಗೆ ಈ ಎಲ್ಲಾ ಕೆಲಸಗಳನ್ನು ನಾನೇ ನೋಡಿಕೊಳ್ಳುವೆ. ಇದು ನನ್ನ ಆದ್ಯ ಕರ್ತವ್ಯವೂ ಹೌದು. ನೀನು ಅಡುಗೆ, ನಿನ್ನ ಶಾಲೆ ಕೆಲಸ ನೋಡಿಕೊಂಡರೆ ಸಾಕು. ವಾಷಿಂಗ್‌ಮಶಿನ್‌ಗೆ ನಾನೇ ಬಟ್ಟೆಹಾಕುವೆ. ಸಂಪಿನಿಂದ ಮೇಲಿನ ಟ್ಯಾಂಕಿಗೆ ನೀರನ್ನು ಏರಿಸುವ ತಾಪತ್ರಯವನ್ನೂ ತೆಗೆದುಕೊಳ್ಳಬೇಡ. ನನ್ನ ಕೈಲಾದದ್ದೆಲ್ಲವನ್ನೂ ಮಾಡುವೆ. ಸಾಧ್ಯವಾದರೆ ನಾಳೆ ಬೆಳಗ್ಗೆ ಇನ್ನೂ ತುಸು ಹೊತ್ತು ಬೇಗ ಎದ್ದು ಮಾಸ್ಕ್‌ಧರಿಸಿ ಒಂದಿಷ್ಟು ಬೆಳಗಿನ ವಾಯುವಿಹಾರವನ್ನೂ ಮುಗಿಸಿಕೊಳ್ಳಬೇಕೆಂದೂ ಅಂದಿದ್ದೇನೆ. ಪುಟ್ಟಾ ಎದ್ದಕೂಡಲೇ ಅವನ ಸ್ನಾನ, ಇತರೆ ಎಲ್ಲ ಕೆಲಸಗಳನ್ನು ನಾನೇ ನೋಡಿಕೊಳ್ಳುವೆ. ಮೊದಲಿನಿಂದಲೂ ಈ ಜೀವ ಖಾಲಿ ಕೂತದ್ದಿಲ್ಲ. ಏನಾದರೂ ಒಂದು ಕೆಲಸದಲ್ಲಿ ತೊಡಗಿಕೊಂಡರೆ ಮನುಷ್ಯ ಉಲ್ಲಸಿತನಾಗಿರಲು ಸಾಧ್ಯ. ಹಾಗೇ ಟೈಮ್ ಪಾಸಿಗೆಂದು ಹತ್ತದಿನೈದು ಪುಸ್ತಕಗಳನ್ನೂ ತಂದಿದ್ದೇನೆ. ಅದೇನೂ ಯೋಚಿಸದೇ ನೀನು ನಿನ್ನ ಕೆಲಸದ ಕಡೆಗೆ ಗಮನಕೊಡು.” ಮಲ್ಲಿಕಾರ್ಜುನಪ್ಪ ಆರಾಧನಾಳಿಗೆ ಮಾತಾಡುವ ಅವಕಾಶವನ್ನೇ ಕೊಡಲಿಲ್ಲ.
ಮಲ್ಲಿಕಾರ್ಜುನಪ್ಪನವರ ಕೆಲಸ ಅಷ್ಟಕ್ಕೇ ನಿಲ್ಲಲಿಲ್ಲ. ಮಧ್ಯಾಹ್ನದ ಟೀ ಟೈಮಲ್ಲಿ ಟೀಮಾಡಿ ಫ್ಲಾಸ್ಕಿನಲ್ಲಿ ಹಾಕಿ ಮಗ-ಸೊಸೆಯ ಕೋಣೆಯ ಬಾಗಿಲ ಮುಂದೆ ಇಟ್ಟರು. ಮಲ್ಲಿಕಾರ್ಜುನಪ್ಪನವರ ಕಾರ್ಯ ವೈಖರಿಯಿಂದ ಅಭಿಷೇಕ್ ಮತ್ತು ಆರಾಧನಾ ಗಲಿಬಿಲಿಗೊಂಡಿದ್ದು ನಿಜ.
ʻಅರೇ, ಪೂರ್ವಾಗ್ರಹ ಪೀಡಿತಳಾಗಿ ನಾನು ಮಾವಯ್ಯನವರ ಬಗ್ಗೆ ಏನೇನೋ ಕಲ್ಪಿಸಿಕೊಂಡು ಕಳವಳಕ್ಕೀಡಾಗಿದ್ದೆನಲ್ಲ…? ನನ್ನ ಮನದ ಮುಂದಿನ ಮಾಯೆ ಸೂರ್ಯನ ಉದಯದಿಂದ ಕರಗುವ ಮಂಜಿನಂತೆ ಕರಗಿಹೋಯಿತು. ರಿಯಲೀ ನನ್ನ ಮಾವ ಗ್ರೇಟ್ʼ ಎಂಬ ಮೆಚ್ಚುಗೆಯ ಮಾತುಗಳು ಆರಾಧನಾಳೆದೆಯೊಳಗಿಂದ ಉದ್ಭವಿಸಿದ್ದವು.
- ಶೇಖರಗೌಡ ವೀ ಸರನಾಡಗೌಡರ್, ತಾವರಗೇರಾ, ಕೊಪ್ಪಳ.
