ಮಾನಸಿಕ ಖಿನ್ನತೆಯನ್ನು ನಿರ್ಲಕ್ಷಿಸಬೇಡಿ, ಮಾನಸಿಕ ತಜ್ಞರ ಬಳಿ ನಿಮ್ಮ ಖಿನ್ನತೆ ಕುರಿತು ಸಮಾಲೋಚನೆ ಮಾಡಿ ಪರಿಹಾರಕಂಡುಕೊಂಡರೆ ಮನಸ್ಸು ಹಗುರಾಗುತ್ತದೆ.ಖ್ಯಾತ ಲೇಖಕಿ ಎಂ ಆರ್ ಕಮಲಾ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ದೇಹದ ಆರೋಗ್ಯದಷ್ಟೇ ಮನಸ್ಸಿನ ಆರೋಗ್ಯವೂ ಮುಖ್ಯ ಎನ್ನುವುದು ತಿಳಿದೇ ಇರದ ಜನಗಳಿಂದ ತುಂಬಿರುವ ದೇಶವಿದು. ಮಾನಸಿಕ ಕಾಯಿಲೆಗಳು ಖಿನ್ನತೆಯನ್ನು ಉಂಟುಮಾಡಿ, ಸಾವಿನ ಅಂಚಿಗೆ ಅನೇಕರನ್ನು ದೂಡುತ್ತಿದ್ದರೂ ಎಚ್ಚತ್ತುಕೊಂಡಿಲ್ಲ. ಇನ್ನೂ ಐವತ್ತು ವರ್ಷದ ಹಿಂದೆ ಬಂದ ‘ಶರಪಂಜರ’ ಸಿನಿಮಾದ ತರಹ ಖಿನ್ನತೆಗೆ ಒಳಗಾದವರನ್ನು ಹುಚ್ಚರು ಎಂದು ಭಾವಿಸುವ, ನಿಮ್ಹ್ಯಾನ್ಸ್ ಗೆ ಹೋದರೆ ಶಾಶ್ವತವಾಗಿ ಹುಚ್ಚರ ಪಟ್ಟ ಕಟ್ಟುತ್ತಾರೆಂದು ಭಾವಿಸುವ ಜನರಿದ್ದಾರೆ.
ದೈಹಿಕ ಕಾಯಿಲೆಯಂತೆ ಮನಸ್ಸಿನ ಕಾಯಿಲೆಗೂ ಚಿಕಿತ್ಸೆ ಕೊಡಿಸಬೇಕೆಂಬ ಅರಿವೇ ಇಲ್ಲ ! ದೀಪಿಕಾ ಪಡುಕೋಣೆ ತನಗಾದ ಖಿನ್ನತೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಕೇಳಿ ಸಮಾಧಾನವಾಗಿತ್ತು. ಹಿಂದೆಲ್ಲ ಮಡಿವಂತಿಕೆ, ನಿರ್ಬಂಧಗಳಲ್ಲಿ ನರಳಿಸುತ್ತಿದ್ದ ಮನೆಗಳಲ್ಲಿ ಹುಚ್ಚಿಯರಂತಿರುತ್ತಿದ್ದ ಅನೇಕ ಹೆಣ್ಣುಮಕ್ಕಳನ್ನು ಕಂಡಿದ್ದೇನೆ. ಮೇಲು ನೋಟಕ್ಕೆ ಕಾಣದ ಮನೆಯೊಳಗಿನ ಕಿರುಕುಳಗಳು ಖಿನ್ನತೆಗೆ ದೂಡುತ್ತವೆ.
ನನ್ನ ತಂದೆ ಹೆಣ್ಣುಮಕ್ಕಳಿಗೆ ಆ ಕಾಲದಲ್ಲಿಯೇ ಹಳ್ಳಿಯಿಂದ ಹೊರಗೆ ಕಳಿಸಿ, ವಿದ್ಯಾಭ್ಯಾಸ ಕೊಡಿಸಿ, ಕೆಲಸಕ್ಜೆ ಸೇರಿಸಿದರು. ಮಡಿವಂತಿಕೆಯೇ ಇಲ್ಲದೆ ಶುಭ್ರ ಗಾಳಿ ಬೆಳಕಿನಲ್ಲಿ ಬೆಳೆಸಿ ಗಟ್ಟಿಗಿತ್ತಿಯರನ್ನಾಗಿಸಿದರು. ಹಾಗೆ ಬೆಳೆದರೂ ನನ್ನ ತಾಯಿ ಸತ್ತಾಗ, ಕಾಳ, ಗಂಗಮ್ಮ ಸತ್ತಾಗ ನನಗೂ ಖಿನ್ನತೆ ಆವರಿಸುತ್ತಿದೆ ಅನ್ನಿಸಿ ಜಾಗೃತಳಾಗಿ, ನನ್ನ ಡಾಕ್ಟರ್ ಅತ್ತಿಗೆಯ ಬಳಿ ಚಿಕಿತ್ಸೆ ಪಡೆದೆ. ಎರಡು ಮೂರು ಲೇಖನಗಳನ್ನು ಆ ಬಗ್ಗೆ ಬರೆದೆ. ನನ್ನ ಮನಸ್ಸಿನ ತೊಳಲಾಟವನ್ನು ಗೆಳೆಯರ ಹತ್ತಿರ ಹೇಳಿ ಸಮಾಧಾನಗೊಂಡೆ
ನಾನು ಈ ಫೇಸ್ ಬುಕ್ಕಿನಲ್ಲಿ ಹೆಣ್ಣುಮಕ್ಕಳಿಗೆ ಧೈರ್ಯ ಕೊಡುವ ಕವಿತೆ, ಲೇಖನಗಳನ್ನು ಬರೆಯುತ್ತ ಅವನ್ನೆಲ್ಲ ಪ್ರಕಟಿಸುವ ಇರಾದೆಯೂ ಇಲ್ಲದೆ ಹಾಯಾಗಿದ್ದೇನೆ. ನಿಮ್ಮ ಲೇಖನ ಉಪಯೋಗಿಸಿಕೊಂಡೆವು ಎಂದರೆ ಸಂತೋಷ ಪಟ್ಟಿದ್ದೇನೆ. ನಾನೆಲ್ಲಿಗೆ ಹೋದರೂ ‘ಮೇಡಂ, ನಿಮ್ಮಿಂದ ಎಷ್ಟೊಂದು ತಿಳಿದೆವು’ ಎಂದು ಹೇಳುವ ಯುವಕ ಯುವತಿಯರು ದಂಡಿಯಾಗಿ ಸಿಗುತ್ತಾರೆ. ಮೊನ್ನೆ ಜರ್ಮನಿಯಲ್ಲಿ ಮಗನಿಗೆ ಬಂದು ಯಾರೋ ಹೇಳಿದರಂತೆ. ‘ ನಿಮ್ಮ ತಾಯಿ ಬರೆದಿರುವ ಒಂದು ಹಾಡು ನನ್ನನ್ನು ಖಿನ್ನತೆಯಿಂದ ಉಳಿಸಿದೆ’ ಎಂದು. ಮಾನಸಿಕ ರೋಗ ತಜ್ಞರಾದ ಡಾ. ಸಿ. ಆರ್ . ಚಂದ್ರಶೇಖರ್ ಅವರು ತಮ್ಮ ಬಳಿ ಕಲಿಯುತ್ತಿರುವ ಶಿಷ್ಯೆಯೊಬ್ಬಳಿಗೆ ( ಅವಳು ನನ್ನ ಶಿಷ್ಯೆಯೂ ಹೌದು) ಅಮ್ಮ ಹಚ್ಚಿದೊಂದು ಹಣತೆ ಹಾಡು ಕಳಿಸಿದ್ದರಂತೆ. ಅನೇಕರು ಅದನ್ನು ಖಿನ್ನತೆಗೆ ಥೆರಪಿಯಂತೆ ಬಳಸುತ್ತಾರಂತೆ. ಕೇಳಿ ಬಹಳ ಸಮಾಧಾನವಾಯಿತು.
ಇಷ್ಟು ಬರೆಯುವುದಕ್ಕೆ ಕಾರಣ ‘ನಮ್ಮ ಅತ್ತೆ ಏನೋ ಮಾತನಾಡ್ತಾರೆ’ , ‘ಸೊಸೆ ವಿಚಿತ್ರವಾಗಿ ಆಡ್ತಾಳೆ’ ಅಂತ ಬೈಕೊಂಡು, ಗೊಣಗಿಕೊಂಡು ಕಾಲಹರಣ ಮಾಡದೆ ಮಾನಸಿಕ ತಜ್ಞರ ಬಳಿ ಹೋಗುವುದು ಒಳ್ಳೆಯದು. ನಾನಂತೂ ಬಹಳ ಎಚ್ಚರದಿಂದ, ಬರೆಯುವುದು, ರಾಶಿ ಕೆಲಸ ಮಾಡುವುದು, ನೃತ್ಯಕ್ಕೆ ಹೋಗುವುದು, ಪ್ರವಾಸ ಮಾಡುವುದು, ಸ್ನೇಹದ ಬಳಗ ಹೆಚ್ಚಿಸಿಕೊಳ್ಳುವುದು ಇದೇ ಕಾರಣಕ್ಕೆ. ನಿರ್ಬಂಧಗಳಿಂದ ಕಟ್ಟಿಹಾಕಿಕೊಳ್ಳದೆ ಮನಸ್ಸನ್ನು ಸ್ವತಂತ್ರವಾಗಿ ಇಟ್ಟುಕೊಳ್ಳಲೇಬೇಕು. ಯಾರದ್ದೋ ಕಾಮೆಂಟುಗಳಿಗೆ ಹೆದರಿ ಬದುಕುವ ಅವಶ್ಯಕತೆ ನನಗಾಗಲಿ, ನಿಮಗಾಗಲಿ ಇಲ್ಲ. ನಾವ್ಯಾರೂ ಕೆಟ್ಟದ್ದನ್ನು ಮಾಡುತ್ತಿಲ್ಲವಲ್ಲ!
ಗೆಳೆಯನ ಸಾವು ಇಷ್ಟು ಬರೆಸಿತು.
- ಎಂ ಆರ್ ಕಮಲಾ – ಖ್ಯಾತ ಲೇಖಕಿ, ಉಪನ್ಯಾಸಕಿ, ಕವಿಯತ್ರಿ, ಬೆಂಗಳೂರು
