ಮಾನಸಿಕ ಆರೋಗ್ಯ ಅದೆಷ್ಟು ಮುಖ್ಯ!

ಆತ್ಮಹತ್ಯೆ ಕೇವಲ ಒಬ್ಬ ವ್ಯಕ್ತಿಯ ದುರಂತವಲ್ಲ, ನಮ್ಮ ಸಮಾಜದಲ್ಲಿರುವ ಮಾನಸಿಕ ಅಧೀರತೆಯ ಪ್ರತಿಬಿಂಬ. ಮಾನಸಿಕ ಆರೋಗ್ಯ ಅತ್ಯಂತ ಮುಖ್ಯ.ಮನಸ್ಸಿನ ಆರೋಗ್ಯದ ಬಗ್ಗೆ ಜಾಗರೂಕರಾಗಿ, ಲೇಖಕಿ ಗೀತಾಂಜಲಿ ಎನ್ ಎಮ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

  • ಹಣ, ಆಸ್ತಿ, ಐಶ್ವರ್ಯಕ್ಕಿಂತ ಒಂದು ಪಟ್ಟು ಹೆಚ್ಚಿನ ತೂಕ ಹೊಂದಿರುವುದು ಮಾನಸಿಕ ಆರೋಗ್ಯ. ಮಾನವನ ಜೀವನದಲ್ಲಿ ದೈಹಿಕ ಆರೋಗ್ಯವಷ್ಟೇ ಅಲ್ಲ. ಅದಕ್ಕಿಂತಲೂ ಮಾನಸಿಕ ಆರೋಗ್ಯ ಅತ್ಯಂತ ಮುಖ್ಯ. ಆದರೆ ನಮ್ಮ ಸಮಾಜದಲ್ಲಿ ಇನ್ನೂ ಮಾನಸಿಕ ಆರೋಗ್ಯವನ್ನು ಎರಡನೇ ಮಟ್ಟದಲ್ಲಿ ನೋಡುವ ಪ್ರವೃತ್ತಿ ಮುಂದುವರಿದಿದೆ. ದೇಹಕ್ಕೆ ನೋವಾದರೆ ತಕ್ಷಣ ಚಿಕಿತ್ಸೆ ಪಡೆಯುವ ನಾವು, ಮನಸ್ಸಿಗೆ ನೋವಾದಾಗ ಅದನ್ನು ಮರೆಮಾಚಲು ಸಹಿಸಿಕೊಂಡು ಬದುಕಲು ಪ್ರಯತ್ನಿಸುತ್ತೇವೆ. ಈ ಮೌನವೇ ಆತ್ಮಹತ್ಯೆ ಯಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎನ್ನಬಹುದು.
  • ಸಾಮಾನ್ಯವಾಗಿ ಸಮಾಜವು ಹಣ ಮತ್ತು ಹುದ್ದೆಯನ್ನೇ ಸಂತೋಷದ ಮಾನದಂಡವೆಂದು ಪರಿಗಣಿಸುತ್ತದೆ. ಆದರೆ ಸಮಾಜದಲ್ಲಿ ಶ್ರೀಮಂತ ವ್ಯಕ್ತಿಗಳ ಆತ್ಮಹತ್ಯೆ ವಾಸ್ತವ ಸತ್ಯವನ್ನು ಬಹಿರಂಗಪಡಿಸುತ್ತದೆ, ಮಾನಸಿಕ ಒತ್ತಡವು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ನೋಡುವುದಿಲ್ಲ. ಯಶಸ್ಸಿನಲ್ಲಿರುವವರೂ ಸಹ ಒಳಗೊಳಗೆ ಆತಂಕ, ಒಂಟಿತನ, ನಿರಾಶೆ ಮತ್ತು ಭಾರೀ ಒತ್ತಡವನ್ನು ಅನುಭವಿಸುತ್ತಿರುತ್ತಾರೆ.
  • ಆತ್ಮಹತ್ಯೆ ಕೇವಲ ಒಬ್ಬ ವ್ಯಕ್ತಿಯ ದುರಂತವಲ್ಲ, ನಮ್ಮ ಸಮಾಜದಲ್ಲಿರುವ ಮಾನಸಿಕ ಅಧೀರತೆಯ ಪ್ರತಿಬಿಂಬ. ದೈಹಿಕ ಆರೋಗ್ಯದ ಬಗ್ಗೆ ಸಾಕಷ್ಟು ಜಾಗೃತಿ ಇದ್ದರೂ, ಮಾನಸಿಕ ಆರೋಗ್ಯದ ವಿಚಾರದಲ್ಲಿ ನಾವು ಇನ್ನೂ ಮೌನ ಪಾಲಿಸುತ್ತಿದ್ದೇವೆ. ಸಮಯಕ್ಕೆ ಸರಿಯಾದ ಸಲಹೆ, ಮುಕ್ತ ಸಂಭಾಷಣೆ ಮತ್ತು ಸಹಾನುಭೂತಿ ದೊರೆತರೆ ಆತ್ಮಹತ್ಯೆಯ ಪ್ರಕರಣಗಳು ಕಡಿಮೆ ಆಗುತ್ತಿದ್ದವು ಅನಿಸುತ್ತದೆ.
  • ಯಶಸ್ಸು, ಐಶ್ವರ್ಯ ಎಲ್ಲವನ್ನೂ ಮೀರಿಸಿ ಮಾನಸಿಕ ಶಾಂತಿ ಮತ್ತು ಆರೋಗ್ಯ ಅತ್ಯಂತ ಮುಖ್ಯ. ಮಾನಸಿಕ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದನ್ನು ಸಾಮಾನ್ಯಗೊಳಿಸಿ, ಮತ್ತೊಬ್ಬರ ಜೊತೆ ಸಮಸ್ಯೆಗಳನ್ನು ಚರ್ಚಿಸಿ ಮನಸ್ಸನ್ನು ಹಗುರಗೊಳಿಸಿಕೊಂಡು,ಮಾನಸಿಕ ದೃಢತೆ ಸಮಾಧಾನ ಹಾಗೂ ಸಹಾಯ ಪಡೆಯುವುದನ್ನು ಶಕ್ತಿಯ ಸಂಕೇತವೆಂದು ಸಮಾಜ ಒಪ್ಪಿಕೊಳ್ಳುವ ಕಾಲ ಬಂದಿದೆ.
  • ವಿಶೇಷವಾಗಿ ಉನ್ನತ ಹುದ್ದೆಯಲ್ಲಿರುವವರು ನಿರಂತರ ನಿರ್ಧಾರಗಳ ಹೊಣೆ, ವಿಫಲತೆಯ ಭಯ, ಸಾರ್ವಜನಿಕ ನಿರೀಕ್ಷೆಗಳ ಒತ್ತಡವನ್ನು ಒಬ್ಬರೇ ಹೊರುವ ಸ್ಥಿತಿಯಲ್ಲಿರುತ್ತಾರೆ. ಇವರ ಸುತ್ತ ಜನಸಾಗರ ಇದ್ದರೂ, ಮನಸ್ಸಿನ ನೋವನ್ನು ಹಂಚಿಕೊಳ್ಳುವವರ ಕೊರತೆ ಹೆಚ್ಚಾಗಿರುತ್ತದೆ. ಸಹಾಯ ಕೇಳುವುದನ್ನು ದುರ್ಬಲತೆ ಎಂದು ಭಾವಿಸುವ ಸಾಮಾಜಿಕ ಮನೋಭಾವವೂ ಆತ್ಮಹತ್ಯೆಯಂತಹ ಸಮಸ್ಯೆಗಳನ್ನು ಮತ್ತಷ್ಟು ಗಂಭೀರಗೊಳಿಸುತ್ತಿವೆ.
  • ನಮ್ಮ ಆಲೋಚನೆಗಳು, ಭಾವನೆಗಳು, ನಡೆನುಡಿ ಹಾಗೂ ನಿರ್ಣಯಗಳೆಲ್ಲವೂ ಮಾನಸಿಕ ಆರೋಗ್ಯದ ಮೇಲೆ ಅವಲಂಬಿತವಾಗಿವೆ. ಆರೋಗ್ಯಕರ ಮನಸ್ಸು ಇದ್ದಾಗ ಮಾತ್ರ ವ್ಯಕ್ತಿ ಸಂತೋಷವಾಗಿ, ಆತ್ಮವಿಶ್ವಾಸದಿಂದ ಮತ್ತು ಸಮತೋಲನಯುತ ಜೀವನವನ್ನು ನಡೆಸಲು ಸಾಧ್ಯ.
  • ಮಾನಸಿಕ ಆರೋಗ್ಯವು ಮಾನವನ ಜೀವನದ ಗುಣಮಟ್ಟವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಒಳ್ಳೆಯ ಮಾನಸಿಕ ಆರೋಗ್ಯ ಇದ್ದಾಗ ಮಾತ್ರ ವ್ಯಕ್ತಿ ತನ್ನ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಿ, ಸಮಾಜದಲ್ಲಿ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಾಧ್ಯ. ಇಂದಿನ ಒತ್ತಡಪೂರ್ಣ ಜೀವನದಲ್ಲಿ ಮಾನಸಿಕ ಆರೋಗ್ಯದ ಕಾಳಜಿ ಅತ್ಯಾವಶ್ಯಕವಾಗಿ ಬೇಕಾಗಿದೆ, ಹಾಗಾಗಿ ಪ್ರತಿಯೊಬ್ಬರೂ ತಮ್ಮ ಮನಸ್ಸಿನ ಆರೋಗ್ಯದ ಬಗ್ಗೆ ಜಾಗರೂಕರಾಗಿ, ಅಗತ್ಯವಿದ್ದರೆ ಸಹಾಯ ಪಡೆಯಲು ಹಿಂಜರಿಯಬಾರದು ಆರೋಗ್ಯಕರ ಮನಸ್ಸೇ ಸಂತೃಪ್ತ ಜೀವನಕ್ಕೆ ದಾರಿಯನ್ನು ತೋರಿಸುತ್ತದೆ.

  • ಗೀತಾಂಜಲಿ ಎನ್ ಎಮ್ – ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW