ಮಾವಿನ ಹಣ್ಣಿನ ಹಾಲ್ಬಾಯಿ : ಅಶ್ವಿನಿ ಸುನಿಲ್

ಮಾವಿನ ಹಣ್ಣಿನ ರಸಾಯನ ತಿಂದಿದ್ದೀರಿ. ಆದರೆ ಮನೆಯಲ್ಲಿಯೇ ಮಾವಿನ ಹಣ್ಣಿನ ಹಾಲ್ಬಾಯಿ ಮಾಡಿ ತಿಂದರೆ ನೀವೇ ಸೂಪರ್ ಎನ್ನುವಿರಿ. ನಳಪಾಕ ಪ್ರವೀಣೆ ಅಶ್ವಿನಿ ಸುನಿಲ್ ಅವರು ಮಾವಿನ ಹಣ್ಣಿನ ಹಾಲ್ಬಾಯಿ ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವಿನ ಹಣ್ಣಿನಷ್ಟು ವೈವಿಧ್ಯಮಯ ತಳಿಗಳಿರುವ ಹಣ್ಣು ಬೇರೊಂದು ಇರಲಿಕ್ಕಿಲ್ಲ. 90ರ ದಶಕದ ಮಕ್ಕಳ ಬಾಲ್ಯಕ್ಕೂ, ಮಾವಿನ ಹಣ್ಣಿಗೂ ಅವಿನಾಭಾವ ಸಂಬಂಧ. ಆಗ ಏಪ್ರಿಲ್ 10 ಎನ್ನುವುದು ಸಾರ್ವತ್ರಿಕ ಫಲಿತಾಂಶದ ದಿನ ಇದ್ದಂತೆ . “ನೀನು ಪಾಸಾ” ಎಂದು ಕೇಳಿದವರಿಗೆಲ್ಲ ಚಾಕ್ಲೆಟ್ ಕೊಟ್ಟು ಸಂಭ್ರಮಿಸುತ್ತಿದ್ದೆವು.

ಅಲ್ಲಿಂದ ಮುಂದಿನ ಒಂದೂವರೆ ತಿಂಗಳು ನಮ್ಮದೇ. ಆ ಕ್ಲಾಸು, ಈ ಕ್ಲಾಸು, ಸಮ್ಮರ್ ಕ್ಯಾಂಪು ಎನ್ನುವ ಯಾವ ಲಗಾಮೂ ಇಲ್ಲದೆ ಸಂಭ್ರಮಿಸುವುದಷ್ಟೇ ನಮ್ಮ ಕೆಲಸವಾಗಿತ್ತು. ಮನೆಗೆ ಬರುವ ಕಸಿನ್ಸ್ ಗಳನ್ನು ನಮ್ಮ ಜೊತೆಯಾಗಿಸಿ ಅಮ್ಮ , ಅಜ್ಜಿ ಮಾವಿನ ಹಣ್ಣು ಹೆಕ್ಕಲು ಕಳುಹಿಸುತ್ತಿದ್ದರು. ತೋಟದಲ್ಲಿ, ರಸ್ತೆ ಬದಿಯಲ್ಲಿ ಬಿದ್ದ ಕಾಟು ಮಾವಿನ ಹಣ್ಣುಗಳನ್ನು ಹೆಕ್ಕಿ ತಂದು, ತೊಳೆದುಕೊಡುವುದು ನಮ್ಮ ಕೆಲಸವಾದರೆ, ಅದನ್ನು ಗುದ್ದಿ, ರಸ ತೆಗೆದು, ಬಿಸಿಲಿನಲ್ಲಿ ಒಣಗಿಸಿ ಮಾಂಬಳ ಮಾಡುವುದು ಅಮ್ಮ, ಅಜ್ಜಿಯಂದಿರ ಕೆಲಸ.

ಆಗೆಲ್ಲ ನಮಗೆ ಗೊತ್ತಿದ್ದದ್ದು ಒಂದೆರಡು ಮಾವಿನಹಣ್ಣಿನ ತಳಿಗಳಷ್ಟೇ. ತೋಟದಲ್ಲಿ ಯಥೇಚ್ಛವಾಗಿ ಬೀಳುತ್ತಿದ್ದ ಕಾಟು ಮಾವಿನ ಹಣ್ಣು, ಅಲ್ಲೊಂದು ಇಲ್ಲೊಂದು ಇರುವ ಕಸಿ ಮಾವಿನ ಹಣ್ಣು, ಅದು ಬಿಟ್ಟರೆ ಹಕ್ಕಿಗಳಿಗಷ್ಟೇ ಇಷ್ಟವಾಗುವ ನೆಕ್ಕರೆ ಮಾವಿನ ಹಣ್ಣು. ಮಾವಿನ ಹಣ್ಣಿನಲ್ಲಿ ಇಷ್ಟೊಂದು ವೈವಿಧ್ಯತೆ ಇದೆ ಎನ್ನುವುದು ತಿಳಿದುಬಂದ ದ್ದೇ ಇತ್ತೀಚಿನ ವರ್ಷಗಳಲ್ಲಿ.
ಬಂಗನ್ಪಲ್ಲಿ, ತೋತಾಪುರಿ, ಆಪೋಸ್ , ಮಲ್ಲಿಕಾ, ನೀಲಂ, ಆಲ್ಫೋನ್ಸೋ, ದಶೇರಿ, ಕೇಸರ್, ಹಿಮಾಯತ್, ರಸಪುರಿ, ಚಿನ್ನ ರಸಾಲು, ಸಿಂಧೂರಿ, ರತ್ನಗಿರಿ, ಸುವರ್ಣ ರೇಖಾ, ಹಿಮಸಾಗರ್ ಹೀಗೆ ಅದೆಷ್ಟು ವೆರೈಟಿ ಬೇಕು?

ಮಾವಿನ ಹಣ್ಣನ್ನು ಹಾಗೆಯೇ ತಿನ್ನುದಷ್ಟೇ ಅಲ್ಲ ಅದರಿಂದ ಅದೆಷ್ಟು ವೈವಿಧ್ಯಮಯ ಅಡುಗೆ ತಯಾರಿಸಬಹುದು ಎನ್ನುವುದು ನಿಮಗೆ ಗೊತ್ತೇ? ಮಾವಿನ ಹಣ್ಣಿನ ರಸಾಯನ ಅಥವಾ ಸೀಕರಣೆಯು ಪೂರಿ, ಚಪಾತಿ, ನೀರ್ ದೋಸೆ , ಅಕ್ಕಿ ಶಾವಿಗೆ ಜೊತೆಗೆ ಒಳ್ಳೆಯ ಕಾಂಬಿನೇಷನ್ ಆದರೆ, ಮಾವಿನ ಹಣ್ಣಿನ ಫ್ಲೇವರ್ ನ ಐಸ್ ಕ್ರೀಮ್ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಅಚ್ಚುಮೆಚ್ಚು. ಮಾವಿನ ಹಣ್ಣಿನ ಜ್ಯೂಸ್, ಮಾವಿನ ಹಣ್ಣಿನ ಹೋಳಿಗೆ, ಮ್ಯಾಂಗೋ ಶೇಕ್, ಮಾವಿನ ಹಣ್ಣಿನ ಗೊಜ್ಜು, ಪಾಯಸ ಹೀಗೆ ಮಾವಿನ ಹಣ್ಣಿನಿಂದ ವೈವಿದ್ಯಮಯ ಅಡುಗೆ ತಯಾರಿಸಬಹುದು.

ಕರಾವಳಿಯ ಕಡೆ ಮಾವಿನ ಹಣ್ಣಿನಿಂದ ತಯಾರಿಸುವ ಸಾಂಪ್ರದಾಯಿಕ ರೆಸಿಪಿಗಳಲ್ಲಿ ಮಾವಿನ ಹಣ್ಣಿನ ಹಲ್ವಾ ಅಥವಾ ಹಾಲ್ಬಾಯಿ ಕೂಡ ಒಂದು. ಬಹಳ ಸುಲಭವಾಗಿ ಮನೆಯಲ್ಲೇ ಇರುವ ಸಾಮಗ್ರಿಗಳಿಂದ ಮಾಡಬಹುದಾದ ಈ ರೆಸಿಪಿ ಎಲ್ಲರಿಗೂ ಇಷ್ಟವಾಗುತ್ತದೆ. ಕಾಡುಮಾವಿನ ಹಣ್ಣಿನಿಂದ ಮಾಡಿದರೆ ಇನ್ನಷ್ಟು ರುಚಿ.

ಸಾಮಗ್ರಿಗಳು :

  • ನೆನೆಸಿದ ದೋಸೆ ಅಕ್ಕಿ- ಒಂದು ಕಪ್
  • ತೆಂಗಿನ ತುರಿ- 1/4 ಕಪ್
  • ಮಾವಿನ ಹಣ್ಣಿನ ರಸ- ಅರ್ಧ ಕಪ್
  • ಬೆಲ್ಲ – ರುಚಿಗೆ ತಕ್ಕಷ್ಟು
  • ತುಪ್ಪ – ಎರಡು ಚಮಚ
  • ಚಿಟಿಕೆ – ಉಪ್ಪು
  • ಬೇಕಿದ್ದರೆ ಏಲಕ್ಕಿ ಪುಡಿ

ಮೊದಲು ಮಿಕ್ಸಿ ಜಾರಿಗೆ ನೆನೆಸಿದ ದೋಸೆ ಅಕ್ಕಿ, ತೆಂಗಿನ ತುರಿ, ನೀರು ಸೇರಿಸಿ ರುಬ್ಬಿಕೊಳ್ಳಿ . ಬಾಣಲೆಗೆ ಈ ಮಿಶ್ರಣ, ಮಾವಿನಹಣ್ಣಿನ ರಸ, ಬೆಲ್ಲ, ಉಪ್ಪು, ಏಲಕ್ಕಿ ಪುಡಿ ಸೇರಿಸಿ ಗಟ್ಟಿಯಾಗುವವರೆಗೆ ಚೆನ್ನಾಗಿ ಬೇಯಿಸಿ. ಸ್ವಲ್ಪ ಗಟ್ಟಿಯಾಗುವಾಗ ತುಪ್ಪವನ್ನು ಸೇರಿಸಿ.

ಗಟ್ಟಿಯಾದಂತೆ ಈ ಮಿಶ್ರಣ ಹೊಳೆಯಲು ಪ್ರಾರಂಭವಾಗುತ್ತದೆ. ಈಗ ಮಿಶ್ರಣವನ್ನು ತುಪ್ಪ ಹಚ್ಚಿದ ತಟ್ಟೆಗೆ ಹಾಕಿ ಬೇಕಾದ ಆಕಾರದಲ್ಲಿ ಕತ್ತರಿಸಿ. ಕತ್ತರಿಸಲು ಬರದಿದ್ದರೂ ಚಿಂತೆ ಇಲ್ಲ . ಹಲ್ವಾದಂತೆಯೂ ಸವಿಯಬಹುದು. ಈ ವರ್ಷದ ಮಾವಿನ ಹಣ್ಣಿನ ಸೀಸನ್ ಮುಗಿಯುವ ಮೊದಲು ನೀವೂ ಮಾವಿನಹಣ್ಣಿನ ಹಾಲ್ಬಾಯಿ ತಯಾರಿಸುತ್ತೀರಲ್ವಾ?


  • ಅಶ್ವಿನಿ ಸುನಿಲ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading