ದೌರ್ಜನ್ಯ ನಿಂತು ಹೋಗಲಿ

ಹೆಣ್ಣು ಮಕ್ಕಳ ಮೇಲೆ ದೈಹಿಕ ಹಲ್ಲೆ, ಕೊಲೆ, ಲೈಂಗಿಕ ದೌರ್ಜನ್ಯ, ಕಿರುಕುಳ ಹೆಚ್ಚುತ್ತಿದೆ. ಹೀಗೆ ನಡೆಯಬೇಕಾದಲ್ಲಿ ಮೊದಲು ನಮ್ಮ ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಗೌರವವನ್ನು ಮೂಡಿಸುವಂತಹ ಕೆಲಸ ಆಗಬೇಕು.ನಮ್ಮ ಗಂಡುಮಕ್ಕಳಿಗೆ ಮೌಲ್ಯಗಳನ್ನು ಕಲಿಸಬೇಕು. ಲೇಖಕಿ ಎನ್. ಶೈಲಜಾ ಹಾಸನ ಅವರ ಇಂದಿನ ವಾಸ್ತವ ಸ್ಥಿತಿ ಕುರಿತು ಬರೆದ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಸಿಗಬಹುದಾದ ಸಂಗತಿಗಳೆಂದರೆ ಹೆಣ್ಣು ಮಕ್ಕಳ ದಾರುಣ ಹತ್ಯೆಗಳು. ಕಾಮಪಶುಗಳಾಗಿ ಎಳೆಕಂದಮ್ಮಗಳನ್ನೂ ಬಿಡದೆ ತೃಷೆ ತೀರಿಸಿಕೊಂಡ ನಂತರ ರಕ್ಕಸರಂತೆ ಕೊಂದು ಬಿಡುವ, ಅಮಾನುಷವಾಗಿ ಹಿಂಸಿಸುವ, ಜೊತೆಯಲ್ಲಿ ಬಾಳುತ್ತಿದ್ದ ಸಂಗಾತಿಯನ್ನು ಕೊಂದು ತುಂಡುಗಳಾಗಿ ಕತ್ತರಿಸಿ ಎಸೆಯುವ ಪೈಚಾಚಿಕ ಪ್ರವೃತ್ತಿ,ಕುಡಿದು ಕಟ್ಟಿಕೊಂಡ ಹೆಂಡತಿಯನ್ನು ನಿರ್ದಯವಾಗಿ ಕೊಲ್ಲುವ ರಾಕ್ಷಸತ್ವ, ತನ್ನನ್ನು ಮದುವೆಯಾಗಲು ಒಪ್ಪದ ಯುವತಿ ಮೇಲೆ ಆಸಿಡ್ ದಾಳಿ ನಡೆಸುವ ವಿಕೃತಿ , ಅನ್ಯಜಾತಿಯಲ್ಲಿ ಮದುವೆಯಾದಳೆಂದು ಹೆತ್ತ ಮಗಳನ್ನೇ ಕೊಂದು ಬಿಡುವ ಪೋಷಕರ ನಿರ್ದಯತೆ,ಜೀವಕೊಟ್ಟ ತಾಯಿಯನ್ನೇ ಕೊಲ್ಲುವ ಪಾಶವಿಕೃತ್ಯ. ಒಂದೇ,ಎರಡೆ.ಇಂತಹ ಪ್ರಕರಣಗಳು ನೂರು, ಸಾವಿರ, ಲಕ್ಷ ಲೆಕ್ಕದಲ್ಲಿ ಕಾಣಸಿಗುತ್ತಿವೆ. ಪ್ರತಿಬಾರಿ ಇಂತಹ ಹೃದಯ ವಿದ್ರಾವಕ ಘಟನೆಗಳನ್ನು ನೋಡುವಾಗ ಎದೆ ತಲ್ಲಣಿಸುತ್ತದೆ. ಏನೂ ಮಾಡಲಾರದ ಅಸಹಾಯಕ ಸ್ಥಿತಿ ಕಂಗೆಡಿಸುತ್ತದೆ.ಈ ಭೂಮಿ ಮೇಲೆ ಹೆಣ್ಣಾಗಿ ಹುಟ್ಟುವುದೆ ತಪ್ಪು ಎನ್ನುವಂತಹ ಕ್ರೂರ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಕಂಡಾಗ ವೇದನೆಯಿಂದ ಪರಿತಪಿಸುವಂತಾಗುತ್ತದೆ.

ಹೆಣ್ಣು ಮಕ್ಕಳ ಮೇಲೆ ಹಾಗೂ ಮಹಿಳೆಯರ ಮೇಲೆ ಈ ಮೃಗಿಯ ದಾಳಿಗಳು ಮುಂದುವರಿಯಲು ಈ ಪುರುಷ ಪ್ರಧಾನ ಧೋರಣೆ ಹಾಗೂ ಕಾನೂನುಗಳನ್ನು ರೂಪಿಸುವಲ್ಲಿ ಮತ್ತು ಜಾರಿಗೆ ತರುವಲ್ಲಿ ಪುರುಷ ಪೂರ್ವಗ್ರಹಗಳು ಹಾಗೂ ಹಿಂದುಳಿದ ಮೌಲ್ಯ ಪ್ರಜ್ಞೆ ಮತ್ತು ಯುವಜನಾಂಗದ ಅಮಾನವಿಯಕರಣ ಇವೆಲ್ಲ ಕಾರಣವಾಗಿದೆ. ಶಿಕ್ಷಿತರು ಹೆಚ್ಚಾದಂತೆ ಹೆಣ್ಣಿನ ಮೇಲಿನ ದೌರ್ಜನ್ಯವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಸಮಾಜದಲ್ಲಿ ಮಹಿಳೆಯರು ಭಯದ ವಾತಾವರಣದಲ್ಲಿ ಬದುಕು ಸಾಗಿಸುವಂತಾಗಿದೆ. ಹೆಣ್ಣು ಮಕ್ಕಳ ಮೇಲೆ ದೈಹಿಕ ಹಲ್ಲೆ, ಕೊಲೆ, ಲೈಂಗಿಕ ದೌರ್ಜನ್ಯ, ಕಿರುಕುಳ ಹೆಚ್ಚುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಹಿಂಸೆಯು ಅತ್ಯಂತ ವ್ಯಾಪಕವಾಗಿದೆ. ಇದು ಮಾನವ ಹಕ್ಕು ಉಲ್ಲಂಘನೆಗಳಲ್ಲಿ ಅತ್ಯಂತ ಗಂಭೀರವಾದುದು. ಜಗತ್ತಿನಾದ್ಯಂತ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆಯು ಹಿಂಸೆಗೆ ಒಳಗಾಗುತ್ತಾಳೆ. ಕಳೆದ ಒಂದು ದಶಕದಲ್ಲಿ ಈ ಪ್ರಮಾಣವು ಬದಲಾಗಿದ್ದೇ ಇಲ್ಲ. ಪ್ರತಿ ಒಂದು ತಾಸಿನಲ್ಲಿ ಐವರು ಮಹಿಳೆಯರು ಅಥವಾ ಹೆಣ್ಣು ಮಕ್ಕಳು ತಮ್ಮ ಕುಟುಂಬದವರಿಂದಲೇ ಕೊಲೆಯಾಗುತ್ತಾರೆ ಎಂಬುದು ತೀರಾ ಇತ್ತೀನ ಅಂದಾಜು ಎಂದು ವಿಶ್ವ ಸಂಸ್ಥೆಯು ಹೇಳಿದೆ.

ಫೋಟೋ ಕೃಪೆ : ಅಂತರ್ಜಾಲ

ಹೆತ್ತ ಕುಡಿಯಾಗಿ, ಸಂಗಾತಿಯಾಗಿ , ಮನದರಸಿಯಾಗಿ, ಬಾಳಿಗೆ ಬೆಳಕಾದ ಹೆಣ್ಣನ್ನು ತಮ್ಮ ಸೊತ್ತು ಎಂಬಂತೆ ಭಾವಿಸಿ ಮನಬಂದಂತೆ ವರ್ತಿಸುವ ಈ ಪುರುಷ ಪುಂಗವರಿಗೆ ಹೆಣ್ಣಿನ ಸ್ಥಾನದ ಮಹತ್ವ ತಿಳಿಸಿ, ಅವಳನ್ನು ಗೌರವದಿಂದ ನಡೆಸಿಕೊಳ್ಳುವಂತೆ ಮಾಡುವುದು, ಅಂತವರ ರಾಕ್ಷಸ ಪ್ರವೃತ್ತಿಯನ್ನು ಮೂಲದಲ್ಲಿಯೆ ಚಿವುಟಿ ಹಾಕಿ ಸಮಾಜದ ಸ್ವಾಸ್ಥವನ್ನು ಕಾಪಾಡುವಂತಹ ಮಹತ್ವಪೂರ್ಣ ಕಾರ್ಯ ಅವಶ್ಯವಾಗಿ ನಡೆಯಬೇಕಾಗಿದೆ. ಹೀಗೆ ನಡೆಯಬೇಕಾದಲ್ಲಿ ಮೊದಲು ನಮ್ಮ ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಗೌರವವನ್ನು ಮೂಡಿಸುವಂತಹ ಕೆಲಸ ಆಗಬೇಕು.ನಮ್ಮ ಗಂಡುಮಕ್ಕಳಿಗೆ ಮೌಲ್ಯಗಳನ್ನು ಕಲಿಸಬೇಕು. ಹೆಣ್ಣು ಎಂದರೆ ತಾಯಿ. ಹೆಣ್ಣು ಎಂದರೆ ಸಹೋದರಿ. ಹೆಣ್ಣು ಎಂದರೆ ಗೆಳತಿ. ಹೆಣ್ಣು ಎಂದರೆ ಪತ್ನಿ. ಹೆಣ್ಣು ಎಂದರೆ ಮಗಳು. ಹೀಗೆ ಪ್ರತಿಯೊಬ್ಬರ ಪುರುಷನ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಪ್ರಮುಖ ಪಾತ್ರ ವಹಿಸುತ್ತಿರುವ ಹೆಣ್ಣನ್ನು ಗೌರವಿಸುವುದನ್ನು ಚಿಕ್ಕ ವಯಸ್ಸಿನಲ್ಲೇ ಕಲಿಸಬೇಕು.ಸಮಾಜದ ಸಮಾನ ಸದಸ್ಯರಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಗೌರವಿಸಲು ಗಂಡು ಮಕ್ಕಳಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸಬೇಕು.ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ವಿರುದ್ಧದ ಶೋಷಣೆಗೆ ತಡೆಯೊಡ್ಡುವ ಕೆಲಸ ಮಕ್ಕಳ ಬಾಲ್ಯದಿಂದಲೇ ಆರಂಭವಾಗಬೇಕು. ಮನೆ ಹಾಗೂ ಶಾಲೆಗಳು ಇದರಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಪುರುಷ ಪ್ರಧಾನ ಗುಣವು ಆರಂಭದಿಂದಲೇ ಮನಸ್ಸಿನಲ್ಲಿ ಅಡಿಯಿಟ್ಟಿರುತ್ತದೆ. ಲಿಂಗ ಶ್ರೇಷ್ಠತೆಯ ಈ ವ್ಯಸನವನ್ನು ಮಕ್ಕಳ ಬಾಲ್ಯದಲ್ಲಿಯೇ ಚಿವುಟುವ ಕೆಲಸ ಆಗಬೇಕು. ಲಿಂಗ ತಾರತಮ್ಯ ನಿವಾರಣೆಯ ಕುರಿತಂತೆ ಮಕ್ಕಳ ಮನಸ್ಸಿನಲ್ಲಿ ಪರಿವರ್ತನೆ ತರಬೇಕು. ಗಂಡು–ಹೆಣ್ಣು ಸಮಾನರು ಎಂಬ ಅಂಶವನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಮಕ್ಕಳಲ್ಲಿ ಬೆಳೆಸಬೇಕು. ಯಾವ ಹೆಣ್ಣುಮಗುವನ್ನೂ ಅಪಮಾನಿಸುವ ಹಕ್ಕು ತನಗಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಶಿಕ್ಷಣ ಮತ್ತು ಕಲಿಕೆಯ ಭಾಗವಾಗಿ ಇವೆಲ್ಲವೂ ಆಗಬೇಕು. ಕುಟುಂಬದಲ್ಲೂ, ಶಾಲಾ ಕಾಲೇಜುಗಳಲ್ಲೂ ಗಂಡುಮಕ್ಕಳಿಗೆ ಲಿಂಗ ಸಮಾನತೆ ಕುರಿತ ವಿಶೇಷ ಶಿಕ್ಷಣ ಕೊಡಬೇಕಾದದ್ದು ಅತ್ಯಗತ್ಯ. ಸಣ್ಣ ವಯಸ್ಸಿನಿಂದಲೇ ಮೌಲಿಕ, ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮಕ್ಕಳಿಗೆ ಕಲಿಸಿಕೊಡಬೇಕಾದದ್ದು ಪ್ರತಿಯೊಂದು ಸರ್ಕಾರದ ಮತ್ತು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು.

ಇದೆಲ್ಲದರ ಜೊತೆಗೆ ನಮ್ಮ ಹೆಣ್ಣು ಮಕ್ಕಳಲ್ಲಿ ಕೂಡ ಜಾಗೃತಿ ಮೂಡಿಸಬೇಕಿದೆ.ಅನ್ಯಾಯಗಳನ್ನು ಸಹಿಸಿಕೊಳ್ಳ ಬೇಕಾಗಿಲ್ಲ, ದೌರ್ಜನ್ಯ, ಶೋಷಣೆಗಳನ್ನು ಎದುರಿಸಿ ನಿಲ್ಲುವ,ಅದನ್ನು ವಿರೋಧಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳ ಬೇಕಾಗಿದೆ. ನಮ್ಮ ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಜೊತೆಗೆ ಸ್ವಯಂರಕ್ಷಣೆ ತರಬೇತಿಯನ್ನೂ ಕಡ್ಡಾಯಗೊಳಿಸಬೇಕಿದೆ. ಇದು ಶಾಲಾ, ಕಾಲೇಜು ಹಂತದಿಂದಲೇ ಆರಂಭವಾಗಬೇಕು.

ಫೋಟೋ ಕೃಪೆ : ಅಂತರ್ಜಾಲ

ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ, ಮದ್ಯ ಮತ್ತು ಮಾದಕ ವಸ್ತು ಸೇವನೆ ಮುಂತಾದುವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಚಾರ ಕಾರ್ಯಕ್ರಮಗಳು ಮತ್ತು ಶಿಬಿರಗಳನ್ನು ಏರ್ಪಡಿಸಿ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಇವತ್ತಿನ ದಿನಗಳಲ್ಲಿ ಅತ್ಯಗತ್ಯವಾಗಿದೆ.

ಸಮಾಟಕಂಟಕರಿಗೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವೆಸಗಿದವರಿಗೆ ಅತಿ ಶೀಘ್ರವಾಗಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಬೇರೆಯವರು ಅಂತಹ ದೌರ್ಜನ್ಯ ಎಸಗಲು ಅಂಜುವಂತೆ ಕಾನೂನು ಬದಲಾಗಬೇಕು. ಸಮಾಜವೂ ಕೂಡ ಅಂತಹ ಕಟುಕರನ್ನು ತಿರಸ್ಕಾರದಿಂದ ನೋಡುವಂತಾಗಬೇಕು. ಸಮಾಜದ ತಿರಸ್ಕಾರ, ನಿರ್ಲಕ್ಷ್ಯಕ್ಕೆ ಒಳಗಾಗಿ ,ಕಾನೂನಿನ ತೀವ್ರ ಶಿಕ್ಷೆ ಗೆ ಅಂಜಿಯಾದರೂ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಂತು ಹೋಗಲಿ ಎಂದು ಆಶಿಸುತ್ತೇನೆ.


  • ಎನ್. ಶೈಲಜಾ ಹಾಸನ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading